ಗಝಲ್
ಜಾತಿಸೀಮೆಯ ದಾಟಿ ಹೊಸನಾಡ
ಕಟ್ಟುವೆನು ಜಗದೊಳಗೆ||
ಮೌಢ್ಯತೆಯ ಕಡಿದೊಗೆದು ಸತ್ಯವನು
ತೋರುವೆನು ಜಗದೊಳಗೆ||
ಕಾರ್ಗತ್ತಲ ದಾರಿಯಲಿ ಮುಳ್ಳುಗಂಟಿ
ಎತ್ತರಕೆ ಬೆಳದಿದೆ ನೋಡು|
ಬಿರುಕು ಬಿಟ್ಟ ಮನಗಳಲ್ಲಿ ಪ್ರೀತಿಯನು
ಬಿತ್ತುವೆನು ಜಗದೊಳಗೆ||
ದ್ವೇಷ ಅಸೂಯೆಗಳ ಕಿಡಿಕಾರಿ ಬೆಂಕಿ
ಉಗುಳುತ್ತಿದ್ದಾರೆ ಸುತ್ತಲೂ|
ಘಾಸಿಗೊಂಡ ಮೃದುಮನಕೆ ಔಷಧ
ಹಚ್ಚುವೆನು ಜಗದೊಳಗೆ||
ಅನ್ಯಾಯ ಅಕ್ರೋಶಗಳ ಮೆಟ್ಟಿ ನಿಂತು
ರಣಭೇರಿ ಬಾರಿಸುವೆ|
ಜಯದ ಹಾದಿಯನು ವೀಕ್ಷಿಸುತಲಿ
ಸಾಗುವೆನು ಜಗದೊಳಗೆ||
ಅಭಿನವನ ಒಡಲ ಕಿಚ್ಚದು ನಿಗಿನಿಗಿ
ಕೆಂಡವಾಗಿ ಸುಡುತ್ತಿದೆ ||
ಕೆಸರು ತುಂಬಿದ ಹೃದಯವನು ಪರಿಶುದ್ದ
ಮಾಡುವೆನು ಜಗದೊಳಗೆ||
ಶಂಕರಾನಂದ ಹೆಬ್ಬಾಳ
ಗಜಲ್
ಅನುರಾಗದ ಮೇಘವು ಅವತರಿಸಿದೆ ಮನದಲ್ಲಿ
ಮುತ್ತಿನ ಹನಿಗಳು ಹೆಪ್ಪುಗಟ್ಟಿವೆ ನನ್ನ ಅಧರದಲ್ಲಿ
ಗಾಳಿಯಾಗಿ ಬಂದು ಬಿಗಿದಪ್ಪಬಾರದೆ ನೀನೊಮ್ಮೆ
ಪ್ರೇಮವು ಮಿಂಚುತಿದೆ ಪುಟ್ಟದಾದ ಹೃದಯದಲ್ಲಿ
ಸಿಂಧೂರದ ಚುಕ್ಕಿ ಲಲಾಟವನ್ನು ಆಲಂಗಿಸುತಿದೆ
ಘರ್ಷಣೆಯ ಕಾವು ಏರುತ್ತಿದೆ ನನ್ನಯ ದೇಹದಲ್ಲಿ
ಮೆದು ಹಾಸಿಗೆ ಜೋಗುಳ ಹಾಡಿ ಮಲಗಿಸುವುದು
ನಿದ್ದೆಗೆಡಿಸುವ ಏರಿಳಿತವಿದೆ ನಿನ್ನಯ ಸಾಂಗತ್ಯದಲ್ಲಿ
‘ಮಲ್ಲಿ’ ಗೆ ಅನುರಾಗದ ಬಂಧ ಬೇಕಿದೆ ಹಗಲಿರುಳು
ಸರಸವ ಕಂಡು ಶಶಿ ಮರೆಯಾಗಿರುವನು ಇರುಳಲ್ಲಿ
-ರತ್ನರಾಯಮಲ್ಲ
ಮುಖವಾಡಗಳ ಮೊಗಸಾಲೆಯಲಿ
ಹಚ್ಚಿಟ್ಟ ದೀಪವೊಂದು
ಪೆಚ್ಚಾಗಿ ಕೂತಿದೆ..
ನೆರಳು ಬೆಳಕಿನಾಟದಲಿ
ಮೊಗವೋ, ಮುಸುಕೋ
ಗುರುತಿಸದೇ ಸೋತಿದೆ…
ನಗುವ ಮರೆಯಲಿ
ಜಿನುಗೋ ಕಂಬನಿಯೇ
ತೈಲವಾಗಬಯಸಿದೆ..
ಆ ಹನಿಯ ಹೀರಿದ
ಸೆರಗ ತುದಿ ಅಂಚು
ಬತ್ತಿಯಾಗಹೊರಟಿದೆ..
ಇರುಳ ಕರುಳು
ಬೆಳಕ ಕುಡಿದು
ತನ್ನ ಕುಡಿಯ ಚಾಚಿದೆ..
ಮರುಳು ಮಾಡೋ
ಮೊಗವಾಡಗಳ ಸಣ್ಣ
ಬಿಳುಪಲೆ ತೋರಿದೆ…
ಬೆಳಕು ಹರಿಯಲು
ತೈಲ ಮುಗಿಯಲು
ಮೊಗಸಾಲೆಯು ಬೆಳಗಿದೆ..
ಹೊಸದು ಮುಸುಕು
ಹೊಸೆದು ಫಲಕು
ಕಣ್ಣ ಸನ್ನೆಯ ಮಾಡಿದೆ…
-ಸರೋಜ ಪ್ರಶಾಂತ ಸ್ವಾಮಿ
ರದೀಫ್: ಬದಲಾಗಬೇಕಿದೆ ನಾವು
ಕಾಫಿಯಾ: ಕಟ್ಟಿಕೊಳ್ಳಲು/ಸವಿಯಲು/ಕಾಣುವಂತಾಗಲು/ನಿರಮ್ಮಳವಾಗಲು/ಕತ್ತಲೋಡಿಸಲು/ತುಂಬಿಕೊಳ್ಳಲು/ಝರಿಯಾಗಲು
ಮರು ಹುಟ್ಟು ಪಡೆದು ನವ ಜೀವನ ಕಟ್ಟಿಕೊಳ್ಳಲು ಬದಲಾಗಬೇಕಿದೆ ನಾವು
ಕಳೆದ ಕಹಿ ನೆನಪುಗಳ ಕಳಚಿಟ್ಟು ಸಿಹಿ ಬದುಕು ಹಂಚಿಕೊಳ್ಳಲು ಬದಲಾಗಬೇಕಿದೆ ನಾವು
ಸೀಮೆ ಸುಣ್ಣದಂತೆ ಹೀರಿ ಬಳಸಲು ಎದ್ದು ಕಾಣಬೇಕು
ಸ್ಪಂಜಿನಂತೆ ಸೆಳೆದು ಹಿಂಡಲು ಎಲ್ಲ ತೊರೆದು ನಿರಮ್ಮಳವಾಗಲು ಬದಲಾಗಬೇಕಿದೆ ನಾವು
ಬತ್ತಿಯಂತೆ ನುಂಗಿ ಕಿಡಿ ತಾಗಿಸಲು ದಿವ್ಯ ಬೆಳಕಾಗಬೇಕು ಕತ್ತಲಿನ ಪರದೆಯ ಕಿತ್ತೆಸೆದು ಗುರಿಕಾಣಲು ಬದಲಾಗಬೇಕಿದೆ ನಾವು
ನೋವು ನಲಿವುಗಳ ಒಡಲು ಪ್ರೇಮಕೆ ಸೋಲಬೇಕು
ಕಿಚ್ಚಿನ ಹೃದಯ ಬದಿಗಿಟ್ಟು ಸವಿ ಮನವ ತುಂಬಿಕೊಳ್ಳಲು ಬದಲಾಗಬೇಕಿದೆ ನಾವು
ಬದಲಾವಣೆಯ ಕುರುಹಿಗೆ ಸೋತು ನಿತ್ಯ ಕಲಿಯಬೇಕು,
ಮೋಹದ ಪರದೆಯ ಹರಿದು ಪ್ರೇಮದ ಝರಿಯಾಗಲು ಬದಲಾಗಬೇಕಿದೆ ನಾವು
–ವರದೇಂದ್ರ ಕೆ ಮಸ್ಕಿ