ಪಂಜು ಕಾವ್ಯಧಾರೆ

ಹರಿದ್ರ ಕುಂಕುಮ ಶೋಭಿತಳಾದವಳಿಗೆ
ಅದಕ್ಕಿಂತ ಬೇರೆ ಐಶ್ವರ್ಯ ಇಲ್ಲ
ಅವನು ಹಾಕುವ ಮೂರುಗಂಟಿಗೆ
ತಾನು ಬೆಳದ ಪರಿಸರ ತೊರೆಯುವಳಲ್ಲ

ತಾಂಬೂಲದ ಮೇಲೆ ಕಾಸಿಟ್ಟು ಧಾರೆಯೆರೆಯುವರಲ್ಲ
ತಂದೆಯ ಪ್ರೀತಿ ತಾಯಿಯ ವಾತ್ಸಲ್ಯ,
ಒಡಹುಟ್ಟಿದವರ ಮಮತೆಯ ಕುಡಿಯನ್ನು
ಇನ್ನೂ ನಿನಗೆ ಸ್ವಂತವೆಂದು ದೈವಸಾಕ್ಷಿಯಾಗಿ ಒಪ್ಪಿಸಿದರಲ್ಲ….

ಸಪ್ತಪದಿಯ ತುಳಿದು ತವರು ಮನೆಯ ನೆನಪಿನೊಂದಿಗೆ
ತನ್ನ ಮನೆ ಸೇರುವಳಲ್ಲ ಗಂಡನ ಮನೆಯ
ಸುಖ ಶಾಂತಿ ನೆಮ್ಮದಿ ಬಯಸಿ
ತನ್ನ ತನವನ್ನು ಬದಿಗಿರಿಸಿ ಮನೆಗಾಗಿ ದುಡಿಯುವಳಲ್ಲ

ಅತ್ತೆ ಮಾವನಿಗೆ ಮಗಳಂತೆ ಸೇವೆಮಾಡಿ
ಗಂಡ ಮಕ್ಕಳ ಪ್ರೀತಿ ಪಾತ್ರಳಾಗಿ
ಮನೆತನದ ಗೌರವಕ್ಕೆ ನಂದದೀಪಾವಾಗಿ
ಮುತ್ತೈದೆ ಸಾವನ್ನು ಪಡೆದಳಲ್ಲ

ಗಾಯತ್ರಿ


ಏದ್ದೇಳು ಮಹಿಳೆ

ಎದ್ದೇಳು
ಮಹಿಳೆ
ಕಲ್ಲಂತೆ
ಕೂರಬೇಡ
ಶಿಲ್ಪಿಯನ್ನು
ಕಾಯುತ್ತಾ

ಭಾವಗಳ
ಕಲ್ಲಿಗೆ ಜೀವ
ತುಂಬಿ
ಅದ್ಭುತ
ಶಿಲ್ಪವಾಗು

ಕನಸುಗಳನ್ನು
ಕೈಯ್ಯಲ್ಲಿಡಿದು
ಕೂರದೇ
ನನಸಾಗಿಸಿಕೋ..
ಯಾವ ಶಿಲ್ಪಿಗೋ..
ಹೆದರಿ
ಕೈ ಚೆಲ್ಲಬೇಡ

ಎದ್ದೇಳು
ಬೀಳಿಸುವವರೇ
ಹೆಚ್ಚು ಆದರೂ
ಧೃತಿಗೆಡದೇ
ಮೇಲಕ್ಕೇರು

ಬೀಳಿಸುವವರೇ
ಮುಂದೊಮ್ಮೆ
ನಿನಗೆ ಕರಗಳ
ಮುಗಿದು
ಆಲಂಗಿಸುವರು

ಚೈತ್ರಾ ವಿ.ಮಾಲವಿ


ಪಕ್ಷಾಂತರಿಯಾದ ಭಗವಂತ ?

ಸೃಷ್ಟಿಯ ಮುನಿಸಿನ ಕಾರಣ
ಧರೆಗೊಂದಿಷ್ಟು ಪ್ರಾಣವಾಯು
ಮನಸ್ಸು ಹಗುರಾದ ಭಾವ ಅದಕೆ
ಮಾನವನಿಗೆ ಮರಣ ಭಯ
ಈಗ ಕಾಲವೇ ತೀರ್ಮಾನಿಸಬೇಕು
ಯಾವುದಕ್ಕೆ ನ್ಯಾಯ ಸಿಗಬೇಕು
ಭೂಮಿಗೋ ಭೂವಿಪುತ್ರನಿಗೋ..
ತಾಯಿ ಬದುಕಿದರೆ ತಾನೆ
ಮಗುವಿಗೆ ಬದುಕೀತು

ಆರೋಗ್ಯವನ್ನೆ ಅನುಲಕ್ಷಿಸಿಸುತ್ತ
ಮುದ್ದು ಕಂದನಿಗೆ ಮಮತೆಯ
ಕ್ಷೀರುಣಿಸುತ್ತ ಉಣಿಸುತ್ತ ಉಣಿಸುತ್ತ
ಕ್ಷಯಕೆ ತುತ್ತಾದಳು ಮಾತೆ
ಬೆಳೆಬೆಳೆಯುತ್ತ ತಾಯಿ ಆರೋಗ್ಯ
ಪ್ರೀತಿಯನ್ನೆ ಕಡೆಗಣಿಸುತ್ತ ನಡೆದ ಮಗ
ಅವಳೆದೆಯ ಮೇಲೆ ಜೆಲ್ಲಿ ಟಾರು ಸುರಿದು
ಎರ್ರಾಬಿರ್ರಿ ವಾಹನಗಳನ್ನು ಓಡಾಡಿಸಿ
ಅಭಿವೃದ್ಧಿಯೊಳಗೆ ಬಂಧಿಯಾದ
ಗಾಸಿಗೊಂಡ ಮಾತೃಹೃದಯ ತಾನು
ಕಣ್ಮುಚ್ಚುವ ಮೊದಲು ಮಕ್ಕಳಿಗೆ
ಒಂದಿಷ್ಟು ಬುದ್ದಿಬರಲೆಂದು ಬಯಸಿತೋ ಶಪಿಸಿತೋ ಗೋತ್ತಿಲ್ಲ

ಹಡೆದಾಕೆಯ ಮೇಲೆ ದಬ್ಬಾಳಿಕೆ
ಸಲ್ಲದೆಂದು ಬೋಧಿಸುತ್ತಲೇ ಬಂದಿದ್ದ
ಭಗವಂತನ ಮಾತು ಬೋಧನೆಗಳೆಲ್ಲ
ವ್ಯರ್ಥವಾಗಿ ದೇವರನ್ನೆ ವಿವಿಧ ಬಣ್ಣಗಳಲ್ಲಿ,
ಅನೇಕ ಹೆಸರಗಳಲ್ಲಿ ವಿಭಜಿಸಿ
ಆತನ ಬೋಧನೆಗಳೆಲ್ಲ ಒಂದೇ
ಎನ್ನುವುದು ಮರೆತು ಕಚ್ಚಾಡುತ್ತ
ತಾಯಿಯ ಹಸಿರೆದೆಯ ಮೇಲೆ ಕೆಂಪು
ರಕ್ತದ ಕಲೆ ಬಿಟ್ಟೋಗಿ ದಾರಿ ತಪ್ಪಿದ ಸಂತತಿಗೆ
ಎಂದಿಗೂ ಬದಲಿಸಲಾಗದ ನೋವಿನಲ್ಲಿ
ಚಿರಮೌನಿಯಾಗಿದ್ದಾನೆ ಮತ್ತು
ಜವರಾಯನ ಪಕ್ಷಕ್ಕೆ ಪಕ್ಷಾಂತರವಾಗಿದೆ
ಎನ್ನುವ ಶಂಕೆ ಕಾಡುವುದು ಸಹಜ.

ಅಶ್ಫಾಕ್ ಪೀರಜಾದೆ


ಗಜಲ್ 1

ಬಾಹು ಬಂಧನದಿ ಅಪ್ಪಿ ಪ್ರೀತಿ ತೋರಿದವನು ನಾನು
ಒಡಲ ನೋವನು ಮರೆಸಿ ಮರುಗಿದವನು ನಾನು

ನಿನ್ನ ಬಿಗಿಯಾದ ತೊಳ್ ತೆಕ್ಕೆಯಲಿ ಅಪ್ಪುಗೆಗೆ ಸೋತವ
ಕೆನ್ನೆಗುಂಟ ಜಾರಿದ ಕಣ್ಣಿರ ಹನಿಗೆ ಕರಗಿದವನು ನಾನು

ಬಿಕ್ಕಳಿಸಿ ಅಳುವಾಗಲೆಲ್ಲ ಮೈದಡವಿ ರಮಿಸಿದ್ದೇನೆ
ಭರ್ಚಿಗಿಂತಲೂ ಇರಿವ ಮಾತಿಗೆ ಸೋರಗಿದವನು ನಾನು

ಎಚ್ಚರಿರಬೇಕು ನಾನು ನೀನು ಈ ಲೋಕದೋಳಗೆ
ಕಚ್ಚಾಟ ಹುಚ್ಚಾಟಗಳಿಗೆ ಬೆನ್ನುಕೊಟ್ಟು ತಿರುಗದವನು ನಾನು

ಮರುಳನ ಮಾತಿಗೆ ಸೋತು ಕೈ ಹಿಡಿದು ಬಂದವಳು
ಬದುಕು ಮುನ್ನೆಡೆಸು ಏನೇ ಕಷ್ಟ ಬರಲಿ ಕರಗದವನು ನಾನು.

ಗಜಲ್ 2

ನಿನ್ನ ಬಿಸಿ ಅಪ್ಪಿಗ್ಯಾಗ ನನ್ನ ಮೈ ಬೆಚ್ಚಗಿರತೈತಿ ಸಖಿ
ನಿನ್ನ ತೊಳ್ ತೆಕ್ಕ್ಯಾಗ ನನ್ನ ಮೈ ಮನಸು ಹುಚ್ಚಾಗಿರತೈತಿ ಸಖಿ

ನನ್ನ ಕಣ್ಣಾಗ ಪ್ರೀತಿ ಹೊಳಿಯಾಗಿ ಹರದ ಬಂದು ಬಿಟ್ಟೈತಿ
ಒಪ್ಪಿಗೆಯ ಅಪ್ಪುಗೆಯಲಿ ಬಿಸಿಯುಸಿರ ಬಸಿದು ಮೆಚ್ಚಾಗಿರತೈತಿ ಸಖಿ

ಬೆರೆಸಿದ ತುಟಿಯಾಗ ಮಾತಿಗಿಲ್ಲ ಒಂಚೂರು ಜಾಗ
ಮೌನದಪ್ಪುಗೆಯಲಿ ಸಮ್ಮತಿಸು ನಿನ್ನ ಹೆಸರು ಅಚ್ಚಾಗಿರತೈತಿ ಸಖಿ

ಲೋಕದ ಮಂದಿಗೆ ಹೆದರಿದರ ಹ್ಯಾಂಗಂತ ದಿಗಿಲಾಗ್ಯಾದ
ತೋಳತೆಕ್ಕೆಯ ಕಾವಿಗೆ ನಮ್ಮೆದೆಯು ಕಾದು ಕಿಚ್ಚಾಗಿರತೈತಿ ಸಖಿ

ಮರುಳನ ಜೀವ ಪ್ರೀತಿಯ ಆಲಿಂಗನಕೆ ಹಾತೊರೆಯುತಿದೆ
ಬಂಧವ ಬಿಡಿಸಲು ಯಾರಿಂದಲೂ ಬರದಂಗ ನನ್ನ ನೆಚ್ಚಿರತೈತಿ ಸಖಿ.

ಮರುಳಸಿದ್ದಪ್ಪ ದೊಡ್ಡಮನಿ


ಶಾಯಿರಿ(ಲಹರಿ)-೧

ನದಿಯನೀರು ಬತ್ತಿದರೂ
ಹೃದಯ ದಾಹ ತಣಿಯಲಿಲ್ಲ
ಬತ್ತಿ ಹಚ್ಚಿ ಬೆಳಗಿ ದರೂ
ಒಣಗಿ ಉರಿಗೆ ತಡೆಯಲಿಲ್ಲ
ಮನದಿ ಮಂಗ ಕುಣಿದ ಹಾಗೆ
ಸೆಳೆದ ಬಾಲ ಬೆಳೆಯಿತು
ನಿಯಂತ್ರಣ ಕೊಂಡಿ ಕಳಚಿ
ಭಂಡತನದಿ ಮೆರೆಯಿತು!

ಶಾಯಿರಿ(ಲಹರಿ)-೨

ತನ್ನವಳ ಮುಖದಲ್ಲಿ
ಸೂರ್ಯ ಚೆಂದ್ರರ ನಡಿಗೆ
ಭಯದಿ ಕಂಪಿಸಿತು ಹೃದಯ
ಕಳೆ ಕಳಚಿ ಅವರೂಡಿಗೆ
ಬಚ್ಚಿಟ್ಟು ಕೊಂಡರೆ ನನ್ನ
ಕಮಂಡಲು ಖಾಲಿ
ಬೆಂದ ಕನಸುಗಳ ಅಡಿಯಲ್ಲಿ
ಮತ್ತದೇ ಖಯಾಲಿ

ಶಾಹಿರಿ-(ಶಾಹಿರಿ) ೩

ಹಾಲು ಹಿಂಡಿದ ಹುಳಿ
ಹೆಪ್ಪುಗಟ್ಟಲು ಮೊಸರು
ಮನಸ್ಸಿನಲ್ಲಿ ಹಿಂಡಿದ ಹುಳಿ
ಹರಿತ ಮಟಗತ್ತಿಗೆ ನೆತ್ತರು
ಹುಳಿ ಹೃದಯ ನಳನಳಿಸಿ
ಹೊಳೆಯುವದು ಪಾತ್ರೆ
ಹುಳಿ ಕೊಳಸಿ ಹಳಹಳಿಸಿ
ಪಿತ್ತ ಸವಕಳಿ ಮಾತ್ರೆ

ಮನೋಹರ ಜನ್ನು


ಮುನ್ನಡೆವ ಹಾದಿಯಲಿ,
ನಿನ್ನನ್ನು ಬದಿಗಿಟ್ಟು…!
ನಾ ನಡೆಯಬಲ್ಲೆನೇ..?
ಒಂದು ಹೆಜ್ಜೆ…!

ಭಾರ(ವ) ಸಾಗರವ ಬದಿಗಿರಿಸಿ,
(ಸಂ)ಭ್ರಮಿಸಬಲ್ಲಳೇ ಧರಣಿ..!?
ನೀಲಿ ವಸ್ತ್ರ ಕಳಚಿ,
ನೀಲ ಮೇಫನ ಎದುರಿಸಿ…!
ಅದೊಂದು ಲಜ್ಜೆ…!

ಚಿಮ್ಮುವ ಚೈತ್ರವ
ಚಿವುಟಿ ಬೆಳೆಯುವುದೇ ಮರ..?
ಹೂ ಮಕರಂದವ
ನುಂಗುವಂತೆ ಭ್ರಮರ…!
ತನ್ನದೇ ಮಜ್ಜೆ…!

ಬೆಳಕ ಸೀರೆಯ ಬಿಚ್ಚಿ
ಬಿರಿಯದಿರುವಳೇ ಉಷೆ..?
ಓ..ರಜನಿಗಂಧ
ಇರುಳೆಲ್ಲ ನಿಶೆ…!
ಕಳಚಿದೇ ಗೆಜ್ಜೆ…!

ಬಿಗಿದ ಮೊಗ್ಗ ಬಿಡಿಸಿ
ತೊಡದೇ ಇರುವುದೇ ಬಳ್ಳಿ..?
ಮಗ್ಗುಲಿಗೆ ಹೊಳ್ಳಿ
ಮನಸೆಲ್ಲ ಮಳ್ಳಿ…!
ಆಗೊಂದೇ ಸಜ್ಜೆ..!

ನಿನ್ನನ್ನು ಬದಿಗಿಟ್ಟು…
ಒಂದಡಿಯು ಇಡಲಾರೆ..
ಮುನ್ನುಡಿಯ ಉಡಲಾರೆ…

ಸರೋಜ ಪ್ರಶಾಂತಸ್ವಾಮಿ


ಹೆಣ್ಣು
ಸಹನಾಮಯಿ, ತ್ಯಾಗಮೂರ್ತಿ ಇವಳು
ಅಬ್ಧಿಯೊಳುದ್ಭವಿಸಿದ ಅಂತರಗಂಗೆ
ಪರಿಶುದ್ಧಳು ಈಕೆ ಪಾವನಗಂಗೆ
ಪತಿಯ ನೋವು ನಲಿವಿಗೆ ಜೊತೆಯಾದವಳು
ಬಂಧನದೊಳು ಬಾಂಧವ್ಯ ಬೆಸೆದವಳು //

ಸಂಸಾರಕೆ ಕಣ್ಣು, ಶಿಶುವಿಗೆ ಗುರು ಇವಳು
ಪರಿಚಿತರಿಗೆ ಪರಿಚಾರಿಕೆ ಈಕೆ
ಮನೆಮಂದಿಗೆಲ್ಲಾ ಮುದ್ದೀಕೆ
ಸೋದರತೆಯಲಿ ಭ್ರಾತೃತ್ವ ತೋರಿದವಳು
ತಾಯ್ತನದಲಿ ಹೆತ್ತಮ್ಮನ ನೆನೆದವಳು//

ಅಕ್ಷರಕೆ ಕ್ರಾಂತಿ, ಅಕ್ಕರೆಯ ಮೂರ್ತಿ
ಕಷ್ಟ ಕೋಟಲೆಗೆ ಕುಗ್ಗಳಿವಳು
ಸುಖ ಸುಪ್ಪತ್ತಿಗೆಗೆ ಹಿಗ್ಗಳಿವಳು
ಕರ್ತವ್ಯದಿ ನಿಷ್ಠೆ, ಪ್ರಾಮಾಣಿಕತೆಯ ಮೆರೆದವಳು
ದುಡಿತದಿ ಭುವಿಯ ಒಡಲಸಿರಿ ಬಗೆದವಳು//

ಉತ್ಸಾಹದ ಒರತೆ, ಬತ್ತದ ಚಿಲುಮೆ
ಮನದಿ ಬೇಗುದಿಯ ನುಂಗಿ ಮಂದಸ್ಮಿತೆ ಇವಳು
‘ಧೈರ್ಯಂ ಸರ್ವತ್ರ ಸಾಧನಂ’ ಎಂದು ನಂಬಿಹಳು
ಬಾಳನೌಕೆಯ ಹುಟ್ಟು ಹಿಡಿದು ನಡೆಸುವಳು
ಧೃತಿಗೆಡದೆ ಆತ್ಮವಿಶ್ವಾಸದಿ ಮುನ್ನುಗ್ಗುವಳು//

ಕಡಲಿಗೆ ಮುತ್ತು, ಇರುಳಿಗೆ ಬೆಳಕಿವಳು
ದುಷ್ಟರಿಗೆ ದುರುಳೆ, ಶಿಷ್ಟರಿಗೆ ಶಕ್ತಿ ಇವಳು
ಅಂಬುಜಕೆ ಅನ್ವರ್ಥ, ಅಂಬರಕೆ ಹೊನ್ನಿವಳು
ಎಲ್ಲ ರಂಗದಿ ಸಾಧಿಸಿ ಪ್ರಶಸ್ತಿ ಮುಡಿಗೇರಿಸಿದವಳು
ಅವಿರತ ಯತ್ನದಿ ಉಚ್ಚ ಸ್ಥಾನಿಯಾಗಿ ಹೊಮ್ಮಿದವಳು //

ಗಾಯತ್ರಿ ನಾರಾಯಣ ಅಡಿಗ


ಜೀವನಾಘಾತ

ನಿಷ್ಠೆ ಮಾತುಗಳಿವೆ ಅನ್ಯಾಯದೆದುರು
ಹೋಗುತಿರುವೆ ಗಾಳಿಗೆದುರಾಗಿ ದೀಪಸಹಿತ
ಬದಲಾಗಿದೆ ಹಣೆಬರಹ ಪ್ರತಿಭಟಿಸಿದಾಗೊಮ್ಮೆ
ಅಸಹಾಯಕದಿ ದೇವರು…ಪ್ರಾರ್ಥನೆಯ ಮುಂದೆ

ನೋಡಬೇಕೆಕೆ ಜೀವನ ಅನ್ಯ ದೃಷ್ಟಿಕೋನದಿ
ಸೆಳೆಯಬಹುದಲ್ಲವೇ ಸ್ವದೃಷ್ಟಿಕೋನದಿ
ಸಾಗುತಿದೆ ಪಯಣ ದ್ವೇಷ ಅಸೂಯೆಗಳಡಿ
ದಡ ಸೇರಲಿ ಜೀವನ…ಕೊನೆಯಾಗುವದರೊಳು

ಕೇಳಿ ತಿಳಿದಾಗಿದೆ ಜೀವನದ ಹಿರಿಗರಿಮೆಯ
ಏನೂ ಇಲ್ಲದಾಗಿದೆ ಬಿಕ್ಕಳಿಕೆ ಹೊರತು
ತಮಾಷೆ ಕಾಣುತಿದೆ ಅದೃಷ್ಟದಂಚಿನಲಿ
ಕಳೆದು ಹೋಗುತಿಹುದು ಬದುಕು…ಅಭದ್ರತೆಯೊಳು

ಅನನುಭವಿಯಿರುವೆ ಬದುಕ ಪಯಣದಿ
ನಡೆಯದಾಗಿದೆ ಪ್ರಾಮಾಣಿಕತೆ ಜೀವನ
ದಿಕ್ಕೆಟ್ಟ ಸಂದರ್ಭದಿ ಕಾಣಿತೊಂದು ಮಾರ್ಗ
ಅವಶ್ಯಕತೆಯಿಲ್ಲ ಬದುಕೇ…ಪೋಷಿಸುತಿವೆ ಆಘಾತಗಳು

ರಾಘವೇಂದ್ರ ದೇಶಪಾಂಡೆ, ಹೊಸಪೇಟೆ



ಎದೆಯು ಕುದಿಯುವ ಕುಲುಮೆಯಾಗಿದ್ದಕ್ಕೆ ಕಾರಣ ನಿನ್ನ ಸ್ಪರ್ಶ !
ಮುನ್ನೆಚ್ಚರಿಕೆ ವಹಿಸಬೇಕಿತ್ತು, ಈಗ ಪ್ರೀತಿಯ ಲಕ್ಷಣ ಗೋಚರಿಸುತ್ತಿದೆ ಕಾರಣ ನಿನ್ನ ಸ್ಪರ್ಶ !!

ಅಲ್ಪ ಅವಧಿಯಲಿ ಪ್ರೀತಿಯ ಅಫೀಮು ನೆತ್ತಿಗೇರಿದೆ
ಬಾಧಿತಗೊಂಡಿರುವ ಹೃದಯದ ಬಿಕ್ಕಟ್ಟಿಗೆ ಕಾರಣ ನಿನ್ನ ಸ್ಪರ್ಶ !!

ನಿನ್ನ ತುಟಿಗಳು ನನ್ನ ಕೆನ್ನೆಯ ಮೇಲೆ ಹಚ್ಚೊತ್ತಿ ಬಿಟ್ಟವು
ನಾನೀಗ ಭಾವತರಂಗಗಳಿಗೆ ಸಿಲುಕಿರುವುದಕ್ಕೆ ಕಾರಣ ನಿನ್ನ ಸ್ಪರ್ಶ !!

ಪ್ರೀತಿಯ ಪ್ರಕರಣದಿಂದ ಖೈದಿಯಲ್ಲದಿದ್ದರೂ ಬಂಧಿಯಾಗಿರುವೆ
ಗಾಢಾಂಧಕಾರ ನನ್ನನ್ನು ಆವರಿಸಲು ಕಾರಣ ನಿನ್ನ ಸ್ಪರ್ಶ !!

ನನ್ನೊಳಗೆ ಕಲ್ಪನೆಗಳು ಹುಲುಸಾಗಿ ಬೆಳೆದುಬಿಟ್ಟವು
ನಿನ್ನೊಂದಿಗೆ ಬದುಕಬೇಕೆಂಬ ನೆಪದೊಂದಿಗೆ ಇದಕ್ಕೆಲ್ಲ ಕಾರಣ ನಿನ್ನ ಸ್ಪರ್ಶ !!

ನಿಂಗಪ್ಪ ಹುತಗಣ್ಣವರ


ನಿನ್ನ ಖುಷಿಗಾಗಿ”

ನೀ ನನ್ನ ಕನಸುಗಳ ಕೊಂದಾಗ
ಗುಂಡಿ ತೋಡಿ ನಾನೇ ಮಣ್ಣು ಮಾಡಿದ್ದೆ
ನಿನ್ನ ಖುಷಿಗಾಗಿ

ನನ್ನ ಭಾವನೆಗಳ ಬೆಂಕಿಗೆ ಎಸೆದಾಗ
ಉರಿದು ಹೋಗಲಿ ಎಂದು
ತಣ್ಣಗಾದ ಬೂದಿಯಂತೆ ಕೂತಿದ್ದೆ ನಿನ್ನ ಖುಷಿಗಾಗಿ

ಆದರೆ ಬೇರೊಂದು ಕೆಸರಿನ ಕಮಲಕ್ಕಾಗಿ
ನೀ ನನ್ನ ಅಣಕಿಸಿದಾಗ ಮಾತ್ರ
ಮಹಾಮಾರಿ ಕಾಯಿಲೆಗೆ ತುತ್ತಾಗಿ ಸುಟ್ಟ ಹೆಣವಾಗಿದ್ದೆ
ನಿನ್ನ ಖುಷಿಗಾಗಿ

ಚಂದ್ರಕಲಾ ನೆಲೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x