ಪಂಜು ಕಾವ್ಯಧಾರೆ

ಪಳೆಯುಳಿಕೆಗಳು

ಅದೆಷ್ಟು ಕಾಲ ಕಣಿವೆಗಳಲಿ
ನಿಶ್ಯಬ್ದವಾಗಿ ಬಿದ್ದಿವೆ ಅಸ್ಥಿಗಳು

ಗತಕಾಲದ ರೋಚಕತೆಗೆ ಸಾಕ್ಷಿಯಾಗಿ
ತಮ್ಮ ಇರುವಿಕೆಯ ಸ್ಪಷ್ಟ ಪಡಿಸಲು ಬದ್ದವಾಗಿ
ಕಾದು ಕೂತಿವೆ ಪಳೆಯುಳಿಕೆಗಳಾಗಿ

ಚರ್ಮ ಮಾಂಸ ಮಜ್ಜೆಗಳಿಲ್ಲ
ಜೀವ ಆತ್ಮದ ಜೊತೆ ತಮಗಿಲ್ಲ
ಆದರೂ ಇತಿಹಾಸವಾಗುವ ಆಸೆ ತೀರಿಲ್ಲ

ಎಂದೋ ಯಾರೋ ಬರಬಹುದೆಂದು
ಹೊರಗೆಳೆದು ಪರಿಶೀಲಿಸಿ ದಾಖಲಿಸಬಹುದೆಂದು
ನಮ್ಮ ಕಥೆಗೂ ಜೀವ ತರಬಹುದೆಂದು

ಆಸ್ತಿಗಳ ಆಸೆಗಷ್ಟೆ ಅಲ್ಲದೇ
ಅಸ್ಥಿಗೂ ಬೆಲೆ‌ ಇರಬಹುದೆಂದು
ಸರಿದು ಹೋದ ತಮ್ಮನ್ನು
ಸಮಾಜದೆದುರು ತರಬಹುದೆಂದು

ಆ ಕಲ್ಲು, ಬಂಡೆ, ಕೋಟೆ, ಅರಮನೆಯಂತೆ
ಜೊತೆಗೆ ಸಿಕ್ಕ ನಿಧಿಗಳಂತೆ, ಬಳಸಿ ಎಸೆದ ಆಭರಣದಂತೆ
ಹಿಂದೆ ಕೇಳಿದ ಪುರಾಣಗಳಂತೆ

ತಮಗೂ ಬೆಲೆಯು ಸಿಗಬಹುದೆಂದು
ತಮ್ಮ ಕಥೆಗೆ ಕಿವಿಗಳು ಸಿಗಬಹುದೆಂದು
ಮತ್ತೆ ಅವರೊಡನೆ ಬದುಕಿ ಬಿಡಬಹುದೆಂದು

ಇಲ್ಲೇ ಕೂತಿವೆ ಧೂಳಿನೊಳಗೆ ಭುವಿಯಾಳದಲಿ
ಇತಿಹಾಸದ ಪುಟ ಸೇರಲು ತವಕಿಸುತಲಿ
ವರದಿಯಾಗುವ ಸ್ವಾರ್ಥವ ಉದಾತ್ತತೆ ಎನ್ನುತಲಿ

ದೊಡ್ಡ ವಿಜ್ಞಾನ ತಂತ್ರಜ್ಞಾನ ಹೊಂದಿದ್ದರಂತೆ
ಮುಂದಿನ ಪೀಳಿಗೆಗಳಿಗಿಂತ ಮುಂದಿದ್ದರಂತೆ
ಪಾಪಗಳ ಲೆಕ್ಕಕ್ಕೆ ವರದಿಯಲಿ ಜಾಗವಿಲ್ಲವಂತೆ

ತಮ್ಮ ಕಥೆಗಳ ಮರೆಯದಂತೆ ಮಥನ ಮಾಡುತಾ
ಕಾಯುವ ಕಾಯಕ ವ್ಯರ್ಥವಾಗದು ಎಂದು ಹೇಳುತಾ
ಐತಿಹ್ಯದ ವರದಿಯಾಗಲು ಸಿದ್ದವಾಗುತಾ

ಮಣ್ಣಾಗದೇ ಹೋರಾಡುತ್ತಾ ಬಿದ್ದಿವೆ ಸಾಲು ಸಾಲು
ಶತಮಾನಗಳ ವೈಪರಿತ್ಯವ ಸಹಿಸುತ್ತಲೆ ಇಲ್ಲೂ
ತಾವು ಇದ್ದೆವು ನಿಮ್ಮಂತೆಯೇ ಎಂದು ಸಾರಲು

ಹುಡುಕಿ‌ ಬಂದವರ ತಡಕಿದ ಬೆರಳ ನೇವರಿಸಲು
ಕಲ್ಪನೆಯ ಕಥೆಗಳಿಗೆ ಮೂಲ ನಾಯಕನಾಗಲು
ನಮ್ಮಂತೆಯೇ ನೀವಾಗುವಿರಿ ಎಂಬ ಗುಟ್ಟ ಹೇಳಲು

ಮಧು ಅಕ್ಷರಿ


ಗಜಲ್

ಹಸಿದ ಒಡಲಿಗೆ ಹಸಿವೆ ಆಹಾರ ಅನ್ನ ನೀಡುವವರಿಲ್ಲ ಜಗದಲಿ
ಹಸಿದು ಹಸಿದು ಉಸಿರು ಬಿಟ್ಟರೂ ಹಂಚಿ ತಿನ್ನುವವರಿಲ್ಲ ಜಗದಲಿ

ಆಳು ಹಾಳಾಗಿ ಹೋದ ; ಆಳಿಸಿ ಕೊಂಡವ ಅರಸನಾದ
ಶ್ರಮಿಕರ ಬೆವರು ರಕ್ತವಾದರು ಬೆಲೆ ಕಟ್ಟುವವರಿಲ್ಲ ಜಗದಲಿ

ಸಮತ್ವ, ಅಖಂಡತ್ವ,ಏಕತ್ವ,ಐಕ್ಯತ್ವ ಮರೆತವರು ಮೆರೆದರು
ಧರ್ಮತ್ವದ ಬಿರುಕು ಗೋಡೆಗಳ ಬೆಸೆಯುವವರಿಲ್ಲ ಜಗದಲಿ

ಅಂಗೈ ಹುಣ್ಣಿಗೆ ಕನ್ನಡಿ ಹಿಡಿದು ವಾದ ಮಾಡಲು ಹೊರಟರು
ಅನ್ಯಾಯದ ಪೊರೆ ಕಳಚಿ ನ್ಯಾಯ ಉಳಿಸುವವರಿಲ್ಲ ಜಗದಲಿ

ಶೋಷಿತರ ಅಸ್ಪೃಶ್ಯರ ದನಿಯಾದವರಿಗೆ ಜಾತಿ ಪಟ್ಟ ಕಟ್ಟಿದರು
ಜಾತಿ-ಗೀತಿ ಧರ್ಮ ಮೀರಿ ಮನುಷ್ಯತ್ವ ಮೂಡಿಸುವವರಿಲ್ಲ ಜಗದಲಿ

ಮಾನವೀಯ ನೆಲೆಯ ನವ ಭಾರತ ನಿರ್ಮಿಸಬೇಕು ‘ಬಾಬಾ’
ಬುದ್ಧ ಬಸವವಾದಿ ಪ್ರಮತರ ಆದರ್ಶ ಅರಳಿಸುವವರಿಲ್ಲ ಜಗದಲಿ

ಶಿವರಾಜ.ಡಿ(ಚಳ್ಳಕೆರೆ)


ಚುಟುಕಗಳು

ಸತ್ಯ -ವಾದ -ದಯೆ!

ನಿರ್ದಯವಾಗಿ ಹೇಳಿ ಬಿಟ್ಟ ಸತ್ಯ
ಅವನಿಗೇನು ಗೊತ್ತು?
ಅವನ ಹೃದಯ ದುರ್ಬಲವೆಂದು!
ಈಗ ಎಲ್ಲರ ಮನದಲ್ಲೂ ದಯೆ
ಧಾರಾಳ ಹರಿತಿತ್ತು.!
ಧರ್ಮದ ಮೂಲ ಎಲ್ಲಿದೆ ?
ಎಂದರಿಯದೇ ಒದ್ದಾಡಿದ !

ನಿಚ್ಛಳ ವಾದದ್ದು-

ಕಾರ್ಮೋಡ ಮನಸ್ಸಲ್ಲಿ
ಮಳೆ ನೀರು ಕಣ್ಣಲ್ಲಿ,!
ಆಕಾಶವೆಲ್ಲ ಖಾಲಿ!ಖಾಲಿ!
ಅವಕಾಶವಿದೆ ವ್ಯಾಸ ಗೊತ್ತಿಲ್ಲ ,
ವಿನಾಶವೋ? ಸದವಕಾಶವೋ..!! ನಿಚ್ಛಳವಿದೆ..ವಾದ.!

ಥೇಟ್ ಅಪ್ಪನಂಗೆ!

ಅವಳೆಂದಳು:
ಥೇಟ್ !ಅಪ್ಪನ ಪ್ರತಿರೂಪ!
ಒಬ್ಬ ಸಾಕಿದವ
ಮತ್ತೊಬ್ಬ ಸಾಕೆಂದು ಎಸೆದವ
ಇವನ್ಯಾರ ಹಂಗೆ ?
ಅರಿಯಲು ತಿಣುಕಿದೆ!

ಪ್ರೀತಿ ಬೆಸುಗೆ!

ಕಣ್ಕಟ್ಟಿ ಬಿಟ್ಟ ಕುದುರೆ ಹಂಗೆ
ಮನಸ್ಸು ಅಂದಳು ಆಕೆ.
ಹರಿವ ನದಿಹಂಗೆ ಹೃದಯ
ಎಂದ ಆತ
ಆದರೆ ಆ ಕುದುರೆ ಯಾರ
ಕೈ’ಸೇರಿತು! ತಿಳಿಯೆ!
ನದಿ ಎಲ್ಲಿ ಸೇರಿತು ಅರಿಯೇ!

ಮೇಲಿನ ಲೀಲೆ!

ವರನ ಮನಸ್ಸು
ಉಪ್ಪರಿಗೆ ಮೇಲೆ
ವಧುವಿನ ಮನಸ್ಸು
ಚಪ್ಪರದ ಮೇಲೆ
ವಧುವರರ ಮನಸ್ಸಲ್ಲಿ
ಮಧು ಚೆಂದ್ರ ಲೀಲೆ !

ತೆನೆ

ಮೋಡದ ಮಿಂಚೋ
ಕೆಮರಾದ ಕ್ಲಿಕ್ಕೋ ಅರಿಯೆ!
ಆದರೂ ಮಳೆಯ ಮೊದಲ
ಸಾಕ್ಷ್ಯ ಚಿತ್ರಣ ಅನ್ನುವದು ನಿಜ!
ಮುಂದೆ ಧರೆ ತುಂಬಿ
ತೊನೆದು ಬಾಗಿದಾಗ ಮಜವೋ ಮಜ!

ಮನೋಹರ ಜನ್ನು


ಗಜಲ್

ಜೋಳಿಗೆ ಹಿಡಿದು ಹೊರಟಿರುವೆ ಒಂದಿಷ್ಟು ಮಮತೆಯ ದಾನ ನೀಡಿ
ವಂಚನೆಗೆ ಕುಸಿದು ಕಂಗೆಟ್ಟಿರುವೆ ಒಂದಿಷ್ಟು ಮಮತೆಯ ದಾನ ನೀಡಿ

ಹಬ್ಬಗಳ ಮೇಲೆ ಹಬ್ಬ ಮಹಾಹಬ್ಬ ಬಡವ ನಾ ಎಲ್ಲಿಂದ ಆಚರಿಸಲಿ
ಕನಸಿಗೆ ಬೆಂದು ಬದ್ನಾಮಾಗಿರುವೆ ಒಂದಿಷ್ಟು ಮಮತೆಯ ದಾನ ನೀಡಿ

ಒಳ್ಳೆಯದಕೆ ಹಂಬಲಿಸುವ ಮನಸುಗಳ ಮೇಲೆ ಕಲ್ಲೆಸೆಯುವ ಹುಚ್ಚು ಜನ
ನಟನೆಗೆ ನೊಂದು ಬೇಸ್ತು ಬಿದ್ದಿರುವೆ ಒಂದಿಷ್ಟು ಮಮತೆಯ ದಾನ ನೀಡಿ

ಹೃದಯಕೂ ಅಂತರಾಳಕೂ ಎಷ್ಟು ಕಿಲೋಮೀಟರುಗಳ ಅಂತರವಿದೆಯೊ
ಕಲ್ಲು ಮನಸಿಗೆ ಗುದ್ದಿ ಜರ್ಝರಿತನಾಗಿರುವೆ ಒಂದಿಷ್ಟು ಮಮತೆಯ ದಾನ ನೀಡಿ

ಅದೆಷ್ಟೋ ಒಡಲುಗಳು ಕಣ್ಣ ಮುಂದೆಯೇ ತಾತ್ಸಾರಕೆ ಸುಟ್ಟು ಬೂದಿಯಾಗಿವೆ
“ಜಾಲಿ” ಬಡಿವಾರಗಳಿಗೆ ಒಲಿದು ಬಣ್ಣಗೆಟ್ಟಿರುವೆ ಒಂದಿಷ್ಟು ಮಮತೆಯ ದಾನ ನೀಡಿ.

ವೇಣು ಜಾಲಿಬೆಂಚಿ


ಹರಟೆ ಕಟ್ಟೆ

ಸಂಜೆಯತ್ತಲ ತನು
ಲವಲವಿಕೆಲಿ ಮನ
ದೂರವೆನಿಸದ
ಆಯಾಸವೆನಿಸದ ನಡಿಗೆ
ಅಲ್ಲಲ್ಲಿ ಬಿರುಕು
ಸಿಮೆಂಟುದುರಿದ
ಕೆಂಬಣ್ಣದಿಟ್ಟಿಗೆಯ
ಕಾಲಿಳಿಬಿಟ್ಟು ಹರಟೆ
ಗೆ ಪಕ್ಕಾದ ಪಟ್ಟಾಂಗ ಕಟ್ಟೆ

ದಿವಸಗಳ ದವಸ
ಹೊತ್ತ ಬಂಡಿಯವರು
ಸುದ್ದಿಗಳ ಕೊಡಕೊಳ್ಳುವವರು
ಬದಲಾದ ಸಂತೆ ಬೀದಿಗೆ
ದೂರುತ್ತಾ ಆಗಾಗ ನಿಟ್ಟುಸಿರು
ಪುಕ್ಕಟೆ ಪುರಾಣದವರು

ಲಲನೆಯರ ನಗೆಯಿಂದ
ಅಜ್ಜಿಅಳುವರೆಗೆ
ಉಂಡೆಗಟ್ಟಿದ ನೂಲ
ಗೋಜಲಿಲ್ಲದ ಬ್ರಹ್ಮಗಂಟು
ಬಿಡಿಸಿ ನೋಡುವ ತರಲೆ
ರಹಸ್ಯ ಜಾಲ ಭೇದಿಸಿದ
ಗಟ್ಟಿ ಟೊಳ್ಳು ಡೊಳ್ಳು ಹೊಟ್ಟೆ
ಕಾಯದವರ ಲೀಲೆ!

ಮಡದಿ ಹಂಗಿಸಿದ ಮುಖ
ಮಕ್ಕಳಾಡಿದ ವ್ಯಂಗ್ಯ
ಎದುರು ಮನೆ ಮಾನವರ
ನಿರ್ಭಾವ‌ ಮುಖ ಮರೆತು
ಮಿಕ್ಕಿರುವ ಇವರಲ್ಲೆ ಮೆರೆವ
ಅಟ್ಟಹಾಸದ ತವಕ

ಆಗುಹೋಗುಗಳ ಗೊಡವೆ
ಹಾದುಹೋಗುವವರ ನಡುವೆ
ಕೆದಕು ಕುತೂಹಲ
ಅರ್ಧ ಲೋಟದ ಕಾಫಿ
ಸುರುಳಿ ಸಿಗರೇಟು ಹೊಗೆಗೆ
ಸಹಸ್ರಾರಕ್ಕೆ ಚಿಟಿಕೆ ನಶ್ಯ
ದ ಘಾಟು, ಕಟ್ಟೆ ಪಕ್ಕದ ಖುಲ್ಲ
ಹೋಟೆಲ್ಲು ಗಲ್ಲದ ಮೇಲೋಬ್ಬರು
ತಂಬಾಕು ಮೆಲ್ಲುತ್ತಾ
ನೋಟಿಗೆ ಚಿಲ್ಲರೆ ಕೊಡುವವರು

ನಿರಾಶೆ ಮಳೆಗೆ ಕೊಡೆಹಿಡಿದು
ಹೆಜ್ಜೆ ಹಗುರಾಗಿಸುವ
ರಾಡಿ ತಿಳಿಯಾಗಿಸುವ
ಮೆಟ್ಟಲಿರುವ ವೈರಾಗ್ಯ ಅಟ್ಟುವ
ರಾತ್ರಿ ನಿದ್ರೆಗೆ ಉಪಾಯಗಳ
ಆವಿಷ್ಕಾರದ ಮಗ್ಗುಲು ಬದಲಿಸುವ
ಕಳೆವ ಲೆಕ್ಕದವರು ಕಲೆವ
ಬೀಳ್ಕೊಡುಗೆಯಲಿ ನಾಳೆಯ
ಆಸೆ ಹೊತ್ತಿಸುವ ಸೋಮಾರಿ ಕಟ್ಟೆ

-ಅನಂತ ರಮೇಶ್

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
1
0
Would love your thoughts, please comment.x
()
x