ಕವಿತೆ ಹುಟ್ಟಿದ್ದು :
ಭಾವಗಳು ಬತ್ತಿ ಹೋದಾವೆಂದು
ಪದೇ ಪದೇ
ನಿನ್ನೆದುರಲ್ಲೇ ಕುಳಿತೆ.|
ನೀನು ಕಣ್ಣು ಮಿಟುಕಿಸಿ
ಆಶ್ಚರ್ಯ ತೋರಿದಾಗಲೆಲ್ಲ
ರೂಪುಗೊಂಡಿದ್ದೇ ಈ ಕವಿತೆ ||
ತಾಯಿ :
ನಿನ್ನ ಮನದ ಹರಹು ಕಂಡದ್ದು
ವಿಶಾಲ ಸಾಗರದೊಡಲಲ್ಲಿ |
ವಿಶಾಲ ಸಾಗರದಷ್ಟು ಪ್ರೀತಿ ಉಂಡಿದ್ದು
ತಾಯೇ ನಿನ್ನಯ ಮಡಿಲಲ್ಲಿ ||
ನೀ ಹೋಗುವಾಗ..
ಮರಳ ದಂಡೆಯಲಿ
ಗೆಜ್ಜೆ ಪಾದಗಳ
ಹೆಜ್ಜೆ ಗುರುತುಗಳ ಅಳಿಸಿದೆ |
ಎನ್ನ ಹೃದಯದಲಿ
ಹಚ್ಚೆ ಮೂಡಿಸಿ
ಏಕೆ ಪ್ರೀತಿಯ ಬೆಳೆಸಿದೆ? ||
ಪ್ರೇಮಿ :
ಒಂದು ಹನಿ ಕಣ್ಣೀರು
ಕೆಳಗೆ ಬಿದ್ದರೂ
ಬರಡಾದೀತು ಭೂಮಿ |
ನಿನ್ನ ಕಣ್ಣೀರ
ಸಹಿಸಿಕೊಳ್ಳಲಿ ಹೇಗೆ
ನಾನು ನಿನ್ನ ಪ್ರೇಮಿ ||
ಭಗವಂತನಿಗೆ
ನಾನು ನಿನ್ನ ಸೃಷ್ಟಿಯಲ್ಲ
ಎಲ್ಲ ನಿನ್ನದೇ |
ನನ್ನ ತನವೇ ನನ್ನ ಅರಿವು
ಭಾವ ನಿನ್ನದೇ ||
ಮುದ್ದು (ಮುತ್ತು) :
ಎರಡು ಹೃದಯಗಳ
ಅಂತರಾತ್ಮಗಳ
ಎದೆ ಬಡಿತದ ಸದ್ದು |
ಮಾತಿಗೆ ನಿಲುಕದ
ಅಧರಾಮೃತಗಳ
’ಕೆನ್ನೆಪ್ರಮಾಣ’ವೇ ಮುದ್ದು ||
ಗಾಳಕೆ ಬೀಳೋದ್ಯಾವಾಗ?
ಹೃದಯಾಂತರಾಳದ
ಪ್ರೀತಿ ಗಂಗೆಯಲಿ
ನೀನೊಂದು ಕಳ್ಳ ಮೀನು |
ಗಾಳ ಹಾಕಿ
ಕುಳಿತಿರುವೆ ತಟದಲ್ಲಿ
ಬೀಳೋದ್ಯಾವಾಗ ನೀನು? ||
ಮುತ್ತಿನ ಗಮ್ಮತ್ತು :
ಅಂದು ಕಾದಿರುಳ ಸಂಜೆಯಲಿ
ಬಿಸಿಯುಸಿರ ಬಿಗಿಹಿಡಿದು
ನೀ ಕರೆದು ನನಗಿತ್ತ ಮುತ್ತು |
ಒಂದು ಹತ್ತಾಗಿ ಹತ್ತು ನೂರಾಗಿ
ನೂರು ಸಾವಿರವಾಗಿ
ಮಗನು ಕೈಗೆ ಬಂದಾಗಲೇ ಗೊತ್ತು ||
ಕರೆ :
ಬಾ ಗೆಳತಿ ಬೇಗ
ಬಂದು ಬಿಡು ಎನ್ನ
ಬೆಚ್ಚನೆಯ ಎದೆಯ ಮೇಲೆ |
ಗೋಧೂಳಿ ಜವನಿಕೆ
ಜಾರಿ ಹೋಗುವ ಮುನ್ನ
ಇರಲೊಂದು ತುಂಟ ಲೀಲೆ ||
ನಿನ್ನದೇ ಚಿತ್ರ :
ನನ್ನ ಮನದೊಳ
ಅಮೂರ್ತ ಭಾವನೆಗೆ
ಭಾಷೆಯ ವೇಶ ತೊಡಿಸಲೇ? |
ಕಣ್ಣೊಳಗಿರುವುದು
ನಿನ್ನದೇ ಚಿತ್ರ
ಅದನೆ ಪದೆ ಪದೆ ಬಿಡಿಸಲೇ? ||
ನೀನಿಲ್ಲದ ಸಂಜೆ :
ನನ್ನ ಬಾಳಲ್ಲಿ
ನಿನ್ನ ಆಗಮನ
ಅತಿ ಮಧುರ ಮುಸ್ಸಂಜೆ |
ನೀನಿಲ್ಲದಾ ಹೊತ್ತು
ಅನಿಸುವುದೊಂದೇ
ಈ ಸಂಜೆಯೂ ಬಂಜೆ ||
ನಿನಗಾಗಿ :
ಕನಸಲಿ ಬಂದು ಕಾಡಿದ್ದಕ್ಕೆ
ಕ್ಷಮಿಸಿಬಿಡು ಈಗ |
ನಿನಗಾಗೀನೇ ಕಾದು ಇಟ್ಟಿರುವೆ
ಈ ಹೃದಯದ ಜಾಗ ||
ಪ್ರೀತಿ ಮಧುಮೇಹ ರೋಗಿ :
ನೀ ಕೊಟ್ಟ ಮುತ್ತು
ಕಸಿದುಕೊಂಡವ ನಾನು
ಅಧರಕ್ಕೆ ಬಾಗಿ ಬಾಗಿ |
ನಿನ್ನ ಮುತ್ತ ಸಿಹಿ
ಎಷ್ಟೆಂದು ಹೇಳಲಿ
ನಾ ಪ್ರೀತಿ ಮಧುಮೇಹ ರೋಗಿ ||
ನಾವು-ನಮ್ಮ ಪ್ರೀತಿ :
ಜೀವನದ ಗಾಡಿಯಲಿ
ಸಂಬಂಧದ ಗಾಲಿಯಂತೆ
ನಾವಿಬ್ಬರು |
ನಮ್ಮ ಪ್ರೀತಿ ಯಾರೆಷ್ಟೇ
ಉಪ್ಪು ಖಾರ ಹಾಕಿ ಎಳೆದರೂ
ತುಂಡಾಗದ ರಬ್ಬರು ||
ಹೆಸರು ಬೇಕೇ? :
ನೀನು ಶ್ಯಾಮನಾಗಬೇಕಿಲ್ಲ
ನಾನು ರಾಧೆಯಾಗುವುದಿಲ್ಲ..
ನಮ್ಮ ನಡುವಿನ ಸಂಬಂಧಕ್ಕೆ
ಹೆಸರಿಡುವ ಗೋಜಿಲ್ಲ. |
ಬದುಕಿಗೆ ಸಾಕಷ್ಟು ಪ್ರೀತಿ ಇದೆಯಲ್ಲ
ಪ್ರೀತಿಯಲಿ ಒಂದಾಗಿ ಬದುಕೋಣ ನಲ್ಲ ||
ನೀ ಸಿಕ್ಕಿದ ಮೇಲೆ :
ಇಷ್ಟು ದಿನ
ಬರಡು ಬರಡಾಗಿಯೇ
ಬದುಕು ಬಸಿದು ಹೋದೀತೆಂಬ ಭಯ |
ನೀನು ಸಿಕ್ಕಿದೆ ನೋಡು..
ನಿನ್ನೆದೆಯ ನಯದಲ್ಲಿ
ಹನಿ ಹನಿಯಾಗಿ ದಕ್ಕಿದ್ದೆಲ್ಲವೂ ಜಯ ||
ಓಲೈಕೆ..
ಬಾ ನನ್ನ ಒಲವೇ
ಎದೆ ಗೂಡಿನೊಳಗೆ
ನನ್ನ ಮೇಲೆ ಏಕೆ ಮುನಿಸು |
ನೀನಿತ್ತ ಹೂಮುತ್ತು
ಅರಳಿ ಎನ್ನೆದೆಯೊಳಗೆ
ಉಲ್ಲಾಸ ನಿತ್ಯ ಸೊಗಸು ||
ಗೆಳತಿ ನಿನಗಾಗಿ :
ಹರಿಸುವೆನು ನೆನಪ ಪನ್ನೀರು
ಪ್ರೀತಿ ಬಾಡದಿರಲೆಂದು |
ಸುರಿಸುವೆನು ಹೂಮಳೆಯ
ಮನಸು ನೋಯದಿರಲೆಂದು |
ಮಾತ ಜೋಗುಳ ನಿನಗೆ
ಮುಖ ಬಾಡದಿರಲೆಂದು |
ನನ್ನೊಲವ ಹಾರೈಕೆ
ಎಂದು-ಎಂದೆಂದೂ.. ||
ನಿನ್ನ ನೆನಪು :
ನಿನ್ನೊಲುಮೆ ನನ್ನೆದೆಗೆ
ಪ್ರೀತಿ ಚೂರಿಯ ಹಾಕಿ
ನನ್ನೊಲವೇ ನೀನೆಲ್ಲಿ ಮಾಯ |
ನಿನ್ನ ನೆನಪಿನ ಕೀವು
ಅಲ್ಲಲ್ಲೆ ಹುಣ್ಣಾಗಿ
ರಕ್ತ ರಹಿತ ಗಾಯ ||
ನಿನ್ನ ಕನಸಿನ ಹುಡಿ :
ತುಂಬಾ ಸಲ ನೀನು
ಓಡಾಡಿ ಹೋದ
ಜಾಗವೀ ಹೃದಯದಾ ಗುಡಿ |
ನಾನಿಲ್ಲಿ ತಡಕಾಡಿ
ಪ್ರತೀ ಬಾರಿ ಗಳಿಸಿದ್ದು
ನಿನ್ನದೇ ಕನಸಿನಾ ಹುಡಿ ||
ಮನಸು ಮೂರಾಬಟ್ಟೆ.
ಮನಸುಗಳಾ ಅಡ್ಡದಲ್ಲಿ
ಬಯಕೆ ಕಾಡಿ ಕೋಪವಾಗಿ
ನನ್ನ ಮೇಲೆ ಸಿಟ್ಟಿನಿಂದ ಪಸರಿಕೊಂಡಿದೆ |
ಬಿಟ್ಟು ಬಿಡದ ಜಿಡ್ಡಿನಲ್ಲಿ
ಸುಖದ ರಾಡಿ ಪಾಪವಾಗಿ
ಅಡ್ಡ ಗೋಡೆ ದೀಪದಂತೆ ಹಬ್ಬಿಕೊಂಡಿದೆ ||
ನನ್ನ ಮುಂಜಾವಿನಲಿ :
ನಿದ್ದೆಗಣ್ಣಿಂದ ಕಣ್ಣು ತೆರೆವಾಗ
ನೀನೇ ಪ್ರಥಮ ಹೊತ್ತು |
ಪ್ರೀತಿ ನಿಟ್ಟುಸಿರು ಹೊತ್ತು ಬರುವಾಗ
ದಕ್ಕಿದ್ದೆಲ್ಲವೂ ಮುತ್ತು ||
ತವಕ :
ಮನೆಯ ಮಲ್ಲಿಗೆಯ ಗುಬ್ಬಿ ಗೂಡಲ್ಲಿ
ಎರಡೇ ಎರಡು ಬೆಳ್ಳಿ ಮೊಟ್ಟೆ |
ತಲೆಯೆದೆಗಾನಿಸಿ ಕೇಳಿದಳಾಕೆ
ಮರಿಯಾಗೋದ್ಯಾವಾಗ? ||
ಮನದ ಬೆಚ್ಚನೆಯ ಒಲುಮೆ ಬೀಡಲ್ಲಿ
ಹೇಳದೆಯೆ ಲಗ್ಗೆ ಇಟ್ಟೆ |
ನನ್ನೆದೆಯ ತುಂಬ ತುಂಬಿರುವ ಪ್ರೀತಿ
ನಿನಗರಿವಾಗೋದ್ಯಾವಾಗ ? ||
ಧನ್ಯವಾದ:
ಕಠುವಾಗಿ ಎನ್ನ ನೀ
ಬೈದು ಹೋದರೂ
ಗೆಳತಿ ಧನ್ಯವಾದ.. |
ಬೆಳಿಗ್ಗೆ ಬೆಳಿಗ್ಗೇನೇ ಬಂದು
ದರ್ಶನ ಕೊಟ್ಟಿದ್ದಕ್ಕೆ
ಮತ್ತು
ನಾನೇ ಕೊಟ್ಟ ತಿಳಿ ನೀಲಿ
ಸೀರೆ ಉಟ್ಟಿದ್ದಕ್ಕೆ. ||
ಪ್ರೀತಿ ಬಿತ್ತಿ :
ದ್ವೇಷ ತಾಪವೇ
ತುಂಬಿಕೊಂಡಿರುವ
ಮನವು ಕತ್ತಲಲ್ಲಿ |
sಸ್ವಲ್ಪ ತಡಕಾಡಿ
ಜಾಗ ಸಿಕ್ಕೀತು
ಪ್ರೀತಿ ಬಿತ್ತಲಿಲ್ಲಿ ||
ಕಳೆದುಕೊಂಡಿದ್ದು :
ಕೂಡಿ ಕಳೆಯುವ
ಲೆಕ್ಕಚಾರದಲಿ
ಬದುಕು ದಕ್ಕಲಿಲ್ಲ |
ಹಣವ ಬೆಳೆಯುವ
ಕರ್ಮಗಾರದಲಿ
ಪ್ರೀತಿ sಸಿಕ್ಕಲಿಲ್ಲ ||
ಈಗೀಗ :
ಗಳಿಸುವ ಹುಡುಗಿ
ಹೊರಗಡೆ ಹೋಗಿ
ಬದುಕು ಕಟ್ಟೋದು ಕಾಮನ್ನು |
ಬಳೆಯು ಕಿವಿಯಲ್ಲಿ
ಓಲೆ ಮೂಗಲ್ಲಿ
ಮಾಡಿದ್ದೆಲ್ಲವೂ ಫ್ಯಾಶನ್ನು ||
ಹೇಳಿ ಬಿಟ್ಟೀರಿ ಜೋಕೆ..!
ನನ್ನ ಕೆನ್ನೆಗಳೇ
ಹೇಳದಿರಿ ಯಾರಿಗೂ.
ಕಸಿದುಕೊಂಡ ಮುತ್ತ.. |
ಇವಳ ಕೈಯಲ್ಲಿ
ಲಟ್ಟಣಿಗೆಯಿದೆ..
ಹೇಳಿ ಬಿಟ್ಟೀರಿ ಮತ್ತ!॒ ||
ಬಂಜೆ ಗರ್ಭದ ಮೊಳಕೆ :
ಈ ಬದುಕೇ ಮರಳುಗಾಡು
ಹಠಾತ್ತನೇ ಸುರಿದ ಜಡಿಮಳೆ
ಮನತುಂಬ ಸಂತಸದ ಹೊನಲು ||
ಮನಮಹಲು ಪ್ರೀತಿ ಬೀಡು
ಹಠಮಾಡಿ ನೀ ಬಿತ್ತಿದ ಬೆಳೆ
ಬಯಸಿದಂತೆಯೇ ಒಂದು ಎರಡಾದ ಫಸಲು ||
– ರಾಘವೇಂದ್ರ ಭಟ್
ಚುಟುಕುಗಳ ಲೋಕ….
ಚುಟುಕಗಳಲ್ಲಿ ಪ್ರೀತಿ ಮದ್ದು…ಒಂದಷ್ಟು ಮುದ್ದು…:)
ಇಷ್ಟವಾದವು…
Tumbaa chennaagive. Ondakkinta ondu………………..
ಗಾಳಕೆ ಬೀಳೋದ್ಯಾವಾಗ? ಚೆನ್ನಾಗಿದೆ 🙂
Superb…