ಹಿಗ್ಗಿನ ಹೋಳಿ
ಶೋಭಿಸುತಿದ್ದವು ಮೊಗಗಳು
ಬಣ್ಣಗಳ ಸಮ್ಮಿಲನದಿಂದ,
ಬೆಳಗುತಿದ್ದವು ಕಣ್ಣುಗಳು
ಅಂತರಾಳದಲ್ಲಿರುವ ಆನಂದದಿಂದ,
ಥಳಿಥಳಿಸುತಿದ್ದವು ತೊಯ್ದ ಉಡುಪುಗಳು
ರಂಗುರಂಗಿನ ಲೇಪನದಿಂದ.
ಎಲ್ಲಾ ದಿನಗಳಲ್ಲಿದ್ದಂತೆ ಆತುರವಿರಲಿಲ್ಲ,
ಮಕ್ಕಳಿಗೆ ಶಾಲೆಯ ಗೋಜಿರಲಿಲ್ಲ,
ವಯಸ್ಕರಿಗೆ ವೃತ್ತಿಯ ಲಕ್ಷ್ಯವಿರಲಿಲ್ಲ,
ವೃದ್ಧರಿಗೆ ಸಂಕೋಚವಿರಲಿಲ್ಲ,
ಮಕ್ಕಳಾಗಿದ್ದರು ಎಲ್ಲಾ ಪ್ರಕೃತಿಯ,
ಎರಚುತ್ತಾ ರಂಗುರಂಗಿನ ಓಕುಳಿಯ.
ಭೇದವಿರಲಿಲ್ಲ ಜಾತಿ, ಮತ, ವರ್ಗಗಳ,
ಸುಳಿವಿರಲಿಲ್ಲ ಕಷ್ಟ ಕಾರ್ಪಣ್ಯಗಳ,
ಎಲ್ಲರೂ ಭಾಗ್ಯವಂತರು ಅಲ್ಲಿ,
ಹಿಗ್ಗಿನ ಸುಗ್ಗಿಯ ಸೊಬಗಿರುವಲ್ಲಿ,
ಹಂಚುತಿದ್ದರು ಸಿಹಿ ಸಂತೋಷಗಳ,
ಹಚ್ಚುತ್ತಾ ರಂಗುರಂಗಿನ ಬಣ್ಣಗಳ.
ಉರಿಸಲಾಗಿತ್ತು ಅಗ್ನಿ ಈಗಾಗಲೇ,
ಚಂದಿರನ ಬೆಳ್ದಿಂಗಳ ಬಯಲಲ್ಲಿ,
ದುಷ್ಟತನದ ಅಪಜಯ,
ಒಳ್ಳೆಯತನದ ಜಯ,
ಶಾಶ್ವತ ಸಂದೇಶವಾಗಿ ಗಾಳಿಯಲಿ ತೇಲುತಿತ್ತು,
ಪಾಲ್ಗುಣ ಚೈತ್ರಕೆ ಶುಭ ಹಾಡಿತ್ತು.
ಮೈತುಂಬಾ ಬಣ್ಣವಿತ್ತು,
ನಲಿವಿನ ಔತಣವಿತ್ತು,
ಹುಚ್ಚು ಕುಣಿತವಿತ್ತು,
ಜೀವ ಸಿರಿಯಿತ್ತು,
ಕಾಮನಬಿಲ್ಲು ಧರೆಗಿಳಿದು ಬಂದಂತಿತ್ತು,
ಬಣ್ಣಬಣ್ಣದ ನೀರು ಕೋಡಿಯಾಗಿ ಹರಿಯುತಿತ್ತು.
ವೈವಿಧ್ಯತೆಯಿತ್ತು,
ಬಹುಮಂದಿಯ ಗುಂಪಿತ್ತು,
ವಿಧವಿಧದ ಬಣ್ಣಗಳ ಕೂಟವಿತ್ತು,
ಆದರೂ ಏಕತೆಯಿತ್ತು,
ಸಂತೋಷವೊಂದೇ ಆಗಿತ್ತು
ಎಲ್ಲರ ಮನದಂಗಳದ ಬಣ್ಣ.
-ಪವಿತ್ರ ಸತೀಶ್ ಕುಮಾರ್
ಮೂಕವಾಗಿರುವೆನು..
ಮೂಕವಾಗಿರುವೆನು ಹೀಗೇ,
ಕೊರಳು ಬಿಗಿದ ಹಕ್ಕಿಯ ಹಾಗೆ;
ಕವಿದ ವೇದನೆಯದು ಕರಗುವವರೆಗೆ,
ಅರೆಬಿರಿದು ಬಾಡಿದ ಕನಸದು
ಪೂರ್ತಿ ಕಳಚುವವರೆಗೆ;
ಬರಿ ಭ್ರಮೆಯ ಅಲೆಗಳಲೆ
ಉಕ್ಕುತಿಹ ಒಲವದು
ಹೊಳಪು ಬತ್ತಿದೀ ಕಂಗಳಲಿ ಹನಿಹನಿಯಾಗಿ
ಹರಿದು ಬರಿದಾಗುವವರೆಗೆ;
ಮೃದುಮಧುರ ಭಾವಗಳ
ಮಳೆತಂದ ಮೇಘವದು
ಕಳೆದ ಕಾಲದ ಮರೆಯಿಂದ
ಮನಕೆ ಮರಳುವವರೆಗೆ;
ಮೂಕವಾಗಿರುವೆನು ಹೀಗೇ,
ಕೊರಳು ಬಿಗಿದ ಹಕ್ಕಿಯ ಹಾಗೆ..
-ವಿನಾಯಕ ಭಟ್,
ಅವಳೊಂದು ಹೋಳಿ
ನಗೆ ಹೋಳಿ
ಕಣ್ಣಾಲಿ ಕಚಗುಳಿ
ಕೆಂಪು ಕೆನ್ನೆ ಓಕುಳಿ
ಕನ್ನೆ ನಾಚಿರೆ ಜೋಲಿ ||
ರಂಗೆ ಸರಿಗಮ
ನೀರಾಡೆ ಸಂಗಮ
ರವಿಶಶಿ ಸಮಾಗಮ
ನೇತ್ರದ್ವಯ ಪರಮ ||
ಹಿಗ್ಗು ಸಿಗ್ಗಾಗೆ
ಮೊಗ್ಗರಳಿ ಬುಗ್ಗೆ
ಚೆಲ್ಲಿದ ಮಲ್ಲೆ ಸೊಬಗೆ
ಮುಡಿಯ ದಂಡೆ ತುರುಬೆ ||
ಪ್ರಾಯದ ರಂಗು
ಅರಳಿಸಿದ ಮೊಗ್ಗು
ಹಿರಿಹಿರಿ ಹಿಗ್ಗಿ ಗುನುಗು
ತನುವರಳಿ ಹೂ ಪುನುಗು ||
ನಿತ್ಯವು ಹೋಳಿ
ಮಾತಾಳಿ ವಾಚಾಳಿ
ಸುಳಿಗಾಳಿಗವಳ ಚಾಳಿ
ಚಳಿಯಂತಪ್ಪಿ ಚಿನಕುರುಳಿ ||
-ನಾಗೇಶ ಮೈಸೂರು
ಬಣ್ಣದ ಹಬ್ಬ ಹೋಳಿ
ರಂಗು ರಂಗಿನ ಕನಸುಗಳ ಗುಂಗಲಿ ತೇಲಿ
ನಲಿದಾಡೊ ನವಿಲಿನಂತೆ ಹೆಜ್ಜೆ ಹಾಕುತ ವಾಲಿ
ಸಂಭ್ರಮಿಸೋಣ ಬನ್ನಿ ಬಂದಿತಿದೊ ಹೋಳಿ
ಕಹಿ ಮನವ ತಿಳಿಯಾಗಿಸಿ;
ಮನದ ಮೂಲೆ ಮೂಲೆಯ ಸಿಂಗರಿಸಿ
ಎಲ್ಲೆಡೆ ಮಧುರ ಪ್ರೀತಿಯ ಹೂರಣವ ತುಂಬಿಸಿ
ಏಳು ಬಣ್ಣದ ಕಾಮನಬಿಲ್ಲ ಏರಿ
ಕೂರೋಣ ಬಾನಂಚನು ಚುಂಬಿಸಿ
ಬಣ್ಣದೋಕುಳಿಯಲ್ಲಿ ತೊಳೆದು ಹೋಗಲಿ ಎಲ್ಲ ಕಲ್ಮಶ
ಕೂಡಿ ಸಾರೋಣ ಬನ್ನಿ ಎಲ್ಲೆಡೆ ವಿಶ್ವ ಭಾತೃತ್ವದ ಸಂದೇಶ
-ಕೃಷ್ಣಮೂರ್ತಿ ನಾಯಕ
ಹೋಳಿ- ಕರಾಳ ನೆನಪು
ಎಲ್ಲೆಲ್ಲೂ ಬಣ್ಣ
ಹೋಳಿ ಹಬ್ಬದ ಸಂಭ್ರಮ,
ಗುರುತಿಸಲಾಗದ ಚಹರೆಗಳು
ಹಿಡಿಯಲ್ಲಿ ಪುಡಿ ಹಿಡಿದು
ಬೀದಿ ಬೀದಿ ಅಲೆವಾಗ
ನಾ ಇದ್ದಲ್ಲೇ ಅವಿತುಕೊಳ್ಳುತ್ತಿದ್ದೆ
ದಶಕದ ಹಿಂದೆ ನಾನೂ
ಆಚರಿಸಿದ್ದೆ ಕೊನೆಯದಾಗಿ ಹೋಳಿ.
ಹಿಂದೆಂದಿಗಿಂತಲೂ ಹುರುಪಿನಲಿ
ಸಿಕ್ಕ ಸಿಕ್ಕವರನ್ನ ಅಡ್ಡಗಟ್ಟಿ
ಬಣ್ಣ ತೂರಿದಾಗ ತಟ್ಟಿದ ಶಾಪ
ಸಂಜೆಯಾಗುತ್ತಿದ್ದಂತೆ ಪ್ರಬಲವಾಗಿ
ಅಟ್ಟಹಾಸ ಮೆರೆಯಿತು
ದಂಡೆತ್ತಿದ ಶತ್ರು ಪಡೆ
ಶ್ವಾಸಕೋಶವನ್ನೇ ಆಕ್ರಮಿಸಿ
ನಿಸ್ಸಹಾಯ ಉಸಿರ ಸೆರೆ ಹಿಡಿದು
ಇಷ್ಟಿಷ್ಟೇ, ಇಷ್ಟಿಷ್ಟೇ ಬಿಟ್ಟು ಕೊಟ್ಟಾಗ
ಕಣ್ಣನು ರೆಪ್ಪೆ ನಿಧಾನಕ್ಕೆ ಹೊದ್ದು
ಮತ್ತೆ ತೆರೆಯುವ ಹೊತ್ತಿಗೆ
ಆಸ್ಪತ್ರೆಯ ಪಲ್ಲಂಗದ ಪಕ್ಕ
ಹಣ್ಣು, ಬ್ರೆಡ್ಡು, ಮಾತ್ರೆ ಚೀಟಿ
ವಾಕರಿಕೆಯಲ್ಲೂ ಬಣ್ಣದ ಚೆಲ್ಲಾಟ
ಕೆಂಪು, ನೀಲಿ, ಹಸಿರು
ಮೂತಿಗೆ ಕಟ್ಟಿದ ಮಾಸ್ಕಿನ ಮೂಲಕ
ಔಷಧ ಮಿಶ್ರಿತ ಉಸಿರು
ಕೈಗಂಟಿಡ ಕಲೆ ಬೇಕಾಯಿತು ಕಳೆಯಲು
ಹತ್ತತ್ತಿರ ವಾರದ ಅವಧಿ
ಅಲರ್ಜಿ ಅಂದಿಗೆ ಮೆಟ್ಟಿತು ಒಡಲನು
ಇಂದಿಗೂ ಕಾಡುವ ಭೂತವಾಗಿ
ಬಣ್ಣದ ಪಾಲಿಗೆ ಬೇಡವಾದೆ
ನನ್ನ ಪಾಲಿಗೆ ತಾ ಬೇಡವಾಗಿ
ಹೋಳಿಯೆಂದರೆ ಇಷ್ಟೇ ನೆನಪು
ನೆನೆದರೂ ಉಸಿರುಗಟ್ಟುವುದು
ಇನ್ಹೇಲರ್ ಗಂಟನು ಬಿಡಿಸುವುದು!!
— ರತ್ನಸುತ (ಭರತ್ ಎಂ ವೆಂಕಟಸ್ವಾಮಿ)
ಬಡವರು
ನೀವು ನಗುವಾಗ ನಾವು ಅತ್ತಿದ್ದೇವೆ
ನಿಮ್ಮ ಉಪ್ಪರಿಗೆಯ ಕೆಳಗೆ
ನಮ್ಮ ಬೆನ್ನು
ನಿಮ್ಮ ಸುಖದ ಹಿಂದೆ
ನಮ್ಮ ಬೆವರ ಹನಿಗಳು
ನಿಮ್ಮ ನೆರಳಿಗೆ
ನಮ್ಮ ಬಿಸಿಲ ಬೇರು
ನಮಗೂ ಗುರುತಿನ ಚೀಟಿಗಳಿವೆ
ಹಸಿವು ಕೂಡ ಇದೆ
ಸುಖ ಸವಲತ್ತುಗಳ ವಂಚಿತರು ನಾವು
ಖಂಡಿತ ನಾವು ಪಾಪಿಗಳೇ ಇರಬೇಕು
ಮೂಲಭೂತ ಹಕ್ಕುಗಳನ್ನೇ
ಕಳೆದುಕೊಂಡ ಮನುಷ್ಯರು ನಾವು
ನಮ್ಮನ್ನು ನೀವು ಯಾವಾಗ
ಯಾರು ಬೇಕಾದರೂ ಕೊಂಡುಕೊಳ್ಳಬಹುದು
~•~
ವರ್ಗಾವಣೆ
ನಿನ್ನ ಕೈಗೆ ಕೈ ತಾಕಿಸಲು
ತುಸು ಸನಿಹ ಬಂದಾಗ
ನೀನು ಮುಷ್ಟಿಯ ತುಂಬಾ
ಬೆಂಕಿಯನ್ನೇ ತುಂಬಿಕೊಂಡಿದ್ದೆ
ನಿನ್ನ ನೋವುಗಳಲ್ಲಿ
ನಾನೂ ಪಾಲು ಕೇಳಿದ್ದು
ನಿನಗೊಂದು ನೆಪ ಸಾಕಿತ್ತು
ನನ್ನ ಬೊಗಸೆಯ ತುಂಬಾ
ಬರೀ ಕೆಂಡದುಂಡೆಗಳ ತುಂಬಿದ
ನೀನು ಕೈ ಕೊಡವಿಕೊಂಡು
ಮುಂದೆ ಸಾಗಿಬಿಟ್ಟೆ
ನಿನ್ನ ಕಣ್ಣೀರಿನಲ್ಲಿ
ಸಾವಿರ ನೋವಿನ ಮುಳ್ಳುಗಳಿದ್ದವು
ನಿನ್ನ ಕೆನ್ನೆಯನ್ನು ಸವರಿದ
ನನ್ನ ಅಂಗೈಯ ತುಂಬಾ ಈಗ
ವಿಷದ ಜಾಲಿಯ ಬೇರುಗಳು
ನನಗೊಂದೇ ಖುಷಿ
ನನ್ನ ಸಂತಸವ ನಿನಗೆ ವರ್ಗಾಯಿಸಿ
ನಿನ್ನ ನೋವುಗಳನ್ನು ಹೊರುವಷ್ಟು
ತಾಕತ್ತು ನನಗಿದೆ.
~ ನವೀನ್ ಮಧುಗಿರಿ
ರೈಲು ಕಂಬಿಗಳು
ಈ ಎರಡು ರೈಲು ಕಂಬಿಗಳನ್ನ ನೋಡು
ಎಷ್ಟೊರುಷಗಳಿಂದ ಪರಸ್ಪರ ಗಾಢವಾಗಿ
ಪ್ರೇಮಿಸುತ್ತಿವೆ, ಧ್ಯಾನಿಸುತ್ತಿವೆ..
ಮಳೆ ಚಳಿ ಗಾಳಿ ಬಿಸಿಲು
ಗುಡುಗು ಸಿಡಿಲು ಮಿಂಚು
ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ
ದೂರ ಸರಿಯದೇ
ಪ್ರತಿಕ್ಷಣವು ಜೊತೆಗಿರುವ ಅವುಗಳಿಗೆ
ಪರಸ್ಪರ ಒಂದು ಕ್ಷಣವು
ಬೇಸರವಾಗಿಲ್ಲದಿರುವುದು ಅಚ್ಚರಿಗಳ ಅಚ್ಚರಿ!!
ಮೊನ್ನೆ ಪಾರ್ಕಿನಲ್ಲಿ ನಾವು
ಒಟ್ಟಿಗೆ ಒಂದು ಗಂಟೆ ಕುಳಿತಿದ್ದೆವಲ್ಲ
ಆಗ ಎಷ್ಟೆಲ್ಲ ಮಾತಾಡಿದೆವು
ಬರಿ ಅಷ್ಟೇ ಅಲ್ಲ, ಆ ಮಾತುಗಳ ನಡುವೆಯೂ
ನಿನಗೆ ಗೊತ್ತಾಗದಂತೆ ಗುಟ್ಟಾಗಿ
ಯುವರಾಜ್ ನೆನಪಾಗಿದ್ದ!
ಆಮೇಲೆ ರಣ್ ಬೀರ್, ಬೆಳಗ್ಗೆ ಅಮ್ಮ ಮಾಡಿದ್ದ
ಉಪ್ಪಿಟ್ಟು, ಅದರ ಘಮ
ವಾಟ್ಸ್ ಅಪ್ ನಲ್ಲಿ ಓದಿದ ಪೋಲಿ ಜೋಕು..
ನಿನಗೂ ಎಕನಾಮಿಕ್ ಮೇಡಮ್
ಲಾಸ್ಟ್ ಬೆಂಚಿನ ಸಿಂಧು
ಅಪ್ಪನಿಂದ ಬೈಸಿಕೊಂಡಿದ್ದು
ಪಿವಿಆರ್ ನಲ್ಲಿ ನಾವಿಬ್ಬರೂ ಒಟ್ಟಿಗೆ
ಮೊದಲು ನೋಡಿದ ಸಿನಿಮಾ
ಮತ್ತು ನೀನಾಗ ಮಾಡಿದ ಚೇಷ್ಟೆ
ಎಲ್ಲವೂ ನೆನಪಾಗಿರಬೇಕಲ್ವಾ..?
ನಾವು ನಿರ್ಜೀವ ರೈಲು ಕಂಬಿಗಳಾಗಬೇಕಿತ್ತು
ಪರಸ್ಪರ ಪ್ರಾಮಾಣಿಕವಾಗಿ
ಪಾರದರ್ಶಕವಾಗಿ
ನಿಸ್ವಾರ್ಥವಾಗಿ ಪ್ರೇಮಿಸಬಹುದಿತ್ತು
ಧ್ಯಾನಿಸಬಹುದಿತ್ತು..
– ಹೇಮಾ ಕಳ್ಳಂಬೆಳ್ಳ
ಹೋಳಿ ಹುಣ್ಣಿಮೆ
ಬಣ್ಣಗಳ ತಳಕು
ಕಣ್ಣಗಳಿಗೆ ಹೊಳಪು
ರಂಗು ರಂಗಿನ
ಥಕಧಿಮಿತ
ಎಲ್ಲೆಲ್ಲು ವರ್ಣಗಳ
ಅಲೆದಾಟ
ಚಿಣ್ಣರಿಗೆ ಪಿಚಿಕಾನಿಯ
ಜೊತೆ ಜಿಗಿದಾಟ
ಹುಡುಗರಿಗೆ
ಹಮ್ಮು ಬಿಮ್ಮುಗಳ
ಕೆಣಕಾಟ
ಬೇದ ಭಾವಗಳ
ಮರೆಸುವ
ಎಲ್ಲರೊಂದೇ ಎನ್ನುವ
ಬೀಜ ಬೆಳೆಸಿ
ಕಪ್ಪು ಬಿಳಿಪು
ಕೆಂಪು ನೀಲಿ
ಕಾಮನಬಿಲ್ಲಿನ
ಓಕುಳಿ ಎರಚಿ
ನಾಡಿನ ತುಂಬ
ಹಬ್ಬ ಆಚರಿಸಿ
ಹಾಡಿ ನಲಿವ
ಹೋಳಿ ಹುಣ್ಣಿವೆ
ಬಂದೆ ಬಿಟ್ಟಿತು
ಎಲ್ಲರ ಮನ
ತಣಿಸಲು
ಸಂತೋಷ ತರಲು
ವರುಷದ ಆರಂಬದಿ
ನವ ಭಾವ ಬೆಳೆಸಿ
ಬನ್ನಿ ಜೊತೆಗೂಡಿ
ಹೇಳೋಣ ಸ್ವಾಗತ
ಬಣ್ಣದ ಆಟಕೆ
ರಂಗಿನ ನೋಟಕೆ
-ಉಷಾ ಲತಾ
ರಂಗಾಂಗಿ
ಎದೆಯ ಮೇಲೆ
ನೀ ಡಾಳಾಗಿ ಬಳಿದ ಬಣ್ಣ
ಇನ್ನೂ ರಂಗಾಗೇ ಇದೆ
ಮದರಂಗಿ.
ತೊಳೆದರೆ
ಸುಲಭವಾಗಿ
ಹೋಗುವಂಥದ್ದಲ್ಲ ಅದು
ಉಜ್ಜಲು ಮನಸ್ಸಿಲ್ಲ .
ಸುಟ್ಟು ಕರಕಲಾಗಿದೆ
ಬಣ್ಣದ ಬಟ್ಟೆ
ಕಾಮ ದಹನದ
ಸುಡುಗಾಡು.
ನಾನು ಇದಿನ
ಹೊತ್ತು ಹೊತ್ತಿಗೆ
ಬಣ್ಣ ಬದಲಿಸುವ
ಗೋಸುಂಬೆ .
ಮನ್ನಿಸು ಪ್ರಿಯತಮ
ಈಗ ಚುಂಬಿಸಬೇಡ
ನಾನು ಹೋಳಿಯ
ಹಾವಳಿಯಲ್ಲಿದ್ದೇನೆ.
–ರಾಘವೇಂದ್ರ ಹೆಗಡೆಕರ–
೯೯೯ ರೂಗೆ ಮೂರು ಶರ್ಟಗಳು!
ದಾರಿಯಲ್ಲಿ ಕಂಡಿತೊಂದು
"ಕೇವಲ ೯೯೯ ರೂಗೆ ಮೂರು ಶರ್ಟಗಳು"
ಎಂದು ತನ್ನ ಪಾಡಿಗೆ ತಾನು ನಿಂತಿದ್ದ
ಕಂಬಕ್ಕೆ ತೂಗು ಹಾಕಲಾಗಿದ್ದ ಬೋರ್ಡು.
ಪಕ್ಕದಲ್ಲೇ ನಿಂತಿದ್ದ ಭಿಕ್ಷುಕನೊಬ್ಬ
ನೋಡಿ ಬೆರಗಾದ.
"ಕೇವಲ?!!"
ಸ್ವಲ್ಪ ಯೋಚಿಸಿದ,
ತನ್ನಲ್ಲೇ ಅಂದುಕೊಂಡ.
"ಇರಬಹುದೆನೋ"
ನಮ್ಮನಾಳುತಿರುವ ನಮ್ಮ ಪ್ರಭುಗಳಿಗೆ,
ನಮ್ಮ ಸಲುವಾಗಿಯೇ ಹಗಲಿರುಳೂ
ಹೋರಾಟ ಮಾಡುತಿರುವ ಹೋರಾಟಗಾರರಿಗೆ,
ಮತ ಧರ್ಮಗಳನ್ನು ಕಾಪಾಡುತಿರುವ
ನಮ್ಮ ಪೀಠಾಧೀಶರುಗಳಿಗೆ…"
ಅಷ್ಟರಲ್ಲೇ
ಹಿಂದೊಂದು ನಾಯಿ ಬಂದು ಬೊಗಳಿದಂತಾಯ್ತು
ಬೆಚ್ಚಿ ಬಿದ್ದು ಮುಂದಕ್ಕೋಡಿದ.
– ಶ್ರೀಮಂತ್ ಎಂ
[…] (published on ‘Panju’ online weekly magazine, 02.03.2015 issue : https://www.panjumagazine.com/?p=10321) […]
hema kallambella avar kavan super agide