ಹಸಿರುಬನದ ಹಬ್ಬ
ಧರೆಯ ದಣಿವಿಗೆ
ಮಳೆಯ ಹನಿಯ ಸಾಂತ್ವನ
ಹಕ್ಕಿಗಳ ಕೊಳಲಧ್ವನಿಗೆ
ಧರೆಯ ನರ್ತನ ..
ಅರಳಿತೊ ಮೋಡಗಳ
ಒಲವ ಸುರಿಯುವ ಮೈಮನ..
ವರ್ಷಧಾರೆಗೆ ಚಿಗುರಿನ ಕಂಪನ..!
ಮಣ್ಣ ಆಳದಿ ಬೆಚ್ಚಗೆ
ಮಲಗಿದ ಬೀಜಕೆ ಎಚ್ಚರವೀಗ
ಕಣಕಣ ಮಣ್ಣ ಸರಿಸಿ ಚಿಗುರಿತು
ನೋಡು ಅದೆಷ್ಟು ಚೆನ್ನ
ಮುತ್ತಿಕ್ಕಿತು ಮಳೆಹನಿಯೊಂದು
ಬೀಜದ ಗರ್ಭದಿಂದ
ಚಿಗುರೆಲೆಯ
ಆಗಮನ..!
ಜಲಲ ಜಲಧಾರೆಗಳ
ಕಾಲ್ಗೆಜ್ಜೆಗಳ ನಾದ ಜುಳು ಜುಳು
ಹರಿಯುವ ನದಿ ಅಲೆಗಳ
ಧ್ವನಿಯೆ ವೇದ..
ಧುಮ್ಮಿಕ್ಕುವ
ಮಳೆಯಲಿ ಸಾಗರದೊಡಲಿಗೆ
ನವವಧುವಿನಂತೆ
ನದಿಗಳ ಸಂಚಲನ..!
ಗಿಡಮರ ತೂಗಿ ತಂಗಾಳಿ ಸೂಸಿ
ಮಳೆಹನಿಯೊಂದಿಗೆ
ರಾಸಲೀಲೆಯ ನರ್ತನ..!
ಅರಳಿದ ಹೂಗಳ
ಎದೆಯ ಮೇಲೆ ಹನಿಗಳ ಚುಂಬನ
ಮೊಗ್ಗಿಗೂ ಯೌವನದ ಕಾಲವೀಗ
ಅದೆಷ್ಟು ಚಂದವೋ ಭಗವಂತನ
ಈ ಸೃಷ್ಠಿ ವೈಭವ..!
ಕೆಡದಂತೆ ಕಾಯ್ದಿಟ್ಟುಕೊ
ಮಾನವ
ಭವಿಷ್ಯವೂ ಕಾಣಬೇಕಿದೆ ಈ
ಜಗವ..!
–ಕಿರಣ ದೇಸಾಯಿ, ಬೆಳಗಾವಿ
ನಿದ್ದೆ ಬಾರದ ರಾತ್ರಿ
ಹಗಲೇನೋ ರೆಪ್ಪೆ
ಮಿಟುಕಿಸಿದಂತೆ
ಕಳೆದುಹೋಗುತ್ತದೆ
ನಿದ್ದೆ ಬರದ ರಾತ್ರಿಗಳು
ಯುಗದಂತೆ ಭಾಸವಾಗುತ್ತದೆ..
ನಿನ್ನದೇ ನೆನಪುಗಳಲಿ..!
ಬೆಳಕನ್ನು ನುಂಗಿ ರಾತ್ರಿ
ಪರದೆಯ ಮೇಲೆ
ಬಣ್ಣ ಬಣ್ಣದ ಕನಸುಗಳ
ಕಾಣುತಿದ್ದ ಮನದ
ರಂಗಮಂದಿರಕ್ಕೆ ವಿರಹದ
ಬೆಂಕಿಬಿದ್ದದ್ದು
ಅರಿವಾಗಲೇ ಇಲ್ಲ..!
ಉರಿದು ಬೂದಿಯಾದ
ಬಯಕೆಗಳು ನಿಟ್ಟುಸಿರಿನ
ರಭಸಕ್ಕೆ ತೇಲಾಡಿ ನನ್ನ ಮೂಗಿಗೆ
ಬಡಿದು ಉಸಿರುಗಟ್ಟಿಸಿತು..
ಕನಸಿನ ಅಸ್ಥಿಗಳು ಕಣ್ಣ ಗುಡ್ಡೆಯಲ್ಲಿ
ಅಸ್ತವಾಗಿದ್ದವು..!
ಕತ್ತಲೆಯ ಕಾವು ಹೆಚ್ಚಾದಂತೆ
ಬೆಳಗಿನ ಸೂರ್ಯನಿಗಾಗಿ
ಪರಿತಪಿಸಿದ ಒಂಟಿ ಹೃದಯಕೆ
ಸುಡು ಹಗಲಿನ ಸುಖವೇ
ಚಂದವೆನಿಸಿತ್ತು..!
-ನಂದಾ ದೀಪ, ಮಂಡ್ಯ
ಈ ಪ್ರಶ್ನೆಗೆ ಉತ್ತರ ಎಲ್ಲಿ?
ಎತ್ತಹೋದರೋ ಕಿತ್ತುಲಿವ ಸಿದ್ದಿ ಜೀವಿಗಳು
ಉದ್ದ ನಾಲಿಗೆ ಚಿಮ್ಮೊ ರಸಭರಿತ ಮಾತುಗಳು
ಕಿಚ್ಚುಹಚ್ಚುವ ದಂಗೆ ಧರ್ಮಪರ ಭಾವಾವೇಷ
ಕೊಲೆಗಡುಕ,ಲೂಟಿ-ಸ್ವರ ಪರಕಾಯ ಪ್ರವೇಶ?
ಗಾಂಧಿತತ್ವದ ಬೋಧೆ ತಡಬಡಿಸಿ ಹೋತ್ತೇ?
ಕಟ್ಟಿರುಳು ಸ್ಪೋಟದಲಿ ಕೈಸುಟ್ಟು ಬಿತ್ತೆ ?
ಕಪ್ಪು ಲೇಬಲ್ಲಿನ ಉಚಿತ ಬಾಟ್ಳಿಗಳ ಸಂತೆ
ಸರ್ಕಾರಿ ಗೌರವ ನಿಂತು ಮಾಯವಾಯ್ತೇ!?
ಮನುಜ ಕೂಜನವಿಲ್ಲ ಒಲಿಸಿ ಭೋಜನ ಕಾಣೆ ?
ನಂಬಿಕೆಯ ಮೇಲೆ ಹರಿವ ಗಂಟಲು ಕಾಣೆ ?
ಅಧಿಕಾರ ವಾಣಿಯಲಿ ಬೆವರಿಳಿಸೋ ಕೂಗು
ಅಡಗಿ ಹೋಯಿತೇ ಸಿಂಬಳ ಸುರಿವ ಮೂಗು?
ಎತ್ತ ಹೋಯಿತು ? ನುಡಿವ ಅಧಿಕಾರವಾಣಿ
ಕಾದಿರುವೆ ಬೆಂಕಿ ಉರಿ ತಣ್ಣಗಾಗಿಸೋ ಸರಣಿ !
ಮಾಧ್ಯಮದ ನಡುವಲ್ಲಿ ಗುಂಡಿಗೆಯ ಹೆಡೆಬಿಚ್ಚಿ
ಚುಚ್ಚಿ ಕೇಳೋ ಕರುಣೆ,ಕಾಳಜಿಗೆ ಬೂದಿ ಮುಚ್ಚಿ?
ತವಕಗಳ ಸಿಡಿ ಮಾತು ಹಿಂಡಿ ಹಿಡಿಆತು
ಉರಿ ಹಚ್ಚಿ ಕಾವಲ್ಲಿ ಕೈ ರಾಕೀಯದ ಸೂಡಿ
ದೊಂಬಿ ದೊಂದಿಗೆ ಮೈ ನಿಮಿರೇಳಿ ಹೋಯ್ತು
ಏರು ಧ್ವನಿ ತುಡಿತದ ಬುದ್ಧಿ ಬಿಲಹೊಕ್ಕಿ ಬಿಡ್ತು
ಮನೋಹರ ಜನ್ನು
ಹೊಸ ಜೀವ
ಹಸಿರೊಡೆಯಿತು ಉಸಿರಾಗಲು
ಉಸಿರಿನಲಿ,
ಚಿಗುರೊಡೆಯಲು ಹಾತೊರೆಯಿತು
ಮನಸಿನಲಿ,
ಹೊಸ ಬೇರಿನ ನವಿರಿಳಿತಕೆ
ಎಡೆ ಮಾಡಿದೆ ಒಡಲು,
ಉಲ್ಲಾಸದ ನವ ನೋವಲಿ
ನರ ಮಿಡಿತಕೆ ಎದೆಯಾಗಿದೆ ಹಸನು,
ಹೊಂಗನಸಿನ ಹೊಂಬಣ್ಣದ ಕನಸು
ಇಳಿದಿದೆ ಧಮನಿಗಳಲಿ,
ಕಾತುರ ಕಣ್ತುಂಬಿದೆ
ಹೊರ ಸೂಸಲು ನವಮಣಿಯ.
ಉಸಿರಾಟದ ಬಿಸಿ ಹಬೆಯನು
ಹುದುಗಿಸಿ ತನ್ನೊಳಗೆ,
ಬೆಸೆಯುತ ಜನುಮದ ಅನುಬಂಧ
ಕವುಚಿ ಬೆಚ್ಚನೆ ಬಸಿರೊಳಗೆ ,
ರಸಾಸ್ವಾದನೆಯ ಮಾಡುವಾ ರಸಮಣಿ
ನವ ಮಾಸಗಳಲ್ಲಿ ಮನ ಬಂದಂತಿಜುತಾ,
ದಶಾವತಾರಗಳ ಆವಿರ್ಭವಿಸಿ ತೇಲುತ್ತಾ
ಮುಳುಗುತ್ತಾ ಮೌನದಿ ಕಿಲ ಕಿಲ ನಗುತಾ,
ಹೊತ್ತವಳ ಮುಸು ಮುಸು
ನಗಿಸಿ ಸಂತಸ ಗೊಳಿಸಿ ,
ನವ ಮಾಸಗಳಾ ಕಳೆದು
ತೃಪ್ತಿಯ ನೋವಿನ ನಗೆಯನು ತರಿಸಿ,
ಕ್ಷಣದಲಿ ಮರೆಸಿ ನೋವೆಲ್ಲವನು
ಕಾಣುತ ಕಂದನ ಮೊಗವನ್ನು.
ಹೊಸ ಜೀವದ
ಹೊಸ ಪಯಣಕೆ ತೊಟ್ಟಿಲ ಕಟ್ಟಿ
ಮಣೆಯನು ಹಾಕಿ ಕಾಯುವರೆಲ್ಲರೂ ತವಕದಲಿ.
-ಶ್ರೀ ಕೋಯ…
ಗಜಲ್..
ಯಾರೂ ಇಲ್ಲಿ ಕಾಪಾಡುವುದಿಲ್ಲ ಮನುಷ್ಯತ್ವ ಮರೆತರೆ
ಹೆಗಲಿಗೆ ಹೆಗಲಾಗಿ ಬರುವುದಿಲ್ಲ ಮನುಷ್ಯತ್ವ ಮರೆತರೆ
ಬದುಕಿದ್ದಾಗಲೇ ನಾಲ್ಕು ಜನರಿಗೆ ಆಸರೆಯಾಗಬೇಕು
ಸತ್ತರೆ ಚಟ್ಟ ಹೊರಲು ಇರುವುದಿಲ್ಲ ಮನುಷ್ಯತ್ವ ಮರೆತರೆ
ಜನರಿಗೆ ಖುಷಿ ಹಂಚು,ಜ್ಞಾನ ಹರಡು,ಕಷ್ಟದಲಿ ಭಾಗಿಯಾಗು
ನಿನ್ನೊಳಗಿನ ದೇವರು ಕ್ಷಮಿಸುವುದಿಲ್ಲ ಮನುಷ್ಯತ್ವ ಮರೆತರೆ
ನಾಜುಕು ಮಾತುಗಳಾಡಿದರೆ ಎಲ್ಲರೂ ಮರುಳಾಗಬಹುದು
ನಿನ್ನ ನೆರಳೇ ನಿನ್ನ ನಂಬುವುದಿಲ್ಲ ಮನುಷ್ಯತ್ವ ಮರೆತರೆ
ಗೊತ್ತಾಗದಂತೆ ತಪ್ಪು ಮಾಡಬಹುದೆನ್ನುವ ಭ್ರಮೆ ಬೇಡ
ನಮ್ಮ ಬೆನ್ನು ನಮಗೆ ಕಾಣುವುದಿಲ್ಲ ಮನುಷ್ಯತ್ವ ಮರೆತರೆ
ಜಾತಿ ಧರ್ಮ ಅಂತಸ್ತು ಎಂದು ಹೆಚ್ಚು ಬೀಗಬೇಡ”ಕಾಂತ”
ಇತಿಹಾಸ ನೆನಪಿಸಿಕೊಳ್ಳುವುದಿಲ್ಲ ಮನುಷ್ಯತ್ವ ಮರೆತರೆ.
–ಲಕ್ಷ್ಮಿಕಾಂತಮಿರಜಕರ ಶಿಗ್ಗಾಂವ
“ಮರೆಯಾಗದ ಭೂತ”
೧
” ನಿನ್ನ ಪ್ರವರ ಪದರದಲಿ ಚೂರೂ ಇಲ್ಲದೇ ಮರೆಯಾಗಿ ನಾನು,
ನಾ ಎಂದೂ ಸೊರಗಿದೆ ನೀ ಸ್ಪುಟವಿಟ್ಟ ಬಿಟ್ಟ ನಿನ್ನೆರಳಲೇ… ಭಾವದ್ವೀಪದ
ಬೆನ್ನುಬಿದ್ದು ಕಾಣಲೊರಟರೂ ನಿನ್ನಬಿಂದು ಕಂಡಿಲ್ಲವೇಕೆ?
ಕಣ್ಮುಚ್ಚಿದರೆ ಸಾಕು; ಅನುರಣದ ತೆಕ್ಕೆಯ ಲಹರಿ ಉಕ್ಕೀತು ಹೊನ್ನಾಗಿ;
ನಿನ್ನ ಮರುಳ ದಿನದ ಸಿಹಿತರಲೆ ನಾದ ಕಾಳಕೊಳಲಲೇ..
೨
ಬಿಡಿರೂಪದಲೇ ಸಹಬಂಧ ನುಡಿಸುತಾ
ತಾನು ಪ್ರತಿರೂಪದ ಮೊಹರೊತ್ತಿ, ಭಾವಸ್ಪುರಣೆ ಸ್ಪೋಟದಲಿ
ಮುಗಿಲೇರಿ,
ನೋಟ ತಾಟಿದ್ದ
ಸ್ಮೃತಿ ಘನತೆ ರಾಗವು
ಸೆಟೆದು ಹಾಡಿದೆ ತಾರಕ ಸ್ಥಾಯಿಯಲೇ….
ಅದನು ಗತವೆಂದು ತೆಗೆದುಬಿಟ್ಟು ಮುಂದಿನದ ಹಾಡಿದರೆ ಬಿಡದು ನನ್ನೀ ಆತ್ಮ;
ಸುರಗಿಗಾಳಿಯಾಗಿ ಈ ಎದೆಗೊತ್ತಿರುವುದು ನಿಜದಲೆ.
ಈ ಖಾಲಿ ಹೃತ್ಕರ್ಣದಲಿ ಮುಗಿಯದಾವರ್ತವಾಗಿ ಆ
ಒಲುಮೆಚೂತದ ನೀಳಲೆಗಳು ಕೋಲಾಗಿ ನಿಂತಿವೆ ಹಸ್ತಭಂಗಿಯಲೇ..”
–ಜಾಜೂರು ಸತೀಶ (ಸಜಲ)
ಕವಿತೆಯ ಬಸಿರು
ಕವಿತೆಗಳು ಎಂದೆಂದಿಗೂ ಸಾಯುವುದಿಲ್ಲ
ಬದಲಾಗಿ ಬಸಿರಾಗುತ್ತವೆ,
ಹುಟ್ಟಿಕೊಳ್ಳುತ್ತವೆ ಈ ಕವಿತೆಗಳೇ ಹೀಗೆ
ಸತ್ತಂತೆ ನಟಿಸಿ ಮತ್ತೊಂದು
ಕವಿತೆಗೆ ಬಸಿರಾಗಿ
ಅದನ್ನು ಹೊತ್ತು ತಿರುಗಿ
ಯಾರದೋ ತುಜೂರಿ,ಕಪಾಟು
ಬ್ಯಾಗಿನಿಂದ ಹೊರ ಎಳೆದ
ಕೈಗಳ ಕಣ್ಣಳತೆಯ ದೂರದಲ್ಲಿ
ಮತ್ತೊಂದು ಅಥವಾ ಮತ್ತೆರಡು
ಕವಿತೆಗಳಿಗೆ ಉಸಿರು ಬಸಿದುಕೊಟ್ಟು
ಜನ್ಮಿಸಿದ ಕ್ಷಣದ ನಂತರ
ಮತ್ತದೇ ಪುಸ್ತಕ ಹರವಿ ಕುಳಿತ ಟೇಬಲ್ನಲ್ಲೋ,
ದೂಳು ಹಿಡಿದ ಕೈಚೀಲದಲ್ಲೋ
ಅವಿತು ಕುಳಿತುಬಿಡುತ್ತವೆ
ಯಾವ ಕವಿಯ ಕೈ ಬರಹಗಳಿಗೆ
ಯಾವ ಕವಿತೆಯೂ ಬಸಿರಾಗುವದಿಲ್ಲ
ಪೆನ್ನಿನ ಮೋನಿಚಿನಲ್ಲಿ
ವೀರ್ಯದಂತೆ ಹರಿದು,ಪ್ರಸವ ಹಿಂಸೆ
ಅನುಭವಿಸುವ ಲೋಕರೂಢಿಯು
ಇಲ್ಲದೆ,
ಕವಿತೆಗಳು ಬಸಿರನ್ನು ಖಾಲಿ ಮಾಡಿ
ಮತ್ತೊಂದು ಬಸಿರಿಗೆ
ಹಾದರ ನಡೆಸಲು ಕತ್ತಲು ಕೋಣೆಯ
ಅದೇ ಹಳೆ ಸಂಧಿಯಲ್ಲಿ ಸೇರಿಕೊಳ್ಳುತ್ತವೆ
ಅದು ಗುಜರಿ ಸೇರದೇ ಉಳಿದ ಪುಸ್ತಕಗಳ
ಸಂಧಿಯಾದರೂ ಆಗಲಿ
ನಿನ್ನೆ ತಾನೇ ಮಗ್ಗಲು ಬದಲಿಸಿದ ಹೊಸ ಪುಸ್ತಕದ
ಸನಿಹವೆ ಆಗಲಿ
ಬಸಿರು ತುಂಬಲು ಉಳಿದುಬಿಡುತ್ತವೆ
ಅಸಲಿಗೆ ಬಸಿರಾಗಲು ಹಾತೋರಿಯುತ್ತವೆ
ಅವು ಸಾಯುವುದಿಲ್ಲ,
ಕವಿಯನ್ನ ಮಾತ್ರ ಬದುಕಲು ಬಿಡದೆ,
ಹಗಲು ರಾತ್ರಿಯೆನ್ನದೆ
ಕರುಣೆಯ ಕಪಟದಿಂದಾಚೆ ಸಾಯಿಸುತ್ತವೆ
ವಿಸ್ಕಿ ಬಾಟಲ್ಲಿನ ವಾಸನೆ ಇಲ್ಲವೇ,
ಸಿಗರೇಟಿನ ಸುಟ್ಟ ಬೂದಿಯ ದೂಳು ಹಾರಿ
ಕವಿಯ ಮನೆಯಂಗಳದ ಮಣ್ಣಿಗೋ
ಓದು ವ್ಯಸನಿಯ ಕಣ್ಣಿಗೋ ಬಿದ್ದು
ಮತ್ತೊಂದು ಅಥವಾ ಮತ್ತೆರಡು
ಕವಿತೆಗಳು ನವಜಾತವಾಗುತ್ತವೆ.
–ಪ್ಯಾರಿಸುತ
ದೇವರೇ…
ಕಣ್ಣು ತೆರೆದು ನೋಡು …
ಕಣ್ಣಿದ್ದರೂ ಇಲ್ಲದವರಂತೆ ನಟಿಸುತ್ತಿರುವ
ಜಾಣ ಕುರುಡರ ಕಣ್ಣುಗಳನ್ನು ಕೀಳಬೇಕಿದೆ
ಓ ದೇವರೇ… ಮಾತನಾಡೂ…
ಒಂದೇ ಒಂದು ಸತ್ಯದ ನುಡಿಯಾಡು
ಅನ್ನದ ರುಚಿಯುಂಡ ನಾಲಗೆಯು
ಸಟೆಯಾಡುವುದನು ಸಹಿಸಲಾರೆ
ಸುಡಬೇಕೋ ಕಿತ್ತು ಬಿಸುಡಬೇಕೋ
ಅಪ್ಪಣೆ ಕೊಡೂ…
ಓಹೋ …ದೇವರೇ …
ಗರ್ಭಗುಡಿಯಿಂದಾಚೆಗೊಮ್ಮೆಯಾದರೂ
ಬಂದು ನೋಡು
ನೀನಿಟ್ಟ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ
ನಿನ್ನಾಟವನ್ಬೆಲ್ಲಾ ಕೆಡಿಸಿ ರೊಚ್ಚುಗೊಳಿಸಿಹರು
ಈ ಜಗದಲ್ಲಿ ಒಮ್ಮೆಯಾದರೂ
ನಿರಾತಂಕವಾಗಿ ಸುತ್ತಾಡಿ
ಸುಖವಾಗಿ ಹೋಗಬಹುದೇನೋ
ಪರೀಕ್ಷಿಸು ಬಾ…
ಹುಚ್ಚು ಕುದುರೆಗಳಂತೆ ಓಡುತ್ತಿರುವವರ
ಕೈ ಕಾಲುಗಳನು ತುಂಡರಿಸು
ಪ್ರಸಾದ ಉಣಬಡಿಸಲು
ಉರುವಲಾಗಿಸಬಹುದೇನೋ
ದೃಷ್ಟಿ ಹರಿಸು ಬಾ…
ಹೇಳಲೇನಿದೆ ದೇವರೇ…
ಉಳ್ಳವರು ಗರ್ಭಗುಡಿಗೆ ಝರಿಯುಟ್ಟು
ತಲೆ ಎತ್ತಿ ಮುದದಲಿ ಮದದಿಂದ ಬರುವರು
ಒಮ್ಮೆಯಾದರೂ ಕೂತಲ್ಲಿಯೇ
ಕಣ್ತೆರೆದು ನೋಡು ಸರ್ವಾಂತರ್ಯಾಮಿಯಲ್ಲವೇ
ನೋಡು ಅಲ್ಲಿಂದಲೇ…ದೇವರೇ…
ಮಾಸಿದ ಹೆರಳು
ಕೊಳೆಯುಂಡಿಹ ಕರಿಬೆರಳುಗಳು
ಜೀವ ಹಿಂಡಿದ… ಬದುಕು ಹೀರಿದ…
ನಿಸ್ತೇಜ ಕಣ್ಣುಗಳು
ಹಿಡಿ ಅನ್ನಕ್ಕಾಗಿ
ಮದವೇರಿದ ಮನುಜರ
ಎಕ್ಕಡಗಳನ್ನು
ಮಡಿಲಲ್ಲಿಟ್ಟುಕೊಂಡು
ಮರುಗುತಿಹರು…
ನನ್ನೊಡನೆ ಬಾ ದೇವರೇ…
ನಿನಗೆ ದಾರಿ ತೋರಿಸುವೆ
ಬಡತನದ ಊರಿಗೆ
ಬಸವಳಿದ ಕೇರಿಗೆ
ಕನಸುಗಳರಳದ ಬಯಲ ತೋಟಕ್ಕೆ
ಕಣ್ಣೀರ ಕಡಲಿನ ಕೊರೆತಕ್ಕೆ
ಗುಳಿಬಿದ್ದ ಕೆನ್ನೆಗಳ ಮತ್ತದರ ಮುಗ್ಧತೆ
ಯನ್ನೊಮ್ಮೆ ನೀನು ನೋಡಲೇಬೇಕು
ಬಾ ನನ್ನ ದೇವರೇ…
–ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ