ಸಾರ್ಥಕತೆ!
ನಗರ ವೃತ್ತ
ಬದಿಯಲೊಂದು ವೃಕ್ಷ
ಒಡಲಲ್ಲಿ ಹೊತ್ತಿತ್ತು
ಹೊರಲಾರದ ಹೊರೆ !
ಎಸ್‍ಟಿಡಿ ಬೋರ್ಡು
ಪಾರ್ಲರ್ ಕಾರ್ಡು
ಜೆರಕ್ಸ್ ಅಂಗಡಿ ಬಾಣ
ನೆರಳಲ್ಲೇ ಅಂಗಡಿ ಹೂಡಿದ
ಪಾಷಾನ ಪಂಕ್ಚರು ಹತಾರೆ
ಟ್ಯೂಬು ಟಯರುಗಳು
ಸಿನೀಮಾ ಪೋಸ್ಟರುಗಳು
ಮೈತುಂಬಾ ಉಡುಗೆ
ಬಣ್ಣಬಣ್ಣದ ತೊಡಿಗೆ!
ಮೊಳೆ ಚುಚ್ಚಿದ್ದರು
ಹಗ್ಗ ಬಿಗಿದಿದ್ದರು
ರೆಂಬೆ ಮುರಿದಿದ್ದರು
ನೆತ್ತಿ ತರಿದಿದ್ದರು
ಸುಣ್ಣ ಬಳಿದು
ಚರ್ಮ ಸುಲಿದು
ಕ್ರೌರ್ಯ ಉಣಿಸಿದ್ದರು!
ದಟ್ಟ ನೆರಳು ನೀಡಿ
ನೂರಾರು ಶುಕಪಿಕಗಳಿಗೆ
ನೆಮ್ಮದಿಯ ಗೂಡಾಗಿ
ಹಚ್ಚ ಹಸಿರಾಗಿ
ತನ್ನದೆಲ್ಲವ ನೀಡಿರುವ
ವೃಕ್ಷದ ಬದುಕು
ಎಂತ ದಿವ್ಯ ಸಂದೇಶ
ಹನಿ ನೀರು ನೀಡದ
ತುಣುಕು ಗೊಬ್ಬರ ಕಾಣಿಸದ
ಮಾತುಗಳಲ್ಲೇ ಬದುಕಿರುವ
ನಮ್ಮ ಬದುಕು
ಎಂಥ ವಿಪರ್ಯಾಸ ?
ಎಸ್.ಜಿ.ಶಿವಶಂಕರ್,
ಮೂರು ಕವಿತೆಗಳು
ಮಗು ಚಿತ್ರ ಬರೆಯಿತು:
ಚಿತ್ರದಲ್ಲಿ ಸೂರ್ಯೋದಯ
ಬೆಟ್ಟ, ಮರಗಳು
ಹಸಿರು ಗರಿಕೆ, ಹಾರುವ ಹಕ್ಕಿಗಳು
ತೇಲುವ ಮೋಡ..
ಮಗು ಚಿತ್ರಕೆ ಬಣ್ಣ ತುಂಬಿತು.
ಕವಿಯೊಬ್ಬ ಕವಿತೆ ಬರೆದ:
ಸೂರ್ಯೋದಯದ ವೇಳೆ
ಚಿಗುರು ಗರಿಕೆ, ಓಡುವ ಮೋಡ
ರೆಕ್ಕೆ ಬಡಿವ ಹಕ್ಕಿ
ಬೆಟ್ಟದೆತ್ತರಕೆ ಬೆಳೆದ ಮರ..
ಇವುಗಳ ಕುರಿತು ಕವಿತೆ ಬರೆದ.
ರೈತ ನಸುಕಿಗೆ ಎದ್ದವನು
ಹೊಲದಲ್ಲಿ ದುಡಿಯುವಾಗ
ಅವನ ಸುತ್ತಮುತ್ತಲೂ
ಬೆಟ್ಟ, ಮರ, ಮೋಡ
ಹಕ್ಕಿಗಳ ಕಲರವ
ಹಸಿರು, ಚಿಗುರು, ಕಂಪು..
ರೈತನ ತನು ಮನ
ಎತ್ತರಕ್ಕೆ ಬೆಳೆದ ತನ್ನ ಹೊಲವನ್ನು
ಮಾತ್ರವೇ ಕಂಡಿದ್ದು..
ದೇಶದ ಹಸಿವಿಗೆ ಅನ್ನ ಬೇಕೇ ಬೇಕು.
– ಹೇಮಾ ಕಳ್ಳಂಬೆಳ್ಳ
ಬೇವು-ಬೆಲ್ಲ
ಕಾಂಕ್ರೀಟು ಕಾಡು ಬೆಳಿಸಿ
ಕಾದು ಕುದಿಯ ಬೇಡ
ಮನುಜ
ಮಾವು-ಬೇವು ಬೆಳಸಿ
ಅನುಭವಿಸು ನೀ
ಬೇವು-ಬೆಲ್ಲದ ಸವಿಯನು.
ಸುಖ-ದುಃಖ
ಬರಿ ಸಿಹಿಯನುಂಡು
ನೀ ಸವೆದು ಹೋಗಬೇಡ
ಮನುಜ.
ಬೇವಿನ ಕಹಿನುಂಡು
ನಿನ್ನ ದೇಹವಾಗಲಿ
ವಜ್ರಕಾಯ.
ಆಗಲೇ ಜೀವನವದು
ಸುಖ-ದುಃಖಗಳ
ಸಮ್ಮಿಲನ
ವೀರೇಶ ಗೋನವಾರ,
ಮೂರು ಕವನಗಳು ಚೆಂದಿವೆ
ಸಾರ್ಥಕತೆ ಕವನ ಇಂದಿನ ಪರಿಸರದ ದುಸ್ಥಿಯ ಕುರಿತು ಆಡು ಭಾಷೆಯಲ್ಲಿ ಕಟ್ಟಿಕೊಡುವ ಕಾವ್ಯಧಾರೆಯಂತಿದೆ.
ಮೂರು ಕವನಗಳುಅರ್ಥಪೂರ್ಣವಾಗಿದೆ
ಮೂರೂ ಕವನಗಳು ಇಷ್ಟ ಆದ್ವು.