ದೇವನೊಲಿದ
ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ
ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ-
'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ'
ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ'
ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ಪ್ರಾರ್ಥಿಸಿದೆ ದೇವರಿಗೆ-
'ನಾ ನಿನ್ನ ಕಂದ -ನೀನೆನ್ನ ತಂದೆ,ನಿನ್ನ ಕರುಣೆಯಿಂದ ಬೆಳಗಿಸುವೆ ಭುವಿಯ'
ಮಂದಾರ ಮಾರುತದಂತೆ ಮಬ್ಬಾದ ದೇವನದೆಂದಿನಂತೆ ನಿರುತ್ತರ.
ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ
ನುಡಿದೆ ದೇವರಿಗೆ-
'ನಿನ್ನಿನ ಭುವಿಯ ಬೇರು ನಾ -ನೀ ನಾಳಿನ ಕುಸುಮಾಗಸ ನನ್ನಾನಂದ, ತೇಜದಿ ಬೆಳೆವ ಬಾ ಬಾ'
ಬಾಗಿದ ದೇವ ಜಲಧಿ ಝರಿಯಪ್ಪುವ ಸಡಗರದಲ್ಲಿ ನನ್ನ ಮೆಲ್ಲನೆತ್ತಿ ತೇಲಿಸಿದ
ದಿಗ್ ದಿಗಂತದಲ್ಲಿ ನಾ ಜಾರುವಾಗ ನನ್ನೊಂದ್ದಿಗಿದ್ದ ನಾ ದೇವ.
-ಅನಿಲ್ ತಾಳಿಕೋಟಿ
(ಖಲೀಲ ಗೀಬ್ರಾನನ 'God' ಪದ್ಯದ ಭಾವಾನುವಾದ)
ಕಪ್ಪು
ಕಪ್ಪಾಗಿ ಹುಟ್ಟಿದ್ದು
ತಪ್ಪಾಯ್ತು ಹಡೆದವ್ವ
ಕೀಳಾಗಿ ಕಂಡಾರ
ನೋಡಕ ಬಂದವರು..
ನನ್ನ ಹೆತ್ತ್ಯಾಕ ಬಿಟ್ಟು
ನಿನೋದೆ ನನ್ನವ್ವ
ಇದ್ದು ಇಲ್ಲದ್ಹಂಗಾಯ್ತು
ನನಗ ತವರೂರು..
ಮನಸಿನ ನೋವು
ಮಸಣವಾಗೈತಿ
ಹುಟ್ಟಿ ಹಡದವ್ನ ತಿಂದ್ಳುಂತಾದ
ಊರೂರು..
ಬಂದ ವರಗಳೆಲ್ಲಾ ಸಿಹಿ ತಿಂಡಿ
ತಿಂದಾರ ಹೆಣ್ಣು ಕಪ್ಪೆಂದು ಕಹಿ
ಸುದ್ದಿ ಹೇಳ್ಯಾರ
ಅಪ್ಪ ಗೊಣಗುತ್ತಾ ಇಡಿ ಶಾಪ
ಹಾಕ್ಯಾನ ನೀ ಹುಟ್ಟಿದ್ದು ನನಗೆ
ಅಪಶಕುನ ಅಂದಾನ
ಯಾರ ಮುಂದರ ನೋವ
ಹೇಳಲಿ ನನ್ನವ್ವ ಹಡದವ್ವ
ಇಲ್ಲದ ತಬ್ಬಲಿ ನಾನವ್ವ..
ಭೂಮಿ ತಂಪಾಗಕ ಕವಿದ
ಮೋಡ ಕಪ್ಪು
ಬೇಸಾಯ ಬೆಳೆಯುವ
ಭೂತಾಯಿಯು ಕಪ್ಪು
ಕಪ್ಪು ಬಣ್ಣದ ನಾನು ಹುಟ್ಟಿದ್ದೆ
ತಪ್ಪು ಅಂತಾದ ನನ್ನವ್ವ
ಈ ಜಗವೆಲ್ಲ
ಕಪ್ಪು ಬಣ್ಣದ ಚಮ೯ಕ
ಮನಸಾಕ್ಷಿ ಇಲ್ಲೆನಾ ನನ್ನವ್ವ?
ಬಡವರಿಗೆ ಕಪ್ಪು ಬಣ್ಣ
ಕೊಡಬ್ಯಾಡಂತ ಮ್ಯಾಲೆ
ಶಿವನಿಗೆ ನೀನೇಳವ್ವ..
-ಸಾಬಯ್ಯ ಕಲಾಲ್
ಹಾದಿಯೊಂದರ ಹಾಡು
ಈ ಹಾದಿಯಲ್ಲೀಗ ಕೋಗಿಲೆ ಮಡಿದಿದೆ
ಹಸಿನೆನಪ ಹಾವಳಿಗೆ ಬಿರಿದು ಮೋಡ ತುಸು ಬಿಕ್ಕಿದೆ
ಎದೆಯ ಜೋಗುಳ ಮೊರೆವ ಕಾನನ
ಮೌನ ಸರಣಿಯ ಮಂಥನ
ಕೊರೆವ ಹೆಸರ ಬರೆವ ಉಸಿರೇ
ನೋವ ಕವಿತೆಗೆ ಬಂಧನ
ಹರಿಯಲಿಲ್ಲ ಹನಿಸಲಿಲ್ಲ
ಅಬ್ಧಿಯಂಗಳ ಪಾತ್ರಕೆ
ಉರಿಯಲಿಲ್ಲ ಆರಲಿಲ್ಲ
ಮರೆತು ಹೊರಟ ಮಾತ್ರಕೆ
ತಡಿಯ ಮೋಹ ಕಡಲ ನೋವ
ಬಲ್ಲ ಹೆಜ್ಜೆಗೆ ಯಾವ ಪಾಡು
ನೀಲ ಸ್ಥಂಭಿನಿ ಭಾವ ಸ್ಪಂದಿನಿ
ಭ್ರಮಿಪ ಮಾತ್ರಕೆ ಯಾವ ಹಾಡು?
ಅಡ್ಡ ಸಾಲಿನ ಉದ್ದ ಪದಕೆ
ಇನ್ನು ಬದ್ದವದಾವ ಸಂಕಲ್ಪ?
ಚೂರು ಚೂರೇ ಜಿಟಿವ ಮಳೆಗೆ
ಬಿದ್ದರೂ ಕವಿತೆಗೆ ನೋವು ಅಲ್ಪ ?
ತಿರುಗಿ ಅರಳದ ಕನಸ ಹೂವಿಗೆ
ಪಡಿಯಚ್ಚುಳಿದು ಅಳಿಸದ ಹೆಸರ ಗುಂಗು
ದೂರವಾದ ಹಾಡಿನೆದೆಗೆ
ಮತ್ತೇಕೆ ನನ್ನ ಪದದ ಹಂಗು?
-ರಾಘವೇಂದ್ರ ಹೆಗಡೆ
ಈ ಸಂಜೆಯ ಏಕಾಂತದಲಿ
ಈ ಸಂಜೆಯ ಏಕಾಂತದಲ್ಲಿ
ಹೊಳೆಯ ಸನಿಹ ನಿನ್ನ ನೆನಪಿನಲ್ಲಿ
ಅಲೆಯು ಬಂದು ನನ್ನ ಚುಂಬಿಸಿದಾಗ
ಬರಲಿಲ್ಲ ನೀನು ಸುಖವು ನನ್ನ ಮರೆಸಿತೇನು
ಅಂದು ನೀನು ಕೊಟ್ವ ಕೊಡುಗೆ
ನನ್ನೆದೆಯ ತೋಟದಲಿ ಹೂವಾಗಲಿತ್ತು
ಬರಿದೆ ಭಣಗುಡುವ ಬಯಲಿನಲಿ
ಬಿಸಿಲ ಝಳದಂತೆ ಪರಿತಪಿಸಿ ನಾನು
ಬನಬನದಲಿ ಸುತ್ತಿ ಸುಳಿದು
ಕಣಕಣದಲಿ ಪ್ರೀತಿ ಬೆಳೆದು
ನಿನ್ನ ನಗುಮೊಗವ ಕಂಡಾಕ್ಷಣ
ಕಣ್ಣರಳಿ ಪುಳಕ ಮೈಮನ
ಆಕಾಶ ನೀಲಿಯ ರಂಗು ಬಳಿದು
ನಿನ್ನಂತರಂಗದಿ ಚುಕ್ಕಿಯಾಗುಳಿದು
ದೂರದಿಗಂತದ ಮುಡಿಯ ಮೇಲೆ
ನಗೆಮಲ್ಲಿಗೆಯಾಗೋ ಧ್ರುವತಾರೆ ನಾನು
ಮನದ ಕಾನನದೆ ಸೌಗಂಧಿಕಾಪುಷ್ಪವೇ
ಬಳೆಯ ಕಿಂಕಿಣಿಯಲಿ ಪ್ರಣಯ ಚೆಲುವೇ
ಹ್ರದಯ ಸೋತು ಸೊರಗಿದೆ ಈಗ, ನಿನ್ನಾ
ನೆನಪಲ್ಲೇ ತೊಳತೊಳಲಿ ಬರಡಾದೆ ನಾನು.
-ಚಿನ್ನುಪ್ರಕಾಶ್ ಶ್ರೀರಾಮನಹಳ್ಳಿ
ಬಯಕೆ,,
ಬೆತ್ತಲಾಗುವ ಬಯಕೆ
ಮೈ ತೋರಲಂತೂ ಅಲ್ಲ
ಮೈ ಮೇಲಣ ಮೋಹ ಕಡಿದುಕೊಳಲಷ್ಟೇ !
ಅಂಗಾಂಗಗಳ ಹಸಿವಿನಿಂದ
ಕಂಗೆಟ್ಟ ಬಲಿತ ಯುವ ದೇಹಿಗಳ
ತಣಿಸಲು,
ಇದು ಮತ್ತೊಬ್ಬ ಅಮಾಯಕ ಹೆಣ್ಣು
ನೀಲಿ ಕಂಗಳಿಂದ ತನ್ನ ತಾನುಳಿಸಿಕೊಳಲು,
ದುಡ್ಡಿದ್ದವನುಪವಾಸವ ನೀಗಿಸಲು,
ಇದು ಹಗಲಲ್ಲೇ ವಿಕೃತ (ಕಾ) ಮನದಿ
ಹೆಗಲ ಮೇಲಣ ಜವಾಬ್ದಾರಿಯ ಮರೆತ
ಹುಂಬರ ಹಮ್ಮು ಬಿಮ್ಮುಗಳ ನೀಗಿಸಲು,,,
ಇದು ಬೋ ಎಂದು ಬೋರ್ಗರೆದು ಬರುವ
ಕಾಮದ ಝರಿಯಲಿ ಬಿದ್ದು ಸುಳಿಗೆ ಸಿಲುಕದ
ಹಾಗೇ ಕಾಮಿಗಳ ರಕ್ಷಿಸಲು,,,,
ಇಂದು ನಾ ಬೆತ್ತಲಾಗಬಯಸಿಹೆನಷ್ಟೇ,,,
ಇದು ಅಂದು ಅರಿತೋ ಅರಿಯದೆಯೋ ನಾ
ಕಳೆದುಕೊಂಡ ನನ್ನ ಚಪ್ಪಲಿಯ ಅಂಗುಷ್ಟದ ಕಥೆ,,,,
ಅದ ಹುಡುಕಿ ಹುಡುಕಿ ಕಿತ್ತೋದ ಹರಕು
ಚಪ್ಪಲಿಗೆ ಮತ್ತೊಂದಾವರ್ತಿ ಅಂಗುಷ್ಟವ
ಜೋಡಿಸಲು ಈ ಕೆಂಪು ದೀಪದಡಿ ನಿಂತ ಕಥೆ,,,
ಸಾಕು ಈ ಕೆಂಪು ದೀಪದಡಿಯಲಿ ನಾ
ಕತ್ತಲಾಗುವ ಹೊತ್ತಿಗೆ ಬೆತ್ತಲಾಗುವುದಾದರೆ !
ಈ ಜಗವೆಲ್ಲ ಬೆಳಕಾಗುವುದಾದರೆ,,,
ಅಗೋ ನಗರದಲಿ ಇದೀಗ ಕೆಂಪು ದೀಪ
ಉರಿಯುವ ಸಮಯ, ನೆನಪಿರಲಿ! ಇದು
ಗಿರಾಕಿಗಳ ಮನ ತಣಿಸುವ ವಿಷಯ,,,,
-ಶಿದ್ರಾಮ ತಳವಾರ್
ನಮ್ಮೊಳಗಿನ ವಿಲಕ್ಷಣ ಭಯ…
ನಮ್ಮೊಂದಿಗೆ ವಾಸಿಸುವ ಎಲ್ಲವೂ ನಮ್ಮೊಳಗಿವೆ
ಒಂದೊಂದು ಆಕಾರ ಹೆಸರಿಸುತ್ತೇವೆ ಒಂದೊಂದಕ್ಕೆ
ಅತ್ತಿತ್ತ ಸುಳಿದಾಡಿದರೆ ಬೆಕ್ಕಿಗೆ ಅಪಶಕುನದ ಪಟ್ಟ ಕಟ್ಟುತ್ತೇವೆ
ನಮ್ಮೊಳಗಿನ ಸಂಶಯಕ್ಕೆ ಮೂರ್ತ ರೂಪ ಕೊಟ್ಟು…
ಮುಕ್ಕೋಟಿ ದೇವತೆಗಳನ್ನು ಹಸುವಿನಲ್ಲಿ ಅವತರಿಸಿ
ಪೂಜಿಸುವ ನಾವು ಪಕ್ಕದಲ್ಲೇ ಇದ್ದು ಬಹುಪಾಲು
ಹಾಲು ಕೊಡುವ ಎಮ್ಮೆಗೆ ದೆವ್ವದ ಸ್ಥಾನ ಕಲ್ಪಿಸುತ್ತೇವೆ
ಮುದಿಯಾದರೆ ಪೂಜಿಸಿಕೊಂಡ ಆಕಳು ಎತ್ತುಗಳನ್ನೇ
ನಿರ್ದಯವಾಗಿ ಅಟ್ಟುತ್ತೇವೆ ಕಸಾಯಿಖಾನೆಗೆ…
ನಿಯತ್ತಿನ ನಾಯಿ, ಭಾರ ಹೊರುವ ಕತ್ತೆ
ಪ್ರಾಮಾಣಿಕತೆಗೆ ಹೆಸರಾದರೂ ನಮ್ಮೊಳಗಿನ ವಿಲಕ್ಷಣ ಖುಷಿಗೆ
ಬಯ್ಗುಳದ ಪದಗಳಾಗಿ ಸದಾ ಹಿಯಾಳಿಸುತ್ತೇವೆ ಅವುಗಳನ್ನು…
ಇದ್ದಾಗ ತಾಯಿ-ತಂದೆಯರನ್ನು ಸರಿಯಾಗಿ ನೋಡದ ನಾವು
ಸತ್ತಾಗ ಅಶ್ರುತರ್ಪಣಗೈದು ಅವರಿಗಾಗಿ ಇಟ್ಟ ಪಿಂಡವನ್ನು
ಕಾಗೆ ಮುಟ್ಟಿದರೆ ಕೃತಾರ್ಥರಾಗುತ್ತೇವೆ
ಒಂದಗುಳ ಕಂಡರೆ ತನ್ನ ಬಳಗವ ಕೂಗಿ ಕರೆದು
ತಿನ್ನುವ ಅದರ ಗುಣವ ಮರೆತು
ಭೀಕರ, ಭಯಾನಕತೆಗೆ ರೂಪಕವಾಗಿಸುತ್ತೇವೆ…
ಹೀಗೆ…ಕಾಗೆ, ಗೂಬೆ, ಬೆಕ್ಕು, ಹಲ್ಲಿ ನಮ್ಮೊಳಗಿನ ಭಯಕ್ಕೆ
ವಿಲಕ್ಷಣ ರೂಪ ಪಡೆದು ಅಪಶಕುನದ ಪ್ರತಿಮೆಗಳಾಗುತ್ತವೆ
ಹುಣ್ಣಿಮೆಯ ಬೆಳದಿಂಗಳೂ, ಅಮವಾಸೆಯ ಕತ್ತಲೂ
ಮಂತ್ರ ತಂತ್ರದ ವಶಕ್ಕೆ ಮೂಹೂರ್ತಗಳಗುತ್ತವೆ
ಉಣ್ಣುವ ಅನ್ನ, ಹಣ್ಣು-ಹಂಪಲ, ಅರಿಸಿಣ, ಕುಂಕುಮವೂ
ಹುಸಿ ಮಂತ್ರ ತಂತ್ರದ ಸರಕುಗಳಾಗಿ ವಿಲಕ್ಷಣ ಭಯ ಹುಟ್ಟಿಸುತ್ತವೆ…!!
-ವೈ.ಬಿ.ಹಾಲಬಾವಿ
ಕವನಗಳು ಚೆನ್ನಾಗಿವೆ