ಕಾವ್ಯಧಾರೆ

ಪಂಜು ಕಾವ್ಯ: ಸಿದ್ರಾಮ ತಳವಾರ, ಉಕುಮನಾಳ ಶಿವಾನಂದ ರುದ್ರಪ್ಪ

ಮೌಢ್ಯತೆ,,,
ಯಾವುದೋ ದಶಕಗಳಾಚೆ ಜುಟ್ಟು 
ಜನಿವಾರಗಳ ಧರಿಸಿ ಅರೆಬೆತ್ತಲೆಯಲಿ
ಕಾಯಕವಿರದೇ ಮಂತ್ರ ಜಪಿಸುತಿದ್ದವರೆಲ್ಲ
ಇಂದು ಮೆತ್ತಗಾಗಿರಬಹುದು,,
            ಆದರೆ, ಅವರು ಕಲಿಸಿದ ಹೀನ ಪಾಠ ಮಾತ್ರ
            ಹೊತ್ತಿ ಉರಿಯುತಿದೆ ಇಂದಿಗೂ;
            ಉಳ್ಳವರು ಬಿಟ್ಟರೂ ಮಾನಸಿಕ ಕಾಯಿಲೆಯಂತೆ
            ಜಾತೀಯತೆಯ ವಿಷ ಇವರಿಂದ ಹೊರಹೋಗುತ್ತಲೇ ಇಲ್ಲ,,
ದೊಡ್ಡವರೆಂದೆನಿಸಿಕೊಂಡವರೆಲ್ಲ ಹೀಗೆ
ಒಂದಿನ ಗೊತ್ತಿಲ್ಲದೇಯೇ ನನ್ನ ಒಳ ಕರೆದರು
ಆತ್ಮೀಯತೆಯಲೇ ಮುಗುಳ್ನಕ್ಕು ಪ್ರಶ್ನಿಸಿಯೇ ಬಿಟ್ಟರು
ನೀವು ಯಾವ ಜಾತಿಯವರು?
            ಕೇಳಿದೊಡನೆ ಕೊಂಚ ಢವ ಢವಗುಡುತಿದ್ದ ಎದೆ 
            ಮುಖದಲಿ ಸಣ್ಣಗೆ ಬೆವರನಿಳಿಸಿತ್ತು ಸತ್ಯವನೇ ನುಡಿದೆ
            ಮುಂಚೆ ಮುಗುಳ್ನಗೆಯಲಿ ಒಳಕರೆದಾತ ಯಾಕೋ
            ಮುಖ ಕಿವುಚಿಕೊಂಡ ಕೊಂಚ ದೂರ ಸರೆದ,
ನಯವಾಗಿಯೇ ಮಾರುತ್ತರಿಸಿದ ಅಮವಾಸ್ಯೆ !
ಒಳಗೆ ದೀಪವುರಿಯುತಿವೆ ನವದೇವಿಯರಿಗೆಲ್ಲ 
ಮೈಲಿಗೆಯಾದೀತು,,,
ಕೊಂಚ ಹೊರ ಮಾತನಾಡುವಾ ನಡೆಯಿರಿ,
            ಕೇಳಸಿಕೊಂಡದ್ದೇ ತಡ ಮೈ ಉರಿದುಕೊಂಡಿತು
            ಹಲ್ಲು ಕಚ್ಚಿ ಗಂಟಲು ಬಿಗಿದು ನನ್ನವರನೆಲ್ಲ ನೆನೆದೆ;
            ಎದುರಿಗಿದ್ದ ಗಾಂಧೀ ಅಂಬೇಡ್ಕರರ ಫೋಟೋ ನೋಡುತಲಿ
            ಒಮ್ಮೆ ಮುಗುಳ್ನಕ್ಕು ಇಟ್ಟ ಬಲಗಾಲಿನಲೇ ಹೊರನಡೆದೆ,,

ಸಿದ್ರಾಮ ತಳವಾರ

"ಮಾನವೀಯತೆಯ ಅಳಲು"

ಕಲ್ಪನೆಗೆ ಸಿಗದ ಕನಸು ಕಂಡೆನು
ಕಾಣದೂರಿನ ದಾರಿಲಿ
ಮನಸು ಮಿಡಿಯುವ
ಮುನಿಸು ಹೊಸೆಯುವ
ಮೌನದೆಳೆಗಳ ಜಾಳಿಗೆ

ಮುಗ್ಧ ಹಸುಳಯ ಹೊದ್ದು ಹೊರಡುವ
ಭೀಭತ್ಸ ಕೃತ್ಯದ ಜನರಿಗೆ 
ಮೌನ ಎಗರಿತು ಎದ್ದು ಒದ್ದಿತು
ಕಠಿಣ ಪದಗಳ ಪುಂಜದಿ

ಕಾಮ ತೃಷೆಗೆ ಕಾವಿ ಧರಿಸುವ
ಕಳ್ಳ ಜನಗಳ ಕೃತ್ಯಕೆ 
ಕತ್ತಿಯಂದದಿ ಪದವ ಮಸಿಯೋ
ವಿದ್ಯೆ ಕರಣಿಸು ದೈವವೇ

ಜಗಕೆ ಮಾದರಿಯಾಗಬೇಕಿಹ
ಚಲನಚಿತ್ರದ ನಕ್ಷತ್ರ 
ಚಂಚಲತೆಯ ಚಿತ್ರಬರೆದು ಛಿದ್ರವಾಗಿ 
ಒಂದುಗೂಡಿತು ನಂತರ

ಮಾನವ ಕೃತ್ಯಕೆ ಎಲ್ಲೆಯು ಎಲ್ಲಿದೆ
ಕೆದಕುತ ಹೊರಟಿತು ಕವಿಮನ
ಶ್ರಾವಣಮಾಸವು ಪ್ರತಿದಿನವಾಗಲಿ
ಪಾವಿತ್ರತೆಯು ಎಲ್ಲೆಡೆ ಹರಡಲಿ
ಜೀವನದುದ್ದಕೂ ಜೀವನದಾಚೆಗೂ 
ಮಾನವ ಸಂಕುಲ ಬೆಳಗಲಿ
ಮಾನವೀಯತೆಯ ಮುದುಡದ ತಾವರೆ
ಎಲ್ಲರ ಹೃದಯದಿ ಅರಳಲಿ
– ಉಶಿರು(ಶಿವು)
ಉಕುಮನಾಳ ಶಿವಾನಂದ ರುದ್ರಪ್ಪ

 

 

 


 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

One thought on “ಪಂಜು ಕಾವ್ಯ: ಸಿದ್ರಾಮ ತಳವಾರ, ಉಕುಮನಾಳ ಶಿವಾನಂದ ರುದ್ರಪ್ಪ

  1. ಜಾತಿಯತೆಯ ಮೊಳೆ ಎಷ್ಟೊಂದು ಬೇರೂರಿದೆ ಎಂಬುದನ್ನು ಕಾವ್ಯ ರೂಪದಲ್ಲಿ ಸಾಧರ ಪಡಿಸಿರುವ ಸಿದ್ರಾಮ ತಳವಾರ ನಿಮ್ಮ ಬರವಣಿಗೆ ಹಿಡಿಸಿತು.

Leave a Reply

Your email address will not be published. Required fields are marked *