ರೋಷ
ಗಾಂಧಿಯಬುರುಡೆಯ ಮೇಲೆ
ಕೂತು ಕಾಗೆಯೊಂದು
ಕುಕ್ಕುತ್ತಿತ್ತು ರೋಷದಲಿ
ಬಳಿಸಾರಿ ಕೇಳಿದೆ ಏತಕ್ಕೆಂದು.
“ಮೂರ್ಖನಿವನು, ಗುಡಿಸಿಬಿಟ್ಟ
ಕೊಳಚೆ ಪ್ರದೇಶವನು
ಸಾಯಬೇಕಾಗಿದೆ ಹಸಿವಿನಿಂದ ನಾವಿನ್ನು”,
ಎಂದಿತು ನೊಂದು.
ಯಾರಿಗೆ?
ದುಂಬಿಗಳೆಲ್ಲಾ
ಮಲಗಿದ ಮೇಲೆ
ರಾತ್ರಿರಾಣಿ ಮೆಲ್ಲಗೆ
ವದ್ದೆ ಕನಸುಗಳ
ಕಂಪ ಚೆಲ್ಲಿ
ಕರೆವುದಾದರೂ
ಯಾರಿಗೆ?
ದೃಷ್ಟಿ
ಬೈಬಲ್ ಪ್ರಾರ್ಥನೆ ನಡೆಯುತ್ತಿತ್ತು…
“ಒಂದು ಹಣ್ಣಿಗಾಗಿ ದೇವನನ್ನುಮರೆತನೇ ಆಡಂ!”
ಎಂದ ಮಗ.
“ಅಲ್ಲ, ಹೆಣ್ಣಿಗಾಗಿ”, ಸಮಜಾಯಿಸಿದ ತಂದೆ.
“ತಪ್ಪು…ಜಗದ್ರಕ್ಷಕನ ಜನನಕ್ಕಾಗಿ”
ಸರಿ ಪಡಿಸಿದರು
ವೃದ್ದ ಪಾದ್ರಿ.
ಹೀಗೇಕೆ?
ರವಿ ದೂರದಿ ಮೇಲೇರುವಾಗ
ಮುಖವರಳಿಸಿ ಎದೆ ಬಿಚ್ಚಿ ನಿಲ್ಲಲು ನಾಚದಾಕೆ
ಈ ಕಮಲೆ
ರವಿ ಜಾರುವಾಗ
ಮೆಲ್ಲಗೆ ತೆಕ್ಕೆಗೆ
ಮುಖ ಮುಚ್ಚಿ
ಮಲಗಿಬಿಡುವುದೇಕೆ?
ಫಲ
ಪ್ರಿಯಕರ…
ನಿನ್ನ ಆಲಿಂಗನ,
ಅಭಿಷೇಕದ ಫಲ
ಇಂದು ನನ್ನ
ಒಡಲ ತುಂಬಾ
ನಿನ್ನದೇ ಪ್ರತಿಬಿಂಬ.
ಆಧುನಿಕತೆಯ ಪರಿಣಾಮ
ಊರಿಗೆ ಬಂದವಳು
ನೀರಿಗೆ ಬರುತ್ತಾಳೆಂದು
ಕಾದದ್ದೇ ಕಾದದ್ದು.
ತಡವಾಗಿ ತಿಳಿಯಿತು
ಅವರ ಮನೆಯಲ್ಲೇ
ಬೋರ್ವೆಲ್ ತೋಡಿಸಿದ್ದಾರೆಂದು!
ಪ್ರೀತಿ ಹುಟ್ಟುವ ಸಮಯ
ಹೃದಯಗಳು ಮೀಟದೆ
ಭಾವನೆಗಳು ಕೆರಳದೇ
ಪ್ರೀತಿ ಹುಟ್ಟದೇ ಹುಡುಗಿ
ಬರಿದೇ ಮೊರೆಯಿಡಬೇಡ
ಕಾರಣ
ದಿಕ್ಕು ದಿಕ್ಕುಗಳ ದಾಟಿ
ಹಾರುತ್ತಿರುವೆಯಲ್ಲ
ಎಲ್ಲಿಗೋ ಗೆಳೆಯ?
ಬಡಿದೆಬ್ಬಿಸಲು
ಇಳೆಯ ಬಿಸಿಯಪ್ಪುಗೆಯಲಿ
ಬೆಚ್ಚಗೆ ಮಲಗಿರುವ
ರವಿಯ.
ಹುಡುಕಾಟ
ನೆನ್ನೆ ದಿನ
ಕಾಣೆಯಾಗಿದ್ದ ರವಿಯ
ಹುಡುಕಿಕೊಂಡು
ದಿಗಂತದಾಚೆ ಹಾರುತ್ತಿದ್ದವು
ಹಕ್ಕಿಗಳು.
ಪಾಪ, ಅಂತೂ ಇಂತೂ
ಹುಡುಕಿ ತಂದವು
ಕಳೆದುಹೋಗಿದ್ದ ರವಿಯ
ಹತ್ತರಳುವ ಮುನ್ನವೇ ಇಂದು.
ಆಸೆ
ದೇವರ ಗುಡಿಗಿಂತ
ಹೆಣ್ಣಿನ ಮುಡಿಗಿಂತ
ದುಂಬಿಯ ಕಾಲಡಿಯ
ಜೀವನವೇ ಆನಂದಮಯವೆನ್ನುವ
ಹೂವಿನ ಮಾತಿಗೆ
ಯಾರೇಕೆ
ಅಲ್ಲಗಳೆಯ ಬೇಕು?
ಕಾವ್ಯದ ಹುಟ್ಟು
ಅನುಭವದ ಹಕ್ಕಿಗೆ
ಕನಸುಗಳ ಪುಕ್ಕ ಹುಟ್ಟಿ
ಭಾವನೆಗಳ ಮರದಮೇಲೆ
ಅದು ಗೂಡು ಕಟ್ಟಿ
ತತ್ತಿ ಇಟ್ಟಿ
ನೆನಪುಗಳ ಹೇರದ ಮುನ್ನ
ಕವನ ಹುಟ್ಟದೋ ಹುಡುಗ
ಬರಿದೇ ಗೀಚಬೇಡ
ಬೆಳದಿಂಗಳ ಹುಡುಕಾಟ
ಚುಕ್ಕಿ ಚಂದ್ರಮರು
ಕತ್ತಲೆಯ ಗರ್ಭದಲ್ಲೇ ಹುಟ್ಟುವುದೆಂಬ
ಸತ್ಯವರಿತಾಗಿನಿಂದ
ಮಾನವ ತಾನೂ ಸಹ
ಕತ್ತಲೆಯ ಮುಸುಕೆಳೆದು
ಹುಡುಕತೊಡಗಿದ
ಬೆಳದಿಂಗಳನು.
ಸೂರ್ಯ
ಮಡಿಲ ತುಂಬಾ ಚುಕ್ಕಿ ಚಂದ್ರಮರ
ಹೊತ್ತ ಮುಗಿಲ ಮಾತೆಯ
ಮುಖದ ಮೇಲೆ
ಆ ದೇವನೊತ್ತಿದ
ಮುತ್ತೈದೆ ಸೌಭಾಗ್ಯದ ಮುದ್ರೆ.
ಹೀಗೊಂದು ವಿಜಯೋತ್ಸವ
ಆಚಾರ್ಯರ ಮನೆಯ
ಮೂಲೆಯಲಿ
ಧೂಳು ಕಕ್ಕುತ್ತಾ
ಮಲಗಿದ್ದ ಮನು ಸಂಹಿತೆಯ
ಹಾಳೆಗಳ ತಿಂದು
ಗೆದ್ದಿಲುಗಳು
‘ಜಾತ್ಯಾತೀತತೆ’ಯ ವಿಜಯೋತ್ಸವ ಆಚರಿಸಿದವು.
ಪ್ರಶ್ನೆ
ನೀರೆಯಾದರೇನು
ಹಾಲಿನ ಬದಲಿಗೆ
ನೀರೇ
ಮಾರಬೇಕೇನು?
ಶಾಸ್ತಿ
ಕಾರಿಗೆ
ಮದುವೆಯಾದ
ತಪ್ಪಿಗೆ
ಪ್ರತಿದಿನವೂ
ಸಾರು ಮುದ್ದೆಯೇ
ಅಡಿಗೆ.
ವ್ಯತ್ಯಾಸ
ಸಾವಿರದೊಂದು ಬರೆದವ
ಕವಿಯಾದ
ಸಾವಿರದ ಒಂದು ಬರೆದವ
ಸಂತನಾದ.
ಪ್ರತೀಕಾರ
ನೆನ್ನೆ ಬೈಗಿನಲಿ
ದಿಗಂತದತ್ತಹಾರುತ್ತಿದ್ದ ಹಕ್ಕಿಗಳು
ಅದೆಷ್ಟು ಕಾಡಿದವೋ
ರವಿಯ ರಾತ್ರಿಯೆಲ್ಲಾ.
ನುಸುಕಿನಲ್ಲೇ ಇಂದು
ಅಟ್ಟಿಸಿಕೊಂಡು ಬಂದಿದ್ದ
ರವಿ ಆ ಹಕ್ಕಿಗಳ
ನಿದ್ರೆ ಮಾಡ ಗೊಡದೆ.
ಹುಡುಕಾಟ
ಹುಡುಕಿದೆ ನಿನ್ನ
ಅಲ್ಲಿ, ಇಲ್ಲಿ
ಲೋಕದಾ ಸಂದಿಗೊಂದಿಗಳಲ್ಲಿ.
ಹುಚ್ಚ ನಾನು
ಮರೆತೇ ಹೋಗಿದ್ದೆ
ನೀನಡಗಿ ಕುಳಿತಿದ್ದು
ನನ್ನದೇ ಹೃದಯದಲಿ.
ರಚನೆ
ದೇವರು ಮಾನವನನ್ನು
ಮಣ್ಣಿನಿಂದ
ಸೃಷ್ಟಿಸಿ
ಜೀವ ತುಂಬಿದ
ಅದೇ ಮಾನವ ದೇವನನ್ನು
ಮಣ್ಣಿನಿಂದ ರಚಿಸಿ
ಬಣ್ಣ ತುಂಬಿದ.
ಮದ್ದು
ನನ್ನವಳಿಗೆ ಹೇಳಿದರಂತೆ ಯಾರೋ
ಚುಂಬನವು ತಲೆನೋವಿಗೆ ಮದ್ದೆಂದು.
ಅಷ್ಟೇ!!
ನೆನ್ನೆ ನಾನೂ ಹೋಗಿದ್ದೆ
ಆಸ್ಪತ್ರೆಗೆ
ತುಟಿ, ಹಲ್ಲು, ಕೆನ್ನೆಗಳೆಲ್ಲಾ
ನೋವೆಂದು.
ಗುಟ್ಟು
ಹುಡುಕುವಾತನೂ
ಹುಡುಕಿಸಿಕೊಳ್ಳುವವನೂ ಒಬ್ಬನೇ ಎಂಬ
ಮಾತಿರುವಾಗಲೂ
ಹುಡುಕಾಡದೆ ನೀನೆಂದೂ
ಸಿಕ್ಕವನಲ್ಲ ಎಂಬುದರ
ಗುಟ್ಟೇನು?
ಭಕ್ತಿ
ಒಂದಿರುವುದು ಎರಡಾಗಿ
ಆ ಎರಡು ಒಂದಾಗದ ಹೊರತು
ಪ್ರಾರ್ಥನೆ ಸಲ್ಲದೋ
ಮೂರ್ಖ
ಬರಿದೇಕಿರುಚಬೇಡ
ವಿಪರ್ಯಾಸ
ಕಿವಿಯ ಬಳಿಯೇ ಬಂದು
ಲಾಲಿ ಹಾಡುವ
ಸೊಳ್ಳೆಗೆ
ಸಾವೇ
ಸಂಭಾವನೆ!!
ಉದ್ದೇಶ
“ಸಾವಿನ ಸಂಗದಲ್ಲೇ
ಜೀವನದ ಅರ್ಥ”
ಎಂಬ ತತ್ವವ
ಹರಡಲೆಂದೇ
ಹುಟ್ಟುವುದು
ಪತಂಗಗಳು.
ಎಲ್ಲಾ ಹನಿಗವನಗಳೂ ಚೆನ್ನಾವಿವೆ.
ಈ ಸಾಹೇಬರು ಈಗಾಗಳೆ ಪ್ರಜಾವಾಣಿಯಲ್ಲಿ ವಿಶೇಷ ಚರ್ಚೆ ಮಾಡಿ ಧೂಳೆಬ್ಬಿಸಿದವರು ಇವರ ವಿಚಾರಗಳೆ ಬೇರೆ ಉತ್ತಮ ಚುಟುಕುಗಳು
ಸಿಹಿಯಲ್ಲಿ ಯಾವ ಸಿಹಿ ಇಷ್ಟ? ಜಹಾಂಗೀರ್? ಮೈಸೂರು ಪಾಕು ? ಲಡ್ಡು ? ಹಲ್ವ ? ಖೀರು ? ಎಂದರೆ ಹೇಗೆ ಉತ್ತರಿಸಲು ತಡವರಿಸುತ್ತೆವೋ ಹಾಗಿದೆ ಇಲ್ಲಿನ ಚುಟುಕಗಳ ಓದಿನ ನಟರಾದ ಮನೋ ಸ್ಥಿತಿ …!!
ಅಬಬ್ಬಾ ಎಲ್ಲವೂ ಚೆನ್ನ ಕೆಲವು ಅತಿ ಇಷ್ಟ ಆದವು ..
ಸಮಾಧಾನಕರ ಬಹುಮಾನ ಪಡೆದ ಬರಹ ಹೀಗಿದ್ದರೆ ಮೊದಲ ದ್ವಿತೀಯ ತೃತೀಯ ಬಹುಮಾನ ಪಡೆದ ಬರಹಗಳು ಹೇಗಿರಬೇಡ ? ಅಲ್ಲದೆ ಆಯ್ಕೆ ಮಾಡಬೇಕಾದ ಸಂದರ್ಭದಲ್ಲಿ ತೀರ್ಪುಗಾರರಿರ್ಗೂ ಸವಾಲಾಗಿದ್ದಿರ್ಬೇಕು ಅಲ್ವ
ಚುಟುಕವಿಗಳಿಗೆ ನನ್ನಿ
ಶುಭವಾಗಲಿ …
\।/
ಸೂಪರ್…
ಎಲ್ಲ ಚುಟುಕುಗಳು, ಒಂದಕ್ಕಿಂತ ಒಂದು, ನಾಮುಂದು ತಾಮುಂದು ಎನ್ನುವಂತಿವೆ. ಕೆಲವು ಚಾಟಿ, ಕೆಲವು ಚೂಟಿ… ಇನ್ನು ಕೆಲವು ವಿಜಯೋತ್ಸವ…
ಒಟ್ನಲ್ಲಿ ನಂಗಿಷ್ಟೇ ಹೇಳಕ್ ಉಳ್ದಿರೋದು: ಸೂಪರ್…