ಚುಟುಕ

ಪಂಜು ಚುಟುಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಸುಷ್ಮಾ ಮೂಡುಬಿದರೆ ಅವರ ಹನಿಗವಿತೆಗಳು

ಮೌನ ಮಾತಾಗದ ಹೊರತು
ಕಂಬನಿಗಳ ತಡೆಯುವರಿಲ್ಲ
ಮಾತು ನೀನಾಗದ ಹೊರತು
ದುಮ್ಮಾನಕ್ಕೆ ಅಂತ್ಯವಿಲ್ಲ.


ಹುಸಿ ನಿರೀಕ್ಷೆಗಳ 
ಜೀವಂತಿಕೆ 
ಜೀವಂತ ಕನಸುಗಳಿಗೇಕೆ 
ಇರುವುದಿಲ್ಲ.. ?


 ಅವಳಿಗೆ ಬೆನ್ನು ಮಾಡಿ 
ಈತನೊಂದಿಗೆ ಹೊರಡಲು 
ಅಣಿಯಾದಾಗ 
ಅಮ್ಮನೆಂಬ ಅವಳ 
ಕಣ್ಣಿಂದ ಉದುರಿದ್ದು 
ನನ್ನೆಡೆಗಿದ್ದ ಅವಳ ಕನಸುಗಳಾ..?!


ಹೆಗಲ ಮೇಲೆ ಮಗಳನ್ನು 
ಅಂಬಾರಿ ಕೂರಿಸುವ 
ಇವನನ್ನು ನೋಡುವಾಗ 
ಮನೆಯ ಮೂಲೆಯ 
ಒಂಟಿ ಚಾಪೆಯ ಮುದುಕ,
ಅಪ್ಪನ ನೆನಪಾಗುತ್ತದೆ..! 


ನಾ ಸಿಕ್ಕಿ

ನಿನ್ನ ಕಾಡಿಸುವುದಕ್ಕಿಂತ

ಸಿಗದೇ
ನೀನೇ ಕಾಡಿಸಿಕ್ಕೊಳ್ಳುವುದು

ಚಂದ ಅಲ್ಲವೇನೋ..?!


ಕಣ್ಣೋಟಕ್ಕೆ , ಪಿಸುಮಾತಿಗೆ
ಕಾಡಿದ ಕನವರಿಕೆಗಳಿಗೆ
ನೀಡಿದ ಮುತ್ತುಗಳಿಗೆ 

ಅಡ್ಡಿ ಬಾರದ ಜಾತಿ,

ಮದುವೆ ಅಡ್ಡಿಯಾಯಿತಂತೆ!


ಸಂತೋಷಗಳಿಗೆ ಬಾಳಿಕೆ ಕಡಿಮೆ 
ಮುರಿದಷ್ಟು ಜೋಡಿಸುವ ಪ್ರಕ್ರಿಯೆ 
ಚಾಲ್ತಿಯಲ್ಲಿರುತ್ತದೆ.
ದುಃಖಗಳಿಗೆ ಆಯಸ್ಸು ಗಟ್ಟಿ
ಜೀವನ ಪೂರ್ತಿ ಜೊತೆಯಾಗುತ್ತೆ.

 


ಆತ್ಮ ಸಂತೋಷಕ್ಕೆ 
ಕೊನೆಯ ಪ್ರಯತ್ನ 
ಇಲ್ಲದೆ ಇರುವುದನ್ನು 
ಇದೆ ಅಂದುಕೊಳ್ಳುವುದು..!


ಅಂದು 
ಗೆಜ್ಜೆ ಸದ್ದಿನ ದಾರೀಲಿ 
ಹೆಜ್ಜೆ ಇಟ್ಟು ಬಂದವನು 
ಇಂದು
ಸಪ್ತಪದಿಯ ಹೆಜ್ಜೆಗೆ  
ಗೆಜ್ಜೆಯ ಸದ್ದಾದ…! 


ನಿನ್ನ ಕಲ್ಲೆದೆ ಕರಗಲೆಂದು
ಮತ್ತೆ ಮತ್ತೆ ಬಡಿದೆ
ನೀ ಕರಗಲಿಲ್ಲ
ಒಡೆದು ಹೋದೆ…!


ಕೊತಕೊತ ಕುದಿವ
ಒಡಲ ನೆತ್ತರಿಗೆ
ಒಂದು ತೊಟ್ಟು
ನಿನ್ನ ಪ್ರೇಮ ಜಲ ನೀಡು
ಇಂಗಿ ಬಿಡಲಿ 
ಅದರ ಪ್ರೇಮದಾಹ..!


ಚಳಿಯೆಂದು
ಮುದುಡಬೇಡ
ನನ್ನ ಕನಸುಗಳ
ಸುಟ್ಟದರೂ ನೀ
ಬೆಚ್ಚಗಿರು…!


ನಿನ್ನ ನೆನಪುಗಳ

ಹೂತಿಡಬೇಕು
ನನ್ನ ಹೃದಯ 
ಹಿಂದಿರುಗಿಸುತ್ತಿಯಾ…?


ಒಡಲ ಪ್ರೀತಿಯು 
ಹೊರಬಾರದಂತೆ
ಅದುಮದುಮಿ
ಇಟ್ಟುಕೊಂಡೆ
ಅದು ಉಸಿರುಗಟ್ಟಿ
ಸತ್ತುಹೋಯಿತು…!


ಕನಸುಗಳು ಆವಿಯಾಗಿ 
ಬಾನಂಗಳಲಿ ಹೆಪ್ಪುಗಟ್ಟಿತ್ತು 
ಕೈಗೆಟುಕದಂತೆ 
ನೀ ಬಂದೆ 
ನನ್ನೊಳಗೆ ಈಗ 
ಕರಗಿದ ಮೋಡಗಳ ಸೋನೆಮಳೆ.


ಪ್ರತಿಯೊಂದಕ್ಕೂ
ಅಂತ್ಯವಿದೆಯಂತೆ 
ನೋವುಗಳಿಗೂ
ಆ ತೆರದ್ದೊಂದು
ಇದ್ದೀತಾ?


ಮಳೆಬಿಲ್ಲಿನಂತಹ ಭಾಂದವ್ಯಕ್ಕೆ
ಈ ಆರ್ಭಟದ
ಗುಡುಗು ಮಿಂಚುಗಳಿಗಿಂತ 
ಮುಂಜಾವಿನ ತುಂತುರು ಹನಿಗಳೇ
ಸಾಕಿತ್ತು..


ಬದಲಾಯಿಸಿಕ್ಕೊಳ್ಳದ
ನಿನ್ನನ್ನು
ನೋಡನೋಡುತ್ತಲೇ
ನಾ
ಬದಲಾಗಿಬಿಟ್ಟೆ..!


ಒಳಗೊಳಗೇ
 ಅದುಮಿಟ್ಟ ನೋವುಗಳು
 ಜ್ವಾಲಾಮುಖಿಯಂತೆ 
ಸಿಡಿದು ಹೋಗಲು 
ತವಕಿಸುತ್ತಿರುತ್ತವೆ.


ನೀ ಮಾಡಿದ
ಗಾಯಕ್ಕೆ ಔಷಧಿ
ಯಾರೂ ನೀಡುತ್ತಿಲ್ಲ
ನೀನೇಯಾದರೂ ಬರುತ್ತಿಯಾ?
ಉರಿ ತಾಳಲಾಗುತ್ತಿಲ್ಲ.


ಹಿರಿಯರು ತೆಪ್ಪಗಾದರೆ 

ಕಿರಿಯರು
ಕೆಪ್ಪರಾಗುವುದರಲ್ಲಿ 
ಆಶ್ಚರ್ಯವಿಲ್ಲ…!


ಯಾರೋ ಹೇಳಿದರು

ನಾ ಗಟ್ಟಿಗಿತ್ತಿಯೆಂದು 
ಅದಕ್ಕೆ
ನನ್ನೊಳಗಿನ ಪುಕ್ಕಲಿಯನ್ನು 
ಆಗಾಗ ಒಳದಬ್ಬುತ್ತಲೇ
ಇರುತ್ತೇನೆ…!


 ನೀ ಬಂದು

ಬದುಕು ಪ್ರಕಾಶಮಾನವಾಗಿ
ಉರಿದಾಗಲೇ
ನನಗರಿವಾಗಬೇಕಿತ್ತು
ಇದು ಆರುವ ಹಣತೆ ಎಂದು..! 

 ನೋವುಗಳು ಅರೆಬೆಂದು
ಯಾತನೆ ನೀಡುವುದಕ್ಕಿಂತ
ಸುಟ್ಟು ಕರಕಲಾಗಿ ಬಿಡಲಿ
ಅವಶೇಷವೂ ಉಳಿಯದಂತೆ.   

ಯಾರೋ ಅದೇನೋ
ಹೇಳಿದರೆಂದು
ಸಾಯುವುದಿದ್ದರೆ
ನಾ ಅದೆಷ್ಟು ಬಾರಿ
ಸಾಯಬೇಕಿತ್ತು….?!


ಬದುಕಿನ ಕೊನೆವರೆಗೂ
ಜೋತೆಯಾಗಿರುತ್ತೆನೆಂದವನು
ಮನೆಯ ಪಕ್ಕದ ತಿರುವಿನವರೆಗೆ 
ಬರಲಾಗದೆ ಹೋದ..!


ಜೀವಕ್ಕೆ ಜೀವ
ಕೊಡುತ್ತೆನೆಂದಿದ್ದು 
ನಿನಗಲ್ಲ ಗೆಳೆಯಾ
ನನ್ನ ಪ್ರೀತಿಗೆ..! 


ಒಂಟಿತನವನ್ನೇ
ಉಸಿರಾಡಿದವಳಿಗೆ
ಸಂಬಂಧಗಳ್ಯಾಕೋ
ಉಸಿರುಕಟ್ಟಿಸುತ್ತವೆ…!


ಅಮ್ಮ-
ಒತ್ತಿ ಬರುವ
ದುಃಖಕ್ಕೆ
ತಡೆಗೋಡೆಯಾಗಿ
ನಿಂತವಳು.


 ವ್ಯತ್ಯಾಸ ಇಷ್ಟೇ…!
ದುತ್ತನೆ ಎದುರಾಗಿ 
ಸಿಗಿದ ನಿನ್ನ ನೆನಪುಗಳು
ಸಾಯಿಸಿತ್ತು 
ಊರಿಂದ ಬರುವಾಗ 
ಅಮ್ಮ ಕಟ್ಟಿ ಕೊಟ್ಟಕನಸುಗಳು 
ಬದುಕಿಸಿತ್ತು.


ಕನ್ನಡದ ಬರಹಗಳನ್ನು ಹಂಚಿ ಹರಡಿ

22 thoughts on “ಪಂಜು ಚುಟುಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಸುಷ್ಮಾ ಮೂಡುಬಿದರೆ ಅವರ ಹನಿಗವಿತೆಗಳು

 1. ಎಲ್ಲರ ಬಾಳಿನಲ್ಲೂ ಸಾಧ್ಯವಾಗಿರಬಹುದಾದ ನೋವುಗಳಿಗೆ ಅಕ್ಷರಗಳಲಿ ದನಿಯಾಗಿದ್ದೀರಿ.
  ಎಲ್ಲರದೂ ಆಗಿರಬಹುದಾದ ಕೆಲ ಕನಸುಗಳಿಗೆ ಚುಟುಕಲ್ಲಿ ಜೀವತುಂಬಿದ್ದೀರಿ.
  ಚುಟುಕುಗಳನ್ನು ಓದುತ್ತಿದ್ದಂತೆ ಕೆಲಕಾಲ ಕಳೆದು ಹೋದ ಅನುಭವ…!!
  ಚೆನ್ನಾಗಿದೆ. ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು 🙂  

 2.  
  ಹನಿ ಹನಿಯಾಗಿ ಹರಿದಿದ್ದರಲ್ಲಿ ಎಲ್ಲವೂ ಅಡಗಿದೆ ಗೆಳತಿ. ಮನದ ಭಾವಗಳು ನಿನ್ನೊಳಗೆ  ಮಾತುಗಳಾದಾಗ ಮಾತ್ರ ಇಂಥದೊಂದು ಹನಿಗಳು ಹುಟ್ಟಲು ಸಾಧ್ಯವೇನೋ… 
   
  ಎಲ್ಲವೂ ಇಷ್ಟವಾದವು … 

 3. ಕನಸಿನಲ್ಲೂ ಕಂಡಿರದಷ್ಟು ಪ್ರೀತಿ, ಅಕ್ಕರೆ ಜೊತೆಗೆ ನನ್ನ ಮೇಲೆ ನನಗೊಂದಿಷ್ಟು ನಂಬಿಕೆಗಳನ್ನು ಪಂಜು ನೀಡಿದೆ.. ಸದಾ ಪ್ರೋತ್ಸಾಹಿಸಿ ಬೆನ್ನುತಟ್ಟುವ ಎಲ್ಲಾ ಬ್ಲಾಗ್, ಫೇಸ್ ಬುಕ್ ಸ್ನೇಹಿತರಿಗೂ ನನ್ನ ಕೃತಜ್ಞತೆಗಳು..  🙂
  ಪಂಜುಗೆ ನಾನು ಋಣಿ..ಪಂಜುವಿನ ರೂವಾರಿ ನಟಣ್ಣನಿಗೂ.. Thank you so much..  🙂

 4. ಮೊದಲಿಗೆ ಅಭಿನಂದನೆಗಳು . ಎಲ್ಲಿಂದ ಹೆಕ್ಕಿ ತಂದಿರಿ ಶುಷ್ಮಾ  ಇಂತಹ್ಹ  ಸುಂದರ ಹನಿಗಳನ್ನ . ಭಾವಪೂರ್ಣ , ಪಕ್ವತೆ ತುಂಬಿದ ಹನಿಗವನಗಳು . ಎಲ್ಲವೂ ಸೂಪರ್ 🙂

 5. ಸರ ಸರನೆ  ಸರಾಗವಾಗಿ  ಓದಿಸಿಕೊಂಡು  ಹೋಗುವ ನಿಮ್ಮ ಚುಟುಕಗಳು  ಚೆನ್ನಾಗಿವೆ, ಬರೆಯುತ್ತಾಯಿರಿ. 

 6. Channaagide, tamma hanigavitegaLannu Panjuvina mulaka odalu anuvu maadikotta Nataraju avarigu dhanyavaadagalu.

 7. ಸುಷ್ಮ ಬರೆದ ಚುಟುಕಗಳನ್ನು ಓದಿದೆ. ತುಂಬಾ ಸೂಕ್ಷ್ಮವಾಗಿವೆ. ಬಹುಮಾನಕ್ಕೆ ಆರ್ಹವಾಗಿವೆ.
  ಒಂಟಿತನವನ್ನೇ
  ಉಸಿರಾಡಿದವಳಿಗೆ
  ಸಂಬಂಧಗಳ್ಯಾಕೋ
  ಉಸಿರುಕಟ್ಟಿಸುತ್ತವೆ…! ..ಇದು ಒಂದು..ನನಗೆ ತುಂಬಾ ಇಷ್ಟವಾಗಿದ್ದು.

 8.  

  ಅಭಿನಂದನೆಗಳು. ಅರ್ಥಪೂರ್ಣ ಚುಟುಕಗಳಿಗಾಗಿ ಧನ್ಯವಾದಗಳು 🙂 
   ನೀ ಬಂದು

  ಬದುಕು ಪ್ರಕಾಶಮಾನವಾಗಿ
  ಉರಿದಾಗಲೇ
  ನನಗರಿವಾಗಬೇಕಿತ್ತು
  ಇದು ಆರುವ ಹಣತೆ ಎಂದು..! 
   
  ನಾ ಮರೆಯದ ನಿಮ್ಮ ಚುಟುಕ 🙂

 9. ಚೆನ್ನಾಗಿದೆ. ಅಭಿನಂದನೆಗಳು ಮತ್ತು ಶುಭ ಹಾರೈಕೆಗಳು    
  ಎಲ್ಲವೂ ಸುಂದರವಾಗಿದೆ.

 10.  ಅರ್ಥವತ್ತಾಗಿವೆ….ಚೆಂದದ ಚುತುಕುಕುಗಳು   

 11. ಎಲ್ಲಾ  ಚುಟುಕಗಳೂ  ತುಂಬಾ  ಸೊಗಸಾಗಿವೆ ;  ಪ್ರತಿಯೊಂದೂ  ನಮ್ಮನ್ನು ಯೋಚಿಸಲು  ಹಚ್ಚುತ್ತವೆ.
  ನಿಮ್ಮಿಂದ ಇನ್ನೂ ಹೆಚ್ಚು ಚುಟುಕಗಳನ್ನು ನಿರೀಕ್ಷಿಸುತ್ತೇವೆ.
  ಬರೆಯುತ್ತಿರಿ; ಶುಭವಾಗಲಿ.
  ಅಭಿನಂದನೆಗಳು ನಿಮಗೆ ಹಾಗೂ ಪಂಜು ಪತ್ರಿಕೆಗೆ.
   

Leave a Reply

Your email address will not be published. Required fields are marked *