ಪಂಜು ಪ್ರೇಮ ಪತ್ರ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ಸುಕೃತಿ ಕೆ ಪೂಜಾರಿ ಅವರ ಪ್ರೇಮ ಪತ್ರ

ನನ್ನ ಪ್ರೀತಿಯ ಇನಿಯ.

ಹೇಗಿದ್ದೀಯಾ? ಹೊರ ನೋಟಕ್ಕೆ ಚೆನ್ನಾಗಿದ್ದೀನಿ ಅಂತಿಯಾ. ಅಂತರಂಗದ ಅಳಲು ನನಗೆ ಗೊತ್ತಿದೆ ಕಣೋ. ಯಾಕಂದ್ರೆ ನನ್ನ ಜೀವದ ಉಸಿರಿನ ಬಗ್ಗೆ ನನಗೆ ಗೊತ್ತಿಲ್ಲದೇ ಇರುವುದೇ? ಹೌದು. ನಾ ಈ ಪತ್ರ ಯಾಕೆ ಬರೆಯುತ್ತಿದ್ದೇನೆಂದು ನಾನರಿಯೇ. ಇದು ಅಮೂಲ್ಯ ಪ್ರೇಮದ ನಿವೇದನೆಯೋ? ಅಂತರಂಗದ ವಿರಹದ ವೇದನೆಯೋ? ಮನದ ಮೂಲೆಯಲ್ಲಿ ಹೇಳಲಾಗದೇ ಉಳಿದಿಹ ಅವೆಷ್ಟೋ ಭಾವನೆಗಳಿಗೆ ಇಲ್ಲಿ ಅಕ್ಷರ ರೂಪ ನೀಡುತ್ತಿದ್ದೇನೆ. ಒಮ್ಮೆ ಓದಿ ಬಿಡು ಬಂಗಾರ.

ಅಂದು ನಾನ್ಯಾರೋ. ನೀನ್ಯಾರೋ! ಬಂಧು- ಬಾಂಧವರ ಸಮ್ಮುಖದಿ ನನ್ನ ನಿನ್ನ ಮೊದಲ ಭೇಟಿ ಆಗಿತ್ತು. ನಾಚುತ್ತಾ ಬಂದು ನಡುಗುವ ಕೈಯಲ್ಲಿ ಶರಬತ್ತು ಕೊಟ್ಟರೂ ನಾ ನಿನ್ನ ಮೊಗವನ್ನೇ ನೋಡಿರಲಿಲ್ಲ. ಬಾಳ ಬಂಧನದಿ ಏಳು ಹೆಜ್ಜೆ ಇಡಲು ನೀನಾಗಲೇ ನನ್ನನ್ನು ಆಯ್ಕೆಯೂ ಮಾಡಿದ್ದೆ. ನಿನ್ನ ಕುಟುಂಬಿಕರು ನಿನ್ನ ಹುಟ್ಟು ಹಬ್ಬಕ್ಕೆ ನಿನಗಿತ್ತ ಉಡುಗೊರೆ ನಾನಾಗಿದ್ದೆ. ನೀ ಅದೆಷ್ಟು ಖುಷಿ ಪಟ್ಟಿದ್ದೆ ಅಲ್ವಾ ಬಂಗಾರ. ಜೀವನವಿಡೀ ನೋವಿನ ಬೇಗುದಿಯಲಿ ಬೆಂದಿದ್ದ ನನಗೆ ನೋವ ಮರೆಸುವ ಮಂದಾರವಾಗಿ ನೀ ಬಂದೆ. ನಾ ಬಯಸದ ಅನಿರೀಕ್ಷಿತ ಪ್ರೀತಿ. ಸುಂದರ ಕುಟುಂಬ ನನಗೆ ದಕ್ಕಿತ್ತು. ಅರಿಯದ ಜೀವಗಳೆರಡು ಈಗ ಒಲವ ಪಲ್ಲಕ್ಕಿಯಲ್ಲಿ ಪಯಣ. ನಮ್ಮಿಬ್ಬರ ಪ್ರೀತಿಗೆ ಬರುತ್ತಾ ಬರುತ್ತಾ ಜಗತ್ತೇ ಸೋತು ಹೋಗಿತ್ತು. ಇನ್ನೇನು ಮದುವೆಯ ಬಗ್ಗೆ ತಯಾರಿ. ನೀ ಅದೆಷ್ಟು ಕನಸು ಕಟ್ಟಿದ್ದೆ. ಕೊನೆಗೂ ನನ್ನ ಹುಟ್ಟು ಹಬ್ಬದ ದಿನವೇ ಬ್ರಹ್ಮ ನಮ್ಮಿಬ್ಬರ ವಿವಾಹಕ್ಕೂ ಮುಹೂರ್ತ ಬರೆದ. ನನ್ನ ಹುಟ್ಟು ಹಬ್ಬಕ್ಕೆ ನಿನ್ನನ್ನೇ ಉಡುಗೊರೆಯಾಗಿ ನೀಡಲು ಎಲ್ಲರೂ ಸಂತಸದಿಂದಲೇ ಕಷ್ಟದ ಮೇಲೆ ಕಷ್ಟ ಅನುಭವಿಸುತ್ತಾ ತಯಾರಿ ನಡೆಸುತ್ತಿದ್ದರು. ಆದರೆ ಕೊರೊನ ಎಲ್ಲದಕ್ಕೂ ಪೂರ್ಣ ವಿರಾಮ ಇಟ್ಟಿತು. ಆದರೂ ನಾವು ಸರಳವಾಗಿ ಮದುವೆಯಾಗುವ ಹುಮ್ಮಸ್ಸಿನಲ್ಲಿದ್ದೆವು. ಆದರೆ ಯೋಚನೆ-ಯೋಜನೆಗಳೆಲ್ಲವೂ ಕೊರೊನ ಕಾಟದಿಂದ ತಲೆ ಕೆಳಗಾಗಿ ಹೋದವು ಅಲ್ವಾ?

ಭಗವಂತ ನಮ್ಮಿಬ್ಬರ ಬದುಕಿನಲ್ಲಿ ತುಂಬಾ ಆಟ ಆಡಿ ಬಿಟ್ಟನಲ್ಲ. ಅತ್ತ ಅಳಲೂ ಆಗದೆ ಇತ್ತ ನಗಲೂ ಆಗದೆ ಬದುಕು ಸಾಗಿಸುತ್ತಿದ್ದೇನೆ. ಯಾಕೆ ಗೊತ್ತಾ ಬಂಗಾರ. ನಾ ಅತ್ತರೆ ನೀನು ಅತ್ತು ಬಿಡುತ್ತೀಯಲ್ಲಾ. ಮದುವೆ ದಿನ ಹತ್ತಿರ ಬರುತ್ತಿದ್ದಂತೆ ನಿನ್ನ ಕಾಲಿಗೆ ಅದೇನಾಯಿತೋ. ಯಾಕೆ ಬಲಹೀನವಾದವು ನಾನರಿಯೇ. ಯಾವ ಔಷಧಿಯಿಂದಲೂ ಯಾಕೆ ಗುಣಪಡಿಸಲಾಗುತ್ತಿಲ್ಲ ನಾ ಕಾಣೆ. ವಿಜ್ಞಾನ ಲೋಕದಿ ವೈದ್ಯರಿಗೂ ನಿನ್ನ ಆರೋಗ್ಯ ಸಮಸ್ಯೆ ಏನೆಂಬುದೇ ತಿಳಿಯಲಿಲ್ಲ. ಆದರೆ ಒಂದಂತು ನಿಜ. ಆದಷ್ಟು ಬೇಗ ನೀ ನಿನ್ನ ಕಾಲ ಮೇಲೇ ನಿಂತು ನನ್ನ ನೋಡಲು ಬಂದೇ ಬರುತ್ತೀಯಾ ಅನ್ನೋ ಭರವಸೆ ನನಗಿದೆ. ಈ ನನ್ನ ಭರವಸೆ ಎಂದಿಗೂ ಸುಳ್ಳಾಗದು ಕಣೋ. . ನಿಜ. . ಬೇಸರವಾಗುತ್ತಿದೆ ಈ ಸಮಯದಿ ನಿನ್ನ ಸೇವೆ ಮಾಡಲು ನನ್ನಿಂದ ಆಗುತ್ತಿಲ್ಲವಲ್ಲವೆಂದು. ಆದರೂ ನಗುನಗುತ್ತಲೇ ನಿನ್ನೊಂದಿಗೆ ಮಾತನಾಡಿ ಸಮಯ ಕಳೆಯುತ್ತಿದ್ದೇನೆ.

ಬಂಗಾರ. ನಮ್ಮ ಪ್ರೀತಿ ಬಲು ಅಪರಂಜಿ ಕಣೋ. ದೇವರು ಅದೇನೇ ಮಾಡಿದರೂ ನಾ ನಿನ್ನ ಜೊತೆಗಿರ್ತಿನಿ. ಬ್ರಹ್ಮ ಬರೆದ ಅಪರೂಪದ ಅನುಬಂಧವಿದು. ಮನಸ್ಸು ಮನಸ್ಸುಗಳು ಆತ್ಮಸಾಕ್ಷಿಯಾಗಿ ಒಪ್ಪಿಗೆಯನ್ನಿತ್ತಾಗಿದೆ. ನೋವೋ ನಲಿವೋ. ನಿನ್ನೊಂದಿಗೆ ನಾ ಸದಾ ಬೆಂಗಾವಲಾಗಿರ್ತಿನಿ. ಏಳೇಳು ಜನ್ಮ ಕಳೆದರೂ ನಾ ಸಪ್ತಪದಿ ತುಳಿಯೋದು ನಿನ್ನ ಜೊತೆಯಲ್ಲೇ ಬಂಗಾರ. ಯಾಕೆಂದರೆ ನನ್ನ ಮೊಗದ ನಗು ನೀ..! ನಡೆವ ಹಾದಿಗೆ ಸ್ಪೂರ್ತಿಯ ಚಿಲುಮೆ ನೀ..! ದಾರಿ ತಪ್ಪಿದಾಗ ತಿದ್ದುವ ಗುರು ನೀ..! ಜಗತ್ತೇ ಮರೆಯುವಂತೆ ಪ್ರೀತಿಸೋ ಒಲವ ಗಣಿ ನೀ..! ನೋವುಂಡ ಮನಕ್ಕೆ ಸದಾ ಅಮ್ಮನೊಲವ ಅಮೃತದ ಸೆಲೆ ನೀ..! ಎಲ್ಲಕ್ಕಿಂತ ಮಿಗಿಲಾಗಿ ನನ್ನ ಹಣೆಯಲಿ ಸದಾ ಮಿನುಗೋ ಸಿಂಧೂರವೂ ನೀನಾಗಿರ್ತಿಯಾ.! ನನ್ನ ಕಾಯುವ ಮಾಂಗಲ್ಯವೂ ನೀನೇ ಕಣೋ!!

ನಿನ್ನ ಇಡೀ ಸಂಬಂಧಿಕರು ಸದಾ ನಿನ್ನ ಈಗಿನ ಪರಿಸ್ಥಿತಿಯನ್ನು ನೋಡಿ ಅಳುತ್ತಿದ್ದಾರೆ ಅಲ್ವಾ. ಆದರೆ ನಿನ್ನೆದುರು ಒಂದು ಹನಿ ಕಣ್ಣೀರು ಹಾಕದ ನಾ ಎಂತಹ ಕಲ್ಲು ಮನಸ್ಸಿನವಳು ಅಂತ ನಿನಗೆ ಅನಿಸಿರಬಹುದು ಅಲ್ವಾ. ಹೌದು ಬಂಗಾರ. ಇಡೀ ಜಗತ್ತೇ ಅತ್ತರೂ ನಾನು ಮಾತ್ರ ಯಾರ ಮುಂದೆಯೂ ಕಣ್ಣೀರು ಹಾಕಲಾರೆ. ನನ್ನ ನೋವು ಏನೇ ಇದ್ದರೂ ಮನಸ್ಸೊಳಗೇ ಇರುತ್ತೆ. ನಾನೂ ಅತ್ರೆ ನಿನ್ನ ಸಂತೈಸುವವರಾರು? ಧೈರ್ಯ ಹೇಳುವವರಾರು? ನಾನೆಷ್ಟೇ ಸಮಾಧಾನಿಸಿದರೂ ಆ ಕ್ಷಣ ನೀನು ಸಮಾಧಾನಗೊಂಡಂತೆ ಸುಮ್ಮನೇ ಇರ್ತೀಯಾ. ಆದರೆ ನಿನ್ನ ಮನದಲ್ಲಿ ಸಾವಿರಾರು ಚಿಂತನೆಗಳು, ನೋವು, ಹತಾಶೆ, ಅಸಹಾಯಕತೆ ಎಲ್ಲವೂ ತಾಂಡವವಾಡುತ್ತಿದೆ ಅಲ್ವಾ? ಬದುಕಿನ ಭರವಸೆಯನ್ನೇ ಕಳೆದುಕೊಂಡಂತೆ ಯೋಚಿಸುತ್ತಾ ಇಲ್ಲಿಗೆ ಜೀವನವೇ ಮುಗಿದು ಹೋಯಿತು ಎಂಬಂತೆ ಮಾತಾಡ್ತಿದ್ದೀಯಾ. ಯಾಕೋ ಈ ತರಹದ ಯೋಚನೆಗಳನ್ನು ಮಾಡ್ತೀಯಾ. ? ಇದೊಂದು ಸಣ್ಣ ಆರೋಗ್ಯ ಸಮಸ್ಯೆ ಅಷ್ಟೇ ಬಂಗಾರ. ನೀನು ಧನಾತ್ಮಕವಾಗಿ ಯೋಚಿಸು. ಏನೂ ಆಗಿಯೇ ಇಲ್ಲವೆಂಬಂತೆ ಬದುಕು. ಲವಲವಿಕೆಯಿಂದ ಎಲ್ಲರೊಂದಿಗೆ ಬೆರೆಯುವುದ ಕಲಿ. ಹಾಗಾದರೆ ಮಾತ್ರ ನಾಳೆ ಹುಷಾರಾಗುವ ನೀನು ಇಂದೇ ನಡೆಯಬಲ್ಲೆ. ಏನೇ ಆದರೂ ಬದುಕಿನಲ್ಲಿ ಭರವಸೆ ಇರಬೇಕು. ನಾನು ನನ್ನ ಪ್ರೀತಿ ನಿನ್ನ ಜೊತೆ ಸದಾ ಇರೋವಾಗ ಬೇರೆಲ್ಲಾ ಚಿಂತೆ ಯಾಕೋ?

ಬಂಗಾರ. ನಿನಗೆ ಏನೂ ಆಗಿಲ್ಲ. ದಿನ ಕಳೆದಂತೆ ನಮ್ಮ ಸಂಬಂಧ ಗಟ್ಟಿ ಆಗ್ತಿದೆ. ಒಲವು ಇಮ್ಮಡಿ ಆಗ್ತಿದೆ ಕಂದ. ದೇವರು ನಮಗೆ ಸಣ್ಣ ಪರೀಕ್ಷೆ ಕೊಟ್ಟಿದ್ದಾನೆ ಅಷ್ಟೇ. ಜೊತೆಯಲ್ಲೇ ಎದುರಿಸೋಣ. ಎಂತಹ ಕಷ್ಟ ಬಂದರೂ ಎದೆಯಾಳದ ಒಲವಿನ ಒರತೆ ಮಾತ್ರ ಎಂದೆಂದಿಗೂ ಬತ್ತಿ ಹೋಗದು. ನನ್ನ ನಿನ್ನ ಪ್ರೇಮ ಕಾವ್ಯಕೆ ಹೆತ್ತವರು ಶೀರ್ಷಿಕೆ ಕೊಟ್ಟಿರಬಹುದು. ಆದರೆ ಮುಗಿಯದ ಪಯಣದಿ ಅನವರತ ಒಲವ ಕಾವ್ಯ ಬರೆಯುತ್ತಿರುವವರು ನಾವಲ್ಲವೇ. ದಿನ ಕ್ಷಣ ನಿನ್ನ ಒಲವ ದೇವತೆ ನಿನ್ನ ಜೊತೆ ಇರ್ತಾಳೆ. ನಮ್ಮ ಪ್ರೀತಿ ಎಲ್ಲೂ ಸೋಲಲ್ಲ. ಯಾಕೆಂದರೆ ನೀನೆಂದೂ ನನ್ನ ಬದುಕು-ಬರಹ ಬೆಳಗಿದ ಒಲವ ಹಣತೆ. ಸದಾ ಜೊತೆಯಲ್ಲೇ ನಗು ನಗುತ್ತಾ ಹೆಜ್ಜೆ ಹಾಕುತ್ತಿರುತ್ತೀನಿ. ಮನ ಮೆಚ್ಚಿದ ಮನಸ್ಸು-ಕನಸು ಎಲ್ಲವೂ ನೀನೇ ಕಣೋ. ನಾ ಕಾತರದಿಂದ ಕಾಯುವ ಕ್ಷಣವೊಂದೆ. . ನಿನ್ನೊಂದಿಗೆ ಸಪ್ತಪದಿ ತುಳಿದು ನವ ಬಾಳ ಭಾಷ್ಯಕ್ಕೆ ಮುನ್ನುಡಿ ಬರೆಯುವ ಶುಭ ಘಳಿಗೆಗಾಗಿ. ಭಗವಂತನ ಅನುಗ್ರಹ, ಹಿರಿಯರ ಆಶೀರ್ವಾದ ಎಂದೆಂದಿಗೂ ನಮ್ಮ ಪ್ರೀತಿಯನ್ನು ಕಾಪಾಡುತ್ತದೆ. ಸದಾ ನಿಶ್ಚಿಂತೆಯಿಂದ ನಗು ನಗುತ್ತಾ ಇರು ನನ್ನ ಮುದ್ದು ಬಂಗಾರ. .

Love you soooo much ಕಣೋ ಬಂಗಾರ.

ಇಂತೀ
ನಿನ್ನ ಒಲವಿಗಾಗಿ ಹಂಬಲಿಸಿ ಕಾಯುತಿಹ ನಿನ್ನ ಮುದ್ದು ಜೀವ.


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
ಉತ್ತಮ್
3 years ago

ತೀವ್ರವಾದ ಭಾವನಾತ್ಮಕವಾದ ಪತ್ರ 🙂🙂

Varadendra K
Varadendra K
3 years ago

ಹೌದು, ಈ ಕೊರೋನಾ ಎಲ್ಲಿಲ್ಲದ ಅಡೆತಡೆಯನ್ನು ಪ್ರೇಮಿಗಳ ನಡುವೆ ತಂದೊಡ್ಡಿದೆ. ಅದಿಲ್ಲದಿದ್ದರೆ ಖಂಡಿತ ಮಡದಿಯಾಗಿ ಅವನೆದೆಗೆ ಕಾಲಿಟ್ಟ ಘಳಿಗೆಯ ಶುಭಮುಹೂರ್ತಕ್ಕೆ ಆ ರೋಗವೂ ಹೋಮಕುಂಡದಲ್ಲಿ ಬೂದಿಯಾಗಿಬಿಡುತ್ತಿತ್ತು.
ಎಷ್ಟೋ ಮದುವೆಗಳು ಇಂತಹ ಮದುವೆ ಪೂರ್ವ ಬರುವ ಅನಾರೋಗ್ಯದ ಕಾರಣಕ್ಕೆ ಮಾತ್ರ ಮುರಿದು ಬೀಳುತ್ತವೆ. ಪ್ರೀತಿಯೆಂಬುದೆಲ್ಲಾ ಸುಳ್ಳು, ಭಾವನೆಗಳೆಲ್ಲಾ ಪೊಳ್ಳು ಎಂಬಂತೆ ಸಾಬೀತು ಮಾಡಿಬಿಡುತ್ತವೆ. ಆದರೆ ಹಾಗಾಗದೆ ಇಲ್ಲಿ ಮಡದಿಯಾಗುವವಳು ಇಷ್ಟರಲ್ಲಾಗಲೇ ಮದುವೆಯಾಗಿದ್ದರೆ ನನ್ನ ಕಂದಮ್ಮನಂತೆ ಜೋಪಾನ ಮಾಡುತ್ತಿದ್ದೆ ಕಣೋ, ನಿನ್ನ ಸೇವೆ ಮಾಡುತ್ತಿದ್ದೆ ಬಂಗಾರ ಎಂಬ ಆದರ್ಶವನ್ನು ಪ್ರೇಮಪೂರ್ಣವಾಗಿ ನಲ್ಲನಾಗುವವನಿಗೆ ಅರುಹಿದ್ದು ಭಾವಪೂರ್ಣವಾಗಿದೆ.
ಒಮ್ಮೆ ಮನಸುಕೊಟ್ಟರೆಮುಗೀತು ಎಂತಹ ಪರಿಸ್ಥಿತಿಯಲ್ಲೂ ನಿಶ್ಚಯ ಮಾಡಿಕೊಂಡವನನ್ನು ಬಿಡುವುದಿಲ್ಲ ಎಂಬುದೇ ಮನಸಿಗೆ ಪ್ರೀತಿ ಉಕ್ಕಿಸುವಂತಿದೆ.
ಸಹೋದರಿ ಇಂತಹ ಭಕ್ತಿಯುತ ಪ್ರೇಮಪತ್ರವನ್ನು ನೀಡಿದ ನಿಮಗೆ ಧನ್ಯವಾದಗಳು ಮತ್ತು ವಿಜೇತರಾಗಿದ್ದಕ್ಕೆ ಅಭಿನಂದನೆಗಳು…..

2
0
Would love your thoughts, please comment.x
()
x