ಪತ್ರಿಕೋದ್ಯಮಕ್ಕೆ ಕಾಲಿಡುತ್ತಿದೆ “ಡಬಲ್ ಸ್ಟಾಂಡರ್ಡ್” ಎಂಬ ಭೂತ!: ಚವೀಶ್‌ ಜೈನ್‌

ಪತ್ರಿಕೋದ್ಯಮ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಾಲ್ಕನೇ ಆಧಾರ ಸ್ಥಂಬ. ದೇಶದ ಪ್ರತಿಯೊಂದು ವಿಚಾರಗಳಲ್ಲಿ ಮಹತ್ತರ ಪಾತ್ರವಹಿಸುವ ಸಮಾಜದ ಅವಿಭಾಜ್ಯ ಅಂಗ. ಧಮನಿತರ ಮತ್ತು ದನಿ ಇಲ್ಲದವರ ಧ್ವನಿಯಾಗುವುದೇ ಪತ್ರಿಕೋದ್ಯಮದ ಉದ್ದೇಶ. ನಿಷ್ಪಕ್ಷಪಾತವಾಗಿ, ಜಾತಿ-ಮತಗಳನ್ನು ಲೆಕ್ಕಿಸದೆ, ಅಧಿಕಾರ-ಸ್ಥಾನವನ್ನು ಚಿಂತಿಸದೆ, ತಪ್ಪು-ಒಪ್ಪುಗಳ ಕುರಿತು ಅವಲೋಕಿಸಿ, ಧೈರ್ಯದಿಂದ ತಪ್ಪನ್ನು, ಆಡಳಿತ ಲೋಪವನ್ನು ಪ್ರಶ್ನಿಸುವುದೇ ಪತ್ರಿಕೋದ್ಯಮದ ಜವಾಬ್ದಾರಿ ಮತ್ತು ಕರ್ತವ್ಯ. ರಾಷ್ಟ್ರವಾದ, ರಾಷ್ಟ್ರದ ಹಿತಾಸಕ್ತಿ, ಭದ್ರತೆ, ಅಖಂಡತೆ, ಸಮಗ್ರತೆ ಪತ್ರಿಕೋದ್ಯಮದ ಸಿದ್ಧಾಂತದಲ್ಲಿ ಅಡಗಿರಬೇಕಾದ ಮೂಲ ಚಿಂತನೆಗಳು. ಇವೆಲ್ಲವನ್ನೂ ಒಳಗೊಂಡ ಪತ್ರಿಕೋದ್ಯಮ ಸುಸ್ಥಿರ ಸಮಾಜದ ನಿರ್ಮಾಣಕ್ಕೆ ಅಗತ್ಯವಾಗಿ ಬೇಕಾಗಿದೆ.

ಆದ್ದರಿಂದ ಪತ್ರಿಕೋದ್ಯಮ ಎಂಬಂತಹ ಕ್ಷೇತ್ರದ ಮೇಲೆ ಎಲ್ಲರಿಗೂ ಬಹಳ ಆಸಕ್ತಿ. ಪತ್ರಕರ್ತನಾಗಿ ದೇಶಕ್ಕೆ ಸೇವೆ ಸಲ್ಲಿಸಬೇಕೆಂಬ ಮಹತ್ವಾಕಾಂಕ್ಷೆ ತುಂಬಾ ಜನರಲ್ಲಿ ಇರುತ್ತದೆ. ಅದರಲ್ಲೂ ಇವತ್ತಿನ ಯುವ ಪೀಳಿಗೆಯಲ್ಲಿ ಇನ್ನಷ್ಟು ಆಸಕ್ತಿ. ಪತ್ರಿಕೋದ್ಯಮ ನಾವು ಭಾವಿಸುವಷ್ಟು ಸುಲಭದ ವೃತ್ತಿಯಲ್ಲ. ಜೀವಕ್ಕೆ ಸಂಚಕಾರವನ್ನೊಡ್ಡುವ ಹಲವು ಸಂದರ್ಭಗಳು ಎದುರಾಗುತ್ತವೆ. ಆದರೆ ಆ ಸಂದರ್ಭದಲ್ಲಿ ದೃತಿಗೆಡಬಾರದು. ಎಂತಹ ಕಠಿಣ ಸಂದರ್ಭದಲ್ಲೂ ಸತ್ಯವನ್ನೇ ಉಸಿರಾಗಿಸಿಕೊಂಡಾಗ ಅಂತಿಮ ಗೆಲುವು ನಮ್ಮ ಹೋರಾಟಕ್ಕೆ ಸಿಕ್ಕೇ ಸಿಗುತ್ತದೆ. ಪತ್ರಿಕೋದ್ಯಮ ಅದೆಷ್ಟೋ ಬಾರಿ ಇದನ್ನು ಸಾಧಿಸಿ ತೋರಿಸಿದೆ. ಸಾಕಷ್ಟು ಭ್ರಷ್ಟ ಅಧಿಕಾರಿಗಳು ಮತ್ತು ನಾಯಕರ ಭ್ರಷ್ಟಾಚಾರವನ್ನು ಬಯಲು ಮಾಡಿದೆ. ಕೆಲವು ಕೊಲೆ ತನಿಖೆಯ ಸಂದರ್ಭಗಳಲ್ಲಿ ಪೋಲೀಸ್ ಇಲಾಖೆಗಿಂತಲೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದೆ. ಮಾಧ್ಯಮ ಲೋಕ ಇದೇ ನಿಷ್ಠೆ ಮತ್ತು ಕಾರ್ಯದಕ್ಷತೆಯನ್ನು ಮುಂದುವರೆಸಿಕೊಂಡು ಹೋಗಬೇಕೆನ್ನುವುದು ನಮ್ಮ ಆಶಯ.

ಆದರೆ ಎಲ್ಲೋ ಒಂದು ಕಡೆ ಮಾಧ್ಯಮ ಲೋಕವನ್ನು ಇಣುಕಿ ನೋಡಿದರೆ, ಪರಿಸ್ಥಿತಿ ಸ್ವಲ್ಪ ಬದಲಾಗಿದೆ ಎಂದು ಅನಿಸುತ್ತದೆ. ಹೌದು, ಇವತ್ತು ಈ ಭ್ರಷ್ಟಾಚಾರ ಎನ್ನುವುದು ಎಲ್ಲ ಕ್ಷೇತ್ರಗಳಿಗು ನುಸುಳಿದಂತೆ ಪತ್ರಿಕೋದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದೆ! ನಿಷ್ಪಕ್ಷಪಾತ ದೂರವಾಗುತ್ತಿದೆ. ರಾಷ್ಟ್ರಪ್ರೇಮ ಎಲ್ಲೋ ಮೂಲೆಯಲ್ಲಿ ಮೌನವಾಗಿದೆ. ರಾಜಕೀಯ ದ್ವೇಷಗಳ ಆಟ ಈ ಕ್ಷೇತ್ರಕ್ಕೂ ಕಾಲಿಟ್ಟಿದೆ! ಆದರೆ ಇದಕ್ಕೂ ಮೀರಿ ನಾನು ಹೇಳಹೊರಟಿರುವ ಒಂದು ವಿಷಯ ಪತ್ರಿಕೋದ್ಯಮವನ್ನು ಆಕ್ರಮಿಸಿದ. ಅದುವೇ, ಪತ್ರಿಕೋದ್ಯಮದ ಮೂಲ ಸಿದ್ಧಾಂತವನ್ನು ಸಂಪೂರ್ಣ ವಿರೋಧಿಸುವ “ಡಬಲ್ ಸ್ಟಾಂಡರ್ಡ್”. ಇದರ ಪರಿಣಾಮವಾಗಿ ಸತ್ಯವನ್ನು ಮರೆಯಾಗಿಸುವ ಮತ್ತು ತಪ್ಪನ್ನು ಸಮರ್ಥಿಸುವ ಮನಸ್ಥಿತಿ ಬಂದುಬಿಟ್ಟಿದೆ. ಡಬಲ್ ಸ್ಟಾಂಡರ್ಡ್ ಎಂದರೆ, ತಾತ್ವಿಕವಾಗಿ ಏಕರೂಪವಾಗಿರುವ ಎರಡು ಘಟನೆಗಳಲ್ಲಿ, ಒಂದು ಗುಂಪು, ಪಕ್ಷ ಅಥವಾ ಸಮುದಾಯ ಮಾಡುವ ಚಟುವಟಿಕೆಯನ್ನು ವಿರೋಧಿಸಿ, ಮತ್ತೊಂದು ಗುಂಪು ಮಾಡುವುದನ್ನು ಸಮರ್ಥಿಸಿಕೊಳ್ಳುವುದು. ಅಂದರೆ ಇಲ್ಲಿ ಸತ್ಯ, ಪ್ರಾಮಾಣಿಕತೆಯನ್ನು ಗಾಳಿಗೆ ತೂರಿ ಒಂದು ಪಕ್ಷ, ಜಾತಿ, ಸಂಘಟನೆಯ ಪರವಾಗಿ ಪತ್ರಿಕೋದ್ಯಮ ಮತ್ತು ಪತ್ರಕರ್ತರು ನಿಲ್ಲುತ್ತಾರೆ. ಅವರ ಕುರಿತಂತೆ ಮೃದು ಧೋರಣೆ ಇಟ್ಟು, ಅವರ ತಪ್ಪುಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ದೇಶದಲ್ಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುವುದು ನಿಜ. ಆದರೆ ಅದನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ನಮ್ಮಿಂದ ಆಗಬಾರದು.

ಈ “ಡಬಲ್ ಸ್ಟಾಂಡರ್ಡ್” ನಿಲುವು ದೇಶದ ಸಮಗ್ರತೆಗೆ ಮತ್ತು ಜಾತ್ಯಾತೀತತೆಗೆ ಧಕ್ಕೆಯನ್ನುಂಟುಮಾಡುತ್ತದೆ. ಈ ನಿಲುವು ಭವಿಷ್ಯದ ಸಮಾಜಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಆತಂಕಕಾರಿಯಾದುದು. ಏಕೆಂದರೆ, ಇದು ದೇಶದ ಯುವ ಜನಾಂಗದ ಮನಸ್ಸಿಗೆ ತಪ್ಪು ಸಂದೇಶವನ್ನು ಮುಟ್ಟಿಸುತ್ತದೆ. ಸಾಮಾನ್ಯವಾಗಿ ಪ್ರಸ್ತುತ ಸನ್ನಿವೇಶದಲ್ಲಿ, ದೇಶದ ಯುವ ಸಮುದಾಯ ರಾಜಕೀಯ ವಿಚಾರಗಳಿಗೆ ಸಂಬಂಧಿಸಿದಂತೆ ಬಹಳ ಕುತೂಹಲ ಮತ್ತು ಆಸಕ್ತಿ ಇಟ್ಟುಕೊಂಡಿರುವಂತೆ ಕಾಣಿಸುತ್ತದೆ. ಆದ್ದರಿಂದ, ರಾಜಕೀಯದ ಆಗುಹೋಗುಗಳನ್ನು ಸದಾಕಾಲ ಚರ್ಚಿಸುವ ಪತ್ರಿಕೋದ್ಯಮದ ಮೇಲೆ ನಮ್ಮ ನೋಟ ಜಾಸ್ತಿ ಇರುತ್ತದೆ. ಯಾವುದೇ ವಿಚಾರಗಳ ಕುರಿತು ಗುಣಾತ್ಮಕ ಮತ್ತು ಸೃಜನಾತ್ಮಕವಾಗಿ ಚರ್ಚೆಗಳಾದಾಗ ಅದರ ಸಂಪೂರ್ಣ ಸ್ವಾರಸ್ಯವನ್ನು ನಾವು ಆರಿತುಕೊಳ್ಳಬಹುದು ಮತ್ತು ಚಿಂತನೆ ಮಾಡಬಹುದು. ಆದರೆ, ಒಂದು ಕಡೆ ತಮ್ಮ ಲಾಭಕ್ಕಾಗಿ, ಒಂದು ಗುಂಪು ಅಥವಾ ಪಕ್ಷದ ರಕ್ಷಣೆಯ ನೆಪದಲ್ಲಿ ವಿಚಾರವನ್ನು ವಿಷಯಾಂತರಗೊಳಿಸಿ, ಇತಿಹಾಸವನ್ನು ತಿರುಚಲು ಪ್ರಯತ್ನಿಸಿದಾಗ ಸಹಜವಾಗಿ ಸಾಮಾನ್ಯ ಜನರಲ್ಲಿ ಗೊಂದಲದ ಮನಸ್ಥಿತಿ ಉಂಟಾಗುತ್ತದೆ. ನಿಜವಾಗಿ ನಡೆದಿದ್ದೇನು? ನಿಜವಾದ ವಿಚಾರ ಯಾವುದು? ಎಂದು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗುತ್ತೇವೆ. ನಮ್ಮಿಂದ ಸತ್ಯವನ್ನು ದೂರವಿಡುತ್ತಾರೆ. ಯುವಜನತೆ ಯಾರದ್ದೋ ತಪ್ಪು ಸಂದೇಶಕ್ಕೆ ಸಮಾಜ ಘಾತಕ ಶಕ್ತಿಯಾಗುತ್ತಾರೆ. ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗತ್ತಾರೆ.

ಆದ್ದರಿಂದ ಪತ್ರಿಕೋದ್ಯಮ ವೃತ್ತಿಧರ್ಮವನ್ನು ಮರೆಯಬಾರದು. ಪಕ್ಷ, ಜಾತಿ, ಧರ್ಮಗಳ ವಿಚಾರಗಳಿಗೆ ದಾಸರಾಗಿಬಿಡಬಾರದು. ಒಟ್ಟಾರೆಯಾಗಿ ದೇಶದ ಮುಂದೆ ಸತ್ಯವನ್ನು ತಂದಿಡುವ ಪ್ರಯತ್ನ ಮಾಡಬೇಕು. ಒಬ್ಬ ರಾಜಕಾರಣಿ ಹೇಗೆ ಸರಳತೆ ಮತ್ತು ಸಮಾಜಸೇವೆಯ ಗುಣವನ್ನು ಹೊಂದಿರಬೇಕೋ, ಪೋಲೀಸ್ ಆದವರು ಹೇಗೆ ಖಡಕ್ ಸ್ವಭಾವವನ್ನು ಹೊಂದಿರಬೇಕೋ, ಹಾಗೆಯೇ ಪತ್ರಕರ್ತರಿಗೆ ಅಥವಾ ಪತ್ರಿಕೋದ್ಯಮಕ್ಕೆ ರಾಷ್ಟ್ರೀಯವಾದ ಎನ್ನುವುದು ಮೂಲಭೂತ ಗುಣವಾಗಿರಬೇಕು. ಪತ್ರಿಕೋದ್ಯಮ ಇಲ್ಲದ ದೇಶದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅಂದರೆ ಸಮಾಜ ನಿರ್ಮಾಣದಲ್ಲಿ ಪತ್ರಿಕೋದ್ಯಮದ ಕೊಡುಗೆ ಅಪಾರ. ಅಂತಹ ಪತ್ರಿಕೋದ್ಯಮಲ್ಲಿ “ಡಬಲ್ ಸ್ಟಾಂಡರ್ಡ್” ಎಂಬ ನಿಲುವು ಕೊನೆಯಾಗಬೇಕು. ಪತ್ರಿಕೋದ್ಯಮ ಸ್ವಚ್ಛವಾಗಬೇಕು.

ಚವೀಶ್‌ ಜೈನ್‌


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x