ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಶರಣಬಸವ ಕೆ.ಗುಡದಿನ್ನ ಅವರ ಪ್ರೇಮ ಪತ್ರ

ನೀ ಇಲ್ಲದ ಈ ಘಳಿಗೆ. .

ಈ ಸಮಯದಲ್ಲಿ ನಿನಗೆ ಪ್ರೇಮಪತ್ರ ಬರೆಯಬಹುದಾ? ಗೊತ್ತಿಲ್ಲ! ಈ ಪ್ರೇಮ ಪತ್ರ ನಿನಗೆ ತಲುಪಿಸುವ ಬಗೆಯೂ ನನಗೆ ಸ್ಪಷ್ಠವಿಲ್ಲ. ಅದೆಷ್ಟು ದಿನವಾಯಿತೊ ನಿನ್ನ ಮೊಬೈಲ್ ನಂಬರನ್ನು ದ್ಯಾಸ ಮಾಡಿಕೊಂಡು ಮೊಬೈಲಿನ ಮುಖದ ಮೇಲೆ ಡಯಲ್ ಮಾಡಿ. ಒಂದೇ ಒಂದು ಮೆಸೇಜು ಕೂಡ ಇತ್ತೀಚಿಗೆ ನಮ್ಮ ಮದ್ಯೆ ಹರಿದಾಡಿಲ್ಲ. ನನ್ನ ಅಂದಾಜು, ಮಾಡಿಕೊಂಡ ಬಾಯಿಲೆಕ್ಕ ಸರಿಯಿದ್ದರೆ ನಿನಗೀಗ ಭರ್ತಿ ಒಂಭತ್ತು ತಿಂಗಳು! ಘಳಿಗೆಗೊಂದು ಸಲ ನೀವಿಕೊಳ್ಳುತ್ತಿದ್ದ ಸೀರೆಯ ಬಣ್ಣದ ನೆರಿಗೆಗಳೇ ಉಳಿಯದಷ್ಟು ತುಂಬು ಬಸುರಿ ನೀನೀಗ. ಗೋದಿಬಣ್ಣದ ಮುಖದ, ಮೊಂಡು ಮೂಗಿನ ಮೇಲೆ ಇಷ್ಟಿಷ್ಟೆ ಭಂಗಿನ ಸಣ್ಣ ಗೆರೆಗಳ ರಂಗೋಲಿ. ಹಣದ ಆಸೆಗೆ ಬಿದ್ದು ಹಗಲು-ರಾತ್ರಿ ಒಂದೇ ಸವನೆ ದುಡಿಯುವ, ನಿಂತಕಡೆ ನಿಲ್ಲದೇ ಕಾಲಿಗೆ ಚಕ್ರಕಟ್ಟಿವನಂತೆ ಅಲೆಯುವ ಗಂಡನನ್ನು ಕಟ್ಟಿಕೊಂಡು ನಿನ್ನನ್ನು ನೀ ಹೇಗೆ ಆರೈಕೆ ಮಾಡಿಕೊಳ್ಳುತ್ತಿದ್ದೀಯ? ನೆನಪಾದರೆ ಆತಂಕವಾಗುತ್ತದೆ.

ಪ್ರೇಮದ ಆರಂಭದ ದಿನಗಳಲ್ಲಿ ಅದೆಷ್ಟು ಕಾಡಿಬಿಟ್ಟಿದ್ದೆ. ನಿನ್ನ ಮುಖದ ಮೇಲಿನ ಮುಗ್ದತೆ ಹುಚ್ಚೆ ಹಿಡಿಸಿಬಿಟ್ಟಿತ್ತು. ಬೆಟ್ಟಿಯಾದರೆ ಸಾಕು ಇಬ್ಬರೂ ಮಸಾಲೆ ದೋಸೆಗೆ ಮುಗಿ ಬೀಳುತ್ತಿದ್ದೆವು
“ಹಂಗ್ಯಾಕ ಬಡದಾಡ್ತಿಲೇ ಬಸಿರಿದ್ದೇನು?” ಅಂತ ನಾನು ಕಾಡಿಸಿದರೆ
” ಬಸಿರಾದಾಗ ತಿನಸವಂತಿಗಿ ತಗಾ ಕರಿಯಾ” ಅಂತ ಕೋಪ ಮಾಡಿಕೊಳ್ಳುತ್ತಿದ್ದೆ.
ಅತಿಥಿ ಹೋಟಲ್ಲಿನ ಸಪ್ಲೈಯರ್ರು ನಾವು ಬಂದರೆ ಸಾಕು ಮೂಲೆಯ ಟೇಬಲ್ಲು ಶುಚಿಗೊಳಿಸಿ ಜೋರಾಗಿ
“ಒಂದ್ ಮಸಾಲ್ ದೋಸೆsss”
ಅಂತ ಖುಷಿ ತುಂಬಿದ ದ್ವನಿಯಲ್ಲಿ ಕಿರುಚುತ್ತಿದ್ದ.

ಆಗೆಲ್ಲ ಆತನಿಗೆ ತನ್ನ ಪ್ರೇಮದ ದಿನಗಳು ನೆನಪಾಗುತ್ತಿದ್ದವೇನೊ ಯಾರಿಗ್ಗೊತ್ತು? ಮೊನ್ನೆ ಯಾರೊ ಅಂದರು. ಸಿಟಿಯಿಂದ ಅಷ್ಟು ದೂರ ಇದೆಯಂತೆ ನಿಮ್ಮ ಅಪಾರ್ಟ್ಮೆಂಟ್! ನಿನಗೆ ದೋಸೆ ತಿನ್ನಲು ಆಯಿತಾ? ಆವಾಗಿನಿಂದ ದಿನಾಲು ದೇವರನ್ನು ಕೇಳುತ್ತೇನೆ “ಅದೊಂದು ಅವಳ ಆಸೆ ಈಡೇರಿಸಿಬಿಡು ಮಾರಾಯ” ಅಂತ. ಆಸೆ ಹಾಗೆಯೇ ಉಳಿದರೆ ಹುಟ್ಟುವ ಮಗುವಿನ ಕಿವಿ ಸೋರುವುದಂತೆ. ಈಗೀಗ ಏನೂ ಉಳಿದಿಲ್ಲ. ಹಗಲು-ರಾತ್ರಿ ತಮ್ಮ ಪಾಡಿಗೆ ತಾವು ಬದಲಾಗುತ್ತವಷ್ಟೆ. ಕರೋನಾ ಬಂದು ಹೋದ ಮೇಲೆ ತುಂಬಾ ಬದುಕುಗಳು ಬೀದಿಗೆ ಬಿದ್ದವಲ್ಲ ಹಾಗೆ ನೀನು ಬಂದು ಹೋದ ಮೇಲೆ ಅಕ್ಷರಷಃ ನನ್ನ ಬದುಕು ಬೀದಿಗೆ ಬಿತ್ತು. ಇಷ್ಟು ದಿನ ಇಲ್ಲದ್ದು ಇವತ್ಯಾಕೊ ನಿನ್ನ ನೆನಪು ದೊಪ್ಪನೆ ಮುರುಕೊಂಡು ಬಿತ್ತು! ಬಹುಷಃ ನಿನಗೆ ಹೆರಿಗೆಯ ನೋವು ಆರಂಭವಾಗಿರಬೇಕು.

ಮಲಗಿದ ಹಾಸಿಗೆಯ ಮೂಲೆಯ ಚುಂಗು ಹಿಡಿದು ನೀನು ನೋವು ನುಂಗುವ ಕ್ಷಣ ನನ್ನ ನೆನಪು ನಿನ್ನೆದೆಯ ತಾಕಿರಬೇಕು! “ಸಟ್ಟನೆ” ಎದ್ದು ಕುಳಿತೆ. ತುಂಬಾ ನೆನಪಾಯಿತು ಈ ಪತ್ರ ಬರೆಯತೊಡಗಿದೆ. ಕಂಡಾಪಟ್ಟಿ ನೆನಪುಗಳು! ಬಿಡಿಸಿಕೊಂಡು ಕುಳಿತರೆ ಕಾಲ ಸರಿದದ್ದೆ ತಿಳಿಯುವದಿಲ್ಲ. ಅದಕ್ಕೆಂದೆ ನಿನ್ನ ಮದುವೆಯಾಗಿ ನೀನು ಅಷ್ಟು ದೂರದ ಪಟ್ಟಣ ಸೇರಿ ಇಷ್ಟು ದಿನವಾದರೂ ಸಾಯದೆ ಉಸಿರಿಡಿದು ದಿನ ದೂಡಲು ಸಾದ್ಯವಾಯಿತೇನೊ!? ಮೊದಲ ಹೆರಿಗೆಗೆ ತವರಿಗೆ ಬರುತ್ತೀಯ ಅಂದುಕೊಂಡಿದ್ದೆ!ನೀನು ತವರಿಗೆ ಬಂದಿದ್ದರೆ ನಿನ್ನ ಮನೆಯ ಮುಂದೆ ತೆಗ್ಗು ಬೀಳುವಂತೆ ಅಲೆಯುತ್ತಿದ್ದೆ ನೋಡು! ನಿಮ್ಮ ಮನೆಯ ಬಲಕ್ಕಿರುವ ಪುಟ್ಟ ಕಟ್ಟೆಯ ಮೇಲೆ ಕಲ್ಲಾಗಿ ಕುಂತಿರುವ ಆ ದೇವರು ಪ್ರತ್ಯಕ್ಷವಾಗಿ ಕೊಕ್ಕಾಸಿ ನಕ್ಕುಬಿಡಬೇಕು ಆ ಪರಿ ಅಡ್ಡ ಬಿದ್ದು ನಮಿಸುತ್ತಿದ್ದೆ. ಆದರೆ ನೀನು ಬರಲಿಲ್ಲ!

ನಿಮ್ಮ ಅಪ್ಪ ಕಟ್ಟಿಸಿದ ಒಂದಸ್ತಿನ ಸಿಮೆಂಟಿನ ಮನೆಯ ಮುಂದೆ ಹಾಯುವಾಗೆಲ್ಲ ನೋಡುತ್ತೇನೆ ಮನೆಯ ಗೋಡೆಗೆ ಸಿಗಾಕಿದ ಫೈಬರ್ ವೈಯರಿಗೆ ನಿನ್ನ ಗುಲಾಬಿ ಬಣ್ಣದ ನೈಟಿ ನೇತಾಡುತ್ತಿರುವದಿಲ್ಲ. ನೀನು ತುಂಬಾ ಇಷ್ಟ ಪಟ್ಟು ಹಾಕಿಕೊಳ್ಳುವ ಉಂಗುಟವೇ ಇಲ್ಲದ ಮೇಲೊಂದಿಷ್ಟು ಕುಸುರಿ ಮಾಡಿದ ಮೊಲದ ಬಣ್ಣದ ಚರ್ಮದ ಚಪ್ಪಲಿಗಳು ಮೆಟ್ಟಿಲುಗಳ ಮುಂದೆ ಮೈಚಾಚಿ ಮಲಗಿರುವದಿಲ್ಲ!ಆಗೆಲ್ಲ ಏನನ್ನೊ ಕಳೆದುಕೊಂಡವನಂತೆ ವಾಪಸ್ಸು ಬರುತ್ತೇನೆ. ಗಡಿಯಾರ ಚೌಕದ ನೆರಳಲ್ಲಿ ನಿಂತು ನಿನ್ನ ನೆನೆಯುತ್ತೇನೆ. ಈ ಬದುಕು ಮತ್ತೆ ನಮ್ಮಿಬ್ಬರನ್ನು ಹೊಳ್ಳಿ ಸೇರಿಸಲಾರದೇನೊ?

ಅದರೆ ನಮ್ಮ ಪುರಾತನ ಕಾಲದ ನೆನಪುಗಳನ್ನ ಕಸಿದುಕೊಳ್ಳಲು ಆ ದೇವರಿಗೂ ಸಾದ್ಯವಿಲ್ಲವೆನಿಸಿ ಸಮಾಧಾನವಾದಂತಾಗಿ ನಿಟ್ಟುಸಿರು ಬಿಡುತ್ತೇನೆ.
ಅವ್ವ “ಆಕಿಗಿ ಮದಿವ್ಯಾತಿ, ನಾಕ ದಿನ್ದಾಗ ಮಕ್ಳಾತವ, ನೀ ಹಂಗ ಅಡ್ಡಗುಣಿಗಿ ಹೊಂಟ್ಯಲಲೊ” ಅಂತ ಕಣ್ಣೀರು ತೆಗೆದು ಹರಿದ ಕಾಟನ್ ಸೀರೆಯಲಿ ಕಣ್ ಒರೆಸಿಕೊಳ್ಳುತ್ತಾಳೆ. ನನಗೆ ಏನೂ ತೋಚುವದಿಲ್ಲ ಮನಸು ಮತ್ತೊಬ್ಬಾಕೆಯ ಕಡೆ ಹೊಳ್ಳುವುದಿಲ್ಲ. ಏಟು ಪ್ರೇಮ ಕಾವ್ಯ ಓದಿದರೂ ಮತ್ತೊಂದು ಪ್ರೇಮ ಹುಟ್ಟುವದಿಲ್ಲ. ಓದಿದ ಸಾಲುಗಳೆಲ್ಲ ಹೆಣ ಹೂಳುವ ಮುಂಚೆ ಪಾದ್ರಿ ಓದುವ ಕೊನೆಯ ಬೋಧೆಯ ಸಾಲುಗಳಂತೆ ಬಾಸವಾಗುತ್ತವೆ. ಈಚೆಗೆ ಕೆಲಸಕ್ಕೂ ಹೋಗುತ್ತಿಲ್ಲ ಅವ್ವನ ವೃದ್ಯಾಪ್ಯದ ಅನ್ನ ದಿನಕ್ಕೊಂದು ಸಲ ಸಾಯಿಸುತ್ತದೆ. ಗಂಗಾಳದೊಳಗಿನ ಅನ್ನ ಗಂಟಲು ಸೇರುವಾಗ ಕೆಲವೊಮ್ಮೆ ಕಣ್ಣೀರು. ಅವ್ವನಿಗೆ ಕಣ್ಣು ಮಂಜು, ಮಂಜು ಆದರೆ ಕರಳು? ಆಕೆಯೂ ಜೊತೆಯಾಗುತ್ತಾಳೆ ನಮಗೆ ಇರುವವರಾದರೂ ಯಾರು?

ಅಪ್ಪ ಹೋದ ಮೇಲೆ ಇದೆ ಖಾಯಂ. ನೀ ಜೊತೆಯಾದಾಗ ಬದುಕು ಒಡ್ಡಿನ ಮೇಲೆ ಚಿಗಿತ ಹಸಿರು ಮೇವಿನಂತೆ ಚಂದವಾಗಿತ್ತು. ಬದುಕಿನ ವ್ಯಾಕರಣ ಅದೆಲ್ಲವನ್ನು ಕೊಯ್ದು ಬದುಕನು ಖಾಲಿ, ಖಾಲಿ ಮಾಡಿಬಿಟ್ಟಿತು. ಕೆಲವೊಮ್ಮೆ ನಮ್ಮ ನಡುವೆ ಅಂತಹದೊಂದು ಪ್ರೇಮವೇ ಸಂಭವಿಸಬಾರದಿತ್ತು ಅಂತ ಯೋಚಿಸಲು ತೊಡಗುತ್ತೇನೆ ಮರುಕ್ಷಣ ನನ್ನ ಮೇಲೆ ನನಗೆ ಕೋಪ ಉಕ್ಕುತ್ತದೆ. ಇರುವ ಅದೀಟು ಸುಖದ ದಿನಗಳನ್ನು ಬದುಕಿನ ಖಾತೆಯಿಂದ ತೆಗೆಯುತ್ತೀಯಾ ಅಂತ ಒಳಮನಸ್ಸು ಪ್ರಶ್ನಿಸಿ ಮತ್ತೆ ಮಾತು ಕಳೆದುಕೊಳ್ಳುತ್ತೇನೆ. ಹಣೇಬರಹ ಆಗಿತ್ತು ಅನಿಸಿ ಸುಮ್ಮನೆ ಕೂಡುತ್ತೇನೆ, ಮನಸು ಕೆಟ್ಟರೆ ಸುಮ್ಮನೆ ಗಡಿಯಾರ ಚೌಕ, ಮದರ್ ಟ್ಯಾಂಕು ಅಂತ ಅಲೆದರೆ ಮನಸು ಸ್ವಲಪ ತಹಬಂದಿಗೆ ಬರುತ್ತದೆ.

ಇದು ಹೀಗೆಯೇ!
ನಾಳೆ ನಿನಗೊಂದು ಮಗುವಾಗಿ ಅದು ಅಡ್ಡಾಡ್ತಾ ಓಣಿಯಲ್ಲಿ ಸಿಕ್ಕು ಕಪಾಳಕ್ಕೊಂದು ಮುತ್ತು ಕೊಟ್ಟರೆ ಮುಗೀತು ಉಳಿದ ಬದುಕು ತಣ್ಣಗೆ ಕಳೆದುಹೋಗುತ್ತದೆ. . ನೀ ಚೆಂದಿರು. ಹೆರಿಗೆ ಸಾಂಗವಾಗುತ್ತದೆ ಮುಗುಳು ನಗುವ ಮಗುವಿನೊಂದಿಗೆ ಊರಿಗೆ ಬಾ ಬಲಕ್ಕಿರುವ ದೇವರ ಕಟ್ಟೆಯಲ್ಲಿ ಹೂ ಕಾಯಿಯೊಂದಿಗೆ ಕಾಯುತ್ತಿರುತ್ತೇನೆ.
ಕರಿಯಾ. . .


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ವರದೇಂದ್ರ ಕೆ ಮಸ್ಕಿ
ವರದೇಂದ್ರ ಕೆ ಮಸ್ಕಿ
3 years ago

ಅಬ್ಬಾ, ಎಂತಹ ಪುಳಕ ಹುಟ್ಟಿಸುವ ಸಾಲುಗಳು. ಭಗ್ನ ಪ್ರೇಮಿಯ ಖಾಸಗೀ ಮಾತುಗಳು ಕಳೆದುಕೊಂಂಡ ಪ್ರೀತಿಗೆ ಮುಟ್ಟಿದರೆ, ಮನಸು ಖಂಡಿತ ಕರಿಯಾ ನಿನ್ನ ಬಿಟ್ನೆಲ್ಲೋ ಅಂದುಕೊಳ್ಳದೇ ಉಳಿಯದು.
ಪ್ರೇಮ ಪತ್ರದ ತುಂಬ ಭಾವನೆಗಳ ರಂಗೋಲಿ ಬಣ್ಣಗಳಿಂದ ರಾಆಜಿಸುತ್ತಿದೆ. ಹೌದು ಅದು ಹಾಗೆ, ಮೊದಲ ಪ್ರೇಮ ಹುಟ್ಟಿಸಿದ ಆ ಮಾಧುರ್ಯತೆ ಎಷ್ಟು ಸುಖವೋ, ಕಳೆದುಕೊಂಡರೆ ದುಪ್ಪಟ್ಟಾಗಿ ಬಾಧಿಸದೆ ಇರದು. ನಂತರ ಬರುವ ಪ್ರೇಮಗಳು ಎಷ್ಟಿದ್ದರೂ ತೇಪೆ ಹಚ್ಚಿದಂತೆಯೇ ಸರಿ. ಅನೇಕ ಹೋಲಿಕೆಗಳೊಂದಿಗೆ ಹೊರ ಬಂದ ಈ ಪತ್ರ ಪ್ರತೀ ಪ್ರತಿಯೊಬ್ಬರಿಗೂ ಪ್ರೀತಿ ಆಗುತ್ತದೆ. ಅಭಿನಂದನೆಗಳು…. ಸರ್ ಮತ್ತೊಮ್ಮೆ….

ಸಂಗಪ್ಪ
ಸಂಗಪ್ಪ
3 years ago

ಈ ಪ್ರೇಮ ಪತ್ರ ಓದಿ ಒಬ್ಬ ಒಬ್ಬನೇ ನಗಾಕುಂತಿದ್ಯ ಅವ್ವ ನೋಡಿ ಎನಾತ್ಲಾ ನಿನಗ… ಹುಚ್ಚ ಗಿಚ್ಚ ಹಿಡಿತೋ ಎನ್‌ ನಿನಗ ಅಂತ ಬೈತಿದ್ಲು. ಆದರೆ ನಾ ಈ ಪ್ರೇಮ ಪತ್ರದ ಗುಂಗಿನ್ಯಾಗ ಇದ್ಯ. ನನಗ ಅನಿಸುತ್ತ ಶರಣಬಸವ ಗುಡದಿನ್ನಿ ಅವರ ಸ್ವಾನುಭವ ಇದು ಅಂತ. ಏನೇ ಇರಲಿ ಪ್ರೇಮ ಪತ್ರ ಓದಿ ತುಂಬಾ ಖುಷಿಯಾತು.
ಧನ್ಯವಾದಗಳು

2
0
Would love your thoughts, please comment.x
()
x