ಖಾಲಿಯಿದೆ…
ಈಗಲೂ ನನ್ನೀ ಹೃದಯ
ನೆತ್ತರು ಚಿಮ್ಮುತಿದೆ
ನಿತ್ಯವೂ ಮಿಡಿಯುತಿದೆ
ಬದುಕಿಗಾಗಿ ತುಡಿಯುತಿದೆ
ಹೃದಯವಿನ್ನೂ ಖಾಲಿಯಿದೆ
ದಣಿವಿಲ್ಲ ಗುರಿಯಿಲ್ಲ
ಕನಸೇಕೋ ಕಾಡುತಿಲ್ಲ
ಯಾವುದೋ ನೋವಿನಲ್ಲಿ
ಹೇಳಲಾರೆ ದನಿಯಿಲ್ಲ
ಯಾತರದ್ದೋ ಗೊಣಗಾಟ
ಯಾತಕ್ಕಾಗಿಯೋ ಹೆಣಗಾಟ
ಹಾರಿ ಹೋಗದು ಜೀವ
ತೂರಾಡುತಿಹುದು ಭಾವ
ಬೀಸುತಿದೆ ಬಿರುಗಾಳಿ
ಹೃದಯವಂತೂ ಖಾಲಿಯಿದೆ
ಏನ ಬಯಸಿ ಸೋಸುತಿಹುದು ಜೀವ
ಹಿಡಿಯಲಾಗದೇನೋ ಮನದ ನೋವಾ
ದಕ್ಕುವುದೇ ಎಂದಿಗಾದರೂ ಪ್ರೇಮಾಮೃತಪಾನ
ಹೃದಯವು ಸದಾ ಖಾಲಿಯೇ ಖಾಲಿ
ಕಾವಲಿಯ ಕಾವಲಿಗೆ ನಿಂತು ಮಾಡುವುದೇನು
ಹೃದಯವೀಗಲೂ ಖಾಲಿ ಖಾಲಿ
–ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ
ಪ್ರೀತಿ ಬಯಸಿ ಬರೆದ ಪುಟ್ಟನ ಓಲೆ..
ನನ್ನ ಪುಟ್ಟ ಕಂದ
ಆ ದೇವರಿಗೆ ಓಲೆ ಬರೆಯುತ್ತಾನಂತೆ
ಸಂಬಂಧಗಳನ್ನು ಯಾಕೆ ಭೂಮಿಯ ಮೇಲೆ ಸೃಷ್ಟಿಸಿದೆ ದೇವಾ
ನಾನು ಮಗುವಾದರೂ ಅಮ್ಮನಿಗೆ ಅವಳ
ಕೆಲಸ ಮುಖ್ಯವಂತೆ, ಜೊತೆಗೆ ಅಡ್ಡನ್ನಾಡಿ ಬದುಕು ಸಾಗಿಸಲು
ಇಬ್ಬರು ಗಾನದೆತ್ತಿನಂತೆ ದುಡಿಯಬೇಕಂತೆ..!
ಈ ಯಾವ ನ್ಯಾಯ?
ಅಪ್ಪನೂ ಮನೆಯಲ್ಲಿ ಇರುವುದಿಲ್ಲ
ಅಮ್ಮ ಇರುವುದಿಲ್ಲ ನನ್ನ ಆಟಕ್ಕೆ ಯಾರೂ ಜೊತೆ
ಮೂಕ ಕೀಲು ಕುದುರೆ,
ಜೀವವಿಲ್ಲದ ಗೊಂಬೆಗಳು,
ಸದಾ ನಗುತ್ತಿರುವ ಪ್ಲಾಸ್ಟಿಕ್ ಹೂಗಳು….!
ನನ್ನ ಹಸಿವು ನೀಗಿಸದ ಹಳಸಲು ಫ್ರೀಜ್ ತಿಂಡಿಗಳು
ನೆಟ್ಜಾಲದಲ್ಲಿ ಸೊಟ್ಟಾದ ಪ್ರೀತಿ
ಹಣ ದುಬಾರಿಯಲ್ಲ ವಸ್ತುವಲ್ಲ
ಇಲ್ಲಿ ಪ್ರೀತಿ ಮಮತೆ ಕರುಣೆ ಇವುಗಳೇ ದುಬಾರಿ
ಸಂಬಂಧಗಳು ಕಾಣಿಸಿದ ಅಪರೂಪದ ವಸ್ತುಗಳು..!
ಅಪ್ಪನ ಹೆಗಲು ಮಾಯವಾಗಿದೆ
ಅವ್ವನ ಕಂಕುಳ ಕೊಂಕಿದೆ
ಕೈ ತುತ್ತು ಎಂತದೋ ತಿಳಿಯದು
ಕಬ್ಬಿಣದ ಗೇಟಿನ ಮನೆಬಂದಿಯಾಗಿದ್ದೇನೆ
ಕಾರ್ಟೂನ್ ಗಳೇ ನನಗೆ ಗೆಳತಿಯರ ಬಳಗ
ಆಟದ ಮೈದಾನವು ಚಿತ್ರಪಟವಾಗಿದೆ ….!
ನನ್ನ ಭವಿಷ್ಯತ್ತಿಗೆ ಇವರ ವರ್ತಮಾನ ಹಾಳು
ಇದರ ಜೊತೆಗೆ ನನ್ನ ವರ್ತಮಾನವು ಹಾಳು
ಇರುವ ಮೂವರಲ್ಲಿ ಯಾರು ಯಾರಿಗೂ ಇಲ್ಲ
ನಾನು ಪಾಪಿಯೇ, ಇಲ್ಲವೆ ನಾನೇ ಪುಣ್ಯವಂತನೆ…!
ಓ..ದೇವರೆ ಈ ಓಲೆಗೆ ಉತ್ತರಿಸು
ಹೊತ್ತಾಯಿತು ನಾನು ಶಾಲೆಗೆ ಹೋಗಬೇಕು
ಅಪ್ಪ ಅಮ್ಮ ನನಗೂ ಪ್ರೀತಿಯನ್ನು ಹಂಚುವ ಬುದ್ದಿ ಕೊಡು
ಅಪ್ಪ ಅಮ್ಮ ಒಂದಾಗಿರಲಿ
ನನ್ನಗೆ ನಿನ್ನ ವಿಳಾಸ ಗೊತ್ತಿಲ್ಲಾ
ನಿನ್ನ ಮುಂದೆ ಇರುವ ಹುಂಡಿಗೆ ಹಾಕುವೆ
ಮರೆಯದೆ ಉತ್ತರ ಬರಿ…
ಇಂತಿ
ನಿನ್ನ ಪುಟ್ಟ.
ಹೀಗೆ ಹಾಸಿಗೆಯಲ್ಲಿ ಕನವರಿಸುತ್ತಿದ ನಾನು ಕಂದ
ಪಕ್ಕದಲ್ಲಿ ನಾ ಇದ್ದೆ…
–ವೃಶ್ಚಿಕಮುನಿ
ಜೀವನ ಪರೀಕ್ಷೆ
ಸನ್ನದ್ಧರಾಗಿರಿ ಎದುರಿಸಲು ಜೀವನ ಪರೀಕ್ಷೆಯನು
ತ್ಯಾಗ ಬಲಿದಾನಗಳೇಕೆ…ಅಂತಿಮ ಫಲಿತಾಂಶದಲಿ?
ಚೂರುಚೂರಾಗುವರು ಮುರಿದ ಕನಸುಗಳಿಂದ
ಗೊತ್ತಿಲ್ಲವಾಗಿದೆ ಜೀವನ ಸತ್ಯ ಬದುಕಿರುವ ಜನಕೆ
ಅಪರಾಧವೇನು ಕನಸು ಕಟ್ಟಿಕೊಳ್ಳುವ ಕಣ್ಣಿನದು
ಮೂಡಿದೆ ಗುರುತೊಂದು ಮುಗ್ಧ ಹೃದಯದ ಚಿತ್ರಪಟದಿ
ಅರಿಯುವರು ಜೀವನವ ಕ್ಷಣಮಾತ್ರಗಳಲಿ
ಪ್ರೀತಿಯಲಿ ಬದುಕುವರಾರೊ ಭುವಿಯ ಮೇಲೆ
ಅನುಭವಿಸುವರು ಶಿಕ್ಷೆಯನು ಹೃದಯ ನೀಡಿದಾಗ
ಹೊರಬೇಕು ಹೊಣೆಗಾರಿಕೆ ಪ್ರೇಮದ ಕಾಣಿಕೆಯಾಗಿ
ಬದುಕು ಬವಣೆ ಸರಿಯೇ, ಸಂತಸವಾಗಿರಿ ಗೆಳೆಯರೆ
ದಯೆ ತೋರಿದೆಯೇ ಸಾವು…ಯಾವತ್ತು, ಯಾರಿಗಾದರೂ?
ತಿರುಗಿ ನೋಡೊಮ್ಮೆ ಸಾಗಿಬಂದ ಬಾಳಪಯಣವನು
ಅರಿಯಬೇಕಾಗಿದೆ ಇಂದು ಪರೀಕ್ಷೆಗಳೇ ಜೀವನವಲ್ಲ
ನಡೆಯುತಿದೆ ಸುಖಃ ದುಖಃದ ಕಾಲಚಕ್ರದೊಳಗೆ
ಸಾಗುತಿದೆ ಇಂದಿಗೂ ಅರ್ಥ ಮಾಡಿಕೊಳ್ಳದ ಮುಗ್ಧತೆಯಲಿ
–ರಾಘವೇಂದ್ರ ದೇಶಪಾಂಡೆ, ಹೊಸಪೇಟೆ
ತವರೂರು
ನಲುಮೆಯ ಊರು
ನಾ ಹುಟ್ಟಿದ ಊರು
ಮೈಸೂರು
ಆಡುತ ನಲಿಯುತ
ಬಾಲ್ಯವ ಕಳೆದ
ನಾ ಮೆಚ್ಚಿದ ಊರು
ಮೈಸೂರು
ವಿದ್ಯೆಗೆ ಹೆಸರು
ತುಂಬಿದೆ ಹಸಿರು
ಅಲ್ಲಿಯೇ ಇಹುದು
ನನ್ನಯ ಉಸಿರು
ನನಗು ವಿದ್ಯೆಯ ಕೊಟ್ಟಿಹ ಊರು
ಅಪ್ಪ ಅಮ್ಮನ ನೆನೆಪಿಸೋ ಊರು
ಜೊತೆಯಲಿ ಹುಟ್ಟಿ ಬೆಳೆದವರು
ಅಂದಿಗೂ ಇಂದಿಗೂ ನನ್ನವರು
ಹೆಮ್ಮೆಯ ಊರು ಮೈಸೂರು
ಅದೇ ನನ್ನ ತವರೂರು
-ಡಾ|| ನ. ಸೀತಾರಾಮ್
ಕಾದಿರುವೆ ಮಾಧವ…
ಎಲ್ಲಿರುವೆ ಮಾಧವ ಎಲ್ಲಿರುವೆ ನೀನು
ರಾಧೆಯ ಮೋಹವ ಬಿಡಿಸು ಬಾರೋ
ಮೋಹನ ಮುರಳಿಯ ನುಡಿಸು ಬಾರೋ
ಸಮಯದ ಅರಿವಿಲ್ಲದೆ ಕಾದಿರುವೆನು
ಹಸಿವೆಯ ಪರಿವಿಲ್ಲದೆ ಬದುಕಿರುವೆನು
ಕದ್ದಿರುವೆ ನೀ ಎನ್ನಯ ನಿದಿರೆಯನ್ನು
ಪ್ರೇಮಸುಧೆಯ ಹರಿಸಿ ಮನ ತಣಿಸಬೇಕು
ಜೀವನದ ಕೊನೆವರೆಗೆ ನಿನ್ನ ಹೆಗಲೇಬೇಕು
ಅತ್ತು ಕರೆದಾಗೆಲ್ಲ ಬಂದು ಸಂತೈಸು ಸಾಕು
ಮೂಖನಾಗದೆ ನೀನು ಸವಿನುಡಿಯನಾಡು
ಮೌನಿಯಾಗದೇ ನೀನು ಸಾಂತ್ವಾನ ನೀಡು
ಜಗವನ್ನೇ ಗೆಲ್ಲುವೆ ನಾನು ನಿನ್ನೊಲವ ಕೊಡು
ನಿನ್ನ ಪ್ರೀತಿಯ ಪರಿಯ ಮರೆಯಲಾರೆನು
ನಿನ್ನ ನೋಡದ ನಯನ ಕಾಂತಿಹೀನವು
ಕಣ್ಣೆದುರು ಬಂದೊಮ್ಮೆ ನಗುವ ಬೀರು
ಜೊತೆಯಲ್ಲಿ ಬಾಳಲು ಅದೃಷ್ಟ ಇಲ್ಲನೆಗೆ
ನಿನ್ನ ನೆನಪಿಲ್ಲದ ದಿನವೇ ಕೊನೆ ಎನಗೆ
ನಿನ್ನ ಸನಿಹವೆ ಮಧುರ ಕ್ಷಣವು ಈ ರಾಧೆಗೆ
-ಚಂದ್ರಿಕಾ ಆರ್ ಬಾಯಿರಿ
ಕಾರಣಗಳು ಇಲ್ಲದ ಈ ಹೊತ್ತಲಿ
ನಿನಗೆ ಅರ್ಥವಾಗದ ಲಿಪಿಯೊಂದರಲ್ಲಿ
ಕೆತ್ತಿದ್ದೆ ಭಾವನೆಗಳನ್ನು ಆಳವಾಗಿ
ಸೂಕ್ಷ್ಮತೆ ಇಲ್ಲದ ಶಿಲ್ಪಿಯೆಂದಾದರೂ ದೂರಬೇಕಿತ್ತು
ಅಕ್ಷರಗಳು ಅಳಿಸಿ ಭಾವಗಳು ಆಲಸಿಯಾದಗಲೂ
ನೀನು ಕಲಿಯಲಿಲ್ಲ ಓದುವುದನ್ನು
ನಿನ್ನಿಂದಲೇ ಸ್ವೀಕರಿಸಿದ್ದೆ ರೆಕ್ಕೆಗಳನ್ನು
ಆದರೆ ಸೋತಿದ್ದೆ ಹಾರಾಟಕ್ಕೆ ಅನುಮತಿ ಪಡೆಯುವಲ್ಲಿ
ಮುಕ್ತ ಸಂಚಾರಕ್ಕೆಂದು ಹೆದ್ದಾರಿ ನಿರ್ಮಿಸಿದ್ದೆ
ಪರವಾನಗಿ ಇಲ್ಲದ ಗುತ್ತಿಗೆದಾರನೆಂಬ ಆರೋಪ ಹೊತ್ತಿದ್ದೇನೆ
ಯಕ್ಷಿಣಿ ವಿದ್ಯೆಗಳು ದೊರೆತಾಗಲೂ
ನೋವು ತಾಳುವ ಶಕ್ತಿ ಪಡೆದೆನೆ ವಿನಹ
ಒಳಗಾಗಲಿಲ್ಲ ನಿನ್ನ ಒಲಿಸಿಕೊಳ್ಳುವ ಗೋಜಿಗೆ
ನಿನ್ನ ನಿರಾಕರಣೆಗಳು ಇಲ್ಲದಿದ್ದಲ್ಲಿ
ಪ್ರೀತಿಯ ಹೊರತು ಬೇರೆ ಯಾವ ವಿದ್ಯೆ ನನಗೆ ಬೇಕಿತ್ತು
ನಿವೇದನೆಗಳ ನಿರಾಕರಣೆಯ ಬಳಿಕವೂ
ಆಲಿಸಬೇಕಿತ್ತು ನನ್ನ ಮಾತುಗಳನ್ನು
ಎದೆ ಖಾಲಿಯಾಗದೆ ನಿಷ್ಕಳಂಕ ವಾಗುವುದು ಹೇಗೆ…
–ರಾಮಕೃಷ್ಣ ಸುಗತ, ಬಳ್ಳಾರಿ
ಎಲ್ಲವನೂ ಹೇಳಿಬಿಟ್ಟರೆ
ಹಿತವಾಗಿ ಕಾಡಲಿಕ್ಕೆ ಏನೂ ಉಳಿಯದು…
ಚಂದದ ಕವಿತೆ ಸುಗತ ಸರ್ 💐