ಪಂಜು ಚುಟುಕ ಸ್ಪರ್ಧೆ: ರಘು ನಿಡುವಳ್ಳಿ ಅವರ ಚುಟುಕಗಳು

1

ಸಮಾನತೆ

ಭೋರ್ಗರೆವ ಶರಧಿ

ಅದರ ಸೆರಗಲ್ಲೆ  ಮಹಾಮೌನಿ

'ಹಿನ್ನೀರು'

ದಿಗ್ಗನೆ ಬೆಳಗುವ ದೀಪ 

ಅದರ ಬದಿಯಲ್ಲೆ ದಿವ್ಯಧ್ಯಾನಿ

'ಕತ್ತಲು

ಸೃಷ್ಟಿಗಿಲ್ಲ  ಅದರ ದೃಷ್ಟಿಗಿಲ್ಲ 

ಭೇಧ ಬಿನ್ನ ಪಕ್ಷಪಾತ

ಹುಟ್ಟು ಸಾವು ನೋವು ನಲಿವು

ಎಲ್ಲ ನಮ್ಮ ನಿಮ್ಮ ವರಾತ!

 

ಚೋದ್ಯ

ಕತ್ತಲೆಗೆ ಗೊತ್ತಿರುವ.. ಗುಟ್ಟು..

ಬೆಳಕಿನ ಪಾಲಿಗೆ ಅಪರಿಚಿತ 

ಹಣತೆ ಕಂಡಿರೋ ಸತ್ಯ..

ಕತ್ತಲಪಾಲಿಗೆ ಅದೃಶ್ಯ ..

ಇದು ಸೃಷ್ಟಿಯ..ಚೋದ್ಯ

 

3

ಅಪೂರ್ಣ

ಒರಟು ವಜ್ರಕ್ಕೆ..ಹೊಳಪು ಕೊಟ್ಟ..

ಸುವಾಸನೆ ಕೊಡಲಿಲ್ಲ..

ಮೃದುಲ..ಮಲ್ಲಿಗೆಯಲಿ..

ಗಂಧ ಇಟ್ಟ.. 

ಆದರೆ ,

ಆಯಸ್ಸು ಕರುಣಿಸಲಿಲ್ಲ.

'ಅಪೊರ್ಣತೆ ಜಗದ ನಿಯಮ'

 

4

ನಿರಾಶೆ

ಕಣ್ಣೊಳಗೆ ಸರೋವರ ವಿಟ್ಟುಕೊಂಡು

ಗುಟುಕು ನೀರಿಗಾಗಿ  ಎಡತಾಕಿದ್ದೇನೆ

ಎದೆಯೊಳಗೆ ನಿಲಾಂಜನವಿಟ್ಟುಕೊಂಡು

ಕಿಡಿಗಾಗಿ ತಡಕಾಡಿದ್ದೇನೆ

ನನ್ನೊಳಗೆ ಜಗವನ್ನಿಟ್ಟುಕೊಂಡು 

ನಿನ್ನ ಹುಡುಕಿ ತಲ್ಲಣಿಸಿದ್ದೇನೆ

ಮಳೆಬಿಲ್ಲ ಗೆಳೆತನ

ಆದರೂ ಬಣ್ಣಕ್ಕೆ ಬಡತನ!!

 

5

ಉಪದೇಶ 

ಬದುಕಿನ ಗೋಜಲಿಗೆ ಹೆದರಿ

ಪಲಾಯನ ಮಾಡಿದ 

'ಸನ್ಯಾಸಿ'

ಬದುಕಿನ ಕುರಿತು  ಉಪದೇಶ

ನೀಡುತ್ತಿದ್ದರೆ

ಸಂಸಾರಿಗಳು

ಮಗುಮ್ಮಾಗಿ ಕುಳಿತು  ಆಲಿಸುತ್ತಿದ್ದರು

 

6

ವ್ಯತ್ಯಾಸ

ಹೆಣದ ಮೇಲೆ ಬಿದ್ದ ಹಣ

ಎಸೆದವನಿಗೆ'ಸಂಪ್ರದಾಯ'

ಆಯ್ದವನಿಗೆ ಆ ದಿನದ ಆದಾಯ

 

7

ವಿಚಿತ್ರ

ಕದ್ದಮಾಲು ಕಳೆದದ್ದಕ್ಕೆ

ಕಳ್ಳರಿಬ್ಬರು ಹುಡುಕಿ ಹುಡುಕಿ

ಹತಾಶರಾಗಿದ್ದರು

ಕಳೆದುಕೊಂಡವನು

ಮೈಮರೆತು

ಹಾಯಾಗಿ ಮಲಗಿದ್ದ

 

8

ವಿಪರ್ಯಾಸ!

ಮಿಣುಕು ದೀಪಕ್ಕಾಗಿ ಮೊರೆಯಿಟ್ಟೆ

ಬೆಳದಿಂಗಳನೆ ಕೊಟ್ಟ

ತುತ್ತು ಅನ್ನಕ್ಕಾಗಿ ಬೇಡಿಕೆಯಿಟ್ಟೆ

ಮೃಷ್ಟಾನ್ನದ ಬಟ್ಟಲನೆ ಕೈಗಿಟ್ಟ

ಸಂಗಾತಿಗಾಗಿ ಪ್ರಾಥರ್ಿಸಿದೆ

ದೇವತೆಯನೆ ಕರುಣಿಸಿದ

ಪಡೆಯುವ ಉಂಬುವ, ಸಲುಹುವ 

'ಯೋಗ್ಯತೆ' ಗಳಿಸಲು 

ನಾನಿನ್ನೂ ಹೊರಾಡುತ್ತಿದ್ದೇನೆ

 

9

ವಿಚಿತ್ರ

ಒರಗುವ ದಿಂಬಿಗೂ

ಕರಗುವ ಕಂಬನಿಗೂ

ಗುಟ್ಟು ಬಿಟ್ಟುಕೊಡದ

ಹುಡುಗಿಯರನ್ನ

ಜಗತ್ತು

'ಮಾತಿನ ಮಲ್ಲಿಯರೆಂದು

ಕರೆಯುತ್ತದೆ

 

10

ಚೆಲುವೆ

ಗುಂಗೇರಿಸೋ 'ಗುಲಾಬಿಯಲ್ಲ'

ಕಣ್ಣು ಕುಕ್ಕುವ 'ಕನಕಾಂಬರವಲ್ಲ

ಅವಳು

ಸರಳ ಸ್ನಿಗ್ದ ದಾಸವಾಳ!!

 

11

ಮೋಹ

ಕಾಮನ ಬಿಲ್ಲಿಗೆ ಕಾರಣ 

ಕೇವಲ ಬೆಳಕಿನ ವಕ್ರೀಭವನ 

ಎನ್ನುತ್ತಿದ್ದ ನನಗೆ 

ವಿನಾಕಾರಣ ಬಣ್ಣಗಳ ಮೋಹ 

ಹುಟ್ಟಿಸಿದ್ದು  ನಿನ್ನ

ಉಗುರು ಬಣ್ಣ

 

12

ಮಾದಕ

ಎಲ್ಲ ಮಾದಕ ವಸ್ತುಗಳು

ಆರೋಗ್ಯಕ್ಕೆ ಹಾನಿಕರವೇ..

ಅವಳ 

ಹೂ ನಗೆಯೊಂದನ್ನ ಬಿಟ್ಟು

 

13 

ಮಾಯೆ

ಹೊರಬರಲಾಗದೆ 

ತೊಳಲಾಡಿದೆ ಮನಸು

ಆ ಮಾಯೆಯಿಂದ

ಅವಳ ಛಾಯೆಯಿಂದ

ಮೊದಲು 'ಅವಳು' ಕಾಡುತ್ತಿದ್ದಳು

ಈಗ ಅವಳ ಗುಂಗಲ್ಲಿ ಬರೆದ 

'ಕವಿತೆ'ಗಳ ಸರದಿ!

 

14

ಅರಿವು

ಬದುಕಿನ 'ಬೆಳಕು'

ನೀನು ಎಂದುಕೊಂಡಿದ್ದೆ

 ಯಾವ ಹಣತೆಯೂ

ನೀಗದಷ್ಟು ಕತ್ತಲ

ಉಳಿಸಿ ಹೋದೆ

 

ನನ್ನ ನಗುವಿನ  'ಕಾರಣ'

 ನೀನು ಎಂದು ನಂಬಿದ್ದೆ

ಜಗತ್ತು ನನ್ನ ನೋಡಿ 

ನಗುವುದಕ್ಕೆ 

'ಕಾರಣವಾಗಿ ಹೋದೆ

 

15

 ಕ್ಯಾಲೆಂಡರ್

ಗೋಡೆಗೆ ನೇತು ಹಾಕಿದ 

ಕ್ಯಾಲೆಂಡರ್ ನಾನು

ಒಂಟಿಕಾಲಲಿ ನಿಂತು

ಧೇನಿಸಿದರೂ

ತಿಂಗಳಿಗೊಮ್ಮೆ

ಅವಳ ಬೆರಳಸ್ಪರ್ಶ!

ಕಾಲ ಮತ್ತೆ ಬರುವವರೆಗೆ

ಮತ್ತದೆ ತಪಸ್ಸು

ಕಾತುರದ ನಿರೀಕ್ಷೆ.

 

16

ಸತ್ವ

ನೀರಿಲ್ಲದೆ ಮೀನು

ಉಳಿಯುವುದಿಲ್ಲ

ಗಾಳಿಯಿಲ್ಲದೆ 

ಯಾವ ಜೀವಿಯೂ 

ಬದುಕುವುದಿಲ್ಲ ನಿಜ

ಆದರೆ ಗೊತ್ತೆ?

ಪ್ರೇಮವೆಂಬ 'ಚೇತನ' ವಿಲ್ಲದೆ

ಗಾಳಿಯೂ ಕದಲದು

ಹನಿಯೂ ಜಿನುಗದು

 

17

ಹುಡುಕಾಟ

ಸುಖ ಎಂದರೆ 'ನಿಲುಕದ ನಕ್ಷತ್ರ'

ಕಡಲಾಳದ ಮುತ್ತು 

ಎಂದುಕೊಂಡಿದ್ದ ನನಗೆ ..

ಅವು  ನಿನ್ನ ಅಂಗೈ ಗೆರೆಗಳಲ್ಲಿರೋ

ಸತ್ಯ ತಿಳಿದಿರಲಿಲ್ಲ!

 

18

ತೂಕ 

ನಿಜ ಅವಳು, 

ಏಳುಮಲ್ಲಿಗೆ ತೂಕದ ರಾಜಕುಮಾರಿ

ಆದರೆ

ಅವಳ ನೆನಪಿನ ನವಿಲುಗರಿ

ಬೆರಳಿಗೆ ಸೋಕಿದರೆ

ವಜನು ತೂಕ

 

19

ಫರಕು

ಅಂದು ನಿನ್ನ

ಕಂಡಾಗ

ಕಣ್ಣಲ್ಲಿ 

ನಕ್ಷತ್ರ ಮಿನುಗಿತ್ತು

ಇಂದು 

ಅದೇ ಕಣ್ಣಲ್ಲಿ

ಕಂಬನಿ ಸುರಿದಿದೆ

'ಕಾಲ ನಯವಂಚಕ'

ಮನಸು ಅಮಾಯಕ!

 

20

ಅಚ್ಚರಿ

ಬೆರಗಿನಿಂದ 

ಅವಳು ಭೋರ್ಗರೆವ 

ಸಮುದ್ರವನ್ನ ನೋಡುತ್ತಿದ್ದರೆ

ಆ ಬೊಗಸೆಕಂಗಳ 

ಅಚ್ಚರಿಯನ್ನ 

ನಾನು

ಕಣ್ತುಂಬಿಕೊಳ್ಳುತ್ತಿದ್ದೆ

 

21

ಶಾಕುಂತಲೆ

ಅವಳು ರಿಂಗ್ ಕಳೆದುಕೊಂಡ

'ಶಾಕುಂತಲೆ'

ಹುಡುಕುವ ಗೋಜಿಗೆ ಹೋಗದೆ

ಮತ್ತೊಬ್ಬನೊಂದಿಗೆ 

ಚಾಟಿಂಗ್  ಶುರುವಿಟ್ಟುಕೊಂಡಳು

ಇವನು  ಜಾಣ ಮರೆವಿನ

' ದುಶ್ಯಂತ'

ಪುನಃ ಉಂಗುರವಿಡಿದು

ಹೊಸಬೆರಳಿಗೆ ಕೈ ಚಾಚಿದ

 

22

ತಿರುವು

ಅವಳು ಬಣ್ಣದ ಚಿಟ್ಟೆ

ಬೇಕೆಂದಳು

 ಬೆನ್ನತ್ತಿ ಹೊರಟಾಗ

ಚಿಟ್ಟೆ ಬಣ್ಣದ ಬಟ್ಟೆ ತೊಟ್ಟವಳು

ಸಿಕ್ಕಳು!

ಅಲ್ಲಿಗೆ ಅವನ ನಿಯತ್ತು

ಮುಗಿದಿತ್ತು

ತಿರುಗಿ ಹೋಗಲು

ದಾರಿಯೂ ಮರೆತಿತ್ತು !!

 

23

ಪಾಲು

'ಹಸಿವು ಎಂದದಕ್ಕೆ

ನಿನಗೆಂದು ಎತ್ತಿಟ್ಟ

ತುತ್ತನ್ನೆ ಭಿಕ್ಷುಕನಿಗೆ ಕೊಟ್ಟೆ

'ಕಷ್ಟ' ಎಂದಿದ್ದಕ್ಕೆ

ನೀ ಕೊಟ್ಟ  ಉಂಗುರವನ್ನೆ

ಗೆಳೆಯನಿಗೆ ಕೊಟ್ಟೆ

ಆದರೆ ಈಗೊಬ್ಬಳು

'ಪ್ರೀತಿ' ಎನ್ನುತ್ತಿದ್ದಾಳೆ

ಹೇಗೆ ಕೊಡಲಿ

ನಿನಗೆಂದು ಮುಡುಪಿಟ್ಟದ್ದನ್ನ

 ಜತನದಿಂದ ಕೂಡಿಟ್ಟದ್ದನ್ನ

 

24

ಘಟವಾಣಿ

ಕಣ್ಣ ಸನ್ನೆಯಲ್ಲಿ

ಹುರಿಮೀಸೆಯ ಗಂಡನನ್ನ

ನಡುಗಿಸುತಿದ್ದ ಆಕೆ

ಮೀಸೆ ಇರುವ 

ಜಿರಲೆಗೆ ಬೆಚ್ಚುತಿದ್ದ

ಭಯಗ್ರಸ್ತ ಹೆಣ್ಣು

 

25

ಘಾತುಕಿ

ಬಿದ್ದ ಚೆಂಡಿಗಾಗಿ

ಬಾವಿಗೆ  ಧುಮುಕಿದ

ಮಗು ನಾನು!

ನಿನ್ನ ವಂಚನೆಯ

ಆಳವೂ ತಿಳಿದಿರಲಿಲ್ಲ

ಮುಳುಗಿ ಸಾಯುವ

ಭಯವೂ ನನಗಿರಲಿಲ್ಲ

 

26

ಕಾರಣ

ಜಗ್ಗಿದರೆ ಬಿದ್ದೀತು

ನುಗ್ಗಿದರೆ ಹಾರೀತು

ಗಾಳಿಪಟ!

ಎರಡಕ್ಕೂ ಕಾರಣ 'ಗಾಳಿ'

 

ಒಲಿದರೆ ಅರಳೀತು

ಮುನಿದರೆ ಮರುಗೀತು

ಮನಸು!!

ಎರಡಕ್ಕೂ ಕಾರಣ 'ನೀನು'

 

27

ವಿಸ್ಮಯ!!

ಇರಬಹುದು  ನಾನು

ನಿನಗೆ ಆಕಸ್ಮಿಕವಾಗಿ ಸಿಕ್ಕ

ದಾರಿಹೋಕ

ಆದರೆ ಮತ್ಯಾರಿಗೋ

ಈ ಹೃದವೇ ತಂಗುದಾಣ

ನಾನು  ಅವರ ಪಾಲಿನ 

ಕೊನೆಯ ನಿಲ್ದಾಣ

ಒಲ್ಲೆ ಎಂದು ಒಗೆದ ಕಲ್ಲು

ಶಿಲೆಯಾಗುವುದೆ  'ಜಗದ ವಿಸ್ಮಯ'

 

28

ಹಿಂಬಾಗಿಲು

ಹೀಗೆ ಬಂದವಳು

ಹಾಗೆ ಹೋದಳು

ಪ್ರೇಮಸೌದಕ್ಕೂ

ಎರಡು ಬಾಗಿಲುಗಳಿರುತ್ತವೆ!

 

29

ಮಹಾ ತಪಸ್ವಿ

ಅದೆಷ್ಟೋ ಹುಡುಗಿಯರ

ಖಾಸಗಿ ಕ್ಷಣಗಳ

ಕಣ್ಣಾರೆ ಕಂಡರೂ

ಬಿಗುಮಾನವಿಲ್ಲದೆ 

ನಿನ್ನೆದುರು ಬರಿದಾದರೂ

ನಿಗ್ರಹ ಧೇನಿಸುತ 

ನಿಚ್ಚಳವಾಗಿ ನಿಂತಿರುವೆಯಲ್ಲ

ನಿಲುವುಗನ್ನಡಿ

ನೀ 'ಮಹಾ ತಪಸ್ವಿ'

 

30

ಹತಾಶೆ

ಬಿಡಿಗಾಸು ಹುಡುಗನ

ಖಾಲಿದಿಂಬಿನಲಿ

ಕೋಟಿ ಕನಸ ಸುರಿದು 

ಹೊದಿಕೆ ತರಲು ಹೋದವಳು

ಮೂರು ಚಳಿಗಾಲ

ಕಳೆದರೂ ತಿರುಗಿ ಬರಲಿಲ್ಲ

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

4 Comments
Oldest
Newest Most Voted
Inline Feedbacks
View all comments
raghuniduvalli
raghuniduvalli
11 years ago

danyavaadagalu nataraj

Santhoshkumar LM
Santhoshkumar LM
11 years ago

"ನನ್ನೊಳಗೆ ಜಗವನ್ನಿಟ್ಟುಕೊಂಡು 
ನಿನ್ನ ಹುಡುಕಿ ತಲ್ಲಣಿಸಿದ್ದೇನೆ"…..Superb lines Raghu

ವೆಂಕಟೇಶ ಮಡಿವಾಳ ಬೆಂಗಳೂರು
ವೆಂಕಟೇಶ ಮಡಿವಾಳ ಬೆಂಗಳೂರು
11 years ago

"ವಿಸ್ಮಯ!!
ಇರಬಹುದು  ನಾನು
ನಿನಗೆ ಆಕಸ್ಮಿಕವಾಗಿ ಸಿಕ್ಕ
ದಾರಿಹೋಕ
ಆದರೆ ಮತ್ಯಾರಿಗೋ
ಈ ಹೃದವೇ ತಂಗುದಾಣ
ನಾನು  ಅವರ ಪಾಲಿನ 
ಕೊನೆಯ ನಿಲ್ದಾಣ
ಒಲ್ಲೆ ಎಂದು ಒಗೆದ ಕಲ್ಲು
ಶಿಲೆಯಾಗುವುದೆ  'ಜಗದ ವಿಸ್ಮಯ'
 "
ಈ ಸಾಲುಗಳು ನಿಮ್ಮ ಕುರಿತಾಗಿ  ಹೇಳಿದರೆ ಹೇಗೆ?
ಎಲ್ಲ ಚುಟುಕಗಳನ್ನು ಓದಿದೆ , ಅಬ್ಬಬ್ಬ ಒಂದಕ್ಕಿಂತ ಒಂದು ಸೂಪರ್ .. 
ಯಾವುದು ಇಷ್ಟ ಎಂದರೆ  ನಿಮೆಮ್ಲ್ಲ ಬರಹಗಳನ್ನು ಇಲ್ಲಿ ಹಾಕಬೇಕಾದೀತು -ಅಲ್ಲಿಗೆ ಬರಹ ಮತ್ತು ಪ್ರತಿಕ್ರಿಯೆ ಸ್ಪರ್ಧೆಗೆ ಬೀಳುವವು,:())
 
ಮುಟ್ಟದ ವಸ್ತು ತಟ್ಟದ  ಭಾವ -ಇಲ್ಲ 
ಎಲ್ಲವೂ ಇಲ್ಲಿದೆ .. 
ನಿಮ್ಮ ಚುಟುಕಗಳನ್ನು ನೋಡಿದಾಗ ನನಗೆ  ಹೊಟ್ಟೆ ಕಿಚ್ಚು ಆಯ್ತು  ಎಂದು ಹೇಳುವೆ .. !
ಕಾರಣ ಹೀಗೆ ಬರೆಯಲು ಎಲ್ಲರಿಗೂ ಆಗದು . 
ನಿಮಂ ಚುಟುಕಗಳನ್ನು ಕೇವಲ ಫೇಸ್ಬುಕ್ -ಪಂಜು ಗೆ ಸೀಮಿತಗೊಳಿಸದೆ  ಕಸ್ತೂರಿ -ತುಷಾರ —ಮಯೂರ – ತರಂಗ -ಕರ್ಮವೀರ  ತರಹದ ಪತ್ರಿಕೆ ಪುಸ್ತಕಗಳಿಗೆ  ಮಾಸಿಕ ಪಾಕ್ಷಿಕಗಳಿಗೆ ಕಳುಹಿಸಿ . ಎಲ್ಲರನ್ನೂ ಮುಟ್ಟಿ -ತಟ್ಟಿ .. 
ಮುಂದೆಯೂ ನಿಮ್ಮಿಂದ ಚುಟು –  ಚುಟುಕಗಳನ್ನು ನಿರೀಕ್ಷಿಸುವೆ .. 
 
ಶುಭವಾಗಲಿ 
 
\।/

ರಘು ನಿಡುವಳ್ಳಿ
ರಘು ನಿಡುವಳ್ಳಿ
11 years ago

ಧನ್ಯವಾದಗಳು ವೆಂಕಟೇಶ್ ನಿಮ್ಮ ಪ್ರತಿಕ್ರಿಯೆ ನನ್ನ ಆತ್ಮವಿಶ್ವಾಸ ವನ್ನ ಇಮ್ಮಡಿ ಗೊಳಿಸಿದೆ 

4
0
Would love your thoughts, please comment.x
()
x