ಪಂಜು ಕುರಿತು…

 

ಜೇಬಿನಲ್ಲಿ ದುಡ್ಡಿಲ್ಲದಿದ್ದರೂ ಕಣ್ಣೊಳಗೆ ಕನಸುಗಳಿರಬೇಕು ಎಂದು ಬಲವಾಗಿ ನಂಬಿರುವವನು ನಾನು. ಆ ನಂಬಿಕೆಯ ಫಲವೇ ಈ "ಪಂಜು" ಅಂತರ್ಜಾಲ ತಾಣ. ದೂರದೂರಿನಲ್ಲಿ ಕುಳಿತು ಒಬ್ಬ ಸಾಮಾನ್ಯ ಓದುಗನಂತೆ ಕನ್ನಡದ ಸಾಹಿತ್ಯ ತಾಣಗಳಿಗಾಗಿ ಅಂತರ್ಜಾಲದಲ್ಲಿ ಹುಡುಕಾಡುವಾಗ, ಕೇವಲ ಸಾಹಿತ್ಯ ಸಂಬಂಧಿತ ಬರಹಗಳಷ್ಟೇ ತುಂಬಿರುವ ಅಂತರ್ಜಾಲ ತಾಣ ಕಣ್ಣಿಗೆ ಕಂಡಿದ್ದು ಅಪರೂಪ. ದಿನ ನಿತ್ಯ ಹೆಚ್ಚು ಓದಿಗೆ ಸಿಕ್ಕುವ ಫೇಸ್ ಬುಕ್ ನಂತಹ ಪ್ರಭಾವಿ ಅಂತರ್ಜಾಲ ತಾಣದಲ್ಲಿ ಸಾಹಿತ್ಯವೆಂದರೆ ಬರೀ ಕವನಗಳು ಚುಟುಕಗಳು ಎನ್ನುವಂತಹ ವಾತಾವರಣ ಇಂದಿನ ದಿನಗಳಲ್ಲಿ ನಿರ್ಮಾಣವಾಗಿದೆ. ಸಾಹಿತ್ಯದ ಉಳಿದ ಪ್ರಕಾರಗಳು ಯಾಕೋ ಫೇಸ್ ಬುಕ್ ನಂತಹ ತಾಣಗಳಲ್ಲಿ ಓದುಗರಿಗೆ ದಕ್ಕುತ್ತಿಲ್ಲ. ಹಾಗೆಯೇ ಈಗಾಗಲೇ ಗಟ್ಟಿ ನೆಲೆ ಕಂಡಿರುವ ಕೆಲವು ವೆಬ್ ತಾಣಗಳು ಬರೀ ಪ್ರಚಲಿತ ವಿದ್ಯಮಾನಗಳ ಸುತ್ತ ಗಿರಕಿ ಹೊಡೆಯುತ್ತಿರುವಂತೆ ಕಾಣುತ್ತವೆ. ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಸಾಹಿತ್ಯ ಪ್ರಿಯರ ಚಂದದ ಓದಿಗೆಂದೇ ಹೊಸ ವೆಬ್ ತಾಣಗಳು ಸೃಷ್ಟಿಯಾಗಬೇಕಾದ ಅವಶ್ಯಕತೆ ಇದೆ. ಅಂತಹ ತಾಣಗಳು ಹೆಚ್ಚು ದಿನ ಜನಮನಗಳಲ್ಲಿ ಉಳಿಯಬೇಕಾದರೆ ಎಡ ಬಲ ತಟಸ್ಥ ಎಂದು ಹಣೆಪಟ್ಟಿ ಪಡೆಯದೆ ಕೇವಲ ಸಾಹಿತ್ಯಮಯ ತಾಣಗಳಾಗಿ ರೂಪುಗೊಳ್ಳಬೇಕಾಗಿದೆ.

ಮೇಲೆ ತಿಳಿಸಿದ ವಿಷಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸೃಷ್ಟಿಸಿದ "ಪಂಜು" ಓದುಗರಿಗೆ ಹೆಚ್ಚು ಭಾರವೆನಿಸದ ಹಾಗೆ ಕೆಲವೇ ಕೆಲವು ಬರಹಗಳನ್ನು ಹೊತ್ತು ಪ್ರತೀ ವಾರ ನಿಮ್ಮೆದುರು ನಿಲ್ಲಲಿದೆ. ನೀವು ಸಹೃದಯಿಗಳು, ಕನ್ನಡದ ಈ ಪಂಜು ಪ್ರಜ್ವಲಿಸಲು ಸಹಕರಿಸುತ್ತೀರೆಂದು ನಂಬಿದ್ದೇನೆ. ಈ ವಾರದ ಮೊದಲ ಸಂಚಿಕೆಯಲ್ಲಿ ಹೆಚ್ಚು ಯುವ ಬರಹಗಾರರ ಬರಹಗಳೇ ತುಂಬಿವೆ. ದೇವರನ್ನು ನೆನೆಯುವ ಮೊದಲು ತಂದೆ ತಾಯಿಗಳ ನೆನೆಯೋಣ ಎಂದು ದಿವ್ಯ ಆಂಜನಪ್ಪರವರು ತಾಯಿಯ ಕುರಿತು ಬರೆದ "ತಾಯಿಯ ಮಡಿಲು" ಮತ್ತು ಗೆಳೆಯ ಸಂತೋಷ್ ಕುಮಾರ್ ರವರು ತಂದೆಯ ಕುರಿತು ಬರೆದ "ನಾ ಕಂಡ ಹೀರೋಗಳು" ಎಂಬ ಎರಡು ಲೇಖನಗಳು ಪಂಜು ವಿಶೇಷ ಎಂಬ ಗೌರವ ಪಡೆದು "ಪಂಜು" ವಿನ ಚೊಚ್ಚಲ ಸಂಚಿಕೆಯಲ್ಲಿ ಪ್ರಕಟವಾಗುತ್ತಿವೆ. ಜೊತೆಗೆ ನಲ್ಮೆಯ ಗೆಳೆಯ ಗೆಳತಿಯರು ಕಳುಹಿಸಿದ ಚಂದದ ಕತೆ, ಲೇಖನ, ವ್ಯಂಗ್ಯ ಚಿತ್ರ, ಹಾಗು ಶುಭಾಶಯ ಪತ್ರಗಳು ಈ ಚೊಚ್ಚಲ ಸಂಚಿಕೆಯಲ್ಲಿ ನಿಮ್ಮ ಓದಿಗೆ ದಕ್ಕುತ್ತಿವೆ.

ಇವತ್ತು "ಪಂಜು" ನಿಮ್ಮೆದುರು ಬಣ್ಣಗಳ ಬಳಿದುಕೊಂಡು ನಿಮ್ಮೆದುರು ನಿಂತಿದೆ ಎಂದರೆ ಅದಕ್ಕೆ ಮೂಲ ಕಾರಣ ಪಂಜುವಿನ ವೆಬ್ ಡಿಸೈನರ್ ಗೆಳೆಯ ಅರುಣ್. ನಿಮಗೊಂದು ಅಚ್ಚರಿಯ ವಿಷಯ ಹೇಳಬೇಕೆಂದರೆ ಗೆಳೆಯ ಅರುಣ್ ರವರ ತಂದೆ ತಾಯಿಗಳು ಮೂಲತಃ ಕೇರಳದವರಾದರೂ ಅರುಣ್ ಹುಟ್ಟಿ ಬೆಳೆದಿದ್ದು ಎಲ್ಲಾ ಕರ್ನಾಟಕದಲ್ಲೇ. ಅಪ್ಪಟ ಕನ್ನಡಿಗನಂತೆ ಮಾತನಾಡುವ ಅರುಣ್ "ಪಂಜು"ವಿನ  ಸೃಷ್ಟಿಗೆ ಬಹಳ ಶ್ರಮಿಸಿದ್ದಾರೆ ಅವರಿಗೆ ನನ್ನ ಹೃದಯಪೂರ್ವಕ ವಂದನೆಗಳು. ಗೆಳೆಯ ಅರುಣ್ ನನ್ನು ನನಗೆ ಪರಿಚಯಿಸಿದ ಗೆಳೆಯ ನಂದೀಶ್ ಗೆ ನಾನು ಸದಾ ಆಭಾರಿ. ಪಂಜುವಿನ ಸೃಷ್ಟಿಗೆ ಹಲವು ಗೆಳೆಯರು ಪರೋಕ್ಷವಾಗಿ ಕೈಜೋಡಿಸಿದ್ದಾರೆ. ಅವರೆಲ್ಲಾ ನನ್ನ ಧನ್ಯವಾದಗಳು ಸಲ್ಲುತ್ತವೆ.

ಕೊನೆಯದಾಗಿ, ಹಿರಿಯರ ಮಾರ್ಗದರ್ಶನದಲ್ಲಿ ಹೊಸ ಬರಹಗಾರರಿಗೆ "ಪಂಜು" ಉತ್ತಮ ವೇದಿಕೆಯಾಗಲಿ ಎಂಬುದೇ ಪಂಜು ತಂಡದ ಆಶಯ. ನಮ್ಮ ಆಶಯಗಳಿಗೆ ನಿಮ್ಮ ಸಹಕಾರ, ಪ್ರೀತಿ, ಹಾರೈಕೆ, ಆಶೀರ್ವಾದಗಳು ಸದಾ ನಮ್ಮ ಜೊತೆಗಿರುತ್ತವೆ ಎಂದು ನಂಬುತ್ತಾ "ಪಂಜು" ಅಂತರ್ಜಾಲ ವಾರಪತ್ರಿಕೆಯ ಚೊಚ್ಚಲ ಸಂಚಿಕೆಯನ್ನು ನಿಮ್ಮ ಮಡಿಲಿಗಿಡುತ್ತಿದ್ದೇನೆ..

ಮತ್ತೆ ಸಿಗೋಣ

ನಿಮ್ಮ ಪ್ರೀತಿಯ

ನಟರಾಜು :))

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

30 Comments
Oldest
Newest Most Voted
Inline Feedbacks
View all comments
ಈಶ್ವರ ಭಟ್ ಕೆ

ಪಂಜು ಬಳಗಕ್ಕೆ ವಂದನೆ,
ಅತ್ಯಂತ ಸುಂದರವಾಗಿದೆ ತಾಣ. ತುಂಬಾ ಮುತುವರ್ಜಿಯಿಂದ ಕೆಲಸ ಮಾಡಿದ್ದೀರಿ.
 
ಶುಭಾಶಯ ಮತ್ತು ಅಭಿನಂದನೆ.

ಶ್ರೀವತ್ಸ ಕಂಚೀಮನೆ.

ಅಭಿನಂದನೆಗಳು ಮತ್ತು ಒಳ್ಳೆಯದೊಂದು ಪ್ರಯತ್ನಕ್ಕೆ ತುಂಬು ಹೃದಯದ ಸ್ವಾಗತ…..

N Krishnamurthy Bhadravathi
N Krishnamurthy Bhadravathi
11 years ago

’ಪಂಜು’ ಅಂತರ್ಜಾಲ ಸಾಹಿತ್ಯತಾಣಗಳಲ್ಲಿ ಮಹತ್ವದ್ದಾಗಲಿ…ಆರೋಗ್ಯಕರವಾಗಿ…ವೈಚಾರಿಕವಾಗಿಯೂ ಮೂಡಿಬರಲಿ…ಅಭಿನಂದನೆಗಳು ಮಿತ್ರ ನಟ್ರಾಜು…

sunil Rao
sunil Rao
11 years ago

hearty congrats
and best wishes

ಸುಮತಿ ದೀಪ ಹೆಗ್ಡೆ

ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಆಗುತ್ತೆ. ನಿಮ್ಮ ಪ್ರಯತ್ನ ಇನ್ನೂ ಯಶಸ್ಸು ಕಾಣಲಿ….

ramachandra shetty
ramachandra shetty
11 years ago

ಪ೦ಜು ಸು೦ದರವಾದ ರೀತಿಯಲ್ಲಿ ರೂಪಿತಗೊ೦ಡಿದೆ..ಅಭಿನ೦ದನೆಗಳು ಪ೦ಜು ತ೦ಡಕ್ಕೆ..ಮು೦ದುವರಿಯಲಿ ಪ೦ಜಿನ ಬೆಳಕು ಪಸರಿಸಲಿ ಶುಭವಾಗಲಿ

Abdul zameer
Abdul zameer
11 years ago

Congrats Anna .

Santhoshkumar LM
Santhoshkumar LM
11 years ago

ಥ್ಯಾಂಕ್ಸ್ ನಟ್ಟು.
ಈ ತಾಣ ವರ್ಣರಂಜಿತವಾಗಿ ತಯಾರಾಗಿದೆ.
ಕಾದು ಕುಳಿತವರಿಗೆ ಪಂಜು ನಿಜವಾಗಿಯೂ ಒಳ್ಳೆಯ ಬೆಳಕನ್ನು ತಂದು ಕೊಟ್ಟಿದೆ.
ಪಂಜು ಸದಾ ಉರಿಯುತ್ತಿರಲಿ. ಕನ್ನಡದ ಕಿಚ್ಚು ಇದೇ ಜಗತ್ತಿಗೆ ಪಸರಿಸಲಿ.
ಕೊನೆಯದಾಗಿ ಚೊಚ್ಚಲ ಕಂತಿನಲ್ಲೇ ನನಗೆ ಜಾಗ ಸಿಕ್ಕಿದ್ದು ಅತೀವ ಸಂತಸವನ್ನುಂಟು ಮಾಡಿದೆ.
ಧನ್ಯವಾದಗಳು.

ಶುಭವಾಗಲಿ !!

Prasad V Murthy
11 years ago

ಪಂಜು ತಾಣವನ್ನು ಮೋಹಕವಾಗಿ ಅನಾವರಣಗೊಳಿಸಿದ್ದೀರಿ ನಟಣ್ಣ. ನಿಮ್ಮ ಕನಸುಗಳು ನೆರವೇರಲಿ ಎಂದು ಹಾರೈಸುತ್ತಾ, ಪಂಜು ಗೆ ಶುಭ ಕೋರುತ್ತೇನೆ. 🙂

ದಿವ್ಯ ಆಂಜನಪ್ಪ

ಕಂಡ ಕನಸನ್ನು ಅಂದುಕೊಂಡಂತೆ ಸಾಧಿಸುವ ನಿಮ್ಮ ಛಲ, ಶ್ರದ್ಧೆ ಮತ್ತು ಶ್ರಮ ನಮಗೆ ಆದರ್ಶವಾಗಿದೆ. ಶ್ರಮದಂತೆ ಫಲ ಎಂಬಂತೆ ಖಂಡಿತ ಪಂಜು ಒಂದು ಯಶಸ್ವಿ ಜನಮನ ಪತ್ರಿಕೆಯಾಗುವುದರಲ್ಲಿ ಸಂಶಯವಿಲ್ಲ. ಪತ್ರಿಕೆಯ ಮೊದಲ ಸಂಚಿಕೆಯಲ್ಲಿಯೇ ನನ್ನ ಪುಟ್ಟ ಲೇಖನವನ್ನು ಪ್ರಕಟಿಸಿದ್ದು ತುಂಬಾ ಸಂತೋಷ ತಂದಿದೆ. ತುಂಬು ಹೃದಯದ ಧನ್ಯವಾದಗಳು ಸರ್. ಹಾಗೆಯೇ ನಿಮ್ಮ ಸಾಧನೆಯ ವಿಸ್ತೀರ್ಣ ವಿಸ್ತಾರವಾಗಲಿ ಎಂದು ಆಶಿಸುವೆ. 

ಶರತ್ ಚಕ್ರವರ್ತಿ

ಇಷ್ಟು ದಿನ ಕಾಯುತ್ತಿದ್ದಕ್ಕೂ ಒಳ್ಳೆ ಸುಂದರ ವಿನ್ಯಾಸವನ್ನೆ ಮಾಡಿದ್ದೀರಿ. ಧನ್ಯವಾದಗಳು ನಟಣ್ಣ. ಪಂಜು ಬೆಳಗಲಿ.

Swarna
Swarna
11 years ago

ಪಂಜು ಬೆಳಗಿದೆ , ಸುಂದರವಾಗಿದೆ  ಶುಭಾಶಯಗಳು

M.S.Krishna Murthy
M.S.Krishna Murthy
11 years ago

ಅಭಿನಂದನೆಗಳು ನಟರಾಜ್. ಅತ್ಯಂತ ಪ್ರತಿಬಾನ್ವಿತರ ಮತ್ತು ಅನುಭವಿ ಲೇಖಕರ, ಕವಿಗಳ ಸಲಹಾ ಮಂಡಳಿ ನಿಮಗಿದೆ. ನಿಮ್ಮ ತಾಳ್ಮೆ, ಸಾಹಿತ್ಯದ ಉಪಾಸನೆ ನಿಮ್ಮಿಂದ ಇಂತಹ ಮಹತ್ಕಾರ್ಯವನ್ನು ಮಾಡಿಸಿದೆ. ನಿಮ್ಮ ಪಂಜು ಕಗ್ಗತ್ತಲ್ಲನ್ನು ಕಳೆದು ಬೆಳಕಿನತ್ತ ಕರೆದೊಯ್ಯಲಿ .

Utham
11 years ago

Panju bellagidhe
Panjuvina kidi sahathyada mule muleyalu bellagali
Abhinandanegalu natanna
Shubhavagali

ಮಂಜುನಾಥ ಕೊಳ್ಳೇಗಾಲ

ಸೊಗಸಾದ ಪ್ರಯತ್ನ.  ಹೌದು, ಕೇವಲ ಸಾಹಿತ್ಯ ಬರಹಗಳಿಗೆಂದೇ ಸೀಮಿತವಾದ, ಸಾಹಿತ್ಯದ ಹೆಸರಲ್ಲಿ ಜೊಳ್ಳು ನೀಡದ ತಾಣಗಳು ಬಹು ಕಡಿಮೆ.  ಇದನ್ನು ನೀವು ಗಮನಿಸಿದ್ದೇ ನಿಮ್ಮೀ ಪ್ರಯತ್ನದ ಬಗ್ಗೆ ಸಾಕಷ್ಟು ಆಶಾಭಾವನೆ ಮೂಡಿಸಿದೆ, ಸಾಹಿತ್ಯ/ಕ ಚರ್ಚೆಯಬಗ್ಗೆ ನಿಮಗಿರುವ ಆಸಕ್ತಿ ನಿಮ್ಮೀ ಪ್ರಯತ್ನವನ್ನು ಕೈಹಿಡಿದು ನಡೆಸಲಿ

santosh dharmraj
11 years ago

very nice

ರಾಜೇಂದ್ರ ಬಿ. ಶೆಟ್ಟಿ
ರಾಜೇಂದ್ರ ಬಿ. ಶೆಟ್ಟಿ
11 years ago

ನಿಮ್ಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಯಾವುದೇ ಸಹಕಾರ ಬೇಕಿದ್ದರೆ, ಸಂಕೋಚ ಇಲ್ಲದೆ ತಿಳಿಸಿ, ನಟರಾಜರೆ.  ಎಲ್ಲಾ ಲೇಖನಗಳನ್ನು ಓದಿದ ನಂತರ, ಅಭಿಪ್ರಾಯ ತಿಳಿಸುತ್ತೇನೆ.

chinmay mathapati
chinmay mathapati
11 years ago

ಪ್ರಪ್ರಥಮವಾಗಿ  ನಿಮ್ಮ ಪ್ರಯತ್ನ ಮತ್ತು ಪರಿಶ್ರಮಕ್ಕೆ ಧನ್ಯವಾದಗಳು. ನಮ್ಮ ಚೆಂದದ ಕನ್ನಡ ಭಾಷೆಯ ಏಳ್ಗೆಯ ದೃಷ್ಟಿಯಿಂದ ನೀವು ಹೇಳಿದಂತೆ ಇಂಥ ಸಾಹಿತ್ಯ ಸಂಬಂಧಿತ ಕೆಲಸಗಳು ಆಗಲೇಬೇಕಾದ ಅನಿವಾರ್ಯತೆ ಇವತ್ತಿನ ದಿನದಲ್ಲಿ ಬಂದೊದಗಿದೆ. ಇಂಗ್ಲೀಷ ಭಾಷೆಯ ವ್ಯಾಮೋಹಕ್ಕೆ ಮರುಳಾಗುತ್ತಿರುವ ನಮ್ಮ ಕನ್ನಡಿಗರಿಗೆ ನಮ್ಮ ಭಾಷೆಯ ಆಳವಾದ ಬೇರು ಮತ್ತು ಅದರ ಫಲವತ್ತತೆ ಮನದಟ್ಟಾಗಿಸಬೇಕಾಗಿದೆ. ಈ ದಿಶೆಯಲ್ಲಿ ನೆಚ್ಚಿನ ಪಂಜು ವಿಜಯಶಾಲಿಯಾಗಲಿ…..ಕನ್ನಡದ ಕಂಪನು ಜಗದಗಲಕ್ಕೂ ಹರಡಲಿ…..ಶುಭವಾಗಲಿ ನಿನಗೆ ಪಂಜು………………

Rj
Rj
11 years ago

ಸಂಪಾದಕೀಯ ಮಾತ್ರ ಓದಿದೆ.
ನಿಮ್ಮ ಆಶಯ,ಕಳಕಳಿ ಖುಷಿ ಕೊಟ್ಟಿತು.
ಉಳಿದ ಬರಹಗಳನ್ನೂ ಓದುವೆ.ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು.
-Rj 

ಅಶೋಕ ಶೆಟ್ಟರ್
ಅಶೋಕ ಶೆಟ್ಟರ್
11 years ago

ತುಂಬ ಚೆನ್ನಾಗಿದೆ, ಅಭಿನಂದನೆಗಳು ಮತ್ತು ಶುಭಾಶಯಗಳು

ಎಸ್.ಚೆನ್ನಬಸವರಾಜು
ಎಸ್.ಚೆನ್ನಬಸವರಾಜು
11 years ago

ಪಂಜುವಿಗೆ ಅಭಿನಂದನೆಗಳು ಕನ್ನಡ ಅಂತರ್ಜಾಲ ತಾಣದಲ್ಲಿ ಉನ್ನತ ಮಟ್ಟಕ್ಕೆರಲಿ.

ಬಾಬುಶಂಕರ್
ಬಾಬುಶಂಕರ್
11 years ago

ಪಂಜುಗೆ ಅಭಿನಂದನೆಗಳು,
ಅದರ ಕರ್ತ ನಟರಾಜು ಅವರಿಗೆ ಹಾಗೂ ಪ೦ಜು ತ೦ಡಕ್ಕೆ
ತುಂಬು ಹೃದಯದ ಹಾರೈಕೆಗಳು

Prasad
Prasad
11 years ago

'ಪಂಜು' ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.  

Mohan V Kollegal
Mohan V Kollegal
11 years ago

ಪಂಜು ಸೂರ್ಯೋದಯದಂತೆ ಸುಂದರವಾಗಿ ಉದಯಿಸಿದೆ. ಸಾಹಿತ್ಯ ರಂಗದಲ್ಲಿ ಇನ್ನಷ್ಟು ಬೆಳಕು ಚೆಲ್ಲಿ ಉನ್ನತಸ್ಥಾನಕ್ಕೇರಲಿ ಎಂದು ಹಾರೈಸುತ್ತೇನೆ… 🙂

hari prasad k r
11 years ago

nimma prayatna sagali. shubhavagali….
hari prasad k r
 

ಆತ್ರಾಡಿ ಸುರೇಶ ಹೆಗ್ಡೆ

ಆತ್ಮೀಯ ನಟರಾಜ್,

"…ಹಾಗೆಯೇ ಈಗಾಗಲೇ ಗಟ್ಟಿ ನೆಲೆ ಕಂಡಿರುವ ಕೆಲವು ವೆಬ್ ತಾಣಗಳು ಬರೀ ಪ್ರಚಲಿತ ವಿದ್ಯಮಾನಗಳ ಸುತ್ತ ಗಿರಕಿ ಹೊಡೆಯುತ್ತಿರುವಂತೆ ಕಾಣುತ್ತವೆ. ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ಸಾಹಿತ್ಯ ಪ್ರಿಯರ ಚಂದದ ಓದಿಗೆಂದೇ ಹೊಸ ವೆಬ್ ತಾಣಗಳು ಸೃಷ್ಟಿಯಾಗಬೇಕಾದ ಅವಶ್ಯಕತೆ ಇದೆ…"

ತಮ್ಮ ಈ ಅನಿಸಿಕೆಗಳನ್ನು ಸಾರಾಸಗಟಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೂ, ತಮ್ಮ ಈ ಪ್ರಯತ್ನಕ್ಕೆ ಶುಭಕೋರುತ್ತಿದ್ದೇನೆ. ಕಾರಣವನ್ನು ಒಪ್ಪಲಾಗುತ್ತಿಲ್ಲವಾದರೂ ಈ  ಪ್ರಯತ್ನ ನನಗೆ ಒಪ್ಪಿಗೆಯೇ.  

ಕವನೇತರ ಪ್ರಕಾರಗಳಿಗೆ ಪ್ರೋತ್ಸಾಹ ನೀಡುವ ಕನ್ನಡ ಅಂತರ್ಜಾಲ ತಾಣಗಳು ಸಾಕಷ್ಟು ಇವೆ. ಉದಾಹರಣೆಗೆ "ಕೆಂಡ ಸಂಪಿಗೆ", "ವಿಸ್ಮಯ ನಗರಿ" ಹಾಗೂ "ಅವಧಿ"ಯನ್ನು ನನ್ನಂತೆಯೇ ತಾವೂ ಅಥವಾ ಇನ್ನಾರೂ ಕಡೆಗಣಿಸುವಂತಿಲ್ಲ. ಅವುಗಳನ್ನು ಕಡೆಗಣಿಸಿದರೆ ಅವುಗಳ ಹಿಂದಿರುವ ರೂವಾರಿಗಳ ಇಷ್ಟು ವರುಷಗಳ ಸೇವೆಯ ಹಾಗೂ ಪರಿಶ್ರಮದ  ಪರೋಕ್ಷ ಅವಮಾನ ಮಾಡಿದಂತಾದೀತು ಎಂದು ನನ್ನ ಅನಿಸಿಕೆ.

ತಾಣಗಳು ಅವೆಷ್ಟೇ ಇದ್ದರೂ ಹೊಸದೊಂದು ಆರಂಭವಾಗಬಾರದೆಂದೇನಿಲ್ಲ.

ಹೊಸತನ್ನು ಆರಂಭಿಸುವಾಗ, ಕಾರಣಗಳಿರಲೇ ಬೇಕೆಂದೇನೂ ಇಲ್ಲ,

ನಮ್ಮ ಉಗಮಕ್ಕೆ, ನಮ್ಮ ಉಳಿವಿಗೆ ಹಾಗೂ ನಮ್ಮ ಬೆಳವಣಿಗೆಗೆ ನಾವೇ ಕಾರಣರೆಂದು ನಾವು ತೋರಿಸಿಕೊಡಬಹುದು.

ಅನ್ಯರ ಸೋಲು ನಮ್ಮ ಗೆಲುವಿಗೆ ಕಾರಣವಾಗಬೇಕಿಲ್ಲ. 

ಶುಭವಾಗಲಿ. ಮಂಗಳವಾಗಲಿ.

ಕನ್ನಡ ಭಾಷೆಯ ಬಳಕೆಯಾಗಲಿ, ಉಳಿಕೆಯಾಗಲಿ, ಬೆಳವಣಿಗೆಯಾಗಲಿ.

ಅಭಿನಂದನೆಗಳು ಹಾಗೂ ಅಭಿವಂದನೆಗಳು.

Nataraju S M
11 years ago

ಆತ್ಮೀಯರೇ,
ನಿಮ್ಮೆಲ್ಲರ ನಲ್ಮೆಯ ನುಡಿಗಳಿಗೆ ನಾನು ಮೂಕ. ನಿಮ್ಮ ಹಾರೈಕೆ ಆಶೀರ್ವಾದಗಳು ಹೀಗೆಯೇ ಇರಲಿ.. 
ಹಿರಿಯರಾದ ಆಸು ಹೆಗ್ಡೆಯವರೇ, ಕನ್ನಡದ ಅಂತರ್ಜಾಲ ತಾಣಗಳು ವಿನ್ಯಾಸ, ಒಳ ತಿರುಳು ಬೇರೆ ಬೇರಯಾಗಿಯೇ ಇದ್ದರೂ ಎಲ್ಲೋ ಒಂದು ಕಡೆ ಎಲ್ಲಾ ತಾಣಗಳ ನಡುವೆಯೂ ಕಂಡೂ ಕಾಣದಂತಹ ಒಂದು ಭಾಂದವ್ಯ ಅಡಗಿರುತ್ತದೆ. ಮುಂದಿನ ದಿನಗಳಲ್ಲಿ ಆ ಭಾಂದವ್ಯಗಳನ್ನು ನಿಮ್ಮಂತಹ ಸಹೃಯಿ ಓದುಗರು ಮತ್ತಷ್ಟು ಗಟ್ಟಿಗೊಳಿಸುತ್ತಾರೆ ಎಂಬ ನಂಬಿಕೆ ನಮ್ಮದು. ನಿಮ್ಮ ಕಿವಿ ಮಾತುಗಳು ನಮ್ಮನ್ನು ತಲುಪುತ್ತಲೇ ಇರಲಿ.. 
ನಿಮ್ಮೆಲ್ಲರ ಸಹಕಾರಕ್ಕೆ ಪಂಜು ಬಳಗ ಎಂದಿಗೂ ಋಣಿ.. ಧನ್ಯವಾದಗಳು..

ಮಾಂತೇಶ ಅಕ್ಕುರ
ಮಾಂತೇಶ ಅಕ್ಕುರ
4 years ago

ನಾನು ಕೆಲ ಕವಿತೆಗಳು ಹಾಸ್ಯ ಚುಟುಕುಗಳನ್ನು ಬರೆದಿದ್ದೇನೆ ಅದಕ್ಕೆ ಡಾಕ್ಟರ್ ಗುರುರಾಜ ಕರ್ಜಗಿ. ಅವರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದೇನೆ. ಅವರ ಸಲಹೆಯಂತೆ ಇತ್ತೀಚಿಗೆ ಒಂದು ಕಥೆಯನ್ನು ಬರೆಯಲು ಸಹ ಪ್ರಾರಂಭಿಸಿದ್ದೇನೆ ಅದನ್ನು ಎಲ್ಲಿ ಬಿಂಬಿಸುವುದು ಅಂತ ಯೋಚಿಸುವಾಗ ಕಂಡುಬಂದಿದ್ದು ನಿಮ್ಮ ಪತ್ರಿಕೆ ನೀವು ಒಂದು ಅವಕಾಶ ಮಾಡಿಕೊಟ್ಟರೆ ಕನ್ನಡಕ್ಕೆ ಬಿಲಿಯನ್/1 ಭಾಗದಷ್ಟಾದರು ಮೆರಗು ಗೊಳಿಸಲು ಪ್ರಯತ್ನಿಸುವೆ.
ಕಲಿಯುಗದಲ್ಲಿ ಮರೆಯಾಗುತ್ತಿರುವ ಕನ್ನಡವ ಕತ್ತಲೆಯಿಂದ ಬೆಳಕಿನಡೆಗೆ ಕರೆದು ತರುತ್ತಿದೆ ದೀಪದಂತೆ ಹಿಡಿದು ಪಂಜು,
ನೀನೆಷ್ಟೇ ಪರಿಣಿತಿ ಹೊಂದಿದ್ದರು ಕನ್ನಡಕ್ಕೆ ಮಾತ್ರ ನೀನು ಅಂಜು,
ಅಂಜಿ ನಡೆದಾಗ ಮಾತ್ರ ಸಾಧ್ಯ ಕರಗತ ವಾಗುವುದು ಕನ್ನಡ ಪದಗಳ ಕಗ್ಗಂಟಿನ ಹಿಮ ಮಂಜು,
ಆ ಮಂಜು ಕರಗಲು ಸೂರ್ಯನ ಶಾಖಬೇಕು ಈ ಮಂಜು ಕರಗಲು ನಾವು ಕನ್ನಡವ ಪ್ರೀತಿಸಬೇಕು….

ಮಾಂತೇಶ ಅಕ್ಕುರ
ಮಾಂತೇಶ ಅಕ್ಕುರ
4 years ago

ಪಂಜುಗೆ ಅಭಿನಂದನೆಗಳು.
ನಾನು ಕೆಲ ಕವನಗಳು ಮತ್ತು ಹಾಸ್ಯ ಚುಟುಕುಗಳನ್ನು ಬರೆದಿದ್ದೇನೆ, ಹಾಗೂ ಕೆಲವುಗಳನ್ನು ಡಾ. ಗುರುರಾಜ್ ಕರ್ಜಗಿ ಅವರೊಂದಿಗೆ ಹಂಚಿಕೊಂಡು ಒಳ್ಳೆ ಪ್ರತಿಕ್ರಿಯೆಯನ್ನು ಪಡೆದಿದ್ದೇನೆ. ಅವರ ಸಲಹೆಯಂತೆ ಒಂದೇ ವಿಷಯವನ್ನು ಆದರಿಸಿ ಕಥೆಯನ್ನು ಬರೆಯುತ್ತಿದ್ದೇನೆ ಆದರೆ ಇವನ್ನೆಲ್ಲ ಬಿಂಬಿಸಲು ಒಂದು ಅವಕಾಶ ಬೇಕಾಗಿದೆ ತಾವು ಒಪ್ಪಿಗೆ ಕೊಟ್ಟರೆ ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ
ಕನ್ನಡವನ್ನು ಬಿಲಿಯನ್ನನಿನ ಒಂದು ಭಾಗದಷ್ಟು ಆದರೂ ಮೇರಗುಗೊಳಿಸುವ ಆಸೆಯಿದೆ.

ಕಲಿಯುಗದಲ್ಲಿ ಕಳೆದುಹೋದ ಕನ್ನಡವ ಹುಡುಕಿ ತರುವ ಪ್ರಯತ್ನವನ್ನು ಮಾಡುತಿದೆ ಹಿಡಿದು ಬೆಳಗಿನ ಪಂಜು
ನೀನು ಯಾರಿಗಾದರೂ ಅಂಜುವದಾದರೆ ಅದು ಕನ್ನಡಕ್ಕೆ ಮಾತ್ರ ಅಂಜು
ಅಂಜಿ ನಡೆದಾಗ ಮಾತ್ರ ಕರಗುವುದು ಕನ್ನಡ ಪದಗಳು ಕಗ್ಗಂಟಿನ ಹಿಮ ಮಂಜು
ಆ ಮಂಜು ಕರಗಲು ಸೂರ್ಯನ ಶಾಖಬೇಕು
ಈ ಮಂಜು ಕರಗಲು ಕನ್ನಡವ ಪ್ರೀತಿಸಬೇಕು…..

ಮಾಂತೇಶ ಅಕ್ಕುರ
ಮಾಂತೇಶ ಅಕ್ಕುರ
4 years ago

ಅಭಿನಂದನೆಗಳು.
ನಾನು ಕೆಲ ಕವನಗಳು ಮತ್ತು ಹಾಸ್ಯ ಚುಟುಕುಗಳನ್ನು ಬರೆದಿದ್ದೇನೆ, ಹಾಗೂ ಕೆಲವುಗಳನ್ನು ಡಾ. ಗುರುರಾಜ್ ಕರ್ಜಗಿ ಅವರೊಂದಿಗೆ ಹಂಚಿಕೊಂಡು ಒಳ್ಳೆ ಪ್ರತಿಕ್ರಿಯೆಯನ್ನು ಪಡೆದಿದ್ದೇನೆ. ಅವರ ಸಲಹೆಯಂತೆ ಒಂದೇ ವಿಷಯವನ್ನು ಆದರಿಸಿ ಕಥೆಯನ್ನು ಬರೆಯುತ್ತಿದ್ದೇನೆ ಆದರೆ ಇವನ್ನೆಲ್ಲ ಬಿಂಬಿಸಲು ಒಂದು ಅವಕಾಶ ಬೇಕಾಗಿದೆ ತಾವು ಒಪ್ಪಿಗೆ ಕೊಟ್ಟರೆ ನಿಮ್ಮೊಂದಿಗೆ ಹಂಚಿಕೊಳ್ಳುವಾಸೆ
ಕನ್ನಡವನ್ನು ಬಿಲಿಯನ್ನನಿನ ಒಂದುಭಾಗದಷ್ಟುಆದರೂ ಮೇರಗುಗೊಳಿಸುವ ಆಸೆಯಿದೆ.

ಕಲಿಯುಗದಲ್ಲಿ ಕಳೆದುಹೋದ ಕನ್ನಡವ ಹುಡುಕಿ ತರುವ ಪ್ರಯತ್ನವನ್ನು ಮಾಡುತ್ತಿದೆ ಹಿಡಿದು ಬೆಳಕಿನ ಪಂಜು,
ನೀನು ಯಾರಿಗಾದರೂ ಅಂಜುವದಾದರೆ ಅದು ಕನ್ನಡಕ್ಕೆ ಮಾತ್ರ ಅಂಜು,
ಅಂಜಿ ನಡೆದಾಗ ಮಾತ್ರ ಕರಗುವುದು ಕನ್ನಡ ಪದಗಳು ಕಗ್ಗಂಟಿನ ಹಿಮ ಮಂಜು,
ಆ ಮಂಜು ಕರಗಲು ಸೂರ್ಯನ ಶಾಖಬೇಕು
ಈ ಪಂಜು ಕರಗಲು ಕನ್ನಡವ ಪ್ರೀತಿಸಬೇಕು…..

30
0
Would love your thoughts, please comment.x
()
x