ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರಲೇಬೇಕು..
ಸಿಧ್ಧ : ಲೋ ಕೆಂಚ ಇಷ್ಯಾ ಗೊತ್ತಾಯ್ತಾ ? ನಮ್ ಪೂಜಾ ಗಾಂಧೀ ಫ್ಯಾನ್ ಹಿಡ್ಕಂಡು ನೇತಾಡ್ತಾ ಅವಳಂತೆ.!!??
ಕೆಂಚ : ಅಯ್ಯೋ ಬುಡ್ಲಾ ಆ ಸ್ಟೋರಿ ಗೊತ್ತಿಲ್ವಾ ನಿಂಗೆ. ಆಯಮ್ಮಾ ಮೊನ್ನೆ ಹೊರೆ ಹೊತ್ಕೊಂಡು ಹೋಯ್ತಾ ಇದ್ಲು. ನಮ್ ಕುಮಾರಣ್ಣ ಸಿಕ್ಕಿದ್ದೇ ಚಾನ್ಸು ಅಂತ ಆಯಮ್ಮನ ತಲೆ ಮ್ಯಾಲೆ ಶ್ಯಾನೆ ಹೊರೆ ಹೊರ್ಸ್ಬುಟ್ಟ ಅಂತ ಕಾಣ್ತದೆ. ಅದಕ್ಕೇ ಆವಮ್ಮ ಯಡ್ಡಿ ಬಾಸ್ ಹತ್ರ ಹೋಗಿ ನಾನು ಕೆಜೆಪಿ ಸೇರ್ಕತೀನಿ, ನನ್ ಕಾಲ್ ಶೀಟ್ ತಕ್ಕಳ್ಳಿ ಅಂದ್ರೆ ಆವಯ್ಯ ಧನಂಜಯ್ ಕುಮಾರು ಅನಾಮತ್ತಾಗಿ ಒಂದು ತೆಂಗಿನಕಾಯಿ ಚೀಲ ತಲೆ ಮೇಲೆ ಹೊರ್ಸಿದ್ನಂತೆ. ಅಲ್ಲಿ ಹುಲ್ಲಿನ ಹೊರೆ ಇಳ್ಸಿ ಇಲ್ಲಿಗ್ ಬಂದ್ರೆ ಇವ್ರು ತೆಂಗಿನ್ಕಾಯಿ ಹೊರಿಸ್ತಾರಲ್ಲಪ್ಪ ಅಂತ ಈಯಮ್ಮ ಬೆವರೋಕೆ ಶುರು ಆಯ್ತಂತೆ. ಆವಾಗ ಬಳ್ಳಾರಿ ಕಡೆಯಿಂದ ಬಿಸಿಲಲ್ಲೂ ತಂಗಾಳಿ ಬೀಸೋಕೆ ಶುರು ಆಯ್ತಂತೆ. ತಿರುಗಿ ನೋಡಿದ್ರೆ ನಮ್ ಮದನ್ ಪಟೇಲ್ ಶ್ರೀರಾಮುಲು ಜೊತೆ ಫ್ಯಾನ್ ಹಿಡ್ಕೊಂಡು ನಿಂತಿದ್ರಂತೆ. ಅದ್ಕೆ ಈಯಮ್ಮ ಖುಸಿ ತಡ್ಯಕಾಗ್ದೆ ಶ್ರೀರಾಮುಲುಗೆ ಜೈ ಅಂತ ಫ್ಯಾನ್ ಹಿಡ್ಕಂಡು ನೇತಾಡೋಕೆ ಶುರು ಮಾಡವಳೆ.
ನಾಣಿ : ಅದೆಲ್ಲ ಹೆಂಗಾರ ಇರ್ಲಿ, ಹಾಯಾಗಿ ಮಳೇಲಿ ನೆನ್ಕಂಡು, ಪಿಚ್ಚರಲ್ಲಿ ಕುಣೀತಾ ಇರೋದ್ ಬುಟ್ಟು ಈಯಮ್ಮಂಗೆ ಯಾಕ್ಲಾ ಬೇಕಿತ್ತು ರಾಜ್ಕೀಯ ?
ಸಿಧ್ಧ : ಪೂಜಾ ಗಾಂಧೀ ರಾಜ್ಕೀಯ ಸೇರಿದ್ದು ಯಾಕೆ ಅಂತ ನಂಗ್ ಗೊತ್ತು ಕಣ್ಲಾ. ಒಂದಿವ್ಸ ನಮ್ ಕುಮಾರಣ್ಣ ಶ್ಯಾನೆ ಬೇಜಾರಲ್ಲಿ ಕುಂತಿದ್ರಂತೆ. ಆಗ ನಮ್ ದೊಡ್ಡ ಗೌಡ್ರು "ಯಾಕ್ಲಾ ಮಗಾ ಹಿಂಗ್ ಕುಂತಿದ್ಯಾ? ನೀನು ಸದಾನಂದ ಗೌಡ್ರ ಥರ ಸದಾ ನಗ್ತಾ ಇರು ಅಂದ್ರೆ ಮಲ್ಲಿಕಾರ್ಜುನ ಖರ್ಗೆ ಥರಾ ಮುಸುಡಿ ಮಾಡ್ಕಂದಿದ್ಯಲ್ಲ, ನಿಂಗ್ ಏನ್ ಬೇಕು ಕೇಳು?" ಅಂತ ಅಂದ್ರಂತೆ. ಆಗ ನಮ್ ಕುಮಾರಣ್ಣ " ಅಪ್ಪಾಜಿ ಕಾಂಗ್ರೆಸ್ ಪಾರ್ಟಿಯವರ ಹತ್ರ ಸೋನಿಯಾ ಗಾಂಧೀ, ರಾಹುಲ್ ಗಾಂಧೀ ಅವ್ರೆ, ಬಿಜೆಪಿಯವರ ಹತ್ರ ಆಯಮ್ಮ ಮೇನಕಾ ಗಾಂಧೀ, ವರುಣ್ ಗಾಂಧೀ ಅವ್ರೆ. ಆದ್ರೆ ನಮ್ ಹತ್ರ ಯಾವ್ ಗಾಂಧೀನು ಇಲ್ಲ" ಅಂತ ಗೋಳಾಡಿದ್ರಂತೆ. ಆಗ ನಮ್ ದ್ಯಾವೇ ಗೌಡ್ರು ಒಂದ್ ನಿಮ್ಸ ನಿದ್ದೆ ಮಾಡೋ ಸ್ಟೈಲಲ್ಲಿ ಯೋಚ್ನೆ ಮಾಡಿ " ಲೇ ಮಗಾ ತಲೆ ಕೆಡಿಸ್ಕೋ ಬ್ಯಾಡ ತಗೋ ನಿಂಗೂ ಒಂದು ಗಾಂಧೀ" ಅಂತ್ಹೇಳಿ "ಕುಣಿದು ಕುಣಿದು ಬಾರೇ" ಅಂತ ಪೂಜಾ ಗಾಂಧೀನ ಪಕ್ಷಕ್ಕೆ ಕರ್ಕಂಡ್ ಬಂದ್ರಂತೆ .
ಸೀನ : ಹೌದೇನ್ಲಾ ಸಿದ್ಧ, ಆವಮ್ಮ ರಾಜ್ಕೀಯಕ್ಕೆ ಬರೋಕೆ ಇಷ್ಟೆಲ್ಲಾ ಸೀನ್ ಐತಾ? ಆದರೂ ನಂಗೆ ಒಂದ್ ವಿಷ್ಯ ಅರ್ಥ ಆಯ್ತಿಲ್ಲ. ಈ ರಾಜಕಾರಣಿಗಳು ಯಾಕೆ ಈಪಾಟಿ ಪಕ್ಷಾಂತರ ಮಾಡ್ತಾರೆ ? ಅವರ್ಗೇನು ಮಾಡೋಕೆ ಕ್ಯಾಮೆ ಇಲ್ವಾ? ಬರೀ ಆ ಪಕ್ಷ ಬುಟ್ಟು ಈ ಪಕ್ಷ, ಈ ಪಕ್ಷ ಬುಟ್ಟು ಆ ಪಕ್ಷ ಅಂತ ಕೋತಿ ಥರ ನೆಗೀತಾ ಇರ್ತಾರೆ.
ಕೆಂಚ: ಲೇ ಸೀನ ಸುಮ್ಕೆ ಟೀ ಕುಡೀಲಾ , ಅಲ್ಲಾ ಆ ಕೋತಿಗಳು ಏನ್ ಮಾಡವ್ಲಾ ನಿಂಗೆ? ಸುಮ್ಕೆ ಅವಕ್ಯಾಕೆ ಅವಮಾನ ಮಾಡ್ತೀಯ.
ಸಿಧ್ಧ : ಕರೆಟ್ಟಾಗಿ ಹೇಳ್ದೆ ಕಣ್ಲಾ ಕೆಂಚ, ನಿಮ್ಗೆಲ್ಲಾರ್ಗೂ ಒಂದ್ ವಿಷ್ಯ ಹೇಳ್ತೀನಿ ಕರೆಟ್ಟಾಗಿ ಕೇಳಿಸ್ಕಳ್ಳಿ . ಈ ಪಕ್ಷಾಂತರ ಅಂದ್ರೆ ಏನರ್ಥ ಅಂತ ಗೊತ್ತಾ ನಿಮ್ಗೆ? ನಮ್ ವೆಂಕಟ ಸುಬ್ಬಯ್ನೋರು ಬರೆದಿರೋ ಕನ್ನಡ ನಿಘಂಟು ತಗಂಡು ನಾನೂ ಅರ್ಥ ಹುಡುಕ್ದೆ . ಪಕ್ಷಾಂತರ ಮಾಡು ಅಂದ್ರೆ ತ್ಯಜಿಸು, ಸಿದ್ಧಾಂತವನ್ನು ತೊರೆ ಅಂತ ಅರ್ಥ.
ಸಿಧ್ಧ ಏನೋ ಹೊಸ ಹೊಸ ಪದಗಳನ್ನು ಹೇಳ್ತಿದ್ರೆ ನಮ್ ಕೆಂಚ,ನಾಣಿ, ಸೀನ ಎಲ್ಲಾ ಅರ್ಥ ಆಗೇ ಹೋಯ್ತು ಅನ್ನೋ ಥರ ಬಾಯ್ ಬಾಯಿ ಬಿಟ್ಕೊಂಡು ಕೇಳಿಸ್ಕೊತಾ ಇದ್ರು. ಇದನ್ನು ನೋಡಿ ನಮ್ ಸಿಧ್ಧ ಇನ್ನೂ ಉತ್ತೇಜಿತನಾಗಿ ಖುಷಿಯಿಂದ ಇನ್ನೂ ವಿವರವಾಗಿ ಹೇಳೋಕೆ ಶುರು ಮಾಡಿದ.
ಆದ್ರೆ ನಮ್ ರಾಜಕಾರಣಿಗಳು ಒಂದು ಪಕ್ಷ ತ್ಯಜಿಸೋದೆ ಇನ್ನೇನೋ ಗಳಿಸೋಕೆ . ಇನ್ನು ಸಿದ್ಧಾಂತ ತೊರೆಯೋದು ಅನ್ನೋ ಪದಕ್ಕೆ ಅರ್ಥಾನೆ ಇಲ್ಲ. ಇವ್ರಿಗೆ ಸಿದ್ಧಾಂತ ಗೊತ್ತಿದ್ರೆ ತಾನೇ ತೊರೆಯೋ ಮಾತು.ಇನ್ನೂ ಕೆಲವರು ಇನ್ನೊಂದ್ ಥರಾ ವಿಚಿತ್ರ. ಅವ್ರು ಇರೋದು ಒಂದ್ ಪಕ್ಷ ಆದ್ರೆ ಕೆಲಸ ಮಾಡೋದು ಇನ್ನೊಂದ್ ಪಕ್ಷಕ್ಕೆ. ದಗಲ್ಬಾಜಿ ರಾಜಕೀಯ ಕಣ್ಲಾ . ಅದ್ಕೆ ನಾನು ವೆಂಕಟ ಸುಬ್ಬಯ್ನೋರನ್ನ ಕೇಳ್ಕಳ್ಳೋದು ಇಷ್ಟೇ. ದಯವಿಟ್ಟು ನಿಮ್ ನಿಘಂಟು ತಿದ್ದುಪಡಿ ಮಾಡಿ ಅಂತ. ಯಾಕಂದ್ರೆ ನಮ್ ರಾಜಕಾರಣಿಗಳ್ನ ತಿದ್ದುಪಡಿ ಮಾಡೋದು ಶ್ಯಾನೆ ಕಷ್ಟ.
ಹೀಗೇ ನಮ್ ಸಿದ್ಧ ನಾನ್ ಸ್ಟಾಪ್ ಆಗಿ ಪಕ್ಷಾಂತರದ ವಿಷಯದ ಬಗ್ಗೆ ಮಾತಾಡ್ತಿದ್ರೆ ಈ ಕಡೆ ಪಂಚಾಯ್ತಿ ಎಲೆಕ್ಷನ್ ಪ್ರಚಾರಕ್ಕೆ ಅಂತ ಒಬ್ಬೊಬ್ರಾಗಿ ಕ್ಯಾಂಡಿಡೇಟ್ ಗಳು ರಾಮಣ್ಣನ ಅಂಗಡಿ ಹತ್ರ ಬಂದು ನಮ್ಗೇ ವೋಟು ಹಾಕಿ ಅಂತ ಕೈಮುಗ್ದು ಕೇಳ್ತಾ ಇದ್ರು. ಈ ಸೀನ, ಸಿದ್ಧ, ಕೆಂಚ, ನಾಣಿ ಮಾತಾಡೋ ಮಾತು ಕೇಳಿ ಅವರೆಲ್ಲಾ ನನ್ ಅಂಗಡಿ ಮುಂದೆ ಜಗಳ ಶುರು ಮಾಡಿದ್ರೆ ಕಷ್ಟ ಅಂತ ರಾಮಣ್ಣ " ಲೇ ಮಾಡೋಕೆ ಕ್ಯಾಮೆ ಇಲ್ವಾ ಮೂದೇವಿಗಳೇ ನಿಮ್ಗೆ , ಎದ್ದು ಹೋಗ್ರಲೇ ಟೀ ಕಾಸು ಕೊಟ್ಟುಬುಟ್ಟು" ಅಂದ. ಲೆಕ್ಕ ಬರಕೋ ರಾಮಣ್ಣ ಎಲೆಕ್ಷನ್ ಮುಗಿಯೋದ್ರೊಳಗೆ ನಿಂಗೆ ಹಳೆಬಾಕಿ ಎಲ್ಲಾ ಫೈಸಲ್ ಮಾಡ್ತೀವಿ ಅಂತ ನಮ್ ಸಿದ್ಧ ಸೇಮ್ ರಾಜಕಾರಣಿ ಸ್ಟೈಲಲ್ಲಿ ಆಶ್ವಾಸನೆ ಕೊಟ್ಟು ತನ್ನ ಪಟಾಲಂ ಕರ್ಕೊಂಡು ಮನೆ ಕಡೆ ಹೊರಟ.
Chenagidhe vijayanna
Good One 🙂
ಪೂಜಾ ಫ್ಯಾನ ಹಾಕ್ಕೊಂಡ್ ರಾಯಚೂರಾಗೇ ಮನೆ ಮಾಡ್ತಾರಂತ್ರೀ….
super satire, please continue writing in this genre and throw light on dirty national politics as well
ಮೆಚ್ಚಿದ ಎಲ್ಲ ಗೆಳೆಯರಿಗೂ ವಂದನೆಗಳು