ಜಾಹಿರಾತಿಗೆ ಅಂಕುಶ. . .
ಮಾನ್ಯರೆ,
ಕೊನೆಗೂ ಆ ದಿನ ಬಂದೇಬಿಟ್ಟಿತು ನೋಡಿ.. .. ..
ಸುಳ್ಳು ಮತ್ತು ನಂಬಲಾರ್ಹವಲ್ಲದ ಜಾಹಿರಾತುಗಳನ್ನು ನೀಡಿ ಗ್ರಾಹಕರ ಕಣ್ಣಿಗೆ ಮಣ್ಣೆರಚ್ಚುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಲಭವಾಗಿ ಹಣಮಾಡುತ್ತಿರುವ ಬಹುರಾಷ್ಟ್ರೀಯ ಹಾಗೂ ಇತರೆ ಜಾಹಿರಾತು ಕಂಪನಿಗಳಿಗೆ ಕೇಂದ್ರೀಯ ಗ್ರಾಹಕ ರಕ್ಷಣೆ ಮಂಡಳಿಯು ಕೊನೆಗೂ ಅಂಕುಶವನ್ನು ಹಾಕಲು ನಿರ್ಧರಿಸಿರುವುದ ಸಂತೋಷದ ವಿಷಯ.
ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಕಂಪನಿಗಳು ನಾನಾ ಬಗೆಯ ತಂತ್ರಗಳನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕೆ ಇಂಬುಕೊಡುವಂತೆ ವಿವಿಧ ಕ್ಷೇತ್ರಗಳ ದೊಡ್ಡ ದೊಡ್ಡ ತಾರಮಣಿಗಳನ್ನು ಆಯ್ಕೆ ವರ್ಣರಂಜಿತವಾದ ಜಾಹಿರಾತನ್ನು ನಿರ್ಮಿಸಿ, ಗ್ರಾಹಕನ್ನು ಮೋಡಿಮಾಡಿ ತಮ್ಮ ಉತ್ಪನ್ನಗಳನ್ನು ಸುಲಭವಾಗಿ ಮಾರಾಟಮಾಡುತ್ತಾರೆ. ಅದನ್ನು ಕೊಂಡುಬಳಸಿದ ನಾವುಗಳು ಈ ಉತ್ಪನ್ನಗಳಿಂದ ಅಂತಹ ವ್ಯತ್ಯಾಸವೇನು ಕಂಡುಬರುವುದಿಲ್ಲ ಎಂದು ತಿಳಿದಾಗ ಬರಿ ಹಿಡಿಶಾಪ ಹಾಕುವುದನ್ನು ಬಿಟ್ಟು ಬೇರೆನೂ ಮಾಡಲಾಗುವುದಿಲ್ಲ ಎಂದುಕೊಳ್ಳುವುದು ಈಗ ಹಳೆಯ ವಿಚಾರ.
ಗ್ರಾಹಕರನ್ನು ಮೊಸಗೊಳಿಸುವ ಇಂತಹ ಕಂಪನಿಗಳ ವಿರುದ್ಧ ಅಥವಾ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ತಾರೆಯರ ವಿರುದ್ಧ ದೂರು ಸಲ್ಲಿಸಿ, ಅವರಿಂದ ಪರಿಹಾರಪಡೆದುಕೊಳ್ಳಲು ಅನುವಾಗುವಂತೆ ಕೇಂದ್ರ ಸರ್ಕಾರ ಹೊಸದಾಗಿ ನೀತಿ ರೂಪಿಸುತ್ತಿದೆ. ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಗ್ರಾಹಕರಿಗೆ ಮಕ್ಮಲ್ ಟೋಪಿಹಾಕುವ ಕಂಪನಿಗಳನ್ನು ನಿಯಂತ್ರಿಸಿ ಗ್ರಾಹಕರಿಗೆ ಸೂಕ್ತ ಸೇವೆಯನ್ನು ಒದಗಿಸಬೇಕಾಗಿರುವುದು ಇಂದಿನ ಅಗತ್ಯ.
– ಕೆ.ಟಿ.ಆರ್.
******
ಸಾರಿಗೆ ವೆಚ್ಚ ಏರಿಕೆ ಏಕೆ?
ಮಾನ್ಯರೇ,
ರಾಜ್ಯ ಸರ್ಕಾರದ ಪ್ರತಿಷ್ಠಿತ ಆದಾಯದ ಮೂಲವಾಗಿರುವ ಬಿಎಂಟಿಸಿಯು ಚುನಾವಣೆಯಲ್ಲಿ ಮತದಾನ ಮಾಡಿದಕ್ಕೆ ಪ್ರತಿಫಲವಾಗಿ ಮತದಾರರಿಗೆ ಬೆಲೆ ಹೆಚ್ಚಳದ ಕೊಡುಗೆಯನ್ನು ನೀಡಿದೆ. ಈ ವರ್ಷದಲ್ಲೇ ಶೇ.19 ಬೆಲೆ ಏರಿಕೆ ಮಾಡಿರುವುದು ಇತಿಹಾಸದಲ್ಲೇ ಪ್ರಥಮವೆನ್ನಬಹುದು. ಬೇರೆ ಮಹಾನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿಯೇ ಸಾರಿಗೆ ಅಧಿಕವಾಗಿದೆ ಎನ್ನುವ ಕೀರ್ತಿಗೆ ಪಾತ್ರವಾಗಿದೆ. ಸರ್ಕಾರವು ಬೆಲೆ ಏರಿಕೆಗೆ ಕಚ್ಚಾ ತೈಲದ ಬೆಲೆ ಏರಿಕೆ, ಕಂಪನಿಯು 300 ಕೋಟಿಗಳ ನಷ್ಟದಲ್ಲಿ ನಡೆಯುತ್ತಿರುವ ಕಾರಣ ನೀಡಿದೆ. ನಷ್ಟದಲ್ಲಿರುವ ಇಲಾಖೆಯನ್ನು ಸರ್ಕಾರ ಏಕೆ ನಡೆಸುತ್ತಿದೆ ಅದನ್ನು ಖಾಸಗಿಯವರಿಗೆ ಏಕೆ ವಹಿಸಿಕೊಡಬಾರದು ಅಥವಾ ವಿದೇಶಿ ನೇರ ಬಂಡವಾಳಕ್ಕೆ ಏಕೆ ಅನುವು ಮಾಡಿಕೊಡಬಾರದು ಎನ್ನುವ ಪ್ರಶ್ನೆಗಳು ಬುದ್ದಿಜೀವಿಗಳ ಮನದಲ್ಲಿ ಮೂಡುತ್ತದೆ. ಯಾವುದೇ ಆದಾಯವಿಲ್ಲದಂತಹ ಸಾರಿಗೆ ಇಲಾಖೆಯನ್ನು ಪಾಪ ನಷ್ಟದಲ್ಲಿ ನಡೆಸುವ ಅಗತ್ಯವಾದರೂ ಏನು? ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲದಂತಾಗಿದೆ.
ಈ ಬೆಲೆ ಏರಿಕೆಯಿಂದ ಸಾಮಾನ್ಯ ವರ್ಗದವರಿಗೆ (ಮುಖ್ಯವಾಗಿ ಕೆಳವರ್ಗ) ಹೆಚ್ಚು ತೊಂದರೆಯಾಗಲಿದೆ. ದಿನಗೂಲಿ ಮಾಡಿ ಜೀವನ ನಿರ್ವಹಿಸುತ್ತಿರುವವರ ಪಾಡು ಹೇಳತೀರದು. ಸರ್ಕಾರ ಈ ಬೆಲೆ ಏರಿಕೆಯನ್ನು ಈಕೂಡಲೇ ಪರಿಷ್ಕರಿಸಬೇಕಾಗಿರುವುದು ಅನಿವಾರ್ಯವೆನ್ನಿಸುತ್ತದೆ.
– ಕೆ.ಟಿ.ಆರ್.
*****