ನಂಕ್ಯಾಕೋ….
ಬೆತ್ತಿಂಗ್ಳುನ ಕಂಡ್ರೇ ಭಯಾ ಆತೈತೆ
ಬಾಗ್ಲಾಕ್ಕಂಡು ಬುಡ್ಡೀದೀಪಾನ ಆರಿಸಿ
ಸುಮ್ಜೆ ಕೂಕಂತೀನಿ
ಗವ್ವನ್ನೋ ಕತ್ಲು ಮೈಮ್ಯಾಗೇ
ನಿಧಾನುಕ್ಕೆ ರೇಷ್ಮೇ ಹುಳ ತಲೆಯಾಡ್ಸಂಗೆ
ನಿನ್ನ ಗ್ಯಾಪ್ನದ ನೆನಪುಗಳು ಎದ್ದು ನಿಂತ್ಕಂತವೆ
ಗ್ವಾಡೇ ಮ್ಯಾಗೆ ನೀನೇ ಬಂದಂಗಾತು
ದಾಳಿಂಬೆ ಬೀಜದ ಸಾಲಿಟ್ಟಂಗೆ ನಗ್ತಿದ್ದೆ
ನನ್ನ ಮನುಸ್ನಾಗೆ ಒಲವಿನ ದೀಪ ಬೆಳುಗ್ತು
ನಂಕಾಗ ಗೊತ್ತಾತು ನಾನೂನು ಒಬ್ಮನ್ಸಾ ಅಂತಾ
ಗ್ವಾಡೇ ಮ್ಯಾಗೇ ಕೂಕಂಡು ನಗ್ತಾ ಇರೋಳ್ಗೇ
ನಡುಮನೆತಾಕ ಬಂದು ಆಸರಿಕೆ- ಬ್ಯಾಸರಿಕೆ
ಕಳಿಯಾಕೆ ಮನುಸಾಗ್ತಿಲ್ವಾ…
ನಂಕ್ಯಾಕೋ ಬೆಳಕೇ ಬ್ಯಾಡಾ ಅನ್ನುಸ್ಬುಟೈತೆ
ಬೆತ್ತಿಂಗ್ಳು ಮುನುಸ್ಕಂಡೈತೆ
ಕಣ್ಣಾಗೆ ಬೆಳಕೇ ಇಲ್ಲ
ಬೆತ್ತಿಂಗ್ಳು ನಂಕ್ಯಾಕೆ
ಮನಿಸ್ನಾಗೆ ಕನಸುಗಳೇ ಇಲ್ಲ
ಬುಡ್ಡೀ ದೀಪ ಮನೆಯಾಗ್ಯಾಕೆ
ವೋದ್ರೇ ವೋಗ್ಲೀ ಬಿಡು
ಕತ್ಲೇ ನಂಕೆ ಬೆತ್ತಿಂಗ್ಳು
ನಿನ್ನ ಗ್ಯಾಪ್ನಾನೇ ನಂಕೇ ಬುಡ್ಡೀದೀಪ
ಗ್ವಾಡೇನಾಗಾದ್ರೂ ನೀನಿದ್ದೀಯಲ್ಲ ಸಾಕು ಬಿಡು
ಮನ್ಸು ಮೈಲಿಗೆ ಆಗೋದೂ ಬ್ಯಾಡಾ
ನಾನೂನು ಕಣ್ತೆರೆಯೋದೂ ಬ್ಯಾಡಾ!
ಕತ್ಲೂ ಅಂದ್ರೇ ಅದೊಂಥರಾ ಧ್ಯಾನ
ಹೊಸಾ ಹೊಸಾ ಬದುಕು ಕೊಡೋ
ದಿವ್ಯವಾದ ಮೌನ;ಕತ್ಲಾಗೇ ಹಚ್ಬೇಕು
ಮನಸಿನಾಗೊಂದು ಪಿಳ್ಳೇರಾಯನ ದೀಪ
ಹಳ್ಳದ ದಡದಾಗೆ ನೀರು ಕೊರೆದು ಬೇರು
ಸಡ್ಲ ಮಾಡ್ಕಂಡು ನೀರಿಗೆ ನಮುಸ್ಕಾರ
ಹಾಕೋ ಮರದಂಗೆ ಯಾರೋ ತಂದಿದ್ದ
ಹಗ್ಗುಕ್ಕೆ ಕುತ್ಗೆ ಕೊಟ್ಟಿದ್ದೆ ನೀನು
ಭಯಪಟ್ಕಂಡೇ ದೂರ ಮಾಡ್ಕಂಡೆ ನಿನ್ನಾ
ಮುಗ್ಲುಗೇ ಮುತ್ತಿಕ್ಕಾಕೋಗಿ ಬೇಲಿನಾಗೆ ಬಿದ್ದೆ
ಕೆಳ್ಗೆ ಮುಳ್ಳು ಮ್ಯಾಗೇ ಉರಿಯೋ ಬಿಸ್ಲು
ಹೊಂಗೇ ಮರದಂಗೆ ಇರ್ಬೇಕಾದೋಳು
ಕಣ್ತೆರೆದ್ರೆ ಕನ್ಸು ಚೆಲ್ಲೋತವೆ
ಮನ್ಸು ಮುರ್ದೋತವೆ
ನಮ್ಮಿಬ್ರು ಮದ್ಯೆ ಕಟ್ಟಿರೋ ಈ
ಗ್ವಾಡೆನಾಗೇ ನಾನೂ ನೀನೂ ಮಾತಾಡಾನಾ
ಬೆತ್ತಿಂಗ್ಳು ರಾತ್ರೆನಾಗೆ ನೀನು ಮರೀದೆ ಬಾ
ನಾನೂನು ಬುಡ್ಡೀದೀಪ ಆರಿಸಿ
ದಾರಿ- ಬಟ್ಟೆ ಕಾಯ್ತಿರ್ತಿನಿ.
–ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ

ಎದೆಯ ಭಿತ್ತಿಯಲಿ
ಪ್ರೇಮದ ಜಾಹೀರಾತನ್ನು ನಿಷೇಧಿಸಲಾಗಿದೆ
ಅದು ಆರೋಗ್ಯಕ್ಕೆ ಹಾನಿಕಾರಕವಂತೆ !
ತುಟಿಗೆ ಮುತ್ತಿಡುತ್ತಿದ್ದ
ಸಿಗರೇಟನ್ನು ನಿಷೇಧಿಸಲಾಗುತ್ತಿದೆ
ಅದು ಶ್ವಾಸಕೋಶದೊಂದಿಗೆ ಭಾವನೆಗಳನ್ನು ಸುಡುವುದಂತೆ !
ಸಾರ್ವಜನಿಕ ಸ್ಥಳಗಳಲ್ಲಿ
ಅನುಚಿತ ವರ್ತನೆಯನ್ನು ನಿಷೇಧಿಸಲಾಗಿದೆ
ಪ್ರೇಮಿಗಳ ಉಪಟಳವನ್ನು ತಡೆಯುದಕ್ಕಂತೆ !
ನಾವು ನಿಂತಿರುವ ಪ್ಲಾಟ್ ಪಾರ್ಮಿನಲಿ
ಗುಟುಕಾ ಉಗುಳುವುದನ್ನು ನಿಷೇಧಿಸಲಾಗಿದೆ
ಅಲ್ಲಿ ಎಷ್ಟೋ ಅನಾಥರು ಮಲಗುವರಂತೆ !
–ನಿಂಗಪ್ಪ ಹುತಗಣ್ಣವರ

೧. ಶುದ್ಧ ಮನದಿ ಕರ್ಮ
ಉದ್ದ ಬಿದ್ದು ಅಡ್ಡ ಬಿದ್ದು ಹಣೆಹಣೆಯ ಬಡಿದುಕೊಂಡು
ಬದಲಾಯಿಸೆನ್ನ ಹಣೆಬರಹವೆಂದು ಹಲುಬಿದರಾದಿತೇ
ಬದ್ಧತೆಗೆ ಬಾಗಿ ಶುದ್ಧ ಮನದಿ ನಿಷ್ಠೆಯಲಿ ಕರ್ಮವ ಮಾಡಿದಡೆ
ಗೆದ್ದು ಬೀಗಲಾಗದೇ ಹಣೆಬರಹವ
೨. ದುಗುಡದೊಳು ಸೊಗ
ಹಗಲು ಇರುಳಿನ ಕಣ್ಣಾಮುಚ್ಚಾಲೆಯಲಿ
ಜಗದ ಜಂಜಡಗಳು ಬಂದು ಹೋಗುವವು
ದುಗುಡದೊಳಗೂ ಸೊಗವ ಸವಿಯಲು ಕಲಿಯೆ
ಸಗ್ಗವಿಹುದು ನಿನ್ನೊಳಗೇ ಸವಿದು ನೋಡಾ
೩. ಒದ್ದಾಡುವ ಮುನ್ನ
ಇದ್ದ ನಾಲ್ಕು ದಿನಗಳಲ್ಲಿ ಗದ್ದಲ ಮಾಡಿ
ಸುದ್ಧಿಗಾಗಿ ಸದ್ದು ಮಾಡಿ
ಬಿದ್ದು ಎದ್ದು ಒದ್ದಾಡುವ ಮುನ್ನ
ಗೆದ್ದು ಹೋಗೋ ಹೃದಯಗಳ
೪. ನೋಟು ತಿನ್ನಲಾದೀತೆ?
ಕಂತೆ ಕಂತೆ ನೋಟಿದ್ದರೇನು ಫಲ
ಸಂತಸವ ಅಂಗಡಿಯಲಿ ಕೊಂಡು ತರಲಾಗದು
ಚಿಂತೆ ತೊರೆದು ನೋಟು ಮರೆತು ಎದೆಯೊಲವ ಬಡಿಸೆ
ಸಂತಸವನೇ ಎಲ್ಲೆಡೆಯೂ ಕಾಣಬಹುದೋ
–ರಾಘವೇಂದ್ರ ಈ ಹೊರಬೈಲು

ಹಾಯ್ಕುಗಳು
- ಆಧ್ಯಾತ್ಮ ನಂಟು
ಸಮಚಿತ್ತ ಚಿಂತನೆ
ತೊಳೆದ ಮುತ್ತು
2. ಭಿನ್ನಾಭಿಪ್ರಾಯ
ಸಮ ಇರದ ತಳ
ಒಡಕಲು ಬಿಂಬ
3. ಯುಗಳ ಗೀತೆ
ಪ್ರೀತಿ ಪ್ರೇಮ ಪ್ರಣಯ
ವಸಂತ ಕಾಲ
4. ಹಳ್ಳದ ನೀರು
ಎತ್ತಿನ ಬಂಡಿ ಗಾಡಿ
ಹಳ್ಳಿ ಸೊಬಗು
5. ನವಿರು ಮಳೆ
ಗಾಳಿಯ ಕಚಗುಳಿ
ಬಳ್ಳಿ ಕುಣಿತ
–ರೇಣುಕಾ ಕೋಡಗುಂಟಿ.
