
ಗಜಲ್
ಕಣ್ಣು ಬೇರಸಿ ಬಿಡು ಏಕಾಂತದ ಸುಖ ಸಿಗಲಿ ಸಖ
ಮನಸಿನ ಸಂಭ್ರಮಕೆ ಸುಖ ತುಂಬಿ ಬರಲಿ ಸಖ
ಯಾರ ಸಲುವಾಗಿ ಬದುಕು ನೊಂದಿತ್ತು ಅವರೆ ಆನಂದಿಸಲಿ
ಇಬ್ಬರು ಕಳೆದ ಕತ್ತಲೆಗೆ ನೆನಪುಗಳ ಬೆಳಕು ಬರಲಿ ಸಖ
ಗಿಡ ಮರ ಬಳ್ಳಿಗಳು ಹೂವ ಚೆಲ್ಲಿ ನಿಂತಿವೆ ನಮ್ಮೊಲವಿನ ಮಾತು ಸವಿಯಲು
ಮೌನ ಮುರಿದು ಹೂವಿನ ಹಾಸಿಗೆ ಮೇಲೆ ನಡೆದು ಹೋಗಲಿ ಸಖ
ಕಾಡಿ ಜೀವ ಹಿಂಡಿ ಜಾತಿಯ ಕೆಂಬಣ್ಣ ಹಚ್ಚಿ ಅಡ್ಡಗೋಡೆ ಕಟ್ಟಿದರು
ವೈಭವದ ಮೆರವಣಿಗೆಯಲಿ ಬಂದು ಆಲಂಗಿಸಿ ಸೇರಲಿ ಸಖ
ಅವರಾದರು ನಾಚಲಿ ನಮ್ಮ ಪ್ರಣಯ ಪ್ರೀತಿಗೆ ತಲೆಬಾಗಿ
ಮಲ್ಲಿಗೆಯ ಮುಡಿದು ಬಂದಿರುವೆ ಮೆಲ್ಲಗೆ ಸೂಸಲಿ ಸಖ
–ಮರುಳಸಿದ್ದಪ್ಪ ದೊಡ್ಡಮನಿ
ಯಾರು ಹಂಚಿಕೊಳ್ಳುವರು…! ದುಃಖವನು
ಬಂದೊದಗಿದೆ ಸಂಕಟವಿಂದು…
ಕಂಡರಿಯದ ಕಂಟಕ
ಹಂಚಿಕೊಳ್ಳುವುದಾರೊಂದಿಗೆ ಒಂಟಿತನದ ಬೇಗುದಿಯ
ಎಲ್ಲೆಡೆಯೂ ನೋವೇ ಸಾವೇ
ಅವರವರ ಬವಣೆ ಅವರವರಿಗೆ
ನಿರೀಕ್ಷಿಸಬಹುದೇ…! ಸನಿಹ ತೆರಳಿ
ಯಾರ ಸ್ಪಂದನೆ ಹೇಗೆ ಸಿಗಬಹುದೆಂದು?
ಯಾರು ಸಂತವಿಸಬಹುದು, ಅದಾಗಲೇ ದೂರಾದ ಹೃದಯಗಳ
ಜೀವಂತವಾಗಿದೆ ವೈರಸ್…!
ಬೀಸುತಿರುವ ಗಾಳಿಯ ತಂಪಿನಲಿ
ವೈರಾಣುವಿನಂತಾಗಿದೆ ಜೀವನ, ಮಿಡಿಯುವರಾರು
ಅಪ್ಪಬಯಸುವ ಸೋದರರ ದುಃಖಕೆ
ಕಟ್ಟಿಹಾಕಲಾಗಿದೆ ಕೈಗಳನು…!
ತೇವವಾರಿದ ನಾಲಗೆಯನು, ಯಾರು ತಣಿಸುವರು
ಬೀದಿಬಂಧುಗಳ ಹಸಿವೆಯನು
ಅಪರಚಿತರಾಗಿರುವರಿಲ್ಲಿ ಪರಿಚಿತರೆಲ್ಲ…!
ಪರಿತಪಿಸುತಿರುವ ಜೀವಗಳಿಗೆ, ಯಾರ ಸಾಂತ್ವನ?
ಸಾಮಾಜಿಕಾಂತರದ ಸಮಾನಾಂತರ ದುಃಖಿಗಳಿಗೆ
ಸೃಷ್ಟಿಯೇ ಸೃಷ್ಟಿಸಿಕೊಂಡ ಸ್ವರಕ್ಷಣಾ ಕ್ರಮವೇ ಇದು?
ಇದೂ ಆಗಲಿ ಬಿಡಿ, ಜನರ ಸಂಕಟ ಜಗದ ಉದ್ಧಾರಕ್ಕಾಗಲಿ
ದೀಪದುಳುಗಳಂತೆ ಉದುರುತಿರುವವರ
ಮಧ್ಯೆ ಗಟ್ಟಿಯಾಳುಗಳು ಉಳಿದುಕೊಳ್ಳಲಿ
–ರಾಘವೇಂದ್ರ ದೇಶಪಾಂಡೆ,

ಮಂಜು ಮುಸುಕಿದ ಹಾದಿ
ಮಂಜುಮುಸುಕಿದ ಹಾದಿಯಲಿ
ನಡೆಯುತಿರುವೆ ಭಾವ ಪರವಶನಾಗಿ….!
ಸನಿಹ ಬಂದೆ ಜೊತೆಗಾರ್ತಿಯಂತೆ
ನೀ ಹೊನ್ನ ರಶ್ಮಿಕಿರಣವಾಗಿ….!
ಬಾಳು ಅಂಧಕಾರದಲಿ ಮುಳುಗಿರುವಾಗ
ತಮಂಧ ಕಳೆಯುವ ಜ್ಯೋತಿಯಂತೆ ಬಂದೇ….!
ಒಂಟಿಬಾಳಿನ ಲತೆಗೆ ಆಸರೆಯಾಗಿ
ತರುವಾಗಿ ನೀ ಬಂದೇ……!
ಪ್ರೀತಿ ಮಮತೆಗಳ ಮಮಕಾರ
ಬಿಂದುವಾಗಿ ನೀ ಬಂದೇ……!
ನಲ್ಲ ನಲ್ಲೆಯರ ಸಮಾಗಮದಂತೆ
ಮನದಿ ಬಿಗಿದಪ್ಪಿದೆ…..!
ಶಶಿ ಮೋಡದಿ ಗ್ರಹಣದ ಕಾಲ
ಮರೆಯಾಗುವಂತೆ ಮರೆಯಾದೆ…..!
ನನ್ನ ಹೃದಯ ಕಮಲದಿ ಕ್ಷಣಕಾಲ
ಇಣುಕಿ ಜಾರಿದೆ…..!
ನನ್ನಂತರಾಳದ ಆರ್ತಧ್ವನಿ ಕರ್ಣಪಟಲದಿ
ಆಲಿಸದೆ ಹೋದೆ….!
ರಮಣಿ ಕಾಮನ ಅರಗಿಣಿಯಂತೆ
ಮನವ ಕಾಡಿ ಓಡಿದೆ…..!
ನಿದಿರೆಯಲ್ಲು ಸುಸ್ವಪ್ನವಾಗಿ ನಯನದ
ಮುಂದೆ ನಾಟ್ಯವಾಡಿದೆ….!
ನಿನ್ನ ಹೆಜ್ಜೆಯ ಗುರುತು ನನಗೆ ಅಚ್ಚಳಿಯದಂತೆ
ಹೃತ್ಕಮಲದಿ ಉಳಿಸಿದೆ…..!
ಶಂಕರಾನಂದ ಹೆಬ್ಬಾಳ
ನನ್ನಾಕೆ !?
ಮಂಜಿನ ಸಂಜೆಯಲಿ ಮಿನಗುತ್ತಾ ಬಂದೆಯಾ
ಕಾಣದ ಕಾಡ್ಗಿಚ್ಚನ್ನು ನಂದಿಸಿ ಬಿಟ್ಟೆಯಾ.
ತಿಳಿಯದ ಮನದಲ್ಲಿ ಪ್ರೀತಿಯ ಬಿತ್ತಿದೆಯಾ.
ನಂದಿ ಹೋಗುವಮುನ್ನ ಉಳಿಸಿಕೊಳ್ಳುತ್ತೀಯ?
ಕಣ್ಣಿದ್ದು ಕುರುಡನಾಗಿ, ಕಾಲಿದ್ದು ಕುಂಟನಾಗಿ
ನಿನ್ನರಿಸಿ ಬರುವಾಸೆ ಗೆಳತಿ ನಿನ್ನಬಳಿ.
ನಿನ್ನ ತಾಯಿತನದಲ್ಲಿ ಪ್ರೀತಿಯಿಂದ ಇರುವಾಸೆ.
ಮನದಲ್ಲಿ ಮಲಗಿಸಿ ಪ್ರೀತಿ ನೀಡುವೆಯ?
ಮುಗ್ಧ ಮನದ ನನ್ನ ಮುಗ್ಧ ನಗೆಯ ನೀಡಿದಾಕೆ.
ಸಂಸಾರವೆಂಬ ಜಂಜಾಟ ದಾಟಿ ಬಂದಾಕೆ.
ಮನವ ಗೆದ್ದ ಮಲ್ಲಿಗೆಯ ಮುಡಿದು ನಿಂತಾಕೆ.
ಸಿಂಧೂರವೆಂಬ ಬಿಂದುವನಿಟ್ಟು ಮನವ ಮೀಟಿದಾಕೆ.
ಕನಸಿನ ಝರಿಯಲ್ಲಿ ಜುಳು ಜುಳು ಹರಿದವಳೇ.
ಮನಸಿನ ಆಳದಲಿ ಫಳ ಫಳ ಹೊಳೆದವಳೇ.
ಕುಲವನ್ನು ಅರಿಯದೆ ಕುಲು ಕುಲು ನಕ್ಕವಳೇ.
ಕತ್ತಲೆಯ ರಾತ್ರೀಯಲ್ಲಿ ಘಮ ಘಮ ಬೀರಿದವಳೇ.
ಅರಿಯದ ಮನಕ್ಕೆ ಮಲ್ಲಿಗೆಯ ಚೆಲ್ಲುವಾಕೆ.
ಬಾಳಿನ ಪಯಣದಲ್ಲಿ ಗುರಿ ಮುಟ್ಟಿಸುವಾಕೆ.
ನನ್ನೊಲವಿನ ನಲ್ಮೆಯ ಗೆಳತಿ ನೀನಾಗುವೆಯೇ?
ಕನಸಿನ ಗೋಪುರವ ಗಗನಕ್ಕೆ ಮುಟ್ಟಿಸುವಾಕೆ.
–ಡಾ. ವೀರೇಶ್ ಹಿತ್ತಲಮನಿ

ಕ್ಷಮಿಸು ಗೆಳೆಯ
ಗೆಳೆಯ ಇಬ್ರಾಹಿಂ ನೆನಪಿದೆಯಾ
ನಾನು ನೀನು ಚರ್ಚ್ ಅಂಗಳದಲ್ಲಿ
ಅಂದು ಕದ್ದು ತಿಂದ ಮಾವಿನಹಣ್ಣು
ಎಷ್ಟೊಂದು ಸಿಹಿಯಾಗಿತ್ತು
ನಮ್ಮಿಬ್ಬರ ಕಿತ್ತಾಟದಲ್ಲಿ ನಿನ್ನ ಎಂಜಲು
ನನಗೆ ನನ್ನೆಂಜಲು ನಿನಗೆ
ಹಣ್ಣಿನ ಜೋತೆ ಹೊಟ್ಟೆ ಸೇರಿತು
ಇಂದು ಯಾರು ಗೆಳೆಯ ನಿಮ್ಮಿಬ್ಬರ
ನಡುವೆ ಜಾತಿಯ ಗೊಡೆಯನ್ನು ಕಟ್ಟಿದ್ದು..?
ಅಗೋ ಮತ್ತೆ ನೆನಪಿದೆಯಾ ಗೆಳೆಯ
ಗೌಡರ ತೋಟದಲ್ಲಿ ತೆಂಗು ಕೀಳುವಾಗ
ನಾವಿಬ್ಬರೂ ಒಟ್ಟಿಗೆ ಸೆರೆ ಸಿಕ್ಕಿದ್ದು
ಆಗ ನಾವಿಬ್ಬರೂ ಒಬ್ಬರನೊಬ್ಬರು
ಬಿಟ್ಟುಕೊಡದೆ ಬೆತ್ತದ ಮಾಲಿಕನಿಗೆ
ಬೆತ್ತಲೆಯ ಬೆನ್ನು ನೀಡಿದ್ದು
ಬಾಸುಂಡೆಯಲ್ಲೂ ನಸುನಕ್ಕಿದ್ದು
ಇಂದು ಯಾರು ಗೆಳೆಯ ನಿಮ್ಮಿಬ್ಬರ
ನಡುವೆ ಜಾತಿಯ ಗೊಡೆಯನ್ನು ಕಟ್ಟಿದ್ದು..?
ಮರೆಯಲಾದಿತೆ ಗೆಳೆಯ ರಂಜಾನ್ ಹಬ್ಬ
ಅದೆಷ್ಟೋಂದು ಬಗೆಬಗೆಯ ತಿನಿಸುಗಳು
ನಿನ್ನ ತಾಯಿ ನನಗೆ ಕೈತುತ್ತು ನೀಡಿದ್ದು
ನಿನ್ನ ಅಕ್ಕ-ತಂಗಿ ಕೈಗೆ ರಾಕಿ ಕಟ್ಟಿದ್ದು
ಮೊಹರಂನಲ್ಲಿ ನಿನ್ನ ತಂದೆ ನನ್ನ
ಹೆಗಲ ಮೇಲೆ ಹೊತ್ತುಕೊಂಡು
ಮೊಹರಂ ಹಾಡಿಗೆ ಹೆಜ್ಜೆ ಹಾಕಿ ಕುಣಿದಿದ್ದು
ಇಂದು ಯಾರು ಗೆಳೆಯ ನಿಮ್ಮಿಬ್ಬರ
ನಡುವೆ ಜಾತಿಯ ಗೊಡೆಯನ್ನು ಕಟ್ಟಿದ್ದು..?
ಕಟ್ಟಲಿ ಬಿಡು ಗೆಳೆಯ ಜಾತಿಯ ಗೋಡೆಯನು
ಕಟ್ಟಲಿ ಬಿಡು ಗೆಳೆಯ ಮಸೀದಿ ಮಂದಿರವನು
ಹಾರಿಸಲಿ ಬಿಡು ಗೆಳೆಯ ಧರ್ಮದ ಬಾವುಟವನು
ಹರಿಸಲಿ ಬಿಡು ಗೆಳೆಯ ಕೆಂಪು ರಕುತವನು
ನಿನ್ನ ಕೈ ನನ್ನಲ್ಲಿ ನನ್ನ ಕೈ ನಿನ್ನಲ್ಲಿ ಬಂಧಿಸೋಣ
ಧರ್ಮ ಮೀರಿದ ಲೋಕದಲ್ಲಿ ಜೀವಿಸೋಣ
ಮತ್ತೆ ನಾವಿಬ್ಬರೂ ಮತ್ತೆ ಹುಟ್ಟದಿರೋಣ
ಮತ್ತೆ ನಾವಿಬ್ಬರೂ ಮತ್ತೆ ಹುಟ್ಟದಿರೋಣ
–ಎಸ್. ಕಲಾಲ್

ಬತ್ತಿದ ಮೊಲೆಗೆ
ಬಾಯಿ ಹಾಕಿದ ಮಗು
ಸಪ್ಪಗೆ ಹಿಂದೆ ಸರಿಯಿತು
ಮೊಲೆಯ ಹಾಲಿಗೂ ಬಡತನವಿರುವಾಗ !!
ಕಂಕುಳಲ್ಲಿ ಕೂರಿಸಿಕೊಂಡಾಕೆ
ಕಕ್ಕುಲಾತಿ ಇಲ್ಲದೆ ನಡೆದಳು !!
ಬೇಸಿಗೆ ಧಗೆಗೆ
ಬಾಯಾರಿದ ಮಗು
ಆಕೆಗೆ ಬಂಡವಾಳವಾಗಿತ್ತು !!
ಬಸ್ಟ್ಯಾಂಡಿನ ಜಂಗುಳಿಯಲಿ
ಮಗು ಅಳಲಾರಂಭಿಸಿತು
ಅನುಕಂಪದ ವ್ಯವಹಾರಕೆ
ಆಕೆಯೇ ಚಿವುಟಿದ್ದಳು !!
ಮಗುವಿಗೆ ಬೀಸಣಿಕೆಯಾಗಬೇಕಿದ್ದ
ಅಮ್ಮನ ಸೆರಗು
ಹೊಟ್ಟೆ ಹೊರೆಯುವುದಕ್ಕೆ
ಜೋಳಿಗೆಯಾಗಿದ್ದಕ್ಕೆ ನೋವಿದೆ !!
-ನಿಂಗಪ್ಪ ಹುತಗಣ್ಣವರ
ಪಡಪೋಶಿ ರಾತ್ರಿಗೆ..
ಕಾಡುವ ಪಡಪೋಶಿ ರಾತ್ರಿಗೆ
ನೀ ಇರಬೇಕಿತ್ತು
ಮದಿರೆಗೂ ನಿಶೆ ಏರಿಸುವಂತೆ
ಕೈ ಜಾರಿದ ಕನಸುಗಳಿಗೂ ಮರುಜೀವ ನೀಡುವ
ನಿನ್ನ ಒಲವಿಗೆ ರಾತ್ರಿಯ ಜಾಗರಣೆ
ಬೆರಳ ನಡುವಿನ ಸಿಗರೇಟಿಗೂ ಬೇಸರಿಕೆ
ಮದಿರೆಯ ಬಟ್ಟಲಿನ ಕೊನೆಯ ಗುಟುಕಿಗೆ
ತುಟಿಪತ್ಯ….!
ಕಾಡಿಸುವ ಪಡಪೋಶಿ ರಾತ್ರಿಗೆ
ನೀ ಇರಬೇಕಿತ್ತು
ನಿರವ ರಾತ್ರಿಗೆ ನಿನ್ನ ಮಾತಿನ ಗದ್ದಲ
ನಿರ್ಜನ ದಾರಿಗೆ ನಿನ್ನ ಹೆಜ್ಜೆಯ ಗುರುತಿನ ಸದ್ದು
ಈ ಗದ್ದಲದ ನಡುವೆ ಬರಿ ಮೌನದ ಕತೆ
ಮದಿರೆಯ ಗ್ಲಾಸಿನ ಸದ್ದು ಸುಮ್ಮನಾಗಿದೆ
ಕೈ ಗೆ ಸಿಗದೆ ಸುಮ್ಮನೆ ಕಾಡಿದೆ ಕಡಲೆಬೀಜದ ಹಾಗೆ..!
ಕಾಡಿದೆ ಪಡಪೋಶಿ ರಾತ್ರಿಗೆ
ನೀ ಇರಬೇಕಿತ್ತು
ನನ್ನ ಚಟವು ಚಟ್ಟ ಹತ್ತಿಸಿದರೂ
ನಿನ್ನ ಜಪಿಸುವ ಚಟ ಬಿಡೆನು
ಪ್ರತಿ ದಾರಿಯ ತಿರುವುಗಳಿಗ ನನ್ನ ದೇಹದ ಪರಿಚಯವಿದೆ
ಮನಸ್ಸಿಗೆ ಹಚ್ಚಿಕೊಂಡು ತಪ್ಪಿಗೆ ನೆನಪಿನ ಗಾಯವಿದೆ
ಮುಲಾಮು ತರಲು ಮರೆತ ನೀನು
ಬರದೆ ಹೋದ ಬೆಳಕಿನಂತೆ…!
ಈ ಪಡಪೋಶಿರಾತ್ರಿಗೆ ನಾನು ನಾನಾಗದೆ
ನೀನಾಗುವ ಜರೂರತ್ತು ಇತ್ತಾದರೂ
ಕನಸ ಕನರಿಕೆಯಲ್ಲಿಯೆ ಬೆಳಕಾಯಿತು
ನಶೆ ಇರದ ಬೆಳಗು ಯಾವ ರುಚಿಯಿಲ್ಲ ಮದಿರೆಯ ಹೊರತು…!
–ವೃಶ್ಚಿಕ ಮುನಿ..

ಗೆಜ್ಜೆ ಪೂಜೆ
ಹುಟ್ಟಬಾರದಿತ್ತು ಮಗಳೆ ನನ್ನ ಒಡಲಿನಲ್ಲಿ ನೀನು
ನಿನ್ನ ಜೀವನದ ಬಗ್ಗೆ ಕನಸು ಕಾಣಲು ಭಯವಿಂದು
ಅಂದು ನಾನು ನಿನ್ನ ಜನನಕ್ಕೆ ಹರ್ಷಿಸಿದೆ
ಇಂದು ನಿನ್ನ ಜೀವನ ನನ್ನಂತೆ ಆಗುವುದಲ್ಲ ಎಂದು ಮರುಕಪಟ್ಟೆ…
ನೀನು ಬೆಳದಂತೆ ಸಕಲ ವಿಧ್ಯಾಭ್ಯಾಸ ಮಾಡಿಸಿದೆ
ಹಿರಿಯರು ನಿನಗೆ ದೇವರ ದಾಸ್ಯದ ಬಗ್ಗೆ ತಿಳಿಸಿದರು
ನಿನ್ನ ಮನದಲ್ಲಿ ದೇವರಿಗೆ ನೃತ್ಯದ ಸೇವೆ ಮಾಡುವ ಆಸೆ
ಬೆಳೆದು ಹೆಮ್ಮರವಾಗುತ್ತ ಬಂತು ಅದು ನೆಪ ಮಾತ್ರ….
ನೀನು ಬೆಳೆದು ನಿಂತೆ ಸೌಂದರ್ಯ ಕಣ್ಣುಕ್ಕುವಂತೆ ಇತ್ತು
ಗೆಜ್ಜೆ ಪೂಜೆ ಮಾಡಿಸು ಎಂದು ದುಂಬಾಲು ಬಿದ್ದರು ಎಲ್ಲ
ನಿನಗೆ ಅದರ ಕರಾಳತನದ ಅರಿವಿಲ್ಲ ನನಗೆ ತಿಳಿದರೂ
ಎನು ಮಾಡುವಂತಿಲ್ಲ ನೀನು ಆ ದಿನಕ್ಕಾಗಿ ಕಾದು ನಿಂತೆ..
ನನ್ನ ಅಸಾಯಕತೆ ವಿಧಿಯನ್ನು ಶಪಿಸುತ್ತ ಪೂಜೆಗೆ
ಸಿದ್ಧ ಮಾಡಿದೆ ಪುಣ್ಯ ನದಿಯಲ್ಲಿ ಮಿಂದು ಗೆಜ್ಜೆ ಪೂಜೆ ಮಾಡಿ
ದೇವರ ಸನ್ನಿಧಿಯಲ್ಲಿ ತಾಳಿ ಕಟ್ಟಿ ದೇವರಿಗೆ ನೀನು ಅರ್ಪಿತ
ಎಂದು ಹೆಸರಿಗೆ ಮಾತ್ರ ಒಪ್ಪಿಸುವರು…..
ಪೂಜೆ ಮುಗಿಸಿ ಹೊರ ಬಂದರೆ ಸಾಕು ನಾಯಿಗಳಂತೆ
ಜೊಲ್ಲು ಸುರಿಸುತ್ತಾ ಕಾಮುಕ ದೃಷ್ಟಿಯಿಂದ ನೋಡುವರು
ಕಂತೆ ಕಂತೆ ಹಣವನ್ನು ನಿನ್ನ ಅಂದಕ್ಕೆ ಬೆಲೆ ಕಟ್ಟಿ
ಹಾರಜು ಹಾಕುವರು ನನ್ನ ಕಣ್ಣೆದುರೇ ನಿನ್ನ ಜೀವನ ದಿಕ್ಕು ತಪ್ಪಿತು
ನೀನು ಬಯಸಿದ್ದು ದೇವರ ಸೇವೆ ಅವನ ಸಾನಿಧ್ಯ
ಆದರೆ ನೀನು ಇಂದು ದೇವದಾಸಿ ಎಂಬ ಹೆಸರಿನ
ಕಾಮುಕರ ಪಲ್ಲಂಗಿನಿ ಬಯಸದೆ ಇದ್ದರೂ
ನರಕಸದೃಶವಾಯ್ತು ಜೀವನ ಇದನ್ನು ಬದಲಿಸಲು ಆಗದು..
ಮುಂದೆ ನಿನಗೆ ಮಗುವಾದರು ನನ್ನ ಕೋರಿಕೆ ಇಷ್ಟೇ
ಎಷ್ಟೇ ಕಷ್ಟವಾದರೂ ಸರಿ ನಮ್ಮ ದಾರಿಯಲ್ಲಿ ಅವಳನ್ನು
ಬರಲು ಬಿಡಬೇಡ ವಿದ್ಯೆ ಕಲಿಸಿ ನಮ್ಮ ಪ್ರಪಂಚದಿಂದ
ದೂರ ಇಟ್ಟು ಒಳ್ಳೆಯ ಜೀವನ ಕೊಡು …..
-ಗಾಯತ್ರಿ

.
ವೀರೇಶ ಹಿತ್ತಲಮನಿಯವರ ನನ್ನಾಕೆ ಚೆಂದದ ಕವಿತೆ. ಸೊಗಸಾಗಿದೆ