ಕಾವ್ಯಧಾರೆ

ಪಂಜು ಕಾವ್ಯಧಾರೆ

ಮಾಯವಾಗಿದೆ ಖಾಸಗಿತನ

ಮಾಯವಾಗಿದೆ ನಮ್ಮ ಖಾಸಗಿತನ
ಮಾಯವಾಗಿದೆ
ಅಬ್ಬರದ “ಸೆಲ್ಪಿ”ಗಳ ನಡುವೆ
ಸೂತು ಸೊರಗಿದೆ

ಎಲ್ಲವನ್ನು ಕ್ಷಣಾರ್ಧದಲ್ಲಿ ಕ್ಲಿಕ್ಕಿಸಿ
ಸಾಮಾಜಿಕ ಜಾಲಕ್ಕೆ ಹರಿಬಿಡುವ,
ಅಳಿಯದ ಗೋಡೆಗೆ ಅಂಟಿಸುವ
ಧಾವಂತದಲಿ ಮಾಯವಾಗಿ ನಮ್ಮ ಖಾಸಗಿತನ‌

ಎನಿದ್ದರು ಆಗದು ಬಣ್ಣದ ಪಟ
ಎಷ್ಷೂ ತೆಗೆದರು ಸಾಲದು
ಕಾಯಕವೇ ಕೈಲಾಸ ಮರೆತುಹೊಯಿತು
ಎಲ್ಲೆಂದರಲ್ಲಿ ಸೇಲ್ಪಿ ಕಾಯಕವಾಯಿತು
ಕಾರು ,ಬಸ್ಸುಗಳಲ್ಲದೆ, ತಿಂದ್ದು ,ಹೇತದ್ದು ಎಲ್ಲ ಪಟಗಳನ್ನು
“ಅಪ್ಲೋಡ್ ” ಮಾಡುವದೇ ಕೆಲಸವಾಯಿತು ..!
ಖಾಸಗಿತನ‌ ಮಾಯಾವಾಯಿತು .

ಮರೆಯದ ಗೋಡೆಗೆ ಅಂಟಿಸಿ ,
ಮನೆಯಲ್ಲೂ ,ಮನದಲ್ಲೂ ಗೋಡೆಗಳು
ಎದ್ದುನಿಲ್ಲವಂತಾಯಿತು .
ಗೋಡೆ ಮರೆಯುವದಿಲ್ಲ
ಮನಗಳು ಒಂದಾಗುವದಿಲ್ಲ ..!

ಸಾಮಾಜಿಕ ತಾಣ ಖಾಸಗಿತನದ
ಸರಕಾಯಿತು ಸಮಾಜ ,ಬದುಕಿನ
ನಡುವಿನ ಸೂಕ್ಷ್ಮ ಗೆರೆ ಅಳಿಸಿಹೋಯಿತು
ವಿವೇಕ ಎಂಬ ಬುದ್ದಿಗೆ ಗೆದ್ದಲು ಹಿಡಿಯಿತು
ಖಾಸಗಿತನ ಮಾಯವಾಯಿತು ….

ಬಯಲಿಗೆ ಬಯಲು ಅಲ್ಲಮ
ಗುರುವಿನ ಬಯಲು ದೂರ ಸರಿಯಿತು
ತೋರಿಕೆಯ ಜಗತ್ತು ನಮ್ಮನ್ನು ಸುತ್ತುವರೆಯಿತು
ಅದ್ಬುತ ಅಂತರ್ಜಾಲ ಖಾಸಗಿತಾಣವಾಗಿ
ಅವುಗಳಿಗೆ ಲೈಕು ,ಕಾಮೆಂಟು ಎಂಬ ಅಮಲು‌
ಏರಿ ಜನಕೋಟಿ ಇದರ ದಾಸ್ಯಕ್ಕೆ ಜೋತುಬಿತ್ತು

ರೇಶ್ಮಾ ಗುಳೇದಗುಡ್ಡಾಕರ್

ಪೂಜೆಯೊಳಗೊಂದು ಧ್ಯಾನ

ಸೂರ್ಯ ಮುಖ ತೋರುವ ಮುನ್ನ
ತೋಟಕ್ಕೆ ನುಗ್ಗಿ ಸೊಳ್ಳೆ ನುಸಿಗಳಿಗೆ
ಚಪ್ಪಾಳೆ ಇಕ್ಕುತ್ತಲೆ ಹೂ ಬಿಡಿಸಿ
ಎಳೆ ತುಳಸಿದಳಕ್ಕೆ
ಉಗುರ ತಾಗಿಸದೆ
ಚಿವುಟಿ ಬುಟ್ಟಿ ತುಂಬಿ
ಮನೆಯೊಳಗೆ ತಲೆ
ಹುಗಿಸುವಾಗ ಕಾಫಿ ಗಮ
ಜಳಕಕ್ಕೆ ಮುನ್ನ
ಕುಡಿವ ಕೆಫೀನಿಗಿನ್ನಾವುದು ಸಮ!

ರಾತ್ರಿ ಮೂಲೆ ಮೂಲೆಗಳಿಗೆ
ಹೊಡೆದ ʼಹಿಟ್‌ʼ ಫಲ
ಅಂಗಾತ ಬಿದ್ದ ಜಿರಲೆಗಳು
ಒಂದಷ್ಟು ಕೆಂಪು ಇರುವೆಗಳು
ಹಲ್ಲಿ ಬಿದ್ದಿರಬಹುದಾ? ಸೂಕ್ಷ್ಮಗಣ್ಣು
ಕಾಣಿಸದ ಕೋಟಿ ಸೂಕ್ಷಾಣು
ಸದ್ಯಕ್ಕೆ ಸಮಯಕ್ಕೇ ಪೂಜೆ ಧ್ಯಾನ

ಪುಷ್ಪಾರ್ಚನೆಯಲ್ಲಿ
ಹುಳುವಿನಂಥದು ಬೆರಳಲ್ಲಿ ಬುಳುಬುಳು!
ಒತ್ತಿದೆ, ಸತ್ತಿರಬಹುದು
ಕೈ ಮಾರ್ಜನ, ಶುದ್ಧಿ ಮತ್ತೆ
ಗಂಧ ತೀಡುವಾಗ ಧೂಪ ಹರಡುವಾಗ
ಎಣ್ಣೆ ನೆಂದ ಬತ್ತಿಯಿಂದ ಬೆಳಗುವಾಗ
ಅಂಗಾತದ ಜಿರಲೆಗಳು;
ಚಲಿಸುವ ಕಾಲುಗಳು; ನೆನಪಾಗಿ
ಗಂಟೆ ಜಾಗಟೆ ಶಂಖ
ತಾರಕದ ಮಂತ್ರ ಸದ್ದಿಗೆ
ನಿಶ್ಚೇಷ್ಟವಾಗಬಹುದೆನ್ನುವ ಭರವಸೆ!

ದೇವರ ಮನೆಬಾಗಿಲ ಬುಡಕ್ಕೆ
ಗೆದ್ದಲು ಹತ್ತಿದಂತಿದೆ
ಇಲ್ಲದಿದ್ದರೆ ಈ ಹಸಿಮಣ್ಣು ಹೇಗೆ!?
ತೀರ್ಥ ತೆಗೆದುಕೊಂಡೆನೆ? ಮರೆತೆ
ಮತಿಗೆ ಬಂದದ್ದು ಆ ಕ್ಷಣಕ್ಕೆ
ʼಇವಕ್ಕೆ ಗತಿ ಕಾಣಿಸಬೇಕಿದೆ
ಹುತ್ತವೇ ತಲೆಯೆತ್ತೀತು ಬಿಟ್ಟರೆʼ

-ಅನಂತ ರಮೇಶ್

ಬದುಕಬೇಕಿದೆ ಸದಾ ಇಳೆಯ ಬಸಿರ ಹಸಿರಂತೆ..

ಬಣ್ಣಮಯ ಬದುಕಲ್ಲಿ
ಬಿಳಿ,ಕಪ್ಪು,ಕೆಂಪು,ನೀಲ
ಹಸಿರು, ಹಳದಿ..
ಕಾಣುವ ಬಣ್ಣ ಏಳೇ, ಆದರೂ
ಅಂತರಂಗದಲ್ಲಿ
ಸಹಸ್ರಾರು ಬಣ್ಣಗಳ ಮೇಳ
ನಮ್ಮ ಬದುಕು..

ನೂರು ಕನಸಿಗೆ ಬಣ್ಣವ
ತುಂಬಿ, ಮೆರೆಸುತ
ಸಕಲವ ಮರೆಸುವ
ಹಣ ಬಣ್ಣದ ತಾಳಕೆ
ಎಲ್ಲ ಬಣ್ಣಗಳ ಸಮ್ಮಿಳಿತ..
ಹಲವು ಭವಿಷ್ಯಗಳ ಏರಿಳಿತ..

ಮುಖ್ಯವಲ್ಲ ಜೀವನದ ಬಣ್ಣ
ಯಾವುದೆಂಬುದು,
ಆಗಬೇಕಿದೆ ಸುಂದರ,
ನಿರ್ಮಲ ನೀಲಾಕಾಶದಂತೆ
ವಿಸ್ತಾರ ಹಾಗೂ ನಿರ್ಭೀತ..

ಕಪ್ಪು ಬ್ರಹ್ಮಾಂಡದಂತೆ,
ಬೆಳಕನ್ನು ಬೆಳಗಿಸುವ
ವಾತಾವರಣದಂತೆ..
ಜೀವಸೆಲೆಯಾಗಬೇಕಿದೆ..
ರಕ್ತನಾಳಗಳಲ್ಲಿ ಹರಿದು,
ಕೆಂಪು ರಕ್ತದಂತೆ…

ಸದಾ ಬಿಳಿಯಾಗಿರಬೇಕು..
ಜೀವಂತವಾಗಿ ಹೊರಬರಲು
ಕಾಯುತ್ತಿರುವ
ಖಾಲಿ ಕ್ಯಾನ್ವಾಸಿನಂತೆ,
ತಟಸ್ಥ ಮತ್ತು ಸರಳ..
ಆದರೆ ಯಾವುದೇ ಬಣ್ಣ,
ಚಿತ್ರ, ಅಭಿವ್ಯಕ್ತಿಯ
ಹೊರಹೊಮ್ಮುವ
ಸಾಮರ್ಥ್ಯದೊಂದಿಗೆ..

ಬದುಕಬೇಕಿದೆ ಸದಾ
ಇಳೆಯ ಬಸಿರ ಹಸಿರಂತೆ,
ಹಸಿವಿನ ಬೇಗೆಯ ತಣಿಸುವ
ಜೀವದ ಉಸಿರಿನಂತೆ..
-ಕಮಲ ಬೆಲಗೂರ್.

ಪ್ರೇಮದ ಸಿರಿ
ನಿನ್ನ ಕಣ್ಣ ಮಿಂಚಲ್ಲಿ ಹೃದಯ ಸೌಂದರ್ಯವೂ ಕಂಡದ್ದೇ ಕಾರಣವೇನೋ
ಮನಸು ನೀನೇ ಬೇಕೆಂದು ಹಠ ಹಿಡಿದು ಕೂರಲು

ಹೃದಯ ನಿನ್ನ ಬಯಸಲು, ನನ್ನ ಭಾಗ್ಯದಲ್ಲಿ ನೀನೇ ಇರಲು ಸರಿ ಹೋಯ್ತು
ಕುಣಿದು ಕುಪ್ಪಳಿಸಿ ಕೇಕೆ ಹೊಡೆಯೋಣ ಎನ್ನುವಷ್ಟರಲ್ಲಿ ನಿನ್ನ ಆಗಮನ
ಹೃದಯ ಓಡತೊಡಗಿತು ನಿನ್ನ ಕಣ್ಣ ಬಾಣದ ಹರಿತಕ್ಕೆ, ಮತ್ತೆ ಮತ್ತೆ ಹೆಚ್ಚುವ ಪ್ರೀತಿಗೆ

ಪಕ್ಕದಲ್ಲಿ ಕುಳಿತು ಸ್ವಲ್ಪ ಹತ್ತಿರ ಸರಿದರೂ ಸಾಕು ಹೊಟ್ಟೆಯಲ್ಲೆಲ್ಲ ಚಿಟ್ಟೆಗಳೇ
ಕೈ ಹಿಡಿದು ಚುಂಬಿಸಿದರಂತೂ ಕೇಳಲೇಬೇಡ
ವಿಶಾಲವಾದ ನಿನ್ನೆದೆಗೆ ತಲೆಯಿಡಲು ಅದೇನೋ ನಿರಾಳ

ಚುಚ್ಚುವ ಮೀಸೆ ಗಡ್ಡದ ನಡುವೆ ಮೃದುವಾದ ನಿನ್ನ ತುಟಿ
ಬಿರುಸಾದ ಹುಲ್ಲಿನ ನಡುವೆ ಬೆಳೆದ ಹೂವಂತೆಯೇ ಸರಿ
ಅದು ದುಂಬಿಯನಾಕರ್ಷಿಸಿದರೆ ನೀನು ನನ್ನನ್ನು

ಸೂಕ್ಷ್ಮವಾಗಿ ಕೆತ್ತಿದಂತಿರುವ ನಿನ್ನ ದವಡೆಯ ಸಾಲು
ಪದೇ ಪದೇ ನನ್ನ ಗಮನ ಸೆಳೆದರೆ ಅಚ್ಚರಿಯೇ ಬೇಡ
ಮನ್ಮಥ ರೂಪ ನಿನ್ನದು ರತಿ ನಾನೇ

ನಿನ್ನ ಪ್ರೇಮದ ಪರಿಗೆ ಸೋತಿರುವ ನಾನು
ಜೀವನವೆಲ್ಲ ನಿನ್ನ ಪ್ರೇಮದ ನೆರಳಲ್ಲೇ ಸವೆಸಲು ತಯಾರಾಗಿರುವೆ
ಪ್ರೀತಿ, ಪ್ರೇಮ, ಪ್ರಣಯ ಕಾವ್ಯಕ್ಕೆಲ್ಲ ನೀನೇ ಮುನ್ನುಡಿ ನೀನೇ ಬೆನ್ನುಡಿ
ಸವಿದು ಆನಂದಿಸುವ ಭಾಗ್ಯ ಮಾತ್ರ ನನ್ನದೇ

-ಶೃತಿ ದೇವಾಂಗಮಠ

ಕಣ್ಣ ಬೆಳಕು

ನಿನ್ನ ಕಾಲ್ತುಳಿತಕ್ಕೊಳಗಾದ ನನ್ನೆಲ್ಲಾ ಮಾತುಗಳನ್ನು ಹೆಕ್ಕುವಾಗ
ನೀನು ಆಗೊಂದು ಈಗೊಂದು ಆಡಿದ ಮುತ್ತಿನ ಮಾತುಗಳೂ ಸಿಕ್ಕವು..

ನೀನು ನಕ್ಕಾಗ ಇಟ್ಟಾಡಿಸಿದ ನಿನ್ನೆಲ್ಲ ಖುಷಿಗಳನ್ನು
ಆಯ್ದ ನಾನು ಹನಿಗಣ್ಣಾಗೆ ಕೊರಳ ಮಾಲೆಯಾಗಿಸಿದ್ದೇನೆ..

ನಿನ್ನ ತುಂಬು ಕಂಗಳ ಬೆಳಕು ನನ್ನ ಮೇಲೆ ಹರಿದಾಗೆಲ್ಲ
ನಾನು ಮುದುಡುತ್ತಾ ಹೂವಾಗುತ್ತೇನೆ ನಿನ್ನ ಬೆಳಕ ಹರಿವಿಗೆ..

ನೀನು ನನ್ನನ್ನು ನಗಿಸಲೇ ಬೇಕೆಂತೇನಿಲ್ಲ ಇನಿಯ
ನಿನ್ನ ಕುಡಿ ನೋಟ, ಕಿರು ನಗುವೊಂದು ಸಾಕೆನ್ನ ಹಸಿರಾಗಿಸಿರಲು..

ಮತ್ತೇನಿಲ್ಲ ಗೆಳೆಯ ನಾ ಹೂವಾಗಬಯಸಿದ್ದು ನಿನಗಾಗಿ
ನಿನ್ನದೇ ತದ್ರೂಪವನ್ನು ಉಡುಗೊರೆಯಾಗಿಸುವ ಆಸೆಯಿಂದಷ್ಟೆ..

ಕೆಂದೆಲೆ ವನಜ

ಕೊನೆಯ ಮಾತು

ಬಾಗಿಲ ಭದ್ರವಾಗಿ ಹಾಕಿಕೋ
ಮನೆಯ ಜವಾಬ್ದಾರಿ ನೋಡಿಕೋ
ನೀ ಹೆಣ್ಣೆಂದು ಗೊತ್ತಿದ್ದರೂ ಎಲ್ಲ ನಿನ್ನ ತಲೆಗೆ ಕಟ್ಟುತ್ತಿರುವೆ
ದಯವಿಟ್ಟು ಕ್ಷಮಿಸು,
ಗೊಂದಲಕ್ಕೀಡಾಗಬೇಡ
ಕಸಿವಿಸಿಗೊಳ್ಳಬೇಡ
ಹೆದರಬೇಡ
ಧೈರ್ಯವಾಗಿರು
ನಿನಗೆ ಒಬ್ಬಳೇ ಇರಲೇಬೇಕಾದ ಅನಿವಾರ್ಯತೆ ಇದೆ
ನನಗಾಗಿ ಅಲ್ಲಿ ಮತ್ತೊಬ್ಬಳು ಕಾಯುತ್ತಿದ್ದಾಳೆ
ನಾನು ಅವಳಿಗಾಗಿ ನಿನ್ನ ಬಿಟ್ಟು ಹೋಗಲೇಬೇಕು
ನಿನಗಾಗಿ ನಾನು ಪ್ರೀತಿಯನ್ನು ಕೊಟ್ಟಿದ್ದೇನೆ
ಮುಂದೆಯೂ ಕೂಡ ಕೊಡುತ್ತಲೇ ಇರುತ್ತೇನೆ
ಬೇಕಾದರೆ ಹೇಳು ನಿನಗಾಗಿ
ರಕ್ತದ ಒಂದು ಬೊಟ್ಟು ಹಣೆಗಿಡುತ್ತೇನೆ
ಕೊನೆಯದಾಗಿ ಒಮ್ಮೆ ಆಲಿಂಗಿಸಿ ಹೊರಡುತ್ತೇನೆ
ನಿನ್ನ ಕಾಳಜಿ ನೀನೇ ವಹಿಸು
ನನಗೆ ಅವಳ ಕಾಳಜಿಯ ನಡುವೆ
ನಿನ್ನ ವಿಚಾರಿಸಲು ಆಗುವುದೋ ಇಲ್ಲವೋ ಗೊತ್ತಿಲ್ಲ
ಮನೆಯವರ ಕಾಳಜಿಯನ್ನು ನೀನೇ ನೋಡಿಕೊಳ್ಳಬೇಕು
ನಿನಗಾಗಿ ನನ್ನಿಂದ ಏನಾದರೂ ಸಹಾಯ
ಆಗಬಹುದೋ ಇಲ್ಲವೋ ಗೊತ್ತಿಲ್ಲ
ನಾ ಅಲ್ಲಿ ಅವಳನ್ನು ನೋಡಿಕೊಳ್ಳಬೇಕು
ಮುಂದೆ ಎಂದು ಸಿಗುತ್ತೇವೆ?
ಹೇಗೆ ಸಿಗುತ್ತೇವೆ?
ಸಿಕ್ಕಾಗ ಮಾತನಾಡಲಾಗುತ್ತದೆಯೋ ಇಲ್ಲವೋ? ಗೊತ್ತಿಲ್ಲ
ಬಂದೆ ಬರುತ್ತೇನೆ ಒಂದು ದಿನ
ನಾ ಜೀವಂತವಾಗಿಯೇ ಬಂದರೆ
ಆರತಿ ಬೆಳಗಿ ಒಳಗೆ ಕರೆ
ಹೆಣವಾಗಿ ಬಂದರೆ ದೀಪ ಬೆಳಗಲು
ನನ್ನ ಭಾವಚಿತ್ರದ ಮುಂದೆ ಇಡು
ನನ್ನ ಹೆಣ ಕೂಡ ಸಿಗದಿದ್ದರೆ
ನನ್ನವರು ಕೊಡುವ ನನ್ನ
ಸಮವಸ್ತ್ರವ ಈ ಗೋಡೆಗೆ ನೇತುಹಾಕು
ಅದಕ್ಕೆ ಒಂದು “ಸೆಲ್ಯೂಟ್” ಮಾಡು ಸಾಕು
ನಾ ಮತ್ತೆ ಈ ನೆಲದಲ್ಲಿ
ಚಿಗುರಾಗಿ
ಮರವಾಗಿ
ಹೂ ಕಾಯಿ ಹಣ್ಣಾಗಿ
ತಿಂದ ಹಕ್ಕಿಯ ಹಾಡಿನ ಕಲರವವಾಗಿ
ಬೀಳುವ ಮಳೆಯ ಹನಿಯಾಗಿ
ಹೂಗಳ ಸುಗಂಧವಾಗಿ
ಮರದಲ್ಲಿ ಶ್ರೀಗಂಧವಾಗಿ
ಬಂದವರಿಗೆ ನೆರಳಾಗಿ
ಹಕ್ಕಿಗಳಿಗೆ ಗೂಡಾಗಿ
ಹರಿವ ನೀರಿನ ನಾದವಾಗಿ
ಬಾಯಾರಿಸಿದವರಿಗೆ ಅಮೃತವಾಗಿ
ಹೊಲಗಳ ಫಸಲಾಗಿ
ಉದರಾಗ್ನಿ ತಣಿಸುವ ಊಟವಾಗಿ
ಮತ್ತೆ ಮತ್ತೆ ಹುಟ್ಟತ್ತಲೇ ಇರುತ್ತೇನೆ
ಸಾಧ್ಯವಾದರೆ ನೋಡು, ಕೇಳಿಸಿಕೋ
ನಾ “ವಂದೇ ಮಾತರಂ” ಎನ್ನುತ್ತಲೇ ಇರುತ್ತೇನೆ

-ಇಂದ್ರ

ಕರಿ ನೆಲದ ಕನಸು

ಅವ್ವ’ಳ ಉಡಿಯೊಳಗಿನ ಕನಸು
ಜಡೆಗೆ ಜೋತುಬಿದ್ದು ಪಾರ್ಕಿನ ಗೋಡೆಗಾಣಿಸಿ
ಹಸಿಮುತ್ತ ಮಂಚಕ್ಕೆ ಹುರುಳಿದಾಗಲೇ

ಹಸಿಮೈಯ್ಯ ಮಾದಕತೆಯ ಬೆಂಕಿಯಲ್ಲಿ
ಉರಿದು ಬೂದಿಯಾದವು

ಅವಳು ಮಾತ್ರ ಬಿರುಕು ಬಿಟ್ಟ ಪಾದಗಳನ್ನ
ನೆಲಕ್ಕೆ ಸವರುತ್ತ ಕಿರುನಗೆ ಬೀರಿದ್ದಳು
ಎಂದಾದರೂ ಮತ್ತೆ ಈ ಬರಡು ಭೂಮಿಯಲ್ಲಿ ಬೆಳೆ ಬರಬಹುದೆಂದು

ಅರೆಬರೆ ತುಂಬಿದ ಹೊಟ್ಟೆಯಲ್ಲಿ ಜೋಡಿಸಿಟ್ಟ
ಕಾಸು ಸೇರಿಸಿ ,
ಮತ್ತಿಷ್ಟು ಕನಸು ಕೊಂಡು
ನನ್ನೆದೆಗೆ ಸುರಿಯಲೆಂದು

ಆಗಲೂ ನಾನು
ಇನ್ನೂ ಮಲಗಿಯೇ ಇದ್ದೆ
ಇಳಿಸಂಜೆಯ ನೇಸರ ಅರಬೀಯ ಕಡಲಲ್ಲಿ ಕಳೆದೋದ ಸಮಯ

ಬೀಸಿಬಂದ ಅಲೆ ಬಾಚಿ ತಬ್ಬಿತು ಈಗ

ಎಚ್ಚರವಾದರೇ ಅದೇ ಹಳೇ ಗೂಡು
ಎದೆಯಮ್ಯಾಲೆ ಅವಳ ತಂಗಳು ಕಣ್ಣೀರು
ಅಷ್ಟಿಷ್ಟು ಕರಿನೆಲದ ಅಂಬರಿ ಹೂವ

ಘೋರಿಯೊಳಗಿನ ನಾನೂ
ನನ್ನೊಳಗಿನ ಅವಳೂ..

ಏಕಾಂಗಿ ಇಂದಿಗೂ…!

-ಅಶೋಕ್ ಚಂದ್ರಾಮಪ್ಪ

ಕಾವ್ಯ ಕನ್ನಿಕೆ

ಕಲ್ಲರಳಿ ಹೂವಾಗುವ
ಸಮಯದೊಳೆದ್ದು
ಸಂಧ್ಯಾವಂದನೆಗೈವ
ಸಮಯದೊಳು
ನಿನ್ನಂದವ ನೋಡುವ
ನನ್ನ ಕಂಗಳಿಗೆಂತು ಪುಣ್ಯವೊ
ನನ್ನಾಣೆ ನಾ ಬಣ್ಣಿಸಲಾರೆನು

ನಿನ್ನಯ ಬಳುಕುವ ಬಳ್ಳಿ
ನಡುವಿನ ನಡಿಗೆಯ
ಬಳುಕಾಟದ ಸೊಬಗ,

ಬೆಳ್ಳನೆ ಬೆಳಗಾಗುವುದರೊಳಗೆ
ಇಳಿದೆ ನೀ ನನ್ನ ಹೃದಯದ
ಅರಮನೆಯೊಳಗೆ
ಎಂದೂ ಬಾರದ ನಲ್ಲೆ
ನನ್ನೂರಿಗೆ ಒಮ್ಮೆಲೇ ಮಲೆನಾಡಿನ
ಮಂಜು ಜಾರಿದ ಹಾಗೆ,

ಬರಾಡದ ಭೂಮಿಕೆಯಂತಿದ್ದೆನ್ನ
ಮನದೊಳಗೆ ಹೊಸ ಚಿಗುರಿನ
ಗರಿಯ ಮೇಲೆ ನಲಿಯುವ
ಚಿಟ್ಟೆಗಳು ಒಮ್ಮೆಲೆ ಹರಿದಾಡಿದ ಹಾಗೆ
ಏನೊ ನವೊಲ್ಲಾಸ
ನವ ಚೈತನ್ಯ ಕಾವ್ಯಕನ್ನಿಕೆಯ
ಕೈಯೊಳಗೆ ನಾ ಮೆಲ್ಲಗೆ ನಲುಗಿದ ಹಾಗೆ

ಈ ಕನಸಿನ ನನಸು
ಎಂದಿಗಾಗುವುದೊ ನಾ
ಕನಸೇ ಕಾಣಲಾರೆ ಕಾರಣ
ನಿನ್ನೊರತು ನಾ ಅನವರತ
ರಮಿಸಲಾರೆ ವಿರಮಿಸಲಾರೆ
ಮನಸಾರೆ ಕೂಗುತಿಹೆನು
ಹೇಳ ಬಾರೆ ಓ ಕಾವ್ಯ ಕನ್ನಿಕೆ ನೀನಾರೆ…?????

-ಚನ್ನ ಶಿವಮಣಿ

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published.