ನಕ್ಷತ್ರಗಳೆಂದರಿಷ್ಟ
ಹೊಸ್ತಿಲು ದಾಟಿ
ಬಂದಂತೆ ಕಂಡದ್ದು
ಅರ್ಧಚಂದ್ರ ಚೆಲ್ಲಿದ
ಮುದ್ದು ಬೆಳದಿಂಗಳು.
ಹೊನಲಿನಲ್ಲಿ ಗೋಚರವಾಗಿ
ಹಗಲಲ್ಲಿ ಕಣ್ಮರೆಯಾಗುವ
ದಿಗಂತದ ಪರದೆಯಲ್ಲಿ
ಬೆಚ್ಚಿ ಬೀಳಿಸುವ
ಶಶಿಯ ಇಂದ್ರಜಾಲ.
ನಭೋಮಂಡಲವೇ
ರಾತ್ರೋರಾತ್ರಿ ಬೆತ್ತಲಾದಾಗ
ನಕ್ಷತ್ರಗಳು ಜಿನುಗುತ್ತವೆ.
ಬರಿಗಣ್ಣಿಗೆ ನಂಬಲಾರದಷ್ಟು
ಹೆಸರಿಲ್ಲದ ತಾರಾ ಪುಂಜಗಳು
ಮೋಡಿಗಾರನ ಕೈಯ ಅಂಕುಶದ
ಮಾಯಾಜಾಲದೊಳಗೆ.
ಯಾರೋ ದೇವಕನ್ನೆ
ರಾತ್ರಿ ಆಕಾಶದಲ್ಲಿ
ಜೋಡಿಸದೇ ಹಾಗೇ ಬಿಟ್ಟ
ರಂಗೋಲಿ ಚುಕ್ಕಿಯಂತೆ ನೀವು.
ನಗರದಾಚೆ ಗಲ್ಲಿಯಲ್ಲಿ
ಮಲಗದೇ ಹಠ ಹಿಡಿದು
ಅಳುತ್ತಿರುವ ಕಂದಮ್ಮನ
ಕಣ್ಣಿಗೆ ನೀವೆಲ್ಲಾ
ಹೊಳೆಯುವ ಆಟಿಕೆಗಳು.
ಕಂಡಾಗಲೆಲ್ಲಾ ನಿನ್ನದೇ
ಪ್ರತಿಬಿಂಬ ನನ್ನ ಕಣ್ಣ
ಕಪ್ಪಿನೊಳಗೆ
ನೀನೇ ನನ್ನೊಳಗೆ
ಬಂದಿಳಿದಂತೆ.
ಸ್ವಪ್ನವಂತ ಕಂಡ
ಹಸಿ ಸ್ವಪ್ನದಲ್ಲಿ ನಿಮ್ಮ ಕಂಡು
ಆಸೆಯಿಂದ ಆಕಾಶಕ್ಕೆ
ಏಣಿ ಇಟ್ಟನಂತೆ.
ನಿದ್ದೆ ಮಂಪರಿನಲ್ಲಿದ್ದಾಗ
ಬಂದು ಕನಸುಗಳ
ಬಿತ್ತಿ ಹೋಗುವ
ಮಿನುಗುವ ಮಾಯಾವಿ
ನಕ್ಷತ್ರಗಳೆಂದರಿಷ್ಟ……
ಯಿಂದ,
-ಅಭಿಷೇಕ್ ಪೈ ಕಾಜ್ರಳ್ಳಿ
ತಲ್ಲಣಿಸುತಿದೆ ಮನವು
ನನ್ನ ತಾಯಿಯ ಮಡಿಲನ್ನು ನಿರ್ಭದ್ರಗೊಳಿಸುತ್ತಾ
ಒಂದು ಹನಿ ನೀರಿಗೆ, ಎರಡು ದಿನದ ಆಸೆಗೆ
ಭೂ ಮಡಿಲಿಗೆ ಆರೆಗೋಲಾಕುತ್ತಾ
ಮಕ್ಕಳ ಬಲಿಯಾಗುವುದ ಕಂಡು.
ಹಾದಿ ಬೀದಿಗೀಗ ಬೋರುವೆಲ್ಲು
ತಿಳಿದಿಹರು ತಾವೆಲ್ಲ 'ವೆಲ್'ಲು
ಕೊನೆಗೆಲ್ಲರಿಗು ಸೋಲು
ಸೋಲೆಂದರೆ ಸಾವಿನ ಸಾಲು.
ಒಡಲಲ್ಲಿ ನೀರಿಲ್ಲ
ಉಕ್ಕುವ ಆಸೆ ಗಂಗೆಗಿಲ್ಲ
ಬತ್ತಿ ಹೋಗಿದೆ ನೆಲವು
ಭರ್ತಿಯಾಗಬೇಕಿದೆ ಕೊಳವೆಬಾವಿಗಳ ಜಾಗವು
ಕೊನೆಗೆ ಮೇಲಿರುವುದೆಲ್ಲ ಒಳಗೆ
ಒಳಗಿರುದೆಲ್ಲ ಮೇಲೆ
ಅಂತು ಒಟ್ಟಿಗೆಲ್ಲರ ಸಾವು-ನೋವು.
ಹಿಂದೆ ಹೀಗಿರಲಿಲ್ಲ
ನೆನಪಿಡಿ ನಾವಿನ್ನು
ಕೊಡಬೇಕಿದೆ ಈ ಭೂಮಿಯನು ಮುಂದಿನ ಪೀಳಿಗೆಗೆ
ಇನ್ನೂ ಅವಕಾಶವಿದೆ
ಒಮ್ಮೆ ಆಲೋಚಿಸಿ
ನಮ್ಮೆಲ್ಲರ ಜೀವ ಉಳಿಸಿ.
-ಪುನೀತ್ ಕುಮಾರ್ ವಿ ಹೆಚ್
ದೇವ ಗಗನದ ಚೆಲುವ ಸೊನ್ದಿಂಗಳು..
ಚೆಲುವ ಸೋನೆಯು ಸುಯ್ಯುವ ಹಾಲ್ದಿಂಗಳು
ಮಿಂಚು-ಮಿನುಗುವ ಮಿಂಚು ಹುಳುಗಳ ಕಂಗಳು
ಧೂಪ ವೃಕ್ಷದಲಿ ಉದಯಿಸಿದ ಚಿಟ್ಟೆ
ಆಲದ ರಸಪಾನದೊಳಗೆ ಮುದುಡಿದ ರೆಕ್ಕೆ ಬಟ್ಟೆ
ಪೂರ್ವದಿಸೆಯೆಲ್ಲ ಕ್ಷೀರ ಅಮೃತ ಮಳೆಯಲಿ ತೋಯ್ದು
ಅಪೂರ್ವ ಅಂಗಳದಲಿ ಕರಿನೆರಳ ಸ್ನೇಹವ ಮಿಯ್ದು
ಜಿಂಕೆ-ಕಡವೆಗಳ ಚಿತ್ತಾರ ಕಾಂತಿ
ಕಾನನ ರಾಜಿಗಳ ನಿರ್ಮಲ ಶಾಂತಿ
ನಿತ್ಯ ಕೊಡಸಿಗೆ ಹೂವುಗಳನಗುವಲಿಕತ್ತಲ ಮೌನಯಾನ
ಬೆಳ್ದಿಂಗಳಿನ ಕಿಟ್ಟಗನಹಕ್ಕಿಯ ಸುಇಂಪು ಗಾನ
ಪ್ರೇಮಾ ನೀಲಿ ಕಡಲಲಿ ನಕ್ಷತ್ರ ಪುಂಜಗಳ ಬಿಗುಮಾನ
ನೀಹಾರಿಕೆಗಳ ತಿಳಿ ಗೋಚರದಿ ಪ್ರಕಾಶಮಾನ
ಇರುಳುವಾಕ್ಕಿ ಅಮರ ಆತ್ಮ ಸಂಚಲನ
ಬಾವಲಿ-ಬಿಳಿನಾರಾಯಾಣಿಗಳ ಜೋಗುಳ ಧ್ಯಾನ
ತಪ್ಪಲಿನ ಕಣಿವೆಗಳ ಮೇಲೆ ಶಶಾಂಕನ ಕಿರಣ
ನಿಶೆಯ ವಸುಂಧರೆಗೆ ಅದು ನವೀನ ಆಭರಣ
ಮುಂಜಾನೆತುಂಬಿದ ನೀರ್ರಗಾಗೆ ಹಾರಾಟವ ವೈಭಾವಿಕ ವರ್ಣ
ಹಸಿರು ಬೆಳಗುವ ಹೆಮ್ಮಾರಗಳ ಕಾಂತ ಸುವರ್ಣ
ಬೆಳ್ಳಿ ಮೇಘಗಳ ಕಾವಳಸಂಮೀಳನ ಕಾಡುವ ಕಡಲಿನ ಛಾಯೆ
ದೇವ ಗಗನದಿ ಸುಯ್ಯುವ ಅಮರ ಬೆಳ್ದಿಂಗಳ ಇಳೆಗೆಇಳಿದು ಮಾರೆಯಾದ ಮಾಯೆ..!
-ಸಿಪಿಲೆ ನಂದಿನಿ
ಭಾವಗಳು ಬದಲಾಗಬಲ್ಲವೇ?
ಅಮ್ಮ ಹೇಳುತ್ತಾಳೆ…
ನಮ್ಮಂತಲ್ಲ ಬಿಡಿ ನಿಮಗೆ
ನೀವುಗಳೆಲ್ಲಾ ಸಾವಿರ ಪಾಲು
ನಮ್ಮಿಂದ ಮೇಲು.
ಹೌದೇ..? ಉತ್ತರಕ್ಕಾಗಿ ತಡಕಾಡುವಾಗ
ಅರೇ..! ಅವಳಮ್ಮ ಇದೇ ಮಾತಿಂದ
ಅವಳ ಕಿವಿಯ ತೂತು ಕೊರೆದಿರಬಹುದೇ?
ಇರಲಿ. ಕೆದಕುತ್ತಾ ಹೋದರೆ ಇರುವ
ಅರ್ಧ ಸುಖವೂ ಅರ್ಥ ಹುಡುಕುವುದರಲ್ಲೇ
ಸವೆದು ಹೋದೀತು.
ಎಲ್ಲವೂ ಬದಲಾಗಿದೆ ಈಗ
ಮೊದಲಿನಂತೆ ಅಲ್ಲವೇ ಅಲ್ಲ ಅಂತ
ಸಂಧರ್ಭ ಸಿಕ್ಕಾಗಲೆಲ್ಲಾ ಬಡಾಯಿಕೊಚ್ಚಿಕೊಳ್ಳುವುದು
ಮುಂದಿನ ತಲೆಮಾರಿಗೆ ಅದನ್ನು
ಬರಿದೇ ರವಾನಿಸುವುದು.ಎಲ್ಲವೂ ಬರೀ
ಬೊಗಳೆ ಅಂತ ಯಾರಿಗೂ ತಿಳಿಯದೇನಲ್ಲ.
ಸುಖಾ ಸುಮ್ಮಗಿನ ಈ ಹಳಹಳಿಕೆ
ವೃಥಾ ನಿಂತು ಹರಿದು ಬಂದ ದಂತಕತೆಗೆ
ಅಪಚಾರವಾಗಬಾರದಲ್ಲ?
ಅದುಮಿಟ್ಟ ಕಣ್ಣೀರ ಕಟ್ಟೆ
ಈರುಳ್ಳಿ ಸಿಪ್ಪೆ ಬಿಡಿಸಿದ್ದೇ ತಡ
ಮೇರೆ ಮೀರಿ ಹರಿಯುವುದು
ಮೆಣಸಿನ ಘಾಟಿಗೆ ಇನ್ನಿಲ್ಲದಂತೆ ಅಕ್ಷಿ ಹೊರಟು
ಒಳಗಿನ ಖಾರವನ್ನೆಲ್ಲಾ ದಬ್ಬಿ ಹೊರಹಾಕುವುದು
ಏದುಸಿರು ಬಿಡುತ್ತಾ ಒಗ್ಗರಣೆಯ ಬೇವಿಗೆ
ಹಿತ್ತಲಿಗೆ ಓಡಿ ಕಣ್ಣು ಮೂಗೊರೆಸಿಕೊಳ್ಳುವುದು.
..ಹೀಗೇ ಮತ್ತೊಂದು ಪ್ರಸಂಗಕ್ಕೆ
ಅಣಿಯಾಗುವ ನಿತ್ಯ ನಿರಂತರ ಗಾಥೆ
ಕಾಲ ಕಾಲಕ್ಕೂ ಹಿಂದೆಯೇ ಒಲಿದು
ಬರುವ ಗೀತೆ ಹಳತಾದರೂ
ಹಳಸಲಾಗಲಿಲ್ಲ.
ಹೆಣ್ಣೆಂಬ ಗಾದಿ ಸಿಕ್ಕಾಗ ಅದಕ್ಕೆ
ಆತುಕೊಂಡು ನಾದಿಕೊಂಡೇ
ಬರುವ ಬೇಗುದಿ
ಒಳಗೆ ಹಬೆಯಾಡುತ್ತಲೇ ತಣ್ಣಗೆ ಸುಡುವ ಒಳಕುದಿ
ಇದು ಯಾರಿಗೂ ಕಾಣಬಾರದು.ಕಾಣಗೊಡಲೂ ಬಾರದು.
ಸೀತೆ ದ್ರೌಪದಿ ಮಂಡೋದರಿಯಾಗಿ
ನಮ್ಮ ಕರುಳ ಬಳ್ಳಿಯ ತಂತುಗಳೆಲ್ಲಾ
ಉಂಡ ವ್ಯsಥೆ
ಕತೆಯಾಗಿ ತೇಲುವಾಗ ಮನಸ್ಸುಗಳು
ಆರ್ಧಗೊಳ್ಳುತ್ತಿವೆ.
ಇಲ್ಲಿ ಅದೇ ಸುಡುವ ನೋವುಗಳು
ಪದ ಸಾಲಿನೊಳಗೆ ಮುದುಡಿಕ್ಕೊಂಡು
ಬಿಕ್ಕಳಿಸುವಾಗ ಸುಲಭದಲ್ಲಿ ಅರ್ಥಕ್ಕೆ
ದಕ್ಕುವುದಿಲ್ಲ ಕವಿತೆ.
ಕಾಲ ಬದಲಾಗಿದೆ. ಭಾವಗಳು ಬದಲಾಗ
ಬಲ್ಲವೇ..? ಇದು ಪ್ರಶ್ನೆ.
-ಸ್ಮಿತಾ ಅಮೃತರಾಜ್
ಪಾದಗಳು ಚುರ್ರೆಂದು…
ಪಾದಗಳು ಚುರ್ರೆಂದು
ಕರುಳು ಕಿವುಚಿ
ಬಡತನದ ಕರಿನೆರಳ ಹಾದಿಯಲಿ
ನೀರಿಲ್ಲದೆ ಹಸಿವಿನ ಬಿಕ್ಕಳಿಕೆ..
ಮಳೆ ತಾ ಬಂದು
ಗದ್ದೆಬಯಲಲಿ ಬೆಂದರು
ಹೊಟ್ಟೆಗೆ ತೃಪ್ತಿಯಿಲ್ಲ
ಕಾಲಿಗಿನ್ನೆಲ್ಲಿ ಚಪ್ಪಲಿ..
ನೆತ್ತಿ ಸುಡುವಷ್ಟು ಬಿಸಿಲು
ಪಾದಗಳಿಗೆ ಮರಳೆಂಬ ಕೆಂಡದ ರಾಶಿ
ಚರ್ಮ ಸುಲಿವ ಕರುಣಾಹೀನ ಟಾರು ರಸ್ತೆ
ಆದ ಕೆಸರಲ್ಲಿ ಹಸಿರು ಕಾಣುವ ಬಯಕೆ.!
ಮುಗ್ದ ಮನಸೆನ್ನದೆ
ಬಡತನ ಮಾಡುವ ಸವಾರಿ
ಕಣ್ಣು ಕಾಣದ ಸಮಾಜ
ಆ ಪಾದಗಳ ಅಂಗೈಲಿ ಮುಟ್ಟಲಿ
ಆ ಪಾದಗಳು ಬರುವಾಗ
ಮಳೆ ಹೊಯ್ಯಲಿ……
ನಿಶಬ್ಧ ನಿರಾಕಾರ
ಮೈದಳೆದಿದೆ ಅಲ್ಲಿ
ದೇವರ ಪಾದಗಳಾಗಲಿ ಅವು
ಆ ಮಗುವಿನ ಮೊಗದಲಿ
ಕೊನರಲಿ ಮಂದಹಾಸ
ಹಸಿವು ಮೂರ್ಛೆ ಹೋಗಲಿ.!
-ಬಿದಲೋಟಿ ರಂಗನಾಥ್
ಬೇಜಾರಿನ ಬಜಾರಿ,,,,
ಅದೃಷ್ಟಳೋ ನತದೃಷ್ಟಳೋ ಏನೋ
ಪದೇ ಪದೇ ಬೇಜಾರಿನ ಬಜಾರೊಳಗೆ
ನಾ ತಿರುಗುತ್ತಲೇ ಇದ್ದೇನೆ ;
ಬಜಾರಿನ ರೇಟುಗಳ ಬಗ್ಗೆ ನನಗೆ ತಕರಾರಿಲ್ಲ
ಬೆಳೆಗಿನಿಂದ ಸಂಜೆವರೆಗೆ ಪುಗಸಟ್ಟೆ
ಸಮಾಧಾನಗಳು ನನ್ನಾಸೆಯ ಬುಟ್ಟಿ ತುಂಬಿವೆ;
ನಾನೋ ಹುಟ್ಟಾ ಬೇಜಾರಿಗಳಲ್ಲವೇ
ಬಜಾರಿನಲ್ಲಿರುವವರಿಗೆಲ್ಲ ನಾ ಪರಿಚಿತಳು,
ಈಗೀಗ ಎಲ್ಲ ನನ್ನ ಬೇಜಾರಿನ ಬಜಾರಿಯೆಂದೇ ಸಂಭೋಧಿಸುತ್ತಾರೆ;
ಕಂಡವರೆಲ್ಲ ಕರೆಯುತ್ತಾರೆ ಕಷ್ಟದ ಕುರಿತು
ಕಿವಿಕೊಟ್ಟು ಕೇಳುತ್ತಾರೆ ಒಂದಿಷ್ಟು ಪುಗಸಟ್ಟೆ
ಸಾಂತ್ವನ ಹೇಳಿ ಲೊಚಗುಡುತ್ತಾರೆ ಅಷ್ಟೇ;
ಈಗ ನನಗೆ ಹರೆಯ ತುಂಬಿದೆಯಷ್ಟೇ
ತುಂಬಿದೆದೆ ನೋಡಿ ಬಿಟ್ಟಿಯಾಸೆಯಲೇ
ತಮ್ಮ ತುಟಿ ಕಚ್ಚಿ ಕೈ ಹಿಸುಕಿಕೊಳ್ಳುತ್ತಾರೆ;
ಈಗ ಗಾಂಧೀಯಜ್ಜನಿರುವ ನೋಟುಗಳು
ಸದ್ದು ಮಾಡದೇ ನನ್ನೆದೆಯ ತುಂಬಿವೆಯಷ್ಟೇ
ಎದೆಯ ಬೇಜಾರು ಮಾತ್ರ ಹಾಗೆಯೇ ಇದೆ;
ನನ್ನ ನೋವಿಷ್ಟೇ ಈ ಬೇಜಾರಿನ ಬಜಾರಿನಲಿ
ಬಿಟ್ಟ ನನ್ನವ್ವ ನನ್ನುಸಿರಿಗೆ ಕಾರಣನಾದವನ
ಹೆಸರೇ ಹೇಳದೇ ಕಣ್ಣು ಮುಚ್ಚಬಾರದಿತ್ತು;,,,,,
-ಸಿದ್ರಾಮ ತಳವಾರ,