ಪಂಜು ಚುಟುಕ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದ ಈಶ್ವರ ಭಟ್ ಅವರ ಚುಟುಕಗಳು


ಬರಹ

"ಸೋತು ಬರೆಯುವ ಚಟ ನಿನಗೆ

ಎಂದು ಜರೆಯದಿರು;

ಗೆದ್ದಾಗ ಸಂಭ್ರಮಿಸುತ್ತೇನೆ

ಬರೆಯಲಾಗುವುದಿಲ್ಲ."

 

ಒಳಗಿಳಿಯುವುದು

"ಕೆಲವು ಬಣ್ಣಗಳು ಹೀಗೇ

ಗಾಢವಾಗುತ್ತಾ ಕಾಡುತ್ತವೆ.

ಕೊನೆಗೆ

ಕಪ್ಪು ಎಂದೇ ಅನಿಸುತ್ತದೆ."

 

ಕೃಷ್ಣ

"ಕಪ್ಪು?.. ನೀಲ

ಮುರಳೀಲೋಲ

ಹಗಲು ಗೊಲ್ಲ

ರಾತ್ರಿ ನಲ್ಲ!"

 

ಸು-ಭಾಷಿತ

"ಓ ಹುಡುಗಿ ದಾರಿಯಲಿ ನೆನೆನೆನೆದು ಕೃಷ್ಣನನು

ಪಡೆಯದಿರು ಸೀರೆಯನು ಉಳಿಸೆ ಮಾನ!

ಈ ಬಾರಿ ಕತ್ತಿಯನು ಬೇಡಿಕೋ ಓ ಹುಡುಗಿ

ಉಳಿಸಲಾರರು ಯಾರೂ ನಿನ್ನ ಪ್ರಾಣ!"

 

ನಾನಾಗುವುದು

"ನಾನು ಕಡಲೆಂದುಕೊಂಡಿದ್ದೇನೆ!

ಹೋಗುವ ತೆರೆಗಳೆಲ್ಲಾ

ದಡದಲ್ಲೇ ಇರಲಾರದು;

ಮತ್ತೆ ಬರಬೇಕು ಹಿಂದೆ;

ಅಹಂ ಮಡಚಿಕೊಂಡು

ನಾನು ಕಾಯುತ್ತೇನೆ."

 

ಪ್ರೇಮ

"ಪ್ರೇಮವೊಂದು ಭರವಸೆ.

ಇಂದು ತುಂಡರಿಸಿದ ಮೇಲೂ

ನಾಳೆ ಬಂದಂತೆ ಮೀಸೆ!"

 

 

ವಿಮರ್ಶೆ

"ಕಲ್ಲಿನ ಮೇಲೆ ಪದ್ಯ ಗೀಚುವಾಗ

ಯೋಚಿಸಬೇಕು,

ತಪ್ಪಾದಲ್ಲಿ ತಿದ್ದುವುದು ಕಷ್ಟ

ಹಾಗೆಯೇ,

ಹುಲ್ಲಿನ ಮೊನೆಯಲ್ಲಿ

ಪದ್ಯ ಬರೆಯಾಗುವುದಿಲ್ಲ ಎನ್ನುವುದೂ ಸತ್ಯ."

 

ಬಳಕೆ-ಬೆಳವಣಿಗೆ

"ಮರಕ್ಕೆಂದು ಅಡಿಕೆ

ಬಳ್ಳಿಗೆಂದು ವೀಳ್ಯದೆಲೆ

ಭೂಮಿಗೆಂದು ಸುಣ್ಣ

ಉಗುಳಿದ್ದು ನೆತ್ತರು."

 

ಹೆದರಿಕೆ

"ಕಂಬದ ಬಳಿ ನಿನ್ನದಿರು ಗೆಳತಿ

ನಿನ್ನ ಬಳುಕು

ಅದಕ್ಕೂ ಬೇಕೆನಿಸಿದರೆ

ಗೋಪುರಗಳು ಉರುಳೀತು."

 

ರುಕ್ಮಿಣೀ ಲೆಕ್ಕ

"ಅವಳ್ಯಾವಳೇ ಜಾಂಬವತಿ?

ಕರಡಿಯಂತೆ

ಕೃಷ್ಣನ ಗೀರಿದ್ದಾಳೆ

ನನ್ನ ಸವತಿ!"

 

ಮೃಗಯಾ

"ಬೇಟೆಗೆಂದು ಹೋದವನು

ಜಿಂಕೆಯ ಕಣ್ಣಿಗೆ ಸೋಲಬಾರದು.

ಕಣ್ಣುಗಳಿಗೆ ಸೋತವನು

ಬೇಟೆಯಾಡಲಾರ."

 

ಬೇಡಿಕೆ

"ನನ್ನ ಕಣ್ಣಿಗೊಂದಿಷ್ಟು ಮರಳು ಹಾಕಿಬಿಡಿ

ಕುರುಡನ ಹಾಗೆ ನಟಿಸಲಾಗುವುದಿಲ್ಲ;

ಕಣ್ಣು ಮುಚ್ಚುತ್ತೇನೆ."

 

ಪ್ರೀತಿಯೆಂದರೆ

"ಪ್ರೀತಿಯ ಬರೆದಷ್ಟೂ ಅರ್ಥವಾಗುವುದಿಲ್ಲ ಹುಡುಗೀ

ಯಾಕೆಂದರೆ ಇದುವರೆಗೆ ಬಯಸಿದ್ದು ಪ್ರೀತಿಯಲ್ಲ!

ಎಲ್ಲರ ಎದುರು ಹೀಗೆ ಬಿಚ್ಚಿಡಲಾಗುವುದಿಲ್ಲ ಹುಡುಗೀ

ಪ್ರೀತಿಯೆಂದರೆ ಮೊಗ್ಗು; ಮಾರಲ್ಪಡುವ ಹೂವು ಅಲ್ಲ.

 

ಸಮಸ್ಯೆ

"ಆಕಾಶದ ಚಂದ್ರನಿಗಿಂತ

ಬೀದಿದೀಪವೇ ಒಳ್ಳೆಯದು.

ಇದು ಅರ್ಥವಾಗಲು

ಅಮವಾಸ್ಯೆಯ ಕತ್ತಲು.

 

ವಿನೋದ

"ನಾನೂ ಅವಳೂ

ಕಣ್ಣಮುಚ್ಚಾಲೆ ಆಡುತ್ತಿದ್ದೆವು,

ಬಯಲಿನಲ್ಲಿ ಅಡಗಲು ಜಾಗವಿಲ್ಲ.

ಅಡಗಲು ಜಾಗವಿದ್ದಲ್ಲಿ

ಕಣ್ಣು ಮುಚ್ಚಿಕೊಳ್ಳಲು

ಅವಳು ಬಿಡುವುದಿಲ್ಲ"

 

ಅವಳ ಒಲವು

"ಹನಿಯಾಗಿ ಬರುವವಳಿಗೆ ಕಟ್ಟೆಯಗತ್ಯವು ಇಲ್ಲ

ಕೊಚ್ಚಿ ಸಾಗುವವಳಿಗೆ ಕಟ್ಟೆ ಕಟ್ಟುವುದಿಲ್ಲ

ತನ್ನತನ ತನನದಲಿ ತೆರೆಯುತ್ತ ಸಾಗುವಳು

ಎದೆಯ ಕಟ್ಟೆಯ ಮೀರಿ; ಒಲವ ನದಿಯು.

 

ಅವಕಾಶ

"ನಾನೂ ಅವಳೂ ಬಸ್ಸಿನಲ್ಲಿರಲು

ಬಸ್ಸು ಕಬ್ಬಿನ ಲಾರಿಗೆ

ಢಿಕ್ಕಿ ಹೊಡೆಯಿತು!

ಬಾಯಿ ಸಿಹಿಯಾಯಿತು."

 

ನನ್ನ-ಅವಳ ಪ್ರೀತಿ

"ನನ್ನ ಪ್ರೀತಿಯೆಂದರೆ ಅವಳ ನೆನೆಯುವುದಲ್ಲ

ಮರೆಯದೇ ಇರುವುದು

ಅವಳ ಪ್ರೀತಿಯೆಂದರೆ ನನ್ನ ಮರೆಯುವುದಲ್ಲ

ನೆನೆಯುತ್ತಿರುವುದು."

 

ನಟನೆ

"ನಟನೆ ಎಷ್ಟು ಚಂದ ನೋಡಿ!

ಒಳಗಿನ ಕಪ್ಪು

ಹೊರಗೆ ಬಿಳಿಯಾಗಿ,

ಮೆಲ್ಲ ಮೆಲ್ಲನೇ ಚಾಚಿಕೊಂಡು

ಭಾವನೆಗಳನ್ನು ಬಾಚಿಕೊಂಡು

ಕಪ್ಪಾಗುವುದು.

ಸಂಬಂಧ ಮುಪ್ಪಾಗುವುದು."

 

ಸಹಜತೆ

"ಹಾಗಲಕಾಯಿಯೊಳಗೆ ಹುಳ ಹುಡುಕಿದಾಗ

ಕಹಿಯ ಸಿಹಿ ಗೊತ್ತಾದೀತು

ನೋವಿನ ಹತ್ತಿಯ ಹಿಂಡುಗಳ ಹಿಂಜಿದರೆ

ನಲಿವು ನಮ್ಮ ಸೊತ್ತಾದೀತು!"

 

ವಿಪರ್ಯಾಸ

"ಕತೆಯ ಬರೆದನವ, ಕಾದಂಬರಿಯ ಬರೆದ

ಕೊಂಡು ಪುಸ್ತಕಗಳ, ಜನ ಓದಲಿಲ್ಲ.

ಕವನವದು ಹಾಗಲ್ಲ, ಭಾವನೆಗಳ ಅರುಹಿದ

ಓದಿದರು ಜನರೆಲ್ಲ, ಕವಿ ಬಾಳಲಿಲ್ಲ!

 

ವಿರಹ

"ಸಂಜೆ ಅನ್ನುವುದು ಬಹಳ ನೋವು

ಇರುಳ ಇರಿತಕ್ಕೆ ಬೆಳಕ ಸಾವು!

ಅವಳೂ ಇರದಿರೆ ಇಲ್ಲಿ

ಕಾಯುವುದು ಬಲು ಬೇಗೆ

ಹೇಗೆ ಬಂದೀತಿಲ್ಲಿ ನಗೆಯ ಹೂವು?

 

ಸಂಗತಿ

"ಹತಾಶೆ, ನೋವು ಕವನವಾಗುತ್ತದೆ,

ಹೇಳಿಕೊಳ್ಳಲು ಯಾರೂ ಇರುವುದಿಲ್ಲ.

ಖುಷಿ, ನಗು ಹಂಚಿಹೋಗುತ್ತದೆ

ಹೇಳಲು ಏನೂ ಉಳಿಯುವುದಿಲ್ಲ."

 

ಉಪದೇಶ

"ನೋಡು ಪುಟ್ಟೀ,

ಆ ನೀಲಗಿರಿಯ ಮರ

ತೊಗಟೆ ಕಳಚಿ ಶುಭ್ರ!

ನೀನೇಕೆ ಹಳೆಯ ಕಹಿಯನ್ನು

ಮರೆಯುವುದಿಲ್ಲ?

ಹಾಗೆಯೇ

ತೊಗಟೆ ಕಳಚಿದ್ದು

ನೀನು ಮೇಲೇಳುವುದಕ್ಕೆ

ಗೊಬ್ಬರ."

 

ಬದಲಾವಣೆ

"ಕಟುಕ ಬರೀ ಕತ್ತರಿಸುತ್ತಾನೆ

ಕೊಲ್ಲುತ್ತಾನೆ ಎಂದುಕೊಂಡೆ,

ಕಟುಕನ ಮಗ ನೆತ್ತರ ಕಲೆಯನ್ನು

ತೊಳೆಯುವುದನ್ನ ನೋಡಿದೆ."

 

ತೊರೆದವರಿಗೆ

"ಬಿಟ್ಟು ಹೋದಮೇಲೆ ಚಿಂತಿಸಬೇಡಿ,

ಮರುಗಬೇಡಿ ; ಅವರು ಯಾರು?

ವಿಸರ್ಜನೆ ದೇಹಕ್ಕೆ ಒಳ್ಳೆಯದೇ

ತೊಳೆದುಕೊಳ್ಳಿ, ಬಳಸಿ ನೀರು!"

 

ಸಕಾರಣ

"ಬಿದ್ದಮೇಲೆ ಎದ್ದು

ಛೇ ಒಂದು ಘಳಿಗೆ

ತಡವಾಗಬಾರದಿತ್ತೇ ಪ್ರಯಾಣ?

ಅಪ್ಪನ ನೆನಪಾಯಿತು,

ಉಳಿದಿರಲಿಲ್ಲ ಕಾರಣ!"

 

ಸ್ವವಿಮರ್ಶೆ

"ಇಬ್ಬರೂ ಬಿದ್ದೆವು; ನೆನಪಿದೆ ನನಗೆ

ನೀನು ಮುಂಡಾಸು ಹರಿದು

ಕಾಲ ಗಾಯಕ್ಕೆ ಕಟ್ಟಿ ಮುನ್ನಡೆದೆ.

ನಾನು ಗಾಯವನ್ನು ಹಾಗೇ ಬಿಟ್ಟು

ಮುಂಡಾಸು ಕಟ್ಟಿ ಕೂತಿದ್ದೇನೆ."

 

 

ಕೋರಿಕೆ

"ಒಂದಿಷ್ಟು ನಗೆಯೆನಗೆ ಬಿಟ್ಟು ಹೋಗೇ ಗೆಳತಿ

ಸತ್ತಾಗ ಕಣ್ಣು ನೋಡದು, ಕಿವಿಯೂ ಇರದು

ಬರಿಯ ಎಲುಬು ಮತ್ತೆ ಹಲ್ಲುಗಳು ಉಳಿದೀತು!"

 

ಕನ್ನಡವೇ ನುಡಿ

"ಕನ್ನಡಕ್ಕೆಂದು ನೀ ಕೊಲೆ ಮಾಡಬೇಕಿಲ್ಲ

ಕನ್ನಡವ ಕಂಡೊಡನೆ ನಲಿದಾಡು ಸಾಕು.

ಕನ್ನಡದಿ ಮಾತಾಡು, ಕನ್ನಡದಿ ನೀನಾಡು

ಕನ್ನಡವನುಳಿಸಲು ಬೇರೇನು ಬೇಕು?"

 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

10 Comments
Oldest
Newest Most Voted
Inline Feedbacks
View all comments
Hipparagi Siddaram
Hipparagi Siddaram
11 years ago

ಎಲ್ಲಾ ಪ್ರಕಾರದ ಭಾವನೆಗಳ ಸಂಗಮದಂತಿವೆ…short & sweet ಆಗಿವೆ….

Bhagya Bhat
11 years ago

ಚೆನ್ನಾಗಿದೆ ಚುಟುಕುಗಳು ..ಇಷ್ಟವಾಯಿತು

Prajwal Kumar
11 years ago

ಬಹಳ ಚೆನ್ನಾಗಿವೆ 🙂

Santhoshkumar LM
11 years ago

Good…Liked all of them!!

parthasarathyn
11 years ago

ಎಲ್ಲವು ಚೆನ್ನಾಗಿದೆ  ಆದರೆ ಇದು ಬಹಳ ಚೆನ್ನಾಗಿದೆ
 
ಸೋತು ಬರೆಯುವ ಚಟ ನಿನಗೆ
ಎಂದು ಜರೆಯದಿರು;
ಗೆದ್ದಾಗ ಸಂಭ್ರಮಿಸುತ್ತೇನೆ
ಬರೆಯಲಾಗುವುದಿಲ್ಲ.”

sharada moleyar
sharada moleyar
11 years ago

 ..ಇಷ್ಟವಾಯಿತು

kamalabelagur
kamalabelagur
11 years ago

ಸಂಜೆ ಅನ್ನುವುದು ಬಹಳ ನೋವು
ಇರುಳ ಇರಿತಕ್ಕೆ ಬೆಳಕ ಸಾವು!
ಅವಳೂ ಇರದಿರೆ ಇಲ್ಲಿ
ಕಾಯುವುದು ಬಲು ಬೇಗೆ
ಹೇಗೆ ಬಂದೀತಿಲ್ಲಿ ನಗೆಯ ಹೂವು? ..ಇಷ್ಟವಾಯಿತು

gaviswamy
11 years ago

ella chutukagalu ishtavadavu.

ಸತ್ಯಚರಣ ಎಸ್.ಎಮ್.

ಕ್ಷಮಿಸಿ.. ಓದಲಾಗುತ್ತಿಲ್ಲ.. ಫಾಂಟ್ ರೆಂಡರಿಂಗ್ ಸಮಸ್ಯೆ ಇದ್ದಂತಿದೆ. ದಯಮಾಡಿ.. ಎಲ್ಲ ಪದ್ಯದ ಸಾಲುಗಳನ್ನ ಮತ್ತೊಮ್ಮೆ ಯುನಿಕೋಢ್‌ಗೆ ಪರಿವರ್ತಿಸಿ ಹಾಕಲು ಸಾಧ್ಯವೇ ಪ್ರಯತ್ನಿಸಿ..!
 
ನಿಮ್ಮೊಲವಿನ,
ಸತ್ಯ.. 🙂

ಸಂಜಯ್ ಮೊವಾಡಿ
ಸಂಜಯ್ ಮೊವಾಡಿ
11 years ago

nice wordings* superb!!

10
0
Would love your thoughts, please comment.x
()
x