ಬೆನ್ನುಬಿದ್ದ ಕರಾಳರಾತ್ರಿಯ ದಿನಚರಿ
ಅಂದು ಮಧ್ಯಾಹ್ನದ ಕಡು ಬಿಸಿಲಿನಲ್ಲಿ
ಹಜ್ಜೆಗಳ ಪಕ್ಕ ಹೆಜ್ಜೆಗಳನ್ನು ಇರಿಸಿ
ಎಲ್ಲ ಪ್ರೇಮಿಗಳ ಉದಾಹರಣೆಯೊಂದಿಗೆ
ಊರ ಮಧ್ಯ ಹೋಗುತ್ತಿದ್ದರೆ;
ಯಾರೋ ಬೊಗಳಿದಂತೆ
ಅಂಜುವ ಮಾತಿಲ್ಲ, ಆದರೆ ಸ್ವಲ್ಪ ಕಸಿವಿಸಿ
ಲೋಕದಲ್ಲಿ ನಾಯಿಗಳು ಬೊಗಳುವದು ಸಹಜ
ಅಂಜುವದೇಕೆ…?
ಮುಂದೆ ಮುಂದೆ ಹೆಜ್ಜೆ ಹಾಕಿ,
ಹಿಂದೆ ಹಿಂದೆ ನೋಡಿದಷ್ಟು
ಗಾಢವಾದ ಭಯವು ಬೆನ್ನು ಏರಿ ಕುಳಿತಿದೆ
ಪಕ್ಕದಲ್ಲಿ ಪ್ರೇಮಜ್ವಾಲೆ ಉರಿಯುವಾಗ
ಯಾವ ಭಯವು ಎಷ್ಟು ಗಟ್ಟಿಗೊಳ್ಳುವದು
ಕಗ್ಗತ್ತಲು ಆವರಿಸಿದ ಈ ವರ್ತುಲದಲ್ಲಿ
ಎಲ್ಲವೂ ಅಡಕವಾಗಿವೆ
ಸಾಕ್ಷೀಕರಿಸಲು ನಮ್ಮಿಬ್ಬರ ಕಣ್ಗಳ
ಕ್ಷಿತಿಜಗಳು ಸೋಲುತ್ತಿವೆ
ದಪ್ಪನೆಯ ಕತ್ತಲೀಗ ಸ್ವಾಹಿಸಿ ರಾತ್ರಿ ಮಾತ್ರ
ನಿಟ್ಟುಸುರಿನಿಂದ ಬೀಗುತ್ತಿದೆ….!
ನನ್ನ ಭಯವನ್ನು ನಿನ್ನ ಕಂಗುಳಲಿ
ನಿನ್ನ ಭಯವನ್ನು ನನ್ನ ಹೆಗಲಿಗೆ ಹಾಕಿ,
ತಳ್ಳುತ್ತಾ ನೂಕುತ್ತಾ ತಬ್ಬಿಕೊಳ್ಳುತ್ತಾ ಸಾಗಬೇಕಿತ್ತು
ನಾಯಿ ಬೊಗಳಿ,ನಾಲ್ಕು ಹೆಜ್ಜೆ ಹಿಂದೆ ಬಂದೆವು
ನೆಲದ ಮೇಲೆ ಮೂಡಿದ ಸೂತಕವನ್ನು
ಇಬ್ಬರೂ ಒಪ್ಪಿಕೊಳ್ಳದಿದ್ದರೂ
ತಪ್ಪುಗಳು ಸಮಪಾಲ್ಗೊಳ್ಳುತ್ತವೆ
ಕಗ್ಗತ್ತಲು ತುಂಬಿದ ಹೊತ್ತನ್ನು
ನೀನೊಬ್ಬಳೇ ಭವ್ಯಪ್ರೇಮಬೆಳಕು ಪಸರಿಸಿ
ಚದುರಿಸಬಹುದಿತ್ತು;ತಲೆ ಕೊಡವಿದೆ
ಮತ್ತೆ ಬೆಳಕನರಸಿ ಬೆಳಕಿನಡೆಗೆ ಸಾಗುತ್ತಲೇ
ಬೊಗಳುವ ನಾಯಿ ಕಂಡು ಬೆಚ್ಚಗಾದೆ
ಅಲ್ಲಿಯೂ ಕತ್ತಲೆ ರಾಜ್ಯಕಟ್ಟಿ ನರಳುತ್ತಿತ್ತು.
–ಪ್ಯಾರಿಸುತ (ಆರ್.ಎನ್. ದರ್ಗಾದವರ)
ಭವ -ಬವಣೆ
ಹೇ ದೇವಾ… ಭವ -ಬವಣೆಯ ಹರಿಕಾರ
ಏಕಾಗಿ ಬಿಟ್ಟಿರುವೆ ತನುವ !
ನನ್ನದೆನ್ನುವುದು ಮರೀಚಿಕೆಗೆ ಬಾಯಾರಿರುವಾಗ
ಕೊಟ್ಟು -ಕೇಳುವ ಪರಿಯ ದಿರಿಸೇನು
ಶೈಶವ -ಹರೆಯಗಳ ಅರಿವಿಲ್ಲದ ಕನವರಿಕೆ
ಅರಿತು ಬೆರೆಯುವಾಗ ನೀ ಎಡೆಗೊಡುತ್ತಿಲ್ಲ
ತಪ್ಪು ಒಪ್ಪಿನ ಜರಿಯ ಕಪ್ಪು ಹಾಸಿನ ದಿರಿಸು ತೊಟ್ಟಿರುವ
ಅಳೆದು ತೂಗುವ ಲೆಕ್ಕಾಚಾರದ ತಾರೀಫು
ಒಬ್ಬರಲ್ಲಿ ಕಿತ್ತು ಇನ್ನೊಬ್ಬರಿಗೆ ಬಿತ್ತುವ
ಸಮ ಅಸಮಾನತೆಗಳ ಆತ್ಮವ ನಾ ಒಲ್ಲೆ
ಎಲ್ಲಿಯ ಗುಣ ವ್ಯತ್ಯಾಸಗಳ ದೋಷಕ್ಕೆ
ಅಸಹಾಯಕರ ಕಾಡಿ ದೂಡಿರುವೆ
ಮನಸ್ಸಲ್ಲಿ ಪರಿಪಕ್ವತೆಯ ನಂಟಿನ ಜಾಡಿದ್ದರೆ
ಜಗದಲಿ ಕಾಣುತ ಸಮಾನರಾಗಿ
ಹಂಚೆಲ್ಲ ಸುಖ -ದುಃಖದ ಆಗಮ -ನಿಗಮಗಳ ಫಲವ
ಕೃಶದ ಇಂದು ನಾಳೆಯ ದೇಹದ ಅಸ್ತಿತ್ವಕ್ಕೆ
ಪುಟಿಯುತ್ತಿದೆ ನಾನು -ನನ್ನದೆಂಬ ಅಮಲಿನ ಮಜಲುಗಳು
ಸಿರಿತನವ ಉಟ್ಟು ನೆಮ್ಮದಿಯ ಕಿತ್ತು
ಗಹಗಹಿಸಿ ನಗುತ್ತಿರುವ ನಿನ್ನ ಮರ್ಮಕ್ಕೆ
ಶರಣಯ್ಯ ನಾ ಶರಣು
ನನ್ನೊಳಗಿನ ನಾನು ಬೇರಲ್ಲೇ ಕೊಳೆಯಲಿ
ಕ್ರೂರತೆಯಲ್ಲಿನ ಮೃಗ ತುಳಿಯಲಿ
ಸಮಾನತೆಯ ದಿಕ್ಕು ರಾರಾಜಿಸಲಿ
ನ್ಯಾಯ ಸಂಕುಲ ಅಜರಾಮರವಾಗಲಿ
ಪ್ರೀತಿಯು ಪ್ರೀತಿಯ ಸೇರುತ ಬಾಳಲಿ
ಆಗ ನಾ ಮೆಚ್ಚಿ ನುಡಿಯುವೆ
ನಿನ್ನ ಆಂತರ್ಯ -ಬಾಹ್ಯ ತತ್ವ ಸತ್ವದ ಸಿದ್ದಿ ಶುದ್ಧಿಯ.
-ಕಾವ್ಯ ಎಸ್.
ಬದುಕೆಂದರೆ,
ಗಂಧದ ಕೊರಡು
ಕರ್ಪೂರದ ಒಡೆ,
ಎಣ್ಣೆ ಬತ್ತಿಗೆ ದಾಂಪತ್ಯ
ದೀಕ್ಷೆ ನೀಡೂ ಪುರೋಹಿತ!
ಬದುಕೆಂದರೆ,
ಚಳಿಗಾಲದ ಇಬ್ಬನಿ,
ಮಳೆಗಾಲದ ಕಾರ್ಮೋಡ,
ಬ್ಯಾಸಿಗಿ ರಣ ಬಿಸಿಲು!
ಬದುಕೆಂದರೆ,
ಕುಳಿರ್ಗಾಳಿ ಬೀಸೂ ಬ್ಯಾಸಿಗೀ ಗುಲ್ ಮೊಹರ್ ಗಿಡ,
ಬಿಸಿಲಾಗ ನಾಲಿಗೆ ತಂಪು ಮಾಡೂ ಬರ್ಪ,
ದಣಿದಾಗ ಮುದ ನೀಡೂ ಹದವಾದ ಹುಳಿ ಮಜ್ಜಿಗಿ!
ಬದುಕೆಂದರೆ,
ಮರೆತು ಹೋದ ಗೆಳತಿಯ ಸವಿ ನೆನಪಿನ ಸಂಕಟ!
ಜಿಗುಪ್ಸೆಯ ಉರಿಯಾಗ ಸುಟ್ಟು ಕರಕಲಾಗೂ ಬದನೆಕಾಯಿ,
ಖುಷಿಯಾದಾಗ ಹಿಗ್ಗಿ ಹೀಚಾಗೂ ಹೀರೆ!
ಬದುಕೆಂದರೆ,
ಸಿಟ್ಟಾದಾಗ ಸುಟ್ಟು ಕಮಟಾಗೂ ಹಾಲಿನ ಕೆನೆ,
ಉಮಾಯದಾಗ ಉಣ್ಣಗೊಡದ ಉತ್ಸಾಹದ ಬುಗ್ಗೆ,
ನೊಂದರೂ ನಗುವ ನಾಚಿಗ್ಗೇಡಿ!
ಬದುಕೆಂದರೆ
ಕೊಯ್ದಷ್ಟೂ ಚಿಗುರಿ ನಿಲ್ಲೂ ಕರಿಕೆ,
ಸೋತ ಕಾಲುಗಳು ತಂಗೂ ಬೇವಿನ ಮರದ ನೆರಳು,
ಚೈತ್ರಕ್ಕಷ್ಟೇ ಕೇಳಿ ಬರೂ ಕೋಗಿಲೆ ಸ್ವರ!
ಬದುಕೆಂದರೆ,
ಅಮಾಸಿ ಕಗ್ಗತ್ತಲೆಯ ನಕ್ಷತ್ರದ ಹೊಳಪು,
ಹುಣಿವಿ ಚಂದ್ರನ ಹಾಲ್ಬೆಳದಿಂಗಳು,
ಭಾವದಲೆಗಳ ಮೊರೆತದ ಮಹಾತೀರ!
ಬದುಕೆಂದರೆ,
ಬಿರಿದು ಪರಿಮಳ ಬೀರೂ ಮುಂಜಾವ ಮಲ್ಲಿಗಿ,
ಮದುಮಗಳ ವರ್ಣದ ಶ್ರಾವಣದ ಕ್ಯಾದಿಗಿ,
ದೀಪಾವಳಿಗಿ ನಸುನಗುವ ಸಾರವಾಳ ಸೇವಂತಿಗಿ!
ಬದುಕೆಂದರೆ,
ಮಾಂಸ ಮಜ್ಜೆ ತುಂಬಿದ ದೊಡ್ಡ ಚೀಲದ ಚಲನೆ,
ಸರಕು ತುಂಬಿದವನ ಮರೆತೇ ತಿರುಗೂ ಪರಿಭ್ರಮಣೆ,
ಕಾಲನ ಹೊಡೆತಕ್ಕೆ ಸಿಕ್ಕು ನುಗ್ಗಾಗೂ ಕೀಲಿ ಮಣೆ…
-ಸಾವಿತ್ರಿ ಹಟ್ಟಿ
ಗಜಲ್
ಸ್ನೇಹದ ಮೂಲಾರ್ಥವೇ ಬೇರೆಯಾಗುತಿದೆ ಗೆಳೆಯ/
ಪ್ರೇಮದ ಪರಿಭಾಷೆಯೇ ಬದಲಾಗುತಿದೆ ಗೆಳೆಯ//
ತೇಜಾಬ್ ಎರಚಿ ವಿಕೃತಿ ಮೆರೆಯುವ ಮಜ್ನೂಗಳು/
ಚಿತ್ರಹಿಂಸೆಯಿಂದ ಲೈಲಾಳನ್ನು ಕೊಲ್ಲಲಾಗುತಿದೆ ಗೆಳೆಯ//
ಮೋಸದ ಬಲೆ ಬೀಸುವ ಪ್ರೇಯಸಿಯರ ದರ್ಬಾರು /
ಪ್ರೇಮಿಗಳ ಜೇಬು ನಸೀಬು ಖಾಲಿಯಾಗುತಿದೆ ಗೆಳೆಯ//
ನೇಹದ ಹೆಸರಿನಲಿ ಸಂಚು ದಗಲಬಾಜಿತನ ಮಾಮೂಲು/
ಒಡಹುಟ್ಟಿದವರ ನಡುವೆ ನಂಜು ಬಿತ್ತಲಾಗುತಿದೆ ಗೆಳೆಯ//
ಹೆಣ್ಣೇ ಹೆಣ್ಣಿಗೆ ಗಂಡೇ ಗಂಡಿಗೆ ಮೋಹಿಸುವ ಕಾಲವಿದು/
ನರನಾರಿಯರ ಸಂಬಂಧಗಳು ಆಭಾಸವಾಗುತಿದೆ ಗೆಳೆಯ//
ಲಾಭವಿಲ್ಲದೆ ಇಲ್ಲಿ ಯಾರೂ ಯಾರನ್ನು ಮಾತಾಡಿಸರು/
ದುಡ್ಡಿಗಾಗಿ ಹೆತ್ತವರನ್ನೆ ಮಸಣಕ್ಕೆ ಕಳಿಸಲಾಗುತಿದೆ ಗೆಳೆಯ//
ವರದಕ್ಷಿಣೆ ಆಸೆಗೆ ಅಬಲೆಯರನ್ನ ಸುಡುತ್ತಿದ್ದಾರೆ ಪ್ರತಿಕ್ಷಣ/
ಕಣ್ಬಿಬಿಡದ ಕಂದಮ್ಮರನ್ನು ತಿಪ್ಪೆಗೆ ಎಸೆಯಲಾಗುತಿದೆ ಗೆಳೆಯ//
ಮೋಜಿಗೆ ಜೂಜಿಗೆ ಪತ್ನಿಯನ್ನೆ ಅಡವಿಟ್ಟರುವನು ಪತಿರಾಯ /
ಹಸುಳೆಯರ ಮೇಲೆ ಅತ್ಯಾಚಾರ ನಡೆಸಲಾಗುತಿದೆ ಗೆಳೆಯ//
ಜಗವೆನ್ನುವದು ಕ್ರೂರಿಗಳ ಅಡ್ಡೆಯಾಗುತಿದೆಯಲ್ಲ “ಪೀರ”/
ಸಾವಲ್ಲೂ ಲಾಭದ ಗುಣಾಕಾರ ಮಾಡಲಾಗುತಿದೆ ಗೆಳೆಯ //
-ಅಶ್ಫಾಕ್ ಪೀರಜಾದೆ.
ಹೂಂಕರಿಸುತಿದೆ ಶ್ರಾವಣ,
ಠೇಂಕರಿಸುವಂತೆ ರಾವಣ.
ಝೇಂಕರಿಸಿದೆ ಭ್ರಾಮರ,
ಮೋತ್ಕರಿಸುವಂತೆ ಮೈಮನ…
ಸಾಲು ಸಾಲು ಮೇಘರಾಶಿ
ನಡುವೆ ನಡುವೆ ನೀಲಿ ಹಾಸಿ,
ಸಾಗುತಿದೆ …ಮಾಗುತಿದೆ..
ತುಂಬುಕಳಚೋ ಹಣ್ಣ ರೀತಿ.
ವರ್ಷ ಋತುವು ಮೈಯನೆರೆದು
ಧರಣಿ ಕಣಕಣವು ಹಸಿರ ಹೊಸೆದು,
ಮೈಯುತುಂಬಿ, ಮನದದುಂಬಿ
ಒಸಗೆ ಹಾಡಿದೆ ಎದೆಯತುಂಬಿ.
ಕೊಳೆವ ಬೀಜವೂ ಮೊಳಕೆ ತಳೆದು,
ಎದ್ದು ನಗುತಿದೆ ಹಸಿರ ಮುಡಿದು.
ಅಣು ಅಣುವಲು ಜೀವ ಕಳೆಯ
ಹೊಮ್ಮಿಸುವನೇ ರಾಜ ಶ್ರಾವಣ.
ಜಂಜಡಗಳ ದೂರ ನೂಕಿ
ಬನ್ನಿ ಬೆರೆಯುವ ಉಯ್ಯಾಲೆ ಜೀಕಿ.
ಪ್ರಕೃತಿ ತೆರೆದಿ ನಗುತ ನಗುತಾ
ಮೇಘದಂತೆ ಮುಂದೆ ಸಾಗುತ…
ಸರೋಜ ಪ್ರಶಾಂತಸ್ವಾಮಿ
ಗಜ಼ಲ್
ಎದೆಯೊಳಗೆ ನುಗ್ಗದ ಕನಸುಗಳಿಗೆ ಹಂಬಲಿಸುವುದು ಬೇಡ
ಇಲ್ಲ ಸಲ್ಲದ ಆಸೆಗಳಿಗೆ ಬಲಿಯಾಗುವುದು ಬೇಡ
ಮನಸುಗಳು ಬೆಸೆಯದ ಹೊರತು ಪ್ರೀತಿಗೆ ಜಾಗವೆಲ್ಲಿ
ಪ್ರೀತಿಯನ್ನು ಅರ್ಥೈಸಿಕೊಳ್ಳದೆ ವೃಥಾ ಚಿಂತಿಸುವುದು ಬೇಡ
ಅವರ್ಯಾರೋ ಬರುವರು ನಮ್ಮೆದುರು ನಿಲ್ಲುವರು
ಉಪದೇಶ ಕೇಳಿ ಯೋಚನೆಯಲಿ ಮುಳುಗುವುದು ಬೇಡ
ಪ್ರೇಮ ಪುರಾಣಗಳು ಸಾಕಷ್ಟು ಸಿಗುತ್ತವೆ ಕೇಳಲು ಓದಲು
ಪ್ರೀತಿ ಪ್ರೇರೇಪಿಸುವ ಮನಸುಗಳೇ ಇಲ್ಲವೆನ್ನುವುದು ಬೇಡ
ನಾವಂದುಕೊಂಡ ಪ್ರೀತಿ ಪ್ರೇಮ ಒಂದು ತೆರನಾದ ಭ್ರಮೆ
ದೇಸು ಅರಗಿಸಿಕೊಂಡದ್ದು ಸುಳ್ಳೆಂದು ಭ್ರಮಿಸುವುದು ಬೇಡ
–ದೇಸು ಆಲೂರು..