ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿಕಾರಾಣಿ, ಯಲ್ಲಾಪುರ ಅವರ ಪ್ರೇಮ ಪತ್ರ

ಪ್ರಿಯ ಸಖಾ,

ನಿನ್ನದೊಂದು ಸಾದಾ ಸೀದಾ ಮುಗುಳುನಗೆ ʻಪ್ರಿಯ ಸಖಾʼ ಎನ್ನುವ ಆಪ್ತತೆ ಒದಗಿಸಿತೆನಗೆ! ನಾನರಿವೆ, ನಿನಗಿದಚ್ಚರಿಯೇ. ಆ ಕಣ್ಣ ಹೊಳಪಲ್ಲಿ ಜಗವ ನೋಡುವ ಬೆರಗ ಕಂಡೆ. ಇನ್ನೇನು ಬೇಕೆನಗೆ ನಿನ್ನ ಮೋಹಕ್ಕೆ ಜಾರಲು? ಮೊನ್ನೆ ಮೊನ್ನೆವರೆಗೂ ತೀರಾ ಸಾಮಾನ್ಯ ಹುಡುಗಿ ನಾನು. ವಿಪರೀತ ಮಾತಿನ ಚಟದವಳು, ಮಕ್ಕಳಂತೆ ಚಲ್ಲಾಟವಾಡುತ್ತಾ, ಮನೆಯಲ್ಲಿ ಕಿವಿ ಹಿಂಡಿಸಿಕೊಂಡು, ಸ್ನೇಹ ಬಳಗದಲ್ಲಿ ಚೇಷ್ಟೆ ಮಾಡುತ್ತಾ ಹಾರಾಡಿಕೊಂಡಿದ್ದವಳು. ಅಚಾನಕ್ಕಾಗಿ ನಿನ್ನ ಮಾಯೆಗೆ ಮೌನಿಯಾಗಿಬಿಟ್ಟೆ! ಅರ್ಥವಾಗದ ಖುಷಿಯೂ ಜೊತೆಯಾಗಿದೆ.

ಹರೆಯದ ಹುಡುಗಿಯೊಬ್ಬಳು ಪ್ರೇಮ ಪತ್ರ ಬರೆಯುವುದು ವಿರಳವೆ. ಹೌದು, ಇದು ಪ್ರೇಮ ಪತ್ರ ಎಂದು ನಾ ಮತ್ತೆ ಬಿಡಿಸಿ ಹೇಳಬೇಕೆಂದೇನಿಲ್ಲ ತಾನೆ? ಇನ್ನೇನು ಮಾಡಲು ಸಾಧ್ಯ, ನೀನಂತೂ ಶುದ್ಧ ಮುಗ್ಧ. ಪ್ರೀತಿಯಲ್ಲಿ ಸಿಲುಕಿದರೂ ಹೇಳಿಕೊಳ್ಳುವ ಧೈರ್ಯಶಾಲಿಯೇನಲ್ಲ. ಹಾಗಾಗಿ ಈ ಜವಾಬ್ದಾರಿ ನನ್ನದೇ. ಮೊದಲಿನಿಂದಲೂ ಈ ಎಲ್ಲ ಹುಡುಗಾಟದ ಜೊತೆ, ಮಕ್ಕಳು-ಮೊಮ್ಮಕ್ಕಳೊಂದಿಗೆ ಹಂಚಿಕೊಳ್ಳಲು ನನಗೊಂದು ಪ್ರೇಮಕಥೆ ಇರಬೇಕೆಂಬ ಫ್ಯಾಂಟಸಿ ಇತ್ತು. ನನ್ನ ಮಟ್ಟಿಗೆ ಅದು ಆಸೆಯಾಗಿಯೇ ಉಳಿದುಬಿಡಬಹುದೆಂಬ ಭಯವೂ ಇತ್ತು. ನೀ ಎಲ್ಲವನ್ನೂ ಖರೆಯಾಗಿಸಿದೆ. ನಾನೇ ಪ್ರೀತಿಯನ್ನು ನಿವೇದಿಸಿಕೊಂಡು ಇತಿಹಾಸವನ್ನೂ ಬರೆಯ ಹೊರಟಿರುವೆ. ಆದರೂ ನನ್ನಂಥ ಜೋರಿನ ಹುಡುಗಿಗೂ ಕೈ ನಡುಗುತಿದೆ, ಪದಗಳ ಬರ ಉಂಟಾಗಿದೆಯೆಂದರೆ ಯೋಚಿಸು, ಎಲ್ಲರೂ ಹೇಳುವಂತೆ ಹೊಟ್ಟೆಯೊಳಗೆ ಚಿಟ್ಟೆ ಬಿಟ್ಟಹಾಗಿದೆ. ನೋಡು ಪ್ರೀತಿಯ ಶಕ್ತಿ ಎಷ್ಟೆಂದು.

ನಿನ್ನೊಡನೆ ಭವಿಷ್ಯದ ಕನಸ ಕಂಡಿರುವೆ. ಹೇಗಿದ್ದರೂ ಜೀವನ ನಡೆಸುವ ಬಗ್ಗೆ ನನಗೆ ನಂಬಿಕೆಯಿದೆ, ಈಗ ತೆಪ್ಪಗೆ ಶಿಕ್ಷಣ ಮುಂದುವರೆಸೋಣ. ನನಗಂತೂ ಮರಸುತ್ತುವ, ಊರಲೆಯುವ ಪ್ರೀತಿಯಲ್ಲಿ ನಂಬಿಕೆಯಿಲ್ಲ. ನಿನಗದರಲ್ಲಿ ಆಸಕ್ತಿಯೂ ಇರುವುದಿಲ್ಲ. ನಾವಿಬ್ಬರೂ ನೆಲೆನಿಂತಮೇಲೆ ಮುಂದಿನ ನಿರ್ಧಾರ ಮಾಡೋಣ. ಆದರೆ, ಪ್ರೀತಿಗೆ ನಿನ್ನ ಪರವಾನಗಿಯಂತೂ ಬೇಕೇ ಬೇಕು!ನಿನ್ನಪ್ಪ-ಅಮ್ಮನನ್ನು ನನ್ನವರಂತೆಯೇ ಕಾಣುವೆ. ನಿನ್ನೆಲ್ಲ ಕನಸುಗಳಿಗೆ ಬೆನ್ನಾಗುವೆ. ನಿನ್ನ ಪ್ರತಿ ಹೆಜ್ಜೆಗೂ ಜೊತೆಯಾಗುವೆ. ನಿನ್ನ ಶಾಂತ-ಮೃದು ಸ್ವಭಾವಕ್ಕೆ ಗಟ್ಟಿ-ಆಧಾರವಾಗುವೆ. ನೀನು ಹೆಣೃದಯಿ. ನಾನು ಸ್ವಲ್ಪ ಗಂಡುಬೀರಿ ಎಂಬ ಹೆಸರಿನವಳು. ಒಂಥರಾ ಚಂದ ಜೋಡಿ, ವಿಭಿನ್ನವಾದದ್ದು.

ಆದರೂ ನನಗೊಂದು ಆಸೆ. ನಿನ್ನ ಬಾಯಲ್ಲಿ ನನ್ನ ಗುಣಗಾನವನ್ನ ಕೇಳಬೇಕು ನಾನು. ನಾಚಿ ಕೆಂಪಾಗಿ ನೀರಾಗಬೇಕು. ನಿನ್ನ ಸಾಹಿತ್ಯ ಸಮಾರಾಧನೆಯಲ್ಲಿ ಸುಳಿಯುವ ಪ್ರತಿ ಶಬ್ಧದಲ್ಲಿಯೂ ನೀ ಒಪ್ಪಿಕೊಂಡ ನನ್ನ ಪ್ರತಿಬಿಂಬವನ್ನೇ ಕಾಣಬೇಕು. ನಿನ್ನೆಲ್ಲ ಕಲ್ಪನೆಗಳಿಗೂ ನಾ ಸ್ಪೂರ್ತಿಯಾಗಬೇಕು. ನಿನ್ನ ಚಿತ್ತ ಭಿತ್ತಿಯಿಂದ ಹೊರಡುವ ಶಬ್ಧಗಳಿಗೆ ನಾನು ಅಮರತ್ವ ಕಲ್ಪಿಸುವ ಹಾಳೆಯಾಗಬೇಕು. ನಿನ್ನೊಲವ ತಂಬೆಲರ ಸವಿಯುತ್ತಾ ಜೀವಿಸಬೇಕು. ಗೊತ್ತೇ ನಿನಗೆ? ನಾ ಬರೆವ ಚಿತ್ರಗಳಿಗೆ ನಿನ್ನದೇ ಹೋಲಿಕೆಗಳು. ಮರದಲ್ಲಿಯೂ ನಿನ್ನದೇ ಭಾವ, ಮಗುವಲ್ಲಿಯೂ ನಿನ್ನದೇ ಮೋಹ, ನನ್ನ ಕುಂಚವನ್ನು ನಿನಗೇ ಮಾರಿಕೊಂಡಿದ್ದೇನೋ ಎಂಬಂತೆ! ಮನಸ್ಸನ್ನಂತೂ ಕೊಟ್ಟುಬಿಟ್ಟಿದ್ದೇನಲ್ಲ. ನೀಲಿ ಆಕಾಶವನ್ನು ಕಂಡಾಗಲೆಲ್ಲ ಮೋಡವಾಗಿ ನಿನ್ನೆಡೆಗೆ ಬರುವ ಹಂಬಲ ನನ್ನಲ್ಲಿ. ತಾರೆಗಳ ಮಾಲೆಯನ್ನು ಮಾಡಿ, ಕೊರಳಲ್ಲಿಟ್ಟು ನೋಡುವ ಕೌತುಕ ಮನದಾಳದಲ್ಲಿ. ಇವೆಲ್ಲ ಕೇವಲ ಕಲ್ಪನೆಗೆ ಸರಿ ಎಂಬ ಭಾವವೇ? ಪ್ರೀತಿ ನನ್ನನ್ನೂ ಕವಿಯಾಗಿಸಿತು ನೋಡು. ಕೊನೆಪಕ್ಷ ಅಪ್ಪ ಒಪ್ಪವಾಗಿ ತರುವ ಹೂವಿನ ಮಾಲೆ ಸಾಕಲ್ಲವೇ ನಿನ್ನ ವರಿಸಲು? ನಿನ್ನ ಮೋಹಕ ರೂಪಕ್ಕೆ ಯಾವ ಅಲಂಕಾರದ ಅಗತ್ಯವೂ ಇಲ್ಲ ಎಂಬ ಅರಿವು ನನಗಿದೆ. ನಾನು ಸಿಟ್ಟಿನ ಹುಡುಗಿ, ಬಹು ಬೇಗ ಸಿಡಿಯುತ್ತೇನೆ, ನಿನ್ನ ತಾಳ್ಮೆಯೇ ಇದಕೌಷಧಿಯಾಗಲಿ. ಸದಾ ಕೋಪಿಷ್ಟೆ ನಾನಲ್ಲ. ಆದರೂ ನನ್ನ ನಡವಳಿಕೆಯ ಭಾಗವದು. ತಾಳಿಕೊಳ್ಳುವೆಯಲ್ಲ ನನ್ನ?

ನನಗೆ ಗೊತ್ತು ನಿನ್ನ ಹಳ್ಳಿ ಜೀವನ ಮತ್ತದರ ಕುರಿತಾದ ಮೋಹ. ಕಳೆದ ಬಾರಿ ಭೇಟಿಯಾದಂದಿನಿಂದ ಗುಟ್ಟಾಗಿ ನಿನ್ನ ಹಿಂಬಾಲಿಸಿರುವೆ ನಾನು. ನಿನ್ನ ಬಗ್ಗೆ ಎಲ್ಲ ಮಾಹಿತಿಯನ್ನೂ ಕಲೆಹಾಕಿರುವೆ. ಅಷ್ಟು ಆವರಿಸಿರುವೆ ನೀ ನನ್ನ. ವಾಸ್ತವದಲ್ಲಿ ಅಂದಿನ ಸಭೆಯಲ್ಲಿ ನಿನ್ನ ಮಾತಿನ ವೈಖರಿ, ಜೀವನದೃಷ್ಟಿ ನನ್ನನ್ನ ಬಹಳವಾಗಿ ಕಾಡಿದೆ. ವ್ಯವಸಾಯದ ಕುರಿತು ನಿನಗಿರುವ ವ್ಯಾಮೋಹ ಆದರ್ಷದ್ದು. ಒಬ್ಬ ಪದವಿಧರನಾಗಿ, ವ್ಯವಸಾಯವನ್ನೇ ಮುಂದುವರೆಸುವ ನಿನ್ನ ಯೋಚನೆ ನಿಜಕ್ಕೂ ಶ್ಲಾಘನೀಯ. ನಾವಿಬ್ಬರೂ ಜೋಡೆತ್ತಿನಂತೆ ಬಾಳು ಹಸನಾಗಿಸೋಣ. ನಾ ಬೆಳೆದ ಮಾಯಾನಗರಿಯ ವ್ಯಾಮೋಹ ನನಗಿನ್ನು ಬಾಧಿಸುವುದಿಲ್ಲ ಪ್ರಿಯಾ. ನಿನಗಾಗಿ ನಿನ್ನ ಪರಿಧಿಯೊಳಗೆ ಕಾಲಿಡುವಾಸೆ. ನಾ ನೋಡಿದಂತೆ ಆ ಪುಟ್ಟ ಊರುಸ್ವರ್ಗದ ಹೆಬ್ಬಾಗಿಲು, ಎತ್ತರವಾದ ಹಸಿರು ಮರಗಳನ್ನು ತಬ್ಬಿ ನಿಂತ ವಿವಿಧ ಜಾತಿಗಳ ಬಳ್ಳಿಗಳು, ಪ್ರಾಣಿ-ಪಕ್ಷಿಗಳಿಗೆ ಕಾಡು ಹಣ್ಣುಗಳನ್ನು ನೀಡುವ ಜೀವ ಚೈತನ್ಯ. ಅದೆಷ್ಟು ಆಸೆ ನಿನಗೆ ನಿನ್ನ ಹಳ್ಳಿಯೆಂದರೆ, ಆಧುನಿಕತೆಯ ಸ್ಪರ್ಶವಿಲ್ಲದ ಆ ಪ್ರಪಂಚವನ್ನು ನೋಡಿದಾಗ ಒಮ್ಮೊಮ್ಮೆ ಯೋಚಿಸುತ್ತೇನೆ. ಹಾಯಾಗಿರಬಲ್ಲೆನೇ ನಾನಲ್ಲಿ? ಪ್ರಕೃತಿ ತಾಯಿ ಪೊರೆಯುವಳಲ್ಲ ನಮ್ಮ ಪ್ರೀತಿಯ! ಅದಕ್ಕಿಂತ ಹೆಚ್ಚಾಗಿ ನಿನ್ನ ಪ್ರೀತಿಗೆ ಕಷ್ಟಗಳನ್ನೆಲ್ಲ ಮರೆಸುವ ಶಕ್ತಿ ಇದೆಯೆಂಬ ನಂಬಿಕೆ, ನಂಬಿಕೆಯೇ ಜೀವನವಲ್ಲವೇ?

ನನ್ನ ಒರಟುತನದ ಪರಿಚಯ ಮಾತ್ರ ನಿನಗಿದೆ. ನಾನೂ ಭಾವಜೀವಿ ನಿನ್ನಂತೆಯೇ. ಅಭಿವ್ಯಕ್ತಿಯ ಬಗೆ ಬದಲು ಅಷ್ಟೇ. ಎರಡು ತದ್ವಿರುದ್ಧ ದ್ರುವಗಳ ನಡುವೆ ಅತಿ ವಿಶೇಷವಾದ ಆಕರ್ಷಣೆಯಿದ್ದಂತೆ ನಮ್ಮಿಬ್ಬರ ಬಗೆ ಎಂದು ವ್ಯಾಖ್ಯಾನಿಸಬಲ್ಲೆನಷ್ಟೆ. ಗೆಳೆತನ ಸಮಾನ ಮನಸ್ಸು-ವಯಸ್ಸು-ಆಸಕ್ತಿಯನ್ನ ಅವಲಂಬಿಸಬಹುದು. ಆದರೆ, ದಾಂಪತ್ಯ ಇವೆಲ್ಲವುಗಳನ್ನ ಮೀರಿದ್ದು ಎಂಬುದನ್ನ ಗಮನಿಸಿರುವೆ.”Marriages are made in Heaven”ಎಂಬ ಮಾತಿನಂತೆ ನಮ್ಮದೂ ಇರಬಹುದೇನೋ! ಇಲ್ಲದಿದ್ದರೆ, ಪಟ್ಟಣದ ಪರಿಸರದಲ್ಲಿ, ಹಣವಂತರ ಮನೆಯಲ್ಲಿ ಬೆಳೆದ ನನ್ನಂತ ಜೋರಿನ ಹುಡುಗಿಗೆ ಕೃಷಿಕ, ಸಾತ್ವಿಕ ಮುದ್ದು ಪೆದ್ದ ನೀನಿಷ್ಟವಾಗಿದ್ದಾದರೂ ಹೇಗೆ?

ಮೇಲಿನ ಸಲ್ಲಾಪವೆಲ್ಲ ನಿನಗೆ ಬಾಲೀಶವೆನಿಸಿದರೆ ಮನ್ನಿಸಿಬಿಡು ಗೆಳೆಯ. ಋಣಾತ್ಮಕವಾಗಿ ಮಾತ್ರ ಯೋಚಿಸಬೇಡ. ಇಷ್ಟೆಲ್ಲಾ ತೆರೆದ ಮನಸ್ಸಿನ ಪ್ರೇಮ ಪತ್ರಕ್ಕೆ ಒಂದೇ ಒಂದು ಧೈರ್ಯವೆಂದರೆ, ಅಂದು ಕೆಲವೇ ಸೆಕೆಂಡುಗಳಿಗೆ ನಮ್ಮಿಬ್ಬರ ಕಣ್ಣೋಟ ಬೆರೆತಾಗ, ನಿನ್ನವು ನನಗೆ ಕಳುಹಿಸಿದ ಪ್ರೀತಿಯ ತಂತುಗಳು. ನಿನ್ನ ಕಣ್ಣಿನ ಆಸೆ- ಹೃದಯದ ಭಾಷೆಯ ಅರಿವಾದಂತಿದೆ ಎನಗೆ. ನನ್ನ ಕಣ್ಣುಗಳಂತೂ ನಿನ್ನವುಗಳ ಸಾಂಗತ್ಯಕ್ಕಾಗಿ ಹಾತೊರೆಯುತ್ತಿವೆ.ಈ ವಯಸ್ಸಿನ ಇಂಥ ಭಾವನೆಗಳು ನಿನ್ನಂತ ಸಾಹಿತಿಗಳಿಗಂತೂ ಅಮೂಲ್ಯವಾದದ್ದು. ಹೊರಹಾಕದೇ ಇರಬೇಡ. ಕಾಯುತ್ತಿರುವೆ…

ಇಂತಿ ನಿನ್ನ
ಆರಾಧಕಿ…


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Vani Bhat
Vani Bhat
2 years ago

ಸುಮಧುರ ಪ್ರೇಮ ಸಂದೇಶ.‌ ಅಚ್ಚುಕಟ್ಟಾಗಿ ಹದಿಹರೆಯದ ಭಾವನೆ ಪದಗಳಲ್ಲಿ ವ್ಯಕ್ತವಾಗಿದೆ. ಅಭಿನಂದನೆಗಳು ಹಾಗೂ ಶುಭಾಶಯಗಳು 👏👏

Indira Udupa
Indira Udupa
2 years ago

ಸುಮಧುರ ಭಾವನೆಗಳ ಅಭಿವ್ಯಕ್ತಿ ಸುಂದರ
ಕಾವ್ಯಮಯ ಶೈಲಿಯಂತೂ ಅತಿ ಮಧುರ
ಹೆಣ್ಣೆoಬ ನಾಟಕೀಯತೆ ಇರದ ಸಹಜ ಸೊಬಗು
ಈ ಒಲವೆಂಬ ದೈವೀಕತೆಯದೆಂಥಹ ಬೆರಗು

Venugopala shetty
Venugopala shetty
2 years ago

ಹೌದು ಓದುವಾಗ ಯಾರಾದರೂ ಗಮನಿಸುವರೇ ನನ್ನ ಎನ್ನುವ ಸಣ್ಣ ಭಯ…..!ಆದರೂ ಓದಿದೆ……! ಏದುಸಿರ ಪಿಸುಮಾತಿಗೆ ವಿರಹದ ಅರಿವಾಗಿದೆ ಈ ಒಂಟಿ ಜೀವಕೆ…….. ಅದ್ಭುತವಾಗಿದೆ….

ಮಾಂತೇಶ ಅಕ್ಕುರ
ಮಾಂತೇಶ ಅಕ್ಕುರ
2 years ago

ನೀವೇನಾ ಆ ಭಾಗ್ಯವಂತರು

ಹೆಚ್ ಎನ್ ಮಂಜುರಾಜ್
ಹೆಚ್ ಎನ್ ಮಂಜುರಾಜ್
2 years ago

ಮೊದಲ ಬಹುಮಾನಕೆ ಅರ್ಹವಾದ ಮುಗ್ಧ ಆದರೆ ಪ್ರಬುದ್ಧ ಪ್ರೇಮ ಪತ್ರ……

ಓದಿ ತುಂಬ ಖುಷಿಯಾಯಿತು….ಪಂಜುವಿಗೆ ಧನ್ಯವಾದಗಳು

5
0
Would love your thoughts, please comment.x
()
x