ಚುಟುಕ

ಪಂಜು ಚುಟುಕ ಸ್ಪರ್ಧೆ: ಹುಸೇನ್ ಎನ್. ಅವರ ಚುಟುಕಗಳು


೧.ಒಳಗೊಳಗೇ ಅತ್ತು
ಸತ್ತು ಹೋದ ನನ್ನ
ಕನಸುಗಳ
ಗೋರಿಗೆ
ನಿನ್ನ ಹೆಸರಿಟ್ಟಿದ್ದೇನೆ..!
—-
೨.ನಿನ್ನೆದುರು ದನಿಯಾಗಲು
ಸೋತ ಮಾತುಗಳು
ಕಮ್ಮನೆ ಕುಳಿತಿವೆ..
ಮಡುಗಟ್ಟಿದ
ಕಣ್ಣೀರಿಗೆ
ಜೊತೆಯಾಗಿ..!
—-
೩.ನನಗಸೂಯೆ..!
ಅವಳನ್ನು ಸೋಕಿ ಹೋಗುವ
ತಂಗಾಳಿ ಮೇಲೆ
ಅವಳ ಮೈ ಮೇಲೆರಗುವ
ಬಿಸಿಲ ಮೇಲೆ
ನನಗೊಂದಿಷ್ಟು ಜಾಗ ನೀಡದ
ಅವಳ ಮನಸಿನ ಮೇಲೆ ..!

 

—-
೪.
ನಿನ್ನ ಮಾತಿಗಿಂತ
ಮೌನವೇ ಎನಗಿಷ್ಟ..
ಮೌನದೊಳು ನೀನಾಡದ
ಅದೆಷ್ಟು ಮಾತುಗಳು…!!

 

—–

೫.

ಶಶಿಯಾಗಮನದಿ
ಜಿಲ್ಲೆಂದು ಪುಳಕಗೊಂಡಿದೆ ಇಳೆ,
ಮನದ ಜಾಲಿಕೆಯಲ್ಲಿ
ನಿನ್ನ ನೆನಪಿನ ತೀಕ್ಷ್ಣ ತರಂಗದಲೆ ,
ಮೇಘ ಕೊಸರಿದೆ;
ಆಗಿರಬೇಕೆಲ್ಲೋ ತುಸು ಮಳೆ..! 

—-
೬.
ನನ್ನ ನಿನ್ನ ನಂಟು
ಬಿಲ್ಲು-ಬಾಣದಂತಂದೆ ನೀನು;
ಗಮ್ಯ ಸೇರಲು ಬಾಣ
ಬಿಲ್ಲನ್ನು ತೊರೆಯಲೇಬೇಕು..
—–
೭.
ನೀ ನನ್ನ ಹೃದಯವ
ಕೊಂದವಳಲ್ಲ…!
ಸತ್ತ ಹೃದಯದೊಂದಿಗೆ
ಬದುಕಲು ಕಲಿಸಿದವಳು..!
—-
೮.
ಧುತ್ತೆಂದು ಒಸರಿ ಬರುವ
ಕಣ್ಣೀರನ್ನೂ ಹರಿ ಬಿಡುವ
ಮನಸ್ಸಿಲ್ಲ, ಅದು ನೀನನಗೆ ಕೊಟ್ಟ
ಕೊನೆಯ ಉಡುಗೊರೆ…!
—-

 

೯.
ಇಲ್ಲಿರುವುದು ಬರೀ
ಛಾಯೆ;
ನನ್ನೊಳಗೆ ಪದವಾಗದೆ
ಉಳಿದದ್ದು ಕವಿತೆ..
—-
೧೦.
ಎಲ್ಲೆಲ್ಲೋ ಹುಡುಕಿದೆ ನಿನ್ನ,
ನನ್ನೆದೆ ಮಿಡಿತದ
ತಾಳವನ್ನರಿಯದೆ…!

 

೧೧.
ನಿನ್ನ ನೆನಪುಗಳ
ಪೋಣಿಸಿ ಬರೆದ
ಕವಿತೆಯ ನೀ ಮೆಚ್ಚಿ ಮುತ್ತಿಟ್ಟೆ
ನೋಡು, ಅದಕ್ಕೀಗ ವಯ್ಯಾರ…!
—-
೧೨.
ನಾನಿನ್ನ ನೆರಳೆಂದೆ ನೀನು
‘ನಾನು ಸತ್ಯ’
‘ನೆರಳು ಮಿಥ್ಯ’
ಅವೆರಡು ಜೊತೆಯಾಗಲಾರದೆಂಬುದು
ನಿತ್ಯ ಸತ್ಯ..!

 

—–
೧೩.
ಇನ್ನೂ
ಎಸಲೊಡೆದು
ಹೂವು
ಅರಳಬಹುದು..
ಉದುರಿ ಹೋದ
ಹೂವಿನ ಛಾಯೆ
ಮಾತ್ರ ಹೊತ್ತು!
—–
೧೪.
ನಿನ್ನ ನೆನಪನ್ನು
ಓಲೆ ಮೇಲೆ ಚೆಲ್ಲ ಹೊರಟಾಗಲೇ
ಅಕ್ಷರಗಳು ಪದವಾಗದೆ ಪ್ರತಿಭಟಿಸಿದ್ದು!

 

—-
೧೫.
ನೆರಳಾಗಿ ನೀನು ನನ್ನೊಡನೆ
ಇರಬೇಕೆಂದು ಬಯಸಿದ್ದೆ ..!
ಆ ನೆರಳನ್ನೇ ಪ್ರೀತಿಸಿದ್ದೆ…!
ರಾತ್ರಿಯ ಕರಾಳತೆಯಲ್ಲಿ ಕಳೆದು
ಹೋಗುವುದೆಂದು ಅರಿತಿದ್ದರೂ..!

 

—-
೧೬.
ಬೆಳದಿಂಗಳ ರಾತ್ರಿಯಲಿ
ಹೊಳೆವ ನಕ್ಷತ್ರಗಳ
ಸೌಂದರ್ಯಕೆ ಮನಸೋತು,
ತಂಪನ್ನು ಹೊತ್ತು ಬೀಸಿ ಬಂದ ಗಾಳಿಯಲೂ
ಪ್ರಣಯದ ಉನ್ಮಾದತೆಯಿತ್ತು..!!

 

—-
೧೭.
ಅವಳಲ್ಲಿ ಹೇಳಲು ಉಳಿದು ಹೋದ
ಮಾತುಗಳನ್ನು ಮೌನವು ಎರವಲು
ಪಡೆದಾಗ,
ನನ್ನಲ್ಲಿ ಉಳಿದದ್ದು
ಕಣ್ಣು ಕೂಡ ಕೈ ಬಿಟ್ಟ
ಹನಿಗಳು ಮಾತ್ರ..!

 

—–
೧೮.
ನಮ್ಮ ನಡುವೆ ಅಲೆಯೆಬ್ಬಿಸುವುದು
ಪ್ರೀತಿಯ ಸಮುದ್ರವೆಂದು ಅವಳು
ಗೊಣಗುಟ್ಟಿದಾಗ ನಾನು
ಭಯಭೀತನಾದೆ..!
ತೀರಗಳ ನಡುವಿನ ಅಂತರ ನೆನೆದು..!

 

—–
೧೯.
ಕನಸಿನೂರಿನ ನೆನಪನ್ನೆಲ್ಲಾ
ಮೂಟೆ ಕಟ್ಟಿ ನೀರಿಗೆಸೆದೆ…
ಆವಿಯಾದ ನೀರು ಮೊದಲ ಮಳೆಯಾಗಿ
ಸುರಿದಾಗ ಕನಸಿನೂರಿನಲ್ಲಿ
ಮತ್ತೆ ನೆನಪಿನ ಚಿಗುರೆಲೆ
ಮೊಳಕೆಯೊಡೆಯಿತು….!!

 

—-
೨೦.
ಮೌನ ಪ್ರೀತಿಯೇ..?
ಗೊತ್ತಿಲ್ಲ…
ಮನದಲ್ಲಿ ಕಡಲಷ್ಟು ಪ್ರೀತಿ ಇದ್ದರೂ
ಪ್ರೀತಿಸುವುದಿಲ್ಲ ಎನ್ನುವ ಮನಸಿನ
ಮೂಕ ರೋದನೆಯೇ ಮೌನ!!

 

—–
೨೧.
ಮುಂಗುರುಳು ಮಂಜಾನೆಯ
ಮಂಜನು ಇಷ್ಟಪಟ್ಟ ಮಂದಾರ ಹೂವೇ..
ಮರೆಯಬಾರದೀ ಮಂಜ ಹನಿಯ..
ನಿನ್ನ ಎಸಳಿನಿಂದ ಜಾರಿ ಬೀಳುವವರೆಗಾದರೂ..!

 

—-
೨೨.
ಅರ್ಧದಲಿ ಮುರಿದು ಬಿದ್ದ
ಹಗಲು ಕನಸಂತೆ ನೀನು ನನ್ನಿಂದ ಅಗಲಲು..
ಇರುಳು ತುಂಬಿದ ಜೀವನವೆಂಬ ಈ ಕವಲು ದಾರಿಯಲಿ
ನಾನಿಂದೂ ನಿನ್ನ ಕಾಲ್ಗೆಜ್ಜೆ ದನಿಗಾಗಿ
ಕಾಯುತ್ತಿದ್ದೇನೆ..!

—–

 

೨೩.
ನಾ ನೆಟ್ಟು ಬೆಳೆದ
ಗುಲಾಬಿ,
ಹೂ ಬಿರಿದು
ಘಮಿಸಿದಾಗಲೆಲ್ಲ ನಿನ್ನ
ನೆನಪು ಮೂಡುವ
ಮರ್ಮವಾದರೂ ಏನು ಗೆಳತಿ?

 

—-
೨೪.
ಪರ್ವತದೊಳಗೂ
ಬೆಂಕಿಯಂತೆ..,
ನನ್ನೊಡಲೊಳಗೆ
ನಿನ್ನ ನೆನಪಂತೆ…!
—-
೨೫.
ನಿನಗೆ ಗೊತ್ತೇ ಗೆಳತಿ..?
ನನಗೆ ಸ್ವರ್ಗದಿಂದ
ಉಡುಗೊರೆಯೊಂದು ಸಿಕ್ಕಿದ್ದು,
ಅದು ನೀನೆ…!–

 

 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಪಂಜು ಚುಟುಕ ಸ್ಪರ್ಧೆ: ಹುಸೇನ್ ಎನ್. ಅವರ ಚುಟುಕಗಳು

  1. ಚುಟುಕುಗಳಲ್ಲಿಯೇ ಚುಟುಕಾಗಿ ವಿಶಾಲಾರ್ಥ ಹೊಮ್ಮಿಸುವ ಕವಿಗಳಿಗೆ ಶುಭಾಶಯಗಳು….

Leave a Reply

Your email address will not be published. Required fields are marked *