ಪಂಜು ಕಾವ್ಯಧಾರೆ

ಅಪ್ಪನು ಯಾಕೋ ಹಿಂದಿದ್ದಾರೆ!

ಅಮ್ಮ ಒಂಬತ್ತು ತಿಂಗಳು ಹೊತ್ತರೆ,
ಅಪ್ಪ ಇಪ್ಪತ್ತೈದು ವರ್ಷ ಹೊತ್ತರೂ,
ಯಾಕೋ ಅಪ್ಪ ಅಮ್ಮನಿಗಿಂತ ಹಿಂದಿದ್ದಾರೆ.
ಮನೆಯಲ್ಲಿ ವೇತನ ಪಡೆಯದೆ ಅಮ್ಮ,
ತನ್ನ ಸಂಪಾದನೆಯೆಲ್ಲ ಮನೆಗೆ
ಖರ್ಚು ಮಾಡುವ ಅಪ್ಪ.
ಇಬ್ಬರ ಶ್ರಮವೂ ಸಮಾನವಾದರು
ಅಪ್ಪ ಯಾಕೋ ಹಿಂದಿದ್ದಾರೆ.

ಏನು ಬೇಕೋ ಅದು ಪಾಕ ಮಾಡುವ ಅಮ್ಮ ,
ಏನು ಬೇಕೋ ಅದು ಕೊಡಿಸುವ ಅಪ್ಪ,
ಇಬ್ಬರ ಪ್ರೀತಿಯೂ ಸಮಾನವೆಯಾದರೂ
ಅಮ್ಮನಿಗೆ ಬಂದ ಹೆಸರಿಗಿಂತ
ಅಪ್ಪ ಯಾಕೋ ಹಿಂದಿದ್ದಾರೆ.

ಎದೆ ಮೇಲಿನ ಅಚ್ಚೆಯಲ್ಲಿ ಅಮ್ಮ,
ಎಡವಿ ಬಿದ್ದಾಗಲೂ ಅಮ್ಮಾ… ಎನ್ನುವ ನಮಗೆ,
ಏನಾದರೂ ಅವಶ್ಯಕತೆ ಇದ್ದಾಗ ಬಿಟ್ರೆ ನೆನಪಾಗದ ಅಪ್ಪ
ನೋವುಂಡರಾ.! ಏನೋ?
ಇಬ್ಬರೂ ಸಮಾನವೇ ಆದರೂ
ಮಕ್ಕಳ ಪ್ರೀತಿ ಪಡಿಯುವಲ್ಲಿ
ಅಪ್ಪ ಯಾಕೋ ಹಿಂದಿದ್ದಾರೆ?

ಅಮ್ಮನಿಗೆ, ನಮಗೆ ಕಪಾಟಿನ ತುಂಬಾ
ರಂಗುರಂಗಿನ ಸೀರೆ, ಬಟ್ಟೆಗಳು,
ಅಪ್ಪನಿಗೆ ಮಾತ್ರ ಕಿಟಕಿಯಂತಹ
ಬನಿಯನ್‌ ಗಳು ಮಾತ್ರ
ತಾನು ತನ್ನ ಬಗ್ಗೆ ನೋಡಿಕೊಳ್ಳದ ಅಪ್ಪ
ಯಾಕೋ ನಾವು ನೋಡದಷ್ಟು ಹಿಂದಿದ್ದಾರೆ.

ಅಮ್ಮನಿಗೆ ಅಷ್ಟೋ ಇಷ್ಟೋ ಬಂಗಾರದ ಆಭರಣ,
ಅಪ್ಪನಿಗೆ ಬಂಗಾರದ ಅಂಚಿನ ಪಂಚೆಯೊಂದೆ.
ಕುಟುಂಬಕ್ಕಾಗಿ ಎಷ್ಟೆಷ್ಟೋ ಮಾಡಿದರೂ,
ಸರಿಯಾದ ಹೆಸರು ಗಳಿಸುವಲ್ಲಿ
ಅಪ್ಪ ಯಾಕೋ ಹಿಂದಿದ್ದಾರೆ.

ಆಗಾಗ್ಗೆ ಮಕ್ಕಳ ಶಾಲಾ ಶುಲ್ಕ, ಖರ್ಚುಗಳಿವೆ.
ಈ ಸಲ ಹಬ್ಬಕ್ಕೆ ಸೀರೆ ಕೊಂಡ್ಕೋಬೇಡ ಅಂದಳು ಅಮ್ಮ,
ಇಷ್ಟವಾದ ಸಾಂಬಾರು ಮಕ್ಕಳು ತಿಂದು ಬಿಟ್ಟರೆ
ಆ ಹೊತ್ತಿಗೆ ಗೊಡ್ಡು ಖಾರದಲ್ಲಿ ಹಿಡಿಯನ್ನ ತಿನ್ನುವ ಅಪ್ಪ‌.
ಇಬ್ಬರ ಪ್ರೀತಿ ಸಮಾನವೇ ಆದರೂ
ನಮ್ಮಮ್ಮನಿಗಿಂತ ಅಪ್ಪ ತುಂಬಾ ಹಿಂದಿದ್ದಾರೆ.

ವಯಸ್ಸಾದ ಮೇಲೆ ಅಮ್ಮನಾದರೆ ಮನೆಗೆಲಸಕ್ಕೆ ಬರ್ತಾಳೆ,
ಅಪ್ಪನಾದರೆ ಏನೂ ಕೆಲಸಕ್ಕೂ ಬರಲ್ಲ ಎಂದು
ನಾವು ತೀರ್ಮಾನಿಸಿಕೊಂಡಾಗಲೂ ಹಿಂದಿದ್ದುದ್ದು ಅಪ್ಪನೇ.

ಅಪ್ಪನು ಈ ರೀತಿ ಹಿಂದಿರಲು ಕಾರಣ
ಅವರು ನಮಗೆಲ್ಲರಿಗೂ ಬೆನ್ನಾಗಿದ್ದಕ್ಕಾಗಿ,
ಬೆನ್ನ ಹಿಂದಿರುವುದರಿಂದಲೇ ಅಲ್ವೆ
ನಾವು ನೆಟ್ಟೆಗೆ ನಿಲ್ಲಲು ಸಾಧ್ಯ,
ಬಹುಶಃ ಇದೇಯೇನೋ ಅಪ್ಪನು ಹಿಂದಿರಲು ಕಾರಣ.!

ಎಂ.ಎಲ್.ನರಸಿಂಹಮೂರ್ತಿ


ಗಜ಼ಲ್

ಅಹಂನ ಆಕೃತಿ ಪುಟಿದದ್ದು ಅರಿವಿಗೆ ಬರಲೇ ಇಲ್ಲ
ಕಣ್ಣು ಮಂಜಾಗಿದ್ದು ಗೊತ್ತಾಗಲೇ ಇಲ್ಲ

ಇದ್ದ ಎಲ್ಲಾ ಶಕ್ತಿಯನ್ನು ಉಪಯೋಗಿಸಿದ್ದೆ
ಒಳಗಿದ್ದ ಅವನು ಜಿಗಿದದ್ದು ತಿಳಿಯಲೇ ಇಲ್ಲ

ತಂತ್ರಗಾರಿಕೆಯೇ ಎದುರಾಳಿಗಳ ಅಸ್ತ್ರವಿರಬಹುದು
ಮೇಧಾಶಕ್ತಿ ಕೆಲಸ ನಿರ್ವಹಿಸಲೇ ಇಲ್ಲ

ಸೌಂದರ್ಯದ ಮುಂದೆ ಸೌಜನ್ಯ ಮಂಡಿಯೂರುತ್ತದೆ
ಸೌಂದರ್ಯ ಬರೀ ಭ್ರಮೆಯೆಂದು ಅರಿಯಲೇ ಇಲ್ಲ

ಇರುವಿಕೆ ಎಂದರೆ ನನ್ನಿರುವಿನ ಭಾವವಲ್ಲ
ದೇಸು ಅಹಂಗೆ ಆಹಾರವಾದದ್ದು ಹೊಳೆಯಲೇ ಇಲ್ಲ

ದೇಸು ಆಲೂರು…


ತಟ್ಟಬೇಕಿದೆ ಚಪ್ಪಾಳೆ

ತಟ್ಟಬೇಕಿದೆ ಚಪ್ಪಾಳೆ
ಸಾವಿನ ದವಡೆಯಲ್ಲಿ ನಿಂತು
ಸಾವಿನ ಬಾವಿಗೆ ಬೀಳುವವರಿಗೆ
ಚಿಕಿತ್ಸೆ ಕೊಟ್ಟು ಧೈರ್ಯ ತುಂಬುವ
ಶುದ್ಧತೆಯ ಬಿಳಿ ವಸ್ತ್ರವನ್ನುಟ್ಟ
ಸೇವಾಮನೋಭಾವದ ಮನಸುಗಳಿಗೆ ||

ತಟ್ಟಬೇಕಿದೆ ಚಪ್ಪಾಳೆ
ಹಗಲಿರುಳು ಅವಿರತ ಶ್ರಮದಲಿ
ಹಲವು ಅಧ್ಯಯನ ಸಂಶೋಧನೆ
ಜಯ ವೈಫಲ್ಯಗಳ ನೋವುಂಡು
ಸಾವಿನ ವಿರುದ್ಧ ಅಸ್ತ್ರಗಳ ಸೃಷ್ಟಿಸುವ
ವಿಜ್ಞಾನದ ಸಂಶೋಧನ ಮನಸ್ಸುಗಳಿಗೆ ||

ತಟ್ಟಬೇಕಿದೆ ಚಪ್ಪಾಳೆ
ಸ್ವಚ್ಛತೆಯ ಸವಾಲನ್ನು ಸ್ವೀಕರಿಸಿ
ಸಾವಿನ ದೂತರನ್ನು ತೊಲಗಿಸಲು
ಕ್ರಮಗಳನ್ನು ಕೈಗೊಂಡು ಮಿಡಿದು ದುಡಿದು
ಸದಾಕಾಲ ಯುದ್ಧದಲ್ಲಿ ತೊಡಗುವ
ಸ್ವಚ್ಛತಾ ಸೈನ್ಯದ ಧೀರ ಮನಸ್ಸುಗಳಿಗೆ ||

ತಟ್ಟಬೇಕಿದೆ ಚಪ್ಪಾಳೆ
ಅರಿವಿಲ್ಲದವರಿಗೆ ಅರಿವು ನೀಡಿ
ಸಾವಿನ ರಾಕ್ಷಸನ ಸೂಚನೆಯ ನೀಡಿ
ಜಾತಿ-ಧರ್ಮ ವಿವಿಧತೆಯ ಗಡಿದಾಟಿ
ಮುನ್ನೆಚ್ಚರಿಕೆಯ ಮುಂಜಾಗ್ರತೆಯ
ಗಂಟೆ ಬಾರಿಸುವ ಕಪಟವಿಲ್ಲದ ಮನಸ್ಸುಗಳಿಗೆ ||

ವೆಂಕಟೇಶ ಚಾಗಿ


ಅನ್ವೇಷಣೆ

ಇಂದು ಎಲ್ಲೋ ಚೆಲ್ಲಿ ಹೋಗಿವೆ
ಮನದಲರಳಿದ ಭಾವ ಸುಮಗಳು|
ಮನನಂದನದ ಹೂವಾಡಗಿತ್ತಿಯೆ
ಸಿಕ್ಕಿದರೆ ನಿನಗೆ ನನಗೆ ತಿಳಿಸು||

ಇಂದು ಎಲ್ಲೋ ಚೆದುರಿ ಹೋಗಿವೆ
ಕದಡೊ ಕಲ್ಪನೆ ಕಾದಂಬಿನಿಗಳು|
ಮನದಾಗಸದ ಹೇಮ ಹಂಸಿನಿಯೆ
ಕಂಡರೆ ನಿನಗೆ ನನಗೆ ಅರುಹು||

ಇಂದು ಎಲ್ಲೋ ಕಳೆದು ಹೋಗಿವೆ
ಮಿಂಚುತಿರುವಾ ಬೆಳಕಿನಲೆಗಳು|
ಮನಸ್ಸಾಗರದ ದಿವ್ಯಮಣಿಯೇ
ದೊರೆತರೆ ನಿನಗೆ ನನಗೆ ಹೇಳು||


ಹಾರೈಕೆ

ಕೈಬೀಸಿ ಕರೆಯುತಿಹೆ ತಂಪೆದೆಯ ಮೋಡಗಳೆ
ಒಲವ ಫಸಲಿಗೆ ಸುಧೆಯ ಸುರಿಸಬನ್ನಿ|
ಬೇಗೆಯಡಗಿಹ ಮಣ್ಣಿನಾಂತರ್ಯದೊಳು ಅವಿತ
ಮಧುರ ಪರಿಮಳ ಸುತ್ತ ಹರಿಸಬನ್ನಿ||

ಒಳಗವಿತ ಅಜ್ಞಾತ ದಿಗಿಲುಗಳ ಸರಪಣಿಯ
ಬಂಧಗಳ ಕಡಿದೆಮ್ಮ ಬಿಡಿಸಬನ್ನಿ|
ಹೊಸ ದಿಗಂತದ ಕಡೆಗೆ ಸೇತುವೆಯ ನಿರ್ಮಿಸಲು
ಭಾವದೆಳೆಗಳ ನೂಲ ಹೊಸೆಯಬನ್ನಿ||

ಕರೆಯುತಿಹ ಈ ಮನದಿ ಸುಪ್ತವಾಗಿಹ ವಾಂಛೆ
ಪ್ರೇಮದೊರತೆಯ ಮತ್ತೆ ಒಸರಬನ್ನಿ|
ಅಕ್ಕರೆಯ ದೀಪವನು ಆದರದಿ ಬೆಳಗುತಲಿ
ಬೆಳಕಿನಾ ತೆರೆಯನ್ನು ಹರಡಬನ್ನಿ||

ವಸಂತ ಕುಲಕರ್ಣಿ


ನಿಂತು ಹೋದ ಕಾಲದಲಿ…

ರಸ್ತೆ ಅಂಚಿನಲ್ಲಿ
ಜೀವನ ಎಂದೊ ಕೊನೆಯಾಗುದಿಲ್ಲ….!
ಈ ದರಬೇಸಿ ಕನಸುಗಳಿಗೆ ನನಸಾಗುವ ಯಾವ ಭಾಗ್ಯವು ಇಲ್ಲ
ಆದರೂ
ಈ ಬಿಕನಾಸಿಯಿಂದ ದೇವರಿಗೊಂದು ಮನವಿ
ತಪ್ಪದೆ ಬರೆಯುತ್ತೇನೆ
ಅವನೋ
ಸ್ವಿಕರಿಸಿ, ಪುರಸ್ಕರಿಸಿ,
ಮಾರುತ್ತರವನ್ನು ಬರೆಯುತ್ತಾನೆ ಎಂದು ಕಾಯುತ್ತೇನೆ…
ಅವನೋ
ಕಸದ ಬುಟ್ಡಗೆ ಎಸೆಯಬಹುದು
ಇಲ್ಲಾ ಧೂಳು ತಿನ್ನುವ ಕಡತದೊಳಗೆ ಸೇರಿಸಿ ಬಿಡುತ್ತಾನೆ..?
ಯಾರಿಗೆ ಗೂತ್ತು…!

ಉಪ್ಪರಿಗೆ ಮೇಲೊಬ್ಬನು ನಗುವವನು
ನಾಲ್ಕು ಗೋಡೆಗೆ ವರ್ಗವಾದನೋ
ಅನುಮಾನ ನನಗೆ
ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿದ್ದರೂ
ಅನ್ನಕ್ಕೆ ಹೋರಾಟವೇ ಸಿಕ್ಕರೂ ,ಸಿಗದಿದ್ದಿರೂ
ಬೀದಿ ಹೆಣವಾದರೂ ಕೇಳುವವರಿಲ್ಲ…!

ನಿಂತು ಹೋಗದ ಕಾಲದಲ್ಲಿ
ಕಾಲಚಕ್ರದಲ್ಲಿ ಬದಲಾವಣೆಯಾದರೂ
ನಮ್ಮದೂ ಕೆಳಗೆಯೇ
ಸಮಾನತೆಯ ಗುಂಗಿನಲಿ ಗುಯಿಗುಡುವ
ಸಮಾಜಸೇವಕರು ನಮ್ಮ ಪಾಲಿಗೆ ಸೆಗಣಿ ಹುಳು

ಜಾತಿ ಪ್ರಚಾರದ ಬಲದಿಂದ
ನಾಯಕರಾದರೆ
ನಾವು ಮತ್ತೆ ದರಬೇಸಿ ,
ಬಿಕನಾಸಿ ಪಟ್ಟ ಪಡೆದು ಬೀದಿಗೆ ಬಿದ್ದ
ನತದೃಷ್ಟರು ದೇವರು ಲೆಕ್ಕದಲ್ಲಿಯೂ..!

ವೃಶ್ಚಿಕ ಮುನಿ.


ಹಾಯ್ಕು

ಬಕುಳ ಮಾಲೆ
ನಿನ್ನಯ ಕೊರಳಿಗೆ
ಅಂದವೋ ಕೃಷ್ಣ


ಹರಿವ ನದಿ
ಸಂಭ್ರಮ ನೊರೆಯ
ನೋಡುತ ಚೆಂದ


ಕೋಗಿಲೆ ಕೂಗು
ಜೊತೆಯಲಿ ನವ
ವಸಂತ ಮಾಸ


ಕಾಡ ಒಡಲು
ಮಳೆಯ ಸಿಂಚನಕ್ಕೆ
ಹಸಿರೇರಿತ್ತು


ತಂಗಾಳಿಯಲ್ಲಿ
ಹಕ್ಕಿಯ ಬೈಗು ಹಾಡು
ಇಂಪುಗೂಡಿತ್ತು


ಹರಿವನದಿ
ಸೇರಿತು ಸಮುದ್ರವ
ತನ್ನ ಪಥದಿ


ರಂಗುರಂಗಿನ
ಚಿತ್ತಾರ ಮೂಡಿಸಿದ
ಮೂಡಣ ರವಿ

ಮಾಧವಿ ಹೆಬ್ಬಾರ್,


ಕರೊನ ಮಾರಿ

ಕೊರೊನ ಎಂಬ ಮಾರಿ ಹುಟ್ಟಿ
ಜಗಕೆ ಚದುರಿದೆ
ಜನರು ಗುಂಪುಗೂಡಿ ಬೇಗ
ಸೋಂಕು ಹರಡಿದೆ

ಏನೆ ಮುಟ್ಟಿ ಕೈಯ ತೊಳೆಯೆ
ಮರೆಯಬಾರದು
ಮೊದಲೆ ಕಣ್ಣು ಮೂಗು ಬಾಯಿ
ಮುಟ್ಟಬಾರದು

ಮನೆಯ ಒಳಗೆ ಇದ್ದು ಬಿಡುವ
ರೋಗಬಾರದು
ಹೊರಗೆ ಹೋಗಿ ರೋಗತಂದು
ಹಂಚಬಾರದು

ತುತ್ತು ಬೇಡೊ ಜನರಿಗಿಂದು
ಕುತ್ತು ಬಂದಿದೆ
ತಿನ್ನೊ ಅನ್ನಕೂನು ಬರದ
ಸಮಯ ಕಾದಿದೆ.

ಕೂಲಿ ಜನರ ಬದುಕು ನೋಡಿ
ಪಾಠ ಕಲಿಯಿರಿ
ಬುದ್ಧಿ ಬಳಸಿ ಜೀವ ಉಳಿಸಿ
ಬದುಕಿ ಬದುಕಿಸಿ

ದೇವರಂತೆ ಸೇವೆ ಮಾಡು
ತಿಹರು ನೋಡಿರಿ
ಅರ್ಥ ಮಾಡಿಕೊಳ್ಳದೇನೆ
ಕಾಡ ಬೇಡಿರಿ

ಮನುಜ ಜನ್ಮ ದೊಡ್ಡದಣ್ಣ
ಅರಿತು ಬಾಳುವ
ಬದುಕಿ ಬದುಕ ಕಟ್ಟಲು ಅವ
ಕಾಶ ನೀಡುವ

ವೈಶಾಲಿ ಜಿ. ಆರ್


ಕಡಲೇಕೆ ಬತ್ತುವುದಿಲ್ಲ..?
ನೂರು ನದಿಗಳು ಬತ್ತಿದರೂ,
ದುಃಖದಲಿ ಸತ್ತರೂ….
ಕಡಲೇಕೆ ಬತ್ತುವುದಿಲ್ಲ…?!

ಬೇಕಾದರೇ ಉಬ್ಬೀತು..
ಭೋರ್ಗರೆದು, ಧರೆಯನ್ನೇ
ಬಾಚಿ ತಬ್ಬೀತು..
ದ್ವಾರಕೆಯ ತಬ್ಬಿದಂತೆ‌…

ಆದರೂ ಅದೊಮ್ಮೆಯು
ಕಡಲೇಕೆ ಬತ್ತುವುದಿಲ್ಲ…?

ಗಿರಿವನದಲಿ ಹುಟ್ಟಿ,
ಕಣಿವೆ ಬಯಲು ದಿನ್ನೆ ಮೆಟ್ಟಿ
ಗಮಿಸೊ ಗಾಮಿನಿ
ಶಕ್ತಿ ಪ್ರದಾಯಿನಿ…

ಬತ್ತಿ ಬಳಲುವಳು,
ಬಟ್ಟ ಬೇಸಿಗೆಯಲಿ
ಬಿಟ್ಟ ಬಟ್ಟೆ(ದಾರಿ)ಯಲಿ..
ಕಟ್ಟಿದ ಕಟ್ಟೆಯಲಿ..

ಆದರೆ ಕಡಲು ಒಡಲಿನಲಿ
ಎಲ್ಲವನು ಆಹ್ವಾನಿಸಿ,
ಸಕಲವನು ಆಪೋಷಿಸಿ
ಮೊರೆದು ಮೆರೆಯುವುದು..

ಎಲ್ಲವನು ಮರೆತು,
ಎಲ್ಲೆಯಲಿ ಬೆರೆತು,
ಬತ್ತದೇ, ಸತ್ತದೇ
ಮುತ್ತಾಗಿ ಮುಲುಗುವುದು….

ಹೌದು…ಆದರೇ…
ಕಡಲೇಕೆ ಬತ್ತುವುದಿಲ್ಲ…
ಸರೋಜ ಪ್ರಶಾಂತಸ್ವಾಮಿ


ಮಮತೆಯ ಮಡಿಲು

ಅಪ್ಪುಗೆಯಲ್ಲಿ
ಅಕ್ಕರೆಯಲ್ಲಿ
ಅಕ್ಷರವ ಕಳಿಸುವ
ಮೊದಲ ಗುರು ಅಮ್ಮ !!

ಬಿಕ್ಕಿ ಬಿಕ್ಕಿ ಅಳುವ
ಕಣ್ಗಳಿಗೆ
ಕಣ್ಣೀರು ಒರೆಸುವ
ಮಮತೆಯ ಮಡಿಲು ಅಮ್ಮ !!

ಕೈ ತುತ್ತು ತಿನಿಸಿ
ಸನ್ಮಾರ್ಗವ ತೋರಿಸಿ
ಉತ್ತಮನಾಗಿ ಮಾಡುವ
ಆದರ್ಶ ವ್ಯಕ್ತಿ ಅಮ್ಮ !!

ಸಂಕಷ್ಟದಲ್ಲೂ
ಸಂತಸವ ಕಂಡು
ಹೊಸ ಜೀವ ನೀಡುವ
ಸೃಷ್ಟಿ ರೂಪಿ ಅಮ್ಮ !!

ಕಣ್ಣು ಅರಿಯದಿದ್ದರು
ಕರುಳರಿಯುವ
ಕಣ್ಣಿಗೆ ಕಾಣಿಸುವ
ದೇವತೆ ಅಮ್ಮ !!

ನೂರಾರು ಪದಗಳ
ಸಾವಿರಾರು ಕನಸುಗಳ
ಭಾವನೆಗಳ ಬಳುವಳಿ
ಲೋಕ ಪೂಜಿತೆ ಅಮ್ಮ !!

ಕ. ಲ. ರಘು.


ಜೀವನ ರಸಾಯನ
ಎಷ್ಟು ಚೆನ್ನಾಗಿತ್ತು ಹಿಂದಿನ ಜನರ ಮನ
ಅವರ್ಣನೀಯ ಅವರ ಸುಂದರ ಜೀವನ.

ಶ್ರಮವಿತ್ತು,ದಯೆಯಿತ್ತು, ಮಾನವೀಯತೆಯ ಮೌಲ್ಯವಿತ್ತು
ಅಪ್ರತಿಮ ದೇಶಭಕ್ತಿಯು ಧಮನಿಯಲ್ಲಿ ತುಂಬಿತ್ತು
ಮುಂಜಾನೆ ಎದ್ದಾಗ ಮುಖದಲ್ಲಿ ಹೊಸ ಕಾಂತಿ ಇತ್ತು.

ಭೂತಾಯಿಯ ಸೇವೆಯಲಿ ಜಾನಪದ ಜಗತ್ತನ್ನೆ ಕಟ್ಟಿದರು
ಗೋಮಾತೆಯ ಸೇವೆಯಲಿ ಪುಣ್ಯ ಸಂಪಾದಿಸಿದರು
ತಿಳಿಯಿರಿ ಅವರೆಲ್ಲನಿಮ್ಮ ದೃಷ್ಟಿಯಲಿ ಅನಕ್ಷರಸ್ಥರು.
ಆದರೆ ಯೋಚಿಸಿ ಒಮ್ಮೆ ಅವರೆಂಥ ಪುಣ್ಯಾತ್ಮರು…

ಅಂದು ಬಣ್ಣ ಬಣ್ಣದ ಅರಿವೆಯ ಅರಿವು ಇರಲಿಲ್ಲ
ಐಷಾರಾಮಿ ಜೀವನದ ಮತ್ತೇರಲಿಲ್ಲ…
ನಗುವಿನ ಜೀವನವೇ ಅವರ ಪರಮ ಮಂತ್ರ
ಅವರಲ್ಲಿ ಇರಲಿಲ್ಲ ಯಾವುದೇ ಕುತಂತ್ರ

ಮೃಷ್ಠಾನ್ನ ಭೋಜನವು ಹಬ್ಬ ಹರಿದಿನದಂದು
ಹೊಸ ಹೊಸ ವಸ್ತುಗಳು ಜಾತ್ರೆಯಂದು
ಅನುದಿನವು ಶ್ರಮದಿಂದ ಸಂತಸದಿ ಮಿಂದು
ಬಾಳಿದಿರಿ ನಗು ನಗುತ ನೀವು ಅಂದು

ನಾವು ಅರಿಯಬೇಕು ಪ್ರೀತಿಯೇ ಪರಮ ಪಾವನ
ಒಲವಿನ ಜೀವನವೇ ಸಿಹಿ ರಸಾಯನ
ಇರಲಿ ಗುರು-ಹಿರಿಯರ ಮೇಲೆ ಮನದಲ್ಲಿ ನಮನ
ಧಮನಿಯಲಿ ತುಂಬಿರಲಿ ನಮ್ಮ ಸಂಸ್ಕೃತಿಯ ಸಿರಿತನ
ಕಟ್ಟೋಣ ಸುಂದರ ದೇಶವ ಒಂದಾಗಿ ಯುವ ಜನ ಮನ…

ಅನುಷಾ ಎಸ್. ವಂಡ್ಸೆ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
Ashfaq peerzade
4 years ago

ದೇಸು ಆಲೂರ, ವೃಶ್ಚಿಕ ಮುನಿ ಮುಂತಾದವರು ಈ ವಾರ ಉತ್ತಮ ಕವಿತೆಗಳನ್ನು ನೀಡಿದ್ದಾರೆ. ಇಲ್ಲಿನ ಎಲ್ಲ ಕವಿಗಳು ಅಭಿನಂದನಾರ್ಹರು.

ಹೆಚ್‌ ಎನ್‌ ಮಂಜುರಾಜ್
ಹೆಚ್‌ ಎನ್‌ ಮಂಜುರಾಜ್
4 years ago

ಕಡಲೇಕೆ ಬತ್ತುವುದಿಲ್ಲ ಕವಿತೆಯ ಸರೋಜರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

ಪ್ರಶ್ನಿಸುತಲೇ ಉತ್ತರಿಸುವ ಧಾಟಿ ನನಗಿಷ್ಟವಾಯಿತು. ಚಿಂತನೀಯ ಅಷ್ಟೇ ಭಾವಪ್ರಧಾಯನ ಮಾತ್ರವಲ್ಲ; ಕಡಲನರಸಿ ಹೋಗುವ ನದಿಯ ನಾದಯಾನ.

ಕೊನೆಯ ಸಾಲುಗಳು ಕವಿತೆಯ ಬಂಧವನ್ನು ಪೋಷಿಸಿದೆ; ಕೇಂದ್ರವನ್ನು ಕಾಣಿಸಿದೆ; ಒಂದು ಅರ್ಥಪೂರ್ಣ ರೂಪಕವನ್ನು ಕವಯಿತ್ರಿ ಪರಿಚಯಿಸಿ, ಪೋಷಿಸಿದ್ದಾರೆ. ಏನೆಲ್ಲಕೂ ಇದನು ನಾವು ಅನ್ವಯಿಸಿ ಆಸ್ವಾದಿಸಬಹುದು. ಬದುಕು, ಮಾನವತೆ, ದೇವರಕೃಪೆ, ನಿಸರ್ಗದ ನಟನೆ, ಪ್ರೇಮದುನ್ಮತ್ತತೆ, ಭೋರ್ಗರೆವ ಬಂಧುರತೆ ಏನೆಲ್ಲಕೂ……….

ಕಡಲೆಂಬುದು ಕಾವ್ಯದಲಿ ಕವಿಗಳಿಗೆ ಬತ್ತದ ಖಜಾನೆ. ನೂರು ಸಾವಿರ ಲಕ್ಷ ಕವಿಗಳು ಕಡಲನು ಧ್ಯಾನಿಸಿದ್ದಾರೆ. ಗೋಕಾಕರ ಸಮುದ್ರ ಗೀತಗಳಿಂದ ಹಿಡಿದು……..

ಆ ತುಂಬುಗಣಿಗೊಂದು ಮುತ್ತಾಗಿ ಈ ಕವಿತೆ ಹೊಸ ಸೇರ್ಪಡೆ. ಹೀಗೆ ಬರೆಯುತ್ತಿರಿ ಮೇಡಂ. ನನ್ನ ಆನಂದವನ್ನು ಹಂಚಿಕೊಂಡಿದ್ದೇನೆ. ನಮಸ್ಕಾರ.

2
0
Would love your thoughts, please comment.x
()
x