ಆಗ – ಈಗ
ನೀವು ಕರೆ ಮಾಡುತ್ತಿರುವ ಚಂದಾದಾರರು..
ಆಗ
ನನ್ನ ನಿನ್ನ ನಡುವೆ ಸಂಬಂಧ ಸೃಷ್ಟಿಸಿದ್ದು ಈ
ಈ ಸೆಲ್ ಫೋನ್ ಗೆಳತಿ
ಈಗ
ನನ್ನ ನಿನ್ನ ನಡುವಿನ ಮೌನಕ್ಕೆ ಕಾರಣವು
ಈ ಸೆಲ್ ಫೋನ್ ಗೆಳತಿ
ತವಕಿಸುವ ಮನಸಿಗೆ ಸಮಾಧಾನವನ್ನ ನೀಡುವುದೇ
ಈ ಸೆಲ್ ಫೋನ್ ಗಳತಿ…..
ಆಗ
ಮಾತನಾಡಲು ಮಾತುಗಳು ಸಾಲುತ್ತಿರಲಿಲ್ಲ
ಇರುವ ಡಾಟಾ ಪ್ಯಾಕ್ ಸಾಲುತ್ತಿರಲಿಲ್ಲ
ಪದೆ ಪದೆ ಚಾರ್ಜ್ರಿಗೂ ಅಂಟಿಕೊಂಡಿರುತ್ತಿದ್ದೆ
ಟೈಪಿಸಿ ಟೈಪಿಸಿ ಬೆರಳುಗಳಿಗೆ ನೋವು ತಿಳಿಯುತ್ತಿರಲಿಲ್ಲ
ದಿನ ಘಂಟೆ ಲೆಕ್ಕೆ ಮರತೆಹೋಗಿದ್ದುವು
ಕುಳಿತು ನಿಂತು ಅಡ್ಡಬಿದ್ದು ಕೆಳದರೂ ಸಮಯ ಸಾಲುತ್ತಿರಲಲ್ಲಿ
ಈಗ
ಮಾತನಾಡಲು ಮಾತುಗಳೆ ಇಲ್ಲ
ಇರುವ ಡಾಟಾ ಪ್ಯಾಕ್ ಖಾಲಿ ಮಾಡಲು ಆಗುತ್ತಿಲ್ಲ
ಫೋನ್ ಚಾರ್ಜರ್ ಕಾಣದೆ ತಿಂಗಳು ಕಳಿದಿದೆ
ಟೈಪಿಸಲು ಅಕ್ಷರವು ಹೊಳೆಯುತ್ತಿಲ್ಲ
ದಿನ ಘಂಟೆ ಕಳೆಯಲು ಆಗುತ್ತಿಲ್ಲ
ಯಾವ ಸ್ನೇಹಿತರು ಸಿಗುತ್ತಿಲ್ಲ……
ಆಗ
ಜಗವೇ ನಮ್ಮದು
ಯಾವ ಅಡತಡೆ ಇಲ್ಲ ನೀ ಜೊತೆ ಇರಲು
ಕಾಣುವ ನೋಟವು ರಂಗು ರಂಗು
ಕಾಮನಬಿಲ್ಲು ನಮ್ಮ ಮನೆಯ ಕಮಾನು
ನಿನ್ನ ಮಾತುಗಳು ಕೇಳಿಬರುತ್ತಿದ್ದವು ಘಂಟಾ ನಾದದಂತೆ
ನಿನ್ನ ಕರೆಯೆ ಬೆಳಗಿನ ಬೆಳಗು
ನಿನ್ನ ತೋಳ ತೆಕ್ಕೆ ಸಂತಸದ ಕಡಲು
ಹೀಗೆ ಕಳೆದು ಬಿಡುವ ಕಾತುರದಲ್ಲಿದ್ದೇವು ನಾನು ನೀನು
ಈಗ
“ನೀವು ಕರೆ ಮಾಡುತ್ತಿರುವ ಚಂದಾದಾರರು ವ್ಯಾಪ್ತಿ
ಪ್ರದೇಶದಿಂದ ಹೊರಗಿದ್ದಾರೆ “
ಕಾರಣ ಒಂದೇ ನೀ ತೊರೆದೆ ಕಾರಣವಿಲ್ಲದೆ
ಹೇಳಿ ಹೋಗಬಹುದುದಿತ್ತು ಕಾರಣವ
ಮತ್ತೆ
“ನೀವು ಕರೆ ಮಾಡುತ್ತಿರುವ ಚಂದಾದಾರರು
ಸೇವೆಯಿಂದ ಹೊರತಾಗಿದ್ದಾರೆ “…
–ವೃಶ್ಚಿಕ ಮುನಿ..
ಒಲವ ತುಟಿಗಳ ಧ್ಯಾನ
ನೀ ಕೋಪಿಸಿ ಕೊಂಡಾಗಲೆಲ್ಲಾ
ಗಟ್ಟಿಯಾಗಿ ಅಪ್ಪಿ ಮುತ್ತಿಡಬೇಕೆನಿಸುತ್ತದೆ
ಆದರೆ ನೀ ಸಿಗದಷ್ಟು ದೂರದ ಊರಿನಲ್ಲಿರುವೆ
ನೀ ಮುನಿಸಿಕೊಂಡಾಗಲೆಲ್ಲಾ
ತುಟಿಗಳ ಮೇಲಿನ ಹುಸಿ
ಕೋಪವನ್ನೇ ಧ್ಯಾನಿಸುವೆ
ಅಹಾ ತುಟಿಗಳೆಂಬ ಮಾಧುರ್ಯವ ಅತ್ಯಂತ ಸನಿಹದಿಂದ ಕಂಡೆ
ಮಧುಪಾತ್ರೆ ಒಡಲಲ್ಲಿದೆ ಅಂದುಕೊಂಡಿದ್ದೆ
ಅದು ತುಟಿಗಳಲ್ಲಿದೆ ಎಂದು
ಕಣ್ಣಿಂದ ಸೂಚಿಸಿದ್ದಕ್ಕೆ ಧನ್ಯನಾದೆ
ಹಠಾತ್ ಸಿಕ್ಕ ತುಟಿಗಳು ದೀರ್ಘವಾಗಿ,
ಸುದೀರ್ಘವಾಗಿ ಇನಿಯ ಕಾಲದ ವಶವಾದರೆ ?
ಅಂದಕೊಂಡೆ
ಅಂದುಕೊಂಡರೆ ಸಿಗುವ ಸೊಗಸು
ನಿಜವಾದರೆ ,ಸ್ವರ್ಗದ ಬಾಗಿಲು ತೆರೆದೀತು
ಕಾದಿಡು, ಇನ್ನೇನು ಬಂದಿತು ಆ ದಿನ , ಆ ಘಳಿಗೆ
ವರ್ಷ ತಾನೇ …ಕಣ್ಣುಚ್ಚಿ ಕಣ್ಬಿಟ್ಟು ಧ್ಯಾನಿಸಿ ಕನಸ
ಕಟ್ಟುವುದರಲ್ಲೇ ಆ ಕ್ಷಣ ಧುತ್ತೆಂದು ಇಬ್ಬರೆದುರು ನಿಂತೀತು
ಯಾರು ಬಲ್ಲರು ??
ನೀ ನಿನ್ನ ಜಾಗದಲ್ಲಿ ನಿನ್ನ ಸವತಿಯರ ಕಲ್ಪಿಸಿಕೊಂಡರೆ
ಮಾತ್ರ
ಕೆಂಡದಥ ಕಡು ಕೋಪ
ನನಗೆ;
ಉತ್ಕಟ ಪ್ರೇಮವ
ನಾವೇ ಅನುಮಾನಿಸಿದಂತೆ
ಹಾದರದ ಹುಳುಗಳಿಗೆ
ಪ್ರೀತಿಯ ಬೆಳಕು ಕಾಣದು
ಇಷ್ಟು ನೆನಪಿಟ್ಟರೆ ಸಾಕು
ಪ್ರೀತಿಯ ಅನಿರ್ವಚನೀಯತೆ
ಅರ್ಥವಾದೀತು ನಿನಗೆ
ನೀ ಕೋಪಿಸಿಕೊಂಡಾಗಲೆಲ್ಲಾ
ತುಟಿಗಳಿಗೆ ಮುತ್ತಿಟ್ಟು
ಗಟ್ಟಿ ಅಪ್ಪಿಬಿಡುವೆ
ಗಾಳಿ ನುಸುಳಲೂ ಎಡೆಯಾಗದಂತೆ
ಯುಗವಾಗುತಿದೆ ಪ್ರತಿ ಘಳಿಗೆ
ಇನ್ನೂ ಕಾಯಿಸದಿರು ಒಲವೇ
-ನಾಗರಾಜ್ ಹರಪನಹಳ್ಳಿ. ಕಾರವಾರ.
ದಕ್ಕಿಸಿಕೊಳ್ಳಲು…
ಒಂದೊಮ್ಮೆ ಅಪ್ಪನ ಅಪೇಕ್ಷೆಯ
ಬೆಂಬಲದಿAದ ನಡೆದ ಘಟನೆಗೆ ಸಾಕ್ಷಿ ನಾ…
ಅಕ್ಕ ಯಾವತ್ತಿಗೂ ಅಕ್ಕನಾ
ಗಿರಬೇಕೆಂದು ಬಯಸಿದಾತ ನಾ…
ಮಗಳ ಮದುವೆಯಾಗು ಅತ್ತೆ
ಯಾಗುವೆನೆಂದಾಗ ತಿರಸ್ಕರಿಸಿದಾತ ನಾ…
ಹುಟ್ಟಿನಿಂದ ಸಿಕ್ಕಿದ್ದನ್ನು
ದಕ್ಕಿಸಿಕೊಳ್ಳಲು ಹೆಣಗಾಡುತಿರುವೆ ನಾ…
ಬಯಸಲಿಲ್ಲ ; ಬಾಯಾರಲಿಲ್ಲ
ಬಳಲಿಕೆಯಿಲ್ಲ ; ಬೆಂಬತ್ತಲಿಲ್ಲ ನಾ…
ಚಿಂತೆಯಿಲ್ಲ ಭೂತಕಾಲದಲಿ
ಭವಿಷ್ಯತ್ತಿನೆಡೆ ನಿಟ್ಟಿಸಿದ್ದೇನೆ ನಾ…
ವರ್ತಮಾನದ ಹಂಗಿಲ್ಲ
ನಾನಾಗಿರಬೇಕೆಂದು ಹೊರಟಿರುವೆ ನಾ…
ಭಾವಾಮೃತ
ಬಾರದ ಭಾವದಲೆಗಳ
ಮೇಲೆ ಸವಾರಿ ಮಾಡುವ
ಹುಂಬತನವೇಕೆ?
ಬಾರದ ಸಖಿಯ ನಕರಾಗಳ
ಮೇಲೆ ಸಾವಿರ ಪದಗಳ
ಸೃಷ್ಟಿಸುವುದೇಕೆ?
ಬಾರದ ಭವಂಗಳ ನೂಕಾಟಗಳ
ಮೇಲೆ ಅರಿವಂಗಳ
ಭವದ ಹಂಗೇಕೆ?
ಬಾರದು ಭಪ್ಪದು ತಪ್ಪದು
ನುಡಿಗಳ ಅರಿವಿದ್ದರೂ ಆಸೆಗಳ
ಬೆಂಬತ್ತುವುದೇಕೆ?
ಇಷ್ಟೇಲ್ಲಾ ಏಕೆಗಳಿದ್ದರೂ
ಇನ್ನೂ ಅರಿವಿನ ಗಂಟೆಗಳ
ನಿನಾದ ಕೇಳಿಸಿಲ್ಲವೇಕೆ?
ಕೇಳಿಸಿಕೊಳ್ಳದಿದ್ದರೂ ಕಿವಿಗಳ
ಮೂಲಕ ರವಾನೆಯಾಗಿದೆ
ಮಿದುಳಿಗೆ !
ಬರಬೇಕಿದೆ ಸೂಕ್ತ ಪ್ರತಿಕ್ರಿಯೆಯ
ಬರಪೂರದ ಭಾವಾಮೃತದ
ಹೊರಹೊಮ್ಮುವ ಹೊನ್ನಕುಡಿಕೆ !
-ಹಿಪ್ಪರಗಿ ಸಿದ್ಧರಾಮ,
Chi(ಛೀ)ನಾಸುರ
ಅಬ್ಬಬ್ಬಾ..!
ಕೊರೋನ ವೈರಸ್ ಅಬ್ಬರ
ಬಲು ಭೀಕರ, ಬರ್ಬರ
ಆಗಿದೆ ಬದುಕು ದುಸ್ತರ
ಕಾಡಿದೆ ಜಗಕೆ ಗ್ರಹಚಾರ!
ಅರೆ, ಏನೀ ಅವಾಂತರ ?
ತಲೆ ಕೆಳಗಾಗಿದೆ ಲೆಕ್ಕಾಚಾರ
ಏರು ಪೇರಾಗಿದೆ ವ್ಯವಹಾರ
ಕಾಣೆಯಾಗಿದೆ ಜನ ಸಾಗರ
ದೇವರುಗಳಿಗೆ ಬಲು ಬೇಸರ..!
ಓ ವೈರುಸ್ಸಾಸುರ,
ಬಿರುಸಾಗಿದೆ ರೋಗ ಪ್ರಸಾರ;
ಚೀನಿಯರಂತೂ ತತ್ತರ..!
ನೂರ್ಮಡಿಯಾಗಿದೆ ಪ್ರಚಾರ ,
ಕುಂಠಿತವಾಗಿದೆ ಲೋಕ ಸಂಚಾರ
ಕಾಡಿರಲಿಲ್ಲ ಯಾವ ವೈರಸ್ಸೂ ನಿಂಥರ..!
ಏ ಕೊರೋನಾಸುರ,
ನಿನಗೇಕಿಷ್ಟು ಮತ್ಸರ?
ಕಾಡಿದೆ ಜಗಕೆ ಕಾತರ
ನೀಡಿಬಿಡು ಬೇಗ ಉತ್ತರ,
ನೀನೆಂದು ಕಾಯುವೆ ಅಂತರ!?
ಎಬೋಲ ನಿಂಗೆ ಹಿರಿಯ ಸೋದರ
ಸಾರ್ಸಾಸುರ ಕೂಡ ತುಸು ಶೂರ..!
ಜೀವ ತೆಗೆಯಲು ಅದೇನು ಪ್ರೀತ್ಯಾದರ
ಸುಮ್ಮನಿರಲು ನಿಮಗೇಕೆ ಅನಾದರ,
ಎಲ್ಲೆಲ್ಲೂ ನಿಮ್ಮದೇ ಡಂಗೂರ..!
ಯೋಚಿಸುತ್ತಿರುವೆ ಹೀಗೂ ಒಂಥರಾ
ಎಲಾ ವೈರುಸ್ಸುಗಳಿರಾ,
ನೀವೆಲ್ಲ ರಾಮನ ಅನುಚರರಾ ?
ಅಥವಾ ಕೃಷ್ಣನ ಸಹಚರರಾ ?
ಭೂಭಾರ ತಗ್ಗಿಸಲು ಬಂದವರಾ
ಅಥವಾ
ನೈರ್ಮಲ್ಯದರಿವು ಮೂಡಿಸಲು ಬಂದಿರಾ?
ಹನುಮನ ಭಂಟರೇ ?
ಸೂಚನೆ ನೀಡದ ಹಾವಳಿ ನಿಮ್ಮದು!
ಊರಿಗೆ ನೆಂಟರೇ ?
ಆಹ್ವಾನವಿಲ್ಲದೆ ಬರುತ್ತಿರುವಿರಲ್ಲ..!
ರಣಭೂಮಿಯ ಹದ್ದುಗಳಂತೆ
ಸಾವಿನಕ್ಷೋಹಿಣಿಯ ಎಣಿಸಲು ನಿಂತಿರಾ?
ಕುಂಭಕರ್ಣನ ಕಿಂಕರರೇ?
ಚಿರನಿದ್ರೆಗೆ ತಳ್ಳುತ್ತಿರುವಿರಲ್ಲ..!
ಇಂತೇಕೆ ಬಹುರೂಪಿ ರಕ್ಕಸರಾದಿರಿ?
ಮನುಜಗೆ ಜಗದೇಕ ಖಳರಾದಿರಿ!!
ಅಣು ಶಕ್ತಿಗೆ ಅಂಜದೆ,
ಯುದ್ಧಕ್ಕೆ ಎದೆಗುಂದದೆ ಜಗ ಮೆರೆದಿತ್ತು;
ದಂಡಿಗೆ ಹೆದರದ,ದಾಳಿಗೆ ಬೆದರದ
ಸತ್(ತ್ತ) ಪ್ರಜೆಗಳ ಸಂಕುಲ,
ಕಣ್ಣಿಗೆ ಕಾಣದ ಜೀವಿಗೆ ಅಂಜುವಂತಾಗಿದೆ!!
ಮಂಜು ಮುಸುಕಿದ ಹಾದಿಯಂತಾಗಿದೆ..!
ಪರಮ (ಅ)ಪ್ರಿಯ (ಅ)ಸುರರೆ,
ದಯವಿಟ್ಟು ಗಮನಿಸಿ,
ಭರತ ಪುಣ್ಯ ಭೂಮಿಯಲಿ
ನಡುವೆ ಅಂತರವಿರಲಿ..!
ಆರೋಗ್ಯ ಸೇತುವಿದೆ, ಎಚ್ಚರವಿರಲಿ..!
-ಕೊಳಲು
ಕಾವ್ಯನಾಮ: ಕೊಳಲು
ಹೆಸರು : ವೇಣುಗೋಪಾಲ್ ಎಂ ಎನ್
ಸಿಂಧೂರ
ಹಣೆಯಲಿಟ್ಟರೆ ಸಿಂಧೂರ
ಮೊಗದ ಅಂದವೆ ಸುಂದರ|
ಹೆಣ್ಣಿಗದುವೆ ಶೃಂಗಾರ
ಮುತ್ತೈದೆಗದುವೆ ಬಂಗಾರ||
ಅರಿಶಿನ ಕುಂಕುಮ ಹೂವು
ಹೆಣ್ಮನಕದುವೆ ಸಂಪದವು|
ಮನದಿನಿಯನಿತ್ತ ಸಿಂಧೂರವು
ಬಾಳ ಬಂಧಕದು ಆಧಾರವು||
ಪತಿ ಇತ್ತ ಸಿಂಧೂರ
ಅದಲ್ಲ ಬರೀ ಅಲಂಕಾರ|
ಸತಿಗದುವೆ ಜೀವನಾಧಾರ
ನಲಿವುದದು ಮೊಗದಿ ನಿತ್ಯ ನಿರಂತರ||
ಹೆಣ್ಣ ಸಿರಿ ಅದುವೆ ಸಿಂಧೂರವು
ಮರಿಬೇಡ ಅದು ಸಂಸ್ಕಾರವು|
ನೀನಿತ್ತ ಸಿಂಧೂರ ನಿನ್ನ ಬಲವು
ಜೊತೆಯಾದ ಸಖನ ಒಲವು||
-ಪ್ರತಿಭಾ ಪ್ರಶಾಂತ.
ವಿಜಯ ದಶಮಿ
ಶಮಿಯ ವೃಕ್ಷಕೆ ಪೂಜೆ ಮಾಡುತ
ಸುಮವನರ್ಪಿಸಿ ಕರವ ಮುಗಿಯುತ
ದಮನಗೈಯಲು ಮನದ ದುರಿತವ ವಿಜಯ ದಶಮಿಯಲಿ|
ಶಮನಗೊಳ್ಳಲು ದುಷ್ಟ ಬಾಧೆಯು
ವಿಮಲ ಹೃದಯದಿ ಕುಂಕುಮಾರ್ಚನೆ
ತಮವ ಕಳೆಯಲು ಶಮಿಯ ವೃಕ್ಷಕೆ ಕಾಯ
ನೊಡೆಯುತಲಿ||
ಮಹಿಷ ಮರ್ಧನ ಮಾಡಿ ದುರ್ಗೆಯು
ಕಹಳೆಯೂದಿದ ವಿಜಯ ದಶಮಿಯು
ಸಹನ ಮೂರ್ತಿಯು ರುಧಿರ ಧಾರೆಯ ಹರಿಸಿ ಮೆರೆದಿಹಳು||
ಮಹಿಯ ರಕ್ಕಸ ರುಧಿರ ಸವಿದಳು
ವಿಹಿತವಾಗಿಹ ತಾಣವರಸುತ
ತುಹಿನ ಗಿರಿಯಲಿ ಸಿಂಹ ವಾಹಿನಿಯಾಗಿ
ನಿಂತಿಹಳು||
ವನದ ವಾಸವು ಕೊನೆಯ ಗೊಂಡಿದೆ
ಬನದ ಸಿರಿಯದು ಮರಳಿ ಬಂದಿದೆ
ಜನರ ಭಾಗ್ಯವು ಬನ್ನಿ ವೃಕ್ಷದಿ ದಸರ
ಹಬ್ಬದಲಿ||
ತನುವು ಬಾಗುತ ನಮನ ಸಲ್ಲಿಸಿ
ಸನಿಹ ವಿದ್ದಿಹ ಹಿರಿಯ ಕಿರಿಯಗೆ
ವಿನಯದಿಂದಲಿ ಬನ್ನಿ ನೀಡುತ ವಿಜಯ
ದಶಮಿಯಲಿ||
-ಶಂಕರಾನಂದ ಹೆಬ್ಬಾಳ
ಪ್ರೇಮಕಾವ್ಯ
ಮರೆಯಲಾರೆ ನೀ ಬಿಡಿಸಿದ
ಬಣ್ಣದ ರಂಗೋಲಿಯ
ಕಳೆಯಲಾರೆ ಕಡೆಯತನಕ
ನಿನ್ನ ಪ್ರೇಮದ ಓಲೆಯ
ಹಂಬಲಿಸಿದೆ ನನ್ನಮನವು
ನಿನ್ನ ಗೆಜ್ಜೆನಾದಕ್ಕೆ
ಹುಮ್ಮಳಿಸಿದೆ ಈ ಜೀವವು
ನಿನ್ನ ನಗೆಯ ಸೋಗಿಗೆ
ಕಳೆದೆನೆಷ್ಟೋ ರಾತ್ರಿಗಳನು
ನೀನಿರದೆ ಒಂಟಿತನದಿ
ನಡೆದೆನೆಷ್ಟೋ ಹೆಜ್ಜೆಗಳನು
ನಿನ್ನ ನೆನಪಿನ ವಿರಹದಿ
ನುಡಿಸಿರವ ಮೋಹನ ಪ್ರೇಮಕೊಳಲನು
ಹೊಮ್ಮಿಸಲು ಒಲವರಾಗವ
ಜಗದ ನೆರಳಲಿ ಒಲವ ತಂಪಲಿ
ಆಲಿಸಿದೆವು ಮಧುರರಾಗವ
ಮೊಳಕೆಯೊಡೆದವು ಎರಡು ಬೀಜವು
ಪ್ರೇಮ ಕೊಳಲಿನ ನಿನಾದದಿ
ಬೆಳಕು ಚೆಲ್ಲಿತು ಇಳೆಯ ಸೆರಗಲಿ
ನವಿಲುಗರಿಯ ಬಣ್ಣದಿ
ಪ್ರೇಮಕಡಲಲಿ ನೌಕೆ ಸಾಗಿದೆ
ನನ್ನ ನಿನ್ನ ಕುರುಹಿಗೆ
ದಿವ್ಯ ಕಡಲದು ದಡವು ಕಾಣದು
ತನುವಿನ ಬರಿಗಣ್ಣಿಗೆ
ತರಣಿಯಿರನು ಶಶಿಯುಯಿರನು
ಪ್ರೇಮನೌಕೆ ಮುಳುಗಿದರೆ
ನಾನುಯಿರೆನು ನೀನುಯಿರಳು
ಕಡಲಹನಿಯು ಬತ್ತಿದರೆ
ಆದಿ ನಾನು ಅನಂತ ನಾನು
ನನ್ನೊಳಗಿನ ಬದುಕು ನೀನು
ಜಗವು ನೀನು ಅಂತ್ಯ ನೀನು
ನಿನ್ನೊಳಗಿನ ಸಾವು ನಾನು
ಪ್ರೇಮ ನಾನು ಕಾಮ ನಾನು
ನನ್ನೊಳಗಿನ ಸರಸ ನೀನು
ಕ್ರೋದ ನೀನು ಮದವು ನೀನು
ನಿನ್ನೊಳಗಿನ ವಿರಸ ನಾನು
ಮರೆಯಲಾರೆ ನೀ ಬಿಡಿಸಿದ
ಬಣ್ಣದ ರಂಗೋಲಿಯ
ಕಳೆಯಲಾರೆ ಕಡೆಯತನಕ
ನಿನ್ನ ಪ್ರೇಮದ ಓಲೆಯ
–ಮಸಿಯಣ್ಣ ಆರನಕಟ್ಟೆ.
ಕನ್ನಡ ಶಾಯಿರಿಗಳು
ಒಂದ ದಿನಾ ನಿನ್ನ ಮಾರಿ ನೋಡಲಿಲ್ಲಾಂದ್ರ
ನನ್ನ ಎದಿಯಾಗ ರಕ್ತ ಹೆಪ್ಪಗಟ್ಟಿದಂಗಾಗತೈತಿ!
ಅದ ದಿನಾ ನಿನ್ನ ಮಾರಿ ನೋಡಕೊಂತಿದ್ರ
ನನ್ನೆದಿಯಾಗ ಜೋಕಾಲಿ ಜೀಕಿದಂಗಾಗತೈತಿ!!
ಆಕಾಶದಾಗಿನ ಸೂರ್ಯಂಗೂ ಪ್ರೀತಿಗೂ
ಒಂದ ಒಂದು ವ್ಯತ್ಯಾಸ ಐತಿ ಅನ್ನಸತೈತಿ!
ಸೂರ್ಯ ಮುಂಜೇನೆ ಹುಟ್ಟಿ ಸಂಜೀಕೆಮುಳುಗತಾನ
ಈ ಪ್ರೀತಿ ಹುಟ್ಟಿದ ಮ್ಯಾಲೆ ಹಗಲು ರಾತ್ರಿ ಇರತೈತಿ!!
ಪ್ರೀತಿ ಶುರುವಾದಾಗ ನೀ ಖರೆ ಖರೆ
ಅನ್ನೂವಂಗ ಭಾಳ ಭಾಳ ಮಾತು ಕೊಟ್ಟಿದ್ದಿ!
ಪ್ರೀತಿ ಸುಖದ ಬಿಸಿ ತಟ್ಟಿದ ಮ್ಯಾಲೇ ನೀ
ನನಗ ಕೊಟ್ಟ ಮಾತ್ನ ಮರತ ಬಿಟ್ಟಿದ್ದಿ!!
ಮೊಸರಿಲ್ಲದ ಊಟ ಉಂಡಂಗ ಅನ್ಸೂದಿಲ್ಲ
ಹಸಿರಿಲ್ಲದ ತೋಟ ಚಂದನ ಕಾಣ್ಸೂದಿಲ್ಲ!
ನಿನ್ನ ಸ್ಪರ್ಶ ಇಲ್ಲದ ದಿನ ಅದು ದಿನಾನ ಅಲ್ಲ
ನಿನ್ನ ಹೆಸರಿಲ್ಲದ ಬದುಕು ಬದಕ ಅನ್ಸೂದಿಲ್ಲ!
-ಪರಮೇಶ್ವರಪ್ಪ ಕುದರಿ
ಅಂತರಂಗದ ಭಾವಗಳು
ಅಂತರಂಗದ ಭಾವಗಳು
ಬಂಧನದಲ್ಲಿಹವು
ಬಿಡಿಸಲಾರದೇ ಬಿಕ್ಕಿ ಬಿಕ್ಕಿ
ಅಳುತಿರುವವು ಕಾಣದೇ..
ಅಂತರಂಗದ ಭಾವಗಳು
ಮೃದಂಗದಂತೆ ಸದ್ದು
ಮಾಡುತ್ತಾ ನೋವುಗಳ
ತಕಧಿಮಿತದಲಿ ನಲುಗುತಿವೆ
ಅಂತರಂಗದ ಭಾವಗಳು
ಮಾಟದ ಕೈಗಳಲಿ
ನಲುಗುತ್ತಿರಲು, ಕಂಡು
ಕಾಣದಂತೆ ನೋಡುತ್ತಾ
ನಿಂತಿರುವ ಆ ದೇವರ
ಮೇಲೆ ಅಂತರಂಗಕೆ
ಚೂರು ಹುಸಿಮುನಿಸು
ಚೂರು ಅರಳು ಕಂಗಳು
ಚೈತ್ರಾ ವಿ ಮಾಲವಿ
ಹಗುರಾಗಬೇಕು, ಜೀವ ಹಗುರಾಗಬೇಕು
ಕಾಂತಿ ಸುರಿಸಿ ಶಾಂತವಾದ ಹಣತೆಯಂತೆ.
ತನ್ನೆದೆಯ ಉಸಿರ ಹೂವಿಗಿಟ್ಟು
ಬಸಿರಾದ ಕಿರುದುಂಬಿಯಂತೆ…
ಕೊರಳ ಇಂಪನೆಲ್ಲ ಶ್ರವಣಕಿಟ್ಟು
ಮರೆಯಾದ ಮರಿಕೋಗಿಲೆಯಂತೆ,
ಹಗುರಾಗಬೇಕು ಜೀವ ಹಗುರಾಗಬೇಕು….
ತನ್ನೊಡಲ ಗರ್ಭದ ಜಲವನೆಲ್ಲ
ಭುವಿಗಿತ್ತ ಕರಿಮುಗಿಲಿನಂತೆ..
ಕಣಕಣದ ಕಸುವೆಲ್ಲ ಸಸಿಗಿತ್ತು
ಹಸಿರೀವ ನೆಲದ ಮಣ್ಣಿನಂತೆ,
ಹಗುರಾಗಬೇಕು ಜೀವ ಹಗುರಾಗಬೇಕು…
ತನ್ನಾತ್ಮದ ಪಕಳೆ ಪಕಳೆಯನ್ನು
ದೇವಗಿಟ್ಟು ನಲಿವ ಗಿಡಗಳಂತೆ..
ಪ್ರತಿ ಕಿರಣದ ಪ್ರಖರ ಜೀವಕಿಟ್ಟು
ಒಲಿವ ಹಗಲ ಸೂರ್ಯನಂತೆ,
ಹಗುರಾಗಬೇಕು ಜೀವ ಹಗುರಾಗಬೇಕು…
ರೋಮರೋಮದ ಕಂಪು ಗಾಳಿಗಿಟ್ಟು
ಗಮನಿಸದೇ ಗಮಿಸೋ ಸುಮಗಳಂತೆ..
ರಾಮ ರಾಮ ಎಂದು ಭವದಿ
ದೂರಾಗೋ ಸಂತ ಶರಣರಂತೆ
ಹಗುರಾಗಬೇಕು ಜೀವ ಹಗುರಾಗಬೇಕು…
ಹಾಲ್ದುಂಬಿದ ಒಡಲ ಅಮೃತವನ್ನು
ಹಸುಳೆಗೆರೆವ ಹೊಸ ಹಸುವಿನಂತೆ..
ಕಾಲ್ಗೆಜ್ಜೆ ದನಿಯೆಲ್ಲವ ದಾರಿಗಿಟ್ಟು
ಗುರಿಇರದೇ ಓಡುವ ಎಳೆಬಾಲೆಯಂತೆ,
ಹಗುರಾಗಬೇಕು ಜೀವ ಹಗುರಾಗಬೇಕು….
-ಸರೋಜ ಪ್ರಶಾಂತಸ್ವಾಮಿ
ನಾವು ಹೀಗೇ ನೀರು ಕೊರೆದ ಬಂಡೆಯ ಹಾಗೆ
ಅದೆಷ್ಟೋ ವರ್ಷಗಳ ನಂತರ
ಸಂಧಿಸಿದಾಗ ನಕ್ಕ ಹಾಗೆ ನಟಿಸಿ
ಕೈ ಕುಲುಕಿ ” ವಾವ್ ವಾಟ್ಟೇ ಪ್ಲೆಸಂಟ್ ಸರ್ಪ್ರೈಸ್ ” ಎನ್ನುತ್ತೇವೆ
ವಿದೇಶಿ ಅಳಿಯನ ಬಗ್ಗೆ
ಅವನಪ್ಪನ ಜಿಪುಣತನದ ಧಗೆ
ಮೊಮ್ಮಗನ ತುಂಟತನದ ಬಗೆ
ಅದೆಲ್ಲಿಂದಲೋ ಆವಾಹಿಸಿಕೊಂಡಂತೆ
ಆಳೆತ್ತರದ ನಾಯಿ ಮುಗಿಲೆತ್ತರ ಜಿಗಿಯುತ್ತದೆ
ಗೇಟಿನ ಮುಂದಿರುವ ಬೋರ್ಡ್ ಲ್ಲಿ ನಾಯಿ ಬೊಗಳುವುದಿಲ್ಲ
ಮನೆಯ ಒಳಗೆ ನೆಮ್ಮದಿಯಿಲ್ಲ
ಸಂಡೇ ಬಜಾರ್ ನಿಂದ ತಂದ ಬೂಟುಗಳು ಎತ್ತೆತ್ತಲೋ ಒಗೆಯುತ್ತಿವೆ
ದೇಹ ಸಹಕರಿಸುವುದಿಲ್ಲ
ಬಾಡಿಗೆದಾರರ ಭಂಡತನ ಮಾಲೀಕರ ಮೊಂಡುವಾದ
ನಿಸೂರಾದ ಬದುಕಿಗೆ ಇಟ್ಟ ಬೆಂಕಿ ಮನೆ ಮನೆಯಲಿ ದೀಪವಾದಂತೆ
ಸಭ್ಯತೆಯಲ್ಲಿಯೇ ಬದುಕಲೆತ್ನಿಸಿ
ಎಲ್ಲೆ ಮೀರಿದ ಜೀವನವನ್ನು ಹಿಡಿಯಲೆತ್ನಿಸಿ
ಸೋತು ಸುಣ್ಣವಾದ ನಿರ್ವೀರ್ಯತನ
ಶತ ಪ್ರಯತ್ನಿಸಿದರೂ ಕೈಗೆಟುಕದ ಕೈಗೆಟುಕದ ಹುಳಿ ದ್ರಾಕ್ಷಿ
ಮಲ್ಲಿಗೆಯ ಸುವಾಸನೆ ಅಲರ್ಜಿಯಾಗುತ್ತಿದೆ
ಗುಲಾಬಿಯ ಕೆಂಬಣ್ಣ ಜೀವ ಭಯ ತರುತ್ತಿದೆ
ಕುಬ್ಜತೆಯ ಅಂಗಿಯೊಳಗೆ ದಿನವೂ ಸಾವಾಗುತ್ತಿದೆ
ಸೂತಕದ ಛಾಯೆ ಬೆನ್ನು ಬಿಡದಿರುವಾಗ…
ಜನರೆಲ್ಲ ಮಾತು ಮರೆತಿದ್ದಾರೆ
ಆಡಿಯೂ ಆಡಲಾರದೆ ಅಡಿಗಡಿಗೆ
ತೊಡರಿ ತೊದಲುತ್ತಿದ್ದಾರೆ ಮಾತು ಮರೆತು…
ಅಸ್ಪಷ್ಟ ಮಾತುಗಳನ್ನಷ್ಟೇ ಆಡಬಲ್ಲರು
ಅರ್ಧ ಮನಸನ್ನಷ್ಟೇ ತೋರಬಲ್ಲರು
ಗತಕಾಲ… ನವಿಲುಗಳು… ಜಾತ್ರೆ…
ಕುಣಿದದ್ದು… ಮೆರೆದದ್ದು….
ಭೂತಕಾಲದೊಳಗೆ ಶವಯಾತ್ರೆ ನಡೆಸಿದ್ದಾರೆ
ಅರ್ಧ ವಾಕ್ಯ ನುಡಿದು ಎಲ್ಲವನ್ನೂ ಮರೆತಿದ್ದಾರೆ
ಗಾಳಿಗೆ ತೂರಿದ ಗಾಳಿಪಟದಂತೆ ಸೂತ್ರ ಹರಿದು ನಿಂತಿದ್ದಾರೆ
ಆತ್ಮ ಸತ್ತು ನರಳುವವರಲ್ಲಿ ಆತ್ಮೀಯತೆಯು ಗೋರಿ ಕಟ್ಟಿದೆ
ಎದೆಯ ಗೂಡಿನಿಂದ ಹಾರಿ ಹೋಗಿವೆ ಎಲ್ಲವೂ
ನಿಶ್ಯಬ್ಧದ ಮುಸುಕು…..
ನಮ್ಮ ಜನಕ್ಕೆ ಮಾತಾಡಲೂ ಏನೂ ಇಲ್ಲ.
-ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
ಗಜ಼ಲ್;
ಎನ್ನ ಮನದಲಿ ನಗುವ ನೋವ ಕೇಳೊಮ್ಮೆ ಸಾಕು/
ಎದೆಯಲ್ಲಿ ಕದಲುವ ಮಿಡಿತವ ಕೇಳೊಮ್ಮೆ ಸಾಕು//
ಕೈಗಳ ಮೆಹಂದಿಯಲಿ ಕೆಂಗುಲಾಬಿಗಳು ಬಿರಿಯುತಿವೆ/
ಕಾವ್ಯಕಂಗಳ ಕಣ್ಣೀರಧಾರೆ ಕಥನವ ಕೇಳೊಮ್ಮೆ ಸಾಕು//
ಕೇಶರಾಶಿಯಲಿ ನಿನ್ನ ಬೆರಳುಗಳು ಮೀಟುತಿರಲಿ ಪ್ರೇಮರಾಗ/
ಹೃದಯ ಕೋಗಿಲೆ ಹಾಡುವ ವಿರಹವ ಕೇಳೊಮ್ಮೆ ಸಾಕು//
ಬೊಗಸೆಯಿಂದ ಸೋರಿ ಹೋಗುವ ನೀರಿನಂತೆ ಬದುಕು/
ಕವಿಯಾತ್ಮದ ಭರವಸೆಯ ಕವನವ ಕೇಳೊಮ್ಮೆ ಸಾಕು//
ಸಾವಿರಾರು ಪ್ರಶ್ನೆಗಳು ಬದುಕು ಭದ್ರತೆಯ ಚಿಂತೆ ನಿನ್ನಲ್ಲಿ/
ಬಿರುಗಾಳಿಗೆ ತತ್ತರಿಸುವ ಹಾಯಿದೋಣಿ ಶಬ್ಧವ ಕೇಳೊಮ್ಮೆ ಸಾಕು//
ಸುಖ ಸನ್ಮಾನ ಬಂದು ಹೋದಂತೆ ದುಃಖ ದುಮ್ಮಾನ ‘ಪೀರ’/
ಅತಂತ್ರ ಬದುಕಿನ ಯಾತ್ರಿಗಳ ಸ್ವಗತವ ಕೇಳೊಮ್ಮೆ ಸಾಕು//
–ಅಶ್ಫಾಕ್ ಪೀರಜಾದೆ