ಪಂಜು ಕಾವ್ಯಧಾರೆ

ಹೊತ್ತೊಯ್ಯುವ ಮುಂಚೆ…

ಕೋಳಿ ಪಿಳ್ಳಿಗಳ ಜತೆ ಓಡಾಟ
ಹಸುಕರುಗಳೊಡನೆ ಕುಣಿದಾಟ
ಗೆಳೆಯರೊಟ್ಟಿಗೆ ಕೆಸರಿನಾಟ
ಅಪ್ಪ ಸಾಕಿದ್ದ ಕಂದು ಬಣ್ಣದ
ಮೇಕೆಯ ತುಂಟಾಟ, ನಮಗೆಲ್ಲ
ಅದರೊಂದಿಗೆ ಆಡುವದು ಇಷ್ಟ
ಅಪ್ಪನಿಗೂ ಮೇಕೆಯಂದ್ರೆ ಪ್ರೀತಿ
ಗಾಂಧಿತಾತನಂತೆ ಮೇಕೆ ಹಾಲು
ಅವನ ಪಾಲಿಗೆ ಪಂಚಾಮೃತ

ಅಪ್ಪ ಕೇಳಿದಾಗಲೆಲ್ಲ ಅವ್ವ
ಮಾಡಿಕೊಡಲೇಬೇಕು ಚಹಾ
ಹಾಲಿಗಿದೆಯಲ್ಲ ಮೊಗೆದಷ್ಟು
ತುಂಬಿಕೊಡುವ ಕಾಮಧೇನು
ಒಂದು ದಿನ ಅದೇನೋ ತಿಂದ
ಮೇಕೆಗೆ ಹೊಟ್ಟೆಯುಬ್ಬರದ ಚಿಕಿತ್ಸೆ
ಫಲಿಸದೆ ಇಹಲೋಕ ತ್ಯಜಿಸಿದ್ದು,
ಜೀವದಂತಿದ್ದ ಮೇಕೆ ಪ್ರಾಣ
ಉಳಿಸದ ಪಶುವೈದ್ಯ ಕಟುಕನಂತೆ
ಕಂಡು ಮನದಲ್ಲೆ ಹಿಡಿಶಾಪ ಶಾಪ ಹಾಕಿ
ಮುಗ್ಧ ಮನದ ಮೂಲೆಯಲ್ಲಿ ಮೌನವಾಗಿ
ತುಂಬಲಾರದ ನಷ್ಟ ನೋವ ಅನಭವಿಸಿದ್ದು
ಅಪ್ಪ ಅವ್ವಳನ್ನು ಕಳೆದುಕೊಂಡಾಗ
ಅನುಭವಿಸಿದ ಮೂಕ ಸಂಕಟವೇ ಅದು

ಅಪ್ಪ ಸಂತೆಯಲಿ ಕೊಡಿಸುತ್ತಿದ್ದ ಬಿಳಿ ಬಿಸ್ಕುಟು
ಲಿಂಬುಳಿ ಪೆಪ್ರಮಿಂಟು, ಅವ್ವನ ಕೈತುತ್ತು
ಮೀಸೆ ಮೂಡುತ್ತಿದ್ದರು ಮಲಗುತ್ತಿದ್ದ ಮಡಿಲು
ಆಗಲೇ ಮನೆ ಮುಂದಿನ ಹೆಮ್ಮರ ಒಂದು
ಮನುಷ್ಯ ಸ್ವಾರ್ಥದ ಹೊಡೆತಕ್ಕೆ ನೆಲಕ್ಕುರಳಿದ್ದು
ಮನಸ್ಸಿಗೆ ಅದೆಂಥ ಮರ್ಮಾಘಾತ ಗಾಯ
ತನ್ನ ದೇಹವನ್ನೆ ಯಾರೋ ತುಂಡುತುಂಡಾಗಿ
ತುಂಡರಿಸಿದನುಭವ ಅದರ ಮೇಲೆ ಕಲ್ಲಿಂದ
ಕೆತ್ತಿದ ಪ್ರೀತಿಯ ಹೆಸರು ಹೆಸರಿಲ್ಲದಂತಾಗಿ
ತಲ್ಲಣಿಸಿದ ಜೀವ ನರಕಕ್ಕೆ ಹೋಗಿ ಬಂದಂತೆ
ಪ್ರೀತಿಯ ಮೇಕೆಯನ್ನು ಕಟ್ಟುತ್ತಿದದ್ದು
ಇದೇ ಮರದ ನೆರಳಿಗೆ ಅಲ್ಲವೇನು..?
ಅವ್ವ, ಅಪ್ಪ, ಮೇಕೆ, ಮರ, ನೆರಳು
ಈಗ ಯಾವುದು ಇಲ್ಲ
ರಕ್ಕಸಕಾಲ ಒಂದೊಂದಾಗಿ ಜೀವಗಳನ್ನು
ನುಂಗುತ್ತ ಹೋಗುತ್ತದೆ ನೆನಪುಗಳು ಸಹ

ಹೃದಯ ತೇವ ಆರುವ ಮುಂಚೆ
ನೆನಪಿನ ಮರ ಹಚ್ಚಬೇಕು ಮತ್ತೊಮ್ಮೆ
ಕಣ್ಮುಚ್ಚಿ ಗತಿಸಿದ್ದೆಲ್ಲ ನೆನಪಿಸಿಕೊಳ್ಳಬೇಕು
ಮುಸಕಾಗುತ್ತಿರುವ ದೃಷ್ಟಿಗಲ್ಲದಿದ್ದರು
ತುಕ್ಕು ಹಿಡಿದ ಮಿದುಳಿಗೆ ಸಾಣೆ ಹಿಡಿಯಬೇಕು
ಮರೆತ ಘಟನೆಗಳು ಮೆಲುಕು ಹಾಕುತ
ಮತ್ತೇ ಮತ್ತೇ ಗತದಲಿ ಜೀವಿಸಬೇಕು
ಗೋರಿಗೆ ಹೊತ್ತೊಯ್ಯುವ ಮುಂಚೆ…

-ಅಶ್ಫಾಕ್ ಪೀರಜಾದೆ


ನನ್ನ ಕವಿತೆ..
ನನ್ನ ಜೀವನಾಡಿ,
ನನ್ನೆದೆಯ ಒಡನಾಡಿ,
ನಾ ಹಾರಬಯಸಿದಾಗ
ರೆಕ್ಕೆಯನೀವ ಬಾನಾಡಿ…

ನನ್ನ ಕವಿತೆ..
ನನ್ನ ಒಳದನಿ,
ಸುರಿಸಲಾಗದ ಕಣ್ಣಹನಿ,
ಎದೆಯಭಾರ ಇಳಿಸಿ
ಮೈದಡವೊ ಜನನಿ…

ನನ್ನ ಕವಿತೆ..
ನನ್ನ ನಗುವಿನ ಕನ್ನಡಿ,
ಮಿಡಿವ ಹೃದಯಕೆ ಮುನ್ನುಡಿ,
ಚಡಪಡಿಸೊ ಭಾವಗಳ
ಹದದಿ ಪೋಣಿಸೊ ಭಾವತುಡಿ…

ನನ್ನ ಕವಿತೆ..
ನನ್ನ ಒಂದು ಮನವಿ,
ಪ್ರತಿ ಮುಂಜಾವ ಹೊಸ ರವಿ,
ದಿನವೆಲ್ಲಾ ಬೆಳಗಿ, ತಮವ ಕಳೆವ
ದೇದೀಪ್ಯಮಾನ ಛವಿ…

ನನ್ನ ಕವಿತೆ…
ನನ್ನೊಡಲ ತಕದಿಮಿ,
ಅಂತರಂಗದ ಕಣಕಣದ ಮಾರ್ದನಿ,
ಭವದ ಭ್ರಮೆ ಭಾಧಿಸದಂತೆ
ಕೈಹಿಡಿದು ನಡೆಸೋ ಕರುಣಾಮಯಿ….
ಸರೋಜ ಪ್ರಶಾಂತಸ್ವಾಮಿ


ನಾನೇಕೆ ಪ್ರೀತಿಸುತ್ತೇನೆ…

ಒರಟು ಸ್ವಭಾವ ಸಖ ನಿನ್ನದು
ನೋಡಲು ಅಷ್ಟೇನೂ ಸುಂದರವಾಗಿಲ್ಲ
ಬೇಗನೆ ಸ್ಪಂದಿಸುವ ಜಾಯಮಾನವಲ್ಲ
ಆದರೂ ನಾ ನಿನ್ನ ಪ್ರೀತಿಸುವೆನಲ್ಲ

ಸರಿದಾರಿಗೆ ಬಾರೆಂದರೂ ಬರಲ್ಲ
ಕೈಯಲ್ಲಿದ್ದ ಕೆಲಸದಲೆ ಗಮನ
ಇಡೀ ದಿನ ದೇಹ ದಣಿದರೂ ಬಿಡಲ್ಲ
ಆದರೂ ನಾನಿನ್ನ ಪ್ರೀತಿಸುವೆನು ನಲ್ಲ

ಅವಾಗವಾಗ ಮೊಗೆಮೊಗೆದು ಕೊಟ್ಟ
ಈಟೀಟು ಒಲವು ನನ್ನ ಕಾಡುತಿದೆ ಕಟ್ಟಿ
ಮರೆಯಲು ಮಾಡಿದ ಯತ್ನ ಬಲುತುಟ್ಟಿ
ಆದರೂ ನಾನಿನ್ನ ಪ್ರೀತಿಸುವೆ ತುಟಿ ಕಚ್ಚಿ

ನಾನೇನು ಅಂದರೂ ಸಹಿಸುವೆ ನಸುನಕ್ಕು
ನಿನ್ನ ಮೌನವನೇ ನಾ ತಿಳಿದಿರುವೆ ಸೊಕ್ಕು
ಅತಿಯಾದ ಕೆಲಸದ ಒತ್ತಡದಲ್ಲಿ ನೀ ಸಿಕ್ಕು
ಆದರೂ ನಿನ್ನನೇ ಪ್ರೀತಿ‌ಸುವೆ ಕನಸು ಕಟ್ಟಿ

ಯಾವಾಗಲೋ ನನ್ನ ನೆನಪಿಸಿ ಕರೆಮಾಡಿ
ನಿನ್ನ ಧ್ವನಿಯ ಮೋಡಿಗೆ ನಾನೆಲ್ಲ ಮರೆತು.
ನಿನ್ನ ಆಂತರ್ಯದ ಸಿಹಿಜೇನಲಿ ಬೆರೆತು
ನಾನಿನ್ನು ಪ್ರೀತಿಸುತಿರುವೆ ನಿನ್ನನೇ ಬಯಸಿ

ಹೇ ಮೌನಿಯೇ ನೀ ಹೇಗಿದ್ದರೂ ಗುಣ ಚಿನ್ನವು
ನಿನ್ನ ಮರೆಯದಂತೆ ಬಂಧಿಸಿಹುದು ದೈವವು
ದೇವರಂಥ ಗೆಳೆಯ ಮನ್ನಿಸು ನೂರೆಂಟು ತಪ್ಪು
ಎಂದಿಗೂ ಮರೆಯಲಾರೆ ನಿನ್ನ ದೂರಲಾರೆ

-ಜಯಶ್ರೀ ಭ.ಭಂಡಾರಿ., ಬಾದಾಮಿ.


ಕುಕ್ಕೆಯ ಕಸ

ಪಾಪದ ಕೂಸಿದು ಕಕ್ಕುವದೆಲ್ಲ ..
ಕುಕ್ಕೆಯ ಒಳಗಡೆ ಇಕ್ಕುವ ಕಸವೇ !
ಜಗಿರಸ ಹೀರಿ -ಆಸ್ವಾದನೆ ಮಾಡಿ
ಪೀಕಲು ಅದು ಪಿಕದಾನಿಯ ವಶವೇ!

ವಿಶ್ವವೇ ಉಗುಳುವ ಹೊಗೆ ಹಾರಾಟ
ಕವಿದಿಹ ಮೋಡಕೆ ಹೊಸ ಬೆಳವಣಿಗೆ
ಸಾಧನೆ ತುಂಬಿದ ಡಬ್ಬದ ಒಳಗೆ
ತುಂಬಿದ, ಚೆಂದದ ವಿಷ ಅಣಬೆಗಳು

ಉಣಿಸಿದ ಅಭಿವೃದ್ಧಿಯ ಸೇವೆಯು
ಶೋಧನೆ ಹೊಸತನ ಸವಕಳಿ ಕೊಡುಗೆ
ಮನೆ ಮೆಟ್ಟಿನ ಮೂಲ ಮೆಟ್ಟಿಲು ಏರಿ
ಪ್ರಾಕಾರದ ಮೂಲಕ ಅಡುಗೆಮನೆ

ಖಾಸಗಿ ಕೋಣೆ ಶೌಚದ ತನಕ ಎಲ್ಲಕ್ಕೂ
ಬೆರೆತಿದೆ ಹೊಸ ನಂಜಿನ ರೂಪ !
ಹುಟ್ಟಿದ ಮೊದಲದೇ ಸಾವಿನ ತನಕ
ಆವಿಷ್ಕಾರದ ಅಂತ್ಯ ಆತು ಅಗತ್ಯ

ಸಿದ್ಧತೆ ಹೊಸತು ಸರಳ ಪ್ರಬುದ್ಧ
ಪ್ರಬಲ ಸಂವೇದನೆ ಸಾಂಬಶಿವ
ಜ್ಞಾನದ ಒಳಗೆ ಅಜ್ಞಾನ ದ ಗುಟ್ಟು
ವಿನಾಶದ ಆಶಯ ಸದಾಶಿವ

ಸಂಮೃದ್ದೀಯ ಸೆಳೆತ ಹರಿಯುವ ನೀರು
ಬೆರೆಸಿದ ರಸಾಯನ ಜ್ಞಾನ-ವಿಜ್ಞಾನ
ತಂತ್ರಜ್ಞಾನ ಶಾಸ್ತ್ರ ದ ಬೆಸುಗೆಯು
ಬದುಕನ್ನು ಕದಿಯೊಳೆ, ಕೊಳೆ ಸಂಚಲನ.

ಬೆಳದೆಲ್ಲವ ಬೆಂದು ಸವಕಳಿ ಇಂದು
ಕಾಣುವ ಶೀಘ್ರತೆ ಜಗದೋಶವ !
ನಾಶದ ಸೆರಗಲಿ ದ್ರೋಹದ ಉರುವಲು
ಉರುಳಿಗೆ ಬರಸೆಳೆ- ಹರಿ ಕೇಶವ?

ಮನೋಹರ ಜನ್ನು


ಒಡೆಯನಿರದ ನಾನು

ದೊರೆಯಿರದ ನಾನು!
ದೊರೆಯ ಸನಿಹದಲ್ಲಿ ತಲೆ ಎತ್ತಿದ ನಿಲುವು
ಒಡೆಯನ ಶಿರ ಕಳಶದಂತೆ
ಗರಿಗರಿ ಬಣ್ಣದ ಕುಚ್ಚಗಳ ಅಂಚು…

ಬಿಸಿಲ ಮರೆಸಿದೆನೆಂಬ ಹಮ್ಮಿನಲಿ
ಇರುಳ ಸವಾರಿಯ ಗತ್ತಿನ ಗಾಂಭೀರ್ಯದಲಿ
ದೊರೆಯನೊಟ್ಟಿಗೆ ಮೆರೆದ ದಿನಗಳು
ದೇವರೊಟ್ಟಿಗಿನ ಹೂವಿನಂತೆ!

ತಿರುಗಿ ಬಾರದ ದೊರೆಯ ನಿರೀಕ್ಷೆಯಲ್ಲಿ
ಗೋಡೆಗೆ ಒರಗಿ ನಿಂತ ನಾನು!!
ಒಡೆಯನಿರದ ಅನಾಥ ಛತ್ರ ಚಾಮರವಿದು
ಅಗಲಿದ ದೊರೆಯ ನೆನಪಲಿ…

-ದೀಪು


ಭ್ರಮೆಯಲ್ಲಿ…..

ನಡು ಇರುಳಿನ ಕಾರ್ಗತ್ತಲಲಿ
ತಡಕಾಡಿ ಹುಡುಕಾಡುತ್ತೇನೆ
ನಿನ್ನ ಹುಸಿ ಸ್ಪರ್ಶವಾದರೂ
ಸೋಕಬಹುದೆಂಬ ಭ್ರಮೆಯಲ್ಲಿ …‌‌‌‌..

ಜಿನುಗು ಮಳೆ ಹನಿಗಳಲಿ
ಮಿಂದು ನಡುಗುತ್ತೇನೆ
ನಿನ್ನ ಬಿಸಿ ಉಸಿರಾದರೂ
ಸೋಕಬಹುದೆಂಬ ಭ್ರಮೆಯಲ್ಲಿ …‌‌‌‌..

ರಂಗೇರಿದ ಮುಸ್ಸಂಜೆಯ ತಂಗಾಳಿಯಲಿ
ಅವಿತು ತೇಲಾಡುತ್ತೇನೆ
ನಿನ್ನ ಸಿರಿ ಸೌಂದರ್ಯವಾದರೂ
ಸೋಕಬಹುದೆಂಬ ಭ್ರಮೆಯಲ್ಲಿ …‌‌‌‌..

ಹರೆ ಉಕ್ಕುವ ಬೆಳದಿಂಗಳಲೆಗಳಲಿ
ಏಕಾಂಗಿಯಾಗಿ ಅಲೆಯುತ್ತೇನೆ
ನಿನ್ನ ಪಿಸು ನುಡಿಗಳಾದರೂ
ಸೋಕಬಹುದೆಂಬ ಭ್ರಮೆಯಲ್ಲಿ …‌‌‌‌..

ಕಾವ್ಯ ಕಸೂತಿಯ ಒಡಲಲಿ
ನಿರಂತರ ಧ್ಯಾನಿಸುತ್ತೇನೆ
ನಿನ್ನ ಪ್ರೇಮ ಪ್ರಣಯವಾದರೂ
ಸೋಕಬಹುದೆಂಬ ಭ್ರಮೆಯಲ್ಲಿ …‌‌‌‌..
-ಎನ್.ಎಲ್.ನಾಯ್ಕ , ದಾಂಡೇಲಿ


ಗಜಲ್

ಮನೆಗಳು, ಗದ್ದೆಗಳು ಮಳೆಗೆ ಕೊಚ್ಚಿ ಹೋದವು, ಮುಳುಗಿಲ್ಲ ಬದುಕು
ಊರಿಗೆ ಊರುಗಳೇ ನೆರೆಗೆ ನಲುಗಿ ಹೋದವು ಮುಳುಗಿಲ್ಲ ಬದುಕು

ಕನಸು ಮುರಿದಿದೆ ಮನಸು ಮುರಿದಿಲ್ಲ ರಟ್ಟೆ ಗಟ್ಟಿಯಿದೆ ಇನ್ನೂ
ಕೆಸರು ತುಂಬಿದ ಭೂಮಿಯಲ್ಲೇ ಕಮಲ ಅರಳಿಸುವೆವು ಮುಳುಗಿಲ್ಲ ಬದುಕು

ಕಣ್ಣಾಲಿ ತುಂಬೆಲ್ಲ ದುಡಿದು ಕೂಡಿಸಿ ಕಾಪಿಟ್ಟ ಬದುಕಾಧಾರಗಳ ಅವಶೇಷಗಳು
ಭರವಸೆಯ ಬಣ್ಣ ತುಂಬಿ ವಿಶೇಷ ಮಾಡುವೆವು ಮುಳುಗಿಲ್ಲ ಬದುಕು

ಕೈ ಹಿಡಿದಿಲ್ಲ ಪ್ರಭುತ್ವ, ಗಾಳಿಯಲ್ಲೇ ತೇಲಾಡುತ್ತಿವೆ ಸುಳ್ಳು ಆಶ್ವಾಸನೆಗಳು
ಬಂದೇ ಬರ್ತಾರೆ ಒಂದಿನ ಬುದ್ಧಿ ಕಲಿಸುವೆವು ಮರೆಯದೆ, ಮುಳುಗಿಲ್ಲ ಬದುಕು

ಇರಲು ಸೂರಿಲ್ಲ, ತಿನ್ನಲು ಕಾಳಿಲ್ಲ ಕೂಳಿಲ್ಲ ಆದರೂ ಚಿಂತೆಯಿಲ್ಲ
ನಮ್ಮ ಪಾಲಿನ ಬೆಳಕನ್ನು ನಾವೇ ಸಂಪಾದಿಸುವೆವು ಮುಳುಗಿಲ್ಲ ಬದುಕು.

ಬೇಡದೆ ಇದ್ದರೂ ತಾವಾಗಿಯೇ ಕಷ್ಟಕ್ಕೆ ಮಿಡಿದಿವೆ ಕೆಲ ಭೂ ನಕ್ಷತ್ರಗಳು
ಕಳೆಗುಂದಿದ್ದ ಜೀವಕ್ಕೆ ಚೈತನ್ಯ ತುಂಬಿ ಬಂದಿದೆ “ಕಾಂತ”, ಮುಳುಗಿಲ್ಲ ಬದುಕು.

ಲಕ್ಷ್ಮಿಕಾಂತ ನೇತಾಜಿ ಮಿರಜಕರ. ಶಿಗ್ಗಾಂವ.

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x