ಪಂಜು ಕಾವ್ಯಧಾರೆ

ಮೌನದ ಮನ

ಮೌನವಾಗದಿರು ಮನವೇ
ಮೊದಲಿಸುವ ಮುಖಗಳ ಕಂಡು
ಇದು ನಿನ್ನ ಜೀವನವೇ..

ಕಾಯಕದಲಿ ಹಗಲಿರುಳು ಶ್ರಮಿಸು
ಕಿವಿಗೊಡದಿರು ಎಡರು ತೊಡರಿಗೆ
ನಿನ್ನೊಳಗಿನ ಮುಕ್ತಿ ಪ್ರಹರಿಸು

ಸೋತನೆಂದು ಅಳದಿರು
ಗೆದ್ದನೆಂದು ಬೀಗದಿರು
ಸಾಧನೆಗೆ ದಾರಿಗಳು ನೂರಾರು

ನಡೆವ ದಾರಿಲಿ ಕಲ್ಲು ಮುಳ್ಳುಗಳು
ಬರಿ ನೋವ ಅಣಕು ತುಣುಕುಗಳು
ಚಿಮ್ಮುತ ಬರಲಿ ನಿನ್ನೊಳಗಿನ ಆವಿಷ್ಕಾರಗಳು

ಹರಾಸುಮನುಷ್ಯರಿಲ್ಲದ ಬೀದಿಯಲ್ಲಿ…

ಮನುಷ್ಯರಿಲ್ಲದ ಬೀದಿಯಲ್ಲಿ
ಮನಸು ಅಲೆಯುತ್ತಿತ್ತು
ಮನುಷ್ಯನ ಕುಕೃತ್ಯ ಅಲ್ಲಿಲ್ಲಿ ಅವುಗಳ ಕಲೆ
ಎಷ್ಟು ಮಳೆ ಸುರಿದರೂ,ಗಂಧ ಲೇಪಿಸಿದರೂ
ಶತಮಾನ ಕಳೆದರೂ ಹಾಗೆ ಉಳಿದಿವೆ
ಹುಟ್ಟದಿರುವ ಮುಂದಿನ ಪೀಳಿಗೆ ಮನುಷ್ಯರೇ
ರಾಕ್ಷಸರಂತೆ ಕಾಣುತ್ತಿತ್ತು..!

ಮನುಷ್ಯರಿಲ್ಲದ ಬೀದಿಯಲ್ಲಿ
ಮಗು ಅಲೆಯುತ್ತಿತು
ಹಸಿವು ಹಸಿವು
ನರಿ ನಾಯಿಗಳು ಇದ್ದರೂ ಕಿತ್ತು
ತಿನ್ನುವುದು ನಾಯಿ ಮಾಂಸವನ್ನೇ
ನರಿ ಮಾಂಸವನ್ನೇ ಗೊಂದಲದ ನಡುವೆ
ಮಗು ಅಸುನೀಗಿತ್ತು
ಮನುಷ್ಯರಿಲ್ಲದ ಬೀದಿಯಲ್ಲಿ ಹಸಿವು ನಗುತ್ತಿತ್ತು…!

ಮನುಷ್ಯರಿಲ್ಲದ ಬೀದಿಯಲ್ಲಿ
ಮಾನವೀಯತೆ, ಮಮತೆ, ಕರುಣೆ, ಪ್ರೀತಿ ಅಂಡಲೆಯುತ್ತಿದ್ದವು
ಗಾಳಿ,ನೀರು,ಹಸಿರು ನೆಮ್ಮದಿಯಿಂದ ಉಸಿರಾಡುತ್ತಿದ್ದವು
ಕಾರ್ಖಾನೆಯ ಯಂತ್ರಗಳು ತುಕ್ಕು
ಹಿಡಿದು ಕಳಚಿದ ಪಳಿಯುಳಿಕೆಯಂತಿತ್ತು…!

ಮನುಷ್ಯರಿಲ್ಲದ ಬೀದಿಯಲ್ಲಿ
ಹಣ ಎಂಬ ಕಾಗದದ ಹುಲಿ ಕರಿಗಿದ
ಟಾರು ರಸ್ತೆಯಲ್ಲಿ ಅಚ್ಚೂತ್ತಿತ್ತು
ಅಂತಸ್ತು ಬುಡಮೇಲಾಗಿತ್ತು
ನಾನು ನೀನು ಮೇಲು-ಕೀಳು
ಯಾವುದೋ ಮೂಲೆ ಸೇರಿ
ನಗುತ್ತಿತ್ತು….!

ಮನುಷ್ಯರಿಲ್ಲದ ಬೀದಿಯಲ್ಲಿ
ಕಾಗೆ ಕೂಗಿನ ಲಯ ಶ್ರಾದ್ಧದ ನಿರೀಕ್ಷೆಯಲ್ಲಿತ್ತು
ಗೂಬೆಯ ಅರಚು
ಮನುಷ್ಯನ ಪ್ರೇತಾತ್ಮಕ್ಕಾಗಿ ಕಾಯುತ್ತಿತ್ತು
ಯಾವ ಹೋರಾಟವಿಲ್ಲದೆ
ಹರತಾಳದ ಕಟ್ಟೆ ರಸ್ತೆ’ಬಂದ್’ ಬಂಧನವಿಲ್ಲದೆ
ನಿರಾಳವಾಗಿತ್ತು…

ಮನುಷ್ಯರಿಲ್ಲದ ಬೀದಿ ನಿರಮಾನುಷ್ಯ,
ನಿರ್ಭಾವುಕತೆಗೆ ಸಾಕ್ಷಿ ಹೇಳುತ್ತಿತ್ತು…!

ವೃಶ್ಚಿಕಮುನಿ


ಏರುತ್ತಿರುವೆ ನಾನು

ಏರುತ್ತಿರುವೆ ನಾನು,
ನನ್ನಷ್ಟಕ್ಕೆ,
ಗುರಿಯ ನಿಖರಕ್ಕೆ,
ಪರ್ವತದ ಶಿಖರಕ್ಕೆ…
ಒಬ್ಬಳೆಂದೇನೂ ಬೇಸರವಿಲ್ಲ,
ಹಿಂದಿದ್ದಾರೆ ಕಾಲೆಳೆಯುವವರು,
ಮುಂದಿದ್ದಾರೆ,
ಕೆಲವರು ಕೈಗೊಟ್ಟು ಮೇಲೆಳೆಯಲು,
ಮತ್ತು ಕೆಲವರು ಅಡ್ಡಗಾಲು ಹಾಕಿ ಬೀಳಿಸಲು.
ಮುಂದೆ, ಮೇಲೇನಿದೆಯೋ ಕಾಣೆ,
ಇರಬಹುದೇನೋ ಸ್ವರ್ಗ,
ಸಂತಸದ ಬತ್ತದ ಚಿಲುಮೆ.
ಹೊರಟವರ ಸಂತೋಷವದಕೆ ಸಾಕ್ಷಿ.
ಏರುವುದೆ ಗುರಿಯಹುದು,
ಮೀರಲಾರೆವು ಅದಕೆ,
ಒಂದೊಂದು ಹಂತವೂ
ತಂದಿಹುದು ಆನಂದ.
ಮೇಲಿರುವ ಸ್ವರ್ಗಕೂ
ಮಿಗಿಲಿಹುದು ಈ ಮೋದ.
ಕೆಲವರೆಳೆಯದಲೆ ಕೈಯ
ಬರಿಯೆ ತೋರುವರು ಹೀನಾಯ,
ಮತ್ತೆ ಕೆಲವರಿಗೆ ನಾನು
ಏರುವುದೇ ಸಹಿಸಲಪಾಯ.
ಬೀಳಲಾರದೆ ಕೆಳಗೆ
ಏರುತಲೆ ಇರಬೇಕು.
ಏರದಿರಬೇಕು ಅಹಮಿಕೆಯು ತಲೆಗೆ.

ಡಾ|| ವೃಂದಾ ಸಂಗಮ.


ಗಜಲ್

ಜೀವನವೊಂದು ಚಲನಚಿತ್ರ, ದೃಶ್ಯಗಳು ಬದಲಾಗುತ್ತವೆ ನೋಡುತ್ತಿದ್ದಂತೆ/
ವಿಧಿಯೊಬ್ಬ ಮಹಾನಿರ್ದೇಶಕ ಪಾತ್ರಗಳು ಮಾತ್ನಾಡುತ್ತವೆ ನೋಡುತ್ತಿದ್ದಂತೆ//

ಮನದ ಪರದೆಯ ಮೇಲೆ ಆಲೋಚನೆಗಳು ಮಿಂಚಿಮಾಯವಾಗುತ್ತವೆ ನೋಡುತ್ತಿದ್ದಂತೆ/
ಆಡಿದ ಮಾತುಗಳೆಲ್ಲ ಕ್ಷಣಾರ್ಧದಲ್ಲಿ ಬಣ್ಣಬದಲಿಸುತ್ತವೆ ನೋಡುತ್ತಿದಂತೆ//

ಅವರಿಗೊಲಿದ ವಿದ್ಯೆಯದು ಕಣ್ಕಟ್ಟು, ಕೈಯಲ್ಲಿದ್ದ ನಾಣ್ಯಗಳು ಖಾಲಿಯಾಗುತ್ತವೆ ನೋಡುತ್ತಿದಂತೆ/
ಮೈಮೇಲಿನ ಉಟ್ಟಬಟ್ಟೆಗಳು ಕಾಣೆಯಾಗುತ್ತವೆ ನೋಡುತ್ತಿದ್ದಂತೆ//

ನಂಬಿದ ಜನ ಸಿದ್ಧಾಂತಗಳೇ ಮೋಸಮಾಡಿ ಹೋಗುತ್ತವೆ ನೋಡುತ್ತಿದ್ದಂತೆ/
ಕಣ್ಣುಗಳೇ ನಂಬಲಾರವು ತನ್ನ ಮುಂದಿನ ಶವಗಳು ಮಾಯವಾಗುತ್ತವೆ ನೋಡುತ್ತಿದ್ದಂತೆ.//

ಕಡುಬಿಸಿಲುಗಲ್ಲು ಕರಗಿ ಮಳೆಹನಿಗಳಾಗಿ ಸುರಿಯುತ್ತವೆ ನೋಡುತ್ತಿದಂತೆ//
ಇರುಳು ಹಗಲಾಗಿ,ಹಗಲು ಇರುಳಾಗಿ ಹೆಗಲೇರುತ್ತವೆ ನೋಡುತ್ತಿದ್ದಂತೆ//

ಸೂರ್ಯ ಚಂದ್ರನಾಗಿ, ತಾವರೆ ತಾರೆಗಳಾಗಿ ಮಿನುಗುತ್ತವೆ ನೋಡುತ್ತಿದ್ದೆದಂತೆ/
ಹಳ್ಳ ಹೊಳೆಯಾಗಿ, ನದಿ ಬಯಲಾಗಿ ಪರಿವರ್ತಿತವಾಗುತ್ತವೆ ನೋಡು ನೋಡುತ್ತಿದ್ದಂತೆ//

ಗೋಮುಖಗಳ ಮುಖವಾಡ ಕಳಚಿ ರಾವಣನ ಹತ್ತು ತೆಲೆಗಳು ಹೆಡೆಯತ್ತುತ್ತವೆ ನೋಡುತ್ತಿದಂತೆ//
ಸತ್ಯ ಅದೆಲ್ಲಿ ಸತ್ತುಹೋಗಿದೆಯೋ, ಸುಳ್ಳುಗಳು ಬಲಾಢ್ಯವಾಗುತ್ತವೆ ನೋಡುತ್ತಿದ್ದಂತೆ//

ನೀನಾದ್ರು ಏನು ಕಮ್ಮಿಬಿಡು ಸಾಕಿ ನಿನ್ನನಗುವಿನಲ್ಲಿ ಅದೆಷ್ಟೋ ಮೈಮನಗಳು ಕೊಚ್ಚಿಹೋಗುತ್ತವೆ ನೋಡುತ್ತಿದ್ದಂತೆ/
ನಿನ್ನದೊಂದು ಸೌಂದರ್ಯದ ಸೆಳಕಿನಲ್ಲಿ ಮಿಂದೆದ್ದ ಹೃದಯಗಳು ಹುಚ್ಚಾಗಿ ಕನವರಿಸುತ್ತವೆ ನೋಡುತ್ತಿದ್ದಂತೆ//

ಜಗವಿದು ಮಾಯಾಜಾಲ ಅಶ್ಫಾಕ್, ಮಾಯೆಗಳು ಮುತ್ತಿಗೆಹಾಕಿ ಬಿಡುತ್ತವೆ ನೋಡುತ್ತಿದ್ದಂತೆ./
ಮಾಯಾತೀರ್ಥ ಸೇವಿಸಿದವರು ದೈವೀಸಂಭೂತರಾಗಿ, ಮಧುಶಾಲೆಗಳು ಮಂದಿರಗಳಾಗುತ್ತವೆ ನೋಡುತ್ತಿದ್ದಂತೆ.//

ಅಶ್ಫಾಕ್ ಪೀರಜಾದೆ.


ಬುದ್ಧನೆಂದರೆ ಇಷ್ಟ

ಜಗದ್ಯೋಚನೆ ಬಿಸಿಯೋಳ್ ಕುದ್ದು
ನಟ್ಟಿರುಳಲೆದ್ದು
ಸಿರಿಸುಖವ ಒದ್ದು
ಅರಳ ಹೊರಟ
ಆ ಬುದ್ಧನೆಂದರೇ ಇಷ್ಟ

ಸುಖದ ಸೀಕರಣೆ ನಿರಾಕರಿಸಿ
ಜಗದ ವ್ಯಾಕರಣ ಅರಿಯ ಚಿಂತಿಸಿದ
ಸುಜಲ ಜ್ಞಾನ ದುಡಿದು ಪಡೆದು
ಜನಮನ ಬದಲಾಯಿಸ ಯೋಚಿಸಿದ
ಆ ಬುದ್ಧನೆಂದರೇ ಇಷ್ಟ

ಆಸೆಯೇ ದುಃಖಕ್ಕೆ ಆದಿ
ಅಷ್ಟಾಂಗ ಮಾರ್ಗ ಸಾರ ಉದಧಿ
ವಿವಾಹಿತನಾಗಿ ವಿರಕ್ತನಾದ
ಸಿರಿ ಗರಿ ಬಿಚ್ಚಿಟ್ಟು ಜ್ಞಾನದಿ ಹರಿ ಗಿರಿಯಾದ
ಆ ಬುದ್ಧನೆಂದರೇ ಇಷ್ಟ

ಶುದ್ಧಮಾಯಾ ಉದರದಿಂದೆದ್ದ
ಭೋಧಿವೃಕ್ಷದಡಿಯಿಂದ ಬುದ್ಧನಾಗಿ ಎದ್ದ
ಸಂಸಾರ ಸಾರದಿಂದೆದ್ದ
ಆಸೆ ತೊರೆದು ಪರಿಪೂರ್ಣನಾಗಲೆದ್ದ
ಆ ಬುದ್ಧನೆಂದರೇ ಇಷ್ಟ

ಅಯ್ಯಪ್ಪ ಬಸಪ್ಪ ಕಂಬಾರ


ಥರಾವರಿ ಕಳ್ಳರು

ಎಂದಿಗೋ ಇನ್ನೆಂದಿಗೆ ಮತ್ತೆಂದಿಗೋ…
ಹುಂಬ ಜನಕೆ ತಿಳಿವಿನ ಬೆಳಕು ಮೂಡುವುದೆಂದಿಗೋ….
ಮೂಢರಾಗಿ ಮಾಡು ಜಗ್ಗಿ ಮಾಳಿಗೆಯ
ಮಣ್ಣು ತಿಂದು ಹುಚ್ಚರಂತೆ ಕುಣಿಯುತಿಹರು
ಜಪವು ಇಲ್ಲ ತಪವು ಸಲ್ಲ ತಾಪದ ಅಗ್ನಕುಂಡ
ನುಗ್ಗಿ ಬಗ್ಗಿ ಬಡಿದಾಡುತಾ ಜಗ್ಗಾಡುವರು
ಅರಿವು ಮೂಡಿ ಚಿತ್ತದಾಸ್ಯದಿಂದೆದ್ದು ಬರುವುದೆಂದಿಗೆ…
ಮನದ ಬಂಡೆಗಂಟಿಹ ಜಾತಿಪಾಚಿ ತೊಳೆಯುವುದೆಂದಿಗೋ…

ನೆಗೆದು ಜಿಗಿದು ಹಾರಿಜಾರಿ ಕುಲದ ಕೆಸರನೆರಚಿಹರು
ಮನುಜಕುಲವು ನರಳುತಿಹುದು ಕನಸನೆಲ್ಲ ತುಳಿತುಳಿದು
ನೆನ್ನೆಯುಂಡ ಅನ್ನದಗುಳು ಕರುಳ ಹಿಂಡಿ ನಗುತಿದೆ
ಬೊಗಸೆ ತುಂಬಾ ದಾನ ಪಡೆದ ಬೆರಳು ಕೊರಳ ಹಿಸುಕಿದೆ…
ಮಾನವತೆಯು ದಾನವತೆಯೆಡೆ ಸಾಗಿದೆ ಕಾರ್ಗತ್ತಲು ಮೂಡಿದೆ

ಸಟೆಯನಾಡಿ ಸುಳಿವ ಜನ ಗದ್ದುಗೆಯಲಿ ಮೆರೆದಿದೆ
ಸಲ್ಲದ ನುಡಿಯಾಡುತಾ ನಾಲಗೆಯು ಸವೆದಿದೆ
ನೆತ್ತರಿಲ್ಲ ದೇಹದಲ್ಲಿ ಸತ್ವವಿಲ್ಲ ನುಡಿಗಳಲಿ ಮಸಣದೊಳು ಜನವಿದೆ
ಜಾತಿ ಹೆಣವ ಹೊತ್ತು ದಿನಾ ಒಂಟಿಕಾಲಿನ ಮೆರವಣಿಗೆ…
ಜನವು ಸತ್ತು ಮಲಗಿದೆ ಮನವು ಮಸಣವಾಗದೆ!?

ಕೇಕೆ ಹಾಕಿ ನಗುವ ಮನ ತೊಡೆಯ ತಟ್ಟಿ ಕುಣಿವರು
ಒಪ್ಪಿ ಅಪ್ಪಿ ಕೆಸರು ಮೆತ್ತಿ ಕೇಕೆ ಹಾಕಿ ಸಾಗುತಿಹರು
ಗತಕಾಲದ ವ್ರಣವನೆಲ್ಲಾ ಮರೆತು ಮೆರೆಯುತಿಹರು
ಕಿವಿಯ ಕಚ್ವಿ ಹುಚ್ಚು ಹೆಚ್ಚಿ ದಿಕ್ಕು ದಿಕ್ಕಿಗೂ ನುಗ್ಗುತಿಹರು…

ಕಾಲಸವೆದು ಮುದಿಯ ವೇಷ ಥರಾವರಿ ಕಳ್ಳರು
ದಾಡಿಯಿತ್ತು ಕೋರೆಯಿತ್ತು ಕಡುಗಪ್ಪಿನ ದೇಹವಿತ್ತು
ಕಡಲ್ಗಳ್ಳರು ಮನೆಗಳ್ಳರು ತುರಗವನೇರಿ ಸಾಗಿದರು ದೂರ ದೂರಕೆ…
ಭೂಗಳ್ಳರ ಹೊಲಗಳ್ಳರ ಕಾಲವಿದು ಒಡಲ್ಗಳ್ಳರ ಜಾಲವಿದೆ…

ಅನ್ನದಾತನೊಡಲು ಸಿಗಿದು ಕರುಳ ಬಗೆದು ಊಳಿಡುವ ಜಾದೂ ಇದೆ
ಶವದ ಸುತ್ತಾ ಪುಂಗಿನಾದ ಜನರ ಮುಂದೆ ಪುಡಾರಿವಾದ
ನೋಟಿನ ಗಿಲೀಟು ಓಟಿಗೊಂದು ಮಸಲತ್ತು ಜಾತಿಕೋತಿ ಕುಣಿತವು
ಮಳ್ಳ ನಗೆಯ ಇಂದ್ರಜಾಲ ಖಾದಿಯೊಳಗೆ ಮಂತ್ರಲೀಲೆ
ಮಾತು- ಮಾತು-ಮಾತು ಮಾತನಾಡಿ ಮೆದುಳು ಕದಿಯುವ ಹುನ್ನಾರವಿದೆ.
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ


ಪ್ರೇಮ ಸಮ್ಮಿಲನ

ಯಾರೊ ಬಾಗಿಲು ಬಡಿಯುತ್ತಿದ್ದಾರೆ
ಅವಳಿರಬಹುದೆ?
ಇಲ್ಲ ಕಳ್ಳನಿರಬಹುದು.

ಛೆ! ಯಾರಾದರೂ ಬರಲಿ
ಬಂದವರು ಬಾಡಿದ ಬಯಕೆಗಳ
ತೊಯ್ದ ಮನಸುಗಳು
ಎತ್ತಿಕೊಂಡು ಹೋಗಲಿ

ನನಗೂ ಬೇಡವಾಗಿದೆ
ಸಾಸಿವೆ ಸೊಬಗಿನ ಸಾರಿನ ಜೀವನ
ಬರೀ ಮಸಾಲೆ ಮೊಹಬತ್ತಿನ
ಸಮ್ಮಿಲನ ಇಲ್ಲಿ

ತೋರಿಸಿಬಿಡುವೆ
ಇಷ್ಟು ದಿನ ಬಚ್ಚಿಟ್ಟ
ಕಾಮ- ಕೋಪಗಳ ಗಂಟು
ಒಯ್ದು ಬಿಡಲಿ ನಿಷ್ಕಾರುಣ್ಯವಾಗಿ

ಇದು ಮೋಸವೊ,ಮಸಣವೊ ?
ಎಲ್ಲಿ ನೋಡಿದರೂ
ಸಂಚಿನಿಂದ ನಿರ್ಮಿಸಿದ ಗೋರಿಗಳೆ.
ದೇಹಗಳೆಲ್ಲ ಘರ್ಷಣೆಗೆ ಬಿಸಿಯಾಗಿವೆ
ಆತ್ಮವೊಂದೆ ಅಂಡಲೆಯುತ್ತಿದೆ
ಮೋಕ್ಷದ ಮಳಿಗೆಯ ಬಾಗಿಲ ಸುತ್ತ.

ಸಮಯ ಸಾಗುತ್ತಿದೆ
ಶೂನ್ಯ ಸಾಯುತ್ತಿದೆ
ಉಳಿಯುವುದು
ಪ್ರೀತಿ,
ವಿಶ್ವಾಸ,
ನಂಬಿಕೆ,

ಯಾವುದನ್ನು ಕೊಡಲಿ
ಮನಸ ಮಳೆಯಲ್ಲಿ
ಕೊಡೆಯ ಕೊಟ್ಟವಳಿಗೆ?

ದ.ರಾ. ಮುಲ್ತಾನಿ


ಒಲವ ತೇರು

ಒಡನೆ ಕಂಗಳೆರಡು ಸನಿಹ ಕೂಡಿ
ಮಧುರ ಭಾವನೆಗಳು ಮಿಲನಗೊಂಡಿದೆ
ಕ್ಷಣದಿ ಮನೋಲ್ಲಾಸಗೊಂಡು
ಮನ ಹಕ್ಕಿಯಂತೆ ವಿಹರಿಸಿದೆ

ಮೊಗವು ಮಂದಹಾಸದಿ ಕಂಗೊಳಿಸಲು
ವದನದಿ ಕಾಂತಿಯು ಇಮ್ಮಡಿಯಾಗಿದೆ
ಮನದಿ ಆಸೆಗಳ ಅತಿರೇಕದಿ
ಅವತಾರಕೆ ಮನ ನರ್ತಿಸಿದೆ

ಹೃದಯದಿ ಮಾರ್ಧ್ವನಿಯ ಕೇಳಲು
ಕಂಪಿಸಿದೆ ಹೃದಯ ಕವಾಟಗಳು
ಜೋಡಿಹಕ್ಕಿಯಂತೆ ಬೆರೆತು ಬಾಳಲು
ದಿನದಿನವು ಬಯಸುತಿದೆ ಮನವು

ನನ್ನೆದುರು ನೀ ನಿಂತಾಗ
ಹಾತೊರೆಯುತಿದೆ ಮನ ಮಾತಾಡಲು
ಬಂಧಿಸಿದೆ ನಾ ಮನದೊಳು ಆಕಾಂಕ್ಷೆಗಳ
ಮೊದಲ ನೋಟಕೆ ನಾಚಿ ನೀರಾದೆ

ಅಕ್ಕರೆಯ ಸಿಹಿಮಾತುಗಳಿಗೆ ಸೋತೆ ನಾ
ಮೌನದಿ ಸಮ್ಮತಿಸಿದೆ ಬಯಕೆಗಳ ನಾ ಜೋಡಿಯಾಗಿ
ದಾಟುವ ನಾವು ಪ್ರೀತಿಯ ಮೇರು
ಅನುದಿನವು ಎಳೆಯುತಿರುವೆ ನಮ್ಮೊಲವಿನ ತೇರು

ಗಾಯತ್ರಿ ನಾರಾಯಣ ಅಡಿಗ


ಕಾಲ ಮರೆಸುತ್ತದೆ ಎಲ್ಲವನ್ನೂ

ಕಾಲ ಮರೆಸುತ್ತದೆ ಎಲ್ಲವನ್ನೂ
ನಡೆದು ಬಂದ ದಾರಿಯನ್ನೂ
ದಾರಿಯುದ್ದದ ನೆನಪುಗಳನ್ನೂ.

ನೆನಪು ಭರಿಸುತ್ತದೆ ಹೃದಯವನ್ನು
ನೆನಪಿಸಿ,

ತರಗತಿಯಲ್ಲಿ ಬೆಂಚು ಏರಿದ್ದನ್ನು
ಹುಡುಗಿ ನೋಡಿ ಮುಸಿ ಮುಸಿ ನಕ್ಕಿದ್ದನ್ನು;
ಗುರುಗಳಿಗೆ ಸುಳ್ಳು ಹೇಳಿದ್ದನ್ನು
ವಾರಿಗೆಯವರು ತಿಳಿಸಿ ಬಾಸುಂಡೆ ತರಿಸಿದ್ದನ್ನು;
ಮರ ಕೋತಿ ಆಟ ಆಡಿದ್ದನ್ನು
ಆಟದ ರಭಸದಲ್ಲಿ ಷರಟು ಹರಿದದ್ದನ್ನು;
ಗೆಳೆಯರೊಡನೆ ಕೆರೆಯಲ್ಲಿ ಈಜಿದ್ದನ್ನು
ಮುಳುಗಿ ಕಲ್ಲು ಮೇಲೆ ತಂದಿದ್ದನ್ನು;
ಅರಳಿ ಕಟ್ಟೆಯ ಬಳಿ ಕುಳಿತದ್ದನ್ನು
ಅವಳ ಬರವಿಗಾಗಿ ಕದ್ದು ನೋಡಿದ್ದನ್ನು;
ಉಲಿದ ಒಲವ ಹಾಡುಗಳನ್ನು
ಹಾಡಿನೊಳಗೆ ಪ್ರೀತಿ ಸೆಲೆ ಉಕ್ಕಿದ್ದನ್ನು.

ನೆನಪು ಭಾರವಾಗಿಸುತ್ತೆ ಹೃದಯವನ್ನು
ನೆನಪಿಸಿ,

ಬಾರದ ಮಳೆಗಾಗಿ ಹಪಹಪಿಸಿ ಮುಗಿಲತ್ತ
ಮುಖ ಮಾಡಿ ನಿಂತ ರೈತನನ್ನು;
ಅವ್ವ ಇಕ್ಕಿದ ತಣಿಗೆಯಲಿ ಅರೆ ಮುದ್ದೆಗಾಗಿ
ಖಾಲಿ ಬೆರಳುಗಳ ಆಡಿಸುವ ಅಕ್ಕ,ತಂಗಿಯರ ಪಾಡನ್ನು;
ಹರಿದ ರವಿಕೆಯ ಒಳಗಿಂದ ಇಣುಕುವ
ಯವ್ವನವ ಕಾಪಿಡುವ ಅಬಲೆಯರನ್ನು;
ಊರ ಜನರೆಲ್ಲ ಬಡಿದಾಡಿ ಕೇರಿಗೇ ಬೆಂಕಿ ಇಟ್ಟು
ಮಸಣವ ಊರೊಳಗೆ ತಂದ ದಿನವನ್ನು;
ಅಜ್ಜ ಸತ್ತು ಚಟ್ಟ ಏರಿ
ಮಸಣದಲ್ಲಿ ಅವನ ತಲೆ ಸಿಡಿದ ರಾತ್ರಿಯನ್ನು ;
ಅವರಿವರ ಕಿವಿಯಾಗಿ ಸ್ವಂತಿಕೆಯ ಬಿಟ್ಟು
ದೊಡ್ಡ ‘ ಸೊನ್ನೆ ‘ ಯಾದ ಸಮಯವನ್ನು .

ಶ್ರೀ ಕೋಯಾ


ನಿರಂತರ

ಏನು ಕೊಟ್ಟೆ ಏನು ಪಡೆದೆ
ರಾಧಾ ನೀನು ಕೃಷ್ಣಗೆ

ಮನಸು ಕೊಟ್ಟೆ ಪ್ರೀತಿ ಪಡೆದೆ
ನನ್ನ ಬಾಳ ಹಾದಿಗೆ

ಹೇಗೆ ಸೆಳೆದ ಎಂತು ಬೆಳೆದ
ನಂದಾ ನಿನ್ನ ಹೃದಯದಿ

ಕೊಳಲು ನುಡಿಸಿ ಜಲವ ಎರಚಿ
ಕಾಳಿಂದಿಯ ತಟದಲಿ

ಕಿರಿಯನಲ್ಲವೇನೆ ರಾಧಾ
ಗೋಪ ನಿನಗೆ ವಯಸಲಿ

ಹಿರಿದು ತಾನೆ ಒಲವು ಎಲ್ಲಕೂ
ಎಣಿಸಿ ನೋಡೆ ಮನದಲಿ

ಕಟ್ಟಿಕೊಂಡ ನಿನ್ನ ಪತಿಯ
ಬಿಟ್ಟೆ ಏಕೆ ಸುಲಭದಿ

ಮೆಚ್ಚಿಕೊಂಡ ಗೊಲ್ಲನಿವನ
ಹಚ್ಚಿಕೊಂಡು ಮೋಹದಿ

ಅಂತ ದಟ್ಟವಾದ ಸೆಳೆತ
ಇರುವುದೇನೆ ಪ್ರೇಮಕೆ..

ಬೆಳಕು ಕತ್ತಲು ಎರಡೂ ಒಂದೇ
ಉರಿಯೆ ಹೊರಟ ಹಣತೆಗೆ

ತೆಗಳಲಿಲ್ಲವೇನೆ ಜಗವು
ನಿನ್ನ ಹುಚ್ಚು ಕೆಲಸಕೆ

ಹೊಗಳಿಕೆ ಇಹುದು ಮುಂದೆ
ಅಮರಪ್ರೇಮ ಕಾವ್ಯಕೆ

ಎಂ.ಡಿ.ಚಂದ್ರೇಗೌಡನಾರಮ್ನಳ್ಳಿ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x