ಪ್ರಶ್ನೆ
ನಾನು ಸತ್ತಿರುವೆನೆಂದು
ಏಕೆ ಅಳುತ್ತಿರುವಿರಿ..?
ನಿಮ್ಮ ರೋಧನ ನನಗೆ ಕೇಳುತ್ತಿದೆ
ನಿಮ್ಮ ಮನದ ನೋವು
ನನಗೆ ಅರ್ಥವಾಗುತ್ತಿದೆ
ನಿಮ್ಮ ಕಣ್ಣೀರ ಹನಿಗಳನ್ನು
ನಾನು ಬಾಚಿ ತಬ್ಬಿಕೊಳ್ಳುತ್ತಿರುವೆ
ನಾನು ಸತ್ತಿರುವೆನೆಂದು
ಏಕೆ ಅಳುತ್ತಿರುವಿರಿ..?
ಗೋಡೆಗೆ ಭಾರವಾಗಿರುವ
ಭಾವಚಿತ್ರದಲ್ಲಿ ನಾನಿರುವೆನೇನು?
ಅಥವಾ
ಆಗಸದೆತ್ತರದ ಕಲ್ಲು ಮನುಷ್ಯನೊಳಗೆ
ಅಡಗಿ ಕುಳಿತಿರುವೆನೇನು ನಾನು..?
ಅಥವಾ
ನೀವೆ ಕಟ್ಟಿದ ಭಾರವಾದ ಸಮಾಧಿಯೊಳಗೆ
ಕಣ್ಮುಚ್ಚಿ ಮಲಗಿರುವೆನೇನು ನಾನು..?
ನಾನು ಸತ್ತಿರುವೆನೆಂದು
ಏಕೆ ಅಳುತ್ತಿರುವಿರಿ..?
ನನ್ನ ದೇಹದ ಕಣ ಕಣದ ಉಸಿರು
ನಿರ್ಮಲ ವಾತಾವರಣ ಸೇರಿದೆ
ನನ್ನ ಹೃದಯದ ಬಡಿತ
ಹಸಿರು ಮೌನಿಗಳ ಹೃದಯ ಹೊಕ್ಕು
ಮೌನವಾಗಿ ಮಿಡಿಯುತಿದೆ
ನನ್ನ ತೋಳ್ಬಲಗಳ ಶಕ್ತಿ
ಭೂಮಾತೆಯ ಮಡಿಲು ಸೇರಿದೆ
ನನಗೊಂದು ವಿಳಾಸವಿತ್ತ ಈ ದೇಹ
ಹೊಸ ಜೀವದ ಹುಟ್ಟಿಗಾಗಿ ಮಣ್ಣಾಗಿದೆ..
ನಾನು ಸತ್ತಿರುವೆನೆಂದು
ಏಕೆ ಅಳುತ್ತಿರುವಿರಿ..?
ನಿಮಗೊಂದು ವಿನಂತಿ ಇಷ್ಟೇ
ಸಮಾಧಿಯ ಬದಲು
ಬಡವನಿಗಾಗಿ ಮನೆಯ ಕಟ್ಟಿಬಿಡಿ
ಬಡವರ ಮಗುವಿನೊಂದಿಗೆ ನಾ ನಗುವೆ.
ಹಸಿದ ಹೊಟ್ಟೆಗೆ ಅನ್ನವನಿಕ್ಕಿಬಿಡಿ
ತೃಪ್ತಿಯಲಿ ನಾ ಮತ್ತೆ ಬದುಕುವೆ.
ಭೂತಾಯಿಯ ಸೀರೆಗೆ
ಹಸಿರು ಬಣ್ಣವನು ಎರಚಿಬಿಡಿ
ಮತ್ತೆ ನಿಮ್ಮನ್ನು ಸೇರುವೆ ಹಸಿರೊಂದಿಗೆ.
ನಾನು ಸತ್ತಿರುವೆನೆಂದು
ಏಕೆ ಅಳುತ್ತಿರುವಿರಿ..?
–ವೆಂಕಟೇಶ ಚಾಗಿ
ಕೈಯ್ಯೊಳಗಿನ ಹಗ್ಗ ಹಾವಾಗುತಿದೆ ಈಗೀಗ ಭಯದ ಬದುಕಿನಲಿ
ಎದೆಯೊಳಗಿನ ಕನಸು ಬೇಯುತಿದೆ ಈಗೀಗ ಭಯದ ಬದುಕಿನಲಿ
ನೆತ್ತರ ಹನಿಯಲ್ಲಿ ಚಿತ್ತಾರದ ಕನಸು ಈಗೀಗ ಭಯದ ಬದುಕಿನಲಿ
ಸತ್ತರೂ ಬದುಕಲು ಭಯವಾಗುತಿದೆ ಈಗೀಗ ಭಯದ ಬದುಕಿನಲಿ
ಹಲ್ಲಿ ಲೊಚಗುಟ್ಟಿದರೂ ಸಿಡಿಲ ಸದ್ಧು ಈಗೀಗ ಭಯದ ಬದುಕಿನಲಿ
ಗರಿಕೆಯು ಚಿಗುರಲು ಹಿಂಜರಿಯುತಿದೆ ಈಗೀಗ ಭಯದ ಬದುಕಿನಲಿ
ಸಾವಿರ ನೆನಪುಗಳಿಗೂ ಸಾವಿನ ಚಿಂತೆ ಈಗೀಗ ಭಯದ ಬದುಕಿನಲಿ
ದಾಟುವ ನದಿಯು ದಿಕ್ಕೆಟ್ಟು ಉಕ್ಕುತಿದೆ ಈಗೀಗ ಭಯದ ಬದುಕಿನಲಿ
ಮೈಮೇಲಿನ ಬೆವರು ಬೆಂಕಿಯಾಗುತಿದೆ ಈಗೀಗ ಭಯದ ಬದುಕಿನಲಿ
ಹಗಲಿನ ಬೆಳಕು ಕರಾಳರಾತ್ರಿಯಾಗುತಿದೆ ಈಗೀಗ ಭಯದ ಬದುಕಿನಲಿ
ನಗುವ ಮಗುವೊಂದು ಚಿಟ್ಟನೆ ಚೀರುತಿದೆ ಈಗೀಗ ಭಯದ ಬದುಕಿನಲಿ
ಬದುಕುವವನಿಗೆ ಸಾವೊಂದು ಕಾಡುತಿದೆ ಈಗೀಗ ಭಯದ ಬದುಕಿನಲಿ.
–ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ
ಉರಿಪಾದವ ಊರಿನಿಂತ ಹೆಜ್ಜೆಗೆ
ಇಟ್ಟಿಗೆ ಕಲ್ಲು ಹೊತ್ತು ಕಟ್ಟಿದ
ಯಾವ ಮಹಲು ನಮ್ಮದಲ್ಲ
ನೆರಳನು ನೀಡುತ್ತಿಲ್ಲ
ಕೈಬೀಸಿ ಕರೆದ ನಗರ
ಕತ್ತು ಹಿಡಿದು ನೂಕಿತ್ತಲ್ಲ
ಹಸಿವೆಂದು ಬಂದೆವು
ಹಸಿವಿಗಾಗಿ ದುಡಿದೆವು
ಮತ್ತೆ ಮತ್ತೆ ಹಸಿವ ಹೊಟ್ಟೆ
ಬೆನ್ನ ಮೇಲೆ ಹೊರೆಯ ಕಟ್ಟೆ
ಹಸಿವಿನಿಂದ ಅಳುವ ಮಗು
ಬೀದಿಬದಿಯ ಅನ್ನದೊಡೆಯ
ಕಾಣದಾದನು ಎಲ್ಲಿಗೋದನು
ಕರೆತಂದು ಬಿಟ್ಟ ಯಾವ
ಬಸ್ಸು ರೈಲು ಕಾಣುತ್ತಿಲ್ಲ
ಈ ಹೆಜ್ಜೆಗೂ ಈ ದಾರಿಗೂ
ನಂಟು ಇನ್ನು ಮುಗಿದಿಲ್ಲ
ಹಸಿವ ಗಂಟುಮೂಟೆ ಕಟ್ಟಿಕೊಂಡು
ತಲೆಯ ಮೇಲೆ ಹೊತ್ತುಕೊಂಡು
ತಾವೇ ಮಾಡಿದ ಹೆದ್ದಾರಿಯ ಮೇಲೆ
ಮೈಲುಗಲ್ಲು ಎಣಿಸುತ್ತ ಹೆಜ್ಜೆ ಇಟ್ಟುಕೊಂಡು
ಭಾರತ ಬರಿಗಾಲಲಿ ನಡೆಯುತ್ತಿದೆ
ಬಿಟ್ಟುಬಂದ ಹುಟ್ಟಿದೂರ
ದಾರಿ ಹಿಡಿದು ಹೊರಟರು
ಯಾರಾದರು ಅಪ್ಪತಪ್ಪಿ ಅಲ್ಲಿ
ಕೇಳದಿರಲಿ ಇವರ ಹೆಸರು
(ಅಲೆಮಾರಿ ಪಾದಗಳಿಗೆ ಅರ್ಪಿತ)
-ಎಸ್.ಕೆ.ಮಂಜುನಾಥ್
ಅಂತ್ಯ ಬೇಕಿದೆ
ಅಂತ್ಯ ಬೇಕಿದೆ ಈ ಮನವನು
ಇನ್ನಿಲ್ಲದೆ ಕಾಡುವ ಭಾವನೆಗಳ ಸಂಘರ್ಷಕೆ
ತೊಳಲಾಟದಲಿ ತೇಲಿಸುವ
ಸಂಕಟಗಳಿಗೆ ….
ಅಂತ್ಯ ಬೇಕಿದೆ ಈ ಕನಸನು
ಒಡೆದು ಹಾಕುವ, ಕಲ್ಪನೆಗಳನು
ಜಡ್ಡು ಹಿಡಿಸುವ ಉದಾಸೀನಕೆ …..
ಅಂತ್ಯ ಬೇಕಿದೆ ಪದೇ ಪದೇ
ನೆನಪಾಗುವ ಹಳೆಯ ನೆನಪಿಗೆ
ವಾಸ್ತವ ಮರೆಮಾಚುವ ಸಹಿ ನೆನಪಿಗೆ …
ಅಂತ್ಯ ಬೇಕಿದೆ ಕ್ಷಣ ಕ್ಷಣವು
ತಲ್ಲಣಿಸಿ ಕಂಪಿಸುವ ಅಂತರಂಗಕೆ
ತನುವನು ಹಿಂಡುವ ಭಾವಕೆ …
ಅಂತ್ಯ ಬೇಕಿದೆ ದೀರ್ಘಕಾಲ
ಮನದಲಿ ಹರಳುಗಟ್ಟಿ ಕುಳಿತ
ಮಾತುಗಳಿಗೆ, ಸರಿಯಬೇಕಿದೆ
ಮೌನದ ಪರಿಧಿಯಿಂದ
ಸಂವಹನದ ಲೋಕಕೆ …..
ಅಂತ್ಯ ಬೇಕಿದೆ ಈ ಬದುಕಿನ
ಹೊಸತನವ ನಿರಾಕರಿಸುವ
ಬಂಡತನಕೆ
ಸ್ವಾಗತ ಬೇಕಿದೆ “ಇರದುದರೆಡೆಗೆ
ತುಡಿಯುವ” ನವೋಲ್ಲಾಸಕೆ
–ರೇಶ್ಮಾ ಗುಳೇದಗುಡ್ಡಾಕರ್
ಸಣ್ಣಾಕೆ
ಬಾರಿ ಒಳ್ಯಾಕಿ ನನ್ನ ತಂಗಿ ಕೇಳವ್ವಾ
ಬಾರಿ ಬುದ್ಧಿವಂತೆ ನನ್ನ ತಂಗಿ |ಸಣ್ಣಾಕಿ|
ತಪ್ಪು ಮಾಡಿದರೆ ತಿಳಿಹೇಳಿ ||೧||
ಸಣ್ಣವಳು ಇದ್ದಾಗ ಬಲು ತುಂಟಿ ನನ್ನ ತಂಗಿ
ನಾನೆತ್ತಿ ಇವಳನ್ನ ಬೆಳೆಸಲಿಲ್ಲ |ಸಣ್ಣಾಕಿ|
ಜೀವನದಾಗ ಈಕೆ ಬೆಳಿಬೇಕು ||೨||
ಗೆಳತಿಯ ಜೊತೆಗೂಡಿ ಬೆಳೆದಾಳು ನನ್ನ ತಂಗಿ
ಅವಳಾಂಗ ಇವಳು ಆಗ್ಯಾಳೊ |ಸಣ್ಣಾಕಿ|
ತಿಳಿಹೇಳಿ ನೀವೆಲ್ಲಾ ತಿಳಿದವರು ||೩||
ಅಣ್ಣನ ಮ್ಯಾಲ ಬಲು ಪ್ರೀತಿ ನನ್ನ ತಂಗಿ
ಮನಸಿನೊಳಗ ಪ್ರೀತಿ ಬೆಳೆಸ್ಯಾಳೊ |ಸಣ್ಣಾಕಿ|
ಇವಳಿಗೆ ನೀವು ಹಾರೈಸಿ ||೪||
ತವರಿನ ಪ್ರೀತಿ ಮರಿಬ್ಯಾಡೋ ನನ್ನ ತಂಗಿ
ಮದುವೆ ಆದ ಕ್ಷಣದಲ್ಲಿ |ಸಣ್ಣಾಕಿ|
ಸಂಸಾರ ಹೊರುವ ಯಜಮಾನಿ ||೫||
ಕೊನೆಯ ಗಳಿಗೆಯಲ್ಲಿ ಅತ್ತೆ ಮಾವರಿಗಂಜಿ
ಜೀವನ ಬಂಡಿಯ ನಡೆಸವ್ವ |ಸಣ್ಣಾಕಿ|
ಕೊಟ್ಟ ಮನೆಗೆ ನೀ ಹೆಸರಾಗು ||೬||
–ಚಂಕವಿ