ಅಂತ್ಯವೆಲ್ಲಿ?
ತೋಳ ತೆಕ್ಕೆಯಲಿಲ್ಲದ
ಕಾಣದ ನೋಟ
ಆದರೂ ಹಠ
ಬಿಡದ ಭಯಂಕರ
ಸಾವು-ನೋವು ಮಂದಗತಿಯಲಿ
ಹೊಗೆ ಉರಿಯುತ್ತಿದೆ
ಬೆಂಕಿ ಅಡಗಿದೆ
ಗಾಳಿ ಸೋಕಿ ಸೋಂಕು ಎನಿಸಿಕೊಂಡಿದೆ
ಮನೆಯಲ್ಲಿ ಬೀಗ ಜಡಿದಿದ್ದಾರೆ
ನೆರೆಯವರು ಗುಸುಗುಸು
ಸನಿಹವಂತೂ ಸುಳಿಯೋದೆ ಇಲ್ಲ
ಯಾರೂ …ಬೆಳಕು, ಗಾಳಿ, ಕತ್ತಲು
ಬಂಧುಗಳಿಲ್ಲ, ಹೆಂಗಳೆಯರು
ಎಲ್ಲೋ ತಾಯ್ಮನೆ ನೆನೆಸುತ್ತಿದ್ದಾರೆ
ಆದರೆ ಬರಲೊಲ್ಲದ ಸಮಯ
ಬೇಲಿ ಹಾಕಿದ್ದಾರೆ ಸರ್ಕಾರದವರು
ನಮ್ಮ ಒಳಿತಿಗೆ ಅಲ್ಲವೇ?
ಮನೆಯ ಬಾಗಿಲ ದಾರಂದರ ಪಟ್ಟಿಯೊಳಗೆ
ಹಸಿ ಬಟ್ಟೆಯ ಸುಳಿವಿಲ್ಲ
ರಂಗೋಲಿ, ಒಲೆಗೆ ಬೆಂಕಿ
ಬೂದಿ ತೆಗೆದೊವ್ರೆ ಗತಿ ಇಲ್ಲ
ದೇವರ ಕೋಣೆಯ ಹಣತೆಯ ಕದರು
ಬತ್ತಿ ಅಪ್ಪಿವೆ ಗೊದ್ದ, ಇರಿವೆ ಇತ್ಯಾದಿ
ಎಲ್ಲರೂ ಹೀಗೆ ಮರುಗಿ
ದೂಡುತ್ತಿದ್ದಾರೆ ತನ್ನದಲ್ಲದ ಬದುಕನು..
ಮಸಣ ಕರೆಯುತಿಲ್ಲ
ಬುವಿ ಬಿಡುತ್ತಿಲ್ಲ
ಭಾರ ಯಾರಿಗೆ ಮತ್ತೆ ನಾನು?
ಹಸಿರು-ಉಸಿರುಗಳಿಗೆ ದಾಡಿಯೇ ಇಲ್ಲ
ಇರಬಾರದ ಕಾಟಾಚಾರಕ್ಕೆ
ಅಯ್ಯೋ ಪ್ರಕೃತಿ ನೀ ಎಷ್ಟು ಸ್ವಾರ್ಥಿ ಅನ್ನಬಹುದೇನೋ
ಎರಡೇ ಸೊಲ್ಲಲಿ ನೀ ಮೊದಲು ಸಲ್ಲಿದ್ದರೆ ಮಾತ್ರ
ಕಾಲೈ ತಸ್ಮೈ ನಮಃ
ಸತ್ಯ …ಸತ್ಯ.. ಸತ್ಯ
ನಿತ್ಯ ..ನಿತ್ಯ. ನಿತ್ಯ..
–ಅರುಣ್ ಕೊಪ್ಪ
ಒಂದು ಇಳಿಸಂಜೆ ಕಡಲ ಜೊತೆ ಸಂಭಾಷಣೆ….
ಸಿಟ್ಟು ಸೆಡವು ಪಕ್ಕಕ್ಕಿಟ್ಟು ಅಕ್ಕ ಪಕ್ಕದಲಿ ನಿನ್ನನಿಟ್ಟಾಗ
ಕಡಲತಡಿಯಲ್ಲಿ ಒಡನೆಯೇ ಮೂಡಿತು ಆ ನಿನ್ನ ಚೆಲುವ ಪ್ರತಿಮೆ
ಥೇಟ್ ನಿನ್ನ ಹಾಗೆ ಹಬ್ಬಿದ ಪ್ರೀತಿಯಲಿ ತಬ್ಬಿದೆ ನಿನ್ನ ನಾ
ಜಪಿಸಿದ ಕ್ಷಣದಿಂದಲೇ ಒಲಿದು ಬಂದೆ ನನ್ನ ಜೊತೆಗೆ..!
ಬದುಕಿನ ಪಥದಲಿ ಹೆಜ್ಜೆ ಗುರುತು ಮೂಡಿಸುತ್ತಾ
ಹೃದಯದ ರಥ ಬೀದಿಯಲ್ಲಿ ಹೆಜ್ಜೆ ಹಾಕಿದೆ ನೀನು
ಒಲವು ಆಸೆಗೆ ಅನುಸರಿಸಿದ ನಿನ್ನ ಮನಕೆ ಎಂದೋ ಸೋತೆ
ಅವತರಿಸಿದೆ ನನ್ನ ಮನದ ಸ್ಮೃತಿ ಚಿತ್ರಕೆಯಲ್ಲಿ…!
ಅಂದು ನೀನು ಇಲ್ಲವಾದೆ ನಾನು ಇಲ್ಲವಾದೆ
ಮತ್ತೆ ಈಗತಾನೇ
ಕಲಾವಿದನ ಕಲ್ಪನೆಯಲ್ಲಿ ಮೂಡಿ ನಿಂತೆವು ಕಡಲ ಮರಳ ರಾಶಿಯಲ್ಲಿ
ನೋಡುವವರ ಕಣ್ಣನಲ್ಲಿ ನೂರು ಭಾವ ನೂರು ಹಾಡು
ಹಳೆ ಹಾಡಿಗೆ ಹೊಸ ರಾಗ ಕಾಲಘಟ್ಟದ ಇತಿಹಾಸದಲ್ಲಿ…!
ನಿತ್ಯ ಮುಂಜಾನೆಯಿಂದ ಸಂಜೆಯವರಿಗೆ ಬಿಸಿಲಕಾದರು
ಪಕ್ಕದಲ್ಲಿ ನೀರ ರಾಶಿ ಇದ್ದರೂ ಹನಿ ನೀರು ದಾಹ ತಣಿಸದು
ಆ ಜನ್ಮದ ಪ್ರೇಮ ದಾಹವನ್ನು ಈ ಕೊಡಲು ತಣಿಸಲಿಲ್ಲ
ಅರ್ಧ ಬಿಡಿಸಿದ ಚಿತ್ರಕ್ಕೆ ಜೀವ ಬಂದು ಮುದ್ದಿಸಿದಂತೆ
ಪ್ರತಿ ರಾತ್ರಿ ಕನಸಿನಲಿ ನೆಡದು ಬರುವೆ ಬಹುದೂರದವರೆಗೆ…!
ಮರಳ ತಡಿಯಲ್ಲಿ ನಾವು ಅಮರ ಪ್ರೇಮಿಗಳಂತೆ ಶಿಲ್ಪ ಕಣ್ಣಿನಲ್ಲಿ
ಕಷ್ಟಪಟ್ಟು ಮೂಡಿಸಿದ ಕಲಾವಿದನಿಗೆ ನಮ್ಮ ವ್ಯಥೆ ಕತೆಯು ತಿಳಿಯದು
ಅವನ ಕಲೆಯಲ್ಲಿ ನಮ್ಮ ಚರಿತೆ ಅದು ಅವನ ಹೊಟ್ಟೆಪಾಡು
ಮರುಗಿದ ಕರಳು ಕಾಸು ನೀಡಿದ್ದವು
ಮುಗ್ಧ ಮನಸಿನ ಕಣ್ಣುಗಳು ತೇವವಾದವು
ಸಂಜೆ ರವಿಯ ವಿದಾಯದೂಂದಿಗೆ ಒಲವು ಕಂತೆ ಬಿಚ್ಚಿ
ಕಡಲ ಜೊತೆ ಮಾತಿಗಿಳಿಯುತ್ತೇನೆ ನಿನ್ನ ನೆನೆದು..!
–ವೃಶ್ಚಿಕ ಮುನಿ ..
ಸೂರ್ಯ – ಚಂದ್ರ
ನಾನು ಚಿಕ್ಕವನಿದ್ದಾಗ ಬರುತಿದ್ದ ಚಂದ್ರ ನನ್ನೊಡನಾಡಲು
ತಾರೆಗಳು ತುಂಬುತ್ತಿದ್ದವು ಆಕಾಶದೊಡಲು
ಆಕಾಶ ಇರುತಿತ್ತು ಅಮ್ಮನ ಸೀರೆಯೊಲು
ಕಷ್ಟವಿತ್ತು ಮಡಿಸಲು
ತಾರೆಗಳು ಅಪ್ಪನ ದುಡ್ಡಿನೊಲು
ಕಷ್ಟವಿತ್ತು ಎಣಿಸಲು ಸಾಲುತ್ತಿರಲಿಲ್ಲ ಬೆರಳುಗಳು
ಇಂದೇಕೋ ತಾರೆಗಳು ಬರುತ್ತಿಲ್ಲ ಅಂಗಾಲದೊಲಾಡಲು
ಮನೆಯೊಳಗೇ ಕುಳಿತವೇನೋ ಮುಚ್ಚಿಕೊಂಡು ಬಾಗಿಲು
ಖಾಲಿ ಖಾಲಿ ಕಾಣಿಸಿದೆ ಇರುಳಿನಲ್ಲಿ ಮುಗಿಲು
ಮುನಿಸೇಕೆ ಅವುಗಳಿಗೆ ಚಂದ್ರನಿಗೆ ಜೊತೆಯಾಗಲು
ಸೂರ್ಯನೆಂದು ಒಂಟಿ ಬರುವ ಇಳೆಗಾಗಲು ಹಗಲು
ಮೋಡದಲ್ಲಿ ಮರೆಯಾಗುವ ಜಗಕೆ ಮಳೆಯ ತರಲು
ಅನ್ನದಾತ ಜತೆ ನೀಡುವ ಹೂಡಿ ತನ್ನ ನೇಗಿಲು
ಅವನ ಕೃಷಿಯೇ ಕಾರಣವೂ ಜನಜೀವನ ಸಾಗಲು
ಡಾ. ನ. ಸೀತಾರಾಮ್
ಶೋಷಿತರ ಕಲ್ಪತರು
ಭೀಮ ರಾಮರ ಸುಪುತ್ರ
ಎಲ್ಲರ ಮೆಚ್ಚುಗೆಗೆ ಪಾತ್ರ
ಮಾನವೀಯ ಅಂತಃಕರಣದ ಗಣಿ
ಅದ್ಭುತ ಜ್ಞಾನದ ಖಣಿ
ನೋವುಂಡು ನಲಿವು ಹಂಚಿದ ವೀರ
ಕೋಟ್ಯಾಂತರ ಜನರ ಹೃದಯ ಗೆದ್ದ ಧೀರ
ನೆಲೆ ಬೆಲೆ ಇಲ್ಲದವರ ಬಂದು
ಭವ್ಯ ದಿವ್ಯ ಭಾರತದ ಸಿಂಧು
ಅನ್ಯಾಯ ಅನಾಚಾರ ವಿರುದ್ಧ ಚಳುವಳಿ
ಹಲವು ವಿಚಾರ ಚಿಂತನೆಗಳು ಬಳುವಳಿ
ಸಮಾನತೆ-ಸಂಪ್ರೀತಿಯ ಸಮನ್ವಯಕಾರ
ರಾಜಕೀಯ ಶಕ್ತಿಯ ಸೂತ್ರದಾರ
ಸಾಮಾಜಿಕ ಸಾಮರಸ್ಯದ ಹರಿಕಾರ
ದಿಟ್ಟ ಸ್ವಾತಂತ್ರ್ಯ ಹೋರಾಟಗಾರ
ಅಸ್ಪೃಶ್ಯತೆಯ ವಿಮೋಚನ ಕಾರ
ವಿಶ್ವಕಂಡ ಮಹಾ ನೇತಾರ
ಬಾಬಾಸಾಹೇಬ ಭೀಮರಾಯರು
ಸಂವಿಧಾನ ರಚಿಸಿದ ಶಿಲ್ಪಕಾರರು
ಬಡವರ ಶೋಷಿತರ ಕಲ್ಪತರು
ಅವರೇ ನಮ್ಮೆಲ್ಲರ ಅಂಬೇಡ್ಕರರು
–ಡಾ. ಸಂಜೀವಕುಮಾರ ಅತಿವಾಳೆ
ವಿವಾಹ
ವಿವಾಹ ಪೂರ್ವ
ಹುಟ್ಟುತಿತ್ತು
ನನ್ನೊಳು ಪ್ರೇಮ ಕವಿತೆ
ದೇಹ ಎಲ್ಲೆಲ್ಲೋ ಅಲೆದು ನಲಿದು
ಆಗಿದ್ದೆ ಬೆಳಗೊ ಹಣತೆ
ವಿವಾಹ
ಆದ ಮೇಲೆ
ಹೆಂಡತಿಗೆ ಹೆದರಿ ಬೆದರಿ
ತರಗೆಲೆಯಂತೆ ಉದುರಿ ಚೀರಿ
ಮೈಯ್ ಮೈಯೊಳು ಬೆವತೆ
ಮನೆಯೊಳಗೆ ಅವಿತೆ
ಬಾಳಿಗೆ ಕತ್ತಲೆ ಕವಿಯಿತೆ?
ಅಬಕಂ
ಬಣ್ಣದ ಮಾತು
ಎದೆಗಪ್ಪಿ ಕಾಪಾಡುವುದು
ಬೂಟಾಟಿಕೆಯ ನಡತೆಗಳ
ಮಾಯವಿ ಜಗತ್ತು ದೂರುವುದು
ಕಟು ಸತ್ಯದ ಮಾತುಗಳ
ಬಣ್ಣ ಬಣ್ಣದ ಮಾತಾಡಿ
ಓಲೈಸಿ ಮೋಸಮಾಡುವರು
ಸತ್ಯವ ನುಡಿದು ತಿದ್ದುವರ
ನಿಷ್ಟುರಗೊಳಿಸುವರು
ಬಣ್ಣದ ಮಾಯೆಯೇ ಲೀಲೆಯೊ
ನಿಷ್ಠಾವಂತರು ದುರುಳರಾಗುವರು
ಗೋಮುಖ ವ್ಯಾಘ್ರಗಳು
ಮೃದು ಮನಸಿಗರಾಗುವರು
ಭಾವದೆಲೆಯ ಹೂರಣವ
ತಿರಸ್ಕರಿಸಿ ಸಾಗುವರು
ನಿಂದಿಸಿ ಅಲ್ಲಗಳೆಯುವ
ಜನರನ್ನ ಮೆರೆಸುವರು
ನೈಜವರ್ಣವೂ ಕಳೆ ರಹಿತ
ಬಣ್ಣವೂ ರಂಜಿನ ಸೆಳೆತ
ಈಗಾಲಾದ್ರೂ ತಿದ್ದಿಕೊಳ್ಳಿ
ನಿಮ್ಮ ಅಂಕುಡೊಂಕುಗಳ.
-ಅಮೃತ ಎಂ ಡಿ
ಮುಟ್ಟು
ಮುಟ್ಟಿನ ಕುಂಡದಲ್ಲಿ
ಹುಟ್ಟಿದ ಜೀವಗಳಲ್ಲಿ
ಒಂದು ಮಡಿ
ಇನ್ನೊಂದು ಮೈಲಿಗೆ
ಕಿಬ್ಬೊಟ್ಟೆಯ ಸಡಗರಕೆ
ಸೂತಕದ ಸೆರಗೆಳೆದು
ಗಡಿಪಾರಿನ ಭಾಗ್ಯವ
ಕರುಣಿಸುವುದೇಕೆ
ಬೇರೂರಿದ ಟೊಳ್ಳು ಮರಕ್ಕೆ
ಹಗ್ಗ ಹೊಸೆದು
ಕೊರಳೊಡ್ಡುವ ಜಾಯಮಾನಕೆ
ತಲೆ ಬಾಗುವ ಗೊಡ್ಡುತನವೇಕೆ
ಒಳಗಿರುವ ಆತ್ಮ
ಗಂಡೂ ಅಲ್ಲ ಹೆಣ್ಣೂ ಅಲ್ಲ
ಎಂದಾದ ಮೇಲೂ
ಅಳಿವ ಪಳಿಯುಳಿಕೆಗಳಿಗೆ
ಈ ಧಿಮಾಕು ಬೇಕೆ
ಮುಟ್ಟಿಲ್ಲದೆ ಜಗವಿಲ್ಲ
ಮುಟ್ಟಿಲ್ಲದೆ ಬದುಕು ಇಲ್ಲ
ಮುಟ್ಟಿಲ್ಲದೆ ತೊಟ್ಟಿಲುಗಳೂ ಇಲ್ಲ
ಮುಟ್ಟಿಗೆ ಕೀಳರಿಮೆ ಏಕೆ
ಹತ್ತಿಕ್ಕದಿರಿ, ಬಂಧಿಸದಿರಿ
ಗಡುವ ನೀಡದಿರಿ
ಬಿಗಿದಿಟ್ಟುಕೊಂಡ ದುಃಖವೆಲ್ಲಾ
ಹರಿಯಲಿ, ಭೋರ್ಗರೆಯಲಿ
ಎದೆ ಭಾರ ಹಗುರಾಗಲಿ
ಧರ್ಮ ಗ್ರಂಥ ಗಳಿಂದ
ಬಿಡುಗಡೆ ಪಡೆಯಲಿ
ಬಲವಂತವಾಗಿ ಅಲ್ಲ
ಮುಕ್ತವಾಗಿ ಜೀವಿಸಲಿ.
–ರೇಣುಕಾ ಕೋಡಗುಂಟಿ.