ಪಂಜು ಕಾವ್ಯಧಾರೆ

ಬೆಳಕಾದವರಿಗೆ ನಮಸ್ಕಾರ…
ಮೊದಲು ತಾಯಿಗೆ
ಜನ್ಮ ಕೊಟ್ಟ ತಂದೆಗೆ
ಎರಡೂ ಕಣ್ಣು ಕೊಟ್ಟ ದೇವರಿಗೆ

ಭೂಮಿಯಿಂದ ಜನಿಸಿದಾಗ
ಸುತ್ತಾ ಮುತ್ತಾ ಪಸರಿಸಿತ್ತು
ಪ್ರೀತಿ ಪ್ರೇಮದ ಗಂಧ
ಪ್ರೀರಿಗೊಂದು‌ ಅರ್ಥ ಕೊಟ್ಟು
ರೂಪ ಕೊಟ್ಟ ತಾಯಿಗೆ

ಸಹನೆಯೆಂಬ ಜೇನು ಸುರಿದು
ಬರಗಾಲ-ಉಳಿಗಾಲ-ಅಳಿಗಾಲದಲ್ಲೂ
ಗರಿಕೆಯ ರಸಕುಡಿಸಿ ಭರವಸೆಯ
ಬೆಳಕಾದ ತಾಯಿಗೆ
ಗರಿಕೆಯೊಳಗೆ ಜೀವವಾಗಿ
ಉಸುರು ತುಂಬಿ ತಾಯಿ ಮಗುವ
ತಬ್ಬಿದ ತಂದೆಗೆ

ಯಾವ ಭೂಮಿ ಎಲ್ಲಿಯ ಜಲ
ಆಕಾಶವೆಂಬುವುದು ನಿತ್ಯಜನ್ಯಲೋಕ
ಅರಿವಿನ ಕಿರಣ ಕೊಟ್ಟ ಗುರುವಿಗೆ
ಬೆಳಕಾದ ಮನದಿಂದ ನಮಸ್ಕಾರ

ಮನದ ತಿಮಿರ ಹೊರದೂಡಿ
ಪುಟ್ಟದೊಂದು ಹಣತೆಯನ್ನಿಟ್ಟ ತಾಯಿಗೆ
ಬತ್ತಿಯೊಸೆದು ದೀಪ ಉರಿಸಿ
ಬೆಳಕು ನೀಡಿದ ತಂದೆಗೆ
ಎದೆಯ ತಮವನಳಿಸಲು
ಜ್ಯೋತಿಯಾಗುರಿದ ಇಬ್ಬರಿಗೂ ನಮಸ್ಕಾರ

ಸೂತ್ರ ಬರೆದು …
ಬಿರುಗಾಳಿಗೆದುರಾಗಿ ಈಜುವುದ ಕಲಿಸಿ
ಮುಳುಗಿದರೂ ಉಸಿರಾಡುವುದ ತಿಳಿಸಿ
ಕೆಂಡದ ಮಳೆ -ಮಿಂಚಿನ ಸೆಲೆ-ಷಂಡರ ಬಲೆಗೆ
ಜಗ್ಗದೇ ಕುಗ್ಗದೇ ಮುನ್ನುಗ್ಗುವುದನ್ನೇ ಪೋಷಿಸಿ
ಹೃದಯಾತ್ಮಲಿಂಗದಲ್ಲಿ ಬೆಳಕಾಗಿ ಪ್ರಜ್ವಲಿಸುವ
ಹೆತ್ತವರಿಗೆ ಬದುಕಿನ ಬೆಳಕಾದವರಿಗೆ
ನಮಸ್ಕಾರ…
-ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ


ಗಝಲ್

ಮಳೆಯ ಹನಿಗಳೆಲ್ಲ ಮುತ್ತಾಗುವದಿಲ್ಲ ಗೆಳತಿ
ಇಳೆಯ ತರುಗಳೆಲ್ಲ ಸಂಜೀವಿನಿಯಾಗುವದಿಲ್ಲ ಗೆಳತಿ//

ಮಾತು ಆಡುವರೆಲ್ಲ ಭಾಷಣಕಾರರಾಗುವದಿಲ್ಲ ಗೆಳತಿ
ಸೋತು ಹೋದವರೆಲ್ಲ ಸತ್ತುಹೋಗಿಲ್ಲ ಗೆಳತಿ//

ಬರವಣಿಗೆ ಇದ್ದವರೆಲ್ಲ ಕವಿಗಳಾಗುವದಿಲ್ಲ ಗೆಳತಿ
ಮೆರವಣಿಗೆ ಮಾಡುವವರೆಲ್ಲ ಮೆರೆಯುವದಿಲ್ಲ ಗೆಳತಿ//

ಸದ್ದು ಮಾಡಿದವರೆಲ್ಲ ಸುದ್ದಿಯಾಗುವದಿಲ್ಲ ಗೆಳತಿ
ಬುದ್ದಿ ಹೇಳಿದವರೆಲ್ಲ ಬುದ್ದನಾಗುವದಿಲ್ಲ ಗೆಳತಿ//

ಅಭಿನವನಾಡಿದ ನುಡಿಗಳೆಲ್ಲ ಮಿಥ್ಯವಲ್ಲ ಗೆಳತಿ
ನಭದ ನಕ್ಷತ್ರಗಳೆಲ್ಲ ಎಣಿಸಲಾಗುವದಿಲ್ಲ ಗೆಳತಿ//

-ಶಂಕರಾನಂದ ಹೆಬ್ಬಾಳ


ಮನ -ಮಸಣದಲ್ಲಿ ಶಾಲೆ

ಮನ- ಮಸಣ ಅಕ್ಷರಗಳ ವ್ಯತ್ಯಾಸದಲ್ಲಿ
ಹುಟ್ಟುವ ಹಳೆಯದಾದರೂ ಹೊಸ ನಂಟು
ಮಕ್ಕಳಿಲ್ಲದ ಶಾಲೆ ಮಸಣದ ಭಾಸ
ಮಸಣ ಕಾಯುವವನು
ಆಲಸಿ ಆಚಾರ್ಯ
ಮೌನಕ್ಕೂ ಮೌನ ಕಲಿಸುವ ನಿಶ್ಯಬ್ದತೆ
ನಿಗೂಢ ಶಬ್ದದೊಂದಿಗೆ ಆಗಾಗ್ಗೆ ಬಂದು
ಏನಾದರೂ ಅರ್ಥ ಕೊಟ್ಟು ಹೋಗ್ವ ತಂಗಾಳಿ
ಮನಕ್ಕೆ ಬಡಿದಿದ್ದ ಪೈಶಾಚಿಕತೆ ಶಾಲೆಯ
ತುಂಬೆಲ್ಲಾ ನಲಿದಾಡುತ್ತಿದೆ
ಮಕ್ಕಳ ಆರ್ಭಟಕ್ಕೆ ಗುಡುಗಿದರು ಅಲುಗದ ಶಾಲೆ
ಗುಂಡುಸೂಜಿ ನೆಲಅಪ್ಪಿದರು
ಕರಾಳ ಅಳುವು
ನೀರಿದ್ದರು ಜೀವ ಕಳೆದುಕೊಂಡು
ತೊಟ್ಟಿಕ್ಕುತ್ತಿರುವ ನೀರಕೊಳವೆಗಳು
ಬೋರ್ಡು, ಕಾರ್ಡು, ಬೆಂಚುಗಳ
ಮಾಲೀಕತ್ವ ವಹಿಸಿರುವ ಇಲಿರಾಯ
ತನ್ನದೆ ಕಾರುಬಾರು ನಡೆಸಿದ್ದಾನೆ
ಹೂ-ಗಿಡ, ತರಗೆಲೆಗಳು ಮಕ್ಕಳ
ಆರೈಕೆ ಅರಸಿ ಬರುವಿಕೆಗಾಗಿ ಬಾಗಿ
ಸ್ವಗತ ಕೋರುತ್ತ ಭೂತಬಂಗಲೆಯ
ಸೇವಕರಾಗಿ ನೇಮಕಗೊಂಡಿವೆ
ಆಟದ ಮೈದಾನಗಳು ಮಾನವ ಕೃತ್ಯಕ್ಕೆ
ರಣರಂಗದ ಅವಶೇಷವಾಗಿವೆ
ಇದ್ದಾಗ ತಿಳಿಯದ ಅರಿಯದ ಪ್ರೀತಿ
ಸ್ವಲ್ಪ ಸ್ವಲ್ಪವೇ ಅರಿವಿನ ಗುಳಿಗೆ ನುಂಗಿಸುತ್ತಿದೆ
ಕಾಡುವ ಪಾಪಪ್ರಜ್ಞೆಯಲ್ಲಿ ಮುಳುಗೇಳುವ ಅಜ್ಞಾತವಾಸ.
-ಕಾವ್ಯ ಎಸ್.


ಗುಟ್ಟು

ಮೊನ್ನೆ ತನಕ ಸೆರಗಿನ ಗಂಟಂತೆ
ಅವಿತು, ಅಜ್ಜಿಯ ಹಳೆ ಪೆಟಾರಿಯ
ಒಡ್ಯಾಣದಂತೆ ಕಾಣದೆ ಅವಿತಿತ್ತು
ಈಗ ದಾರೀಲಿ ಹೊದ್ದ ಮುಸುಕನ್ನು
ಸರಿಸಿಕೊಂಡು ಬಾಗಿಲ ಮುಂದೆ
ನಡೆದುಕೊಂಡು ಹೋಗುತ್ತಿದೆ
ಪುನಃ ಪುನಃ ಮಾತಿನ
ಮೊದಲು, ನಂತರ ಷರತ್ತು ಬದ್ಧತೆ
ಕಿವಿಗೆ ಸುರಿದಿದ್ದರೂ ಗುಟ್ಟು
ನಿಂತಲ್ಲಿ ನಿಲ್ಲದೆ ಊರ ತಿರುಗಿ
ಜಾಹಿರಾತಿನಂತೆ ಪಸರಿಸುವುದು

ಯಾರಿಗೆ ಹೇಳದೆ ಒಳಗೆ
ಇರಲು ಸಾಹಸ ಮಾಡಿದಷ್ಟು
ಭಯದ ಗದ್ದಲದಿಂದ
ಹೊರಗೆ ಅದರ ಚಹರೆ ಮೂಡುವುದರಲ್ಲಿ
ಅನುಮಾನವಿಲ್ಲ

ಬಲವಂತಕ್ಕೆ ಕಟ್ಟಿದ್ದರೆ ನಾಲಿಗೆ, ತುಟಿ
ಮತ್ತು ಬಾಯಿ ಈ ಗುಟ್ಟಿನ ಜೊತೆ
ರಾಜಿಮಾಡಿಕೊಳ್ಳುವುದೇ?
ಮನಸ್ಸು ತನ್ನ ಕಣಕಿದರೆ
ಸಂತೆಯಲ್ಲಿ ತೆರೆದಿಟ್ಟ ಪದಾರ್ಥದಂತೆ
ಬಿಚ್ಚಿ ಮಾರಿ ಬಿಡುತ್ತದೆ

ಕೆಲವೊಮ್ಮೆ ಸತ್ಯವನ್ನು ಸೋಲಿಸಲು
ಇನ್ನೊಮ್ಮೆ ತನ್ನ ತಾನು ಅವಿತಿಸಿ
ಸಮಾಧಾನ ಮುಖವಾಡ ತೊಡಲು
ಹೊಂಚು ಹಾಕುವುದು
ಪ್ರತಿಬಾರಿಯು ಅಡಗಿಕೊಳ್ಳಲಾಗದೆ
ಗುಟ್ಟು ಸೋರುವುದು

-ಎಂ‌.ಜಿ.ತಿಲೋತ್ತಮೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x