ತನ್ನ ಪ್ರಖರ ಬೆಳಕಿನ ಸೊಬಗಿನಿಂದ ಹೊಳೆಯುತ್ತ ೨೫ ನೇ ವಾರಕ್ಕೆ ಕಾಲಿಡುತ್ತಿರುವ " ಪಂಜು" ವಿಗೆ ನನ್ನ ಹೃದಯಪೂರ್ವಕ ಶುಭಾಶಯಗಳು.
ಸಾಹಿತ್ಯದ ಮತ್ತ ಓದುವ ಹಪಹಪಿಯಿರುವ ನಾನು ಒಂದು ದಿನಾ ಹಿಂಗ ಕನ್ನಡ ವೆಬ್ ತಾಣಗಳನ್ನ ಹುಡಕಲಿಕತ್ತಾಗ ನನ್ನ ಕಣ್ಣಿಗೆ ಬಿದ್ದಿದ್ದು ಈ " ಪಂಜು" ಇ-ಪತ್ರಿಕೆ. ಆವಾಗಾಗಲೆ ಪತ್ರಿಕೆ ಶುರುವಾಗಿ ಒಂದ ೧೫ ವಾರ ಆಗಿದ್ವು ಅನಿಸ್ತದ. ಕೂತುಹಲದಿಂದ ಒಂದೊಂದ ವಾರದ ಸಂಚಿಕೆಗಳನ್ನ ತಗದು ನೋಡಿದ್ರ, ಹಬ್ಬದ ಊಟದ ನೆನಪಾತು. ಹಬ್ಬದ ದಿನಾ ತಾಟು ತುಂಬ ಪಂಚಭಕ್ಷ ಪರಮಾನ್ನ ಬಡಿಸಿಟ್ಟಾಗ ಏನ ತಿನ್ನಬೇಕು, ಏನ ಬಿಡಬೇಕು ಅಂತ ಗೊತ್ತಾಗುದಿಲ್ಲಾ ಅಲ್ಲಾ ಹಂಗಾಗಿತ್ತು ನನ್ನ ಸ್ಥಿತಿ.
ದಿನ ನಿತ್ಯದ ಗೋಜಲುಗಳಿಂದ, ಪ್ರಸ್ತುತ ವಿದ್ಯಮಾನಗಳ ಊರಿಯಿಂದ ಬ್ಯಾಸರಾಗಿ ನೆಮ್ಮದಿ ಹುಡುಕುವ ಓದುಗರ ಮನಸ್ಸನ ಚೇತೋಹಾರಿಯನ್ನಾಗಿಸುವ ಕೆಲಸವನ್ನು "ಪಂಜು" ಮಾಡಲಿಕತ್ತದ. ಕಥೆ, ಹಾಸ್ಯ, ಚಿತ್ರ, ಪ್ರಭಂದ, ವ್ಯಕ್ತಿ ವಿಷಯ, ಸಿನೆಮಾ, ದೇಶಭಕ್ತಿ, ತ್ಯಾಗ ಹೋರಾಟ ಹಿಂಗ ಎಲ್ಲಾ ವಿಷಯಗಳನ್ನ ತನ್ನ ಒಡಲಿನ್ಯಾಗ ತುಂಬಿಕೊಂಡದ.
" ನನ್ನೊಳಗಿನ ಗುಜರಾತ" ದಂತಹ ಸರಣಿ ಬರಹ ನಮ್ಮನ್ನ ನಾವು ಕಾಣದ ಮತ್ತೊಂದು ರಾಜ್ಯಕ್ಕ ಕರೆದೊಯ್ದು ಅಲ್ಲಿಯ ವಿಶೇಷತೆಗಳ ಬಗ್ಗೆ ಪರಿಚಯ ಮಾಡಸ್ತದ.
ಪ್ರೀತಿ ಪ್ರೇಮ ಅಂಕಣ ಮತ್ತ ಕಥಾಲೋಕದೊಳಗಿನ ಛಂದ ಛಂದ ಕಥೆಗಳು " ಪಂಜು" ವಿನ ಸೊಬಗನ್ನ ಹೆಚ್ಚಿಸ್ಯಾವ.
ಕಾರ್ನಾಡರ " ಹಯವದನ" ಮತ್ತ " ಸಾವಿತ್ರಿಬಾಯಿ ಫೂಲೆ" ಮತ್ತ "ನಾಟಕಕಾರರಾಗಿ ಕುವೆಂಪು" ಅವರ ಬಗ್ಗೆ ಬರೆದ ಲೇಖನಗಳಂತು ನಾವು ಓದಲು ಕಲಿತದ್ದು ಸಾರ್ಥಕ ಆತು ಅನ್ನೊ ಅಷ್ಟು ಮನಸ್ಸಿಗೆ ತೃಪ್ತಿಯನ್ನ ಕೊಡತಾವ.
ಈ ವಾರ ಶುರುವಾಗುವ ಶ್ರೀ. ಹನುಮಂತ ಹಾಲಿಗೇರಿಯವರ ಪ್ರಶಸ್ತಿ ವಿಜೇತ ಕಾದಂಬರಿ " ಕೆಂಗುಲಾಬಿ" , ನಿಶೆಯ ಗರ್ಭದಲ್ಲಿ ಹುದುಗಿರುವ ಅಸಹಾಯಕ, ಕ್ಷಣಿಕ ಸುಖಕ್ಕೆ ಬಲಿಯಾಗಿ ಅಳಿದು ಹೋಗುವ ಅನಿವಾರ್ಯತೆಯ ವಾಸ್ತವಿಕ ಕಥನ. ಪ್ರಸ್ತುತ ಜಗತ್ತಿನಲ್ಲಿ ಅವಶ್ಯಕತೆನೊ, ಅನಿವಾರ್ಯತೆನೊ ಅಥವಾ ಕ್ಷಣಿಕ ಸುಖದ ಮೋಹಕ್ಕೊ ಬಲಿಯಾದ ಜೀವಗಳ ಕತ್ತಲೆ ಜಗತ್ತಿನ ಕಥನ. ಕಂಡರಿಯದ ವಿಷಯಗಳ ಸತ್ಯಾಸತ್ಯತೆಗಳಿಗೆ ಅಕ್ಷರದ ರೂಪ ಕೊಟ್ಟು ಓದುಗರ ಹೃದಯಾಳದೊಳಗೆ ಇಳಿಸೊ ಅಲ್ಲೆ " ಪಂಜು" ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸ್ಲಿಕತ್ತದ.
" ಪಂಜು" ವಿನ ವ್ಯಾಪ್ತಿ ಬೃಹತ್ತಾಗಿ ಬೆಳದು ಸಾಹಿತ್ಯದ ಕಂಪನ್ನ ಜಗತ್ತಿನಲ್ಲೆಲ್ಲ ಹರಡಲಿ. ಇನ್ನು ಹೆಚ್ಚು ಹೆಚ್ಚು ಸಮಾಜವನ್ನ ಚಿಂತನೆಗೆ ಹಚ್ಚೊವಂಥಾ ವಿಚಾರಗೊಳ ಬೆಳಕಿಗೆ ಬರಲಿ. ನಮ್ಮ ಸಮಾಜಕ್ಕಾಗಿ, ದೇಶಕ್ಕಾಗಿ ಪ್ರಜೆಗಳಿಗೆ ಇರುವಂತಹ ನೈತಿಕ ಜವಾಬ್ದಾರಿಗಳನ್ನ ಅರಿತುಕೊಳ್ಳೊದರತ್ತ ಮನಸ್ಸು ಒಲಿಸೊ ಅಂಥಾ ಲೇಖನಗಳು "ಪಂಜು" ವಿನ ಒಡಲಿಂದ ಹೊರಹೊಮ್ಮಲಿ. ಬರೆ ಅಂತರ್ ಜಾಲದೊಳಗಷ್ಟ ಅಲ್ಲಾ ಪ್ರತಿ ಮನಿ ಮನಿಗೂ "ಪಂಜು"ವಿನ್ ಸ್ನಿಗ್ಧ ಛಾಯೆ ಪಸರಿಸ್ಬೇಕು. ತನ್ನ ಬೆಳಕಿನ್ನ ಚೆಲ್ಲಿ ಪ್ರೋತ್ಸಾಹವಿಲ್ಲದನೊ ಅಥವಾ ಯಾವದೊ ಕೀಳರಿಮೆಯಿಂದನೊ ಎಲಿಮರಿ ಕಾಯಂಗ ಇರೊ ಹೊಸ ಪ್ರತಿಭೆಗಳನ್ನ ಹುಡುಕಿ ತೆಗೆದು ಯುವ ಬರಹಗಾರರಿಗೆ ಅವಕಾಶ ಕಲ್ಪಿಸಿಕೊಟ್ಟು ಕನ್ನಡ ಸಾಹಿತ್ಯ ಸಾಮ್ರಜ್ಯದ ಕೀರಿಟದ ಗರಿಗಳನ್ನ ಇನ್ನು ಹೆಚ್ಚಿಸಲಿ. ಚಿಗುರುತ್ತಿರುವ ಸಾಹಿತಿಗಳಿಗೆ, ಈ ಸಮಾಜಕ್ಕೆ ದಾರಿದೀಪವಾಗಿ ಬೆಳಗಲಿ.
"ಮೊದಲು ಓದುಗನಾಗು" ಅಂಕಣ ಅಂತು ಅಕ್ಷರಃಶಹ ಸತ್ಯ.ನಾವು ಸಣ್ಣವರಿದ್ದಾಗ ನಮ್ಮ ತಾಯಿ ನಮಗೆಲ್ಲಾ ಹೇಳ್ತಿದ್ರು , ಎನಂದ್ರ " ಯಾವಾಗಲು ಪುಸ್ತಕದ್ದ ಗೆಳೆತನಾ ಮಾಡಬೇಕು, ಅಂದ್ರ ಜಗಳಾ ಇರಂಗಿಲ್ಲಾ, ಮತ್ತ ಜ್ಞಾನ ಬೇಳಿತದ. ಮನಸ್ಸು ಶಾಂತ ಇರತದ ಅಂತ" ಖರೆ ಅದ, ಒಬ್ಬ ಬರಹಗಾರನಾಗಬೇಕಾದ್ರ ಮದ್ಲಾ ಒಳ್ಳೆಯ ಓದುಗನಾಗಬೇಕು. ಒಂದು ವಿಶೇಷ ಅಂದ್ರ " ಪಂಜುವಿನಲ್ಲೆ ಹೊಸ ಬರಹಗಾರರಿಗೆ ತಮ್ಮ ಪ್ರತಿಭೆಯನ್ನ ಸಾದರ ಪಡಿಸೊದಕ್ಕ ಮುಕ್ತ ಸ್ವಾಗತ ಅದ.
ಈ ವಿಷಯಕ್ಕಾಗಿ ಅಭಿನಂದನೆ ಸಲ್ಲಬೇಕಾಗಿದ್ದು ಪತ್ರಿಕೆಯ ಸಂಪಾದಕರಾದ ಶ್ರೀ ಡಾ. ನಟರಾಜು ಎಸ್ ಎಂ ಅವರಿಗೆ. ಉದಯೊನ್ಮುಖ ಲೇಖಕರುಗಳ ಪ್ರತಿಭೆಯನ್ನು ಹೊರತರಲು ಒಂದು ಸಾಹಿತ್ಯಕ ವೇದಿಕೆಯನ್ನ ಒದಗಿಸಿ ಕೊಟ್ಟಾರ. ಸಂಪಾದಕರು ಉದಾತ್ತ ಆದರ್ಶಗಳನ್ನ ಇಟ್ಟುಕೊಂಡ ಶುರುಮಾಡಿದ ಈ ಒಂದು ಸಾಹಿತ್ಯ ಸೇವೆಯ ಅಭಿಯಾನಕ್ಕ ನನ್ನ ಅಭಿನಂದನೆಗಳು, ಮತ್ತ ಶುಭಹಾರೈಕೆಗಳು. ಈ ಒಂದು ಅಭಿಯಾನವು ಯಶಸ್ವಿಯಾಗಲು ಪತ್ರಿಕೆಯ ಸಂಪಾದಕೀಯ ವರ್ಗದವರೊಂದಿಗೆ ಕೈಗೂಡಿಸಿ ನಮ್ಮದೊಂದು ಅಳಿಲುಸೇವೆಯನ್ನ ಸಾಹಿತ್ಯ ಸರಸ್ವತಿಯ ಅಡಿಗಳಿಗೆ ಸಲ್ಲಿಸುವಾಸೆ.
" ಪಂಜು" ವಿನ ಸಮಸ್ತ ಓದುಗರಿಗೂ,ಅಭಿಮಾನಿಗಳಿಗೂ ಮತ್ತ ಪತ್ರಿಕೆಯ ಸಂಪಾದಕೀಯ ವರ್ಗದವರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು.
ಸುಮನ್ ದೇಸಾಯಿ ಯವರು ಪಂಜು ವೆಬ್ ಪತ್ರಿಕೆಯ ಬಗ್ಗೆ ಬರೆದ ಲೇಖನ ತುಂಬಾ ಸೊಗಸಾಗಿ ಬಂದಿದೆ .
ಪತ್ರಿಕೆ ಗೆ ಅಭಿನಂದನೆಗಳು
ಇನ್ನು ದೀರ್ಘವಾಗಿ ಬೆಳೆಯಲಿ
ಸೃಜನ್
nim anta lekhakaru irodrinda ne gangeyannu gindi yalli tumbida hage jnyana sigta ide, tamagu , panju balagakku dhanyavada galu
ಶುಭವಾಗಲಿ.
ಶುಭವಾಗಲಿ.
ಚೆನ್ನಾಗೈತ್ರಿ ಅಕ್ಕೋರೆ..
ಲೇಖನಗಳ ಬಗ್ಗೆ ಹೇಳ್ತಾ ನೀವು ಬರೆದ ಹೆಣ್ಣು ನೋಡ ಶಾಸ್ತ್ರದ ಲೇಖನ ಮರೆತಂಗೈತ 🙂
ಪಂಜುವನ್ನು ಮೆಚ್ಚಿ ಹಾರೈಸಿರುವ ನಿಮ್ಮ ಲೇಖನ ತುಂಬಾ
ಚೆನ್ನಾಗಿದೆ .