ಗಜಲ್.
ಇಲಕಲ್ಲ ಸೀರೆಯುಟ್ಟ ರಮಣಿ ನಾನು ನೋಡೋದ್ಯಾಕೆ
ಹಸಿರು ಬಣ್ಣ ನಿನ್ನಿಷ್ಟದ್ದಂತ ನೀನೆ ಕೊಟ್ಟಿದ್ದು ನೋಡೋದ್ಯಾಕೆ.
ಮಲ್ಲಿಗೆ ತುರುಬ ಕಂಡು ಕಣ್ಣಂಚಿನಲ್ಲಿ ಸಳೆಯುವವನೇ
ಮಲ್ಲಿಗೆ ನಲ್ಲೆಗೆ ತಂದವನು ನೀನೇ ರಾಯ ನೋಡೋದ್ಯಾಕೆ
ಘಲ್ ಘಲ್ ಗೆಜ್ಜೆಯ ಸದ್ದಿಗೆ ಹೆಜ್ಜೆ ಹಾಕುತ ನಡೆದರೆ
ಗೆಜ್ಜೆಯ ಸರದಾರ ನೀನೇ ನಿಂತು ನಿಂತು ನೋಡೋದ್ಯಾಕೆ
ಬಳೆಗಳ ಖನ ಖನ ನಾದಕೆ ಬೆರಗಾಗಿ ಮರಳಿ ನೋಡೋನೆ
ಜಾತ್ರೆಯಲಿ ಖುದ್ದಾಗಿ ಬಳೆಗಳ ಕೊಡಿಸಿದ ಧೀರನೇ ನೋಡೋದ್ಯಾಕೆ
ಜಿರಕಿ ಜೋಡು ಮೆಟ್ಟಿ ಕಟ್ಟು ಮಸ್ತಾಗಿ ಹೊರಟವನೇ
ಮನೆಯಂಗಳದಿ ಹಣಿಕಿ ಹಾಕುತ ಒಲವಿನಲಿ ನೋಡೋದ್ಯಾಕೆ
ಜಿರಕಿ ಸಪ್ಪಳ ಎದಿಯಾಗ ನೂರು ಭಾವ ಹುಟ್ಟು ಹಾಕ್ಯಾವ
ಜಯದ ರಥವೇರಿ ಸಾಗೋಣ ಗೆಳೆಯ ನೋಡೋದ್ಯಾಕೆ
-ಜಯಶ್ರೀ. ಭ.ಭಂಡಾರಿ., ಬಾದಾಮಿ.
ಗಜಲ್
ಸರಿಯುತಿಹುದು ಸಮಯ ಜಿದ್ದಿಗೆ ಬಿದ್ದಂತೆ ಕಣ್ಣೆದುರು
ತಡೆದುಬಿಡು ಕ್ಷಣವನು ಇದ್ದಲ್ಲೆ ಇರುವಂತೆ ಕಣ್ಣೆದುರು
ಉಸುರದೇ ಉಳಿದು ಹೋಗಿದ್ದವು ಮನದ ಮಾತುಗಳು
ಕಾದಿಹವು ಸರತಿಯ ಸಾಲಿನಲ್ಲಿ ನಿಂತಂತೆ ಕಣ್ಣೆದುರು
ಒಂದೊಂದೇ ಭಾವಗಳ ಹಂಚಿಕೊಳ್ಳಬೇಕಿದೆ ಮನಸಾರೆ
ನೆನಪಿನ ದಾರದಿ ಪೋಣಿಸಿದ ಒಲವ ಹೂವಂತೆ ಕಣ್ಣೆದುರು
ಓಡುವ ಹೊತ್ತನೂ ಮೀರುವಂತೆ ನಿನ್ನೊಳು ಬೆರೆಯಬೇಕು
ನಿನ್ನುಸಿರಿನೊಳು ನನ್ನುಸಿರು ಬೆರೆತು ಬೆವೆತಂತೆ ಕಣ್ಣೆದುರು
ನಿನ್ನ ಕಣ್ಣೊಲವನೇ ಬೆಚ್ಚಗೆ ಹೊದ್ದು ಮೈಮರೆಯಬೇಕಿದೆ
ಮಾಗಿಯ ಚಳಿಯು ಸಹ ಅಸೂಯೆ ಪಡುವಂತೆ ಕಣ್ಣೆದುರು
ನಿನ್ನ ಬೆರಗಿನ ಪ್ರತಿ ಗುಂಗನ್ನೂ ನನ್ನೊಳು ಪಡೆಯಬೇಕಿದೆ
ಬರುವ ನಾಳೆಗಳ ಭೇಟಿಗಳೂ ಈರ್ಷೆ ಪಡುವಂತೆ ಕಣ್ಣೆದುರು
-ಶ್ರೀಲಕ್ಷ್ಮೀ ಅದ್ಯಪಾಡಿ.
ಗಜಲ್-ಇರುವೆ ನಾನಿರುವೆಯಂತೆ
ನನ್ನ ಕನಸುಗಳ ಕೊಲ್ಲಬೇಡ ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
ನನ್ನ ಆಸೆಗಳ ಚಿವುಟಬೇಡಾ ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
ನನ್ನಷ್ಟಕ್ಕೆ ನನ್ನ ಬಿಟ್ಟುಬಿಡು ನನ್ನಷ್ಟಕ್ಕೆ ನಾನಿರುವೆ
ನನ್ನಿಷ್ಟಕ್ಕೆ ಕಲ್ಲು ಹಾಕದಿರು ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
ಇರುವೆ ನಾನಿರುವೆಯಂತೆ ತುಂಬಾ ತುಂಬಾ ಹಗುರವಾಗಿ
ವ್ಯರ್ಥ ಆನೆಗಳ ಮಾಡಿಸದಿರು ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
ಸುಖಾಸುಮ್ಮನೆ ಸಂಶಯಗಳು ಬೇಕಾಗಿಲ್ಲ ನಾ ಪಿಶಾಚಿಯಲ್ಲ
ಮತ್ತೆಮತ್ತೆ ನಂಬಿಕೆಯ ತೂಕಹಾಕದಿರು ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
ಒಂದೆರಡು ಬಾರಿಯಾದರೆ ಸಾಕು ಹಿಂಸೆ, ನೋಯುವುದಿಲ್ಲ
ಬಣ್ಣದ ಬದುಕನ್ನು ಸಾಯಿಸದಿರು ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
ಕಲ್ಲು ಹೃದಯವೇ ಆಗಿರಲಿ ಕೆದಕಿ ಕಲ್ಲು ಎಸೆಯಬೇಡಾ
ಜೀವಕೆ ಜೀವಂತಿಕೆ ಇರಲಿ ನೋಯಿಸದಿರು ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
ಎದೆಯಲ್ಲಡಗಿದ ನೋವಿನ ಜ್ವಾಲೆಗಳಿನ್ನೂ ಆರಿಲ್ಲ
ನೀ ಭಾವನೆಗಳನ್ನೇ ಸುಟ್ಟುಹಾಕದಿರು ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
‘ಸೂರ್ಯ’ ನಿತ್ಯ ಉರಿಯುತ್ತಾನೆ ಸಹಜವಾದ ಸಂಗತಿ
ಸತ್ಯವನ್ನರಿಯದೆ ಕತ್ತಲಲಿ ಮುಳುಗಿಸದಿರು ಹುಡುಗಿ ನಿನ್ನ ಸ್ವಾರ್ಥಕ್ಕಾಗಿ
-ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ