ಪಂಜು ಕಾವ್ಯಧಾರೆ

ಬುನಾದಿ ಇಲ್ಲದ ಬದುಕು “

ಕೂಡಿಟ್ಟ ಕನಸುಗಳ ಜೊತೆ
ಪಾದಯಾತ್ರೆ ಮಾಡುತ್ತಿರುವೆ.
ಅರಮನೆಗಲ್ಲ,
ಹೊತ್ತಿನ ಅಂಬಲಿಗಾಗಿ!

ಕಟ್ಟಿಕೊಂಡ ಆಸೆಗಳನ್ನ
ಒಟ್ಟುಗೂಡಿಸಿ ಸಮಾಧಿ ಮಾಡಿರುವೆ.
ಚಂದದ ಬಟ್ಟೆಗಲ್ಲ,
ಹಸಿದ ಹೊಟ್ಟೆಗಾಗಿ!

ನನ್ನೊಳಗಿನ ಖುಷಿಯನ್ನ
ಮಾಯಾ ಬಜಾರಿನಲ್ಲಿ ಮಾರಿಕೊಂಡಿರುವೆ.
ದುಡ್ಡಿಗಲ್ಲ,
ಮನದ ದುಃಖಕ್ಕಾಗಿ!

ಬುನಾದಿಯೇ ಇಲ್ಲದ ಬದುಕನ್ನ
ನಡು ಬೀದಿಯಲ್ಲೆ ಕಳೆದುಕೊಂಡಿರುವೆ.
ನನ್ನ ಸೋಲಿಗಲ್ಲ,
ಗೆದ್ದ ಬಡತನಕ್ಕಾಗಿ!
ಹರೀಶ್ ಹಾದಿಮನಿ (ಹಾಹರೀ)


ಸದಾ ಕಾಡುವೆ ಏಕೆ?
ನೀ ಅಗಲಿದ ಕ್ಷಣವ
ಮರೆಯಲಾಗದು ಎಂದಿಗೂ,
ನಿನ್ನ ನೆನಪಿನ ಬುತ್ತಿ ಹೊತ್ತು
ಸಾಗುತ್ತಿರುವ ಜೀವಕ್ಕೆ
ಸದಾ ಕಾಡುವೆ, ಏಕೆ?

ಮುಖವು ಮುಖವಾಡ ಧರಿಸಿ
ನಗುವ ನಾಟಕವಾಡಲು,
ಮನವು ಪಾತ್ರಧಾರಿಯಾಗಲು
ಒಲ್ಲೆಯನ್ನಿತು, ಕಣ್ಣೀರಿಡುತ್ತಾ.
ಕಣ್ಣೀರಾಗಿ ಜಾರಲು ತಾನೇ, ಹೇಗೆ ಬಿಡಲಿ
ಕಣ್ತುಂಬಾ ನೀನೇ ತುಂಬಿರುವಾಗ.

ನಿನ್ನುಸಿರನ್ನು ಆ ಗಾಳಿಯಲ್ಲಿ ಬೆರೆಸಿ
ಆ ಗಾಳಿ ನನ್ನನ್ನು ಸ್ಪರ್ಶಿಸಲು,
ಪ್ರತಿ ಬಾರಿ ನನ್ನ ಮನಕ್ಕೆ
ನಿನ್ನ ಇರುವಿಕೆಯ ಪರಿಚಯಿಸಿ
ಸದಾ ಕಾಡುವೆ ಏಕೆ?

ಕೇಳೆನು ಕೇಳದಿರಲಾರೆನು ನಿನ್ನ ಸ್ವರವ
ನೋಡೆನು ನೋಡದಿರಲಾರೆನು ನಿನ್ನ ಚೆಂದವ
ವರ್ಣಿಸಲಾರೆನು ವರ್ಣಿಸದಿರಲಾರೆನು ನಿನ್ನ ಅಂದವ
ನಿನ್ನ ಇರುವಿಕೆಯಲ್ಲಿನ ಖುಷಿಯ
ನನ್ನ ಮನದಲ್ಲಿ ಕೂಡಿಟ್ಟಿರುವೆ
ಮರೆಯನು ಮರೆಯದಿರಲಾರೆನು ನಿನ್ನ ನೆನಪ

ನನ್ನ ಹೃದಯದಲ್ಲಿ ಒಡಮೂಡಿರುವ ದೇವತೆಯೇ
ನಿನ್ನ ನೆನಪಿನ ಬುತ್ತಿ ಹೊತ್ತು
ಸಾಗುತ್ತಿರುವ ಜೀವಕ್ಕೆ
ಸದಾ ಕಾಡುವ ಏಕೆ?

-ಡಾ. ಪವನ್‍ಕುಮಾರ್, ಕೆ.ಎನ್.


ಕರುಣೆಯಿಲ್ಲದ ಸುಂದರಿ

ಓ! ಶಸ್ತ್ರ ಸಜ್ಜಿತ ವೀರನೇ,
ಯಾವ ಬಾಧೆ ಕಾಡುತ್ತಿದೆ ನಿನ್ನ?
ಏಕಾಂಗಿಯಾಗಿ, ನಿಸ್ತೇಜನಾಗಿ
ಅಲೆದಾಡುತ್ತಿರುವೆಯಲ್ಲ?
ಹಸಿರು ಹುಲ್ಲು ಬಾಡಿದೆ ಇಲ್ಲಿ
ಸರೋವರದ ಬದಿಯಲ್ಲಿ.
ಇಲ್ಲವಾಗಿದೆ ಹಕ್ಕಿಗಳ
ಇಂಚರದ ಕಲರವ

ಯಾವ ಬಾಧೆ ಕಾಡುತ್ತಿದೆ ನಿನ್ನ,
ಓ! ಶಸ್ತ್ರ ಸಜ್ಜಿತ ವೀರನೆ?
ಮುಳುಗಿರುವೆ ಕಂಗೆಟ್ಟು ದುಃಖದಾ
ಮಡುವಿನಲಿ,
ಅಳಿಲುಗಳ ಧಾನ್ಯಕಣಜ ತುಂಬಿದೆ,
ಸುಗ್ಗಿಯೂ ಕಳೆದಿದೆ

ನಿನ್ನ ಹುಬ್ಬುಗಳ ಮೇಲೆ
ಹತಾಶೆಯ ತೇವವನ್ನೂ,
ತಾಪದ ಇಬ್ಬನಿಯನ್ನೂ
ತೊಟ್ಟ ಲಿಲ್ಲಿಹೂ ಕಾಣುತ್ತಿದೆ ನನಗೆ.
ನಿನ್ನ ಕೆನ್ನೆಗಳ ಮೇಲೆ ಬಾಡಿದ ಗುಲಾಬಿ
ಇನ್ನಷ್ಟು ಕಮರುತ್ತಿದೆ

ಹುಲ್ಲುಗಾವಲಿನಲ್ಲಿ
ನಾನೊಂದು ಹೆಣ್ಣ ಕಂಡೆ
ಸುಂದರ, ಗಂಧರ್ವಲೋಕದ ಕನ್ಯೆ.
ನೀಳಕೇಶರಾಶಿಯ, ಹಗುರ ಹೆಜ್ಜೆಯ
ಅವಳ ಕಣ್ಣುಗಳು ಉಗ್ರವೂ ಕ್ರೂರವೂ.

ಅವಳ ಸಿರಿಮುಡಿಗೆಂದೆ ಮಾಲೆಯನ್ನು,
ಕೈಗಡುಗವನ್ನೂ ಮತ್ತು ಪುಷ್ಪವೇಷ್ಟಿತ
ನಡುಪಟ್ಟಿಯನ್ನು ಮಾಡಿದೆ.
ನನ್ನನ್ನೆ ಪ್ರೀತಿಸುತ್ತಿರುವವಳಂತೆ
ನನ್ನತ್ತ ನೋಡಿ ಸಿಹಿಯಾಗಿ
ಮುಲುಗಿದಳು ಆಕೆ.

ನನ್ನ ಹಾರುಗುದುರೆಯ ಮೇಲೆ
ಆಕೆಯನು ಹೊತ್ತೊಯ್ದೆ.
ಆ ದಿನವಿಡೀ ಬೇರೇನನ್ನೂ ಕಾಣಲಿಲ್ಲ ನಾನು.
ಆಕೆ ಗುನುಗುತ್ತಿದ್ದಳು ಪಕ್ಕದಲ್ಲಿ
ಅತ್ತಿತ್ತ ಬಾಗುತ್ತ, ಬಳಕುತ್ತ
ಯಕ್ಷಗೀತೆಯನ್ನು.

ನನಗಾಗೇ ಸಿಹಿ ಸ್ವಾದಿಷ್ಟ ಗಡ್ಡೆಗಳನ್ನು
ಕಾಡು ಜೇನನ್ನು, ಮನ್ನಾ ಇಬ್ಬನಿಯನ್ನೂ
ಹುಡುಕಿ ತಂದಳು ಆಕೆ
ಉಲಿದಳು ವಿಚಿತ್ರ ಭಾಷೆಯಲಿ
“ಸತ್ಯವಾಗಿಯೂ ನಾನು ನಿನ್ನ ಪ್ರೀತಿಸುವೆ” ಎಂದು.

ಕರೆದೊಯ್ದಳು ನನ್ನ ಯಕ್ಷ
ಗುಹೆಯೊಂದಕ್ಕೆ,
ಅತ್ತಳು, ನೊಂದಳು, ನಿಟ್ಟುಸಿರ ಚೆಲ್ಲಿದಳು
ವೇದನೆಯಲಿ.
ಮತ್ತಾಗ ನಾನಾಕೆಯ ಉರಿಯುವ
ಕಣ್ಣುಗಳನ್ನು ಚುಂಬಿಸಿ ಚುಂಬಿಸುತ್ತಲೇ
ಮುಚ್ಚಿದೆ.

ಆಕೆ ನನ್ನ ಮುದ್ದುಗರೆದಳು
ನಿದ್ರೆಗೆಳೆಸಿದಳು.
ಆ ಕನಸಿನಲ್ಲಿ, ಓಹ್! ದುಃಖ ಉಮ್ಮಳಿಸುತ್ತಿತ್ತು
ಇದೊಂದು ಹೊಚ್ಚ ಹೊಸ ಬಗೆಯ ಕನಸು
ನಾನೆಂದೂ ಹಿಂದೆ ಕಂಡಿರದಂತಹ ಕನಸು
ತಣ್ಣನೆಯ ಬೆಟ್ಟದ ಬದಿಯಲ್ಲಿತ್ತು.

ಅಲ್ಲಿ ಕಳಾಹೀನ ಮುಖದ ರಾಜರೂ
ರಾಜಕುಮಾರರೂ
ಜೊತೆಯಲ್ಲಿ ನಿಸ್ತೇಜಗೊಂಡ ಯೋಧರೂ
ಸಾವಿನಲಿ ಕಳೆಗುಂದಿದ ಅವರಿದ್ದರು.
ಎಲ್ಲ ಕಿರುಚಿದರು ಒಕ್ಕೊರಲಿನಲಿ
“ಕರುಣೆಯಿಲ್ಲದ ಸುಂದರಿ ಈಕೆ
ನೀನು ಈಗ ಇವಳ ಅಡಿಯಲಿ”
ಮಸುಕು ಕತ್ತಲಲಿ ಹಸಿವೆಯಲಿ ಬಾಯ್ಬಿಟ್ಟ
ಅವರ ಒಣ ತುಟಿಗಳ ಕಂಡೆ.
ಕನಸಿನಿಂದ ಎದ್ದೆ, ಮತ್ತು
ಈ ತಣ್ಣನೆಯ ಬೆಟ್ಟದ ಬದಿಯಲ್ಲಿ ನಾನಿದ್ದೆ.

ಹಾಗಾಗಲೇ ನಾನಿಲ್ಲಿ ಉಳಿದೆ
ಏಕಾಂಗಿಯಾಗಿ, ಕಳಾಹೀನನಾಗಿ
ಸುಮ್ಮನೇ ಅಲೆದಾಡುತ್ತಾ.
ಸರೋವರದ ಹಸಿರು ಹುಲ್ಲು ಬಾಡಿದೆ ಇಲ್ಲಿ,
ಹಕ್ಕಿಗಳ ಇಂಚರವಿಲ್ಲ ಇಲ್ಲಿ.

ಇಂಗ್ಲೀಷ ಮೂಲ : ಜಾನ್ ಕೀಟ್ಸ್
Poem–La belle dame sans merci
ಅನುವಾದ: ನಾಗರೇಖಾ ಗಾಂವಕರ


ಗೋಡೆಯ ಮೇಲಾಡುವ ಚಿತ್ರ

ಒಳಬರಲಾದ ಬಾಗಿಲಲ್ಲಿ
ಕಾದು ಕುಳಿತು ನಿನ್ನ ಪ್ರೀತಿಗೊಸ್ಕರ ಹಸಿದೆ
ಚಂದಿರನ ಅಷ್ಟೂ ಬೆಳಕು ನಿನ್ನ ಕಣ್ಣಲ್ಲಿತ್ತು
ನೀನು ಪಾದಗಳು ನೆಲ ಸೋಕುವುದು ಬೇಡವೆಂದು
ರಂಗೋಲಿ ಬರೆದು ಕೂತೆ ಮುಗುಳು ನಗೆ ಮೆತ್ತಿ
ರಂಗೋಲಿಗೂ ಕಣ್ಣು ಕಿವಿ ಎಲ್ಲಾ ಮೂಡಿದವು ನೀನು ಮಾತ್ರ ಬರಲಿಲ್ಲ

ಗೋಡೆ ನೋಡುತ್ತಾ ಕೂತವನಿಗೆ
ಅದರ ಮೇಲಾಡುವ ಚಿತ್ರ ಕರೆದಂತಾಯಿತು
ಅರೆ ! ಅವಳೇ ಅಲ್ಲವೆ ?
ನನ್ನ ಚಿತ್ತಾರದ ಗೊಂಬೆ
ಇಲ್ಲಿಗೂ ಬಂದಳೇ ?
ಇಲ್ಲ ನಾನೇ ಅಲ್ಲಿಗೆ ಹೋದೆನೆ ?
ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ನೋಡಿದೆ
ನವಿಲು ರೆಕ್ಕೆಬಿಚ್ಚಿ ನರ್ತಿಸುವಂತೆ
ಗೋಡೆಯ ಮೇಲಿನ ಚಿತ್ರ !

ತುಟಿಯ ಮೇಲಿನ ಮೃದು ಮಾತು
ಸಣ್ಣಗೆ ಕೇಳಿಸುತ್ತಿದೆ
ಆ ಚೆಲುವಿನ ನಗ್ನತೆಯಲಿ ದೇವರಿದ್ದಾನೆ
ಬಾಹುಗಳು ಮುಂದೆ ಚಾಚುತ್ತಿವೆ
ಮುಟ್ಟಲು ಹೋದರೆ
ಬೆರಳಿಗಂಟಿದ ಸುಣ್ಣದ ಗುರುತು !

ಎಷ್ಟು ಚೆಂದ !
ಕಡಲಿಗೆ ಕಣ್ಣಾಗಿ ಬೆಳಕಾದವಳ ಬಣ್ಣ
ಮೌನದ ತುಟಿಗಳ ನಡುವೆ
ಅಡಗಿದ ಜಗದ ರಹಸ್ಯ
ನನ್ನೆಲ್ಲಾ ವಾಂಛೆಗಳನ್ನು ಹೀರಿ
ಕನ್ನಡಿಗೆ ಮೆತ್ತಿದಳು

ಕರುಳು ಕಲೆತ ಆ ಊರಲ್ಲಿ
ಅವಳ ಗೆಜ್ಜೆ ಸದ್ದು ಕೇಳುತ್ತಿದೆ
ನೀಳ ಕೇಶರಾಶಿಯ ತೂಕ ನನ್ನ ಬೆನ್ನ ಸವರುತ್ತಿದೆ
ಕಣ್ಣಲ್ಲೇ ಬರೆದ ಪ್ರೇಮ ಪತ್ರ
ಹೃದಯವ ತಬ್ಬಿದೆ

ಮೂಗಿನ ತುದಿಯ ಪ್ರೀತಿಗೆ
ಅವಳ ಮೂಗು ನತ್ತು ಮಿಂಚುತ್ತಿದೆ
ಗೋಡೆಯೇ ಅವಳಾಗಿದ್ದಾಳೆ
ಇಡೀ ಸೀರೆಯೊಳಗೆ ನನ್ನದೇ ಭಾವ ಚಿತ್ರ !

ಬಿದಲೋಟಿ ರಂಗನಾಥ್


ಗಜಲ್

ಹೂವಿನೊಳಗೆ ಬಂದು ಸೇರಿದ ದಿವ್ಯಗಂಧ ನೀನು ಒಮ್ಮೆ ಬಂದು ಹೋಗು

ಹಿತ್ತಲಲ್ಲಿ ಸುರಿದ ಕಾಡಬೆಳದಿಂಗಳು ನೀನು ಒಮ್ಮೆ ಬಂದು ಹೋಗು

ಕಂಡ ಹಸಿರಿನ ಕಡೆಗೆ ಎದ್ದು ಹೋಗುವ ಜಾಯಮಾನ ನನ್ನದಲ್ಲ

ಇದ್ದ ಬರಡಿನಲ್ಲೆ ಹಸಿರು ಕೊನರಿಸಬಲ್ಲೆ ಒಮ್ಮೆ ಬಂದು ಹೋಗು

ನನಗಿನ್ನೂ ನಾಳೆಗಳಿಲ್ಲ ಕೇವಲ ನಿನ್ನೆಗಳಲ್ಲಿ ಬದುಕುವ ಅನಿವಾರ್ಯತೆ ನನ್ನದು

ನನ್ನ ನಿನ್ನೆಗಳಲ್ಲಿ ನೀನು ಮಾತ್ರ ಇರುವುದು ಒಮ್ಮೆ ಬಂದು ಹೋಗು

ನೀನು ಭೋರ್ಗೆರೆದು ಹೋಗುವ ಹುಚ್ಚು ಅಲೆ ಅಂತ ಗೊತ್ತು

ನಾನು ನಿನಗಾಗಿ ನಿಂತಲ್ಲೆ ಕಾಯುವ ನಿಶ್ಚಲ ದಂಡೆ ಒಮ್ಮೆ ಬಂದು ಹೋಗು

ಇಬ್ಬನಿಯೇಟಿಗೆ ತತ್ತರಿಸಿಹೋದ ಹೂವಿನ ಪಕಳೆಯಂತಾಗಿದ್ದೇನೆ

ನೋವುನಲಿವಿನ ಜೊತೆ ನಿಲ್ಲುವ ಆತ್ಮಬಂಧು ನೀನು ಒಮ್ಮೆ ಬಂದು ಹೋಗು

ಮೈಯ ತಿರುವುಗಳಲ್ಲಿ ಅರಳಿದ ಯೌವನದ ಜಲಧಿಯಲ್ಲಿ ಬಿದ್ದುಬಿಟ್ಟಿದ್ದೇನೆ

ನನ್ನ ಕೈಹಿಡಿದು ದಡಮುಟ್ಟಿಸುವವಳು ನೀನೊಬ್ಬಳೇ ಒಮ್ಮೆ ಬಂದು ಹೋಗು

ನೀನು ಹೆಜ್ಜೆ ಇಟ್ಟು ನಡೆದು ಹೋದಲೆಲ್ಲಾ ಸಿಗುವುದು ಸುಖದ ಗೊಂಚಲು

ಮೌನ ಸಾಕು ದನಿ ಬಿಚ್ಚಿ “ಕಾಂತ” ನ ಮಾತನಾಡು ಒಮ್ಮೆ ಬಂದು ಹೋಗು

ಲಕ್ಷ್ಮಿಕಾಂತ ಮಿರಜಕರ. ಶಿಗ್ಗಾಂವ


ನಾನೊಬ್ಬ ಸರ್ಕಾರಿ ಶಾಲೆಯ ಲೀಡರ್ ಆದಾಗ

ಅಂದು ನಾನು ಶಾಲೆಯಲ್ಲಿ
ಲೀಡರ್ ಆದಾಗ ಪ್ರತಿದಿನ
ಶಾಲೆಗೆ ಬೇಗ ಬರಬೇಕಿತ್ತು,
ಅಂದು ಕಸದ ಸರದಿ
ಇರುವವರ ಬಳಿ ಕಸ ಬಳಿಸಬೇಕಿತ್ತು,
ಪ್ರಾರ್ಥನೆಯಲ್ಲಿ ಸುದ್ದಿ
ಸುಭಾಷಿತಗಳನ್ನ ಓದಬೇಕಿತ್ತು,
ಶಿಕ್ಷಕರು ಬರುವ ಮುನ್ನ
ಬೋರ್ಡ್ ವರೆಸಿ
ಚಾಕ್ ಪೀಸ್ ಗಳನ್ನ ತಂದು ಇರಬೇಕಿತ್ತು,
ಕೆಲವೊಮ್ಮೆ ರಾಟೆ ಇದ್ದವರ
ಮನೆಗೆ ಹೋಗಿ ಡೆಸ್ಟರ್
ಹೊಲಿಸಿಕೊಂಡು ಬರಬೇಕಿತ್ತು,
ಶಿಕ್ಷಕರಿಲ್ಲದ ಸಮಯದಲಿ
ಮಾತನಾಡಿದವರ ಹೆಸರನ್ನು
ಬೋರ್ಡ್ ಮೇಲೆ ಬರೆಯಬೇಕಿತ್ತು,
ಹೆಚ್ಚು ಮಾತನಾಡಿದವರಿಗೆ
ಪ್ಲಸ್ ಹಾಕಬೇಕಿತ್ತು.
ಶಾಲೆಗೆ ಯಾರಾದರೂ ಇನ್ಸ್‌ಪೆಕ್ಷನ್ ಗೆ
ಬಂದಾಗ ನಾವೇ
ಮುಂದೆ ಕೂರಬೇಕಿತ್ತು….
ರಾಷ್ಟ್ರೀಯ ಹಬ್ಬಗಳು ಬಂದಾಗ
ನಾವೇ ಭಾಷಣ ಮಾಡಬೇಕಿತ್ತು….
ಪ್ರತಿಭಾ ಕಾರಂಜಿಯಲ್ಲಿ ಕಂಠಪಾಠ,
ಕ್ವಿಜ್ ಗಳಿಗೆ ನಾವೇ ಭಾಗವಹಿಸಬೇಕಿತ್ತು…..
ಪರೀಕ್ಷಗೆ ಬಾರದ ವಿಧ್ಯಾರ್ಥಿಗಳ
ಉತ್ತರ ನಾವೇ ಬರೆದು ಕೊಡಬೇಕಿತ್ತು…..
ಶನಿವಾರದಂದು ನಾವೇ
ಡ್ರಿಲ್ ಮಾಡಿಸಬೇಕಿತ್ತು…
ಟೀಚರ್ಸ್ ಮಿಂಟಿಂಗ್ ಗಳು
ಇದ್ದಾಗ ಟೀ ತರಲು ನಾವೇ ಹೋಗಬೇಕಿತ್ತು,….
ಟೀ ತರುವಾಗ ಕೆಲ ಶಿಕ್ಷಕರಿಗೆ
ಶುಗರ್ ಲೆಸ್ ಟೀ ತರುವುದನ್ನ
ನೆನಪಿನಲ್ಲಿಡಬೇಕಿತ್ತು,…
ಶಾಲೆ ಬಿಡುವ ಮುನ್ನ
ಬೆಲ್ ಹೊಡೆದು ತರಗತಿ ಬೀಗಗಳನ್ನ
ನಾವೇ ಹಾಕಬೇಕಿತ್ತು…..
ಇಷ್ಟೆಲ್ಲಾ ಕೆಲಸಗಳನ್ನು
ಮಾಡಿಸುವುದರ ಮೂಲಕ
ನನಗೆ ಜೀವನ ಪಾಠ ಕಲಿಸಿತು
ನನ್ನ ಪ್ರೀತಿಯ ಸರ್ಕಾರಿ ಶಾಲೆ…….
ಅಜಯ್


ಒಂದೇ ದಿನ ಸಾಕೆ ?

ವರ್ಷವೆಲ್ಲಾ ನಿನ್ನ ನೀನು ಧಾರೆಯೆರೆವೆ
ಮನೆಯ ಸಂತಸದಲ್ಲಿ, ಸಂತಸ ಕಂಡು
ದುಃಖದಲ್ಲಿ ಮರುಗುವ …..ಹೆಣ್ಣೇ
ನಿನಗೊಂದೇ ದಿನ ಮುಡಿಪೆ ?
ನಿನಗೆ, ಒಂದೇ ದಿನ ಸಾಕೆ?

ಹೆತ್ತವರು, ಒಡ ಹುಟ್ಟಿದವರನ್ನು ಬಿಟ್ಟು
ಹೊಸ ಆಸೆ ಕನಸುಗಳ ಹೊತ್ತು
ಹೊಸ ಸಂಬಂಧದಲಿ, ಹಳೆಯ ನೆನಪುಗಳನ್ನು ಹುಡುಕುವ
ಮೆಟ್ಟಿದ ಮನೆಯನ್ನು ಬೆಳಗಿಸುವ ….ಹೆಣ್ಣೇ…..
ನಿನಗೆ, ಒಂದೇ ದಿನ ಸಾಕೆ?

ನಿನ್ನ ಮಡಿಲಲಿ ಜೀವ ಮೊಳಕೆಯೊಡೆದು
ಮತ್ತೊಂದು ಜೀವ ಹೊರತರಲು
ಸತ್ತು ಬದುಕಿ ಮರು ಜನ್ಮ ಪಡೆವ….ಹೆಣ್ಣೇ
ನಿನಗೆ, ಒಂದೇ ದಿನ ಸಾಕೆ?

ಸಂಸಾರದ ಬಂಡಿಯನು ಸೊಗಸಾಗಿ ನಡೆಸಲು,
ಪತಿಯ ಹೆಗಲಿಗೆ ಹೆಗಲಾಗಿ ನಿಂತು
ಪ್ರೀತಿಯ ಕಂದಮ್ಮನ ಅನ್ಯರಲಿ ಬಿಟ್ಟು
ಮನೆ ಒಳಗು, ಹೊರಗೂ ಸಾಧನೆ ಮೆರೆಯುವ ….ಹೆಣ್ಣೇ
ನಿನಗೆ, ಒಂದೇ ದಿನ ಸಾಕೆ?

ಮನೆಯ ಮಂದಿಯ ಇಷ್ಟ ಕಷ್ಟಗಳ ಅರಿತು
ಅವರು ಬೇಡಿದ ಕೂಳನು ಕುದಿಸಿ
ಕೈ ತುತ್ತ ನೀಡುತ, ನಿನ್ನ ಹಸಿವ ಮರೆವ…ಹೆಣ್ಣೇ
ನಿನಗೆ, ಒಂದೇ ದಿನ ಸಾಕೆ?

ಬೆಳೆದ ಮಕ್ಕಳು ಹೊಸ ದಾರಿ ಅರಸುತ
ಮನೆ, ಮನಗಳ ತೊರೆಯುತ
ಹೊಸ ಗೂಡನ್ನು ಕಟ್ಟಿ, ನಿನ್ನ ಮರೆತಾಗಿಯೂ
ಕಂಬನಿಯ ಒಳಗೂ, ಹಾರೈಕೆ ನೀಡುವ…ಹೆಣ್ಣೇ
ನಿನಗೆ, ಒಂದೇ ದಿನ ಸಾಕೆ?

ಸ್ವಾರ್ಥವಿಲ್ಲದೆ ಏನನ್ನು ಅಪೇಕ್ಷಿಸದೆ ನಡೆಯುತ
ಜೊತೆಯಲ್ಲಿದವರನ್ನು ಕೈ ಹಿಡಿದು ನಡೆಸುತ್ತಾ
ನಿರ್ಭೀತಿಯಿಂದ, ತಲೆಯೆತ್ತಿ ನಡೆಯುವ …ಹೆಣ್ಣೇ
ನಿನಗೆ, ಒಂದೇ ದಿನ ಸಾಕೆ?
ಶಿಲ್ಪಾ ಬಸ್ತವಾಡೆ


ಕರೋನಾ

ಮೋಜು ಮಸ್ತಿಯಲ್ಲೆ
ಮೈ ಮರೆತವರನ್ನು
ಕಾಲು ಮುರಿದು
ಮನೆಯಲ್ಲೇ ಕೂರಿಸಿತು ಕರೋನಾ

ಸಭೆಯಲ್ಲಿ ಮಾತಿನ
ಅಸ್ತ್ರಗಳಿಂದ ಹೊಡೆದಾಡುತ್ತಿದ್ದವರಿಗೆ
ಮುಖಗವಸು ಹಾಕಿಸಿದ ಕರೋನಾ

ನಾನು ಶುದ್ಧ, ನಾನೇ ಶುಚಿ
ಎಂದೆಲ್ಲಾ ಬೀಗುವವರಿಗೆ
ಮುಖಕ್ಕೆ ಹೊಡೆದಂತೆ
ಕೈ ತೊಳೆ ಎಂದು ಹೇಳಿದ ಕರೋನಾ

ಬೀದಿ ಬೀದಿಯಲ್ಲಿ
ಗುಂಪು ಗುಂಪಾಗಿ
ಹೋರಾಟಕ್ಕಿಳಿದವರನ್ನೆಲ್ಲಾ
ಸದ್ದಿಲ್ಲದೆ ಓಡಿಸಿದ ಕರೋನಾ

ಮಂದಿರ, ಮಸೀದಿ, ಚರ್ಚುಗಳಿಗೆಲ್ಲ
ಬೀಗ ಜಡಿದು
ಮನುಷ್ಯರೆಲ್ಲರೂ ಒಂದೇ
ಎಂದು ಸಾರಿದ ಕರೋನಾ

ಮದ,ಮತ್ಸರ,ದುರಾಸೆಯ ಅಹಮ್ಮಿನಲ್ಲಿ
ಮೆರೆಯುತ್ತಿದ್ದ ಮನುಜ ಕುಲಕ್ಕೆ
ಒಂದು ವೈರಾಣುವಿನ ಸೆಡವಿನಿಂದ
ಬಿಸಿ ಮುಟ್ಟಿದ ಕರೋನಾ.

-ರೇಣುಕಾ ಕೋಡಗುಂಟಿ.


ಕವಿ(ತ)ತ್ವ

ಜಗದ ಜಂಜಡಗಳಿಗೆ ಬದುಕು ಭಾರವಾಗಿ
ದಯೆ ದಾಕ್ಷಿಣ್ಯಗಳಿಗೆ ಜಗ್ಗದ ಯೋಗಿ
ಸಮೂಹದೊಳಗಿದ್ದರೂ ಬೈರಾಗಿ
ಕಾಯ ಪ್ರಸ್ತುತವಿದ್ದರೂ ಇಹದಿಂದ ದೂರಾಗಿ
ಸದಾ ತನ್ನೊಳಗೆ ತಾನು ಲೀನವಾಗಿ
ಯೋಚಿಸುವ ಸದಾ ಕವಿತೆ ಹುಟ್ಟಿಗಾಗಿ..!

ಕಲ್ಲನ್ನು ತಿದ್ದಿ ತೀಡಿ ಶಿಲೆಯಾಗಿಸಿ
ಶಿಲೆಗೊಂದು ಕವಿತೆ ಹೊರಡಿಸಿ
ಮೊಗ್ಗಾದ ಭಾವನೆಗಳ ಅರಳಿಸಿ
ಕಲ್ಪನೆ-ವಾಸ್ತವಗಳ ಎರಕ ಬಿಡಿಸಿ
ಓದುಗನ ಮನದಲಿ ಸಂಚಲನ ಸೃಷ್ಟಿಸಿ
ಶ್ರಮಿಸುವ ಸದಾ ಕವಿತೆ ಉಗಮಕ್ಕಾಗಿ..!

ಗಮಕ,ರೂಪಕಗಳ ಅಲಂಕಾರ
ನವ-ನವೀನ ಭಾವೋದ್ವೇಗಗಳ ಶೃಂಗಾರ
ಮನದೊಳಗೆ ಹಚ್ಚ ಹಸಿರು -ಉಸಿರಿನ ಸಂಚಾರ
ಪದ,ವಿನೋದ,ಉನ್ಮಾದಗಳ ಆಗರ
ಜಗದಗಲ ಏಕಾಂತ ಪ್ರಿಯಕರ
ತಡಕಾಡುವ ಸದಾ ಕವಿತೆ ಜನನಕ್ಕಾಗಿ..!

ಬಂದ ದೂರುಗಳ ಕಿತ್ತೊಗೆದು
ನೈಜತೆಯ ಅಡಿಪಾಯ ಬಗೆದು
ನವ್ಯ-ಶ್ರ್ಯಾವ್ಯ,ಕಲೆಗಳ ಹೊಸೆದು
ಅಧ್ಯಯನದಿ ಉಸಿರನೇ ಬಸಿದು
ಭಾವ -ಜೀವಗಳ ಬಲೆಯನೇ ಹೆಣೆದು
ಹುಡುಕಾಡುವ ಕಾವ್ಯದ ಸೃಷ್ಟಿಗಾಗಿ..!

ಕವಿತಾ ಸಾರಂಗಮಠ


ಬಾನಿಗೆ ಕೈ ಚಾಚಿಡೊದೆ
ಹಕ್ಕಿಯಾಗಿ ಹಾರುವಾಸೆ
ಒಬ್ಬಂಟಿಯಾಗಿ ಕೂಗುವಾಸೆ
ಆ ಕೂಗು ಮತ್ತೆ ಕೇಳುವಾಸೆ
ಮಳೆರಾಯನ ಕರೆಯುವಾಸೆ
ಕಾಮನಬಿಲ್ಲಿಗೆ ಮುತ್ತಿಡುವಾಸೆ
ಚಂದ್ರನ ಆಪ್ಪುವಾಸೆ
ನಕ್ಷತ್ರಗಳೊಡಗೂಡಿ ಆಡುವಾಸೆ
ನಿಂತಲ್ಲೇ ನನ್ನನ್ನೇ ನಾ ಮರೆಯುವಾಸೆ
ದೂರವಾದ ಜೀವಗಳ ನೋಡುವಾಸೆ
ಈ ಎಲ್ಲಾ ಆಸೆಗಳು ಈಡೇರಲ್ಲೆನ್ನುವಾಸೆ

ಆನಂದ ಕುಮಾರ್, ಎಲ್.


ನೋವೊಂದನು ಉಳಿಸಿ ಹೋದವಳು..

ಕಪ್ಪು ಬಣ್ಣದವಳು
ಕನಸು ಕಪ್ಪು ನೆನಪು ಕಪ್ಪು
ಪ್ರೀತಿ ಮಾತ್ರ ಶ್ವೇತ ಶುಭ್ರ..

ನೋವೊಂದನ್ನು ಉಳಿಸಿ ಹೋದವಳಿಗೆ
ವಂದನೆ ಹೇಳಲೇಬೇಕು
ಸಂತಸದ ಗೋಡೆಯಿಂದಾಚೆಗೆ
ವಿಷಾದ ದುಃಖದ ಮಡುವಿದೆ
ಇಲ್ಲಿ ನಗುವಿನ ಮುಖವಾಡ ಹೊತ್ತ
ಮುಖವಿದೆಯಷ್ಟೇ ಇದೆ ಹೃದಯವಲ್ಲ …!

ವಂದನೆ ಹೇಳಲೇಬೇಕು
ಕಾರಣವಿಲ್ಲದೆ ಬಂದವಳಿಗೆ
ಕಾರಣ ಕೇಳಿ ಬರುವ ಅತಿಥಿಗಳಿಗೂ ಒಂದೇ ಆತಿಥ್ಯ
ಪ್ರೀತಿ ಯಾವ ವಿಭಾಗಕ್ಕೆ ಸೇರಿದ್ದು
ಹೃದಯ ಕೋಣೆಯಲ್ಲಿ
ನೀನು ತಂಗಿದ್ದು ಮಾತ್ರ ಸತ್ಯ
ಕಣ್ಣಹನಿ ರಶೀದಿಯಲ್ಲಿ..!

ಎಲ್ಲ ಸಂತಸದ ಕೊನೆಯಲ್ಲಿ ವಿಷಾದದ ಛಾಯೆಯಿದೆ
ಪ್ರೀತಿ ಇಲ್ಲದೆ ಹೋಗಿದ್ದರೆ ಜಗತ್ತು ಹೀಗಿರುತ್ತಿರಲಿಲ್ಲ
ಒಂಟಿತನಕ್ಕೊಂದು ರಾತ್ರಿಗೊಂದು
ಮಳೆಗಾಲಕ್ಕೊಂದು, ಚಳಿಗಾಲಕ್ಕೊಂದು ಬೇಸಿಗೆಗೊಂದು
ಅರ್ಥ ಬರುತ್ತಿತ್ತು.
ನೆನಪು ಪಾರ್ಥೇನಿಯಂನಂತೆ
ಹುಟ್ಟಿ ಚಿಗುರು ಹೂವಾಗಿ ಬೀಜವಾಗಿ ಉದಿರಿಸಿದೆ..!

ನೋವೊಂದನು ಉಳಿಸಿ ಹೋದವಳು
ರಾತ್ರಿಗೂ ಜೊತೆಯಾಗುತ್ತಾಳೆ
ಸಂಗವಾಗುತ್ತಾಳೆ ಕವಿತೆಗೂ ಜೀವಾಗುತ್ತಾಳೆ
ಕಣ್ಣು ತೆರೆದರೆ ಮಂಗಮಾಯವಾಗುತ್ತಾಳೆ
ಹುಡುಕಾಡಿ ತಡಪಡಿಸುತ್ತದೆ ಮನಸು..!

ವೃಶ್ಚಿಕ ಮುನಿ..(ಪ್ರವೀಣಕುಮಾರ ಸುಲಾಖೆ)


ಮಂಗಳ ಸುಮಂಗಳೆ

ನಾನು ಹುಟ್ಟಿದಾಗ ಏನು ಅರಿಯದ ಹಸುಳೆ…
ಅಪ್ಪ ಅಮ್ಮನ ಮುದ್ದಿನ ಮಗ ಅಕ್ಕಂದಿರ ನಲ್ಮೆಯ ತಮ್ಮ
ಆಡುತ ನಲಿಯುತ ನನ್ನವರ ಜೊತೆ ಕಳೆದೆ ಹಲವರು ಸಂವತ್ಸರ….
ಅಮ್ಮನ ಕೈ ತುತ್ತು ಅಪ್ಪನ ಹೆಗಲ ಮೇಲೆ ಕೂತು
ಮುಗಿಲ ಎತರಕ್ಕೆ ನೋಡಿದ ಆ ಪ್ರಪಂಚ ಮತ್ತೆಂದು ಸಿಗದು ….

ನೆರೆಮನೆಯ ನನ್ನ ಓರಗೆಯವರು ಆಟ ಹಾಡಲು ಕರೆದರೆ
ಮನಸ್ಸು ರಂಗೋಲಿ ಹಾಡು ಹಸೆ ಚೌಕಬರ ಕಡೆವಾಲಿತು
ಅಪ್ಪ ತರುತ್ತಿದ್ದ ಬಗೆ ಬಗೆ ಆಟದ ವಸ್ತು….
ಅಕ್ಕನ ಬಿಂದಿ, ಪೌಡರ್, ಉಗರು ಬಣ್ಣ, ಟೇಪು ನನ್ನ ಸಂಪತ್ತು….

ಪ್ರಾಯಕ್ಕೆ ಬಂದೆನೆಂದು ಅಪ್ಪ ಹತ್ತಾರು ಅಂಗಡಿ ಸುತ್ತಿ ತಂದ
ಬಣ್ಣ ಬಣ್ಣದ ಬೆಲ್ ಬಾಟಮ್ ಪ್ಯಾಂಟು ಶರ್ಟು ಬೂಟು ಆದರೆ
ಯಾವುದು ಬೇಡವಾಯ್ತು ಎನಗೆ ನನ್ನ ಅಂತಾರಳದ ಜೊತೆ
ಪ್ರತಿ ನಿತ್ಯ ಯುದ್ಧ ಮಾಡುತ್ತ ಬಲವಂತವಾಗಿ ಧರಿಸಿದೆ ಎನ್ನ ಮನ ಗೊಂದಲ ಮಯ..

ಕಡೆಗೆ ಒಮ್ಮೆ ನಿರ್ಧರಿಸಿ ತೊಟ್ಟೆ ಅಕ್ಕಂದಿರ ಸೀರೆ ಕುಪ್ಪಸ
ಹಣೆಗೆ ಕುಂಕುಮ ಕೆನ್ನೆಗೆ ಹರಿಶಿಣ ಹಚ್ಚಿ
ಅಮ್ಮನ ಬಳೆ ಕಾಲ್ಗೆಜ್ಜೆ ಧರಿಸಿ ನನ್ನತನದ ಅಸ್ತಿತ್ವ ಪಡೆದೆ
ನನ್ನ ಈ ಪರಿಸ್ಥಿತಿಗೆ ನಾ ಹೊಣೆಯಲ್ಲ ಅರ್ಥ ಮಾಡಿಕೊಳ್ಳದ
ತಂದೆ ತಾಯಿ ಕರುಳಬಳ್ಳಿಯನ್ನು ಮನೆಯಿಂದ ಆಚೆ ಹಾಕಿದರಲ್ಲ..

ಮಮಕಾರದ ಪ್ರತಿರೂಪದಂತಿದ್ದ ಅಕ್ಕಂದಿರಿಗೆ
ಈಗ ರಕ್ತ ಹಂಚಿಕೊಂಡ ತಮ್ಮ ಬೇಡದವನಾದನಲ್ಲ
ನನ್ನವರಿಂದ ದೂರಾಗಿ ನಡೆದೆ ನಾ
ಕತ್ತಲೆಯ ಜಗತ್ತಿಗೆ ಕಣ್ಣೀರು ಒಂದೇ ಆಸರೆ ಈಗ

ಗೊತ್ತು ಗುರಿ ಇಲ್ಲದಂತೆ ನಡೆದೆ ನಾ ದಾರಿ ಕಾಣಿದಡೆಗೆ
ನನ್ನಂತೆ ಇದ್ದಂತ ಅಕ್ಕ ತಂಗಿಯರೊಡನೆ ಬೆರೆತು ಹೋದೆ
ಅಪ್ಪ ಅಮ್ಮ ಅಕ್ಕ ತಂಗಿ ಬಂದು ಬಳಗ ಎಲ್ಲ ಅವರೇ ಎನಗೆ
ನನ್ನವರ ನೆನಪಾದಾಗ ಕಣ್ಣು ಕೋಡಿಯಾಗದೆ ಇರದು
ಕಣ್ಣು ಒರೆಸುವ ಕೈಗಳು ಹಲವು ನಾವಿರುವೆವು ನಿನ್ನೊಡನೆ
ಎಂದು ಬದುಕುವ ಆಸೆ ಚಿಗುರೊಡಿಸುವರು…

ಕೈ ತಟ್ಟಿ ಕಾಸು ಕೇಳುವರು ಎಂದು ಕೀಳಾಗಿ ಕಾಣುವಿರಲ್ಲ
ನಮಗೂ ಒಂದು ಮನಸಿದೆ ಬದುಕುವ ಆಸೆ ಇದೆ ಎಂದು ತಿಳಿಯದೆ
ಸಮಾಜ ಇರುವಂತೆ ನಾವು ಸ್ವೀಕರಿಸಿರುವೆವು ಆದರೆ ನಮ್ಮನು
ನಾವಿರುವಂತೆ ಸ್ವೀಕರಿಸಲು ನಿಮಗೇಕೆ ಹಿಂಜರಿಕೆ ನಮ್ಮ ಜೀವನದಲ್ಲಿ
ವಿಧಿ ಲಿಖಿತ ಈ ರೀತಿ ಇರಲು ನಮ್ಮ ತಪ್ಪಾದರೂ ಎನು
ನಮಗೂ ನಿಮ್ಮಂತೆ ಬಾಳುವ ಆಸೆ ಇದೆ ನೀವು ಬದುಕಿ ನಮ್ಮನ್ನು ಬದುಕಲು ಬಿಡಿ….

-ಗಾಯತ್ರಿ


ಕಾಮನಬಿಲ್ಲು

ನೆಲಕು ಬಾಂದಳಕು
ಆಗಾಗ ಕೊನರಿ ಥಳುಕು ಹಾಕುವ ಬಳ್ಳಿ
ಬಣ್ಣ ಐಕ್ಯದ ಬೆಳ್ಳಿ
ಹಬ್ಬಿ ನಿಂತರೆ ಹಸುಳೆಗೂ ಹಬ್ಬ
ನೋಡುವವರೇ ಎಲ್ಲ ಏರಿಸಿ ಹುಬ್ಬ

ಅದಾವ ಬೀಜದ ಮೊಳಕೆಯೋ
ಅರ್ಧಚಂದ್ರ ಅದಾವ ಕಾಯಿ ಹೊಳಕೆಯೋ
ಯಾರ ಬಂಧನದೊಳಿದ್ದೆ
ಅದಾವ ಕಟ್ಟಳೆ ಸೆರೆ ಸೀಳಿ ಎದ್ದೆ
ಶ್ರೇಷ್ಠ ನಿನ್ನ ತರುಣರ ಕುಣಿಸೋ ಹುದ್ದೆ
ಕ್ಷಣಕಾಲ ಕಂಡು ಅದೆಲ್ಲಿ ಅಸ್ತಿತ್ವ ಕಳಚಿ ಬಿದ್ದೆ

ಅದ್ಯಾರ ಕೈವಾರದಿ ಹುಟ್ಟಿದ ಕೂಸು
ಏಳು ಬಣ್ಣದ ಕದಿಯಲಾಗದ ಕಡಗ
ಕುಂಚದಿ ಬಿಡಿಸ ಬಯಸೋ ಬೆಡಗ
ಮಳೆಬಿಲ್ಲೇ ಇಳೆನಲ್ಲೇ ಇರು ಇಲ್ಲೇ ಆರದೇ
ನೋಡುಗರಿಗೆ ಖುಷಿ ಕೊಡುವ
ಈ ಜನ್ಮ ಸಾಲದೇ

ಬಣ್ಣ ಬಣ್ಣದ ಬಳೆಯ ಕಂಡು
ವರ್ಷವೆಲ್ಲಾ ಹರ್ಷಗೊಂಡು ಆಡುತಿಹವು ಬೆಳೆಗಳು
ಮುಗಿಲ ಭಿತ್ತಿ ಹಗಲು ಬರ್ತಿ ಹರುಷ ತರ್ತಿ
ಮಾಯವಾಗಿ ಎಲ್ಲಿ ಹೋದವು
ರಂಗು ರಂಗಿನ ಆ ಏಳು ಅರೆಗಳು
ನಿಮ್ಮ ಅರಸಿ ಸರಸವಾಡಲು
ದಡಕೆ ಈಜಿ ಬರುತಿಹವು ತೆರೆಗಳು

ಅಯ್ಯಪ್ಪ ಬಸಪ್ಪ ಕಂಬಾರ


ಪರಿಸರದೊಡಲು ಕೆಡಸಿದರೆ.!

ಬಿಸಿಲಿಗೆ ಯಾರೂ ಕೊಡೆ ಹಿಡಿಯಲಿಲ್ಲ
ಮಳೆಗೂ ಮರೆತು ಹೋದಂತಹ ನಾಟಕವಾಡಿ
ಮರದ ಕೆಳಗೆ ನೆರೆದರು,
ಅಸಲೀ ಬದುಕಿನ ಕಾವ್ಯ ಬರೆದುಕೊಳ್ಳಲು.

ಬಹು ದಿಕ್ಕುಗಳೆಡೆ ಪಯಣಿಸಿ ಸುಸ್ತಾದ ನದಿಗಳು
ಬತ್ತಿ ಹೋಗುವ ದಿಗಿಲಿನಲ್ಲಿ ಗಾಯಗೊಂಡಿವೆ.
ಕೇಕೆ ಹಾಕಿದ ಕೆರೆಗಳು ,ಕೂಳಿಲ್ಲದ ಕೊಕ್ಕರೆಗಳು
ಸತ್ತು ಹೋಗುವ ಸ್ಥಿತಿ ತಲುಪಿ ಸೊರಗುತಿರಲು.

ಗಡಿಯಾರದ ಮುಳ್ಳುಗಳೂ ಭಯಗೊಂಡು
ನಡೆಯುತ್ತಿವೆ, ಪ್ರತಿ ಹೆಜ್ಜೆಗೂ ದಣಿಯುತ.
ಇರುಳುಬೆಳಕುಗಳೆರಡೂ ಕುರುಡುಕಾಂಚಾಣ
ಕುಣಿದಾಟದ ಬಡಿದಾಟದಲಿನ ಗಿಡುಗಗಳನ್ನು ಕಂಡು.

ಕುಡಿಯೊಡೆದ ಚಿಗುರನೂ ಚಿವುಟಿ ಕಂಬನಿ ತರೆಸುವರು,
ತಿರುಗುವ ಬುಗುರಿಯ ನಿಲ್ಲಿಸಿ ವಿಕೃತ ಮೆರೆಯಲು.
ಅಲುಗಾಡಿದ ಪ್ರತಿ ಎಲೆಯ ನಾದವ ಕೇಳುವ ಪರಿವಿಲ್ಲ.
ಬೆಳಗಾಗುವ ಪ್ರತಿ ದಿನ ಬೇದಭಾವದ ಬೇಲಿಯಲ್ಲಿ.

ಗಾಳಿ-ಬೆಳಕುಗಳೆರಡೂ ಸಂಘರ್ಷಕ್ಕಿಳಿದರೆ .?
ನೀರು-ನೆಲಗಳೆರಡೂ ಪಕ್ಷಪಾತಿಗಳಾಗಿರಲು
ನೀನೆಲ್ಲಿರುವೆಯೆಂದು ಒಮ್ಮೆ ಯೋಚಿಸಿ ನೋಡು,
ನೀ ನಡೆಯುವ ದಾರಿಯೇ ಕಚ್ಚಲಾರಂಭಿಸುತ್ತದೆ.

ಪರಿಸರದೊಡಲು ಕೆಡಸಿದರೆ ..!
ಅಹಂ ಬ್ರಹ್ಮಾಸ್ಮೀಯೂ‌ ಇಲ್ಲ
ಹರಹರ ಮಹಾದೇವನೂ ಇಲ್ಲ.
ಮುದಡಿ ಹೋಗುವ ಪುಷ್ಪದಷ್ಟೇ ನಿಶ್ಚಲ.!

ಎಂ.ಎಲ್.ನರಸಿಂಹಮೂರ್ತಿ


ತೇದಿ

ಬಾ ಇರು ಹೋಗು
ಹುಟ್ಟು ಸಾವುಗಳ ಮದ್ಯೆ
ಚಿವುಟಿದಷ್ಟೂ ಚಿಗುರುವ
ಮನದ ಅಲೆದಾಟ
ಭಾವಗಳೂ ಹಾಗೆ ಅಲೆಮಾರಿಗಳು

ಜಗದಲಿ ಶಾಂತಿಗಾಗಿ
ಜಡಿದ ಮೊಳೆಗಳಿಗೆ
ಜೋತು ಬಿದ್ದಾಗ
ಆ ರಕುತದಿಂದ
ಭೂಮಿ ಪಾವನವಾಯಿತು
ತಂದೆಯ ಮನದಲಿ ದಿವ್ಯ ಪ್ರಭೆ
ಸತ್ತು ಮತ್ತೆ ಬದುಕುವ ಆಸೆ ಇಲ್ಲಿಂದಲೇ

ಬಿದ್ದ ಜಾಗದಲಿ ಯಾರೂ ತೋರದ
ಅನುಕಂಪ ಗಾಳಿ ತೋರಿತು
ಸುದ್ಧಿ ಜಗತ್ತಿಗೆ ಹರಡಿತು
ಯುದ್ಧದಿ ಮಡಿದವರು
ವಿಜಯಿಗಳಾಗಿ ಮತ್ತೆ ಹುಟ್ಟಿದರಂತೆ
ಕತ್ತಲ ರಾತ್ರಿಯಲಿ ಸಂಭ್ರಮ
ಸಾರ್ಥಕ ಸಾವಿಗೂ ಉಸಿರಾಡುವ ಆಸೆ

ಅಜ್ಜಿಯ ಪೂಜೆಗಳಲಿ ದೇವರ ಹುಟ್ಟು
ಧೂಪದ ಘಾಟಿನಲಿ
ಪರಮಾತ್ಮನ ಆತ್ಮವೂ ಲೀನ
ಈಗ ಮನೆ(ನ) ತುಂಬ ಪರಿಮಳವಷ್ಟೆ

ದೇಹಿ ಎಂದು ಬಿದ್ದ ಬೀಜಕೂ
ಬೆಚ್ಚಗಿನ ಗರ್ಭ ಸುಖ
ಜೀವಕೇಂದ್ರ ಮತ್ತೆ ಕ್ರಿಯಾಶೀಲ
ಭಾವನೆಗಳು ಬಂಧಿ ಜೇಡನ ಬಲೆಯಲಿ
ಗಡಿಪಾರದ ಆಯಾಸಕೂ ಈಗ ಕುಲಾವಿ ಯೋಗ

ಜಹಾನ್ ಆರಾ


ಬಾಡಿಗೆಮನೆ

ಬಾಡಿಗೆ ಮನೆ ಇದು ವಿಶಾಲ ಜಗತ್ತು
ಇರುವಷ್ಟು ದಿನವೂ ನಗುತಲಿರು!
ತಿಂದೂ ಉಂಡು ತೇಗಿದರಾಗದು
ಸತ್ಕಾರ್ಯದ ಬಾಡಿಗೆ ಕೊಡುತಲಿರು.

ದೇಣಿಗೆ ನೀಡುವ ಉದ್ದರಿ ಮನೆಇದು
ಕೆಡಿಸುವ ಛಲ ನೀ ಬಿಟ್ಟುಬಿಡು
ಪಡೆಯುತಲಿರುವೆ ಎಲ್ಲವೂ ಪರರದು
ಕುಚೋದ್ಯದ ಫಲ ಬೆಳೆ ನುಂಗಿ ಬಿಡು

ದೇವನಮನೆ ಇದು ಭಾವನೆ ತುಂಬಿದೆ
ಯಾತನೆ ಹೆಚ್ಚಿದೆ ಅಡಿಗಡಿಗೆ ,
ಇರುವಷ್ಟು ಕಾಲದಿ ಅರಿಯುವ ಹೆಗ್ಗುಣ
ಬೆಳೆಸುತ ಕೊಡುವುದು ಕಲಿತುಬಿಡು!

ಅನುಭವ ತುಂಬಿದ ಕಾಳಿನ ಮಡಕೆ
ಬೇಯಿಸೋ ಒಲೆಒಳ ಅಡಿಗೆಮನೆ-
ನಗೆ ಹೊಗೆ ತುಂಬಿದ ಹಲವು ಮಸಾಲೆ
ಬೆರೆಸುವ ನವರಸ ಪಾಕ ಕಲೆ!

ಸಾಗುವ ಬಂಡಿ ಹೊಂಡಗಳುಂಟು
ರಸ್ತೆಗೆ ಅಡೆತಡೆ‌ ಬಹಳುಂಟು.
ವೇಗದ ಮೀತಿಯದು ಹಿಡಿತದಲ್ಲಿಟ್ಟು
ಬುದ್ದಿಯ ಗತಿಯಲ್ಲಿ ಮಿತಿಯನ್ನಿಡು!

ಬಾಡಿಗೆಗಿದ್ದರೂ ಓಡುವದೇತಕೆ
ಪೊಗರಿನ ದರ್ಪಣ ತೋರಲಿಕೆ,
ಮಾಡುವುದೆಲ್ಲ ಇಂದಿಗೆ ನಿನ್ನದು
ಯಾರುಂಟು ನಾಳೆಗೆ ಪಡೆಯಲಿಕೆ!

ಸ್ವಂತದ್ದೇನು? ಶಾಶ್ವತವಲ್ಲವೋ ಒಳ
ತುಂಬಿದ ಅರಿವಿನ ಪೆಟ್ಟಿಗೆಯಲ್ಲಿ
ಒತ್ತಟ್ಟಿಗೆ ಕಟ್ಟಲು ಬಹು ಚೀಲಗಳಿಲ್ಲ
ಚಲಿಸುವ ಬಂಡಿಗೆ ಚಾಲಕ ಎಲ್ಲಿ?

ಅಪಘಾತದ ವಲಯ ಪ್ರತಿ ಕ್ಷಣದಲ್ಲಿ
ಸಾಗುವ ಗು ರಿಯು ಬಹುದೂರ
ದಾರಿಯ ಮಧ್ಯದಿ ಸಾಗುವೆ ನೀಡುತ್ತ
ರೂಪದಿ ತೆರಿಗೆಯ ಕರ್ಮದ ಸಾರ

ಭಗವಂತನ ಗುರಿ ತಲುಪುವ ವರೆಗೆ
ಯಾನದ ನಡುವೆ ಉನ್ಮಾದದ ಗಾನ
ಆ ದಿನ ತಪ್ಪದೇ ಬರುವುದು ಉಂಟು
ಆ ದೇವನು ಕಳಿಸಿ ಕೊಡುವ ವಿಮಾನ

-ಮನೋಹರ ಜನ್ನು

..


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

2 Comments
Oldest
Newest Most Voted
Inline Feedbacks
View all comments
TULASI NAVEEN
4 years ago

ಎಲ್ಲರ ಕವನಗಳು ಉತ್ತಮವಾಗಿ ಮೂಡಿಬಂದಿದೆ. ಶುಭಹಾರೈಕೆಗಳು💐
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐

ಸುಜಾತಾ ಲಕ್ಮನೆ
ಸುಜಾತಾ ಲಕ್ಮನೆ
4 years ago

ಲಕ್ಷ್ಮೀಕಾಂತ್ ಮಿರಜಕರ್ ರವರು ಗಜಲ್ ಶೀರ್ಷಿಕೆಯಡಿಯಲ್ಲಿ ಬರೆದದ್ದು ತಾಂತ್ರಿಕವಾಗಿ ಗಜಲ್ ಅಲ್ಲ. ಇದರಲ್ಲಿ ಕಾಫಿಯಾ ಪಾಲನೆಯಾಗಿಲ್ಲ. ಒಮ್ಮೆ ಬಂದು ಹೋಗು ಎಂದು ರದೀಫ್ ಬಳಸಿದ್ದರೂ ಕಾಫಿಯಾ ಇಲ್ಲದೇ ಇರುವುದರಿಂದ ಗಜಲ್ ಆಗಿಲ್ಲ. ಈ ರೀತಿಯ ಗಜಲ್ ಗಳು ಪ್ರಕಟಣೆಗೆ ಹೋಗುವ ಮುನ್ನ ತಾಂತ್ರಿಕವಾಗಿ ಗಜಲ್ಲೇ ಅಂತೆ ನಿಯಮಬದ್ಧವಾಗಿದೆಯೇ ಎಂದು ಹಲವು ಬಾರಿ ನೋಡಿ ಕಳಿಸಬೇಕು. ಈಗ ತಾನೇ ಈ ಪ್ರಕಾರವನ್ನು ಕಲಿಯುತ್ತಿದ್ದಲ್ಲಿ ತಜ್ಞರ ಬಳಿ ಚರ್ಚಿಸಿ ಇನ್ನಷ್ಟು ಇದರಲ್ಲಿ ಪಳಗಿದ ಮೇಲೆ ಪತ್ರಿಕೆಗಳಿಗೆ ಕಳಿಸುವುದು ಒಳಿತು. ಇಲ್ಲದಿದ್ದಲ್ಲಿ ಅರೆ ತಿಳಿವಳಿಕೆ ಇರುವ ಓದುಗ ಗಜಲ್ ಎಂದರೆ ಇದೇ ಎಂದುಕೊಳ್ಳುತ್ತಾನೆ. ವಂದನೆಗಳು..

ಸುಜಾತಾ ಲಕ್ಮನೆ 8660440307

2
0
Would love your thoughts, please comment.x
()
x