ಪಂಜು ಕಾವ್ಯಧಾರೆ

ಬಾಲಲೀಲೆಗಳು

ಮರಳಬೇಕೆನಿಸುತಿದೆ ಆ ಸಮೃದ್ಧಿಯ ದಿನಗಳಿಗೆ.
ನುಗ್ಗಿಬರುತಿವೆ ನೆನೆಪುಗಳ ಬುಗ್ಗೆ,
ಮನಸಿಗೆ ಬಂಧನವಿರದ,
ಹೃದಯಕೆ ದಣಿವಾಗದಿರದ,
ಆ ಮುಗ್ದ ಮುಕ್ತ ರಸವತ್ತಾದ ದಿನಗಳಿಗೆ.

ಕಣ್ಣಿಗೆ ಕಟ್ಟಿದಂತಿವೆ ಆ ಆಟ ಪಾಟಗಳು…

ಬೀದಿ ಬೀದಿ ಅಲೆದು ಹುಣೆಸೆ ಬೀಜ
ಗುಡ್ಡೆಯಾಕಿ ಅಟಗುಣಿ ಆಡಿದ್ದು.
ಹಳ ಕೊಳ್ಳಗಳ ಶೋಧಿಸಿ ಕಲ್ಲುತಂದು
ಅಚ್ಚಿನಕಲ್ಲು ಆಡಿದ್ದು.
ಬಳಪ ಸೀಮೆಸುಣ್ಣ ಸಿಗದೆ
ಇದ್ದಲಿನಲಿ ಚೌಕಬಾರ ಬರೆದಿದ್ದು.
ಕುಂಟೆಬಿಲ್ಲೆ ಆಡಿ
ಕಾಲು ಉಣುಕಿಸಿಕೊಂಡಿದ್ದು.
ಕಣ್ಣಾಮುಚ್ಚಾಲೆ ಹಾಡುವಾಗ ಕಣಜದಲಿ ಅಡಗಿ
ನೆಲ್ಲಿನ ನವೆಗೆ ದಿನವೆಲ್ಲಾ ಮೈಕೆರೆದುಕೊಂಡಿದ್ದು.
ಬರಿಗಾಲಲ್ಲಿ ಬೆಟ್ಟ ಹತ್ತಿ
ಮಟಮಟ ಮಧ್ಯಾನ್ಹದ ಉರಿಬಿಸಲಿನಲಿ ಬೆಂದಿದ್ದು.
ಕಳ್ಳ ಪೊಲೀಸು ಆಡುವಾಗ ಬೀರುವಿನಲಿ ಅವಿತು
ಅಪ್ಪ ಅರಿಯದೆ ಬೀಗ ಹಾಕಿದಾಗ ಹೊರಗೆ ಬರಲಾಗದೆ ಚೀರಿದ್ದು.

ಕಡಲೆಕಾಯಿ ಸುಲಿದ ಹಣದಿಂದ
ಬೊಂಬಾಯಿ ಮಿಠಾಯಿ ತಿಂದದ್ದು.
ಬಾರೆಹಣ್ಣು ಆಯ್ದು ಬಚ್ಚಿಟ್ಟು ತಿಂದು
ಕೆಮ್ಮು ಬರಿಸಿಕೊಂಡಿದ್ದು.
ಹಿಂಗತ್ತಲೆಯಲಿ ಈಚಲಕಾಯಿ ಕೆಡವಿ ತಂದು
ಹುಲ್ಲುಬಣವೆಯಲಿ ಹುದುಗಿಸಿ ಮಾಗಿಸಿದ್ದು.
ಅಡವಿಂಚಿಕಾಯಿ ಕಿತ್ತು ತಂದು
ರಾಗಿಯಿಂದ ಕಾವು ಕೊಡಿಸಿದ್ದು.
ನೇರಳೆಯ ತಿಂದು ನಾಲಿಗೆಯ
ಬಣ್ಣವ ಬದಲಿಸಿಕೊಂಡಿದ್ದು.
ಹುಣಸೆ ಜೀರ್ಗೆ ಬೆಲ್ಲ ಕುಟ್ಟಿ
ಪಿತ್ತ ಹೋಗುವವರೆಗು ಚಪ್ಪರಿಸಿದ್ದು.
ಹುಳಿಮಾವು ತಂದು ಹುರಿಗಾರ ಬೆರೆಸಿ
ತಲೆಯಿಂದ ನೀರು ಭೋರ್ಗರೆವವರೆಗು ತಿಂದಿದ್ದು.
ಮೂಗಿನಲಿ ನೀರೂರುವವರೆಗೆ
ಬಾವಿಯಲಿ ಈಜಾಡಿದ್ದು.

ಹುಲ್ಲು ಹಾಸಿನ ಮೇಲೆ ಕೂತಿರುವ
ಕೋಲಾಟಗಳ ಕ್ಷೇಮ ವಿಚಾರಿಸಿದ್ದು.
ಒಂದಕ್ಕೊಂದು ಚುಂಬಿಸಿ ಸಾಲಾಗಿ ಹೋಗುವ
ಇರುವೆಗಳ ಗಂಟೆಗಟ್ಟಲೆ ನೋಡಿದ್ದು.
ಜೀರಂಗಿ ಹಿಡಿದು ಬೇಟೆ ಸೊಪ್ಪು ತಿನ್ನಿಸಿ
ಹಾರಲು ಬಿಟ್ಟಿದ್ದು.
ಚಪ್ಪರದಲ್ಲಿನ ಗುಬ್ಬಚ್ಚಿ ಮರಿಗೆ ಹಣ್ಣು ನೀಡಲು ಹೋಗಿ
ಅದನು ಕೆಡವಿ ವ್ಯಥೆಪಟ್ಟಿದ್ದು.
ಕರು ನಡೆಯಲು ಕಲಿಯುವಾಗ
ಆಸರೆಯಾಗಲು ಹೋಗಿ ತೊಡರಿಕೊಂಡು ಬಿದ್ದಿದ್ದು.
ಕೋಳಿ ಕಾವಿಗೆ ಕೂತಾಗ
ಕಣ್ಣು ಮಿಟುಕಿಸದೆ ಮರಿಗಳಿಗೆ ಕಾದಿದ್ದು.

ಮಡಿಕೆ-ಹುಂಡಿ ಕೊಳ್ಳಲು ಹೋಗಿ
ಕುಂಬಾರನ ಚಮತ್ಕಾರವ ಬಾಯ್ತೆರೆದು ನೋಡಿದ್ದು.
ಕಮ್ಮಾರನ ಚಿಮಟಿಗೆಯ ನಾದಕ್ಕೆ
ಕಿವಿಕಣ್ತೆರೆದು ಕಾದ ಕುಲುಮೆಯ ದಿಟ್ಟಿಸಿದ್ದು.
ತೆಂಗಿನಗರಿಯ ಗಡಿಯಾರ, ಉಂಗುರ
ಮಾಡಿಕೊಂಡು ಮದುವೆಯಲಿ ಮೆರೆದಿದ್ದು.
ಕೈಯಾರೆ ಕಾಗದದ ಪುಟ್ಟಿಗೆ ಮಾಡಿದ ಖುಷಿಗೆ
ಸಪೋಟಗಳನ್ನದರಲ್ಲಿಟ್ಟು ಸವಿದಿದ್ದು.
ಮೇಣದ ಬತ್ತಿ ಮಾಡಲು ಹೋಗಿ
ಕೈ ಮೇಲೆ ಮೇಣ ಸುರಿಸಿಕೊಂಡು ದಿನಗಟ್ಟಲೆ ಹೆಣಗಿದ್ದು.
ಜೇಡಿಮಣ್ಣಿನಲಿ ಗಣೇಶ ಮಾಡಿ ಮಾರಿ
ಬಂದ ದುಡ್ಡಿನಲಿ ವಾರಗಟ್ಟಲೆ ಐಸುಕ್ಯಾಂಡಿ ಹೀರಿದ್ದು.
ಆಗಲೆ ಸೃಜನಶೀಲತೆಯ ಸವಿಯ ಉಂಡಿದ್ದು.

ಇಂದಿಗೂ ಕುತೂಹಲವ ಲಾಲಿಸುತಿರುವ,
ಕಲ್ಪನೆಯ ಪೋಷಿಸುತಿರುವ,
ನೆನೆದಾಗಲೆಲಾ ಮನಸಿಗೆ ಮುದ ನೀಡುವ,
ಚೈತನ್ಯವ ಹಸಿರಾಗಿಸುವ,
ಸಪ್ಪೆಯ ಮನಸನು ಸಂತಯಿಸುವ,
ಬಾಲ್ಯದೀ ನೆನಪುಗಳನು,
ಬೆದಕಿ ನನ್ನೊಳಗೆ ತೆಗೆಯುವೆನು,
ಜೀವನ ನೀರಸವೆನಿಸಿದಾಗಲೆಲ್ಲಾ.
ಪವಿತ್ರಾ ಸತೀಶ್ ಕುಮಾರ್


ಬಂತಪ್ಪೊ ಬೇಸಿಗೆ

ಬಂತಪ್ಪೋ ಬೇಸಿಗೆ
ಧರಣಿ ತುಂಬ ರವಿಯ ಧಗೆ
ಮೈಯೊಳಗೆ ಶೆಕೆಯ ಬೇಗೆ
ಸಹಿಸುವುದಾದರೂ ಹೇಗೆ..!

ಭೂಮಿ ಮೇಲಿನ ಮರಗಿಡಗಳ
ಹಾಳು ಮಾಡಿ
ಜಾಗತಿಕ ತಾಪಮಾನಕೆ
ಆಹ್ವಾನ ನೀಡಿ
ಈಗ ಬರಿ ಬಿಸಿಲೆಂದರೆ ಹೇಗೆ..!

ಪಶು-ಪ್ರಾಣಿಗಳ ಜೀವಕೆ
ತಂದಿಟ್ಟು ಸಂಚಕಾರ
ಬತ್ತಿಹೋಗಿ ಭೂಮಿಯ ಜಲಮೂಲ
ಪರಿತಪಿಸುತ್ತಿವೆ ಜಲಚರ
ಈಗ ಬರಿ ಬಿಸಿಲೆಂದರೆ ಹೇಗೆ..!

ಹೆಚ್ಚಾಗಿ ಹಸಿರು ಮನೆ ಪರಿಣಾಮ
ಕೊಂಚ ಕೊಂಚವೆ ಆಮ್ಲಜನಕ ನಿರ್ಣಾಮ
ಭಯಾನಕ ವೈರೈಸ್ ಗಳ ಆಗಮ
ಹೊಸ ಹೊಸ ರೋಗಗಳ ಉಗಮ
ಮಾನವನ ದೇಹ ಭಾದೆಗಳ ನಿಗಮ
ಈಗ ಬರಿ ಬಿಸಿಲೆಂದರೆ ಹೇಗೆ…!

ಅಯ್ಯೋ ಉರಿಬಿಸಿಲು ಮುನ್ನ
ಗಿಡಮರಗಳ ಬೆಳೆಸಿದ್ದರೆ ಚೆನ್ನ
ಬದುಕಾಗುತ್ತಿತ್ತು ಹೊಳೆಯುವ ಚಿನ್ನ
ಆಧುನಿಕ ಪರಿಕರಗಳ ಹತ್ತಿ ಬೆನ್ನ
ಕಳೆದುಕೊಂಡು ಆರೋಗ್ಯದ ಜೀವನವನ್ನ
ಈಗ ಬರಿ ಬಿಸಿಲೆಂದರೆ ಹೇಗೆ..!

ಕವಿತಾ ಸಾರಂಗಮಠ


ನಮ್ ಶಿವ

ಎಲ್ಲಾ ಕೊಟ್ಟಂಗ್ಮಾಡಿ ಶಿವ, ಏನೂ ಕೊಡಂಗಿಲ್ಲ…
ಎಲ್ಲಾ ಕೊಟ್ಬುಟ್ಟ್ರೆ, ನಾವು ಅವನ್ ನೆನಪ್ ತೆಗಿಯಂಗಿಲ್ಲ.

ಜೀವ ಕೊಟ್ಟಂಗ್ಮಾಡಿ, ಕೀಲಿ ತನ್ ಹತ್ರ ಇಟ್ಕೋಡೊಂವ್ನೆ
ಬಾಲ ಬಿಚ್ತು ಅಂದ್ರೆ, ಆಟ ಮುಗಿದಂಗೆನೇ

ಕ್ವಾಪ, ಮುನಿಸು, ಸುಳ್ಳು ಎಲ್ಲಾ ಜಗದೊಳಗೆ ಇಟ್ಟಹೋಗಿದ್ದಾನೆ
ಪ್ರೀತಿ, ಶಾಂತಿ, ಸತ್ಯ ಎಲ್ಲಾ ಹುಡ್ಕೋ ಅಂದ್ಬಿಟ್ಟವ್ನೆ

ನಾಲ್ಕ್ ದಿನದ್ ಬಾಳು ಅಂತ ಗೊತ್ತಿದ್ರೂನು
ಚಿಕ್ಕ್ ಮನಸೊಳಗೆ ಬಾಳ ಆಸೆ ತುಂಬಿಟೌನೆ

ಹಿಂದ್ ಮುಂದ್ ನೋಡ್ದೆ ನಾವು ಮುಂದ್ ನುಗ್ ಬೇಕಾದ್ರೆ’
ಡ್ರೈವರ್ ನಾನೇ ಎಂದು ನಗ್ತಿರ್ತಾನೆ

ನಮಗೆ ಗೊತ್ತಾಗದಂಗೆ ನಮ್ ಹಿಂದೆ ಬರ್ತಿರ್ತಾನೆ
ಎಲ್ಲಾ ಟೈಮ್ ನಾಗು ನಮ್ ಶಿವ, ನಮ್ ಜೊತೆಗಿರ್ತಾನೆ.

-ಶಿಲ್ಪಾ ಬಸ್ತವಾಡೆ


ನಾ ಮುಡಿದ ಮೊಗ್ಗು

ನಾ ಮುಡಿದ ಮೊಗ್ಗು
ಕನ್ನಡಿಯಲ್ಲಿ ನನ್ನ ಕಾಣಲು
ಅರಳದೇ ಬರಿ ಮೊಗ್ಗಾಗಿರಲು
ಬೆರಗಾಗಿ ನನ್ನನ್ನೇ ದಿಟ್ಟಿಸಿ

ಆಹಾ.., ನಿನ್ನ ಸೌಂದರ್ಯ
ನಿನ್ನ ನಡುವ ಚಿತ್ತಾರ
ನಿನ್ನ ನಗುವ ಝೇಂಕಾರ
ನಿನ್ನ ನಯನ ತಾರೆಯಾಕಾರ
ನಿನ್ನ ನುಡಿಯ ಚಾತುರ್ಯ
ನಿನ್ನ ಬಹು ಸುಂದರ ಕಂಡು
ನಾ ಅರಳದೇ ಮೊಗ್ಗಾಗಿರಲು
ಬೆರಗಾಗಿ ನಿಂತಿಹೇನು

ಓ ನಾ ಮುಡಿದ ಮೊಗ್ಗೇ
ಹಾಸ್ಯ ಮಾಡಿ ನನ್ನ
ಕುಗ್ಗಿಸದಿರು
ನಿನ್ನ ಚೆಲುವು ನನಗಿಂತಲೂ ಚೆನ್ನ
ನಿನ್ನ ನಗುವು ನನಗಿಂತಲೂ ಭಿನ್ನ
ಹೊಳಪು ನಿನ್ನ ಬಿಳಿಯ ಬಣ್ಣ
ನಿನ್ನ ಮಕರಂದವೀರಲು
ಹುಮ್ಮಸ್ಸು ಮನ
ಅದಕೆ,
ನನ್ನ ಮುಡಿಗೆ ಮುಡಿದಿಹ ನಿನ್ನ.
-ಚೈತ್ರಾ ವಿ ಮಾಲವಿ


ಮಾಯೆಯೆಂಬರು
ಮೋಹವೆಂಬರು
ಸ್ನೇಹವಲ್ಲವೇ ನೀನು….?

ಹುಣ್ಣೆಂಬರು
ಮಣ್ಣೆಂಬರು
ಕಣ್ಣಲ್ಲವೇ ನೀನು….?

ಮೋಸವೆಂಬರು
ಪಾಶವೆಂಬರು
ವಿಶ್ವಾಸವಲ್ಲವೇ ನೀನು…?

ಹೊಗೆಯೆಂಬರು
ಹಗೆಯೆಂಬರು
ಸಗವಲ್ಲವೇ ನೀನು….?

ಅಬಲೆಯೆಂಬರು
ಬಲಿಕೊಡುವರು
ಸಬಲೆಯಲ್ಲವೇ ನೀನು…?

ಅತಿಯೆಂಬರು
ಮಿತಿಯಿಡುವರು
ಸತಿಯಲ್ಲವೇ ನೀನು…?

ಛಾಯೆಯೆಂಬರು
ಬಾಯಿಬಿಡುವರು
ತಾಯಿಯಲ್ಲವೇ ನೀನು….?

ಸರೋಜ ಪ್ರಶಾಂತಸ್ವಾಮಿ.


ಹಿರಿಯರ ಮನದಾಳ….

ಎಂಥಾ ಮರುಳಯ್ಯಾ ಇದು ಎಂಥಾ ಮರಳು
ಕಂಡ ಕನಸುಗಳೆಲ್ಲಾ ಆದವು ನುಚ್ಚು ನೂರು

ಸುಂದರ ಕುಟುಂಬದ ಹುಚ್ಚು ಕನಸು ಕಂಡೆವು
ಮುತ್ತಿನಂತಹ ಮಕ್ಕಳು ಕರುಣಿಸಿದನೆಂದು ಕೈ ಮುಗಿದೆವು
ಅದರೆ ಇಂದು ಇಂತಹ ಮಕ್ಕಳು ಹುಟ್ಟಿದ್ದಕ್ಕೆ
ಪ್ರತಿ ದಿನ ಕಣ್ಣಿರು ಹಾಕುತ್ತಾ ನಮ್ಮನೇ ನಾವು ಶಪಿಸಿದೆವು

ಹೊಟ್ಟೆ ಬಟ್ಟೆ ಕಟ್ಟಿ ಗಂಜಿ ಕುಡಿದು ಉಪವಾಸ ಇದ್ದರು
ಹಾಲು ತುಪ್ಪ ಮೊಸರು ಕೊಟ್ಟು ಹಸಿವು ಕಾಣದಂತೆ ಸಾಕಿದೆವು
ಅಂದು ಇಂದು ಜನ್ಮವಿತ್ತ ತಂದೆ ತಾಯಿಗೆ
ತುತ್ತು ಅನ್ನ ಹಾಕಲು ಹಿಂದೆ ಮುಂದೆ ಯೋಚಿಸುವರು

ಚೆನ್ನಾಗಿ ಓದಿ ಮುಂದೆ ನಮ್ಮನ್ನು ಸುಖವಾಗಿ
ನೋಡಿಕೊಳ್ಳವರು ಎಂದು ಹಗಲು ಇರಲು ದುಡಿದೆವು
ನಾವೇನು ನಿಮ್ಮ ಹೊಟ್ಟೆಯಲ್ಲಿ ಹುಟ್ಟುವೆವು ಎಂದು
ಅರ್ಜಿ ಹಾಕಿರಲಿಲ್ಲ ಎಂದು ಜಡಿಯುವರು ಮಕ್ಕಳಿಂದು

ಅನುರೂಪವಾದ ಸೊಸೆಯಂದಿರನ್ನು ತರಬೇಕು ಎಂದು
ಹತ್ತಾರು ಊರು ಸುತ್ತಿ ಒಳ್ಳೆಯ ಮನೆತನದ ಚಂದದ ಸೊಸೆ ತಂದೆವು
ಬಂದವರು ನಮಗೆ ಮಗಳಾಗದೆ
ನಮ್ಮನು ಕಾಲುಕಸದಂತೆ ಕಾಣುವ ಮೃಗಾಗಳಾದರು

ಅಂದು ನಿಮಗೆ ಆರೋಗ್ಯದಲ್ಲಿ ಎರುಪೇರಾಯಿತು ಎಂದು
ಬರಿಗಾಳಲಿನಲ್ಲಿ ಮೈಲಿಗಟ್ಟಲೆ ನಡೆದು ಆಸ್ಪತ್ರೆಗೆ ತೋರಿಸಿದೆವು
ಆದರೆ ಇಂದು ತಂದೆ ತಾಯಿ ಅನಾರೋಗ್ಯದಿಂದ
ಹೈರಾಣಾಗಿದ್ದರು ನಿಮಗೆ ಕಾಣಲಿಲ್ಲ

ಹೆಂಡತಿಯರ ಕಣ್ಣುಸನ್ನೆಗೆ ಬಾಯಿ ಮುಚ್ಚುವ ನಿಮಗೆ
ತಂದೆ ತಾಯಿ ಕಣ್ಣಲ್ಲಿ ನಿಮ್ಮ ಪ್ರೀತಿ ಬಯಸುವುದು ಕಾಣದೆ
ನಿಮಗೂ ಮಕ್ಕಳು ಮರಿಗಳು ಇದ್ದಾರೆ
ಇಂದು ನಾವು ನಿಂತಲ್ಲಿ ನಾಳೆ ನೀವು ನಿಲ್ಲುವಿರಿ ಎಂಬ ಅರಿವಿಲ್ಲ

ಸತ್ತ ಮೇಲೆ ಊರು ತುಂಬಾ ಪಟಗಳನ್ನು ಹಾಕಿಸಿ
ರಥದಂತಹ ಚಟ್ಟ ಕಟ್ಟಿಸಿ, ಇಷ್ಟದ ಅಡುಗೆ ಮಾಡಿಸಿ
ಬಂಧು ಬಳಗಕ್ಕೆ ಹಂಚಿ ಡೊಡ್ಡತನ ತೋರುವ
ಮೂರ್ಖತನ ಮಾಡುವ ಬದಲು
ಇದ್ದಾಗ ಪ್ರೀತಿಯಿಂದ ನಡೆದುಕೊಂಡರೆ ಉತ್ತಮ…

-ಗಾಯತ್ರಿ


ಬೆಳ್ಮುಗಿಲ ಹಕ್ಕಿಗಳೇ
ಕರಿಮುಗಿಲ ನೋಡುತ್ತಿರೆ
ಒಂದೊಂದು ಹನಿಯಾ ಬೀಳೆಂದು
ನಾನಿಂದು ಕಾದಿಹೆನು ಮಳೆಹನಿಯೆ

ಹನಿ ಹನಿಯ ನೀರಲ್ಲಿ ಪುಳಕದಲಿ
ತವಕದಿ ಮೀಯಲು ನಾನಿಂದು
ಕಾದಿಹೆನು ಮಳೆ ಹನಿಯೆ
ಒಂದೊಂದು ಹನಿಯಾ ಬೀಳೆಂದು

ಹನಿ ಹನಿ ನೀರು ತೊರೆಯ ಸೇರಿ
ಬಿಳಿ ನೊರೆಯ ಮಾಡಿ
ಹರಿಯುವ ಸಡಗರ ನೋಡಿ
ತಣಿಯಲು ಕಾದಿಹೆನು ನಾನಿಂದು
ಒಂದೊಂದು ಹನಿಯ ಬೀಳೆಂದು

ಬೇಸತ್ತಿಹೆನು ಬಿರುಬಿಸಿಲ
ಝಳಕ್ಕೆ ಸೊರಗಿಹಳು ಪ್ರಕೃತಿಯು
ತಂಪೆರೆಯಲು ಬರಬಾರದೆ
ಕಾದಿಹನು ನಾನಿಂದು ಆಸೆಯಲಿ
ಒಂದೊಂದು ಹನಿಯ ಬೀಳೆಂದು

-ಮಾಧವಿ ಹೆಬ್ಬಾರ್. ಮೈಸೂರ್


ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Oldest
Newest Most Voted
Inline Feedbacks
View all comments
0
Would love your thoughts, please comment.x
()
x