ಈ ಜಗದಾಗೆ
ದೊಡ್ಡೋರು ಯಾರಿಲ್ಲ ಚಿಕ್ಕೋರು ಯಾರಿಲ್ಲ
ಎಲ್ಲಾರೂ ಒಂದೇನೆ ಈ ಜಗದಾಗೆ
ದೇವ್ರಾಟ ಆಡ್ಕೋತ ಬದುಕನ್ನ ಬೇಯಿಸ್ಕೊತ
ಕಡೆಗೆಲ್ಲಾ ಮಣ್ಣು ಈ ಜಗದಾಗೆ ||
ಲೋಕಾನೆ ಗೆಲ್ಬೇಕು ಅಂದ್ಕೊಂಡು ಬಂದವ್ರು
ಬರಿಗೈಲಿ ಹೋದ್ರಂತೆ ಇತಿಹಾಸ್ದಾಗೆ
ಅಂತಸ್ತು ಬಿದ್ದೋಯ್ತು ನೆಲವೆಲ್ಲಾ ಮುಳುಗೋಯ್ತು
ಗೊತ್ತಿಲ್ಲಾ ಬರ್ದದ್ದು ಹಣೆಬರ್ದಾಗೆ ||
ಕಷ್ಟಾನೂ ಬರ್ತಾದೆ ಸುಖಾನೂ ಬರ್ತಾದೆ
ಬಂದದ್ದು ತಗೋಬೇಕು ಜೀವಂದಾಗೆ
ಕಷ್ಟದಲಿ ಕುಗ್ಗದಂಗೆ ಸುಖದಲ್ಲಿ ಹಿಗ್ಗದಂಗೆ
ದೇವ್ರೌನೆ ಅಂದ್ಕೊಂಡ್ರೆ ನೆಮ್ಮದಿತಾನೆ ||
ಗೆದ್ದದ್ದು ಗೆಲುವಲ್ಲ ಸೋತದ್ದು ಸೋಲಲ್ಲ
ಜಿದ್ದಾಜಿದ್ದಿಯ ಕಾಣೆ ಬದುಕ್ನಾಗೆ
ಗೆದ್ದವಂಗು ಸೋಲೈತೆ ಸೋತವಂಗೂ ಗೆಲುವೈತೆ
ಬೆವರೆಲ್ಲಾ ಸಾಕ್ಷಿಯ ನುಡಿತೈತೆ ||
ಕತ್ತಲಿಗೂ ಬದುಕೈತೆ ಹಗಲಿಗೂ ಬದುಕೈತೆ
ಸಮನಾಗಿ ನ್ಯಾಯ ಭೂಮಿಮ್ಯಾಲೆ
ಅರಿತ್ಕೊಂಡು ಬೆರುತ್ಕೊಂಡು ಒಳ್ಳೆದು ಹಂಚ್ಗೊಂಡ್ರೆ
ಬದುಕೇನೆ ಬಂಗಾರ ಈ ಲೋಕ್ದಾಗೆ ||
-ವೆಂಕಟೇಶ ಚಾಗಿ
ಗಜಲ್
ನೋಡುತ್ತಿರುವೆ ಕಣ್ಣ ಹಿಂದಿನ ಕಣ್ಣನ್ನು ಬರಿ ಕತ್ತಲು
ಸಾಗುವ ದಾರಿ ಸಂತೆಯೊಳು ಜಾರಿತಿನ್ನು ಬರಿ ಕತ್ತಲು
ಅಮಾವಾಸ್ಯೆಯ ದಿನ ಊರ ತುಂಬ ಬಿಜಲಿಗಳು
ಒಂದು ನಂದಾದೀಪ ಉರಿಸಲಿಲ್ಲ ದೇಹವನ್ನು ಬರಿ ಕತ್ತಲು
ಕಮಂಡಲಧಾರಿ ಋಷಿಮುನಿಗಳು ಕೊಟ್ಟ ಶಾಪಗಳು
ಕಲ್ಲರಳಿ ಹೂವಾಗಲಿಲ್ಲ ನುಂಗಿತ್ತು ಪವಿತ್ರ ಜಲವನ್ನು ಬರಿ ಕತ್ತಲು
ಶುಭದ ಬಾಗಿಲ ಸುತ್ತಲೂ ಪೊರೆ ಬಿಟ್ಟ ನಾಗರ ಹಾವು
ದುಗುಡ ಬಿಡಲಿಲ್ಲ ಎರಡು ಕಿಟಕಿ ಬೆಳಕನ್ನು ಬರಿ ಕತ್ತಲು
ಸೋಲು ಶರಣೆಂಬೆ ಶರಣೆಂಬೆ ಎನ್ನುತ್ತಿದೆ ನಗುನಗುತಲೇ
“ಜಾಲಿ” ಗೆಲುವಿಗಾಗಿ ಅಗೆದ ಬಾವಿಯ ಆಳ ನಿಲುಕದೆ ಬಿದ್ದನು ಬರಿ ಕತ್ತಲು.
-ವೇಣು ಜಾಲಿಬೆಂಚಿ
ಗಜಲ್ ೧
ಯಾವ ಗಾಳಿ ಗೂಳಿ ಎಲ್ಲವನು ತುಳಿದು ಹಾಕಿತು
ಸಂಜೆಗೆಂಪಿನ ಬದಲು ಕೆಂಧೂಳಿಯ ತುಂಬಿ ಹೋಯಿತು
ಜಂತಿ ಮಾಡು ಹೆಂಚು ಎಲ್ಲ ಕುಸಿದು ಕಳಚಿವೆ
ಯಾವ ಖತಿಗೋ ಏನೋ ಎಲ್ಲ ಬಯಲಾಯಿತು
ದಳದಳ ದಳ ಉದುರಿಸಿ ಬಿಕ್ಕುತ್ತಿದೆ ಹೂಬನ
ಗಂಧವಹನನ್ನು ಕಣ್ಮುಚ್ಚಿ ನಂಬಿದ್ದು ತಪ್ಪಾಯಿತು
ದೀಪದ ಗೆಳೆಯ, ಕುಡಿಯನ್ನು ಕಮರಿಸುವನೇನು
ಮುಖವಾಡದ ಹಿಂದಿನ ಚಹರೆ ತಿಳಿಯದಾಯಿತು
ಇವನಿಲ್ಲದೇ ಬದುಕಿಲ್ಲ ಎಂಬ ಭಾವನೆಯಿತ್ತಲ್ಲ ಸಖೀ
ನಿರ್ದಯನ ಚೆಲ್ಲಾಟದಲ್ಲಿ ಬಟ್ಟಲು ಖಾಲಿಯಾಯಿತು
****
ಗಜಲ್ ೨
ಅವಕಾಶಗಳು ಮೊಳೆಯುವುದಿಲ್ಲ ಹುಟ್ಟುಹಾಕುತ್ತೇನೆ
ದೋಣಿ ತನ್ನಷ್ಟಕ್ಕೆ ಚಲಿಸುವುದಿಲ್ಲ ಹುಟ್ಟು ಹಾಕುತ್ತೇನೆ
ಎದೆಯ ಹಾಡಿಗೆ ಎಷ್ಟೊಂದು ಘಾತಿ-ಘಾಸಿಗಳು
ಗಾಯ ಮಾಯಲು ಬೇಗ ಪಟ್ಟು ಹಾಕುತ್ತೇನೆ
ಒಂದೊಂದು ಹೆಜ್ಜೆಗೂ ಎಷ್ಟೊಂದು ಪೇಚುಗಳು
ಕುಸ್ತಿ ಮುಗಿಸಲು ವಿವಿಧ ಪಟ್ಟು ಹಾಕುತ್ತೇನೆ
ಮನದಳಲ ಮಾತಿನಲಿ ಹೇಗೆ ತುಂಬುವೆ ಹೇಳು
ತುಟಿ ಕಚ್ಚಿ ಸಹಿಸಿ ಬಿಕ್ಕುಗಳಿಗೆ ಕಟ್ಟು ಹಾಕುತ್ತೇನೆ
ಚೂರು ಸಡಿಲಾದರೆ ಹುಚ್ಚೇಳುವ ಖೋಡಿ ಮನಸು
ನೋಡಿದವರು ನಕ್ಕಾರೆಂದು ಚೌಕಟ್ಟು ಹಾಕುತ್ತೇನೆ
ಮರಳಿ ಮರಳಿ ಬೀಳಿಸು, ಮತ್ತೆದ್ದು ನಡೆಯುವೆ
ನಡುವೆ ಪುಟಿವ ಖುಷಿಗಳನು ಒಟ್ಟು ಹಾಕುತ್ತೇನೆ
– ಡಾ. ಗೋವಿಂದ ಹೆಗಡೆ
ಡಾ. ಗೋವಿಂದ ಹೆಗಡೆಯವರ ಕವಿತೆ ಇಷ್ಟವಾಯಿತು. ನನ್ನೊಳಗೆ ನಾನೇ ಹೇಳಿಕೊಳ್ಳುವ ಈ ಧಾಟಿ ಆಪ್ತವಾಗಿದೆ ಮತ್ತು ಸುಪ್ತವಾಗಿದೆ. ಕ್ರಿಯಾಪದಗಳಲ್ಲೇ ಚಿಂತನೆ ಅಡಗಿದೆ. ಇಷ್ಟಕೂ ಕ್ರಿಯೆಗಳೇ ಅಲ್ಲವೇ ನಮ್ಮನಾಳುವುದು. ನಾಮಪದ ಮೆರೆಯುತ್ತದೆ; ಕ್ರಿಯಾಪದ ಕಾಲ ಕಳೆದ ಮೇಲೆ ಮರೆಯುತ್ತದೆ!
ಬರೆದ ಕವಿಗೂ ಪ್ರಕಟಿಸಿದ ನಿಮಗೂ ಧನ್ಯವಾದಗಳು.
ಹೆಚ್ಚೆನ್ ಮಂಜುರಾಜ್, ನಡೆನುಡಿ: 9900119518
ನಿಜ ಸರ್ ಎರಡನೆಯ ಗಜಲ್ ಅಂತು ನನ್ನ ಮನಸೋರೆಗೊಳಿಸಿದೆ. ಕಟ್ಟಿ ಹಾಕಿದ ಭಾವನೆಗಳನ್ನು ಬಿಚ್ಚಿ ಹಾಕುವಂತಹ ಗಜಲ್.
ಧನ್ಯವಾದ ಮಂಜುರಾಜ್ ಅವರಿಗೆ.