ಚುಟುಕ

ಪಂಜು ಚುಟುಕ ಸ್ಪರ್ಧೆ: ಡಾ. ಆಜಾದ್ ಐ ಎಸ್ ಅವರ ಚುಟುಕಗಳು

1.    ನಿನ್ನೆ ಮಳೆ ಹನಿ ಅಂಗೈಲಿದೆ ಇನ್ನೂ

ನಿನ್ನೇ ನೆನೆದು ಕುಳಿತಿರುವೆ ಇನ್ನೂ

ನಿನ್ನೀ ತಪನದ ಬೇಗೆಯಲಿ ಬರಿದೇ

ನನ್ನೇ ಮರೆತಿರುವೆ ವರ್ಷಾ ನೀ ಮತ್ತೆ

……………..ಬರದೇ……………..

 

2.    ಮಿಂಚು-ಹೊಳಪು ಹುಟ್ಟಿದಾಗ ಮಗ

ಮಮತೆ ಮಡಿಲಲಿ ಆಡುತಿರುವಾಗ

ತುಂಬಿ ಆತಂಕ-ಕಂಬನಿ ಗೆಲುವಿಲ್ಲದಾಗ 

ಬೆಳೆದು ಹೆಮ್ಮರ ನಾನು, ಏನೆನ್ನಲಿ ?

ಆ ಮಮತಾ ಮಯಿಯ ಕಣ್ಣ ಕನ್ನಡಿ

ಬರೆದಂತೆ ಕಂಡಿಲ್ಲ ನನ್ನ ವಯಸಿಗೂ 

……………ಮುನ್ನುಡಿ ……………

 

3.    ನೀ ನನ್ನ ಮನದನ್ನೆ ಓ ಹಾಲ್ಗೆನ್ನೆ ಚೆನ್ನೆ

ಕಂಡದ್ದೆಂದೋ ಮನದಲ್ಲಿ ಕಂಡಂತೆ ನಿನ್ನೆ

ಕೊಡ ಹೊತ್ತು ನೀಳ ಜಡೆ ಓಲಾಡಿಸಿದ್ದೆ

ಮಲಗ ಬಿಡಲಿಲ್ಲ, ಮಲಗಿದರೆ ಬಂದೇಕೆ

……………ಕನಸಲೇ ಕಾಡಿದ್ದೆ…………

 

4.    ಅಂದಳು ಶೋಡಶಿ ಸುಂದರಿ ಕೋಮಲೆ

ಬಿಚ್ಚಿ ಈ ನಿಮ್ಮ ಶರಟು ಇಲ್ಲೇ ರೂಮಲೇ

ನಾನೆಂದೆ ಹೌದಾ, ದಿಟ ಹೇಳಿಬಿಡು ನೀ..

ಹೌದು, ಬಾ ಇಲ್ಲಿ ನಿಲ್ಲು ಇದಿರಲ್ಲಿ ಹೀಗೆ

ಆಗ ತಾನೆ ನಾನು ನಿನ್ನೆದೆಯ ಎಕ್ಸ್ ರೇ 

…………….ತೆಗೆಯಬಲ್ಲೆ……………..

 

5.    ನಿನ್ನಿಂದಲೇ…

ಹುಟ್ಟುವುದಕ್ಕೆ ಮುಂಚೆಯೇ ತಲೆಬರಹ

ಮುಟ್ಟುವುದಕ್ಕೆ ಮೊದಲೇ ಕೋಮಲತೆ

ಯಾವುದೀ ನಿಯಮ ಏಕೆ ತಾರತಮ್ಯ

ಹೀಗೇ ಕೊರಗಬೇಕೇ ಪ್ರತಿ ತರುಲತೆ?

 

6.    ಕಡಲತುಂಬಿ ಹೋದೆಯಲ್ಲಾ 

ಕಣ್ಣಿನೆವೆಗಳ ಕಾವಲಿಟ್ಟು ಹೀಗೆ?

ಕನ್ನಂಬಾಡಿಯ ಸ್ವಚಾಲಿತ ತೂಬು

ಹರಿಸಿಬಿಡುತ್ತವೆ ತೆರೆದು ಬಾಗಿಲು

…..ಎಲ್ಲೆ ಮೀರಿದರೆ ನೋವು….

 

7.    ನೀರೆಯಾದಳು ಬಲು ನಾಚಿ ನೀರು

ನಿಲ್ಲಲಾಗದೆ ಹಾಗೇ ಮೇಲಿಂದ ಜಾರು

ಜಾರುತಿದ್ದರೆ ಪಾತ ಮೇಲಿಂದ ಜೋಗು

ಮುನಿಯಬಿಡು ಹನಿದುಬಿಡು ಹೀಗೇ ಇಲ್ಲಿ

………….ಬಂದು ಹೋಗು…………..

 

8.    ಅಳ್ಳಿಲಿ ಎಲ್ಕಾ ಬಂತು ಒಂದ್ನಮೂನೆ ಉಚ್ಚು

ಕಂಡ್ರೆ ಮುದ್ಕಾನೂ ಬಿಡ್ತಾನೆ ಬಾಯಿಬೊಚ್ಚು

ಎಲ್ತ್ ಸೆಂಟ್ರಿಗೆ ಬಂದವ್ಳೇ ಪಟ್ನದ್ ನರ್ಸಮ್ಮ

ಗೌಡನ್ ವಿಸಿಟ್ಟು ಎಚ್ಚೈತೆ ಈ ಮದ್ಯೆ ಸೆಂಟ್ರಿಗೆ

…………ಕೇಳುದ್ರೆ ತೋರಿಸ್ತಾನೆ ಕೆಮ್ಮ……..

 

9.    ಬಾನಂಗಳದಲಿ ಬಣ್ಣದ ಏನೀ ಆಟ

ನಿನ್ನ ಕಂಗಳಲಿ ಕಂಡೆನಾ ನೋಟ

ಇಂದ್ರ ಧನಸ್ಸಿಗೆ ಕೊಟ್ಟವರು ಯಾರು

ಮನ ಮೋಹಕ ಬಣ್ಣಗಳು ನೂರು..

ನಿನಗೆ ನಾನು ದತ್ತ ಕೊಟ್ಟಂತೆ ದೇವ

……….ನೀನನ್ನ ಚಾರು…………..

 

10. ಸಾಗರ ತುಂಬಿದೆ ಕಣ್ಣಲಿ

ಹರಿವುದು ತೆರೆದರೆ ಆಲಿ

ಅಳಲು ಬಿಡದು ಈ ಮನ

ಮನಸು-ಕನಸು-ಭಾವನೆಗೆ

….ಎಂಥ ನಿಯಂತ್ರಣ?….

 

11. ಮದವಿರಬೇಕು,ಒಂದೇ ಬಣ್ಣದಲಿ

ಕಾಣಲಾಗದಂತೆ ಆಳ,

ಮದರಂಗಿಗಿಳಿದರೆ ಬಿಡರು

ನಿತ್ಯಾನಂದನ್ನೂ, ತೊಡಿಸಿಬಿಡುವರು

……………..ಕೋಳ………………

 

12. ಕವನ – ಬಾಟಂ ಪಂಚು, ಈ ಮಾಯೆ

ತುಂಬಾ ಲೈಕುಗಳು, ಅಷ್ಟೇ ಪ್ರತಿಕ್ರಿಯೆ

ಆಮೇಲೇ ಗೊತ್ತಾಗಿದ್ದು ಎಲ್ಲಾ ಹತ್ತಿಸ್ತಾರೆ ಮರ

ಅದ್ಕೇ ಬಿಟ್ ಹಾಕಿ ಬಾಟಂ ಪಂಚೂ, ಎತ್ತಿದ್ದೀನಿ

………………ಕ್ಯಾ ಮರ…………………..

 

13. ಕೊಡ ಬೇಕೆಂದಳು ನಾ ತಂದೆ ಕೊಡ

ಬೇಡ ಎಂದಳೇಕೆ ಅದನ ಕಂಡಾಕೆ..?

ಮುತ್ತ ಬೇಕೆಂದಳು ಕೊಂಕಿಸುತ ಕತ್ತ

ಜಾಣ ನಾನೀಗ ಸುರಿದಿರುವೆ ಮುತ್ತ

……….ಅವಳ ಸುತ್ತ ಮುತ್ತ……….

 

14. ಚಂದ ಚಲುವೆಯು ನಕ್ಕರೆ ಬಳಿ

ನೋಡಲು ಅವಳ ಕೆನ್ನೆಯ ಕುಳಿ

ಕುಪ್ಪಳಿಸುವನು ಬಂದಂತೆ ಛಳಿ…

ನಕ್ಕರೆ ಗುಂಡ ನೆಲದ ಮೇಲೆ

………….ಗುಳಿ…………….

 

15. ಬಾನು ಬಾಗಿದೆ ಆ ಕಡೆ ಕೂಗಿ

ಇಲ್ಲಿ ಕಮಾನು ಬಾಣಕ್ಕೆ ತಾಗಿ

ಹುಬ್ಬಿಗೇನೂ ಹೊಸದಲ್ಲ ಈ ಆಟ

ಅಂಬಿಗಾಗಿಯೇ ಇದೆಯಲ್ಲಾ ತುಂಬಿ

…………..ಸೀಳು ನೋಟ……….. 

 

16. ನನ್ನವಳು ಕೇಳಿದ್ಲು,,ಆಗಿತ್ತಾ ನಿಮಗೆ

ಲವ್ ಅಟ್ ಫಸ್ಟ್ ಸೈಟೂ….?

ನಾನಂದೆ..ಊಂ ಮತ್ತೆ ಅದಕ್ಕೇ 

ಅಲ್ಲವೇ ಅಲ್ಲಿಯೇ ಕಟ್ಟಿರೋದು

…………..ಫ್ಲಾಟೂ……………

 

17. ಎಲ್ಲೆಡೆ ತುಂಬಿರೆ ಪ್ರೀತಿ ಜಗವೊಂದು ಸುಂದರ ತೊಟ್ಟಿಲು…

ನಾನದರಲಿ ಮಲಗಿ ಮಗುವಾಗಿಬಿಡುವೆ ಅಂಥ ಮುದ್ದು ಪಡೆಯಲು 

ಹಡೆದವರು, ಪಡೆದವರು, ತನ್ನವರು, ಆಪ್ತರು ಹತ್ತುವರು ಇದ್ದರೂ

…………………….ಸಾವಿರ ಮೆಟ್ಟಿಲು…………………

 

18. ವಾಲೆ ಎಂಟು ಎಣ್ಸಿ ತಂದೆ

ಮಾಲೆ ಜೊತ್ಗೆ ಮುತ್ತು ನಂದೇ

ಹತ್ತು ನಂದು ಇಪ್ಪತ್ತು ಅವ್ಳದ್ದು

ಗತ್ತು ಕೊಟ್ರೂ ಇಸ್ಕೊಂಡ್ರೂ ಮತ್ತು

ಈಸ್ಕೊಂಡಿದ್ದ ಏಣಿಸ್ತಾವಳೆ ಅಲ್ಲಿ ಕೊಟ್ಟಿದ್ದೇ

ಕೊಟ್ಟಿದ್ದು ಮುತ್ತು, ಓಗ್ತಾನೇ ಇಲ್ಲ

……………ಹೊತ್ತು………….

 

19. ಹೊರಳಿತೇಕೆ ಓರೆ ನೋಟ ಚಲುವೆ?

ಮರಳಿದಂತೆ ನೆನಪು ಈಗ ತರವೇ?

ಹಾಲು ಚಲ್ಲಿಕೂತ ಚಂದ್ರನೆಲ್ಲಿ ಹೋದ?

ಮೊಗ ಸಿರಿಯ ನಗುವಿನಲ್ಲಿ ಬೆರೆತು ಹೀಗೆ

………..ಆಯಿತಲ್ಲ ಮೋದ………

 

20. ಏನೆಂದೆ ನನ್ನ ಹುಬ್ಬನು ನೀನು..?

ಬಳುಕಿತೇಕೆ ಬಾಗಿ ಕಮಾನು..!!

ಉಳುಕೀತೆಂದೆ ಸೊಂಟ, ಹೊರಲಿಲ್ಲ

ಅದಕೇ ಕೊಟ್ಟೆನಲ್ಲಾ ಮಗುವನು ನೀನೇ 

………….ಹೊರು ನಲ್ಲ…………..

 

21.   ಕಾಮಾಲೆ ಕಣ್ಣು, ಕಾಯುತ್ತಿವೆ ಹುಣ್ಣು

ಕೆರೆದರೆ ರಕುತ ಬೀಳುವುದು ತಳದಿ

ಕೆಂಪೆಲ್ಲಿ, ಕಪ್ಪೆಲ್ಲಿ ಕಾಣದೊಂದೂ ಹಣ್ಣು

ಬಿಳುಪಿಗಿಲ್ಲ ತಾಣ ನಮಗೆ ಕಾಣುವುದೇ

……………ಎಲ್ಲೆಲ್ಲೂ ಹಳದಿ…………

 

22.   ದಿನವೂ ಬರಬೇಡ ನನ್ನ ದಾರಿಗಡ್ಡ ಚಲುವೆ

ಬರದೇ ಇದ್ದರೆ ಸುಮ್ಮನೇ ಈ ಗಡ್ಡ ಬೆಳೆವೆ

ಬೆಳೆದ ಹುಲುಸು ಗಡ್ಡಕೆ ನೀಕೊಡು ಮುತ್ತು

ಇಲ್ಲವಾದರೆ ’ಲಾಸ್’ ನಿನಗೇ ನಾನಾಗಿಬಿಡುವೆ

…………..ಮತ್ತೊಬ್ಬಳ ಸೊತ್ತು……………

 

23.   ನುಡಿಯಾಳದಲ್ಲೊಂದು ಮನವಿರುವಂತೆ

ಮನದಾಳದಲ್ಲೊಂದು ನಡೆ ಇರುತ್ತದೆ

ನಡೆ ನಡೆದಂತೆ ಮನದ ಸಾಣೆಯಾದರೆ

ಮನ ನುಡಿದಂತೆ ನಡೆಗೆ ಹಿಡಿಯಬೇಕು

………………ಸಾಣೆ……………….

 

24.   ತಿನ್ತಾ ಇಲ್ಲ ಸರಿಯಾಗಿ ಮುಂಚಿನಂತೆ

ಕಾಣ್ತಾ ಇಲ್ಲ ನಾ ಹೋದಾಗ ಎಂದಿನಂತೆ

ಆ ಚಂಚಲತೆ, ಆ ವೈಯಾರ ಆ ತುಂಟಾಟ

ನೀರೆರಚಿ ಮುಖಕ್ಕೆ ಓಡಿ ಹೋಗುವಾಟ..!!

………..ಹುಶಾರಿಲ್ಲ ಮೀನಾಕ್ಷಿಗೆ………

 

25.   ಒಬ್ಬರೆಡೆಗೆ ತೋರುವೆ ಬೆರಳ 

ಮೊದಲೇ ನೋಡು ನೀ ನೆರಳ

ಮನ-ನಡತೆ ಇರಬೇಕು ಸರಳ

ಸಿಗುವುದೇನು ಕಿವುಚಿ ಆ ಕರುಳ

ಬೆರಳೊಂದು ಅತ್ತ ತೋರೆ ಹುಳುಕು

ಇಲ್ಲವೇ ನಿನ್ನಲಿ ನಾಲ್ಕೂ ತೋರುವ

…………..ಕೊಳಕು…………..

 

26.   ಹಸಿರಳಿದರೆ ಉಸಿರುಳಿಯದು

ಬೇಡ ಭಯ ಎಲೆ ಎಲೆಯೇ

ನೀನು, ಮನುಕುಲಕಿರುವ

ಅಳಿವು ಉಳಿವಿನ ಏಕೈಕ

………ಸೆಲೆಯೇ……….

 

27.   ಇನಿಯನಿದಿರೆ ಬಾರದೇ..?

ನಿದಿರೆ ಏಕೋ ತೋರದೇ

ಉದುರಿದಂತೆ ಹನಿಯ ದನಿ

ಅದಕೇ ಇನಿಯ ಕಾದಿರೆ…

………..ಹರ್ಷ……….

 

28.   ಬೆಳಗಾಗೆದ್ದು ಹಲ್ಲುಜ್ದೇ ಕಾಪಿ ಕುಡ್ದ್ರೇ

ಏನಪ್ಪಾ ತಪ್ಪು?? ನನ್ನಿಷ್ಟ

ಓದ್ಲೇ ಇಲ್ಲ ಎಕ್ಸಾಮ್ನಾಗೆ ಕಾಪಿ ಒಡ್ದ್ರೇ

ಏನಪ್ಪಾ ತಪ್ಪು?? ನನ್ನಿಷ್ಟ

ರಿಸಲ್ಟ್ ಬಂತು ಪೇಲ್ಯಾಕೆ ಮಾಡಿದ್ದು

ಅಂದ್ರೆ ಎಚ್ಚೆಮ್ಮು ಅನ್ನೋದೇ

………….ನನ್ನಿಷ್ಟ………………

 

29.  ಉರುಳಾಡಿದರೆ ಬೆರಳು

ಸರಿದಾಡಿದರೆ ಕರಿನೆರಳು

ಮುದಗೊಳಿಸುವ ಹೆರಳು

ತುಯ್ದಾಡೋ ಆ ಅವಳ 

ಹುಚ್ಚೆಬ್ಬಿಸಿ ದಿಕ್ತಪ್ಪಿಸೋ..

……ಮುಂಗುರುಳು…….

 

30.   ಕೈ ಹಿಡಿದ ಕೈ ಜಾರೆ

ಸಹನೆ ಮಿತಿ ತಾ ಮೀರೆ

ತುಡಿತವದು ತುಳಿದಂದು

ಮಿಡಿತವದು ಮನತುಂಬಿ

ಬಿಂದು ಕಣ್ಣಾಲಿ ತೂರಿ ತನ್

ನಿರವ ಪ್ರಕಟಿಸಿಸಿತು ಹೀಗೆ

……….ಕಂಬನಿ…………

ಕನ್ನಡದ ಬರಹಗಳನ್ನು ಹಂಚಿ ಹರಡಿ

5 thoughts on “ಪಂಜು ಚುಟುಕ ಸ್ಪರ್ಧೆ: ಡಾ. ಆಜಾದ್ ಐ ಎಸ್ ಅವರ ಚುಟುಕಗಳು

  1. ಎಲ್ಲ  ಚುಟುಕುಗಳು  ತುಂಬಾ ಚೆನ್ನಾಗಿವೆ …… . ಸರ್ 

Leave a Reply

Your email address will not be published. Required fields are marked *