ನನ್ನಲ್ಲಿಷ್ಟು ಕನಸುಗಳಿವೆ
ಮಾರಾಟಕ್ಕಲ್ಲ,
ಎಲ್ಲರೆದೆಯ ಬರಡು ಭೂಮಿಯಲ್ಲಿ
ಹೂಳುತ್ತೇನೆ,
ಹೊಸ ನಾಳೆಗಳನ್ನೇ ಚಿಗುರಿಸುತ್ತೇನೆ !
ನನ್ನೀ ಕನಸುಗಳು-
ಬುದ್ದನ ನಗೆಯ ನೆರಳಲ್ಲಿ
ಬೆಳೆದು ಬಂದಂತಹವು,
ಊರಾಚೆಯ ಒಲೆಯ – ಊರೊಳಗೆ
ನೆಮ್ಮದಿಯ ನಗೆ ಬೀರುವ
ಕನಸು ಕಾಣುತ್ತದೆ, ನನ್ನೀ ಕನಸು !
ಮೈಲು ದೂರದಲ್ಲಿಯ ಬೆಟ್ಟದ ಮ್ಯಾಲಿನ
ದೇವದಾಸಿಯೂ ಅಂಗಲಾಚುತ್ತಾಳೆ-
ನನ್ನೀ ಕನಸುಗಳಿಗಾಗಿ !
ಮುಟ್ಟಾದ ಪುಟ್ಟ ತಂಗಿಯ
ತುಂಬಿ ನಿಂತ ಕಣ್ಣಾಲೆಯೂ ಕೈಚಾಚಿದೆ-
ನನ್ನ ಕನಸುಗಳತ್ತ !
ಸುಸ್ತಾಗಿದ್ದ ‘ಗಸ್ತಿ’ಯೂ ಗಸ್ತು ತಿರುಗಲು-
ಅಣಿಯಾಗುತಿದ್ದಾನೆ , ಮತ್ತೇ
ನಂಬಿಕೆಯಿದೆ ನನ್ನೀ ಕನಸುಗಳಲ್ಲಿ,
ಅಪ್ಪ ಮುಟ್ಟಿದ ನೀರು ಮೈಲಿಗೆಯೆಂದ
ದೊರೆಗಳಿಂದು
ಕನಸುಗಳ ಕಂಡು – ದಡಬಡಿಸುತ್ತಿದ್ದಾರೆ !
ಇಂದು ಬದುಕಿದ್ದರೆ -ನನ್ನ
ಅಂಬೇಡ್ಕರ್ ?
ನನ್ನೀ ಕನಸುಗಳ ಕಂಡು
ಬೆನ್ನು ತಟ್ಟುತ್ತಿದ್ದ ಮೌನಿಯಾಗಿ ,
ಮತ್ತೆರಡು ಸಾಲು ಗೀಚಿಯೇ
ತೀರುತಿದ್ದ,
ಹೆಮ್ಮೆಯಿಂದ -ಸಂವಿಧಾನದ ಮೊದಲ ಪುಟದಲ್ಲಿಯೇ !
ಅಂದು ನಗುತ್ತಲಿದ್ದ ಬುದ್ದ
ಇನ್ನೂ ನಗುತ್ತಲೇ ಇದ್ದಾನೆ –
ಕನಸುಗಳಿಷ್ಟು ಅಂಗೈಗೆ ಸುರುಹಿ,
ನಾನಿನ್ನು ನಡೆಯುತ್ತೇನೆ
ಭೂತವೇ ;
ನಾಳೆಗಾಗಿ ಹವಣಿಸಿದ ನನ್ನವರು
ಕನಸುಗಳಿಗಾಗಿ ಕಾದು ಕುಳಿತಿದ್ದಾರೆ-
ದೂರದಲ್ಲಿ,
ನನ್ನ ಬರುವಿಕೆಗಾಗಿ !
–ಅಶೋಕ್ ಚಂದ್ರಾಮಪ್ಪ
ಗಜಲ್
ಪರಪಂಚ ಸತ್ಯವನ್ನೆ ಬಯಸುತಿದೆ
ಸಮಾಜ ಸುಳ್ಳನ್ನೆ ಹಿಂಬಾಲಿಸುತಿದೆ
ಜನರು ದುರ್ಬಲರನ್ನು ಪ್ರೀತಿಸುತ್ತಾರೆ
ದುನಿಯಾ ಬಲಿಷ್ಠರನ್ನೆ ಗೌರವಿಸುತಿದೆ
ಎಲ್ಲರೂ ಯಶಸ್ಸಿಗಾಗಿ ಕಾಯುತ್ತಾರೆ
ಈ ಮನುಕುಲ ತಪ್ಪನ್ನೆ ಹುಡುಕುತಿದೆ
ಶಾಂತಿಯನ್ನು ಬಯಸುತಿದೆ ಮನಸ್ಸು
ಕನಸು ಮಾತ್ರ ದ್ವೇಷದಲ್ಲಿ ಬೇಯುತಿದೆ
‘ಮಲ್ಲಿ’ ಖುಷಿಯನ್ನು ಅರಸುತಿರುವನು
ಜಿಂದಗಿಯು ಜವಾನಿಯನ್ನು ಬೇಡುತಿದೆ
–ರತ್ನರಾಯಮಲ್ಲ
ಚಂದ್ರಮನ ಉಯ್ಯಾಲೆ
ಕರುಳು ಅವರದು
ಕರುಳಬಳ್ಳಿ ಅವರದು
ಕರುಣೆ ಕನಿಕರ ಅವರಿಗೇ ಮೀಸಲು!
ನಾನಾದರೂ ಇಲ್ಲಿ ಹೊರಗಿನವಳು?!
ಕುಂಚ ಅವರದು
ಬಣ್ಣ ಅವರದು
ಕಲ್ಪನೆಯ ಚಿತ್ರವೂ ಅವರದ್ದೇ!
ಕಣ್ಣಿನ ಕನಸು ಕಮಾನು ಮಾತ್ರ ನನ್ನದು?!
ತನು ಅವರದು
ಧನಕನಕ ಅವರದು
ಬದುಕು ಭಾವ ಕೇವಲ ಅವರಿಗಾಗಿಯೇ!
ನನ್ನದೇನಿದೆ ಮನವು ಖಾಲಿ ಖಾಲಿ?!
ವೃಕ್ಷ ಅವರದು
ರೆಂಬೆಕೊಂಬೆ ಅವರವು
ಆಸರೆ ಗೂಡು ಎಲ್ಲವೂ ಅವರಿಗಾಗಿಯೇ!
ಒಂಟಿ ನಾನಿಲ್ಲಿ ವಲಸೆ ಹಕ್ಕಿ ಹಾಡು ಹಾಡಲು?!
ಕೋಟೆ ಅವರದು
ಕೋವಿ ಪಿರಂಗಿ ಗುಂಡು ಅವರದು
ಪಹರೆ ಚಹರೆ ಎಲ್ಲವೂ ಅವರದ್ದೇ!
ಅಸ್ತಿತ್ವವಿರದ ಅಕ್ಷಿ ನಾನಿಲ್ಲಿ ಉಸಿರು ಪಕ್ಷಿ?!
ಬಯಲು ಅವರದು
ರೆಕ್ಕೆಪುಕ್ಕ ಅವರವು
ಹಾರಾಟ ನಿಯಂತ್ರಣ ನಿರ್ಬಂಧಗಳೆಲ್ಲ ಅವರವೇ!
ಸೆರೆಯಾಳು ನಾನಿಲ್ಲಿ
ಎಲ್ಲಿದೆ ಬಂಧ ಮುಕ್ತಿ?!
ಕಾದಿರುವೆನು ಇಲ್ಲಿ
ಕಾಯುತ್ತಲೇ ಇರುವೆನು
ಬರಬಹುದೇನೋ ಚಂದ್ರಮನ ಉಯ್ಯಾಲೆ
ಹೊತ್ತೊಯ್ದು ತೂಗಿಸಿ ಆಡಿಸಿ ಬೆಚ್ಚಗೆ ಮಲಗಿಸಲು ಅಮ್ಮನಂತಹ ಧೀರ ಸಮೀರ…
ನನ್ನೆದೆಯನಾಳುವ ಹಮ್ಮೀರ!!
–ತೇಜಾವತಿ ಹುಳಿಯಾರ್
ಮನೆಯಿಂದ ಮನೆಗೆ ಅಲೆಯುವ
ನಾನು ಅಲೆಮಾರಿ-ಹಠಮಾರಿ!
ನೆಲೆಯಿಲ್ಲದೇ ಬೆಲೆಯಿಲ್ಲದೇ
ಕಿಂಚಿತ್ತೂ ನೆಮ್ಮದಿಯಿಲ್ಲದೇ
ನೆನಪುಗಳ ಗಂಟು-ಮೂಟೆಯನ್ನು
ಬಲವಂತವಾಗಿ ಬೆನ್ನೇರಿಸಿಕೊಂಡು
ಹೊರಟವನು ನಾನು ಅಲೆಮಾರಿ-ಹಠಮಾರಿ
ಸುಳ್ಳಿನ ನಗುವನ್ನು ಬಲವಂತವಾಗಿ
ಮೆತ್ತಿಕೊಂಡು ಭಾರವಾದ ಹೃದಯದಲ್ಲಿ
ಕುದಿವ ಕೆಂಡದಂತಹ ನಿರ್ವಿಕಾರ ಭಾವನೆ
ಗಳೊಡನೆ ಸೆಣಸಾಡುವ ನಾನು
ಅಲೆಮಾರಿ – ಹಠಮಾರಿ
ಯಾರದೋ ಆಯ್ಕೆಯಲಿ ಯಾವುದೋ
ಬಣ್ಣದಲಿ ಸಿಂಗಾರಗೊಂಡ ಮನೆಯೆಂಬ
ಮೌನದ ಗೂಡನ್ನು ಸುಮ್ಮನೇ ಹೊಕ್ಕು
ಬಿಕ್ಕುತ್ತೇನೆ ; ಆಯ್ಕೆಗಳಿಲ್ಲದ ಈ ಬದುಕು
ಅನಿವಾರ್ಯತೆಯ ಗೋಜಲಿನ ಜೀವನ
ನನ್ನೊಳಗಿನ ನನ್ನನ್ನು ದೂರಕ್ಕೊಯ್ದಿದೆ
ನನ್ನಲ್ಲಿ ನಾನಿಲ್ಲ ದೂರದಿರಿ ನನ್ನನ್ನು
ನಾನು ಅಲೆಮಾರಿ-ಹಠಮಾರಿ
ಉಮ್ನಳಿಸುವ ದುಃಖ ತಡೆಯಲು
ಕಷ್ಟಗಳ ಹಂಚಿ ಹಗುರಾಗಲು ಹೆತ್ತವರು ಬಳಿಯಿಲ್ಲ
ಆ ದೂರದ ಊರಿನಲ್ಲಿ ನನ್ನಂತೇ ಹಲುಬುತಿರಬಹುದು
ದುಡಿದುಡಿದು ಗಳಿಸಿ ಉಳಿಸಿದರೂ ಗಂಜಿಗೂ ಗತಿಯಿಲ್ಲ;
ಜ್ವರ ಬಂದು ಮಲಗಿರಲು ಜತೆ ನಿಲ್ಲುವವರಿಲ್ಲ
ಆರೈಕೆ ಮಾಡಿ ತಲೆ ನೇವರಿಸಿ ಬಿಸಿ ನೀರು ಕೊಡಲು
ನನ್ನವರಿಲ್ಲ ನಾನು ಅಲೆಮಾರಿ-ಹಠಮಾರಿ
ಮೌನದ ಸುಡು ಪಂಜಿನ ಬೆಳಕಿನಲ್ಲಿ
ಗಮ್ಯದ ಜಾಡು ಹಿಡಿದು ಸದಾ
ಒಂಟಿ ಪಿಶಾಚಿಯಂತೆ ಓಡಾಡುತ್ತಿರುವೆನು
ಕನಸುಗಳೋ ಭ್ರಮೆಗಳೋ ಕೈ ಹಿಡಿದು
ಜಗ್ಗಿದಾಗ ಕಾಲವು ಕಿಸಕ್ಕೆಂದು ನಕ್ಕಂತೆ
ಎದೆಯ ಬಾಗಿಲು ತೆರೆದರೆ ಗರಗಸದ ಸದ್ದು
ನಾನು ಅಲೆಮಾರಿ-ಹಠಮಾರಿ
–ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
ಹೂ ಬೆಳಕ ವಿಸ್ಮಯದ ರೂಪಾಂತರ
ಪಾಚಿರಂಗಿನ ಕಣಿವೆ ತುಂಬ
ಚಿಟ್ಟೆರೂಪಾಂತರದ ಹಾಗೆ
ಬಂಗಾರಕಾಂತಿಯ ದಿವ್ಯ ಬಿಸಿಲ ತುಂಬಿ
ಹೊನೆಯುತ್ತಿತ್ತು
ತೀರದ ಮಿಯಾನದೆಡೆಗೆ
ಹಿಮ ಅಪ್ಸರೆಯಂತೆ
ಇಬ್ಬನಿ ಹೂ ಪರಿಮಳ
ಮೌನದಿ ನಗುತ್ತಿತ್ತು
ಬೆಳಕಿನದೀಪದ
ಬೊಟ್ಟುಗಳ ತೊಟ್ಟಂತೆ
ಹಸಿರು ಬಳ್ಳಿಗಳ
ನಡುವೆ ಹೊಳೆದು
ಹೂ ಗುಬ್ಬಿಗಳ ಕರೆಯುತ್ತಿತ್ತು
ಹೂ ಶಿಖೆಯ ತುಂಬಿ
ಹಿಮ ಅಕ್ಷತೆಯಂತೆ ಚೆಲ್ಲಿ ಸುಯ್ಯುವಾಗ
ಬೆಳ್ಳಿಕಣಿವೆಯಲಿ ನೀರಧಾರೆಯ
ಎದುರಿಗೆ ನಾನಡೆದು ಹೋಗುವ ಕಂಗಳ ಬಿಂಬದಲಿ
ಮಳೆಒಲವೊಂದು ಮುಂಜಾನೆ, ಮಧ್ಯಾನದ
ಹಗಲು ಕನಸಲಿ ಹೃದಯವೊಂದನು
ನಡೆಸಿದ ಏಳು ಹೆಜ್ಜೆಯಂತೆ
ಕಾಫಿ ಕಾಯಿಗಳ
ಪಚ್ಚೆಲೋಲಾಕಿನಂತೆ
ತೂಗುತ್ತಿತ್ತು ಕೇಸರಿಯ ಶಂಕು ಹುಳುಗಳು
ಆಗತಾನೆ ಜನನವಾಗಿತ್ತು
ಹೂ ಹಾಲ್ನೊರೆ ಝರಿಯಾಗಿ, ಬೆಳ್ಳಮುಗಿಲಾಗಿ
ಬೆಳ್ಳಕ್ಕಿ ಬೆಡಗಾಗಿ ಹಾಲುತಂಬೆಳಕಾಗಿ
ನಮ್ಯವಾಗಿ ಮೆಲ್ಲಗೆ ಮರುಗಿತ್ತು
ಅಗಾಧ ಮಮತೆ ತುಂಬಿ
ಇರುಳತಂಪಗಾಳಿ ಘಮಲ ಕಡೆದು
-ನಂದಿನಿ ಚುಕ್ಕೆಮನೆ