ಕಾವ್ಯಧಾರೆ

ಪಂಜು ಕಾವ್ಯ

ನೀ ಬಂದು ನಿಂತಾಗ

ಎಂದಾದರೊಮ್ಮೆ 
ಬಳಿ ನೀನು ಬಂದರೆ 
ಕೊಡಲೇನ ನಿನಗಾಗಿ ಹೇಳು
ಚಂದದ ಚೆಲುವಿನ  
ಮನದಾಗಿನ ಭಾವನೆಗಳ ಸಾರುವ
ಅಂದದ ಕಾಣಿಕೆಯು 
ನಿನಗಾಗಿ ಕಾದಿಹುದು ಕೇಳು

ಪ್ರತಿದಿನವು ಮೂಡಿಹುದು 
ಒಲವಿನ ರಂಗವಲ್ಲಿ
ನಿನ್ನ ಆಗಮನಕ್ಕಾಗಿ ಕಾದು
ಪ್ರತಿಸಾಲು ಸಾರಿಹುದು
ಅಭಿಮಾನವ ರಂಗುಚೆಲ್ಲಿ
ನನ್ನೆಲ್ಲಾ ಗಮನವ ನಿನ್ನೆಡೆಗೆ ಸೆಳೆದು

ತಂಪಾದ ತಂಗಾಳಿ
ಚಾಮರವ ಬೀಸಲು ಅಣಿಯಾಗಿದೆ
ಬಳಿ ನೀನು ಬರಲು ದಣಿದು
ಮುಗಿಲಿನ ಮೋಡವು ಪನ್ನೀರ 
ಎರಚಲು ಸುತ್ತೆಲ್ಲಾ ಕವಿದಿದೆ
ಖುಷಿಯಿಂದ ಕುಣಿದು

ಮತ್ತಷ್ಟು ಉಡುಗೊರೆಗಳು ಕಾದಿವೆ 
ನಿನಗಾಗಿ, ಒಮ್ಮೆ ಬಂದಿಲ್ಲಿ ನೋಡು
ನೀ ಬರುವ ತನಕ, ನನಗೊಂದೇ ತವಕ
ಕಾಯುವೆ ನಿನ್ನ ಭೇಟಿಗೆಂದು ಕೊನೆಯತನಕ!

– ಯದುನಂದನ್ ಗೌಡ  ಎ.ಟಿ 

 

 

 

 


ಮುಖವಾಡ:

ಮೇಲೆಷ್ಟು ನಗು..ಒಳಗಷ್ಟೆ ಅಳು…
ನಿನ್ನ ಅಂತರಂಗದ ತೊಳಲಾಟ ಬಲ್ಲವರು ಯಾರು..
ನಿನ್ನ ಆಸೆ ಆಕಾಂಕ್ಷೆಗಳು ಬೂದಿ ಮುಚ್ಚಿದ ಕೆಂಡವಾದವೆ…
ನಿನ್ನವರೆಲ್ಲ ಇದ್ದು ಒಂಟಿಯಾದೆಯ ನೀ…
ಮೇಲಷ್ಟೇ ಸುಖ ಒಳಗಷ್ಟೇ ದುಃಖ…
ನಿನ್ನ ಅಸಹಜತೆಯ ಸಹಜತೆಯ ಬದುಕಿಗೆ ನೀನೆ ಕನ್ನಡಿ…
ನಿನ್ನ ಬಿಂಬ ನೋಡುವವರಾರು ಇಲ್ಲ ಅಲ್ಲಿ…..
ರಂಗ ಮಂಟಪದ ನಾಟಕಕ್ಕೆ ನಿನೊಬ್ಬಳೆ ಪಾತ್ರ             
ನೀನೊಬ್ಬಳೆ ಅದರ ಸೂತ್ರಧಾರಿ
ಪಾತ್ರಗಳ ನಡುವೆ ಸಂಘರ್ಶವಿಲ್ಲ
ಅದರ ಜುಟ್ಟು ನಿನ್ನ ಕೈಲಿದೆ ಅಲ್ಲ..
ನಿನ್ನ ಮುಖವಾಡದ ಬದುಕಿಗೆ ತೆರೆಬೀಳುವ ಕಾಲ ಬಂದಿದೆಯಾ!!
ನಿನ್ನ ಕಾಲದ ಅಂತ್ಯದಲ್ಲಿ ಅದು ಸಮಾಧಿ ಆಗುವುದ!!!
-ಆಶು….

 

 

 

 


ಒಂಟಿ ನಾ
ಈ ಜಾತ್ರೆಯಲಿ
ಕಣ್ಣಿರು ಖಾಲಿಯಾಗುವವರೆಗೂ
ಅಳುವೆ ನಾ ನಿನಗಾಗಿ
ಈ ಹೃದಯದ ಕೊನೆಯ ಮಿಡಿತವೂ ಕೂಡ ನಿನಗಾಗಿ…

ಒಂಟಿ ನಾ
ಈ ಜಾತ್ರೆಯಲಿ
ನೀನಿರದೆ ಹೋದರೆ..
ಬೇರೆ ಯಾರು ಕಾಣರು ನಿನ್ನ ಬಿಟ್ಟು
ಬೇರೆ ಏನೂ ಕೇಳದು ನಿನ್ನ ಧ್ವನಿಯ ಬಿಟ್ಟು…

ಖಾಲಿಯೆನಿಸುತಿದೆ
ನಿನಿಲ್ಲದ ಈ ಜೀವನ
ನೀ ಕಾಲಿಟ್ಟ ಕ್ಷಣ ಜೊತೆಯಾಗಿ ನಡೆಯೋಣ
ಮತ್ತೆ ಈ ಖಾಲಿ ಜೀವನದಲ್ಲಿ…

ನಾನೇ ಬಲಿಯಾಗುವ ಮಟ್ಟಿಗೆ ಬಂದಿದೆ
ನೀನಿಲ್ಲವೆಂಬ ಕೊರಗು..
ಕೊಡದಿರು ಇನ್ನಷ್ಟು ನೋವು
ಈಗಾಗಲೇ ನೊಂದ ಈ ಮನಸಿಗೆ…

ಕಾಯುವೆ ನಾ 
ನೀ ಬರುವವರೆಗೂ
ಬರದೇಹೋದರೂ…
ಕಾರಣ…
ಈ ಹುಟ್ಟು ನಿನಗಾಗಿ…
ಸಾವೂ…..
-ತೇಜಸ್ವಿನಿ ಮಠಪತಿ


ಕಲ್ಲಮೇಗಳ ಅನ್ನ
ಬೆಳ್ಳಿದಾರದ ಕುಣಿಕೆಗೆ
ಬಸವನ ಬಂಧಿಸಿ 
ಕರಡಿಗೆ ಕಟ್ಟಿ
ನೇತುಹಾಕಿ 
ಮಂತ್ರ ಜಪಿಸಿದರೆ 
ಮುಕ್ತಿಯೇ?

ಸುಡುವ
ಕಲ್ಲುಬಂಡೆ ಮೇಲೆ 
ತಂಗಳನ್ನವ ಸುರಿದು 
ಎತ್ತರದಿ      
ಬೊಗಸೆಗೆ  ಚೆಲ್ಲಿದರೆ ನೀರು
ಕಲ್ಲಮೇಗಳ ಅನ್ನಕೆ
ಹಸಿದು ಕೂತವನಿಗೆ
ಅಶ್ಲೀಲ ಭಾಷೆಯ ಸತ್ಕಾರವೆ?

ರುದ್ರಾಕ್ಷಿ-ಜನಿವಾರ
ಮಹಾಪೂಜೆಯ    
ತೋರ್ಪಡಿಕೆ
ಬೆವರಿನ ಶ್ರಮಕೆ
ಏನಿದು ಮಡಿವಂತಿಕೆ?

ನೋವ ಕಣ್ಣೀರ
ಮಣ್ಣೊಳಗಿನ 
ಬೇಸಾಯದ ಫಲವ 
ಮುಕ್ಕುವ
ಒಂದೇರಕ್ತದ ಮಾನವ
ನಿನೇಕೆ
ಸೃಷ್ಟಿಸಿದೆ ಕೋಲೆಗಡುಕ
ಸಿದ್ದಾಂತ 
ಜಾತಿ ಬೇದವ?

-ಸಿಪಿಲೆನಂದಿನಿ

 

 

 

 


ಹಾಲು ಬೆಳದಿಂಗಳು
ಕಪ್ಪು ರಸ್ತೆ
ಮರದ ನೆರಳು
~•~

ಕೊಳದ ಅಂಗಳ
ರಂಗೋಲಿ
ಬರೆಯುತಿದೆ ಕೀಟ
ಬೆಳದಿಂಗಳ ಬಣ್ಣ
~•~

ಎಲಚೆ ಮರದ
ಚಿಗುರಿಗೆ ರೆಕ್ಕೆಗಳು
ಹಾರಾಡುತ್ತಿವೆ
ಜೀರುಜಿಂಬೆ
~•~

ನಿಶೆರಾತ್ರಿಯ ಬೆನ್ನುತಟ್ಟಿ 
ನಿಶಬ್ಧವನ್ನು ಮಲಗಿಸಿತು
ಹಕ್ಕಿಯೊಂದು
ಟಿಂವ್ ಟಿಂವ್ ಟಿಂವ್ ಟಿಂವ್
~•~

ಕಣ್ಮುಚ್ಚಿ ಕಣ್ಣುಬಿಡುತಿರುವ
ನೇಸರ
ಮುಗಿಲ ತುಂಬಾ
ಅಲ್ಲಲ್ಲಿ
ಚದುರಿದಂತೆ ಮೋಡ
~•~

ಕಡಲ ನೀಲಿ
ಮೋಡದ ಕಪ್ಪು
ಹಸಿರು ಬಳ್ಳಿಯಲಿ
ಬಿಳಿ ಮಲ್ಲಿಗೆ
~•~

ಬೇಸಗೆ ಮಧ್ಯಾಹ್ನ
ಉರಿ ಬಿಸಿಲು
ಮೌನ ಮುರಿಯಿತು
ಅಗುಳು ಕಂಡು
ಕಾಗೆ ಕಾಂವ್ ಕಾಂವ್
~•~

ಈಗಷ್ಟೇ ಅರಳಿದ
ಹೂವಿಗೆ
ದಿಗ್ಭ್ರಮೆ
ಎಷ್ಟೊಂದು ದುಂಬಿಗಳು!
~•~

ಕಡಲು
ಮುಗಿಲು
ಅರೆ!
ಅವಳಿ ಚಂದಿರ
~•~

ಮುರಿದ ಮಿಠಾಯಿ
ನೆನಪಿಸಿದ ಚಂದಿರ
ಅಮಾವಾಸ್ಯೆ ಕಳೆದು
ಇಂದಿಗೆ ಒಂದುವಾರ
~•~

ಒಂದೇ ರಾತ್ರಿ
ನೂರು ಕಡಲು, ಕೊಳ, ನದಿ
ಒಬ್ಬನೇ ಚಂದಿರ
ಎಷ್ಟೊಂದು ಅಲೆಮಾರಿ
~•~

ಎಷ್ಟು ಸುರಿದರೂ
ಖಾಲಿಯಾಗುತ್ತಿಲ್ಲ
ಚಂದಿರ
ಬೆಳದಿಂಗಳು
~•~

ಚಿಗುರಿನ ತುದಿಯಲ್ಲಿ
ತೊಗರಿ ಹೂವು
ತೂಗಿದರೆ ತಂಗಾಳಿ
ಹಾರಿದಂತಿದೆ ಚಿಟ್ಟೆ 
~•~

~ ನವೀನ್ ಮಧುಗಿರಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪಂಜು ಕಾವ್ಯ

Leave a Reply

Your email address will not be published. Required fields are marked *