ಪಂಜು ಕಾವ್ಯಧಾರೆ

ಹೆದ್ದಾರಿ ಹೊದ್ದು ಮಲಗಿದವರು.

ಬೆವತ ಚಂದಮಾಮನಂತ ಮೊಗದಿಂದ
ಕಮಲೆಲೆಯಿಂದ ಜಾರುವ ಹನಿಯಂತೆ
ಬೆವರಹನಿಗಳು ಸಾಲುಗಟ್ಟಿವೆ.!
ಸಮನಾಂತರವಾಗಿ ಜೊಲ್ಲುರಸವೂ ತುಟಿಯಂಚಿಂದ
ಜೋಗದಂತೆ ಸುರಿದು ತಲೆದಿಂಬಾಗಿ
ಮಡಿಚಿಟ್ಟ ಮೆತ್ತನೆಯ ಅಮ್ಮನ ಸೀರೆ ಒದ್ದೆಯಾಗಿದೆ.!!

ಗುಡಾರವು ನಾಲ್ದೆಸೆಯ ಗೂಟಗಳಿಗೆ ಬಿಗಿದಪ್ಪಿಕೊಂಡಿದೆ.
ಬೀಸುವ ಗಾಳಿಯನ್ನು ನಿರ್ಭಂದಿಸಿ ಬೆರಗು ಮೂಡಿಸಿದೆ.!
ಅಮ್ಮ ಕಣ್ಣುಬ್ಬುಗಳಿಗೆ ಕೈಯಡ್ಡಿ ಗುಡಾರದ ದ್ವಾರದಲ್ಲಿ
ಸಿರಿವಂತರ ಸಿಂಗರಿಸಿ ಕಪಾಟಿನಲ್ಲಿಡುವ
ಅಲಂಕಾರದ ವಸ್ತುಗಳ ಮಾರಾಟ ಮಾಡುತ್ತಿದ್ದಾಳೆ.!!

ಅದು ರಾಜಪಥ ಇಬ್ಬದಿಯುದ್ದಕ್ಕೂ ಸುಂದರ ಮರಗಳ ಸಾಲು,
ಪ್ರತಿ ಕ್ಷಣವೂ ರಾಜಾರಥಗಳ ಪಯಣ ನೋಡಲು ಇಕ್ಕಣ್ಣುಗಳು ಸಾಲವು,
ಬಿಕ್ಕಳಿಸಿ ಮಗುವೆಲ್ಲಿ ರಥಚಕ್ರದಡಿ ದೃಷ್ಟಿ ನಿಂಬೆಯಾಗುವುದೋ? !
ಭೀತಿಯಲ್ಲೇ ಹಸಿದ ಕಂದನಿಗೆ ವಸಿ ಬನ್ನು ತಿನ್ನಿಸಿ
ಗುಡಾರದೊಳಗೆ ಮಲಗಿಸಿದಳು ತಾಯಿ.!!

ಬದುಕಿನ ಬಟ್ಟೆ ಸುಗಮವಾಗುತ್ತಿದೆ, ಸುಧಾರಿಸುತ್ತಿದೆ.
ಕಂದನ ಸುಂದರ ಮುಖ ನೋಡಿ ನೋವನ್ನು ಮರೆತು.!
ರಾಜಪಥವು ಮತ್ತಷ್ಟು ಸುಂದರಗೊಳ್ಳಲು ರಾಜಾಜ್ಞೆ ಅನುಸರಿಸಿತು.
ಇಕ್ಕೆಲಗಳಲ್ಲಿ ವೃಕ್ಷರಾಶಿ ಮಣ್ಣು ಮುಕ್ಕಿತು.
ಮಗುವಾಡುತ್ತಿದ್ದ ಹೆಮ್ಮರದ ನೆರಳು ನೆನಪಿನ ಗಂಟಿಗೆ ಸೇರಿತು.
ರಾಜಪಥವು ಧೂಳಿನ ದೊರೆಯ ದಬ್ಬಾಳಿಕೆ ಶುರು ಮಾಡಿತು.!!

ಕಾಮಗಾರಿಯ ಹೊಣೆಹೊತ್ತವ ಒಂದು ದಿನ ಗಡುವು ನೀಡಿ,
ಗುಡಾರದ ಸ್ಥಾನಪಲ್ಲಟಕ್ಕೆ ಆಜ್ಞಾಪಿಸಿದ.!
ಕಂಗೆಟ್ಟು ಮೋರಿಯೊಂದರಾಚೆ ಮರುಕಟ್ಟಿದ ಗುಡಾರವು
ದಿನನಿತ್ಯ ಸವಾಲುಗಳ ಸರಸವಾಡಿತು.!!

ದಣಿವಾರದ ದಾಹ ಬಿರುಬಿಸಿಲಿನ ಹೊಡೆತ
ಗುಡಾರದೊಳಗೆ ಬೇಗುದಿ, ಬೀದಿಗೂ ಬರಲಾಗದ ಋತುವಿನ ಋಣಭಾರ.!
ದಿಢೀರನೆ ಗುಡುಗು ಮಲಗಿದ ಮಗುವಿನ ಚೀರಾಟ,
ತೆರೆದಿಟ್ಟ ಸಾಮಗ್ರಿ ಬಚ್ಚಿಡುವ ವೇಳೆಯೊಳಗೆ ಬಿರುಗಾಳಿಗೆ ಹಾರಿತು!!
ಚೀರಾಡುವ ಮಗುವಿನ ಮೇಲೆ ಬಿಡಾರದ ಕಂಬ ಬಿದ್ದಿತು,
ಬದುಕ ಬಟ್ಟೆಯ ಬಿಟ್ಟು ಮಗುವನ್ನು ಎತ್ತಿ ಬಟ್ಟೆಯಲ್ಲಿ ಸುತ್ತಿ ಬಿಗಿದಬ್ಬಿಕೊಂಡಿತು ತಾಯಿ.!!

ಹಾರಿದವು ಹಕ್ಕಿಗಳಂತೆ ಗಗನೆತ್ತರಕೆ ಬಿತ್ತಾರಗೊಳ್ಳುತ್ತಾ
ರಸ್ತೆ ಬದಿಯ ಪ್ಲಾಸ್ಟೀಕ್ ಚೀಲಗಳು, ಬಟ್ಟೆ ತುಂಡುಗಳು.!
ಅಮ್ಮ ಹುಡುಕಿದಳು ಇಲ್ಲದ ಮರದ ಬುಡವನು.
ಬೃಹತ್ ಕಟ್ಟಡದ ಸುತ್ತಲೂ ಮುಳ್ಳಿನ ಬೇಲಿ ಜೊತೆಗೊಂದಷ್ಟು ಕಾವುಲಗಾರರು.
ಅಂಗಲಾಚಿ ಪ್ರವೇಶಿಸಿದಳು ಮಳೆ ನಿಲ್ಲುವವರೆಗೂ
ಆ ರೋಮಾಂಚನ ಕಟ್ಟಡದ ಕವಲುಕಂಬದ ಆಶ್ರಯ ಪಡೆಯಲು.!!

ಕುಡಿದು ಅಮಲಿನಲ್ಲಿ ಮಲಗಿದ್ದ ಅಪ್ಪನಿಗೆ ಬಿರುಗಾಳಿ ಚಿವಟಿ ಎಬ್ಬಿಸಿತು
ಮಳೆಹನಿಗಳಿಂದಾಗಿ ಮಂಪರ್ ಕಳಚಿ ಮುಖವು ತೊಳೆದವು.!
ಹಾರಿದ ಬಿಡಾರದ ಬಟ್ಟೆಯೊಳಗೆ ಸುತ್ತಿ ಮಲಗಿದ್ದವನು
ಮೆಲ್ಲನೇ ಏನಾಯಿತು? ಎಲ್ಲಿ ನನ್ನ ಮನೆ?
ಶುರು ಮಾಡಿದ ಹುಡುಕಾಟ ಕೊಚ್ಚಿ ಹೋದ ಮಳೆ ನೀರಿನಲ್ಲಿ
ನನದೊಂದು ನೋಟು ಮಾಯವಾಯಿತೆಂದು.!!

-ಎಂ.ಎಲ್.ನರಸಿಂಹಮೂರ್ತಿ


ಏಪ್ರಿಲ್ ಮಧ್ಯಾಹ್ನ

ಏಪ್ರಿಲ್ ಮಧ್ಯಾಹ್ನದ
ಬಿರು ಬಿಸಿಲು ಇಳೆಯನಪ್ಪಿದೆ
ಬಿಸಿಲುಗುದುರೆಯನ್ಹಾರಿಸುತಾ

ದಿಗ್ಬಂಧನದಲಿ ಬಂಧಿಯಾದ
ಮನಸು ಸ್ವಚ್ಛಂದ ಸ್ವೈರಿಸಿದೆ
ಬೀದಿ, ಬಜಾರು;
ಹರಿದತ್ತ ಗರುಡ-ನೆರಳು

ಸದ್ದಿಲ್ಲದ ಸೂರು-
ತಾರಸಿಗಳಲಿ ಗುಬ್ಬಿಗಳು
ಕಿವ್ಚಿವ್ ಕೂಗುಟ್ಟಿವೆ

ಧಗೆಯೇ ತನ್ನ ದೌಲತ್ತೆಂದು
ಬೀಗುವ ಬಿಸಿಲು
ಬಾನಿಗೆ ಬೆಂಕಿ ಇಟ್ಟು ಭೂಂಗುಟ್ಟಿದೆ

ಮಲಗೆದ್ದ ಕೂಸಿನ ಹಣೆ ತುಂಬ ಬೆವರು ;
ಉರಿಸದ ಒಲೆಯೊಳಗೆ
ಬೆಕ್ಕು ಉಚ್ಚೆ ಉಯಿತೇ ?

ಮಡದಿಯ ಕಂಕಳಲಿ
ಸ್ವೇದದ ವೇದನೆ
ಅಜ್ಜಿ ಕನಸಲಿ ಯುಗವೊಂದು
ಅಳಿದಂತೆ

ಹತ್ತಿರವಿದ್ದರೂ
ದೂರ -ಭಾವ ಎದೆಗಳಲಿ
ರೀಲು ಬಿಡುವ ನ್ಯೂಸ್ ಚಾನೆಲ್ಲು
ಗಳ ಪಿಟಿ ಪಿಟಿ ಲಗ್ಗೆ

ತೆಳುವಾದ ಮೋಡ
ಸೂರ್ಯನನು ಆಲಂಗಿಸಿ ಗರ್ಭ ಕಟ್ಟಿತೇ ?
ಮಂಕಾದ ಮರದೆಲೆಗಳ ನಡುವೆ
ಕೋಗಿಲೆಯ ಪಿಸು ದನಿ

ಜೀಗುಡುವ ಈ ಹೊತ್ತಿನ ಅನುಭವಕೆ
ಕವಿ ಹೃದಯ ಚಿಮ್ಮಿತೇ ?
ಬಿಸಿಲು; ಧಗೆಗೂ ಕವನ ಗೀಚುವ
ಪ್ರಣಯ ಚೋರನವನು
ಕವಿಯಲ್ಲಿ ? ಕವಿ
ಎನ್ಟಿ


ಒಂದು ಮುದುಕಿಯ ಮೂಕಗಾನ

ಜಗತ್ತೇ ಹೊದ್ದುಕೊಂಡು ಮಲಗಿದೆ
ಕಣ್ಣ ತೆರೆದುಕೊಂಡು ಉಸಿರ ಬಿಗಿ ಹಿಡಿದುಕೊಂಡು
ತನ್ನೊಳಗಿನ ಗಲ್ಲಿಗಲ್ಲಿಗಳಲ್ಲಿನ
ಮೌನವನೂ ಸಹ ಅದುಮಿಕೊಂಡು
ಮಲಗಿದೆ…
ಮಲಗಿದಂತೆ ನಲುಗಿದೆ…

ಆ ಮುದುಕಿಗಿದರ ಯಾವ ಪರಿವೆಯೇ ಇಲ್ಲ
ಬೆಳಗಾದರೆ ಸಾಕು ನೆಲ ಸಾರಿಸುತ್ತಾಳೆ
ಮಧ್ಯಾಹ್ನ ಮುಗಿಲ ನೋಡಿ ಗಂಜಿ ಕಾಸಿ
ಸಂಜೆಗೊಂದಿಷ್ಟು ಚಾ ಚೂಡಾ ಬಾಯಾಡಿಸಿ
ರಾತ್ರಿಯ ಗಂಜಿಗೆ ಅಣಿಯಾಗುತ್ತಾಳೆ
ಜಗತ್ತಿನ ವಿದ್ಯಮಾನಗಳ ಸುಳಿಗವಳ ಸುಳಿವೇ ಇಲ್ಲ
ಎಲ್ಲದರ ನಡುವೆ ಅವಳದು ಮೂಕಗಾನ

ಹಬ್ಬಕ್ಕೆಂದು ಮೊನ್ನೆ ಮಗ ಸೊಸೆ ಬಂದಾಗ
ಎದೆಯ ಮೋಡ ಕರಗಿ ಮಳೆಯಾಗಿತ್ತು
ಹಡೆದ ಕರುಳಿನ ತುದಿಗೆ ಮಮತೆ ಹೂವರಳಿ
ಮುತ್ತನೀವಳ ಸುಖಕೆ ಸೊರಗಿ ಮುದುಡಿತ್ತು
ನವಮಾಸದ ನಿದ್ದೆಯ ಸೇಡು ಮುದುಕಿಗೆ
ವನವಾಸವ ತಂದೊಡ್ಡಿತೇ ಎಂದು
ಜಗತ್ತು ಮಲಗಿದೆ..
ಮಲಗಿದಂತೆ ನಲುಗಿದೆ..

ಈಗ ಮುದುಕಿಗೆ ಅವ್ಯಕ್ತ ಭಯ
ಮಗ ಸೊಸೆ ಬಂದಾಗ ಕರೆಯಲಿಲ್ಲ
ಕೊಟ್ಟ ಮಗಳು ಕುಲದ ಹೊರಗೆ
ಗಂಜಿ ಖಾಲಿಯಾಗುತ್ತ ಬರುತ್ತಿದೆ
ಬದುಕಿನ ಬೇರುಗಳು ಸಡಿಲಗೊಂಡು
ನೆಲಕ್ಕುರುಳುವ ಕನಸಿನೊಳಗೊಮ್ಮೊಮ್ಮೆ
ಬೆಚ್ಚಿ ಬೀಳುತ್ತಾಳೆ
ಹೊರಗೆ ಜಗತ್ತು ಮಲಗಿದೆ
ಮಲಗಿದಂತೆ ನಲುಗಿದೆ

ಮುದುಕಿಗೆ ಈಗ ಅರಿವಾಗಿದೆ
ಮೂಕಗಾನಕೆ ಕಿವಿಗಳಗೊದಗುವುದಿಲ್ಲ
ಭಾವಗಳು ಕುಣಿಯುವುದಿಲ್ಲ
ಮನಸುಗಳು ತಣಿಯುವುದಿಲ್ಲ
ಜಗತ್ತು ಮಲಗಿರುವಾಗ
ಮಲಗಿದಂತೆ ನಲುಗಿರುವಾಗ..

-ಸಚಿನ್‌ಕುಮಾರ ಬ.ಹಿರೇಮಠ(ರನ್ನ ಕಂದ)


..

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

1 Comment
Oldest
Newest Most Voted
Inline Feedbacks
View all comments
ನೂರುಲ್ಲಾ ತ್ಯಾಮಗೊಂಡ್ಲು
ನೂರುಲ್ಲಾ ತ್ಯಾಮಗೊಂಡ್ಲು
4 years ago

ಕವನ ಪ್ರಕಟನೆ ಮಾಡಿದ ಸಂಪಾದಕರಿಗೆ ತುಂಬ ಧನ್ಯವಾದಗಳು.
-ಎನ್ಟಿ

1
0
Would love your thoughts, please comment.x
()
x