ಕಾವ್ಯಧಾರೆ ಪಂಜು-ವಿಶೇಷ

ಪಂಜು ಕಾವ್ಯಧಾರೆ

ಒಂದು ಟೋಪಿಯ ಸುತ್ತ…

ಊರ ಕೇರಿಯಿಂದ ಉದ್ದುದ್ದ ಹೆಜ್ಜೆಯನ್ನಿಟ್ಟು ಹೊರಟ ಊರಗೌಡ ಅಂದು ಕಂಡವರ ಕಣ್ಣಿಗೆ ಒಬ್ಬ ಬ್ರಿಟಿಷ ದಂಡನಾಯಕನಂತೆ ಕಾಣುತ್ತಿದ್ದ

ಯಾವದೋ ವಸ್ತುಸಂಗ್ರಹಾಲಯದಿಂದ ಹೊತ್ತುತಂದಂತೆ ಬೆತ್ತದಿಂದ ಗೋಲಾಕಾರವಾಗಿ ಹೆಣೆದ ಹಳೆಯ ಟೋಪಿಯೊಂದು ಆತನ ತಲೆಯ ಮೇಲೆ ಕೂತು ಇಡೀ ಪ್ರಪಂಚವನ್ನೇ ಕೊಂದುಬಿಡಬೇಕೆನ್ನುವ ಅವಸರದಲ್ಲಿತ್ತು

ಈಗಷ್ಟೇ ಉದಯಿಸಿದ ಆತನ ಕಣ್ಣಲ್ಲಿನ ಕೆಂಪು ಸೂರ್ಯ,
ಸೆಟೆದುನಿಂತ ಮೈಮೇಲಿನ ರೋಮಗಳು, ಬಿಳಿಯ ಮೀಸೆ ಕಪ್ಪು ಬಣ್ಣಕ್ಕೆ ಪರಿವರ್ತನೆಯಾಗಿ ಆ ಮೀಸೆಯ ಬುಡದಲ್ಲಿ ಹುಟ್ಟಿಕೊಂಡ ಕೋರೆಹಲ್ಲಿನ ರಕ್ಕಸನಂತೆ ಒರಟು ಧ್ವನಿಯಲ್ಲಿ ನಕ್ಕ….

ಬೋಳಿಮಕ್ಕಳೇ,
ಈ ಪ್ರಪಂಚ ನನ್ನಪ್ಪ ತಾತ ಮುತ್ತಾತನಿಗೆ ಸೇರಿದ್ದು… ತಾಕತ್ತು ಇದ್ರೆ ಮುಂದೆ ಬನ್ನಿ
ಹುಷಾರ್… ಎನ್ನುತ್ತಾ ಮೀಸೆ ತಿರುವಿ ಮತ್ತೊಮ್ಮೆ ಒರಟು ನಕ್ಕ…

ಆತನ ನಗುವಿನಲ್ಲಿ
ನಿತ್ಯ ಕೂಗುವ ಕಾಗೆಗಳು ಹಾರಿಹೋದವು ಎಲ್ಲಿಗೋ
ತುಂಡು ರೊಟ್ಟಿಗೆಂದು ಅಲೆಮಾರಿಯಾಗಿ ಓಡಾಡುವ ಬೀದಿ ನಾಯಿಗಳು ಕಂಡೂಕಾಣದ ಹಾಗೆ ಮಾಯವಾದವು ಎಲ್ಲಿಗೋ

ಅಲ್ಲಿ ಇಲ್ಲಿ ಗಲ್ಲಿ ಗಲ್ಲಿಯಲ್ಲಿ ಆಡುತ್ತಿದ್ದ ಸಣ್ಣ ಸಣ್ಣ ಮಕ್ಕಳೆಲ್ಲರೂ ಹೆದರಿ ಅವರವರ ಮನೆಸೇರಿದರು

ತನಗೆ ಎದುರಾದವರೆಲ್ಲರೂ “ಸರ್” ಎಂದು ಕರೆಯಬೇಕೆಂದು ಆತನ ಮುಖದೊಳಗಿನ ಕ್ರೂರತೆ ಸಾಕ್ಷಿಯಾಗಿ ಹೇಳುತ್ತಿತ್ತು

ಮುಂಜಾನೆಯ ಗುಡ್ಮಾರ್ನಿಂಗ್ ಹೇಳಿಲ್ಲವೆಂದು ಎದುರಿಗೆ ಸಿಕ್ಕ ಸಿಕ್ಕವರೆಲ್ಲರಿಗೂ ಕೆನ್ನೆಗೆ ಗುರಿಯಿಟ್ಟು ಗಾಳಿಯಲ್ಲಿ ಕೈಬೀಸಿದ ಶುಭಮುಂಜಾನೆ ಹೇಳುವವರಿಗೆಲ್ಲಾ ಇಂಗ್ಲೀಷ್ ಪದ ಬಳಸಬೇಕೆಂದು ಕೆಂಡಕಾರಿದ…

ಇದ್ದಕ್ಕಿದ್ದಂತೆ ಆತನ ವಿಚಿತ್ರವರ್ತನೆ ಕಂಡು ಇಡೀ ಊರಿಗೆ ಊರೇ ನಡುಗಿತು

ಊರೆಲ್ಲಾ ಸುತ್ತಾಡಿ ಮರಳಿ ಮನೆಗೆ ಬಂದವನು,
ಧರಿಸಿದ ಟೋಪಿಯನ್ನು ನಿಧಾನವಾಗಿ ಕಳಚಿಕೊಂಡು ಅದೇ ಹಳೆಯ ಪೆಟಾರೆಯಲ್ಲಿ ಜೋಪಾನವಾಗಿಟ್ಟ

ಬಹಳ ವರ್ಷಗಳ ಹಿಂದೆ

ಬ್ರಿಟಿಷರ ಸೆರೆಮನೆಯಲ್ಲಿ ಬಂಧಿಸಲಾದ ಕುಖ್ಯಾತ ಖೈದಿಯೊಬ್ಬನ ಆ ಟೋಪಿ,
ಆತನ ಮುತ್ತಾತನ ಜೊತೆಯಲ್ಲಿ ಒಳ್ಳೆಯ ಸ್ನೇಹಸಂಬಂಧವನ್ನು ಹಂಚಿಕೊಂಡ ಅಂದಿನ ಬ್ರೀಟಿಷ ಅಧಿಕಾರಿಯೊಬ್ಬ
ಕೊಟ್ಟಿದ್ದನಂತೆ…

ಈಗ ಮೌನಕವಿದ ಆ ಮನೆಯಲ್ಲಿ ನಡುಗಿಬಿದ್ದ ಆ ಊರಿನಲ್ಲಿ ಮೊದಲಿನಂತೆಯೇ ಅವನು ಜನಮೆಚ್ಚಿದ ಊರಗೌಡನಾಗಿದ್ದ…

ನರೇಶ ನಾಯ್ಕಪಥ

ಹೂತಿಟ್ಟ ಕನಸುಗಳು ಎದ್ದು ಬರುತಿಹವು 
ಬದುಕಿನ ಕದವ ತಟ್ಟಿ
ತಲ್ಲಣಿಸುವ ಭರವಸೆಗಳನು
ಬಿಗಿದುಅಪ್ಪಿ ಸಾವರಿಸುತಿಹವು…..

ಹಸಿದ ಒಡಲಿಗೆ ಸಿಹಿ ತುತ್ತು ಸಾಕು 
ನೊಂದ ಮನಕೆ ಹನಿ ಪ್ರೀತಿ ಬೇಕು 
ಜೀವನದಿ ಹರಿಯುವದು ನಿರಂತರವಾಗಿ 
ಬಿಸಿಲು ಮಳೆಗಳ ಲೆಕ್ಕಿಸದೆ …

ಅರಿತಷ್ಟು ಆಗಸವು 
ನಡೆದಷ್ಟು ಜಗವು ಇರಲು 
ಪಯಣ ನಿಲ್ಲಿಸುವ ಧಾವಂತವೇಕೆ?
ನಿನ್ನೊಳಗಿನ ನೀನು ಎಲ್ಲಿಹೋದೆ ?

ಮನದ ಮೂಲೆಯ ಲ್ಲಿರುವ 
ನೆನಪಿನ ತಿಜೋರಿಯನ್ನು ಒಮ್ಮೆ ತೆಗೆದು ನೋಡು 
ಸಿಗುವುದು ಕಾಪಿಟ್ಟ ನಿನ್ನ ಚಹರೆ 
ಬದುಕಲು ಸಾಕು ಇಷ್ಟು ಸೆಲೆ

ಅವಿತ ಸಾಧನೆಯ ಹಾದಿಯ 
ಹುಡುಕಲು ದ್ವಂದ್ವಗಳ ಬದಿಗೆಸರಿಸಿ  
ಪ್ರಯತ್ನಗಳ ಬೆಂಬತ್ತಿ ನಡೆಯುವ ಬಾ 
ಹೊಸ ಹಾದಿಯಲಿ   ….
                       
ರೇಶ್ಮಾ ಗುಳೇದಗುಡ್ಡಾಕರ್


.

ಕನ್ನಡದ ಬರಹಗಳನ್ನು ಹಂಚಿ ಹರಡಿ

Leave a Reply

Your email address will not be published. Required fields are marked *