ಮುಂಜಾವದ ರವಿಯೆನ್ನ
ರೆಪ್ಪೆಕದವ ತೆರೆಸಿದ
ನಿನ್ನ ಎದುರು ನಿಲಿಸಿ ಪ್ರೀತಿಗೆ
ಹೊಸಭಾಷ್ಯವ ಬರೆಸಿದ
ರೆಂಬೆ ಮೇಲೆ ಚೆಂದ ಹಕ್ಕಿ
ಮಾಡಿತೆಂಥ ಮೋಡಿ
ನಿನ್ನ ನೆನಪ ತರಿಸಿತೆನಗೆ
ನಿನ್ನಂತೆಯೇ ಹಾಡಿ
ಹರಿವನದಿಯ ಪುಟ್ಟಮೀನು
ಬೀಸಿ ರೆಕ್ಕೆ ಸದ್ದು
ನೀನು ಮುಗುಳ್ನಕ್ಕ ಕ್ಷಣದಿ
ಗುಳಿಗೆನ್ನೆ ತುಂಬ ಮುದ್ದು
ನಿನ್ನ ಚೆಲ್ವಿಗೆ ಸಾಟಿಯೆಲ್ಲಿ
ಕೊಂಚ ಕಮ್ಮಿಯೇ ತಾವು
ಎನುತ ನಾಚಿವೆ ಹಸಿರಿನೆದೆಯೊಳು
ಅರಳಿ ಮೊಗ್ಗು ಹೂವು
ಬಯಕೆ ಬಿಸಿಗೆ ಕೆಂಪೇರಿದಧರ
ಸಂಜೆ ರವಿಯ ತಂಪ್ಸುಡು
ಇಂದ್ರ ಕಂಡು ಮೂರ್ಛೆಹೋದ
ನಿನ್ನ ಒಂದ್ಹಿಡಿ ಬಡನಡು
ಮೃದುಪಾದದ ಮಧುರಸ್ಪರ್ಶಕೆ
ಪುಳಕಗೊಂಡಿದೆ ಗರಿಕೆಯು
ನಡೆದುಹೋಗು ಮತ್ತೆ ಹರುಷಕೆ
ಎನುವುದದರ ಹರಕೆಯು
ನಿನ್ನ ಮಾಟದ ಮೈಯ್ಯ ಬಳುಕದು
ರಸಿಕನಿಗೆ ಸಿಹಿಹೋಳಿಗೆ
ಸೋಕಿ ನಿನ್ನನ್ನು ಅಹಾ ಎನುತಿದೆ
ಖುಷಿಯೋ ಖುಷಿ ತಂಗಾಳಿಗೆ
ನಿನ್ನ ಕಂಗಳು ಆಸೆಗಡಲು ಒಳ
ಹೆಪ್ಪಾಗಿದೆ ಸುಡುವಿರಹ
ಕಾದು ಕುಂತಿವೆ ಕೆಂಡತುಟಿಗಳು
ಸಿಹಿ ಚುಂಬನದ ಮೊಹರ
ನಿಜದಿ ನೀನು ಜೀವವೀಣೆಯು
ನವಶೃಂಗಾರವು ಒಡಲೊಳು
ತೀರಕಾಣದು ಯಾನ ತೀರದು
ನಿನ್ನ ಸನಿಹದ ಕಡಲೊಳು
ರಾತ್ರಿಬಾನೊಳು ನಗುವ ಚಂದಿರ
ಒಂಟಿತನದೊಳು ಸೊರಗಿಹ
ನಿನ್ನ ಚೆಲುವನು ಕಂಡು ತಾನು
ಬೆಳುದಿಂಗಳಾಗಿ ಕರಗಿಹ
ಅಗಸದೊಳು ಸಾಲುಗಟ್ಟಿವೆ
ನಿನ್ನಂದ ನೋಡೆ ಪ್ರಣತಿಯು
ಹೊಗಳಿ ಸುಂದರ ಕಾವ್ಯ ಹೆಣೆಯೆ
ಕವಿಮನಗಳ ಸರತಿಯು
ಹರಿಯುತಿಹಳು ಯುಮುನೆ ತಾನು
ಗಲ್ಲವುಬ್ಬಿಸಿ ಸುಮ್ಮನೆ
ಬಳುಕೊ ನಿನ್ನ ನಡಿಗೆ ಚೆಂದಕೆ
ಸವತಿಯಂದದಿ ಬಿಮ್ಮನೆ
ತೂಗುಮಂಚಕು ಜೀವ ಬಂದಿದೆ
ನೀ ಬರುವ ಸುದ್ದಿಯ ತಂದಿದೆ
ನಿನ್ನ ಕಾಲ್ಗಳ ಕಿರುಗೆಜ್ಜೆ ಸದ್ದಿಗೆ
ಸಡಗರದಿ ತಾನೇ ಬೀಗಿದೆ
ಕಲ್ಲುಕಂಬದ ಗೊಂಬೆ ಗಿಳಿಯು
ನಿಜದಿ ಜೀವವ ತಳೆದಿದೆ
ಈಗ ಬಂದೆಯಾ, ಕುಶಲವೇನೆ
ಎಂದು ನಿನ್ನನು ಕೇಳಿದೆ
ಶಯನಕೋಣೆಯ ಗೋಡೆಚಿತ್ರದಿ
ಪುರುಷ ನಾನು ನಗುತಿಹೆ
ನಿನ್ನ ಚೆಲ್ವಿಗೆ ಜೀವಗೊಂಡು
ಮಿಲನದ್ಹಬ್ಬಕೆ ಬರುತಿಹೆ
ಕಂಗಳೊಳಗೆ ಕಣ್ಣು ಸೇರಲು
ಹೃದಯ ಹೃದಯದಿ ಕಲೆತೆನು
ನಿನ್ನ ಬೆರಳ ಮಧುರ ಸ್ಪರ್ಶಕೆ
ತೊಡಿಸಲುಂಗುರ ಮರೆತೆನು
ನಿನ್ನ ಮೈಗೆ ಶ್ರೀಗಂಧ ಪೂಸಲು
ಕಾಯುತಿಹರು ಸಖಿಯರು
ಸುಗಂಧೆ ನಿನಗೆ ಗಂಧ ಲೇಪನ
ವ್ಯರ್ಥವೆನುವುದ ಮರೆತರು
ನಿನ್ನ ಮುಡಿಯ ಮೊಲ್ಲೆದಂಡೆ
ಘಮಘಮಘಮ ಎನುತಿವೆ
ಕಾಯುತಿಹಳು ಬಾರೋ ಬೇಗನೆ
ಎನುತ ನನ್ನನು ಕರೆದಿವೆ
ಪುಟ್ಟಪ್ರಣತಿಯ ಮಂದಬೆಳಕು
ಶೃಂಗಾರಕೋಣೆಯ ಒಳಗಿದೆ
ಪುಟ್ಟಚಂದಿರ ನಿನ್ನ ಮೂಗುತಿ
ಹೊಳೆದು ತಿಂಗಳ ಚೆಲ್ಲಿದೆ
ಬಲ್ಲೆ ನಾನು ನಿನ್ನ ಎದೆಯೊಳ
ಆಸೆ ಚಿಗರೆಯ ಓಟವ
ನೂರು ಚೆಂದದ ಕನಸ ಚೆಲ್ಲಿಹ
ಬಯಕೆ ಕಂಗಳ ನೋಟವ
ಎನ್ನ ಕಾಮದ ಅಶ್ವವದುವು
ಗೆದ್ದೇ ತೀರುವೆ ಎನುತಿದೆ
ನಿನ್ನ ಪ್ರೀತಿಯ ಮಧುರಸ್ಪರ್ಶಕೆ
ಸೋತು ನಿನ್ನೆದೆಗೊರಗಿದೆ
ನಿನ್ನ ಮೈಯ್ಯ ಯೌವನದ ಬನದಿ
ಘಮದ ಕೇದಗೆ ಅರಳಿದೆ
ಎನ್ನ ಮೈಯ್ಯೊಳ ನಾಗರವು ತಾನು
ಉನ್ಮತ್ತನಾಗಿ ಕೆರಳಿದೆ
ಮಲಗುಮಂಚಕೆ ಅದೆಂಥ ನಾಚಿಕೆ
ಮೊಗವ ಮುಚ್ಚಿಕೊಂಡಿದೆ
ನಿಮ್ಮ ಮಿಥುನಕೆ ನಾನು ಸಾಕ್ಷಿಯೆ
ತಲೆಯ ಚಚ್ಚಿಕೊಂಡಿದೆ
ಅಪ್ಪಿಕೊಳ್ಳೆ ಒಪ್ಪಿಕೊಳ್ಳೆ ಮಥಿಸಿ
ಅಮೃತ ಸುರಿಯುವೆ
ನಾನು ಭೃಂಗವು ನೀನು ಮಧುರಸ
ಸೊಬಗ ಕಣಕಣ ಸವಿಯುವೆ
ಯುಗಯುಗದ ಪ್ರಣಯವೆಮದು
ನಿತ್ಯನೂತನ ಗೆಳತಿಯೆ
ಎನ್ನ ಮೈಮನ ಪುಳಕಗೊಳಿಸಲಿ
ನಿನ್ನ ಚೆಲುವು ಒಡತಿಯೆ
ಎನ್.ಕೃಷ್ಣಮೂರ್ತಿ, ಭದ್ರಾವತಿ
NICE…
ಶೃಂಗಾರ ರಸದ ಸುತ್ತಲು ಸುತ್ತಾಡುವ ಚುಟುಕುಗಳು ಮಧುರ ಭಾವದ ಸೆಲೆಗಳಾಗಿ ಹೊರಹೊಮ್ಮಿವೆ….ಕವಿಗೆಳಿಗೆ ಅಭಿನಂಧನೆಗಳು !
nice
ಪುಟ್ಟಪ್ರಣತಿಯ ಮಂದಬೆಳಕು
ಶೃಂಗಾರಕೋಣೆಯ ಒಳಗಿದೆ
ಪುಟ್ಟಚಂದಿರ ನಿನ್ನ ಮೂಗುತಿ
ಹೊಳೆದು ತಿಂಗಳ ಚೆಲ್ಲಿದೆ
ತುಂಬಾ ಒಳ್ಳೊಳ್ಳೆಯ ಭಾವ ಭಿತ್ತಿಗಳು……
ಎಷ್ಟೋ ಕವನಗಳನ್ನು ಪದೇ ಪದೇ ಓದಿಕೊಂಡಿದ್ದೇನೆ….