ಪಟಾಕಿ: ಸಂತೋಷ್ ಕುಮಾರ್ ಎಲ್. ಎಂ.


ಅದು ಬೃಹದಾಕಾರವಾಗಿ ಬೆಳೆದ ನಗರದ ಮೂಲೆಯಲ್ಲಿ, ಇನ್ನೂ ತಲೆಯೆತ್ತಿ ನಿಲ್ಲಲೂ ಕಷ್ಟಪಡುತ್ತಿರುವ ಒಂದು ಬಡವರ್ಗದವರ ಏರಿಯಾ. ನಾಲ್ಕು ಗಂಟೆಗೆಲ್ಲ ಎದ್ದು ಕೂಲಿಗೆ ಹೊರಡುವ ಶ್ರಮಜೀವಿಗಳು ಮತ್ತೆ ವಾಪಸ್ಸು ಬರುವುದೇ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ. 

ಮನೆಯೊಳಗೆ ಅಜ್ಜಿಯ ಕೈತುತ್ತು ತಿಂದು ಮಲಗಿದ ಪುಟ್ಟಿ ದೀಪಳಿಗೆ ನಿದ್ರೆ ಬರುತ್ತಿಲ್ಲ. ಅಜ್ಜಿ ನಾಳೆಯ ದಿನ ದೀಪಾವಳಿ ಅಂತ ಹೇಳಿದ್ದಾಳೆ. ಅಪ್ಪ ಹುಟ್ಟಿದಾಗಿನಿಂದ ಇಲ್ಲಿಯವರೆಗೆ ಯಾವತ್ತಿಗೂ ಪಟಾಕಿ ತರುವುದನ್ನು ಮರೆತಿಲ್ಲ. ಯಾವುದಕ್ಕೂ ದುಡ್ಡಿಲ್ಲದಿದ್ದರೂ ಪ್ರತೀ ತಿಂಗಳು ಪಟಾಕಿಗೆಂದೇ ಇಂತಿಷ್ಟು ಅಂತ ಒಂದಷ್ಟು ಚಿಲ್ಲರೆ ಎತ್ತಿಡುತ್ತಿದ್ದ.. ಅಲ್ಲೆಲ್ಲೂ ಪಟಾಕಿ ಮಾರುವ ಅಂಗಡಿಗಳಿರಲಿಲ್ಲ. ಹಬ್ಬ ಶುರುವಾಗುವ ಒಂದು ವಾರದ ಮುಂಚೆಯೇ ಅಪ್ಪ ದೂರದ ಮಾರುಕಟ್ಟೆಗೆ ಹೋಗಿ ಪಟಾಕಿಯನ್ನು ತರುತ್ತಿದ್ದ. ಒಂದು ದಿನ ಹಬ್ಬ ಇರುವಾಗಲೇ ಅಡಿಗೆಯಾದ ಮೇಲೆ ಒಲೆಯಿಂದ ಕೆಂಡವೆಲ್ಲ ತಗೆದು ಆ ಪಟಾಕಿಯ ಪೊಟ್ಟಣವನ್ನು ಇನ್ನೂ ಬಿಸಿಯಿರುತ್ತಿದ್ದ ಅ ಒಲೆಯ ಪಕ್ಕದಲ್ಲಿಟ್ಟು ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಬಹಳಷ್ಟು ಪಟಾಕಿಗಳು ಟುಸ್ ಆಗುತ್ತಿರಲಿಲ್ಲ. 

ಪುಟ್ಟಿಯಂತೂ ಹಬ್ಬದ ದಿನ ಅದೆಷ್ಟು ಬೇಗ ಸಂಜೆಯಾಗುವುದೋ ಅಂತ ಕಾಯುತ್ತಿದ್ದಳು. ಅಂದು ಆಕೆಗೆ ಊಟವೇ ಬೇಡ. ಸಂಜೆಯಾದೊಡನೆ ಅಪ್ಪನೊಂದಿಗೆ ಅಂಗಳದಲ್ಲಿ ಪಟಾಕಿ ಸಿಡಿಸಲು ತಯಾರಿ ನಡೆಯುತ್ತಿತ್ತು. ಪೊಟ್ಟಣದೊಳಗಿಂದ ಪಟಾಕಿಯನ್ನು ಒಂದೊಂದಾಗಿ ಅಪ್ಪ ದೀಪಳ ಕೈಗಿಡುತ್ತಿದ್ದ. ಗಂಧದಕಡ್ಡಿಯೊಂದನ್ನು ಹಚ್ಚಿ ಅಂಗಳದಲ್ಲಿ ಪಟಾಕಿಯ ಬತ್ತಿಗೆ ಕಿಡಿ ಸೋಕಿಸಿ ಓಡಿ ಬರುತ್ತಿದ್ದಳು. ಪಟಾಕಿ ಸಿಡಿದ ಖುಷಿಗೆ ಅಪ್ಪನನ್ನು ಅಪ್ಪಿ ಮುದ್ದಾಡುತ್ತಿದ್ದಳು. ಅವಳ ಸಂತೋಷವನ್ನು ನೋಡುತ್ತಿದ್ದ ಅಪ್ಪನಿಗೆ ತನಗಿದ್ದ ಕಷ್ಟಗಳೆಲ್ಲ ಮರೆತು ಹೋಗುತ್ತಿದ್ದವು. ದೀಪಾವಳಿ ಸಮೀಪಿಸುತ್ತಿದ್ದ ದಿನಗಳಲ್ಲಿ ಹುಟ್ಟಿದ್ದಕ್ಕೋ ಏನೋ ಅವಳಿಗೆ ಅಕ್ಕಪಕ್ಕದ ಮನೆಯವರೆಲ್ಲ ಸೇರಿ ದೀಪ ಅಂತಲೇ ಹೆಸರಿಟ್ಟಿದ್ದರು.ಒಂದು ವರ್ಷದ ಮಗುವಾಗಿದ್ದಾಗಲೇ ಅಮ್ಮನನ್ನು ಕಳೆದುಕೊಂಡ ತಬ್ಬಲಿ ದೀಪಳ ಖುಷಿಯೊಂದೇ ಅಪ್ಪನ ಏಕೈಕ ಗುರಿಯಾಗಿತ್ತು. 

ಆದರೆ ಈ ಸಲವೇಕೋ ಹಬ್ಬ ನಾಳೆಯಿದ್ದರೂ ಅಪ್ಪ ಪಟಾಕಿ ತಂದಿರಲಿಲ್ಲ. ಅದರ ಯೋಚನೆಯಲ್ಲಿಯೇ ನಿದ್ರೆ ಹತ್ತಿರ ಸುಳಿದಿರಲಿಲ್ಲ. ಯಾಕೋ ಕೇಳಿಯೇಬಿಡೋಣವೆಂದು ಅಪ್ಪನತ್ತ ತಿರುಗಿದಳು.

 "ಯಾಕೆ ದೀಪು, ನಿದ್ರೆ ಬರ್ತಿಲ್ವಾ ಬಂಗಾರಿ?" ಅಂತ ಅಪ್ಪ ಅಂದ. 

ದೀಪ ಹೇಳಿದಳು, "ಇಲ್ಲ ಪಪ್ಪಾ,ಯಾಕೋ ನಿದ್ರೆ ಬರ್ತಿಲ್ಲ.ಆಮೇಲೆ…. ಆಮೇಲೆ… ಏನೋ ಕೇಳಲಾ?"

"ಕೇಳು ಪುಟ್ಟಿ."

"ಯಾಕೆ ಪಪ್ಪಾ, ನಾಳೆ ದೀಪಾವಳಿ ಹಬ್ಬ ತಾನೇ? ಇಷ್ಟು ದಿನ ಒಂದು ವಾರದ ಮುಂಚೆನೇ ಪಟಾಕಿ ತರ್ತಿದ್ದಲ್ವಾ ಈ ಸಲ ಯಾಕೆ ತಂದಿಲ್ಲಾ?"

"ಓಹ್, ಹೌದಲ್ವಾ ಪುಟ್ಟಿ. ಮರೆತುಬಿಟ್ಟೆಕಣವ್ವಾ. ನಾಳೆಗೆ ಹೋಗಿ ಮಾರ್ಕೆಟ್ ಹತ್ರ ಪಟಾಕಿ ತರ್ತೀನಿ "

"ನಿಜವಾಗಲೂ…. ?"

"ಹೂಮ್…. ದೀಪು. ನಿಜವಾಗಲೂ… ಈಗ ಮಲ್ಕೊಳವ್ವಾ" ಅಂತ ಪ್ರೀತಿಯಿಂದ ಹೇಳಿ ದೀಪಳನ್ನು ಎದೆಗೆ ಆತುಕೊಂಡು ತಟ್ಟಲಾರಂಭಿಸಿದ. ನಿಧಾನವಾಗಿ ಮಗುವಿಗೆ ನಿದ್ರೆ ಹತ್ತಿತ್ತು. ಕಿಟಕಿಯಾಚೆ ಮಲಗದ ಮಕ್ಕಳು ಹಬ್ಬದ ಮುಂಚೆಯೇ ಪಟಾಕಿ ಹೊಡೆಯಲು ಶುರು ಮಾಡಿದ್ದರು. ಪ್ರತೀ ಬಾರಿ ಪಟಾಕಿ ಶಬ್ದ ಕೇಳಿದಾಗ ಮನಸ್ಸಿನಲ್ಲಿ ಹೇಳಲಾರದ ಸಂಕಟವೊಂದು ಕಾಡುತ್ತಿತ್ತು. 

ನಿಜವಾಗಿಯೂ ಆತ ಪಟಾಕಿ ತರೋದನ್ನು ಮರೆತಿದ್ದನೇ?ಇಲ್ಲ. ಕಮ್ಮಿ ಸಂಬಳಕ್ಕೆ ಕೆಲಸ ಮಾಡಿಸಿಕೊಳ್ಳುತ್ತಿದ್ದ ಗಾರ್ಮೆಂಟ್ ಫ್ಯಾಕ್ಟರಿಯೂ ಮೂರು ತಿಂಗಳ ಹಿಂದೆ ನಷ್ಟದಿಂದಾಗಿ ಬಾಗಿಲು ಮುಚ್ಚಿತ್ತು. ಸಾವಿರಾರು ನೌಕರರು ಕೆಲಸ ಕಳೆದುಕೊಂಡು ಬೀದಿಗೆ ಬರುವಂತಾಯಿತು. ಒಂದು ಹೊತ್ತಿನ ಊಟ ಹುಟ್ಟಿಸಿಕೊಳ್ಳಲೂ ಕಷ್ಟಪಡುವ ದುಸ್ತರ ಪರಿಸ್ಥಿತಿ ಎದುರಾಗಿತ್ತು . ಈತ ಹಾಗೂ ಹೀಗೂ ದಿನಗೂಲಿಗೆ ಹೋಗಿ ಬರುತ್ತಿದ್ದ ದುಡ್ಡಿನಲ್ಲಿ ದಿನದ ಜೀವನ ಮುಂದುವರೆಯುತ್ತಿತ್ತು. ಮನೆಯಲ್ಲಿ ವಯಸ್ಸಾದ ತನ್ನಮ್ಮ ಇದ್ದದ್ದಕ್ಕೆ ಮಗು ದೀಪಳ ಸಾಕುವುದು ಸಮಸ್ಯೆಯಾಗಲಿಲ್ಲ. ಆದರೆ ಕೂಲಿ ಸಿಕ್ಕರೆ ಮಾತ್ರ ಮೂವರಿಗೂ ಊಟಕ್ಕೆ ದಾರಿಯಾಗುತ್ತಿತ್ತು ಅಷ್ಟೇ. ಯಾಕೋ ಜೀವನ ದಿನದಿಂದ ದಿನಕ್ಕೆ ಕಷ್ಟದ ಕೂಪದೊಳಕ್ಕೆ ಬೀಳುತ್ತಿದೆಯಾ ಅನಿಸುತ್ತಿತ್ತು. ತಬ್ಬಲಿ ದೀಪಳ ಸಂತೋಷವೇ ತನ್ನ ಸಂತೋಷ ಅಂತ ಅಂದುಕೊಂಡಿದ್ದವನಿಗೆ  ಈ ಬಾರಿ ಪಟಾಕಿ ತರಲು ಮಾತ್ರ ಬಿಡಿಗಾಸು ಇರಲಿಲ್ಲ. ಜೊತೆಗೆ ದೀಪಾವಳಿ ಹತ್ತಿರ ಬಂದಿದ್ದರಿಂದ ಕೆಲಸಗಳು ನಿಲ್ಲಿಸಿದ್ದರಿಂದ ಈತನಿಗೆ ಕೂಲಿಯೂ ಸಿಗುತ್ತಿರಲಿಲ್ಲ. ಊಟಕ್ಕೇ ಕಷ್ಟವಾಗಿರುವಾಗ ಪಟಾಕಿಯೋ, ಹಬ್ಬಕ್ಕೆ ಸಾಮಾನುಗಳೋ… 

"ಮಾದೇಸ್ವರಾ,ಹೇಗಾದರೂ ಮಾಡಿ ನಾಳೆ ಕೂಲಿ ಸಿಗುವ ಹಾಗೆ ಮಾಡಪ್ಪ" ಅಂತ ಪ್ರಾರ್ಥಿಸುತ್ತಾ ಮಲಗಿದವನಿಗೆ ನಿದ್ರೆ ಹತ್ತಿದ್ದೇ ತಿಳಿಯಲಿಲ್ಲ. 

*****

ಬೆಳಿಗ್ಗೆ ಎಚ್ಚರವಾಗುವಷ್ಟರಲ್ಲಿ ಎಂಟು ಗಂಟೆ. ಅಪ್ಪ ಎದ್ದು ಕೆಲಸಕ್ಕೆ ಹೊರಟು ಹೋಗಿದ್ದ. ದೀಪಳಿಗೆ ಯಾಕೋ ಮನಸಿಲ್ಲ. ಅಜ್ಜಿ ಒಂದೇ ಸಮನೆ "ಬಾ, ಹಲ್ಲುಜ್ಜು, ಹಾಲು ಕುಡೀವಂತೆ" ಅಂತ ಕೂಗುತ್ತಿದ್ದಾಳೆ. ದೀಪ ಗುಡಿಸಲ ಹೊರಬಂದಳು. ದೂರದಲ್ಲಿ ಒಂದಷ್ಟು ಹುಡುಗರು ಗುಂಪು ಕಟ್ಟಿಕೊಂಡು ಪಟಾಕಿ ಹಿಡಿದುಕೊಂಡಿವೆ. ಹತ್ತಿರ ಹೋಗಿ ನೋಡಿದಳು. ಅದೊಂಥರಾ ಲಾಟರಿ ಇದ್ದ ಹಾಗೆ. ಒಂದು ಪುಟ್ಟ  ಮೇಜಿನ ಮೇಲೆ ಒಂದರಿಂದ ನೂರರವರೆಗೆ ಸಂಖ್ಯೆಗಳನ್ನು ಬರೆದು ಅವುಗಳ ಮೇಲೆ ಒಂದೊಂದು ವಿವಿಧ ರೀತಿಯ ಪಟಾಕಿಗಳನ್ನು ಇಡಲಾಗಿದೆ. ಕೆಲವು ಸಂಖ್ಯೆಗಳ ಮೇಲೆ ಏನೂ ಇಲ್ಲ. ಒಂದು ಡಬ್ಬದಲ್ಲಿ ಒಂದರಿಂದ ನೂರರವರೆಗೆ ಬರೆದ ಚೀಟಿಗಳನ್ನು ಹಾಕಲಾಗಿದೆ. ಒಂದು ರೂಪಾಯಿ ಕೊಟ್ಟರೆ ಆ ಹುಡುಗ ಡಬ್ಬವನ್ನು ಅಲ್ಲಾಡಿಸಿ ಮುಂದೆ ಹಿಡಿಯುತ್ತಾನೆ. ಯಾವುದಾದರೊಂದು ಚೀಟಿಯನ್ನು ಆರಿಸಿ ಬಂದ ಸಂಖ್ಯೆ ನೋಡಬೇಕು. ಆ ಸಂಖ್ಯೆಯಲ್ಲಿ ಯಾವುದಾದರೂ ಪಟಾಕಿಯಿದ್ದರೆ ಮಾತ್ರ ಅದು ಸಿಗುತ್ತದೆ. ಇಲ್ಲದಿದ್ದರೆ ಏನೂ ಇಲ್ಲ. 

ಇದನ್ನು ತಿಳಿದು ಮತ್ತೆ ಮನೆಯೊಳಗೆ ಓಡಿದ ದೀಪ ಅಜ್ಜಿಯ ಬಳಿ ಒಂದು ರೂಪಾಯಿ ಕೇಳಿದಳು. ಅಜ್ಜಿ ಕೊಡಲಿಲ್ಲ. ದೀಪ ಅಳುತ್ತ ಕುಳಿತಾಗ ಸೆರಗಂಚಿನಿಂದ ಕಟ್ಟಿಟ್ಟಿದ್ದ ಒಂದು ರೂಪಾಯಿಯ ನಾಣ್ಯವನ್ನು ಕೊಟ್ಟಳು. ಒಂದೇ ಉಸಿರಿಗೆ ಆ ಪಟಾಕಿಯ ಹುಡುಗನ ಬಳಿ ಓಡಿದ ದೀಪ ಒಂದು ರೂಪಾಯಿಯನ್ನು ಆತನ ಕೈಗಿಟ್ಟಳು. ಆತ ಡಬ್ಬವನ್ನು ಅಲ್ಲಾಡಿಸಿ ಕೊಟ್ಟಾಗ ಎತ್ತಿದ ಚೀಟಿಯಲ್ಲಿದ್ದ ನಂಬರಿಗೆ ಯಾವುದೇ ಪಟಾಕಿ ಬಂದಿರಲಿಲ್ಲ. ಮತ್ತೆ ಅಳುತ್ತಾ ಮನೆಯೊಳಗೆ ಬಂದು ಪೆಚ್ಚು ಮೋರೆಯಲ್ಲಿ ಕುಳಿತಳು. ಆ ದಿನ ಊಟವನ್ನೂ ಸರಿಯಾಗಿ ಮಾಡಲಿಲ್ಲ. 

ಅಜ್ಜಿಯ ಒತ್ತಾಯಕ್ಕಷ್ಟೇ ಒಂದೆರಡು ತುತ್ತು ತಿಂದಳು.

******

ಸೂರ್ಯ ಇನ್ನೇನು ಮುಳುಗುವುದರಲ್ಲಿದ್ದ. ಕಾಯುತ್ತ ಕುಳಿತಿದ್ದ ದೀಪಳಿಗೆ ದೂರದಲ್ಲಿ ಅಪ್ಪ ಬರುವುದು ಕಾಣಿಸಿತು. ಏನಾಶ್ಚರ್ಯ, ಅವನ ಕೈಯಲ್ಲಿ ಪಟಾಕಿಯ ದೊಡ್ಡ ಬ್ಯಾಗು. ಓಡಿ ಹೋಗಿ ಅಪ್ಪನನ್ನು ತಬ್ಬಿ ಮುದ್ದಾಡಿದಳು. ಕೆನ್ನೆಗೊಂದು ಮುತ್ತ ಕೊಟ್ಟು ತನಗೆಷ್ಟು ನೀನು ಇಷ್ಟ ಅಂತ ಹೇಳಿದಳು. ಅವಳ ಕಣ್ಣುಗಳಲ್ಲಿನ ಹೊಳಪು ಕಂಡ ಅಪ್ಪನಿಗೆ ಹಾಲು ಕುಡಿದಷ್ಟು ಸಂತೋಷ. 

ದೀಪಳ ಕೈಗೆ ನೂರು ರೂಪಾಯಿ ಕೊಟ್ಟು, "ಹೋಗು ಮಗಳೇ ಅಂಗಡಿಯಲ್ಲಿ ಅಕ್ಕಿ,ಬೇಳೆ ಕೊಂಡು ತಾ, ಊಟ ಮಾಡಿದ ಆಮೇಲೆ ಪಟಾಕಿ ಹೊಡೆಯುವಿಯಂತೆ" ಎಂದು ಹೇಳಿದ. ಖುಷಿಯಲ್ಲೇ ಮಗಳು ಅಂಗಡಿಯತ್ತ ಓಡಿದಳು. 

ನಂತರ ತನ್ನ ಅಮ್ಮನಿಗೆ ಹೇಳಿದ. 

"ಅವ್ವಾ, ಬೇಗ ಅಡುಗೆ ಮಾಡಿ ಅವಳಿಗೆ ತಿನ್ನಿಸು. ನೀನೂ ಊಟ ಮಾಡು. ಆಮೇಲೆ ಅವಳ ಕೂಡ ಪಟಾಕಿ ಹೊಡಿ"

ಆಕೆ ಕೇಳಿದಳು,"ಏನಪ್ಪಾ, ಇವತ್ತು ದೇವರ ದಯೆ, ಕೂಲಿ ಕೆಲಸ ಸಿಕ್ತಾ?"

ಈತ,"ಇಲ್ಲ ಕಣವ್ವಾ. ನಮ್ಮ ಗ್ರಹಚಾರ ನೆಟ್ಟಗಿಲ್ಲ. ಕೂಲಿ ಇವತ್ತೂ ಸಿಗಲಿಲ್ಲ"

ಅವ್ವ, "ಹಂಗಾದ್ರೆ, ಈ ಪಟಾಕಿ, ದುಡ್ಡೆಲ್ಲ ……."

ಈತ, "ಹ್ಞೂ ಕಣವ್ವಾ, ಕೆಲ್ಸಾ ಸಿಕ್ದೇ ಬೇಜಾರಾಗಿ ಒಂದ್ ಕಡೆ ಕೂತ್ಕಂಡ್ ಯೋಚ್ನೆ ಮಾಡ್ತಿದ್ದೆ. ಅಲ್ಲೊಂದ್ ಕಡೆ ರಕ್ತದಾನ ನಡೀತಿತ್ತು. ಒಂದ್ ಬಾಟಲಿ ರಕ್ತ ಕೊಟ್ರೆ ಐನೂರು ರೂಪಾಯಿ ಕೊಡ್ತಿದ್ರು, ರಕ್ತ ತಾನೇ. ಇವತ್ತು ಕೊಟ್ರೆ ನಾಳೆಗೆ ಮತ್ತೆ ಬತ್ತದೆ. ಈ ದೀಪಾವಳಿ ದಿನ ನನ್ ಮಗಳು ದೀಪನ್ ಮುಖದಲ್ಲಿ ಬರೋ ಸಂತೋಷನ ತಪ್ಪುಸ್ಕೊಂಡ್ರೆ ಮತ್ತೆ ಅದನ್ನ ನೋಡೋಕೆ ಇನ್ನೊಂದ್ ವರ್ಷ ಕಾಯಬೇಕು…. ಅದಕ್ಕೇ… ರಕ್ತ ಕೊಟ್ಟು ಬಂದೆ…. ಸರಿ… ಡಾಕ್ಟ್ರು ಮಲ್ಕೊಂಡು ಚೆನ್ನಾಗಿ ನಿದ್ರೆ ಮಾಡ್ಬೇಕು ಅಂತ ಹೇಳವ್ರೆ. ಮಲ್ಕೊತೀನಿ. ದೀಪುಗೆ ಊಟ ಮಾಡ್ಸು" ಅಂತ ಹೇಳಿ ಮಲಗಿದ. 

ಅವ್ವನ ಕಣ್ಣಂಚಿನಲ್ಲಿ ಹನಿಯಿತ್ತು………!

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

14 Comments
Oldest
Newest Most Voted
Inline Feedbacks
View all comments
parthasarathyn
11 years ago

ವಸ್ತು ಹಳೆಯದಾದರು ಹೊಸ ನಿರೂಪಣೆ ಚೆನ್ನಾಗಿದೆ !

Santhoshkumar LM
Santhoshkumar LM
11 years ago
Reply to  parthasarathyn

ಧನ್ಯವಾದಗಳು ಸರ್  🙂

ದಿವ್ಯ ಆಂಜನಪ್ಪ
ದಿವ್ಯ ಆಂಜನಪ್ಪ
11 years ago

ನಮ್ಮ ಕಣ್ಣಲ್ಲೂ ನೀರು 🙂 ಚೆನ್ನಾಗಿದೆ ಸರ್

Santhoshkumar LM
Santhoshkumar LM
11 years ago

Thank u so much Divya madam 🙂

Nagaratna Govindannavar
Nagaratna Govindannavar
11 years ago

ದಿನಗೂಲಿ ಕೆಲಸಗಾರರ ಪರಿಸ್ಥಿತಿಯನ್ನು ಎತ್ತಿಹಿಡಿಯುವಂತ ನ್ಯೆಜವಾದ ಕಥೆ

Santhoshkumar LM
Santhoshkumar LM
11 years ago

Thank u so much Nagaratna madam 🙂

amardeep.p.s.
amardeep.p.s.
11 years ago

ಸಂತೋ‍ಷ್, ಎಲ್ಲಾ ಸರಿ, ಈ ದೀಪಾವಳಿಗೆ ನೀನು ಬರೆದ ಲೇಖನದಿಂದ ನನ್ನ ಮರೆಯಾದ ತಂದೆಯ ನೆನಪನ್ನು ಬಹಳವಾಗಿ ಕಾಡುವಂತೆ ಮಾಡಿದೆ. ಮತ್ತೆ ಮತ್ತೆ ನೆನೆಸಿಕೊಂಡು ಬಾಲ್ಯದಲ್ಲಿ ಕಾಡಿ ಕಾಡಿ ಪಟಾಕಿ ಕೊಡಿಸಿಕೊಂಡು ಹಚ್ಚಲು ಹೋಗಿ ಕೈಸುಟ್ಟುಕೊಂಡ, ಇಂದಿಗೂ ಪಟಾಕಿ ಹೊಡೆಯದ ನಾನು ನನ್ನ ಮಕ್ಕಳಿಗೆ ತೆಕ್ಕೆ ತುಂಬಾ ಪಟಾಕಿ ತಂದು ಕೊಡುತ್ತೇನೆ… ಅಭಿನಂದನೆಗಳು…..

Santhoshkumar LM
Santhoshkumar LM
11 years ago
Reply to  amardeep.p.s.

ಅಮರ್ ದೀಪ್ ಸರ್,
ಬಹುಶಃ ನನ್ನ ಕಥೆಗೆ ಬಂದ ನಿಮ್ಮ ಪ್ರತಿಕ್ರಿಯೆ ಒಂದು ಕ್ಷಣ ನನ್ನನ್ನೂ ಬಾಲ್ಯಕ್ಕೆ ಕರೆದುಕೊಂಡು ಹೋಯಿತು. ಬಡತನವನ್ನು ನಾನೆಂದೂ ನಮಗಿರುವ ದರಿದ್ರ ಅಂತ ಪರಿಗಣಿಸಿದ್ದಿಲ್ಲ. ಆದರೂ ದೀಪಾವಳಿ ಬಂದಾಗ ಮಾತ್ರ ದೂರದ ಮನೆಗಳ ಮುಂದೆ ಹಚ್ಚುತ್ತಿದ್ದ ರಾಶಿ ರಾಶಿ ಪಟಾಕಿಗಳು ನನ್ನ ಪುಟ್ಟ ಹೃದಯಕ್ಕೆ ಬೆಂಕಿ ಹಚ್ಚುತ್ತಿದ್ದವು. ಅಪ್ಪನಿಗೆ ಯಾವಾಗ ಪಟಾಕಿ ತಂದು ಕೊಡುತ್ತೀರಾ ಅಂತ ಕೇಳುತ್ತಿದ್ದೆ. ಆದರೆ ಒಮ್ಮೆಯೂ ಅವರು ನನ್ನ ಬಳಿ ಹಣವಿಲ್ಲ ಅಂತ ಹೇಳುತ್ತಿರಲಿಲ್ಲ. ಕೆಲವು ವರ್ಷ ದುಡ್ದಿದ್ದಾಗ ಪಟಾಕಿ ಹೊಡೆದದ್ದೂ ನೆನಪಿದೆ. ಆದರೆ ಒಮ್ಮೆ ಮಾತ್ರ ಅಪ್ಪನನ್ನು ಬಿಡದೆ ಪಟಾಕಿ ಕೊಡಿಸೆಂದು ರಗಳೆ ಮಾಡಿದ್ದೆ. ಅಪ್ಪ ದೀಪಾವಳಿ ಮೂರು ದಿನ ಇರುತ್ತೆ. ಮೂರನೇ ದಿನ ಕೊಡಿಸುತ್ತೇನೆ ಅಂತ ಹೇಳಿದಾಗ ಖುಷಿಯಿಂದಲೇ ಮಲಗಿದ್ದೆ. ಆದರೆ ಮೂರನೇ ದಿನವೂ ಕೊಡಿಸದಿದ್ದಾಗ ನನ್ನ ಮನಸ್ಸಿನಲ್ಲಿ ಉಂಟಾದ ಬೇಸರ, ತಳಮಳ, ಬಡತನದ ಬಗೆಗಿನ ಬೇಸರ ನಿಜಕ್ಕೂ ಇವತ್ತಿಗೂ ನೆನೆದರೆ ಕಣ್ಮುಂದೆ ಬರುತ್ತದೆ. ಇವತ್ತು ರಾಶಿ ರಾಶಿ ಪಟಾಕಿ ಕೊಳ್ಳುವ ಶಕ್ತಿಯಿದೆ. ಆದರೆ ಹೊಡೆಯುವ ಮನಸ್ಸಿಲ್ಲ. ಈ ಘಟನೆಗಳೇ ಈ ಪುಟ್ಟ ಕಥೆಯನ್ನು ಬರೆಯುವಂತೆ ಮಾಡಿತು.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಹೀಗೆಯೇ ಮುಂದುವರೆಯಲಿ.

ಜೆ.ವಿ.ಕಾರ್ಲೊ, ಹಾಸನ
ಜೆ.ವಿ.ಕಾರ್ಲೊ, ಹಾಸನ
11 years ago

ಇದೊಂದು ತೀರಾ ಅವಾಸ್ತವಿಕ ಕತೆ. ನಾನೊಬ್ಬ ಕಟ್ಟಡ ನಿರ್ಮಾಣ ಗುತ್ತಿಗೆದಾರ. ನನ್ನ  ಊರು ಬೆಂಗಳೂರಲ್ಲ. ಅರೆ ಮಲೆನಾಡು, ಅರೆ ಬಯಲುಸೀಮೆಯ ಹಾಸನ. ಇಲ್ಲಿ ಇಂಜಿನಿಯರ್ ಗಳಿಗೆ ಕೆಲಸವಿಲ್ಲದಿರಬಹುದು(?) ಕೂಲಿಕಾರರಿಗಲ್ಲ! ದೇಹ ಶ್ರಮ ನಿಕ್ರಷ್ಟವೆನ್ನುವವರಿಗೆ ಎಲ್ಲೆಲ್ಲೂ ನಿರುಧ್ಯೋಗವೇ! ಬಡತನವೇ!

Santhoshkumar LM
Santhoshkumar LM
11 years ago

ಜೆ ವಿ ಕಾರ್ಲೊ ಸರ್, ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ಕಥೆ ಅವಾಸ್ತವಿಕ ಎನ್ನಿಸಿತೇ. ನಿಜಕ್ಕೂ ನಮ್ಮ ದೇಶದಲ್ಲಿ ಈ ಕಥೆ ನಡೆಯುವುದಿಲ್ಲವಾದರೆ ಖಂಡಿತವಾಗಿಯೂ ಅದು ನಮ್ಮ "ಸೌಭಾಗ್ಯವಷ್ಟೇ". ಬಹುಶಃ ನಾನು ಇಲ್ಲಿ ಬರೆದಿರುವ ಕೂಲಿಕಾರರ ಚಿತ್ರಣ ನಿಮಗೆ ಹಿಡಿಸಿಲ್ಲದಿರಬಹುದು.
ಉದಾಹರಣೆಗೆ ನೀವು ಕಟ್ಟಡ ನಿರ್ಮಾಣ ಗುತ್ತಿಗೆದಾರರು ಎಂದಿರಿ. ನಿಮ್ಮ ಕೈಕೆಳಗೆ ಕೆಲಸ ಮಾಡುವ ಕೂಲಿಗಳಿಗೆ ವರ್ಷವಿಡೀ ಕೆಲಸವಿರುತ್ತದೆಯೇ. ಅಕಸ್ಮಾತ್ ಜಡಿ ಮಳೆ ಹಿಡಿದು ಕಟ್ಟಡ ನಿರ್ಮಾಣ ಒಂದು ವಾರ ಸ್ಥಗಿತಗೊಂಡರೆ  ದಿನಗೂಲಿ ಲೆಕ್ಕಕ್ಕೆ ಕೆಲಸಕ್ಕೆ ನಿಮ್ಮಲ್ಲಿಗೆ ಬರುವ ಕೂಲಿಕಾರರು ಎಲ್ಲಿ ಹೋಗಬಹುದು ಎಂದು ಯೋಚನೆ ಮಾಡಿದ್ದೀರಾ? ನೀವು ಹೇಳಿದ ಅಂಶ ಸರಿಯಿದೆ, ಆದರೆ ಈ ಕಥೆಯಲ್ಲಿ ಎಲ್ಲೂ ಸೋಮಾರಿಯೋಬ್ಬನ ಚಿತ್ರಣವಿಲ್ಲ.
 
ಇಲ್ಲಿ ನಾನು ಹೇಳಿದ ಅಪ್ಪನ ಪಾತ್ರದ ಪರಿಸ್ಥಿತಿಯೂ ಅಂತಹದ್ದೇ ಆತ ಕೆಲಸಕ್ಕೆ ಹೋಗುವುದಿಲ್ಲವೆಂದು ಕೂತ ಸೋಮಾರಿಯಲ್ಲ. ಮಾರುಕಟ್ಟೆಯ ಪರಿಸ್ಥಿತಿಗೆ ಬಲಿಯಾಗಿ ಆತನ ಫ್ಯಾಕ್ಟರಿ ಮುಚ್ಚಿದಾಗ ಆತ ಕೂಲಿ ಕೆಲಸಕ್ಕಾದರೂ ಸರಿ ಎಂಬಂತೆ ನಿಂತದ್ದು ಆತನ ದಿಟ್ಟತನ. ಆದರೂ ಆತನಿಗೆ ದಿನವೂ ಕೂಲಿ ಸಿಗುವುದಿಲ್ಲ. ಇವೆಲ್ಲವೂ ಕೇವಲ ಕಾಲ್ಪನಿಕ ಸೃಷ್ಟಿಯಷ್ಟೇ.. ಆದರೂ ಇಲ್ಲಿ ನಾ ಹೇಳ ಹೊರಟಿದ್ದು, ಒಬ್ಬ ಬಡ ಕಾರ್ಮಿಕನೊಬ್ಬ ತನ್ನ ಕಷ್ಟಗಳ ನಡುವೆಯೂ ಹೇಗೆ ತನ್ನ ಮಗುವಿನ ಸಂತೋಷಕ್ಕಾಗಿ ಯಾವ ತ್ಯಾಗಕ್ಕಾದರೂ ಸಿದ್ಧ ಎಂಬಂತೆ ಗಟ್ಟಿ ಮನಸ್ಸು ಮಾಡಿ, ಅದರಂತೆ ನಡೆದು ಕೊನೆಗೆ ನಿಜವಾದ ಅಪ್ಪನೆನಿಸಿಕೊಳ್ಳುವ ವಿಷಯ. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಈ ಪುಟ್ಟ ಬರಹಗಾರನ ಮೇಲೆ ಮುಂದುವರೆಯಲಿ.

ಸಂತೋಷ್ ಕುಮಾರ್ ಎಲ್. ಎಂ.

Mahantesh Yaragatti
Mahantesh Yaragatti
11 years ago

Tumbaa  channagide sir…………….

Santhoshkumar LM
Santhoshkumar LM
11 years ago

Thank u Mahantesh sir 🙂

Badarinath Palavalli
11 years ago

ಯಾಕೋ ಕಣ್ಣಂಚಿನಲ್ಲಿ ಹನಿಗಳ ಪರಸೆ.
ಗೆಳೆಯ ದೀಪಳ ಪಟಾಕಿ ಆಸೆಗಾಗಿ ತ್ಯಾಗಕ್ಕೂ ಸಿದ್ದನಾದ ಅಪ್ಪ ಮತ್ತು ಅವಳಿಗೆ ಮೊದಲಿಗೆ ಕೈಗೆಟುಕದ ಪಟಾಕಿ ಬಹುಮಾನ. ಮನಕುಲುಕಿತು.
ಒಳ್ಳೆಯ ಕಥನ.

Santhoshkumar LM
Santhoshkumar LM
11 years ago

Thank you so much Badari bhai 🙂

14
0
Would love your thoughts, please comment.x
()
x