೧. ಜೀನ್ ಜಿನುಗದೆ
ಕವಿ ಹೃದಯದ ಜೀನ್ ಜಿನುಗದೆ
ದಿನವೂ ತೊಳಲಾಡುತ್ತಿದ್ದೇನೆ
ನಾ ಕವನ ಬರೆಯಲಾಗದೆ
ಕಣ್ಣ ಕದ ತೆರೆದು
ಓದುತ್ತೀಯಾ ನನ್ನೊಳಗಿನ ಕವಿತೆಗಳನ್ನು
೨.
ಬೇರಿನೊಳಗೆ ಅಡಗಿ ಕುಳಿತ
ಆಕಾಶದಗಲದ ದೊಡ್ಡಮರದಂತೆ
ನನ್ನ ಪುಟ್ಟ ಹೃದಯದೊಳಗೆ
ಬಚ್ಚಿಟ್ಟಿರುವ ಸಾಗರದಗಲದ
ಒಲವು ನಿನಗೆ ಗೊತ್ತಾ?
೩. ಹಸಿರು-ಉಸಿರು
ಆವಿಯಾದ ಸಾಗರದನಿಗಳು
ಆಕಾಶಕ್ಕೇರಿ ಪರಸ್ಪರ
ಡಿಕ್ಕಿಸಿದಾಗ ಮಳೆಸುರಿದು
ನೆಲವೆಲ್ಲಾ ಹಸಿರು
ದೈನಂದಿನ ಚಿತ್ರಗಳು
ನನ್ನೆದೆಯಲ್ಲಿ ಭಾವಗಳಾಗ
ಪರಸ್ಪರ ಡಿಕ್ಕಿಸಿದಾಗ
ಪದ ಸುರಿದು ಕಾಗದದಲ್ಲಿ
ಕವನದ ಉಸಿರು.
೪. ಬದುಕು
ಕೈಯಾಡಿಸಿ ಕಾಲುಜಾಡಿಸಿ
ಆರ್ಥವಿಲ್ಲದ ಆಕಳಿಕೆಯೊಂದು
ಕದಲಿದಾಗ ಟಿಸಿಲೊಡೆಯುವ
ಬದುಕು ಮುಗ್ಧ ಭ್ರೂಣದೊಳಗೆ
ಜಾರಿ ತಾಯಗರ್ಭದಿಂದ
ಹೊರಪ್ರಪಂಚಕ್ಕೆ ಅಳುವೋ
ನಗುವೋ ಚಿಮ್ಮಿದಾಗ
ಬೆನ್ನ ಸವರುವ ಬಯಕೆಗಳು
೫. ಬಾಳಸಂಜೆ
ಇಳಿವಯಸ್ಸಿನ ಬಾಳಸಂಜೆಯಲಿ
ಗದಗುಡಿಸುವ ಕಷ್ಟಗಳು
ಬಿರುಗಾಳಿಯ ಬಾಹುಗಳಾದಾಗ
ಮಗುಚಿಕೊಳ್ಳುತ್ತವೆ ಬಯಕೆಗಳು
ಮತ್ತದೇ ಶೂನ್ಯದೊಳಗೆ
ಆಧ್ಯಾತ್ಮದೆಡೆಗೆ, ದೂರದ ಸಾವಿನೆಡೆಗೆ
೬. ಏಣಿ ಸಿಗಲಿಲ್ಲ
ಏಣಿ ಸಿಗಲಿಲ್ಲ
ಘೋಷಣೆಗಳಿಗೆ
ಭರವಸೆಯಿಂದ ಕಾಯುತ್ತಿದ್ದ
ಕುಳಿರ್‌ಗಾಳಿ ಹಾರಿಹೋಯ್ತು
ಸುಸ್ತಾಗಿ ಇನ್ನೆಲ್ಲೋ…
೭. ಬದಲಾಗುವುದಿಲ್ಲ
ಅಂತ್ಯವಿಲ್ಲ ಹಗಲು-ಇರುಳಿನ ವಾದಗಳಿಗೆ
ಬದುಕು ಸಾವಾಗೊಲ್ಲ
ಸಾವು ಬದುಕಾಗೊಲ್ಲ
ಹಗಲಿಗೆ ಇರುಳಾಗಲು ಬರೋಲ್ಲ
ಇರುಳಿಗೆ ಹಗಲಾಗಲು ತಿಳಿದಿಲ್ಲ
ವಾಸ್ತವಗಳೆಂದೂ ಬದಲಾಗೊಲ್ಲ.
೮. ರಿಲೆ
ಭೂಮಿಯಿಂದ ಹಾರಿಹೋದ
ಉಪಗ್ರಹದಂತೆ
ನೀ ನನ್ನಿಂದ ದೂರವಾದರೂ
ನಿನ್ನ ನೆನಪಿನ
ನೇರವಾಗಿ ನನ್ನೆದೆಯ
ಕೇಂದ್ರಕ್ಕೆ
ರಿಲೆಯಾಗುತ್ತಿದೆ ಕಣೇ.
೯. ಹನಿಗವನಗಳು
ಪಾಯಸದಲ್ಲಿ ಸಿಗುವ
ದ್ರಾಕ್ಷಿ
ಗೋಡಂಬಿಗಳು
ಪತ್ರಿಕೆಯಲ್ಲಿ ಬರುವ
ಹನಿಗವನಗಳು
೧೦. ತೆರೆ-ಮರೆ
ಪ್ರಿಯೆ
ಮಲೆನಾಡಿಗೆ ಹೋಲಿಸಿ
ನಿನ್ನ ಮೇಲೊಂದು
ಕವನ ಬರೆಯೋಣವೆಂದರೆ
ನಿನ್ನ ಸೌಂದರ್ಯವೇ
“ಹಿಮ”ವಾಗಿ
ನನ್ನ ಬರಯವನ್ನಾವರಿಸಿ
ಮಂಕಾಗಿಸಿದೆಯಲ್ಲೇ.
೧೧. ಕಣ್ಣುಮುಚ್ಚಾಲೆ
ಈ ಮೇಘಗಳೇ ಹೀಗೆ
ಕಾರ್ಮೋಡಗಳಾಗಿ ದಟೈಯಿಸಿ
ದೋ ಎಂದು ಮಳೆ
ಸುರಿಸುತ್ತವೆಂಬ ಆಶಾಭಾವನೆ
ಮೂಡಿಸಿ ಸರ್ಕಾರಿ ಯೋಜನೆಗಳಂತೆ
ಕ್ಷಣ ಮಾತ್ರದಲ್ಲಿ
ಮಾಯವಾಗಿಬಿಡುತ್ತವೆ.
೧೨. ವಸಂತ
ಪ್ರಿಯಕರ ವಸಂತನ
ಆಗಮನದ ಮುನ್ನ
ಪ್ರಕೃತಿಗೆ ಹರಕುಬಟ್ಟೆ ಮುರುಕುಚಾಪೆ
ಪ್ರೇಮಿ ಆಗಮಿಸಿದರೆ
ಪ್ರಕೃತಿ ಹಸಿರು ಸೀರೆಯುಟ್ಟು
ಹೂವಾಲಂಕೃತ ಮಧುಮಗಳು
೧೩. ಟಪಾಲು
ಪ್ರೇಮ, ವಿರಹ, ನೋವು
ನಲಿವು, ಆಮಂತ್ರಣಗಳನ್ನು
ತನ್ನೊಳಗೆ ತುಂಬಿಕೊಂಡರೂ
ಹಿಗ್ಗದೆ ಕುಗ್ಗದೆ ಕೊರಗದೆ
ನಿನ್ನವನೊಡನೆ ಎಲ್ಲವನ್ನು
ಹಂಚಿಕೊಳ್ಳುವ
ನೀನೇ ನಮಗಿಂತ ಸುಖಿ
೧೪. ಕಾತುರ
ಮೋಡಗಳು ಪ್ರೇಮಿಗಳು
ಒಂದಾಗುವಾಗ
ಭುವಿಗೆ ಒಡಲಿಗೆ
ಕಾತುರ
೧೫. ಅಟ್ಟಹಾಸ
ಬಿರುಗಾಳಿಯನ್ನು ತಡೆದು
ಮರವು ಕೇಳಿತು
ನೀನೆಲ್ಲಿಗೆ ಹೋಗುತ್ತಿರುವೆ?
ಹೇಳಿತು ಬಿರುಗಾಳಿ
ಮಾನವನ ಅಟ್ಟಹಾಸ ಹತ್ತಿಕ್ಕಲು ಹೋಗುತ್ತಿರುವೆ.
೧೬. ಮುಪ್ಪು
ಯೌವ್ವನದ ನಿನ್ನ ಪ್ರೀತಿ
ದುಮ್ಮಿಕ್ಕುವ ಜಲಪಾತವಾದರೂ
ಮುಪ್ಪಿನಲಿ
ಕಣಿವೆಯ ಶಾಂತಚಿತ್ತದ ಜಲದಾರೆ
೧೭. ಹೊಕ್ಕಳು
ಮುಚ್ಚಿಡಬಹುದಾದರೂ ಮುಚ್ಚದೆ
ತೆರೆ ಸರಿಸಿ ತನ್ನ
ಸೌಂದರ್ಯ ಮೆರೆಸಲು ಸಹಕರಿಸಿದ
ಸೀರೆಯನ್ನೇ ಬೈಗುಳಲ್ಲಿ
ಸಿಕ್ಕಿಸುವ ವಿಚಿತ್ರ ಗುಣ ನಿನ್ನದು
೧೮. ಸೆಳೆತ
ಜೊತೆಗಾರ್ತಿ ತನಗಿಂತ
ಮೊದಲರಳಿದ್ದು ಕಂಡು
ಕೇಳಿತು ಹೂಮೊಗ್ಗು
“ಏಕಿಷ್ಟೂ ಆತುರ”
“ನಾನೇನು ಮಾಡಲೇ ವಯಸ್ಸು
ಬೇಡವೆಂದರೂ
ಮನಸ್ಸು ಬಿಡಲಿಲ್ಲ”
೧೯. ಮೌನ-ಕತ್ತಲು
ಪ್ರೇಮಿಸುವ
ಮನಸುಗಳು
ಮಾತಾಡುವುದು
ಮೌನದಲ್ಲಿ
ಕನಸು
ಕಲ್ಪನೆಗಳು
ಗರಿಗೆದರುವುದು
ಕತ್ತಲಿನಲ್ಲಿ
೨೦. ಸ್ಫೂರ್ತಿ
ನೀ ಸೀರೆಯುಟ್ಟು
ಘನತೆ ಸೌಂದರ್ಯ ಬೀರಿದರೆ
ದೊಡ್ಡ ಕವನಗಳಿಗೆ ಸ್ಪೂರ್ತಿ
ಮಿನಿ ಮಿಡಿ ತೊಟ್ಟು
ವೈಯಾರದಿ ಸೊಂಟ ತೋರಿದರೆ
ಮಿನಿ ಹನಿಗವನಗಳಿಗೆ ಕೀರ್ತಿ
೨೧. ತಾತ್ಸಾರ
ನನ್ನ ಬಗ್ಗೆ
ನನ್ನವಳಿಗೆಷ್ಟು
ತಾತ್ಸಾರವೆಂದರೆ
ಬಸ್ ಕಂಡಕ್ಟರ್
ಉದ್ದೇಶ ಪೂರ್ವಕವಾಗಿ
ಟಿಕೆಟ್ ಹಿಂದೆ
ಚಿಲ್ಲರೆ ಬರೆದುಕೊಡುವಷ್ಟು
೨೨. ಕ್ರಾಂತಿ
ಕ್ರಾಂತಿಯ
ಭುಗಿಲೆಬ್ಬಿಸಲು
ನಾ ಬರೆದ
ಕವನ ಪ್ರತಿಗಳು
ಚಳಿಕಾಯಿಸಲು
ಉರುವಲಾಗಿ
ಬೆಂಕಿಯ
ಭುಗಿಲೆಬ್ಬಿಸುತ್ತಿವೆ!
೨೩. ಸೇತುವೆ
ಗೆಳತಿ
ನಮ್ಮಿಬ್ಬರ ನಡುವೆ
ಒಲವೆಂಬ ಸೇತುವೆ
ಮುರಿದುಬಿದ್ದು
ಈಗ ಉಳಿದಿರುವುದು
ವಿರಹವೆಂಬ
ತಲೆಯೊಡೆದ
ಕಂಬದ ಸಾಲು
೨೪. ಕೈ-ಜೇಬು
ಕುರುಡನ ಸುಶ್ರಾವ್ಯ
ಹಾಡು ಕೇಳಿ ರೈಲೊಳಗಿದ್ದ
ಕೆಲವರು ಚಿಲ್ಲರೆ ತೆಗೆಯಲು
ಜೇಬಿಗೆ ಕೈಯಿಳಿಸಿದರೂ
ಮುಂದಿನ ನಿಲ್ದಾಣದಲ್ಲಿ
ಸಿಗರೇಟಿಗೆ ಬೇಕಾಗುತ್ತದೆಂದು
ಸುಮ್ಮನಾದರು.
ಬರಿಕೈ ಹೊರತೆಗೆದರೆ
ಕೈಗೆ ನಾಚಿಕೆಯಾಗುತ್ತದೆಂದು
ಕೈಯನ್ನು ಜೇಬಿನಲ್ಲೇ
ಬಿಟ್ಟರು.
೨೫. ಸೂರ್ಯಾಸ್ತ
ಸೂರ್ಯಾಸ್ತ ನೋಡುತ್ತಾ ಎಲ್ಲರೂ
ಮೈಮರೆತಿದ್ದರೂ
ಈ ಮಗುವಿಗೆ ಕೋಪ.
ಯಾರೋ ತನಗಿಷ್ಟವಾದ
ಸೂರ್ಯನನ್ನು ಕಾಣದ ದಾರ ಕಟ್ಟಿ
ಕೆಳಕ್ಕೆಳೆಯುತ್ತಿದ್ದಾರೆಂದು.
ಭರವಸೆಯ ಚುಟುಕುಗಳ ಲೋಕ…
ಚಂದಾ ಉಂಟು ಸರ್..
೯. ಹನಿಗವನಗಳು
ಪಾಯಸದಲ್ಲಿ ಸಿಗುವ
ದ್ರಾಕ್ಷಿ
ಗೋಡಂಬಿಗಳು
ಪತ್ರಿಕೆಯಲ್ಲಿ ಬರುವ
ಹನಿಗವನಗಳು
೨೨. ಕ್ರಾಂತಿ
ಕ್ರಾಂತಿಯ
ಭುಗಿಲೆಬ್ಬಿಸಲು
ನಾ ಬರೆದ
ಕವನ ಪ್ರತಿಗಳು
ಚಳಿಕಾಯಿಸಲು
ಉರುವಲಾಗಿ
ಬೆಂಕಿಯ
ಭುಗಿಲೆಬ್ಬಿಸುತ್ತಿವೆ!
nice honey's