
ಅಪ್ಪ ಅಂದರೆ……
ಏನೇ ಕೇಳಿದರೂ
ಏನೇ ಹೇಳಿದರೂ
ಕೋರ್ಟ್ ಲ್ಲಿ ದಾವೆ ಹೂಡಿದಂತೆ
ಚೌಕಾಸಿ ಮೇಲೆ ಚೌಕಾಸಿ
ಪರ ವಿರೋಧದ ತೀರ್ಪಿನ ಮೇಲೆ
ನೂರಾರು ಕರಾರಿನ ಅಪ್ಪನ ಮೊಹರು…..
ಹೆಜ್ಜೆ ಹೊಸ್ತಿಲ ಹೊರಗಿಟ್ಟರೂ
ಒಳಗಿಟ್ಟರೂ
ತೀವ್ರ ಹದ್ದಿನ ಕಣ್ಣು ಇಟ್ಟಂತೆ
ಶೋಧ ಪ್ರತಿಶೋಧಗಳ ಕಾರ್ಯಾಚರಣೆ
ತಪ್ಪೊಪ್ಪುಗಳ ಸರ್ಪಗಾವಲಿನಲ್ಲಿ
ಖುಲಾಸೆಯೇ ಸಿಗದ ಅಪ್ಪನ ಕಾಯ್ದೆ ……
ಎಲ್ಲೇ ಇದ್ದರೂ
ಹೇಗೆ ಇದ್ದರೂ
ಕುದುರೆಗೆ ಲಗಾಮು ಹಾಕಿಟ್ಟಂತೆ
ಸಾಗುವ ಪಥದಿ ತಿರುವು ಏನೇ ಬಂದರು
ಸ್ಥಿರ ಸಿದ್ದಾಂತಗಳ ಗಡಿ
ಮೀರಲು ಕೊಡದ ಅಪ್ಪನ ಸುಗ್ರೀವಾಜ್ಞೆ…….
ಏನೇ ಕಳೆದರೂ
ಏನೇ ಪಡೆದರೂ
ಲಕ್ಷ್ಮಣ ರೇಖೆ ಎಳೆದಿಟ್ಟಂತೆ
ಸೋಲು ಗೆಲುವಿನ ರಣರಂಗದಲ್ಲಿ
ಏದ್ದರೂ …ಬಿದ್ದರೂ..,
ರಾಜಿಯಾಗದ ಅಪ್ಪನ ಭೀಷ್ಮ ಪ್ರತಿಜ್ಞೆ…..
–ನಾರಾಯಣ ನಾಯ್ಕ

ಗಝಲ್
ನೀ ಬರಲೆಂದೆ ಮರಭೂಮಿ ಹಸಿರಾಗಿದೆ ನನ್ನೂರಿನಲ್ಲಿ
ನೀ ನೋಡಲೆಂದೆ ಕಲ್ಲು-ಕಗ್ಗಲ್ಲು ಶಿಲೆಯಾಗಿದೆ ನನ್ನೂರಿನಲ್ಲಿ
ಪಾಳು ಮಸಣದ ಮಲ್ಲಿಗೆಯರಳಿ ಪಾವನವಾಗಿದೆ ನಿನ್ನ ಮುಡಿ ಸೇರಲೆಂದೆ ನನ್ನೂರಿನಲ್ಲಿ
ಇತಿಹಾಸದ ರಾಜ-ಮಹಾರಾಜರು ಮರೆದ ನೆಲ ನಿನ್ನ ಹೆಜ್ಜೆಗೆ ಕಾಯುತ್ತಿದೆ ನನ್ನೂರಿನಲ್ಲಿ
ಆ ಆಗಸದ ಚಂದಿರನ ಗಲ್ಲಿಗೆರಿಸಿದ್ದೇನೆ ನಿನ್ನ ಕದಿಯದಿರಲೆಂದೆ ನನ್ನೂರಿನಲ್ಲಿ
ನನ್ನ ಸಾವಿರ ಕನಸಿನ ಹೆಬ್ಬಾಗಿಲು ನೆಟ್ಟಿದ್ದೇನೆ ಬಲಗಾಲಿಟ್ಟು ಬಂದುಬಿಡು ನನ್ನೂರಿನಲ್ಲಿ
ನೀ ಬರುವ ಹಾದಿಯ ಕಾದು ಕಾದು
ಬೀದಿಯಲ್ಲಿ ಹೆಣವಾಗಿವೆ ಮೈಲುಗಲ್ಲುಗಳು ನನ್ನೂರಿನಲ್ಲಿ
ನಿನ್ನ ಗೆಜ್ಜೆಯ ನಾದವ ಕೇಳಲು ಸಿಟ್ಟಾಗಿ
ಮಳೆಯೆ ಸುರಿಸಿಲ್ಲ ಮೋಡ ನನ್ನೂರಿನಲ್ಲಿ
ಶತ-ಶತಮಾನದ ಶಾಸನ ತಾಮ್ರಪಟಗಳು ಕೂಗುತ್ತಿವೆ ನಿನ್ನ ಹೆಸರು ನನ್ನೂರಿನಲ್ಲಿ
ತಾಯಿಯಿಲ್ಲದ ಕಂದಮ್ಮಗಳು ಹಸಿದಿವೆಯಂತೆ ನಿನ್ನ ಕೈ ತುತ್ತಿಗೆ ನನ್ನೂರಿನಲ್ಲಿ
ಮತ್ತೆ ಮರಳಿ ಮರುಗಿ ನಾ ಸಾಯಲಾರೆ
ನನಗಾಗಿ ಅಳುವವರಿಲ್ಲ ನನ್ನೂರಿನಲ್ಲಿ
ಮುರಿದ ಜೋಪಡಿಯ ಜಗುಲಿಯಲಿ
ಒಲವಿನ ದೇವತೆಯಾಗಿ ನಿಲ್ಲು ನನ್ನೂರಿನಲ್ಲಿ
ಎಸ್.ಕಲಾಲ್

ಮುಕ್ತ
ಹರಿಗೋಲು ಸುತ್ತುತಲೇ ಇದೆ
ದಡವ ಮುಟ್ಟದೆ, ಸುಳಿಗೂ ಸಿಕ್ಕದೆ
ಕೆಳಗೆ ಪ್ರಾಂಜಲದಂತ ತಿಳಿನೀರು
ಒಮ್ಮೊಮ್ಮೆ ಮಳೆಗೆ ಸೇರಿದ ಕೆಸರು,
ಸಾಗರದಂತೆ ಏಳುವುದಿಲ್ಲ ಅಲೆ
ತಿರುಗುವಾಗ ಸಿಕ್ಕುವ ತಾವರೆ ಎಲೆ…
ಪ್ರವಾಹಕೆ ಬಗ್ಗದೆ, ಬರಕ್ಕೆ ಕುಗ್ಗದೆ
ಹಿಗ್ಗದೆ ಜಗ್ಗದೆ ಯಾರನ್ನೂ ಲೆಕ್ಕಿಸದೆ
ಮೌನಕ್ಕೆ ಶರಣಾಗಿ ಶಾಂತಿಯಲಿ ಧ್ಯಾನಿಸುತ
ಪ್ರವಾದಿಯಾಗಿ ಸಾಗುತಿದೆ ಅನವರತ…
ಬಿಸಿಲು ಏರಿದರೆ ಸೇತುವೆಯ ನೆರಳು
ತಬ್ಬಿ ದುಃಖಿಸಲು ಆಲದ ಬಿಳಲು
ಬೇಡವಾಗಿ ಅವರು ತಳ್ಳಿದರೆ ಏನು ?
ಬಂಧುಗಳಾಗಿವೆ ಹಾವು ಮತ್ತು ಮೀನು…
ಇಂದಿನ ಈ ದಿನ ನಾಳೆಗಳಿಗೆ ನೆನ್ನೆ
ಹೊಟ್ಟೆಗನ್ನವನಿಡುವ ದೇವರ ದೊನ್ನೆ
ಕುಲುಕುತ್ತಾ ವಾಲುತ್ತಾ ಗಿರಗಿರನೆ ಕುಣಿಯುತ್ತ
ನಿರಂತರ ಹೋರಾಟ, ಋಣವಿಲ್ಲದೆ ಮುಕ್ತ….
ಹರಿಗೋಲು ಸುತ್ತುತಲೇ ಇದೆ
ದಡವ ಮುಟ್ಟದೆ, ಸುಳಿಗೂ ಸಿಕ್ಕದೆ……
-ಬೆಚಂಗಿ

ಮಾನದ ಮಾತು
ಮನದ ಮಾತಿದು ಹೇಳಲು
ಅಗದು ಮೀಟುವುದು
ಅಂತರಂಗದ ಮೌನ ವೀಣೆಯ
ನಿನ್ನ ಒಲವ ತಂಗಾಳಿಗೆ
ಎದೆಯಾಳದ ನೆನಪಿನ ಸಿಹಿ
ಮುತ್ತುಗಳು ಧುಮ್ಮಿಕ್ಕುವವು
ಹೃದಯದಾ ಜಲಪಾತದಲಿ
ಉಕ್ಕಿ ಹರಿಯುವ ಭಾವಗಳಿಗೆ
ಕನಸುಗಳು ನೌಕೆಯಾಗಿ
ತೇಲುತಿಹವು ಸೇರಲು
ನಿನ್ನ ಮನದ ದಡವ
ಸಂಜೆಯ ಹೊಂಬೆಳಕಿನ ರಂಗಿನಲಿ
ನಿನ್ನ ಕೈಹಿಡಿದು ಒಪ್ಪಿಗೆ
ಉಂಗುರವ ಬೆರಳುಗಳಿಗೆ ತೋಡಿಸಿದಾ
ಕ್ಷಣದಿ ನನ್ನರೆಡು ಕಂಗಳು
ನಾಚುತಿಹವು ನಿನ್ನ ಕಂಗಳ ನೋಡಲು
–ರೇಶ್ಮಾ ಗುಳೇದಗುಡ್ಡಾಕರ್
ಗಝಲ್
ಆಗಾಗ ನಿನ್ನ ನೆನಪುಗಳ ಕೆದಕಿ ತಡಕಾಡುತ್ತೇನೆ
ನೀನಾಗೆ ಬಿಟ್ಟು ಹೋದ ಭಾವಗಳ ಹುಡುಕಾಡುತ್ತೇನೆ
ನಿನ್ನ ಕಣ್ಣುಗಳೊಳಗಿಳಿದು ನಿತ್ಯ ಕನಸುಗಳಾದ
ಎಲ್ಲ ರಾತ್ರಿಗಳ ಚೋದ್ಯವನು ಹುಡುಕಾಡುತ್ತೇನೆ
ಕತ್ತಲೆಗೆ ಆಗಾಗ ಬೆಳಕಿನ ಕಣ್ಣು ಮೂಡಿಸಿದ
ಸುತ್ತಲಿನ ಹೊಳಪನೊಮ್ಮೆಮ್ಮೆ ಹುಡುಕಾಡುತ್ತೇನೆ
ಅದೃಷ್ಟವಿರದ ಈ ಬದುಕಿನ ದಾರ್ಷ್ಟ್ಯವನು ಹಳಿಯುತ್ತ
ಮಧುಶಾಲೆಗಾಗಿ ನಾ ಪ್ರತಿನಿತ್ಯ ಹುಡುಕಾಡುತ್ತೇನೆ
ನೆನೆಯುತ್ತ ಬರಬಹುದು ಬದುಕಿನಲಿ ಎಂದಾದರೂ
ನೀನೀ ‘ರನ್ನ ಕಂದ’ ನ ಜೀವವೇ ಎಂದೊಮ್ಮೆ ಹುಡುಕಾಡುತ್ತೇನೆ
–ಸಚಿನ್‌ಕುಮಾರ ಬ.ಹಿರೇಮಠ (ರನ್ನ ಕಂದ)
ಪ್ರಜ್ಞೆ….
ಮನದಾಳಕ್ಕಿಳಿದು ಕೀಳೇಳು ಪ್ರಭುವೆ
ಅವಿತ ಅಂಧಕಾರದ ಬೇರು
ಹಿಡಿದೆಳೆಯಲಿ, ಇಳೆಯಲಿ ಜನ
ಸ್ಥಗಿತ ಪ್ರಜ್ಞೆಯ ತೇರು!
ಆವರಿಸಿದೆ ವಾಸ್ತವಕೆ ಮೌಢ್ಯತೆಯ ವಲ್ಮಿಕ
ಸ್ವಾರ್ಥದಿಹರಿಲ್ಲಿ ಎಲ್ಲರಿದ್ದೂ, ಆಗಿ ಅನಾಮಿಕ
ನೈತಿಕತೆಗೆ ಅಳಿವಿನಂಚಿನ ನಂಜು ಹಿಡಿದಿದೆ
ನುಗ್ಗಿಬರು ಸತ್ಯಧರ್ಮವ ಮಂಜು ತಡೆದಿದೆ
ಜಾತಿ ಕುಲ ಕಲಹ ನಿಲ್ಲದ ಹೊರತು
ರುಧಿರ ಕಲೆ, ಆರದೀ.. ಇಳೆಯ ಮೈಮ್ಯಾಲ
ಕಾತಿ ಪ್ರವಾಹ ತಂದು, ಜೀವಕೊಂದು ತಿಂದಿತೀ.. ,
ಮುನಿದ ಮಳೆಗಾಲ!
ಗಡಿಕಾಯ್ವ ಬೆಳಕ ನುಂಗಿತೀ.. ಹಸಿದ
ಭಯೋತ್ಪಾದನೆ,
ಸೃಷ್ಟಿಯ ಅತೀವೃಷ್ಟಿಗೆ ಬಲಿ ರೈತರುತ್ಪಾದನೆ
ಜನ,ಸತ್ಯ, ಶಾಂತಿ,ಅಂಹಿಂಸೆ ಉಡುಗಿ ಸುಟ್ಟರು!
ಅನ್ಯಾಯ ಅಧರ್ಮ ಅನೀತಿ ಐಬಿಂದ ಕೆಟ್ಟರು!
–ಅಯ್ಯಪ್ಪ ಬ ಕಂಬಾರ
