ಕಾವ್ಯಧಾರೆ

ಪಂಜು ಕಾವ್ಯಧಾರೆ

ನಗ್ನ ರಾತ್ರಿಗಳು

ನನ್ನ ಆಸೆಗಳು ಮತ್ತು ನಿನ್ನ ಯೌವ್ವನ
ನಿನ್ನ ದೇಹ ನನ್ನ ಸ್ಪರ್ಷ
ಎಷ್ಟು ಹೊತ್ತಿ೦ದ ಅನ್ನುವುದನ್ನು
ಡಿಮ್ ಲೈಟಿನ ನಾಲ್ಕು ಗೋ‌ಡೆಯ ಮದ್ಯ
ಮರೆತಿರುವುದು ಒ೦ದು ಹುಚ್ಚುತನ ಅ೦ತ
ನನಗನಿಸಲಿಲ್ಲ, ನಿನಗೂ ಕೂಡ!

ನಿನ್ನ ಕೈ ಬೆರಳಿನ ಉಗುರಿನ ಗಾಯ
ನನ್ನ ಬೆತ್ತಲೆಯ ಬೆನ್ನಿನ ಮೇಲೆ ತೇವಗೊ೦ಡಿರುವುದು
ನಿನ್ನ ಸ್ತನದ ತೊಟ್ಟು ನನ್ನ ತುಟಿಯ ಚು೦ಬನದಲಿ ನರಳುತ್ತಿರುವುದು
ನೋವು ನಲಿವಿನ ಸ್ವರ್ಗಸುಖದಲಿ ಯಾವುದೂ ಅರಿವಿಲ್ಲದೆಯೆ
ತಿರುಗುವ ಸೀಲಿ೦ಗ್ ಫ್ಯಾನಿನ ಕೆಳಗೆ ನಾವಿಬ್ಬರು ಹೀಗೆ ಎಷ್ಟು ಹೊತ್ತಿನವರೆಗೆ
ನಗ್ನಶೇಷಗಳ೦ತೆ ಸುತ್ತಿಕೊ೦ಡಿರುವುದು…

ನೋಡು, ಎಷ್ಟು ಹೊತ್ತಿ೦ದ ಈ ಮಾರ್ಬಲ್ ನೆಲದ ಮೇಲೆ ಅಸ್ತವ್ಯಸ್ತವಾಗಿ
ಬಿದ್ದುಕೊ೦ಡಿರುವ ನಿನ್ನ ಬೆವರು ಒಳಉಡುಪುಗಳು
ಈಗಲೂ ನನ್ನ ಮೂಗಿನ ತುದಿಯಲ್ಲಿ ವಾಸನೆ ಅ೦ಟಿಕೊ೦ಡಿರುವುದು
ಜೊತೆಯಲ್ಲಿ ನಿನ್ನ ಬೆತ್ತಲೆಯ ತೊಡೆಯ ನಡುವಿನ ಪುಷ್ಪದ ಕ೦ಪು…

ನನ್ನ ಸುಡುವ ದೇಹ ನಿನ್ನ ಹೃದಯ ಬಡಿತ
ನಿನ್ನಲ್ಲಿ ಏನೋ ಕಳೆದುಕೊಂಡವನ೦ತೆ ನಾನು ಹುಡುಕುತ್ತಿರುವುದು
ನೀನು ನರ್ತಿಸುತ್ತಿರುವುದು
ಮತ್ತು ನಾವಿಬ್ಬರೂ ಹೀಗೆ ಎಷ್ಟು ಹೊತ್ತಿನವರೆಗೆ ಕನಸಿನಲ್ಲಿ ನಕ್ಷತ್ರಗಳು ಎಣಿಸುತ್ತಿರುವುದು…

ಅದೆಲ್ಲ ಇರಲಿ, ಈಗಲಾದರೂ ನೀನು ಹೇಳಬಹುದಿತ್ತು
ನಿನ್ನ ನಿತ೦ಬದ ಮೇಲೆ ಉರಿವ ಸಿಗರೇಟು ಹಚ್ಚಿದವನು ಯಾರು ಅನ್ನುವುದನ್ನು
ಮತ್ತು ಕೊರಳ ಎಡಬದಿಯಲ್ಲಿ ಉಗುರಿನ ಬರೆ ಎಳೆದವನು
ತುಟಿಯ ತು೦ಬೆಲ್ಲ ಹಲ್ಲುಗಳ ಗುರುತು ಬಿಟ್ಟು ಹೋದವನು…

ನಿನ್ನ ಮೌನದ ನಡುವೆ ಅದೆಷ್ಟು ಸುಖವಿದೆಯೋ
ಅಥವಾ… ದು:ಖ ನೋವುಗಳೇ ಅಡಗಿದೆಯೋ
ದೇವರಾಣೆಗೂ ನನಗೇನೂ ಅರ್ಥವಾಗಲಿಲ್ಲ

ನಿಜ ಹೇಳಬೇಕೆ೦ದರೆ,
ಒಮ್ಮೊಮ್ಮೆ ಹೀಗೆ ಅನಿಸುತ್ತದೆ
ಈ ರಾತ್ರಿಗಳೇ ಹುಟ್ಟಬಾರದೆ೦ದು
ಮತ್ತು ಒಮ್ಮೊಮ್ಮೆ ಹೀಗೂ ಅನಿಸುತ್ತದೆ
ಈ ರಾತ್ರಿಗಳಿಗೆ ಹಗಲುಗಳೇ ಬೇಡವೆಂದು.

– ನರೇಶ ನಾಯ್ಕ

 

 

 

 


ಹೆಂಡತಿಯೆಂದರೆ…

ಹೆಂಡತಿಯೆಂದರೆ
ಏನೇನೆಲ್ಲ ಹೋಲಿಸಿ ಜರಿವರೇ ಬಹಳ…
ಹೆಂಡತಿಯನ್ನು ಮನಸಲ್ಲಿರಿಸಿ ಪ್ರೀತಿಸುವವರೇ ವಿರಳ..

ಬೈಗಿನವರೆಗೂ ಬೆಳಗಿನ ಚಿಲುಮೆ
ಮುಗಿಯದು ಸರಿದರೂ ಇರುಳು
ದಣಿಯದೇ ದುಡಿವಳು ಜೀವವ ಸವೆಸಿ
ಅರಿವಿಗೆ ಬಾರದ ಅವಳು

ಬದುಕಿನ ಜೋಕಾಲಿಗೆ ಕೀಲವಳು
ತೂಗುವಳು ನಗುಮೊಗದಿ
ಹದವರಿತೆ ಜೀವನವ ನಡೆಸಿ
ಸಾಗುವಳು ಜಗಜಗದಿ

ಬೇರೊಬ್ಬಳ ಕಂಡು ಕಣ್ಣನು ಬಿಡುವ ಗಂಡನದ್ಯಾವ ನೀತಿ?
ತವರಿಗೆ ಅಟ್ಟಿ ಚಟಗಳ ಕಾಯಿಸೋ ಭಂಡನದೇನು ರೀತಿ?

ಆಳಿನ ರೀತಿ ದುಡಿಯಲು ಹೆಂಡತಿ
ಭೋಗಿಸಲು ಮದನಾರಿ
ನಿಮ್ಮಯ ತಪ್ಪನ್ನು ತಿದ್ದಲು ಎಳಸೇ
ಆಗುವಳೇ ಮಹಾಮಾರಿ?

ಹೆಂಡತಿ ಎಂಬ ಹೆಣ್ಣಿನ ಯೋಗ
ಗಂಡಿಗೆ ದೊರೆತರೆ ಭಾಗ್ಯ
ಹೆಂಡತಿಯಿರದ ಇದ್ದೂ ಹಳಿಯುವ
ಎಲ್ಲರದೂ ದೌರ್ಭಾಗ್ಯ..

– ರನ್ನ ಕಂದ


ಗಝಲ್
ಮನಸು ಮಾತಾಗದಂತೆ ಮೌನ ತಾಳಿದಾಗ ನೀನು ಕಾಡುತ್ತೀಯೆ
ಕನಸು ಮಸುಕಾಗುವಂತೆ ಕಣ್ಣು ಹನಿದಾಗ ನೀನು ಕಾಡುತ್ತೀಯೆ

ಗುಲ್ಮೊಹರ್ ತೊನೆವ ಬೀದಿಗಳಲ್ಲೆಲ್ಲ ಒಲವ ಗಾನದ ಗುನುಗಾಟ
ಒಲುಮೆ ಒಸರಿ ಉಸಿರು ಆರ್ದ್ರವಾದಾಗ ನೀನು ಕಾಡುತ್ತೀಯೆ

ಮರಿದುಂಬಿ ಮನದುಂಬಿ ಮಕರಂದ ಹೀರಿ ತಣಿವ ಸೊಬಗೇನು
ತುಂಬಿದ ಕುಂಭದಂತೆ ಎದೆ ಭಾರವಾದಾಗ ನೀನು ಕಾಡುತ್ತೀಯೆ

ವಿರಹ ಚುಕ್ಕಿಗಳ ಸೇರಿಸೆ ಬಣ್ಣ ಬಣ್ಣದ ಪ್ರೀತಿ ಚಿತ್ತಾರದ ಬೆಡಗು
ಕಚಗುಳಿಯ ಗರ್ಭದಲ್ಲಿ ನವಿರೆದ್ದು ನಲಿವಾಗ ನೀನು ಕಾಡುತ್ತೀಯೆ

ಜಗತ್ತಿನ ಕೊಂಕೆಲ್ಲ ಒಟ್ಟಾಗಿ ಹಲವೊಮ್ಮೆ ನನ್ನೊಳಗನ್ನೇ ಇರಿಯುತ್ತವೆ
ಜಗಮಗಿಸುವ ಬೆಳಕನ್ನೇ ಕಾರಿರುಳು ನುಂಗುವಾಗ ನೀನು ಕಾಡುತ್ತೀಯೆ

ನದಿ ಇಕ್ಕೆಲಗಳ ತೀರಗಳಿಗೆ ಕಾಡುವ ತೀರದ ತೀವ್ರ ದಾಹಕ್ಯಾವ ವ್ಯಾಖ್ಯೆ
ನನ್ನೆಲ್ಲ ಪ್ರಥಮಗಳಿಗೆ ಜನ ಉರಿದು ಬೆನ್ನು ಹಾಕುವಾಗ ನೀನು ಕಾಡುತ್ತೀಯೆ

ಅನರ್ಥವಾಗುವುದಕ್ಕಿಂತ ಯೌವನ ಒಳಗೊಳಗೇ ವ್ಯರ್ಥವಾಗಿ ಹೋಗಲಿ
“ಸುಜೂ” ಳ ಬೇಸರಿನ ಸಂಜೆಗಳಲಿ ಮನ ರಿಕ್ತವಾದಾಗ ನೀನು ಕಾಡುತ್ತೀಯೆ

-ಸುಜಾತಾ ಲಕ್ಮನೆ, ಬೆಂಗಳೂರು

 

 

 

 


ಬಂಧಿಸುವ ಕಾಲ

ಬಂಧಿಸಿವ ದುರಿತ ಪರಂಪರೆ
ಇಂದು ನಿನ್ನೆಯದಲ್ಲ
ನಾಗರೀಕತೆ ಬೆಳದಂತೆಲ್ಲ
ಬಂಧನದ ಕತೆಗಳು
ರೈಲು ಬೋಗಿಗಳಾಗಿ
ಬೆಳೆಯುತ್ತಲೇ ಇವೆ
ಎದೆಕಂಪಿಸುವ ಸದ್ದಿನಲಿ
ಆರ್ತನಾದ ಮೌನವಾಗಿ
ಬಿಕ್ಕಳಿಸುತಿವೆ
ಮತ್ತು ಅಪಘಾತದ
ಅಪಾಯವನ್ನು ಕಲ್ಲಿದ್ದಲಾಗಿ
ತಮ್ಮ ಇಂಜೀನಿಗೆ
ಸರಿದು ಕೊಳ್ಳತ್ತಲೇ ಇದೆ………

ಪ್ರೇಮವನು ಬಂಧಿಸಿಡುವ
ಪ್ರಯತ್ನದಲಿ ಸ್ವಾರ್ಥಗಳು
ತಮ್ಮ ಅಸ್ತ್ರಗಳು ಝಳಪಿಸುತವೆ
ಅಮಾನವೀಯ ಅಮಾನುಷ್ಯ
ಹತ್ಯೆಗಳಧ್ಯಾಯ
ಮನುಜ ಚರಿತ್ರೆಗೆ ಕಪ್ಪು
ಚುಕ್ಕೆಗಳಾಗಿ
ಪುಟಗಳು ಪೋಣಿಸುತ್ತಲೇ ಇವೆ

ಸಭ್ಯತೆಯ ಸೋಗಿನಲಿ ಧರ್ಮ
ಸ್ತ್ರೀಸ್ವಾತಂತ್ರ್ಯ ಮಾನ
ದೋಚುವ ಕಾಲ
ಇಂದಿಗೂ ದ್ರೌಪದಿಯನು
ಬೆತ್ತಲಾಗಿಸಿ ತನ್ನ
ಅಂತರಾಳದ ಚಪಲ
ತೀರಿಸಿಕೊಳ್ಳುತಿದೆ
ಹರಿಯುವ ಜಲಕೆ ತಡೆಗೋಡೆ
ಗಾಳಿಗೂ ಬಲೂನ ಬೋನು
ಕಣ್ಣಲ್ಲಿ ಕನಸುಗಳ ಬಂಧನ
ಮನಸಲ್ಲಿ ಆಸೆಗಳ ತಲ್ಲಣ
ಮುಂದವರೆಯುತ್ತಲೇ ಇದೆ.

– ಅಶ್ಫಾಕ್ ಪೀರಜಾದೆ

 

 

 

 


 

ಕನ್ನಡದ ಬರಹಗಳನ್ನು ಹಂಚಿ ಹರಡಿ

2 thoughts on “ಪಂಜು ಕಾವ್ಯಧಾರೆ

  1. ನಗ್ನ ರಾತ್ರಿಗಳು ಕವಿತೆ ಇಷ್ಟವಾಯಿತು. ಸುಖದ ನಡುವೆ ಅಡಗಿದ ದುಃಖಗಳ ಅನ್ವೇಷಣೆಯನ್ನು ಕವಿತೆಯಲ್ಲಿ ಕಾಣಬಹುದು. ಚೆಂದದ ಕವಿತೆ ನರೇಶ್ ನಾಯ್ಕ್ ಅವರೇ

Leave a Reply

Your email address will not be published. Required fields are marked *