ಪಂಜು ಕಾವ್ಯಧಾರೆ

ಸಾಧನಕೇರಿಯ ಬೇಂದ್ರೆ ಅಜ್ಜ
ಕನ್ನಡ ನುಡಿಸೇವೆ ನಿನ್ನ ಕಜ್ಜ.
ಪದ್ಯ ಕಟ್ಟಿ ಹಾಡಿದ್ಯಂದ್ರೆ
ಕೇಳೋ ಕಿವಿಗಳಿಗೆ ಇಲ್ಲ ತೊಂದ್ರೆ…

ಅಜ್ಜ ನಿನ್ನ ಬರೆಯೋ
ಕೋಲ್ಗೆ ಎಂಥ ಶಕ್ತಿ ಇತ್ತು.
ಅದ್ನೆ ನೀನು ಎತ್ತಿ ಹಿಡಿದೆ
ನಿನ್ನ ಕೈ ಕಲ್ಪವೃಕ್ಷವಾಯ್ತು…

ನಗ್ ನಗ್ತ್ ಹೇಳ್ದೀ ಬುದ್ಧಿಮಾತು
ನಿನ್ ದುಃಖ ನೀನ್ ನುಂಗಿ.
ಅಜ್ಜ ಅಂದ್ರ ನೆನಪಿಗ್ ಬರ್ತದ
ತಲೆಗೆ ಪಟಗ ನಿಲುವಂಗಿ..

ಅಜ್ಜ ನಿನ್ ಪದಗಳಂತು
ಸಜ್ಜಿತೆನಿ ತೊನೆದ್ಹಾಂಗ.
ಕೇಳ್ತಾ ಕೇಳ್ತಾ ತಲೆದೂಗ್ತಾವಾ
ಹಸುಕಂದಮ್ಗಳು ಹಾಂಗಾ..

ಬಾಳ್ಗೆ ನಾಕು ತಂತಿ ಕಟ್ಟಿ
ಮೀಟ್ದೇ ಜೀವ್ನದ ರಾಗ.
ಹಾಡ್ತಾ ಹಾಡ್ತಾ ಏರೇ ಬಿಟ್ಟೆ
ಜ್ಞಾನಪೀಠದ ಮ್ಯಾಗ…

ಸರೋಜಪ್ರಶಾಂತಸ್ವಾಮಿ


ಈ ಜಗದೆದುರಿಗೆ.,.

ನಡು ಬೀದಿಯಲ್ಲಿ ಖಡ್ಗ ಬೀಸಿ
ನಮ್ಮಿಬ್ಬರ
ನೆತ್ತರ ಚೆಲ್ಲಾಡಿದರೆ
ಸೋಲಬಹುದೇ
ನಮ್ಮ ಪ್ರೀತಿ
ಈ ಜಗದೆದುರಿಗೆ….?

ಹೆಮ್ಮರದ ತುತ್ತ ತುದಿಗೆ ಹಗ್ಗ ಸುತ್ತಿ
ನಮ್ಮಿಬ್ಬರ
ಕೊರಳಿಗೆ ನೇಣು ಬಿಗಿದರೆ
ಉಸಿರು ಬಿಡಬಹುದೇ
ನಮ್ಮ ಪ್ರೀತಿ
ಈ ಜಗದೆದುರಿಗೆ …,?

ದರಾದರನೆ ಎಳೆದ್ಯೊಯ್ದು
ನಮ್ಮಿಬ್ಬರ
ಎತ್ತಿ ಬೆಂಕಿಗೆ ನೂಕಿದರೆ
ಸುಟ್ಟು ಬೂದಿಯಾಗಬಹುದೆ
ನಮ್ಮ ಪ್ರೀತಿ
ಈ ಜಗದೆದುರಿಗೆ…..?

ಕಡಿದು ಚೂರು ಚೂರಾಗಿಸಿ
ನಮ್ಮಿಬ್ಬರ
ದೇಹ ಗುಂಡಿಯೊಳಗೆ ಹೂಳಿದರೆ
ಕೊಳೆತು ಮಣ್ಣಾಗಬಹುದೇ
ನಮ್ಮ ಪ್ರೀತಿ
ಈ ಜಗದೆದುರಿಗೆ …..?

ಎನ್.ಎಲ್.ನಾಯ್ಕ, ದಾಂಡೇಲಿ


ಬಾತೃತ್ವದ ಹೂವಿದು ಭಾರತ

ಏಕತೆಯ ಹೃದಯವಿದು
ಭಾರತ ಮಾತೆಯ ಮಂದಿರ
ಸ್ವಾಭಿಮಾನದ ಸಂಕೇತವಿದು
ಭಾರತೀಯರ ಸ್ವರ್ಗ.

ಬೇದಭಾವಗಳ ಬೇರು ಕಿತ್ತೆಸೆದು
ಬಾತೃತ್ವದ ಹೂವಿಲ್ಲಿ ಅರಳಿಹುದು
ಮೇಲು ಕೀಳುಗಳ ಕೀಲು ಮುರಿದು
ಸಮಾನತೆಯ ಸಾರಿಹುದು.

ಎಲ್ಲ ಮತಗಳ ಎಲ್ಲ ಧರ್ಮಗಳ
ಬೆಲ್ಲದ ಸವಿಯಿದು ಭಾರತ
ಸುಂದರ ಕಲೆಗಳ ಸೌಂದರ್ಯ ತಾಣಗಳ
ಸುಗಂಧದ ಸುಧೆಯಿದು ಭಾರತ.

ಸುಭಾಶ್ ಭಗತರು, ಚನ್ನಮ್ಮ ಝಾನ್ಸಿ
ಕಲಿಗಳು ಹುಟ್ಟಿದ ಸ್ಥಳವಿದು
ಗಾಂಧೀ ಅಂಭೇಡ್ಕರ್ ಬುದ್ಧ ಬಸವರ
ತತ್ವಗಳ ಪಾಲಿಪ ಭೂಮಿಯಿದು.

ದೇಶದ ಒಳಿತಿಗೆ ದೇಹವ ಕೊಟ್ಟ
ದಿಟ್ಟ ವೀರರ ಛಲಗಾರರ ನೆಲವಿದು
ಕೆಟ್ಟತನವನು ಸುಟ್ಟುಹಾಕಿ
ಶಾಂತಿ ಮಂತ್ರವನು ನುಡಿದಿಹುದು.

ಎಲ್ಲರ ಎದೆಯಲಿ ಒಂದೇ ಮಾತರಂ
ಎಲ್ಲರ ಹಣೆಯಲಿ ಸ್ವಾತಂತ್ರ್ಯ ತಿಲಕ
ಎಲ್ಲರೂ ಒಂದೇ ಎಲ್ಲರೂ ಒಂದೇ
ಜಗದಲಿ ಜ್ಯಾತ್ಯಾತೀತ ಭಾರತವೊಂದೆ.

ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿನನ್ನ ಮನೆ
ನೋಡಿದಾಗ ನನ್ನ ಮನೆ
ಕಣ್ಣಾಲಿಗಳು ತುಂಬಿ ಬಂತು
ಕೊರಳು ಉಬ್ಬಿ ನಿಂತಿತು
ಮನಸ್ಸು ಚಡಪಡಿಸಿತು
ಎದೆಯೊಳಗೇನೋ ವ್ಯಥೆ

ನಾನು ಜನಿಸಿದ ಮನೆ
ನಾನು ಬೆಳೆದ ಮನೆ
ಇದೇ ಅಂಗಳದಲ್ಲಿ ಆಡಿದ್ದೆ
ಓಡುವಾಗ ಬಿದ್ದಿದ್ದೆ

ಅಮ್ಮ ಅಡುಗೆಮನೆಯಲ್ಲಿ
ಬಿಸಿ ಗಂಜಿ ಬಡಿಸಿದ್ದಳಲ್ಲಿ
ನನ್ನ ಹೊಟ್ಟೆ ತುಂಬಿಸಿ
ತಾನು ನೀರು ಕುಡಿಯುತಿದ್ದಳಿಲ್ಲಿ

ದಾಯಾದಿಗಳ ಜಗಳದಲ್ಲಿ
ಮನೆ ಅನಾಥವಾಯಿತಿಲ್ಲಿ
ಕೋರ್ಟು ಕಚೇರಿ ಅಂತ ಓಡಿ
ಹಾವು ಇಲಿ, ಹುಳಗಳ ವಾಸವಾಯಿತಿಲ್ಲಿ

ಈಗ ದುಡಿಯುವ ಅಮ್ಮನೂ ಇಲ್ಲ
ಗೋಶಾಲೆಯಲ್ಲಿ ದನಗಳೂ ಇಲ್ಲ
ಬಾವಿ ನೀರು ಹಾಳಾಗಿದೆ
ಮನೆ ಹೆಂಚುಗಳು ಹೋಳಾಗಿದೆ

ನೋಡಿ ಆಯಿತು ತುಂಬಾ ಬೇಸರ
ಒಳಹೊಕ್ಕಲು ಮನಸ್ಸಿಲ್ಲ ತಯಾರು
ತಲೆ ತಗ್ಗಿಸಿ ಹೊರಟೆ
ಬಸ್ಸಿಗಾಗಿ ಕಾದು ನಿಂತೆ

ದೂರದಲ್ಲಿ ಹಾಡುತ್ತಾ ಹೋಗುತ್ತಿದ್ದ ಒಬ್ಬ ಹುಚ್ಚ
“ಈ ದೇಹ ಶಾಶ್ವತವಲ್ಲ
ನಿನ್ನೆಯ ಸುಖ ಇವತ್ತಿಲ್ಲ
ಈ ಮಾಯಾ ಪ್ರಪಂಚದಲ್ಲಿ ಯಾರಿಗೂ ಯಾರೂ ಇಲ್ಲ,,,,

-ವಸು


ಬಣ್ಣಗೆಡುತ್ತಿವೆ ಬೀಜಗಳು

ನನ್ನದೇ ತಾರಸಿಯಲ್ಲಿ ಒಣಗಿಸಿದ
ಒಂದೇ ಜಾತಿಯ ಬೀಜಗಳು
ಮೈಮನ ಗೆದ್ದಿದ್ದವು.
ಕಂಕುಳಲ್ಲಿ ಎತ್ತಿಕೊಂಡು
ಉಣಿಸಿ ತಣಿಸಿ ಹದಮಾಡಿ
ತೋಯಿಸಿಟ್ಟ ಬೀಜ
ಮಹಾಬೀಜವಾದಂತೆ
ಒಂದೊಂದು ದಿಕ್ಕಿನಲ್ಲಿ
ಪಲ್ಲಟಗೊಂಡ ಪ್ರಾಯದ
ಪುಂಡ ಹಲಬುವಿಕೆ
ಧಾಡಸಿಯಾಗುತ್ತಲೇ ನಡೆದವು.

ಎದೆಯುಬ್ಬಿಸಿ ಫಲವತ್ತಾದ
ಫಸಲು ನೋಡಬೇಕು
ರಸ ಒಸರುವ ಕಳಿತ ಹಣ್ಣುಗಳು
ತೊನೆಯಾಡಬೇಕು
ಬೀಜದ ತಾಕತ್ತು,
ಹತ್ತಾರು ಬಲ ಬೀಜಗಳ ಬೆಳಕಿಗೆ
ಇಡಬೇಕು.

ವ್ಯತಿರಿಕ್ತವಾಗಿ ಮೋಹಕ
ವರ್ಣಗಳೆಲ್ಲ ಕಳಪೆಯಾಗಿ
ಈಗೀಗ ಮೈತುಂಬಾ ಮುಳ್ಳುಗಳೆದ್ದ
ಜಾಲಿಗಿಡಗಳು ಬೀಜಗಳಿಂದ
ಉಕ್ಕುಕ್ಕಿ ಕುಕ್ಕುತ್ತಿವೆ ದೃಷ್ಟಿಯುದ್ದಕೂ.್ಕ
ಚಿತ್ರವಿಚಿತ್ರ ಮೈಗವಸಗಳು
ಕುರುಚಲು ಕಾಡುಗಳ ಹಬ್ಬಿಸಿಕೊಂಡ
ಕೃತಕ ಹಾವಭಾವದ ಕನ್ನಡಿಗಳು
ದಟ್ಟವಾಗುತ್ತ ಅರಳುಗಣ್ಣಿನ
ಗಿಡಗಳು
ಇಂಗಾಲಮಯವಾಗಿವೆ.

ಹದಗೊಳಿಸಿದ ಹೊಲವಿನ್ನು
ಹಸನಾಗದು, ಕಣಜ
ಉಕ್ಕೆದ್ದು ಬರಲಾಗದು.
ನನ್ನದೇ ತಾರಸಿಯಲ್ಲಿ ಒಣಗಿಸಿದ
ಬೀಜಗಳು ಈಗ
ನಿರಂತರದಿ ಬಣ್ಣ ಬದಲಾಯಿಸುತ್ತಿವೆ.
ಕೆಲವು ಕೆಟ್ಟು ಕರಕಲಾಗುತ್ತಿವೆ.

ನಾಗರೇಖಾ ಗಾಂವಕರ


ಬೆತ್ತಲೆ ತೊಗಲಿಗೆ ಬೆಂಕಿಯ ಬಟ್ಟೆ

ಆ ಊರ ಬೀದಿಯಲ್ಲೊಂದು ಒಂಟಿ ಮನೆ ಇದೆ
ಇರುಳೆಂಬ ಹಣತೆಯಲಿ, ರಕುತದ ದೀಪ ಹಚ್ಚಿ
ಕಣ್ಣ ರೆಪ್ಪೆ ಚಿಗುರು ನಾಲಿಗೆ
ಹೊಕ್ಕುಳಾಳದ ಬಳ್ಳಿ ತೊಟ್ಟಿಲಾಗಿ ತೂಗಿ
ಕಂಕುಳ ಘಮಲು ಊರೇಲ್ಲ ಪಸರಿ
ಕತ್ತಲ ವಿರ್ಯವನ್ನುಂಡು ಬಸರಿಯಾಗಿ
ಬೆಳಕನ್ನು ಹೆತ್ತವಳು.

ಅವಳೊಡಲ ಕಡಲೊಳಗೆ ಬೆಂಕಿ ಉಂಡೆಯ ನಾವೆ
ಕಾದ ಬಂಡೆ, ಹಸಿವಿನ ಬುರುಡೆ
ಅವಳ ಹಿಮಪಾದದಡಿ ನಿಮಿರಿ ನಿಂತ
ಸೀಳು ಸೀಳು ಬಿದಿರಿನ ಕಂಟೆ
ಅವಳೋ….ಬೆತ್ತಲೆ ತೊಗಲಿಗೆ
ಬೆಂಕಿಯ ಬಟ್ಟೆ ತೊಟ್ಟ ತಾಯೆ…..

ಇರುಳ ಹಾಸಿಗೆಯ ಮೇಲೆ
ನೇತ್ತರ ದಿಂಬ ಕೆಳಗೆ
ಸುರುಳಿ ಸುತ್ತಿ ಕರುಳ ಬಿಟ್ಟ
ಮಗುವೊಂದು ಗೋಗೆರಿಯುತಿದೆ
ಅವಳ ನೆತ್ತರ ಬಿಸಿ ಮೈಯ್ಯ ಮೇಲೆ
ಕಂದಿಲ ಬೆಳಕ ಬಿಡುವ
ಸೂರ್ಯನಿಗೊಂದು ಶಾಪವಿದೆ.

ಅವಳ ಕಣ್ಣ ನಕ್ಷತ್ರಗಳಿಗೆ
ಬೇರಾಗಿ……
ಬೇರೊಂದು ಕಾಂಡವಾಗಿ ಹೂ ಬಿಟ್ಟು
ಆ ನೆಲವು ನಕ್ಕಿತ್ತು
ಕಡಿದಷ್ಟು ಚಿಗುರೊಡೆದು
ಸೊಂಪಾಗಿ ಬೆಳೆದ ಆ ವೃಕ್ಷದ ಬುಡ
ನೂರಾರು ಪಾಪದ ಹೂವುಗಳು
ನಿಟ್ಟುಸಿರು ಬಿಟ್ಟಿದ್ದವು.

ವಿರೇಶ ನಾಯಕ

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x